ವೈಭವಿ ಹಾಗೂ ವಿರಾಜ್ ಫೇಸ್‌ಬುಕ್ ಮೂಲಕ ಸ್ನೇಹಿತರಾದವರು. ಹಾಯ್, ಬಾಯ್‌ಗೆ ಸೀಮಿತವಾಗಿದ್ದ ಅವರ ನಡುವಿನ ಸ್ನೇಹ– ಸಂಬಂಧ ದಿನ ಕಳೆದಂತೆ ಗಟ್ಟಿಯಾಗಿತ್ತು. ಸ್ನೇಹ ಪ್ರೀತಿಗೆ ತಿರುಗಲು ಬಹಳ ಸಮಯ ಹಿಡಿಯಲಿಲ್ಲ. ಫೋನ್ ನಂಬರ್ ಬದಲಾಯಿಸಿಕೊಂಡು ಮಾತನಾಡುತ್ತ ಇನ್ನಷ್ಟು ಪರಸ್ಪರ ಇನ್ನಷ್ಟು ಅರಿತುಕೊಂಡಿದ್ದರು. ಹೀಗಿದ್ದಾಗ ವಿರಾಜ್ ಒಮ್ಮೆ ವೈಭವಿಯನ್ನು ಡೇಟಿಂಗ್‌ಗೆ ಕರೆದಿದ್ದ. ಅವಳೂ ಖುಷಿಯಿಂದ ಒಪ್ಪಿಕೊಂಡು ಮೊದಲ ಭೇಟಿಗೆ ಸಿದ್ಧವಾಗಿದ್ದಳು. ಆದರೆ ಮೊದಲ ಭೇಟಿಯಲ್ಲೇ ಅವನು ಕೇಳಿದ ಕೆಲವು ಪ್ರಶ್ನೆಗಳು ಅವಳಲ್ಲಿ ಅಸಮಾಧಾನ ಹುಟ್ಟುವಂತೆ ಮಾಡಿದ್ದವು.
ಪ್ರೇಮಿಗಳಿಗೆ ಡೇಟಿಂಗ್–ಮೀಟಿಂಗ್ ಎಂದರೆ ಸಹಜವಾಗಿಯೇ ಖುಷಿ ಇರುತ್ತದೆ. ಪರಸ್ಪರರ ಬಗ್ಗೆ ಕೇಳಿ ತಿಳಿದುಕೊಳ್ಳುವುದು, ಆಸಕ್ತಿಯ ಬಗ್ಗೆ ಸಂವಹನ ನಡೆಸುವುದು, ಹೊಗಳುವುದು, ಅಭಿರುಚಿಯನ್ನು ತಿಳಿದುಕೊಳ್ಳುವುದು ಮಾಡುವುದರಿಂದ ಸಮಯ ಕಳೆದಿದ್ದೇ ಗೊತ್ತಾಗುವುದಿಲ್ಲ. ಆದರೆ ಈ ಖುಷಿಯ ನಡುವೆ ಎಚ್ಚರವೂ ಅಗತ್ಯ.
‘ಡೇಟಿಂಗ್‌ನಲ್ಲಿ ನೀವಾಡುವ ಒಂದೊಂದು ಮಾತು ಹಾಗೂ ಪ್ರತಿಕ್ರಿಯೆ ಇಬ್ಬರ ನಡುವೆ ಕಂದಕವನ್ನು ಸೃಷ್ಟಿಸಬಹುದು. ನಿಮ್ಮ ಪ್ರಶ್ನೆ ಅಥವಾ ಅಭಿಪ್ರಾಯ ನಿಮ್ಮ ಸಂಗಾತಿಗೆ ಇಷ್ಟವಾಗದೇ ಹೋಗಬಹುದು. ಜೊತೆಗೆ ಇದು ಸಂಬಂಧವನ್ನು ಹಾಳು ಮಾಡಬಹುದು. ಹಾಗಾಗಿ ಡೇಟಿಂಗ್ ಸಮಯದಲ್ಲಿ ಕೆಲವೊಂದು ಪ್ರಶ್ನೆಗಳನ್ನು ಕೇಳದೇ ಇರುವುದರಿಂದ ನಿಮ್ಮ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಬಹುದು’ ಎನ್ನುತ್ತಾರೆ ಆಪ್ತ ಸಮಾಲೋಚಕಿ ಪ್ರಮೀಳಾ ಎಸ್.
ಹಾಗಾದರೆ ಆ ಕೆಲವು ಪ್ರಶ್ನೆಗಳು ಯಾವುವು?
ನೀನು ನೋಡಲು ಚೆನ್ನಾಗಿದ್ದೀಯಾ, ಆದರೂ ಯಾರನ್ನೂ ಪ್ರೀತಿಸಿಲ್ಲ ಯಾಕೆ?: ಈ ಪ್ರಶ್ನೆ ನಿಮ್ಮ ಪ್ರೇಮಿಯ ಮನಸ್ಸಿನಲ್ಲಿ ನಿಮ್ಮ ಬಗ್ಗೆ ರೇಜಿಗೆ ಹುಟ್ಟಿಸುವಂತೆ ಮಾಡಬಹುದು. ಇದರಿಂದ ಅವರ ಮನಸ್ಸಿನಲ್ಲಿ ನಾನು ಒಂಟಿಯಾಗಿ ಇದ್ದದ್ದೇ ತಪ್ಪಾ ಎಂಬ ಭಾವನೆ ಮೂಡುವಂತೆ ಮಾಡಬಹುದು. ‘ನನ್ನಲ್ಲಿ ಯಾವುದೋ ನ್ಯೂನತೆ ಇದೆ ಎಂಬ ಕಾರಣ ಒಂಟಿಯಾಗಿದ್ದೇನೆ ಎಂಬ ಭಾವನೆಯೊಂದಿಗೆ ಎದುರಿನ ವ್ಯಕ್ತಿ ಈ ಪ್ರಶ್ನೆ ಕೇಳುತ್ತಿರಬಹುದು’ ಎಂದು ಭಾವಿಸಬಹುದು. ಹಾಗೆಲ್ಲಾ ಕೇಳುವ ಬದಲು ನಿಮ್ಮ ಎದುರು ಒಬ್ಬ ಅದ್ಭುತ ವ್ಯಕ್ತಿ ಇದ್ದಾರೆ, ಅವರು ನಿಮಗೆ ಪ್ರೇಮಿಯಾಗಿ ಸಿಕ್ಕಿದ್ದಾರೆ ಎಂದು ಖುಷಿ ಪಡಿ.
ನಾನು ಹೇಗೆ ಕಾಣಿಸುತ್ತಿದ್ದೇನೆ?: ಇದು ನಿಜಕ್ಕೂ ಒಂದು ಸಣ್ಣ ಹಾಗೂ ನೇರವಾದ ಪ್ರಶ್ನೆ. ಆದರೆ ಕೆಲವರಿಗೆ ಈ ಪ್ರಶ್ನೆಗೆ ಉತ್ತರಿಸುವುದು ಇಷ್ಟವಾಗದೇ ಇರಬಹುದು. ಕೆಲವೊಮ್ಮೆ ಬಾಹ್ಯ ಸೌಂದರ್ಯದ ಬಗ್ಗೆ ನೀವು ಕೇಳುವ ಪ್ರಶ್ನೆ ನಿಮ್ಮ ಎದುರು ಕುಳಿತವರಲ್ಲಿ ಅಸಹ್ಯ ಹುಟ್ಟಿಸುವಂತೆ ಮಾಡಬಹುದು. ಅವರಾಗಿಯೇ ನಿಮ್ಮನ್ನು ಹೊಗಳಿದರೆ ಖುಷಿಪಡಿ. ಕೆಲವೊಮ್ಮೆ ಅವರ ಉತ್ತರ ನಿಮ್ಮ ಮನಸ್ಸಿಗೆ ಬೇಸರ ತರಿಸಬಹುದು. ಇದರಿಂದ ನಿಮ್ಮ ಡೇಟಿಂಗ್ ದಿನ ಹಾಳಾಗಬಹುದು.
ನಿಮ್ಮ ಹಿಂದಿನ ಸಂಬಂಧ ಹೇಗಿತ್ತು?: ನಿಮ್ಮ ಪ್ರೇಮಿ ನಿಮ್ಮನ್ನು ನಂಬಿ ಭೂತಕಾಲದಲ್ಲಿ ನಡೆದ ಎಲ್ಲಾ ಸಂಗತಿಗಳನ್ನು ನಿಮ್ಮೊಂದಿಗೆ ಹಂಚಿಕೊಂಡಿರುತ್ತಾರೆ. ಮಾತಿನ ನಡುವೆ ಹಳೆಯ ಪ್ರೇಮ ಪ್ರಕರಣಗಳ ಬಗ್ಗೆಯೂ ಹೇಳಬಹುದು. ಆದರೆ ನೀವು ಪದೇ ಪದೇ ಅದರ ಕುರಿತು ವಿವರಣೆ ಕೇಳುವುದು ಸರಿಯಲ್ಲ. ಸಮಯ ಬಂದಾಗ ಅವರೇ ತಮ್ಮ ಭೂತಕಾಲದ ಬಗ್ಗೆ ಯಾವುದೇ ಹಿಂಜರಿಕೆ ಇಲ್ಲದೆ ಎಲ್ಲವನ್ನೂ ಹೇಳಬಹುದು.
ನಮ್ಮ ಸಂಬಂಧ ಎಲ್ಲಿಯವರೆಗೆ ಮುಂದುವರಿಯಬಹುದು ಎನ್ನಿಸುತ್ತದೆ?: ಮೊದಲ ಡೇಟ್ ಅಥವಾ ಒಂದೆರಡು ಬಾರಿ ಭೇಟಿಯಾದ ನಂತರ ಈ ಪ್ರಶ್ನೆಯನ್ನು ಕೇಳಿದರೆ ಸಂಗಾತಿಯ ಮನಸ್ಸಿನಲ್ಲಿ ಅಸಮಾಧಾನ ಹುಟ್ಟಿಸಬಹುದು. ಅಥವಾ ನೀವು ಈ ಸಂಬಂಧದಲ್ಲಿ ಬೇರೆಯದೇ ರೀತಿ ಮುಂದುವರಿಯಲು ಬಯಸುತ್ತಿದ್ದೀರಿ ಎಂದು ಅವರು ಭಾವಿಸಬಹುದು. ಅಥವಾ ನೀವು ಈ ಹಿಂದೆ ಅಂತಹ ಸಂಬಂಧದಿಂದ ದೂರಾಗಿ ಬಂದವರು ಎಂಬ ಭಾವನೆ ಮೂಡಿಸಬಹುದು. ಆ ಕಾರಣಕ್ಕೆ ಎಚ್ಚರದಿಂದಿರುವುದು ಉತ್ತಮ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.