ಪ್ರೀತಿ, ಬಾಂಧವ್ಯ ಮತ್ತು ಸಂಬಂಧವನ್ನು ಸಂಭ್ರಮಿಸಲು ನಡೆಸುವ ಹಬ್ಬ ಅಥವಾ ಆಚರಣೆ ವ್ಯಾಲೆಂಟೈನ್ಸ್ ಡೇ. 'ಪ್ರೇಮಿಗಳ ದಿನ' ಎಂದು ಕರೆದರೂ, ಜಗತ್ತಿನಾದ್ಯಂತ ಒಂದು ಇಡೀ ವಾರ ಆಚರಿಸುವ ಪ್ರೀತಿಸುವವರ ಹಬ್ಬವಾಗಿದೆ.
ಪ್ರತಿ ವರ್ಷ ಫೆಬ್ರುವರಿ 7ರಿಂದ 14ರವರೆಗೂ 'ವ್ಯಾಲೆಂಟೈನ್ಸ್ ವೀಕ್'. ಈ ವಾರದ ಒಂದೊಂದು ದಿನವೂ ವಿಶೇಷ ದಿನ. ಇಂದು ಫೆಬ್ರುವರಿ 9, ಪ್ರೀತಿಸುವ ಎಲ್ಲ ಮನಸುಗಳಿಗೂ ನೆಚ್ಚಿನ ದಿನವಾದ 'ಚಾಕೊಲೇಟ್ ಡೇ'.
ಓಲೈಸುವ, ಸಂತೈಸುವ, ಖುಷಿಯನ್ನು ಹಂಚುವ, ಪ್ರೀತಿಯನ್ನು ಹೇಳಿಕೊಳ್ಳುವ ಮಾರ್ಗವಾಗಿ ಚಾಕೊಲೇಟ್ ಬಳಕೆಯಾಗುತ್ತಿದೆ. ಇದಕ್ಕೂ ಪ್ರೇಮಿಗಳ ದಿನಕ್ಕೂ ಸಂಬಂಧ ಬೆಸೆದುಕೊಂಡಿರುವುದಕ್ಕೆ ಐತಿಹಾಸಿಕ ಹಿನ್ನೆಲೆ ಇದೆ.
ಚಾಕೊಲೇಟ್ ಡೇ ಆರಂಭ....
1840ರ ಸುಮಾರಿಗೆ ವ್ಯಾಲೆಂಟೈನ್ಸ್ ಡೇ ಜನಪ್ರಿಯತೆ ಪಡೆಯಿತು. ಉಡುಗೊರೆಗಳು, ಹೂವುಗಳ ಮೂಲಕ ಪ್ರೀತಿಯ ವಿನಿಮಯ ಮಾಡಿಕೊಳ್ಳುತ್ತಿದ್ದರು. ಆ ಸಮಯದಲ್ಲಿ ಉದ್ಯಮಿ, ಚಾಕೊಲೇಟ್ ತಯಾರಕ ರಿಚರ್ಡ್ ಕ್ಯಾಡ್ಬರಿಗೆ ಡಬ್ಬಿಗಳಲ್ಲಿ ತಿನ್ನುವಂತಹ ಚಾಕೊಲೇಟ್ ಸಿದ್ಧಪಡಿಸುವ ಯೋಚನೆ ಹೊಳೆದಿತ್ತು.
ತಡ ಮಾಡದೇ ಚಾಕೊಲೇಟ್ ಗಳನ್ನು ಒಳಗೊಂಡ ಬುಟ್ಟಿಗಳನ್ನು ತಯಾರಿಸಲು ಶುರು ಮಾಡಿದ. ಜನರು ತಮ್ಮ ಪ್ರೀತಿ ಪಾತ್ರರಿಗೆ ಅವುಗಳನ್ನೇ ಉಡುಗೊರೆಯಾಗಿ ನೀಡಲು ಆರಂಭಿಸಿದರು. ಆ ಚಾಕೊಲೇಟ್ ಬುಟ್ಟಿಗಳು ಪ್ರೀತಿಸುವವರೆ ನಡುವೆ ಸೇತುವೆಗಳಂತೆ ಬಿಂಬಿತವಾದವು. ಜನರ ನಡುವೆ ಚಾಕೊಲೇಟ್ ಬಗೆಗಿನ ಮೆಚ್ಚುಗೆ ತೀವ್ರವಾಯಿತು. ಇಡೀ ದಿನವನ್ನು ಚಾಕೊಲೇಟ್ ಗಾಗಿಯೇ ಮೀಸಲಿಡುವುದು ರೂಢಿಯಾಯಿತು.
ಈಗಂತೂ ಜಗತ್ತಿನಾದ್ಯಂತ ಆಚರಣೆ ಮತ್ತು ಸಂಸ್ಕೃತಿಗಳನ್ನು ದಾಟಿ ಚಾಕೊಲೇಟ್ ಎಲ್ಲರೊಳಗೂ ಬೆರೆತು ಹೋಗಿದೆ. ಯಾವುದೇ ಶುಭ ಸಮಯಕ್ಕೂ, ಸಮಾರಂಭಕ್ಕೂ,...ಮುಖ್ಯವಾಗಿ ಪ್ರೀತಿಸುವವರಿಂದ ಪ್ರೀತಿಸುವವರಿಗಾಗಿ ಇಂದಿಗೂ ಚಾಕೊಲೇಟ್ ಅತಿ ಮುಖ್ಯ ಉಡುಗೊರೆಯ ಸ್ಥಾನದಲ್ಲಿದೆ.
ವ್ಯಾಲೆಂಟೈನ್ಸ್ ವೀಕ್ ನ ಈ ದಿನದಂದು ಚಾಕೊಲೇಟ್ ತಯಾರಿಸುವ ತರಬೇತಿ ಪಡೆದು, ಪ್ರೇಮಿಗೆ ತಾನೇ ಚಾಕೊಲೇಟ್ ತಯಾರಿಸಿ ಕೊಡುವುದು ಸದ್ಯದ ಟ್ರೆಂಡ್.
ಕೆಲವು ಚಾಕೊಲೇಟ್ ಗಳು ದೇಹದ ಆರೋಗ್ಯಕ್ಕೂ ಉತ್ತಮ ಎನ್ನಲಾಗುತ್ತದೆ. ಹಾಗಾಗಿ, ಪ್ರೀತಿಸುವವರಿಗೆ ಚಾಕೊಲೇಟ್ ಗಳ ಮೂಲಕ ಖುಷಿ ಕೊಡುವ ಜೊತೆಗೆ ಆರೋಗ್ಯವಂತರಾಗಿ ಇಡುತ್ತಿದ್ದೇವೆ ಎಂಬ ಭಾವನೆಯು ಹಲವರದು.
'ನಮಗೆ ಮಾತನಾಡಲು ಪದಗಳೇ ಸಿಗದಂತೆ ಆದಾಗ, ಮುಂದಿಡುವ ಒಂದು ಚಾಕೊಲೇಟ್ ಎಲ್ಲವನ್ನೂ ಹೇಳಿ ಮುಗಿಸುತ್ತದೆ...' ಎಂಬುದು ಚಾಕೊಲೇಟ್ ಪ್ರೇಮಿಯೊಬ್ಬರ ಮಾತು....
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.