ADVERTISEMENT

ಫೆಬ್ರುವರಿ 21 ವಿಶ್ವ ಮಾತೃಭಾಷಾ ದಿನ: ಮಾತೃಭಾಷೆಯೆಂಬ ಬೆಚ್ಚನೆಯ ಮಡಿಲು

ಅರುಣಾ ಯಡಿಯಾಳ್
Published 18 ಫೆಬ್ರುವರಿ 2023, 0:30 IST
Last Updated 18 ಫೆಬ್ರುವರಿ 2023, 0:30 IST
ಮಾತೃಭಾಷೆಯ ಮೂಲಕ ಕಲಿಕೆ
ಮಾತೃಭಾಷೆಯ ಮೂಲಕ ಕಲಿಕೆ   

ಫೆಬ್ರುವರಿ 21 ‘ವಿಶ್ವ ಮಾತೃಭಾಷಾ ದಿನ’. ಬಹುಭಾಷೆ ಮತ್ತು ಬಹುಸಂಸ್ಕೃತಿಯ ಅಸ್ಮಿತೆಯನ್ನು ಉಳಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ನೆಪದಲ್ಲಿ ತಾಯ್ನುಡಿಯ ಕಲಿಕೆಯೊಂದಿಗೆ ಬೆಸೆದುಕೊಂಡ ಮಕ್ಕಳ ಮನೋವಿಕಸನದ ಹಂತಗಳನ್ನು ಮಂಗಳೂರಿನ ಮನೋವೈದ್ಯೆ ಡಾ. ಅರುಣಾ ಯಡಿಯಾಳ್‌ ಇಲ್ಲಿ ವಿಶ್ಲೇಷಿಸಿದ್ದಾರೆ.

ಭಾವಜೀವಿಯಾದ ಮನುಷ್ಯ ಸಾಮಾಜಿಕ ಜೀವಿಯೂ ಹೌದು. ಭಾವನೆಗಳನ್ನು ಸಮಾಜದಲ್ಲಿನ ಇನ್ನಿತರರೊಂದಿಗೆ ಹಂಚಿಕೊಳ್ಳಲು ಸಂವಹನ, ಸ್ಪಂದನದ ಅಗತ್ಯ ಇರಲೇಬೇಕು. ಇದಕ್ಕೆ ಚಂದದ ಸೇತುವೆಯೇ ಭಾಷೆ.

ಎಷ್ಟೇ ಭಾಷೆ ಕಲಿತರೂ ಮೂಲ ಯೋಚನೆಗಳೆಲ್ಲ ರೂಪುಗೊಳ್ಳುವುದು, ಚಂದದ ಭಾವನೆಗಳು ಹುಟ್ಟಿ, ಅವು ಮಾತಿನ ಅನುಭೂತಿಗೆ ನಿಲುಕುವುದೆಲ್ಲ ಮಾತೃಭಾಷೆಯಲ್ಲಿಯೇ. ಹಾಗಾಗಿ ತಾಯ್ನುಡಿ ಎನ್ನುವುದು ಹೃದಯದ ಭಾಷೆ.

ADVERTISEMENT

ಮಾತೃಭಾಷೆಯೆಂದರೆ ತಾಯಿಯ ಭಾಷೆ ಎಂದು ಅರ್ಥೈಸಿಕೊಳ್ಳುವುದಕ್ಕಿಂತಲೂ, ಮಗು ತನ್ನ ಬಾಲ್ಯದಲ್ಲಿ ತಂದೆ-ತಾಯಿಯಿಂದ, ಮನೆಯವರಿಂದ, ತನ್ನದೇ ಮನೆಯೆಂಬ ಆಪ್ತ ವಲಯದಲ್ಲಿ ರೂಢಿಸಿಕೊಳ್ಳುವ, ತಾನು ವಿಕಸನಗೊಂಡಂತೆ ತನ್ನೊಂದಿಗೆ ಬೆಳೆಯುತ್ತ ಹೋಗುವ ಭಾಷೆಯೇ ಮಾತೃಭಾಷೆ. ಮಗು ತನ್ನ ಬಾಲ್ಯಾವಸ್ಥೆಯಲ್ಲಿ ಕಲಿಯುವ ಭಾಷೆ ಎಂದೂ ಅರ್ಥ ಮಾಡಿಕೊಳ್ಳಬಹುದು.

ನಡೆ–ನುಡಿಗೆ ಅಡಿಪಾಯ

ಮಾತೃಭಾಷೆಯೆಂಬುದು ಬೇರೆ ಭಾಷೆಗಳ ಹಾಗೆ, ಕೇವಲ ಸಂಪರ್ಕ, ಸಂವಹನದ ಒಂದು ಸಾಧನವಷ್ಟೇ ಅಲ್ಲ! ಅದು ಮಗುವಿನ ವೈಯಕ್ತಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ನೆಲೆಗಟ್ಟಿನ ಅವಿಭಾಜ್ಯ ಕುರುಹೂ ಆಗಿದೆ. ಸಾಮಾಜಿಕ ನಡೆ-ನುಡಿಗಳ ಅಡಿಪಾಯವೂ ಆಗಿರುತ್ತದೆ. ನೈತಿಕ ಹಾಗೂ ಭೌತಿಕ ವಿಕಸನಕ್ಕೆ ನಾಂದಿಯೂ ಆಗಿರುತ್ತದೆ.

ಮಾತೃಭಾಷೆಯಿಂದಲೇ ಮಕ್ಕಳ ತೊದಲ ನುಡಿ, ಜೊತೆಗೆ ನಡೆ, ಅಭ್ಯಾಸಗಳು, ರೀತಿ-ನೀತಿ, ತತ್ವಗಳು, ನಂಬಿಕೆಗಳು ಈ ಭಾಷೆಯಲ್ಲಿಯೇ ರೂಪಗೊಳ್ಳುತ್ತಾ ಹೋಗುತ್ತವೆ. ಪುಟ್ಟ ಮಗುವೊಂದು ತನ್ನ ಇಡೀ ಪ್ರಪಂಚವನ್ನು ಗ್ರಹಿಸುವುದೇ ತಾನು ಕಲಿತ ಮಾತೃಭಾಷೆಯಿಂದ. ಹಾಗಾಗಿ ಇದನ್ನು ಪರಿಣಾಮಕಾರಿಯಾಗಿ ಕಲಿಸುವುದು ಬಹಳ ಮುಖ್ಯ.

ಮಾತೃಭಾಷೆಯಲ್ಲಿ ಸ್ಪಷ್ಟವಾಗಿ ಓದು–ಬರಹ ಕಲಿಯುವ ಮಗುವಿಗೆ ಇನ್ನಷ್ಟು ಭಾಷೆ ಹಾಗೂ ವಿಷಯಗಳ ಕಲಿಕೆ ಸುಗಮವಾಗು ತ್ತದೆ. ಬಾಲ್ಯದಿಂದಲೇ ಅಥವಾ ಮೊದಲ ಭಾಷೆಯಾಗಿ ಮಕ್ಕಳಿಗೆ ಮಾತೃಭಾಷೆಯನ್ನು ಕಲಿಸುವಲ್ಲಿ ಹಲವಾರು ಸಾಮಾಜಿಕ ಲಾಭಗಳೂ ಇವೆ ಎಂದು ಸಂಶೋಧನೆಗಳು ತೋರಿಸಿವೆ.

ಕಲಿಕೆಯಲ್ಲಿ ಆಸಕ್ತಿ

ಮಾತೃಭಾಷೆಯನ್ನು ಚೆನ್ನಾಗಿ ಕಲಿತ ಮಕ್ಕಳು ಕಲಿಕೆಯಲ್ಲಿ ಆಸಕ್ತಿ ತೋರಿಸುತ್ತಾರೆ. ಶಾಲೆಯ ದಾಖಲಾತಿ ಹೆಚ್ಚಳ ಹಾಗೂ ಶಾಲಾಭ್ಯಾಸ ಮುಂದುವರಿಸುವ ಸಾಧ್ಯತೆಗಳು ದಟ್ಟವಾಗಿವೆ. ತಂದೆ ತಾಯಂದಿರು ಮುಕ್ತವಾಗಿ ಶಿಕ್ಷಕರೊಂದಿಗೆ ಬೆರೆತು, ಸಂವಹನ ನಡೆಸಿ ಮಕ್ಕಳ ವಿದ್ಯಾಭ್ಯಾಸದಲ್ಲಿ ಜಾಸ್ತಿ ಪಾಲುಗಾರಿಕೆ ವಹಿಸಿಕೊಳ್ಳಬಹುದು. ಪರಿಣಾಮಕಾರಿಯಾಗಿ ಮಾತೃಭಾಷೆಯನ್ನು ಕಲಿಯುವುದರಿಂದ ಶಾಲೆಯಲ್ಲಿ ಉತ್ತಮ ಶೈಕ್ಷಣಿಕ ಪ್ರಗತಿ ಸಾಧಿಸಬಹುದು.

ಆತ್ಮವಿಶ್ವಾಸದ ಆಸರೆ

ಮಕ್ಕಳಿಗೆ ಆರಂಭಿಕ ಹಂತದಲ್ಲಿಯೇ ಮಾತೃಭಾಷೆಯನ್ನು ಚೆನ್ನಾಗಿ ಕಲಿಸಿ. ಶಾಲೆಯಲ್ಲಿ ಯಾವ ಮಾಧ್ಯಮದಲ್ಲಿ ಕಲಿತರೂ ಮನೆಯಲ್ಲಿ ಆಡುವ ಭಾಷೆಯ ಕಲಿಕೆಯಲ್ಲಿ ಸ್ಪಷ್ಟತೆ ಇರಲಿ. ಮಾತೃಭಾಷೆಯ ಜತೆ ಬೇರೆ ಭಾಷೆಗಳನ್ನು ಕಲಿಸಿದರೆ ಎರಡೂ ಭಾಷೆಗಳ ಮೇಲೆ ಹಿಡಿತ ಸಾಧಿಸಬಹುದು. ಮಾತೃಭಾಷೆ ಸ್ಪಷ್ಟವಾಗಿ ಕಲಿಯುತ್ತಲೇ ಅದರ ಮೇಲಿನ ಒಲವು ಕೂಡ ಹೆಚ್ಚುತ್ತದೆ. ಅದರೊಂದಿಗೆ ತಮ್ಮದೇ ಆದ ನೆಲ, ಜಲ, ನಾಡು, ಸಂಸ್ಕೃತಿ, ಆಚಾರ, ವಿಚಾರದ ಬಗ್ಗೆ ಜ್ಞಾನ ಹಾಗೂ ಹೆಮ್ಮೆಯೂ ಮೂಡುವಂತಾಗುತ್ತದೆ. ಇದರಿಂದ ಕಲಿಕೆಯಲ್ಲಿ ಇನ್ನಷ್ಟೂ ಆಸಕ್ತಿಯೂ ಹೆಚ್ಚಿ, ಮುಂದೆ ಆತ್ಮವಿಶ್ವಾಸ ಹಾಗೂ ಸಮಗ್ರ ರೀತಿಯ ವ್ಯಕ್ತಿತ್ವ ವಿಕಸನಕ್ಕೂ ದಾರಿಯಾಗುತ್ತದೆ.

***

ಮಾತೃಭಾಷೆಯಲ್ಲಿ ಒಲವು ಮೂಡಿಸುವುದು ಹೇಗೆ?

ಎಲ್ಲಾ ಭಾಷೆಯೂ ಸುಮಧುರವೇ. ಎಲ್ಲಾ ಅಮ್ಮಂದಿರೂ ಮಮತಾಮಯಿಗಳೇ! ಆದರೂ ನಮಗೆ ನಮ್ಮಮ್ಮನ ಮಡಿಲೇ ವಿಶೇಷ. ಹಾಗೆಯೇ ಭಾಷೆಗಳು ಎಷ್ಟೇ ಇರಲಿ. ಹೃದಯದ ಭಾಷೆಗೆ ಆದ್ಯತೆ ಸಿಗಲಿ.

ಕನ್ನಡದ ನೆಲದಲ್ಲಿ ತುಳು, ಕೊಂಕಣಿ, ಮಲಯಾಳಯಂ, ತಮಿಳು, ಮರಾಠಿ, ತೆಲುಗು ಹೀಗೆ ನಾನಾ ಮಾತೃಭಾಷೆಗಳನ್ನಾಡುವ ಜನರಿದ್ದಾರೆ. ಹೀಗಿದ್ದೂ ಬಹುತೇಕರ ಮಾತೃಭಾಷೆ ಕನ್ನಡ. ಕನ್ನಡದಲ್ಲಿಯೂ ನಾನಾ ಬಗೆಗಳಿವೆ. ಮೈಸೂರು ಕನ್ನಡ, ಮಲೆನಾಡ ಕನ್ನಡ, ಮಂಗಳೂರು ಕನ್ನಡ, ಹುಬ್ಬಳ್ಳಿ ಕನ್ನಡ, ಕುಂದಾಪುರ ಕನ್ನಡ, ಹವ್ಯಗನ್ನಡ, ಅರೆಗನ್ನಡ, ಚಾಮರಾಜನಗರ ಕನ್ನಡ, ಬಯಲು ಸೀಮೆ ಕನ್ನಡ ಹೀಗೆ ಭಾಷೆ ಪ್ರತಿ 60 ಕಿ.ಮೀಗೆ ತನ್ನ ಸ್ವರೂಪವನ್ನು ಬದಲಾಯಿಸಿಕೊಂಡಿದೆ. ಅಷ್ಟು ವೈವಿಧ್ಯ ಭಾಷಾ ಸಂಪತ್ತು ನಮಗಿದೆ.

ಜಾಗತಿಕ ಭಾಷೆ ಎನಿಸಿಕೊಂಡ ಇಂಗ್ಲಿಷ್‌ ಸದ್ಯಕ್ಕೆ ಮಾತೃಭಾಷೆಗಳಿಗೆ ಹೊಸ ಹೊಸ ಸವಾಲನ್ನು ತಂದಿಟ್ಟಿದೆ. ಇಂಗ್ಲಿಷ್‌ನೆಡೆಗಿನ ವ್ಯಾಮೋಹದಿಂದ ಮಾತೃಭಾಷೆಯನ್ನು ಸಮರ್ಪಕವಾಗಿ ಕಲಿಯುವ ವಾತಾವರಣವೇ ರೂಪುಗೊಳ್ಳುತ್ತಿಲ್ಲ. ಈ ಬಗ್ಗೆ ಪೋಷಕರು ಅನುಸರಿಸಬೇಕಾದ ಸರಳ ಉಪಾಯ ಇಲ್ಲಿದೆ.

l ಹೊರಗೆ ಯಾವುದೇ ಭಾಷೆಯಲ್ಲಿ ವ್ಯವಹಾರ ನಡೆಸಿದರೂ, ಮನೆಯೊಳಗೆ ತಮ್ಮ ಮಾತೃಭಾಷೆಯನ್ನು ಬಳಸುವ ಬಗ್ಗೆ ಪೋಷಕರು ಸಂಕಲ್ಪ ಮಾಡಬೇಕು. ಇದಕ್ಕೆ ಪೂರಕ ವಾತಾವರಣ ಕಲ್ಪಿಸಬೇಕು.

lತರಕಾರಿ, ಬೇಳೆಕಾಳು, ತಿನ್ನುವ ಆಹಾರ ಪದಾರ್ಥ ಹೀಗೆ ನಿತ್ಯ ಬಳಸುವ ವಸ್ತುಗಳ ಪರಿಚಯವೂ ಮಾತೃಭಾಷೆಯಲ್ಲಿ ಆಗಲಿ.

lಒಂದೇ ವಸ್ತುವಿನ ಹೆಸರನ್ನು ಬೇರೆ ಬೇರೆ ಭಾಷೆಗಳಲ್ಲಿ ಹೇಳುವ, ಕೇಳುವ ಆಟವನ್ನು ಆಡಬೇಕು. ಹೀಗೆ ಬೇರೆ ಬೇರೆ ಆಟ, ಹಾಡು, ಪದ್ಯ, ಕಥೆ, ಚಿತ್ರ, ಚಲನಚಿತ್ರ, ಬೇರೆ ಬೇರೆ ಮಾಧ್ಯಮಗಳಿಂದಲೂ ಮಾತೃಭಾಷೆಯನ್ನು ಮಕ್ಕಳಿಗೆ ಪರಿಚಯಿಸುತ್ತೀರಿ.

lಮಾತೃಭಾಷೆಯಲ್ಲಿ ಓದು–ಬರೆಯುವುದನ್ನು ಅಭ್ಯಾಸ ನಡೆಸಬೇಕು. ಎಷ್ಟೋ ಮಾತೃಭಾಷೆಗೆ ಲಿಪಿಯಿಲ್ಲ. ಅದು ಅಳವಡಿಸಿಕೊಂಡಿರುವ ಲಿಪಿಯಲ್ಲಿಯೇ ಬರೆಸುವ, ಅರ್ಥ ಮಾಡಿಸುವ ಪ್ರಯತ್ನ ಮಾಡಬೇಕು. ಉತ್ತಮ ಅಭಿರುಚಿ ಇರುವ ಪುಸ್ತಕಗಳಿಗೆ ಪುಟ್ಟ ಮನಸ್ಸು ತೆರೆದುಕೊಳ್ಳುವಂತೆ ಮಾಡಬೇಕು.

lಜಾಗತಿಕವಾಗಿ ಯಾವುದೇ ಭಾಷೆ ಮನ್ನಣೆ ಗಳಸಿರಬಹುದು. ಅದನ್ನು ಕಲಿಯುವುದು ಹಿರಿಮೆಯೂ ಆಗಿರಬಹುದು. ಆದರೆ, ಮಾತೃಭಾಷೆಯನ್ನು ಸುಲಲಿತವಾಗಿ ಕಲಿತು, ಅದರೊಂದಿಗೆ ಎಲ್ಲ ಭಾಷೆಯನ್ನು ಗ್ರಹಿಸುವ, ಕಲಿಯುವ ಸಾಮರ್ಥ್ಯವನ್ನು ಬೆಳೆಸಬೇಕಿದೆ. ಇದಕ್ಕೆ ಮೊದಲು ಮಾತೃಭಾಷೆಯೆಡೆಗೆ ಮಕ್ಕಳಲ್ಲಿ ಅಭಿಮಾನವನ್ನು ತುಂಬಬೇಕಿದೆ. ಅಭಿಮಾನವೇ ಆತ್ಮವಿಶ್ವಾಸವಾಗಿ ರೂಪುಗೊಳ್ಳುತ್ತದೆ.


ನಾವು ಅಮೆರಿಕಕ್ಕೆ ಹೋದಾಗ ಮಗ ಧನ್ವಿನ್‌ಗೆ ಮೂರು ವರ್ಷ. ಮೂರೂವರೆ ವರ್ಷಗಳ ನಂತರ ಮಗಳು ಧಾತ್ರಿ ಹುಟ್ಟಿದಳು. ಮಗನಿಗೆ ಶಾಲೆಯಲ್ಲಿ ಇಂಗ್ಲಿಷ್‌ ಮಾಧ್ಯಮದ ಕಲಿಕೆ. ಆದರೆ ಮನೆಯಲ್ಲಿ ನಾವಿಬ್ಬರೂ ಅವನೊಂದಿಗೆ ನಮ್ಮ ಮಾತೃಭಾಷೆ ಕನ್ನಡದಲ್ಲೇ ವ್ಯವಹರಿಸುತ್ತಿದ್ದೆವು. ಅವನು ಇಂಗ್ಲಿಷ್‌ನಲ್ಲಿ ಪ್ರಶ್ನೆ ಕೇಳಿದರೂ ಕನ್ನಡದಲ್ಲೇ ಉತ್ತರಿಸುತ್ತಿದ್ದೆವು. ಮಕ್ಕಳಿಬ್ಬರಿಗೂ ಬಾಲ್ಯದಿಂದಲೂ ಪ್ರಾಸ ಪದ್ಯಗಳು(ರೈಮ್ಸ್‌), ಕಥೆಗಳನ್ನು ಕನ್ನಡದಲ್ಲೇ ಹೇಳಿಕೊಡುತ್ತಿದ್ದೆವು. ಒಟ್ಟಾರೆ ಮನೆಯಲ್ಲಿ ನಿತ್ಯದ ಸಂವಹನವೆಲ್ಲ ತಾಯ್ನುಡಿಯ ಭಾಷೆಯಲ್ಲೇ. ಈಗ ಮಗಳಿಗೆ 5 ವರ್ಷ. ಮಗನಿಗೆ 12 ವರ್ಷ. ಇಷ್ಟು ವರ್ಷ ವಿದೇಶದಲ್ಲಿ ಬೆಳೆದರೂ ಮಕ್ಕಳಿಬ್ಬರೂ ಚೆನ್ನಾಗಿ ಕನ್ನಡ ಮಾತಾಡ್ತಾರೆ, ಓದುತ್ತಾರೆ –ಬರೆಯುತ್ತಾರೆ. ಮನೆಯಲ್ಲಿ ತಾಯ್ನುಡಿಯಾಡುವ ವಾತಾವರಣವಿದ್ದರೆ, ಶಾಲೆಯಲ್ಲಿ ಯಾವುದೇ ಮಾಧ್ಯಮವಿದ್ದರೂ ಮಕ್ಕಳು ಮಾತೃಭಾಷೆ ಮರೆಯುವುದಿಲ್ಲ.
– ದೀಪ್ತಿ ಮಧು, ಬೆಂಗಳೂರು

ತಾಯ್ನುಡಿಯ ವಾತಾವರಣ ಇರಲಿ

ನಾವು ಅಮೆರಿಕಕ್ಕೆ ಹೋದಾಗ ಮಗ ಧನ್ವಿನ್‌ಗೆ ಮೂರು ವರ್ಷ. ಮೂರೂವರೆ ವರ್ಷಗಳ ನಂತರ ಮಗಳು ಧಾತ್ರಿ ಹುಟ್ಟಿದಳು. ಮಗನಿಗೆ ಶಾಲೆಯಲ್ಲಿ ಇಂಗ್ಲಿಷ್‌ ಮಾಧ್ಯಮದ ಕಲಿಕೆ. ಆದರೆ ಮನೆಯಲ್ಲಿ ನಾವಿಬ್ಬರೂ ಅವನೊಂದಿಗೆ ನಮ್ಮ ಮಾತೃಭಾಷೆ ಕನ್ನಡದಲ್ಲೇ ವ್ಯವಹರಿಸುತ್ತಿದ್ದೆವು. ಅವನು ಇಂಗ್ಲಿಷ್‌ನಲ್ಲಿ ಪ್ರಶ್ನೆ ಕೇಳಿದರೂ ಕನ್ನಡದಲ್ಲೇ ಉತ್ತರಿಸುತ್ತಿದ್ದೆವು. ಮಕ್ಕಳಿಬ್ಬರಿಗೂ ಬಾಲ್ಯದಿಂದಲೂ ಪ್ರಾಸ ಪದ್ಯಗಳು(ರೈಮ್ಸ್‌), ಕಥೆಗಳನ್ನು ಕನ್ನಡದಲ್ಲೇ ಹೇಳಿಕೊಡುತ್ತಿದ್ದೆವು. ಒಟ್ಟಾರೆ ಮನೆಯಲ್ಲಿ ನಿತ್ಯದ ಸಂವಹನವೆಲ್ಲ ತಾಯ್ನುಡಿಯ ಭಾಷೆಯಲ್ಲೇ. ಈಗ ಮಗಳಿಗೆ 5 ವರ್ಷ. ಮಗನಿಗೆ 12 ವರ್ಷ. ಇಷ್ಟು ವರ್ಷ ವಿದೇಶದಲ್ಲಿ ಬೆಳೆದರೂ ಮಕ್ಕಳಿಬ್ಬರೂ ಚೆನ್ನಾಗಿ ಕನ್ನಡ ಮಾತಾಡ್ತಾರೆ, ಓದುತ್ತಾರೆ –ಬರೆಯುತ್ತಾರೆ. ಮನೆಯಲ್ಲಿ ತಾಯ್ನುಡಿಯಾಡುವ ವಾತಾವರ ಣವಿದ್ದರೆ, ಶಾಲೆಯಲ್ಲಿ ಯಾವುದೇ ಮಾಧ್ಯಮವಿದ್ದರೂ ಮಕ್ಕಳು ಮಾತೃಭಾಷೆ ಮರೆಯುವುದಿಲ್ಲ.

-ದೀಪ್ತಿ ಮಧು, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.