ADVERTISEMENT

ಮನೆಗೆಲಸ ಅವಳಿಗಷ್ಟೆ ಏಕೆ?

ಮಂಜುಶ್ರೀ ಎಂ.ಕಡಕೋಳ
Published 27 ಏಪ್ರಿಲ್ 2019, 9:52 IST
Last Updated 27 ಏಪ್ರಿಲ್ 2019, 9:52 IST
   

ಮು ದ್ದು ಮಗನಿಗೆ ಇಷ್ಟವಾದ ತಿಂಡಿ ಮಾಡಿ ತಟ್ಟೆಯಲ್ಲಿಟ್ಟು ರೂಂಗೆ ಹೋಗಿ ಅವನಿಗೆ ಕೊಡುವಷ್ಟರಲ್ಲಿ ಅತ್ತಲಿಂದ ಮಗಳ ಫೋನ್. ‘ನೋಡು ನಿನ್ನ ರೂಂ ಅನ್ನು ಎಷ್ಟೊಂದು ಗಲೀಜಾಗಿಟ್ಟುಕೊಂಡಿದ್ದಾನೆ ನಿನ್ನ ತಮ್ಮ. ನನಗಂತೂ ಕ್ಲೀನ್ ಮಾಡಿ ಸಾಕಾಯ್ತು..‘ ಎಂದು ಇತ್ತ ಕಡೆಯಿಂದ ಅಮ್ಮ ಮಗಳಿಗೆ ಹೇಳುತ್ತಿರುವಾಗಲೇ ಅತ್ತಲಿಂದ ‘ಅಮ್ಮಾ.. ನಾನು ಕೆಲಸ ಬಿಡ್ಬೇಕು ಅಂದ್ಕೊಂಡಿದ್ದೀನಿ’ ಅನ್ನುವ ದನಿ ಕೇಳಿ ಒಂದು ಕ್ಷಣ ನಿರುತ್ತರಳಾದಳು ಅಮ್ಮ. ತಕ್ಷಣವೇ ಸಾವರಿಸಿಕೊಂಡು ‘ಕೈಲಾದಷ್ಟು ಮನೆ ಕೆಲಸ ಮಾಡಿ ಡ್ಯೂಟಿಗೆ ಹೋಗು. ಮನೆಕೆಲಸದಲ್ಲಿ ನಿನ್ನ ಗಂಡನಿಗೆ ಸ್ವಲ್ಪ ಸಹಾಯ ಮಾಡಲು ಹೇಳು’ ಅಂತ ಅಮ್ಮ ಹೇಳುತ್ತಿರುವಾಗಲೇ ‘ಇಲ್ಲಾ ಅಮ್ಮ, ಅವನಿಗೆ ಯಾವ ಮನೆ ಕೆಲಸವೂ ಬರೋದಿಲ್ಲ’ ಎನ್ನುವ ಮಗಳ ಮಾತು. ಮೌನಕ್ಕೆ ಮೊರೆ ಹೋದ ಅಮ್ಮನಿಗೆ ನಾಳೆ ನನ್ನ ಸೊಸೆಯೂ ಇದೇ ಸಮಸ್ಯೆ ಎದುರಿಸಿದರೆ ಎನ್ನುವ ಚಿಂತೆ. ತಕ್ಷಣವೇ ಮಗನ ರೂಮಿನಲ್ಲಿದ್ದ ಬಟ್ಟೆಗಳನ್ನೆತ್ತಿಕೊಂಡು, ಮಗನಿಗೆ ವಾಷಿಂಗ್ ಮಷಿನ್‌ನಲ್ಲಿ ಬಟ್ಟೆ ಒಗೆಯುವ ವಿಧಾನ ಕಲಿಸಲು ಅಣಿಯಾದಳು.‌

***

ಜಾಹೀರಾತೊಂದರ ತುಣುಕಿದು. ಕೆಲವೇ ಸೆಕೆಂಡ್‌ಗಳಲ್ಲಿ ತನ್ನ ಉತ್ಪನ್ನದ ಬಗ್ಗೆ ಸರಳವಾಗಿ ಹೇಳಿದ ಇದರ ಹಿಂದಿನ ಉದ್ದೇಶ ಖಂಡಿತ ಸರಳವಲ್ಲ.

ADVERTISEMENT

ಹೌದಲ್ಲ. ಹೆಣ್ಮಗು ಬೆಳೆದಂತೆಲ್ಲಾ ಅವಳಿಗೆ ಮನೆಕೆಲಸದಲ್ಲಿ ತರಬೇತಿ ಕೊಟ್ಟು ಸ್ವಾವಲಂಬಿ ಮಾಡುವ ಅಮ್ಮಂದಿರು ಗಂಡು ಮಕ್ಕಳನ್ನೇಕೆ ಆ ತರಹ ಬೆಳೆಸೋದಿಲ್ಲ? ಅಮ್ಮನಿಗೆ ಮನೆಕೆಲಸದಲ್ಲಿ ಮಗಳು ನೆರವಾದಷ್ಟು ಮಗನೇಕೆ ನೆರವಾಗುವುದಿಲ್ಲ? ಚೆನ್ನಾಗಿ ಓದಿ, ನೌಕರಿಗಾಗಿ ಹೊರ ಊರುಗಳಿಗೆ ಹೊರಟ ಗಂಡುಮಕ್ಕಳಿಗೆ ಅಡುಗೆ ಮಾಡುವುದಿರಲಿ ಕನಿಷ್ಠ ತಾವಿರುವ ರೂಂ ಕ್ಲೀನ್ ಮಾಡಿಕೊಳ್ಳಲಾಗದಷ್ಟು ಅಸಹಾಯಕತೆ.

ಅಕಸ್ಮಾತ್ ಕಷ್ಟಪಟ್ಟು ಬಟ್ಟೆ ಒಗೆಯಲು ಹೊರಟ ಮಗನಿಂದ ಅಮ್ಮನಿಗೆ ‘ಅಮ್ಮ ಬಟ್ಟೆಗೆ ಸೋಪು ಒಂದೇ ಕಡೆ ಹಚ್ಚಬೇಕಾ? ಎರಡೂ ಕಡೆ ಹಚ್ಚಬೇಕಾ? ಅನ್ನ ಮಾಡಬೇಕಾದರೆ ಅಕ್ಕಿ ತೊಳಿಬೇಕಾ? ನೀರು ಎಷ್ಟಿಡಬೇಕು? ಊಟ ಮಾಡಿದ ತಟ್ಟೆಯನ್ನು ಎರಡೂ ಕಡೆ ತೊಳೆಯಬೇಕೆ?’ ಎನ್ನುವ ಪ್ರಶ್ನೆಗಳೇ ಎದುರಾಗುತ್ತವೆ.

ಮನೆಗೆಲಸ ಯಾರು ಮಾಡಬೇಕು?
ಮನೆಗೆಲಸ, ಗಂಡ, ಹಿರಿಯರು ಮತ್ತು ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿ ಏನಿದ್ದರೂ ಗೃಹಿಣಿಯದ್ದೇ. ಬೆಳಿಗ್ಗೆ ಶಾಲೆ–ಕಾಲೇಜಿಗೆ ಹೊರಡುವ ಮಕ್ಕಳಿಗೆ ತಿಂಡಿ ಮಾಡಿಟ್ಟು, ಗಂಡನಿಗೆ ಟಿಫಿನ್ ಬಾಕ್ಸ್ ಕಟ್ಟಿ, ಅತ್ತೆ–ಮಾವನಿಗೆ ತಿಂಡಿ ನಂತರ ಔಷಧಿ ಕೊಡುವಷ್ಟರಲ್ಲಿ ಅವಳಿಗಾಗಲೇ ಹತ್ತು ಕೈಗಳಿಗಾಗುವಷ್ಟು ಕೆಲಸ. ಅದರಲ್ಲೂ ಆಕೆ ಉದ್ಯೋಗಸ್ಥೆಯಾಗಿದ್ದರೆ ಮರುದಿನದ ತಿಂಡಿಗೆ ರಾತ್ರಿಯೇ ಹೋಮ್‌ ವರ್ಕ್ ಮಾಡಿಕೊಳ್ಳಬೇಕು.

ಇಷ್ಟೆಲ್ಲಾ ಆಗುವಾಗ ಮನೆಯಲ್ಲಿರುವ ಗಂಡು ಮಕ್ಕಳು ಆರಾಮಾಗಿ ದಿನಪತ್ರಿಕೆ ಓದುತ್ತಲೋ, ಟೀ ಕುಡಿಯುತ್ತಲೋ ದಿನಚರಿಯ ಆರಂಭದ ಖುಷಿಯಲ್ಲಿರುತ್ತಾರೆ. ಹಾಗಾದ್ರೆ ‘ಮನೆಕೆಲಸ ಅವಳಿಗಷ್ಟೇ ಮೀಸಲಾ’ ಎಂಬ ಪ್ರಶ್ನೆಗೀಗ ಖಂಡಿತಾ ಇಲ್ಲ ಎಂಬ ಸಕರಾತ್ಮಕ ಉತ್ತರ ದೊರೆಯುತ್ತಿರುವ ‘ಅಚ್ಛೇ ದಿನ್‌’ಗಳಿವು!

ಹೌದು. ವಿದೇಶಗಳಲ್ಲಿ ಗಂಡು ಮಕ್ಕಳಿಗೂ ಮನೆಗೆಲಸ ಕಲಿಸುವ ನಾನಾ ಕೋರ್ಸ್‌ಗಳು ಪ್ರಾಥಮಿಕ ಶಿಕ್ಷಣ ಹಂತದಲ್ಲಿಯೇ ರೂಪುಗೊಳ್ಳುತ್ತಿವೆ. ಸ್ಪೇನ್‌ನ ವಿಗೋ ನಗರದಕೊಲೆಗಿಯೊ ಮೊಂಟೆಕಾಸ್ಟಲೋ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಅಡುಗೆ ಮಾಡುವುದು, ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು, ಬಟ್ಟೆಗಳನ್ನು ಇಸ್ತ್ರಿ ಮಾಡಿಕೊಳ್ಳುವುದು ಸೇರಿದಂತೆ ಇತರ ಮನೆಗೆಲಸಗಳನ್ನೂ ಕಲಿಸಿಕೊಡಲಾಗುತ್ತಿದೆ. ಈ ಕೋರ್ಸ್‌ನಲ್ಲಿ ವಿದ್ಯಾರ್ಥಿಗಳ ಜತೆಗೆ ತಂದೆಯಂದಿರೂ ತರಬೇತಿ ಪಡೆಯುತ್ತಿದ್ದಾರೆ.

ಹೆಣ್ಮಕ್ಕಳಂತೆ ಗಂಡ್ಮಕ್ಕಳಿಗೂ ಮನೆಗೆಲಸದಲ್ಲಿ ತರಬೇತಿ ಕೊಟ್ಟಿದ್ದರೆ ಎಷ್ಟೊಂದು ಚೆನ್ನಾಗಿರುತ್ತಿತ್ತು ಅಂದುಕೊಳ್ಳದ ತಾಯಂದಿರ ಸಂಖ್ಯೆಯೇನೂ ಕಡಿಮೆ ಇಲ್ಲ. ಅಂಥದೊಂದು ಕೋರ್ಸ್ ನಮ್ಮ ದೇಶದಲ್ಲೂ ಇದ್ದಿದ್ದರೆ ಎಷ್ಟೊಂದು ಚೆನ್ನಾಗಿರುತ್ತಿತ್ತು ಅನಿಸಿದೇ ಇರದು.

ಬೆಂಗಳೂರಲ್ಲೂ ಮನೆಗೆಲಸದ ಕೋರ್ಸ್‌
ಬೆಂಗಳೂರಿನಲ್ಲೂ ‘ಬದುಕು’ ಕಮ್ಯುನಿಟಿ ಕಾಲೇಜು ‘ಗಂಡಸರಿಗಾಗಿ ಮಾತ್ರ’ ಅನ್ನುವಂಥ ಕೋರ್ಸ್ ಮಾಡಿ ಯಶಸ್ವಿಯಾದ ಕಥೆಯೂ ಇದೆ. ಕಾಲೇಜು ವಿದ್ಯಾರ್ಥಿಗಳು, ಅವಿವಾಹಿತರು, ವಿವಾಹಿತರು, ತಂದೆಯಂದಿರು ಹೀಗೆ ಕೋರ್ಸ್‌ನ ಲಾಭ ಪಡೆದ ಗಂಡಸರು, ಮನೆಯಲ್ಲಿ ತಾಯಿ, ಸಹೋದರಿ, ಹೆಂಡತಿಯರ ಜತೆ ಮನೆಗೆಲಸವನ್ನು ಹೃತ್ಪೂರ್ವಕವಾಗಿ ಹಂಚಿಕೊಂಡು ಮಾಡುತ್ತಿದ್ದಾರೆ. ಈ ಮೂಲಕ ಮನೆಗೆಲಸ ಅವಳಿಗಷ್ಟೇ ಮೀಸಲು ಅನ್ನುವುದನ್ನು ಸುಳ್ಳಾಗಿಸಿದ್ದಾರೆ ಎನ್ನುತ್ತಾರೆ ಮನೆಗೆಲಸದ ಕೋರ್ಸ್ ತರಬೇತಿ ಪಡೆದ ತೋಟೇಗೌಡ್ರು.

‘ಸಮ ಸಮಾಜದ ನಿರ್ಮಾಣದಲ್ಲಿ ಗಂಡಸರು ಸ್ಪಂದಿಸುತ್ತಿಲ್ಲವೇಕೆ ಎನ್ನುವ ವಿಷಯಗಳು ಬರೀ ಬಾಯಿಮಾತಿನ ಚರ್ಚೆಯಾಗಿಬಿಟ್ಟಿವೆ. ಇಂಥ ಸ್ಟಿರಿಯೊ ಟೈಪ್ ಮಿಥ್‌ಗಳನ್ನು ಮುರಿಯಲೆಂದೇ ಗಂಡಸರಿಗಾಗಿ ಮಾತ್ರ ಅನ್ನುವ ಕೋರ್ಸ್ ಅನ್ನು ರೂಪಿಸಿದ್ದೇವೆ’ ಎನ್ನುತ್ತಾರೆ ‘ಬದುಕು’ ಕಮ್ಯುನಿಟಿ ಕಾಲೇಜಿನ ಪ್ರಾಂಶುಪಾಲ ಮುರಳಿ ಮೋಹನ ಕೋಟಿ.

ಬದಲಾದ ಜಾಗತಿಕ ದಿನಮಾನಗಳಲ್ಲಿ ಮನೆಯಿರಲಿ, ಕಚೇರಿಯಿರಲಿ ಗಂಡು, ಹೆಣ್ಣು ಇಬ್ಬರೂ ಜೊತೆಯಾಗಿ ಕೆಲಸ ಮಾಡುವುದು ಅನಿವಾರ್ಯ. ಬಹುತೇಕ ಗಂಡಸರು ಹೆಂಡತಿಗೆ ಮನೆಗೆಲಸದಲ್ಲಿ ಸಹಕರಿಸುವುದನ್ನು ಪುರುಷಾಹಂಕಾರದ ನೆಲೆಯಲ್ಲಿ ನೋಡುತ್ತಿಲ್ಲ. ಸಾಂಗತ್ಯದ ನೆಲೆಯಲ್ಲಿ ಇದನ್ನು ಸ್ವೀಕರಿಸುತ್ತಿರುವುದು ಒಳ್ಳೆಯ ಬೆಳವಣಿಗೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.