ಸ್ವರ್ಗವೆಂಬುದು ಇರುವುದಾದರೆ... ಹಸಿರ ಹುಲ್ಲಹಾಸಿನ ಮೇಲೆ ಕಾಲು ಚಾಚಿ ಕುಳಿತು, ಪುಸ್ತಕ ಓದುತ್ತ ಬಿಸಿಬಿಸಿ ಟೀ ಹೀರುವ ಆ ದೃಶ್ಯ ಆಹಹಾ ಜೀವವೇ.. ಜೀವನವೇ ಅದೆಷ್ಟು ಸುಂದರ ಅಂತನಿಸದೇ ಇರದು. (ಅ)ಪರಿಚಿತ ಓದುಗರು ಬಳಗದ ಚಿತ್ರಣ ಇದು...
ಭಾನುವಾರದ ಕಬ್ಬನ್ ಪಾರ್ಕೆಂದರೆ ಚಿನ್ನಾಟವಾಡುವ ನಾಯಿಮರಿಗಳು, ಕಾಲುಬಂದ ಕೂಸುಗಳ ಓಡಾಟ, ಅಲ್ಲಲ್ಲೇ ಹಾಸಿಗೆ ಹಾಸಿ, ಮರದ ನೆರಳಿಗೆ ಮಲಗಿರುವ, ಕುಳಿತಿರುವ ಪೋಷಕರು, ಮರದ ಕಾಂಡಕ್ಕೆ ಆನಿ ಕುಳಿತಿರುವ ಸಂಗಾತಿಯ ಮಡಲಿಲಲ್ಲಿ ಮಗುವಾಗಿ ಬೆಳಕಿನ ಗೆರೆಗಳನ್ನು ಹಿಡಿಯುವಲ್ಲಿ ತಲ್ಲೀನರಾದ ಪ್ರೇಮಿಗಳು.. ಗುರಿತಪ್ಪುವ ಚೆಂಡು, ಕೆಳಗೆ ಬೀಳುವ ಟೆನ್ನಿಸ್‌ಬಾಲುಗಳು ಇದೊಂದು ಬಗೆಯ ಪ್ರಪಂಚ.
ಇನ್ನೊಂದು ಕಡೆ ತಲೆ ತಗ್ಗಿಸಿ, ಪುಸ್ತಕದಲ್ಲಿ ಹುದುಗಿಹೋದ ಜೀವಗಳು. ಅಲ್ಲಲ್ಲೇ ಗುಂಪುಗುಂಪಾಗಿ, ಸ್ನೇಹಿತರ ಜೊತೆಗೂಡಿ, ಏಕಾಂಗಿಯಾಗಿ, ಕಾಲು ಚಾಚಿ, ಆರಾಮಾಸನದಲ್ಲಿ ಅನಂತ ಶಯನನಂತೆ ಮಲಗಿ, ಮರಕ್ಕೆ ಒರಗಿ, ಕಲ್ಲುಬಂಡೆಯ ಮೇಲೆ ಕಾಲು ಚಾಚಿ, ಪುಸ್ತಕದೊಳಗೆ ಕಳೆದುಹೋಗಿದ್ದವು.
ಹಕ್ಕಿಗಳ ಕೂಜನ, ತಣ್ಣನೆಯ ಕುಳಿರ್ಗಾಳಿಯ ನಡುವೆ ಆಗಾಗ ಪುಟ ತಿರುಗಿಸುವ ಸದ್ದು ಮಾತ್ರ ಕೇಳುತ್ತಿತ್ತು.
ಇದು ತಿಂಗಳಿಗೆ ಒಮ್ಮೆ ಕನ್ನಡದ ಓದುಗರು ಒಟ್ಟಾಗಿ ಓದುವ ಸುಖ ಅನುಭವಿಸುವ ಕಾರ್ಯಕ್ರಮ. ಅವ್ವ ಪ್ರಕಾಶನದವರು ಆಯೋಜಿಸುತ್ತಿರುವ (ಅ)ಪರಿಚಿತ ಓದುಗರು ಎಂಬ ಕಾರ್ಯಕ್ರಮದ ಝಲಕು ಇದು.
ಹದಿನೆಂಟು ತಿಂಗಳ ಹಿಂದೆ ಹತ್ತು ಜನರ ಸಮಾನ ಮನಸ್ಕ ತಂಡವೊಂದು ಕಬ್ಬನ್ ಪಾರ್ಕಿನಲ್ಲಿ ಇಂಗ್ಲಿಷ್ ಓದುಗರಂತೆ ಕನ್ನಡದ ಓದುಗರು ಸೇರಬಾರದೇಕೆ ಎಂದೆನಿಸಿದಾಗ ಕಾರ್ಯಪ್ರವೃತ್ತರಾದರು.
ಓದುವ ಅಭ್ಯಾಸ ಇದ್ದವರು ಎಲ್ಲಿಯಾದರೂ ಓದಬಹುದು. ಓದುವುದೇ ಏಕಾಂತ. ಅದನ್ನು ಹೀಗೆ ಸಾಮೂಹಿಕ ಚಟುವಟಿಕೆ ಮಾಡುವುದು ಹೇಗೆ? ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಬರೆದರು. ಸಮಾನಮನಸ್ಕರು ಒಟ್ಟುಗೂಡಲಾರಂಭಿಸಿದರು. ಹದಿನೆಂಟು ಜನರಿಂದ ಆರಂಭವಾದ ಈ ಚಟುವಟಿಕೆಯಲ್ಲೀಗ ನೂರಾರು ಜನ ಪಾಲ್ಗೊಳ್ಳುತ್ತಿದ್ದಾರೆ. ಬಂದು ಮೌನವಾಗಿ ಎರಡು ಗಂಟೆ ಓದಿನಲ್ಲಿ ಕಳೆದುಹೋಗುತ್ತಾರೆ.
ಕಬ್ಬನ್‌ಪಾರ್ಕಿನ ಹಸಿರಿನ ನಡುವೆ ಇವರ, ಉಸಿರು, ನಿಟ್ಟುಸಿರುಗಳೂ ಸೇರಿ ಹೋಗುತ್ತವೆ. ಕಳೆದ ಹದಿನೆಂಟೂ ತಿಂಗಳಿಂದ ಬರುತ್ತಿರುವ ಕಿಶೋರ್, ‘ಪ್ರತಿ ತಿಂಗಳು ಬಂದಾಗಲೂ ಹೊಸ ಲೇಖಕರನ್ನು ಭೇಟಿಯಾಗುತ್ತೇನೆ. ಹೊಸ ಪುಸ್ತಕದ ಪರಿಚಯ ಆಗುತ್ತದೆ’ ಎನ್ನುತ್ತಲೇ ಓದಿನಲ್ಲಿ ಕಳೆದುಹೋದರು.
ಮತ್ತೊಬ್ಬರು ಮಣಮಣವೆಂದು ಜೋರುಜೋರಾಗಿ ತಮ್ಮಷ್ಟಕ್ಕೆ ತಾವೇ ತೂಗಿಕೊಳ್ಳುತ್ತ ಓದುತ್ತಿದ್ದರು. ಡಿವಿಜಿಯವರ ಮಂಕುತಿಮ್ಮನ ಕಗ್ಗ ಪುಸ್ತಕ ಅದು. ಕಗ್ಗವನ್ನು ಜೋರಾಗಿ ಉಚ್ಚರಿಸುತ್ತ, ಬಾಯಿಪಾಠ ಮಾಡುತ್ತಿದ್ದವರು, ಅರ್ಥವನ್ನು ಮನಸಿನಲ್ಲಿಯೇ ಓದುತ್ತಿದ್ದರು.
ಹೊರಗೂ ಒಂದು ಲೋಕ.. ಅವರೊಳಗೂ ಒಂದು ಲೋಕ. ಒಳಗಿನ ಲೋಕದಲ್ಲಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ‘ಕರ್ವಾಲೊ’ ಹಾರುವ ಓತಿ ನಗೆ ಮೂಡಿಸಿತ್ತು. ಇನ್ನೊಂದು ಕಡೆ ಭೈರಪ್ಪ ಅವರ ‘ಯಾನ’ ಗಂಭೀರವದನವಾಗಿಸಿತ್ತು. ಮತ್ತೊಬ್ಬರು ನಾಯಿನೆರಳಿನ ಮೊದಲ ಕೆಲ ಪುಟಗಳಲ್ಲಿ ಮುಳಗಿ ಹೋಗಿದ್ದರೆ ‘ನಿಗೂಢ ಮನುಷ್ಯರು’, ‘ಚಿದಂಬರ ರಹಸ್ಯ’ಗಳಲ್ಲಿ ತೇಜಸ್ವಿ ಅಲ್ಲಿ ಉಸಿರಾಡುತ್ತಿದ್ದರು.
ಜೊತೆಗೆ ಸೀತಾ ಎಂಬ ಥ್ರಿಲ್ಲರ್ ಕಾದಂಬರಿ ಮೂರು ನಾಲ್ಕು ಜನರ ಕೈಗಳಲ್ಲಿತ್ತು. ಸುಧಾಮೂರ್ತಿಯವರ ಪುಸ್ತಕಗಳನ್ನೂ ಯುವತಿಯರು ಓದುತ್ತಿದ್ದರು.
ಓದುಗರಲ್ಲಿ ಯುವಜನಾಂಗವೇ ಹೆಚ್ಚಿನ ಸಂಖ್ಯೆಯಲ್ಲಿತ್ತು. ಒಂದಿಬ್ಬರು ಹಿರಿಯರು ಓದುವ ಕುರಿತಾಗಿ ಚರ್ಚಿಸುತ್ತಿದ್ದರು.
ನೂರಾರು ಜನರು, ಹಲವಾರು ಗುಂಪುಗಳು. ಭಾನುವಾರದ ಬೆಳಗ್ಗೆ ಸೋಂಬೇರಿಯಾಗಿ ಸಮಯ ಕಳೆಯಬಹುದಿತ್ತು. ಮನೆಯಲ್ಲಿಯೇ ಕುಳಿತು ಪುಸ್ತಕ ಮುಗಿಸಬಹುದಿತ್ತು. ಇಲ್ಲಿಯವರೆಗೂ ಎಳೆದುತಂದಿದ್ದು, ಸೆಳೆದು ತಂದಿದ್ದು ಅನಂತ ಕುಣಿಗಲ್ ಮತ್ತು ಅವರ ಸಂಗಾತಿಗಳು ಏರ್ಪಡಿಸುವ ಸಂವಾದಗಳು, ಕೊಡುಗೆ ರೂಪದಲ್ಲಿ ಸಿಗುವ ಹೊಸ ಪುಸ್ತಕಗಳು, ಓದಿನೊಂದಿಗೆ ಬರೆಹದಲ್ಲಿ ತೊಡಗಿಸಿಕೊಳ್ಳಬೇಕೆನ್ನುವವರಿಗೆ ಲೇಖಕರೊಂದಿಗಿನ ಸಂವಾದಗಳು. ಈಗಾಗಲೇ ಜೋಗಿ, ರವೀಂದ್ರ ಮುದ್ದಿ, ಶುಭಶ್ರೀ ಭಟ್, ಅಂಬರೀಶ್ ಎಂ ಮುಂತಾದವರೆಲ್ಲ ಅತಿಥಿಗಳಾಗಿ ಬಂದು ಹೋಗಿದ್ದಾರೆ.
(ಅ)ಪರಿಚಿತ ಓದುಗರ ತಂಡ ಮುಖ್ಯ ಕಾರ್ಯನಿರ್ವಾಹಕರಾಗಿರುವ ಅನಂತ ಕುಣಿಗಲ್ ಅವರಿಗೆ ಪುಸ್ತಕ ಸಂಸ್ಕೃತಿ ಬೆಳೆಸುವುದು ಈ ಚಟುವಟಿಕೆಯ ಉದ್ದೇಶವಾಗಿತ್ತು. ಪ್ರತಿ ಸಲವೂ ಹೊಸ ಓದುಗರು ಬರುತ್ತಾರೆ. ಪುಸ್ತಕಗಳನ್ನು ಓದುವವರಿಲ್ಲ ಎನ್ನುವುದೊಂದು ಆರೋಪ ಅಷ್ಟೆ. ಇಲ್ಲಿ ಬರುವವರೆಲ್ಲರೂ ತಮ್ಮ ಪುಸ್ತಕಗಳನ್ನೇ ತರುತ್ತಾರೆ. ಇಲ್ಲಿ ಮಾರಾಟದ ವ್ಯವಸ್ಥೆ ಮಾಡಿದಾಗ, ಪುಸ್ತಕ ಕೊಂಡುಕೊಳ್ಳುತ್ತಾರೆ. ಆ ಪುಸ್ತಕಗಳನ್ನು ತಿಂಗಳ ಓದಿಗೆ ತರುತ್ತಾರೆ. ಚರ್ಚೆ, ಮಾತು, ವಿಚಾರ ವಿನಿಮಯಗಳಲ್ಲಿ ಆಸಕ್ತಿ ತೋರುತ್ತಿದ್ದಾರೆ ಎನ್ನುತ್ತಾರೆ.
ಅವ್ವ ಪ್ರಕಾಶನದಿಂದ ಆಯೋಜಿಸಲಾಗುವ ಈ ತಿಂಗಳ ಓದು ಕಾರ್ಯಕ್ರಮ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ನಡೆಯುತ್ತಿದೆ. ರಾಜ್ಯದ 20 ಜಿಲ್ಲೆಗಳಲ್ಲಿ ಕನ್ನಡ ಪುಸ್ತಕ ಓದುಗರು ತಿಂಗಳಿಗೆ ಒಮ್ಮೆ ಒಟ್ಟಿಗೆ ಸೇರಿ ಓದುತ್ತಾರೆ. ಬೆಂಗಳೂರಿನ ಈ ಕಾರ್ಯಕ್ರಮದಿಂದ ಸ್ಫೂರ್ತಿ ಪಡೆದು, ಮೈಸೂರಿನಲ್ಲಿ ಆರಂಭಿಸಲಾಯಿತು. ಆಕ್ಟೋಬರ್ ತಿಂಗಳಿನಲ್ಲಿ ಮೈಸೂರಿನಲ್ಲಿಯೂ (ಅ)ಪರಿಚಿತ ಓದು ಕಾರ್ಯಕ್ರಮಕ್ಕೆ ಒಂದು ವರ್ಷ ತುಂಬಲಿದೆ.
ಎಲ್ಲಕಡೆಯೂ ಪುಸ್ತಕ ಪರಿಚಯ, ಕನ್ನಡ ಸಾರಸ್ವತ ಲೋಕದ ಆಸಕ್ತಿಕರ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಉತ್ತರಿಸಿದವರಿಗೆ ಪುಸ್ತಕ ಕಾಣಿಕೆಯಾಗಿ ನೀಡುತ್ತಾರೆ. ಸಿಹಿಹಂಚಿದ ನಂತರ ಸವಿ ನೆನಪುಗಳೊಂದಿಗೆ ಮತ್ತೊಂದು ತಿಂಗಳ ಓದಿಗಾಗಿ, ಮೂರು ತಿಂಗಳ ನಂತರದ ಚಾರಣಕ್ಕಾಗಿ ಮತ್ತೆ ಯೋಜನೆಗಳನ್ನು ಹೆಣೆಯುತ್ತಾರೆ.
‘ಬದುಕು ಬರಿದಾದಾಗ ಪುಸ್ತಕ ತೆರೆಯಿರಿ’ ಎನ್ನುವ ಈ ಯುವ ಗುಂಪು ಬರಿದೇ ಓದುತ್ತಲೇ ಸಂತೋಷ ಸಮಾಧಾನಗಳನ್ನು ಭರಿಸುತ್ತಿದೆ. ಇದೇ ಕಾರಣಕ್ಕೆ ತುಮಕೂರಿನಿಂದಲೂ ತಿಂಗಳ ಓದಿಗೆ ಬರುತ್ತಾರೆ.
ಒಂದೊಂದು ಮರದ ಕೆಳಗೂ ಒಂದಷ್ಟು ಕತೆಗಳು.. ಒಳ ಹೊರಗೆ ಒಟ್ಟೊಟ್ಟಿಗೆ ಮಾತಿನ ಯಾನ ನಡೆಸಿದ್ದವು.
ಕೊನೆಗೆ ಒಂದೆಡೆ ಅರೆ ವೃತ್ತಾಕಾರದಲ್ಲಿ ಕುಳಿತು ಪುಸ್ತಕ ಪರಿಚಯ ಮತ್ತು ಸಂವಾದ, ರಸಪ್ರಶ್ನೆಯಂಥ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾರೆ. ಜೋರಾಗಿ ಚಪ್ಪಾಳೆ ತಟ್ಟುವುದಿಲ್ಲ. ಬದಲಿಗೆ ತಮ್ಮ ಹೆಬ್ಬೆರಳಿಗೆ ಉಳಿದ ಬೆರಳುಗಳೆಲ್ಲವೂ ಮುಟ್ಟಿ ಮುತ್ತಿಡುವಂತಹ ಮೌನ ಚಪ್ಪಾಳೆ ತಟ್ಟಿ, ತಮ್ಮ ಮೆಚ್ಚುಗೆ ಸೂಚಿಸುತ್ತಾರೆ. ನೆರೆದವರ ಕಂಗಳಲ್ಲಿ ಹೊಸ ಹೊಳಪಿನೊಂದಿಗೆ ಮತ್ತೊಂದು ಓದಿನತ್ತ ಸಾಗುತ್ತಾರೆ. ಸದ್ದಿಲ್ಲದೆಯೇ ಕನ್ನಡ ಪುಸ್ತಕ ಸಂಸ್ಕೃತಿಯೊಂದು ಭರಾಟೆಯಲ್ಲಿ ಸಾಗಿದೆ. ಸಾಧ್ಯವಾದವರೆಲ್ಲ ಹೋಗಿ ಓದಬಹುದು, ಹೊಸ ಓದುಗರ ಪರಿಚಯ ಮಾಡಿಕೊಳ್ಳಬಹುದು.
ಮುಂದಿನ ತಿಂಗಳು ಮೈಸೂರಿನಲ್ಲಿ ವಾರ್ಷಿಕೋತ್ಸವ ನಡೆಯುತ್ತಿದೆ. ಈ ಗುಂಪಿನ ಚಟುವಟಿಕೆಗಳ ಕುರಿತು ಗಮನಿಸಬೇಕಾದಲ್ಲಿ ಇನ್‌ಸ್ಟಾಗ್ರಾಂನಲ್ಲಿ https://www.instagram.com/dayavittu.gamanisi/ ಈ ಪುಟವನ್ನು ಫಾಲೊ ಮಾಡಿ. ನಿಮಗೆ ಸಾಧ್ಯವಿದ್ದಾಗಲೆಲ್ಲ ಈ ಓದುಗ ಲೋಕದವರಲ್ಲಿ ಒಂದಾಗಿ.
(ಅ)ಪರಿಚಿತ ಓದುಗರು ಪರಿಕಲ್ಪನೆಯೊಂದು ಪುಸ್ತಕ ಪ್ರಿಯರ, ಪರಿಸರ ಪ್ರಿಯರ ಗುಂಪಾಗಿ ಬದಲಾಯಿತು. ಹೀಗೆ ಬದಲಾಗುವಲ್ಲಿ ಅನಂತ್ ಅವರ ಜೊತೆಗೆ ನಿಂತವರು, ಬೆನ್ನಿಗೆ ನಿಂತವರು, ಒಟ್ಟಿಗೆ ನಿಂತವರು ಹಲವರು.
ಸಂಜಯ್ ಶೆಟ್ಟಿ, ಅಲೆಮಾರಿ ಭಾಸ್ಕರ್, ಕವನ ವಿ, ಚೇತನ್ ಗವಿಗೌಡ, ರಾಜು ಸಿ, ಕೃಪಾ ಬಿ.ಎಂ, ನವೀನ್ ಕುಮಾರ್, ಶಿವಾಗ್, ಸ್ಪೂರ್ತಿ ಮುರಳೀಧರ್, ನಂದಕುಮಾರ ಜಿ.ಕೆ ಇವರೆಲ್ಲ ಜೊತೆಯಾದರು.
18 ತಿಂಗಳಲ್ಲಿ ವರ್ಷಕ್ಕೆ ನಾಲ್ಕು ಚಾರಣ, ಒಂದು ವಾರ್ಷಿಕ ಪುಸ್ತಕೋತ್ಸವ ಮತ್ತು ಓದುಗರ ಮಿಲನ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದ್ದಾರೆ. ಪ್ರಕೃತಿಯ ಮಡಿಲಲ್ಲಿ ಹೋಗಿ ಓದುವ, ಓದಿನ ಸುಖದ ಕುರಿತೇ ಸಲ್ಲಾಪ, ಸಂವಾದ ಹಮ್ಮಿಕೊಳ್ಳುತ್ತಿದ್ದಾರೆ.
ಮುಂದಿನ ತಿಂಗಳು ಯಾವತ್ತು ನಡೆಯಲಿದೆ? ಯಾರು ಬರಲಿದ್ದಾರೆ ಎಂಬುದು ತಿಳಿಯಬೇಕಿದೆಯೇ? ಇನ್‌ಸ್ಟಾಗ್ರಾಂನಲ್ಲಿ https://www.instagram.com/dayavittu.gamanisi/ ಈ ಪುಟವನ್ನು ಫಾಲೊ ಮಾಡಿ.
(ಅ)ಪರಿಚಿತ ಓದುಗರು ಪರಿಕಲ್ಪನೆಯೊಂದು ಪುಸ್ತಕ ಪ್ರಿಯರ ಪರಿಸರ ಪ್ರಿಯರ ಗುಂಪಾಗಿ ಬದಲಾಯಿತು. ಹೀಗೆ ಬದಲಾಗುವಲ್ಲಿ ಅನಂತ್ ಅವರ ಜೊತೆಗೆ ನಿಂತವರು ಬೆನ್ನಿಗೆ ನಿಂತವರು ಒಟ್ಟಿಗೆ ನಿಂತವರು ಹಲವರು.
ಸಂಜಯ್ ಶೆಟ್ಟಿ ಅಲೆಮಾರಿ ಭಾಸ್ಕರ್ ಕವನ ವಿ ಚೇತನ್ ಗವಿಗೌಡ ರಾಜು ಸಿ ಕೃಪಾ ಬಿ.ಎಂ ನವೀನ್ ಕುಮಾರ್ ಶಿವಾಗ್ ಸ್ಪೂರ್ತಿ ಮುರಳೀಧರ್ ನಂದಕುಮಾರ ಜಿ.ಕೆ ಇವರೆಲ್ಲ ಜೊತೆಯಾದರು.
18 ತಿಂಗಳಲ್ಲಿ ವರ್ಷಕ್ಕೆ ನಾಲ್ಕು ಚಾರಣ ಒಂದು ವಾರ್ಷಿಕ ಪುಸ್ತಕೋತ್ಸವ ಮತ್ತು ಓದುಗರ ಮಿಲನ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದ್ದಾರೆ. ಪ್ರಕೃತಿಯ ಮಡಿಲಲ್ಲಿ ಹೋಗಿ ಓದುವ ಓದಿನ ಸುಖದ ಕುರಿತೇ ಸಲ್ಲಾಪ ಸಂವಾದ ಹಮ್ಮಿಕೊಳ್ಳುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.