ADVERTISEMENT

ಈ ಸಾರಿ ಯಾವ ಸೀರಿ..!

ಎಸ್.ರಶ್ಮಿ
Published 19 ಆಗಸ್ಟ್ 2022, 20:45 IST
Last Updated 19 ಆಗಸ್ಟ್ 2022, 20:45 IST
ಸೀರೆಗೆ ಕಸೂತಿ ಹಾಕುತ್ತಿರುವ ಮಹಿಳೆಯರು                        ಚಿತ್ರಗಳು/ ತಾಜುದ್ದೀನ್‌ ಆಜಾದ್ 
ಸೀರೆಗೆ ಕಸೂತಿ ಹಾಕುತ್ತಿರುವ ಮಹಿಳೆಯರು                        ಚಿತ್ರಗಳು/ ತಾಜುದ್ದೀನ್‌ ಆಜಾದ್    

ಶ್ರಾವಣ ಮಾಸ ಹೊಸಿಲಿನಲ್ಲಿರುವಾಗಲೇ ಸೇಲ್‌ ಭರಾಟೆ ಶುರು ಆಗ್ತದ. ಪಂಚಮಿಗೆ ಅಣ್ಣನಿಂದ, ವರಮಹಾಲಕ್ಷ್ಮಿಗೆ ಗಂಡನಿಂದ, ಗೌರಿಗೆ ಅಮ್ಮನಿಂದ.. ಹಿಂಗ ಸೀರಿಗಳ ಲೆಕ್ಕ ಹಾಕೂದೆ ಹಬ್ಬ. ಈ ಸಲೆ ಅಣ್ಣಗ ಹೇಳೇಬಿಡಬೇಕು.. ಒಂದು ಸಾಫ್ಟ್‌ ಸಿಲ್ಕೇ ಬೇಕು ಅಂತ. ಜರಿಯಿರುವ ಭರ್ಜರಿ ಸೀರಿ ಉಟ್ಟು ಸಾಕಾಗೇದ. ಮೆತ್‌ಗ ಉಟ್ರ ಉಟ್ಟೇವಿ ಇಲ್ಲ ಅಂತ ಅನಿಸಬೇಕು.. ಹಂಗಿರಬೇಕು. ಜರಿ ಬ್ಯಾಡ, ರೇಷ್ಮಿ ನೂಲಿನ ಕೆಲಸ ಇದ್ರ ಇನ್ನಾ ಹಿತ.. ಅಂತದ್ದೇ ಸೀರಿ ಕೊಡಸು ಅಂತ್ಹೇಳ್ತೇನಿ. ಇವು ಚೂರು ತುಟ್ಟಿ ಆಗ್ತಾವ... ಹಂಗ ಅವನಿಗೆ ತುಟ್ಟಿ ಅನಿಸಿದ್ರ, ರೊಕ್ಕಾನೆ ಕೊಡ್ಲಿ. ಮ್ಯಾಲಿಂದ ನಾ ಹಾಕಿ ತೊಗೊಂಡ್ರ, ಸಾಫ್ಟ್‌ ಸಿಲ್ಕ್‌ ಸೀರಿನೆ ತೊಗೊಬೇಕು.

ಇನ್ನ ವರಮಹಾಲಕ್ಷ್ಮಿಗೆ ಮಾತ್ರ ಕಾಂಜೀವರಂ ತೊಗೊಬೇಕು. ಇಲ್ಲಾಂದ್ರ ಗದ್ವಾಲ್‌, ಚಂದ್ರಕಾಳಿ, ರೇಷ್ಮಿ ಇಳಕಲ್‌ ಆದ್ರೂ ಆಯ್ತು. ಇವೆಲ್ಲಾ ಈಗೀಗ ಐದಂಕಿ ದಾಟ್ಯಾವ. ಮತ್ತ ಲಕುಮಿ ಬಂದು ಜಗುಲಿಗೆ ಕೂಡಬೇಕಂದ್ರ ಒಂದೀಟರೆ ಖರ್ಚು ಮಾಡೂದು ಬ್ಯಾಡ ಅಂತ ಹೆಣ್ಮಕ್ಕಳ ಲೆಕ್ಕಾಚಾರ. ಅಷ್ಟೆಲ್ಲ ರೊಕ್ಕ ಕೊಟ್ರ, ಮನ್ಯಾಗಿರುವ ಲಕುಮಿ ದಡದಡ ಮೆಟ್ಲು ಇಳದು, ಸೀರಿ ಅಂಗಡಿಗೇ ಹೋಗಿ ಕುಂದರ್ತಾಳ ಅನ್ನುವ ಆತಂಕ ಗಂಡುಮಕ್ಕಳದು. ಆದ್ರ ಬದುಕಿನಾಗ ಒಂದರೆ ಸಣ್ಣ ಬೆಳ್ಳಿ ದಡಿ ಇರುವ ಮೈಸೂರು ಸಿಲ್ಕು ಸೀರಿ ಇರಬೇಕು. ಅದೀಗ ಹದಿನಾರು ಸಾವಿರದ ಗಡಿ ದಾಟಿದ್ರೂ ಅಡ್ಡಿ ಇಲ್ಲ... ಒಂದು ಪಟ್ಟು ಸೀರಿ ಇರಬೇಕು. ಅಂದ್ರ ನಾಲ್ಕು ಮೀಟರ್‌ ಒಡಲು ಒಂದ್ಕಡೆ ಹೆಣದು, ಒಂದು ಮೀಟರ್‌ ಸೆರಗು ಬ್ಯಾರೆ ಕಡೆ ಹೆಣದು, ಇವೆರಡನ್ನೂ ಕೈಲೆ ಜೋಡಿಸು ಹಂಗ ಹೆಣದಿರ್ತಾರ. ಅಗ್ದಿ ವೈಭವೋಪೇತ ಸೀರಿಗಳು. ಆದ್ರ ಇವೂ ಐದಂಕಿ ದಾಟ್ತಾವ.

ನೆರೆಯ ಗದ್ವಾಲದ ತಿಳಿಬಣ್ಣದ ಒಡಲಿಗೆ ಗಾಢ ಬಣ್ಣದ ಅಂಚು ಒಡಲು ಇರುವ ಸೀರಿಗಳಿವು. ಜೊತಿಗೆ ಒಂದೇ ಬಣ್ಣದ ರೇಷ್ಮಿ ಸೀರಿನೂ ಇರ್ತಾವ. ಹಂಗೇ ಅಗಲಗಲ ಅಂಚಿನ ಧರ್ಮಾವರಂ ಬೇಕಂದ್ರ, ಕಳೆದ ವರ್ಷದ ವರಮಹಾಲಕ್ಷ್ಮಿಯ ಆರತಿ ತಟ್ಟಿಗೆ ಇಟ್ಟ ರೊಕ್ಕ ಕೂಡಿಡೂದ್ರಿಂದ, ಸೀರಿ ಕನಸು ಹೆಣಿಯೂದು ಶುರು ಆಗಿರ್ತದ.

ADVERTISEMENT

ಭಾಗಲ್‌ಪುರಿ ಸಿಲ್ಕ್‌ ಇರಬಹುದು, ಅಪ್ಪಟ ಜಾಮ್ದಾನಿ ಕಾಟನ್‌ ಸೀರಿ ಇರಬಹುದು, ಪಶ್ಚಿಮಬಂಗಾಳದ ಕಾಟನ್‌ ಸೀರೆಗಳಿರಬಹುದು, ಹದಿಹರೆಯದಿಂದಲೇ ಸೀರಿ ಸಂಗ್ರಹ ಶುರು ಆಗಿರ್ತದ. ಸೀರಿಯ ಪಾರದರ್ಶಕತನ ನಮ್ಮ ಅನುಭವದಂಗ ಗಾಢ ಆಗ್ಕೊಂತ ಹೋಗ್ತದ. ಹಂಗಾಗಿನೇ ಕಾಲೇಜಿಗೆ ಹೋಗೋರು, ನೆಟ್‌ ಮತ್ತು ಶಿಫಾನ್‌ ತೊಗೊತಾರ. ಮದಿವಿ ಆದೋರು ರೇಷ್ಮಿ ಸೀರಿ ಕಡೆ ಹೊರಳತಾರ. ಮಕ್ಕಳಾದ ಮೇಲೆ, ಕಾಟನ್‌ ಸೀರಿ ಹಿತ ಅನಸ್ತಾವ. ಜರಿ ಬ್ಯಾಡನಸ್ತದ. ಮುಂದ, ಅಗ್ದಿ ಸರಳ ಯಾವ ವಿನ್ಯಾಸನೂ ಇಲ್ದೆ ಇರುವ ಸೀರಿಗಳು ಬೇಕನಸ್ತಾವ.

ಸೀರಿಗಳು ನಮ್ಮ ಮನಸು, ನಮ್ಮ ಮೂಡು ಜೊತಿಗೆ ನಮ್ಮ ಸ್ವಭಾವವನ್ನೂ ಹಿಡದಿಡ್ತಾವಂತ. ಆದ್ರ ವಸ್ತ್ರವಿನ್ಯಾಸಕರು ನೀಡುವ ಸಲಹೆಗಳು ಬ್ಯಾರೇನೆ ಇರ್ತಾವ. ದಪ್ಪ ಇದ್ರ ಉದ್ದ ಗೆರಿ ಸೀರಿ ತೊಗೊರಿ, ಸಣ್ಣ ಚೌಕಳಿ ಸೀರಿ ಚಂದ. ಸಪೂರ ಇದ್ರ, ಅಡ್ಡ ಗೆರಿ ಸೀರಿ, ದೊಡ್ಡ ಚೌಕಳಿ ಸೀರಿ, ದೊಡ್ಡ ಹೂವಿನ ಸೀರಿ ತೊಗೊರಿ. ನಾವೇ ಸ್ಥೂಲಕಾಯದವರಾಗಿ ಬೊಡ್ಡಿ ಹಂಗಿದ್ರ, ನಿಮ್ಮ ಸೀರಿಯೊಳಗ ತೆಳ್ಳಗಿನ ಬಳ್ಳಿ ಹರದಾಡ್ಲಿ ಅಂತಾರ.

ಇನ್ನ ಸೀರಿ ಮತ್ತು ಬಣ್ಣ, ಇವೆರಡರ ನಡುವೆ ಜುಗುಲ್ಬಂದಿಗೆ ಬಿದ್ರ, ಬಣ್ಣಾನೆ ಭಾಳದಾವೋ.. ಬಣ್ಣಗಳ ಭಾವನೆಗಳೇ ಭಾಳದಾವೋ ತಿಳಿಯೂದಿಲ್ಲ. ತಿಳಿ ಇದ್ದೋರು, ಗಾಢ ಬಣ್ಣ ಉಡ್ತಾರ. ಮತ್ತಿಷ್ಟು ತಿಳೀ ಕಾಣಾಕ. ಗಾಢ ಬಣ್ಣದವರು ತಿಳಿ ಬಣ್ಣಾನೆ ಹುಡುಕ್ತಾರ. ಇವು ಅವರವರ ವೈಯಕ್ತಿಕ ಆಸಕ್ತಿಗೆ ಸಂಬಂಧಿಸಿದ್ದು. ಆದ್ರ ಒಂದೇ ಒಂದು ಸೀರಿ ತರೂನಂತ ಅಂಗಡಿಗೆ ಹೋದೋರು, ಅಲ್ಲಿ ರಿಯಾಯ್ತಿ ಮಾರಾಟ ಕಂಡಕೂಡಲೆ, ಕೈ ಸಡಿಲು ಬಿಡ್ತಾರ. ಕನಸಿನ ಸೀರಿಗೆ ಹದಿನೈದು ಸಾವಿರ ಕೊಟ್ಟು ಒಂದು ತೊಗೊಳೂದೊ, ಐದು ಸಾವಿರದ್ದು ಮೂರು ತೊಗೊಳೂದೊ, ಮೂರು ಸಾವಿರದ್ದು ಐದು ತೊಗೊಳ್ಳೂದೊ.. ಇಂಥ ಲೆಕ್ಕಾಚಾರಗಳು ಅಗ್ದಿ ಬೆಳಕಿನ ವೇಗದೊಳಗ ಮನಸಿನಾಗ ಆಗ್ತಿರ್ತಾವ.

ಹಿಂಗ ಹೆಚ್ಚುವರಿ ತೊಗೊಳ್ಳುವ ಸೀರಿಯೊಳಗ ಅತ್ತಿಗೆ ಯಾವುದು, ಅಮ್ಮಗ ಯಾವುದು, ಅಕ್ಕಗ, ಅತ್ತಿಗಿಗೆ, ನಾದಿನಿಗೆ ಹಿಂಗ ಲೆಕ್ಕಾಚಾರನೂ ಸಾಗ್ತಾವ. ಒಮ್ಮೆಮ್ಮೆ ತ್ಯಾಗ ಮಾಡ್ಕೊಂತ, ಒಮ್ಮೊಮ್ಮೆ ಆಸೆಗಳಿಗೆ ತಿಲಾಂಜಲಿ ಇಟ್ಕೊಂತ, ಇನ್ನೊಮ್ಮೆ ದುರಾಸೆ ಆದ್ರೂ ಚಿಂತಿಲ್ಲ.. ಏನು ಮತ್ಮತ್ತ ತೊಗೊಳೂದಿಲ್ಲ ಅಂತ ತಾವೇ ಸಮಾಧಾನ ಪಟ್ಕೊಂತ, ಕೆಲವೊಮ್ಮೆ ಯಾದಿ ಮೆ ಶಾದಿ ಆಗ್ತಾವಲ್ಲ.. ಹಂಗೂ ಇರ್ತದ. ಗಂಡ ಕೊಟ್ಟ ರೊಕ್ಕ, ತಾನು ಕೂಡಿಟ್ಟ ಕಾಸು, ಅಮ್ಮ, ಅಣ್ಣ ಅವಾಗವಾಗ ಕೊಟ್ಟಿದ್ದು, ಉಳಿಸಿಟ್ಟಿದ್ದು, ಕೂಡಿಟ್ಟಿದ್ದು, ಬಚ್ಚಿಟ್ಟಿದ್ದು ಎಲ್ಲಾನೂ ಸೀರಿ ಮಡಿಕಿ ಬಿಚ್ಚೂ ಮುಂದ ಮತ್ತ ಎಣಕಿಗೆ ಬರ್ತಾವ.

ಸೀರಿ ಅನ್ನೂದು ಹೆಣ್ಮಕ್ಕಳ ಸಿರಿಪ್ರಪಂಚ. ಎಷ್ಟು ತಂದ್ರೂ ಕಡಿಮಿ. ಎಷ್ಟು ಇದ್ರೂ ಕಡಿಮಿ.. ಅಂಗಡಿಯೊಳಗ ಕುಂತಾಗ ಯಾವಾಗಲೂ ಬ್ಯಾರೆಯೋರು ಆರಿಸಿದ ಸೀರಿ ಸೇರೂದು ಅಷ್ಟೇ ಸಹಜ. ಇರುವುದೆಲ್ಲ ಬಿಟ್ಟು.. ಇರದುದರೆಡೆಗೆ... ಅನ್ನೂಹಂಗ!

ಭಾಳ ಮಂದಿ ಮಾಡುವ ತಪ್ಪೇನಂದ್ರ ಚಂದ ಕಾಣುವ ಛೊಲೊ ಸೀರಿ ಆರಾಸಕ ಕುಂದರ್ತಾರ. ಹೊತ್ತು ಹೋಗಿದ್ದು ತಿಳಿಯೂದೆ ಇಲ್ಲ. ಖರೇವಂದ್ರ, ನಮಗ ಚಂದ ಕಾಣುವ ಸೀರಿಗಿಂತಲೂ ಉಟ್ಟಾಗ, ನಾವು ಚಂದ ಕಾಣುವ ಸೀರಿ ಆರಸಬೇಕು. ಆವಾಗ ನಮ್ಮ ಸ್ವಭಾವಕ್ಕ, ನಮ್ಮ ವ್ಯಕ್ತಿತ್ವಕ್ಕ ಮೆರುಗು ನೀಡುವಂಥ ಸೀರಿ ನಮ್ಮನ್ನ ಅಪ್ಕೊಂತದ.

ಮತ್ತ ಈ ಸಾರಿ ಹಬ್ಬಕ್ಕ ಯಾವ ಸೀರಿ ಖರೀದಿ ಆಯ್ತು?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.