ADVERTISEMENT

ಸಂತಸದ ಬದುಕಿಗಿದೆ ಹಲವು ಸೂತ್ರ

ಮನಸ್ವಿ
Published 29 ಏಪ್ರಿಲ್ 2022, 19:30 IST
Last Updated 29 ಏಪ್ರಿಲ್ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೆಲವರು ಜೀವನದಲ್ಲಿ ಸದಾ ಕೊರಗುತ್ತಿರುತ್ತಾರೆ. ಎಲ್ಲವೂ ಇದ್ದರೂ ಏನೂ ಇಲ್ಲ ಎನ್ನುತ್ತಾ ಗೊಣಗುತ್ತಲೇ ಬದುಕುತ್ತಾರೆ. ಅಂತಹವರು ಜೀವನದಲ್ಲಿ ಖುಷಿ ಕಂಡುಕೊಳ್ಳುವುದು ನಿಜಕ್ಕೂ ಕಷ್ಟ! ಆದರೆ ಮನುಷ್ಯ ಆಶಾವಾದಿ ಆದಷ್ಟು ಜೀವನ ಚೆನ್ನಾಗಿರುತ್ತದೆ ಎನ್ನುವುದು ಅನುಭವಸ್ಥರ ಮಾತು. ಸದಾ ಖುಷಿ ಆಗಿರಬೇಕು ಎಂದರೆ ಇರುವುದರಲ್ಲೇ ನೆಮ್ಮದಿ, ಖುಷಿ ಕಂಡುಕೊಳ್ಳಬೇಕು. ಖುಷಿ ಎನ್ನುವುದು ಬೇರೆಲ್ಲೋ ಇಲ್ಲ. ನಮ್ಮೊಳಗಿನ ಭಾವವೇ ಖುಷಿ ಎಂದುಕೊಂಡರೆ ಜೀವನ ನಿಜಕ್ಕೂ ಸ್ವರ್ಗವೇ ಸೈ. ಹಾಗಾದರೆ ಖುಷಿ ಕಂಡುಕೊಳ್ಳುವ ಬಗೆ ಹೇಗೆ? ಇಲ್ಲಿದೆ ಕೆಲವು ದಾರಿ...

ಪ್ರಕ್ರಿಯೆಯ ಮೇಲಿರಲಿ ಗಮನ

ಯಾವುದೇ ಕೆಲಸದ ಆರಂಭಕ್ಕೂ ಮೊದಲು ಫಲಿತಾಂಶ ನಿರೀಕ್ಷೆ ಮಾಡಬೇಡಿ. ಮೊದಲು ಕೆಲಸ ಆರಂಭಿಸಬೇಕು. ಕೆಲಸದಲ್ಲಿ ಪ್ರಗತಿ ಕಂಡುಕೊಳ್ಳಬೇಕು. ಈ ಪ್ರಕ್ರಿಯೆಯಲ್ಲಿ ನಮ್ಮನ್ನು ನಾವು ಆತ್ಮವಿಮರ್ಶೆ ಮಾಡಿಕೊಳ್ಳುತ್ತಾ ಮುಂದೆ ಸಾಗಬೇಕು. ನಮ್ಮ ಸೋಲು–ಗೆಲುವು ಎರಡನ್ನೂ ನಾವೇ ವಿಮರ್ಶೆ ಮಾಡಿಕೊಂಡಾಗ ನಾವೆಲ್ಲಿ ಸೋಲುತ್ತಿದ್ದೇವೆ ಎಂಬುದು ಅರಿವಾಗುತ್ತದೆ. ಆಗ ಸೋಲಿನ ಹಾದಿಯನ್ನು ಬಿಟ್ಟು ಗೆಲುವಿನ ಹಾದಿಯಲ್ಲಿ ಸಾಗುವುದು ಸುಲಭವಾಗುತ್ತದೆ. ಫಲಿತಾಂಶದ ಬಗ್ಗೆ ಒತ್ತಡ ತಂದುಕೊಳ್ಳುವುದಕ್ಕಿಂತ ಆ ಬಗ್ಗೆ ಚಿಂತಿಸದೇ ಕೆಲಸ ಮುಂದುವರಿಸಬೇಕು. ಆಗ ಫಲಿತಾಂಶ ಖಂಡಿತ ಸಕಾರಾತ್ಮಕವಾಗಿರುತ್ತದೆ. ಇದರಿಂದ ಮನಸ್ಸಿಗೂ ಖುಷಿ ಸಿಗುತ್ತದೆ.

ADVERTISEMENT

ವಿನಯದಿಂದಿರಿ

ಮಾನವೀಯತೆ, ವಿಧೇಯತೆ ಹಾಗೂ ವಿನಯಕ್ಕಿಂತ ದೊಡ್ಡ ಗುಣಗಳಿಲ್ಲ. ಮಾನವೀಯ ಗುಣವು ಮನುಷ್ಯನ ಸಂತೋಷದ ಕೀಲಿ ಕೈಗಳಲ್ಲಿ ಒಂದು. ಸಂಕುಚಿತ ಮನೋಭಾವ ಇರುವವರಿಗೆ ಅವಕಾಶಗಳು ಸಿಗುವುದು ಕಡಿಮೆ. ಅಲ್ಲದೇ ಸ್ವಯಂ ಅಭಿವೃದ್ಧಿ ಕೂಡ ಅಷ್ಟಕಷ್ಟೇ. ಆ ಕಾರಣಕ್ಕೆ ಕೆಲಸ, ಕಚೇರಿ, ಮನೆ ಎಲ್ಲೇ ಇರಿ ವಿನಯದಿಂದಿರುವುದು ಬಹಳ ಮುಖ್ಯ. ವಿನಯ ಎಂಬುದು ನಮ್ಮ ಬದುಕಿಗೆ ಹೊಸ ದಾರಿ, ಆ ದಾರಿಯಲ್ಲಿ ಹೊಸ ಜನರನ್ನು ಪರಿಚಯಿಸುತ್ತದೆ. ನಮ್ಮ ಚಿಂತನೆ ಹಾಗೂ ಚಟುವಟಿಕೆಗಳೂ ಬದಲಾಗುತ್ತವೆ. ಆತ್ಮವಿಶ್ವಾಸದಿಂದ ನಮ್ಮ ಹಾದಿಯಲ್ಲಿ ಮುನ್ನುಗಲು ಸಾಧ್ಯವಾಗುತ್ತದೆ. ಇದರಿಂದ ಸಿಗುವ ಸಂತಸ ಇನ್ನೊಂದಿಲ್ಲ.

ಸಣ್ಣ ಹೆಜ್ಜೆಯಿಂದಲೇ ಆರಂಭಿಸಿ

ಯಾವುದೇ ಕೆಲಸವನ್ನಾಗಲಿ ಸಣ್ಣದಾಗಿ ಆರಂಭಿಸಿ. ಇತರರೊಂದಿಗೆ ನಿಮ್ಮನ್ನು ಹೋಲಿಸಿ ಕೊಂಡು ಅವರಂತೆ ಆಗಬೇಕು ಎನ್ನುವ ಹಠ ಬೇಡ. ಒಬ್ಬೊಬ್ಬರ ಸಾಮರ್ಥ್ಯ ಒಂದೊಂದು ರೀತಿ ಇರುತ್ತದೆ. ನಿಮ್ಮ ಸಾಮರ್ಥ್ಯಕ್ಕೆ ತಕ್ಕ ಹಾಗೇ ನೀವು ಮುಂದಡಿ ಇಡಿ. ಯಾರದ್ದೋ ಗೆಲುವು ನೋಡಿ ಬೇಸರ ಪಟ್ಟುಕೊಂಡು ಮನಸ್ಸಿಗೆ ನೋವು ಕೊಡುವುದಕ್ಕಿಂತ ನಾನು ಹೇಗೆ ಗೆಲ್ಲಲಿ, ನಮ್ಮ ಗೆಲುವಿನ ಸಾಮರ್ಥ್ಯದ ಅವಧಿ ಏನು? ನನ್ನ ಗೆಲುವು ಯಾವುದರ ಮೇಲೆ ಅವಲಂಬಿತವಾಗಿದೆ ಎಂಬುದನ್ನೆಲ್ಲಾ ತಿಳಿದುಕೊಂಡು ಗೆಲುವಿನ ಹಾದಿ ಹಿಡಿಯಿರಿ. ಸಣ್ಣ ಹೆಜ್ಜೆಯಿಂದ ಆರಂಭವಾದ ನಿಮ್ಮ ಪಯಣ ಗೆಲುವಿನ ತುತ್ತ ತುದಿ ಮುಟ್ಟಿದಾಗ ಆಗುವ ಸಂತಸಕ್ಕೆ ಎಣೆಯಿಲ್ಲ.

ಕಷ್ಟಗಳನ್ನು ಸ್ವೀಕರಿಸಿ

ಕಷ್ಟ ಬಂದಾಗ ಜೀವನವೇ ಮುಗಿಯಿತು ಎಂದುಕೊಂಡು ನಿರಾಸೆಗೆ ಒಳಗಾಗುವುದು, ಆಕ್ರೋಶ, ಅಸಹನೆ ತೋರುತ್ತಾ ಹೆಣಗಾಡುವುದಕ್ಕಿಂತ ಕಷ್ಟವನ್ನು ಸಂತೋಷದಿಂದ ಸ್ವೀಕರಿಸಿ ಕಷ್ಟಗಳ ಪರಿಹಾರಕ್ಕೆ ದಾರಿ ಏನಿದೆ ಕಂಡುಕೊಳ್ಳಿ. ಕಠಿಣವಾದ ಹಾದಿಯಲ್ಲಿ ಸಾಗುತ್ತಿದ್ದಾಗಲೂ ನಡುವೆ ಬರುವ ಸುಲಭವಾದ ದಾರಿಯನ್ನು ಕಂಡುಕೊಳ್ಳಲು ಪ್ರಯತ್ನಿಸಿ. ಏನೇ ಆದರೂ ಗುರಿ ತಲುಪುತ್ತೇವೆ ಎಂಬ ಭಾವವಿದ್ದಾಗ ಸೋಲು ಆವರಿಸುವುದು ಕಡಿಮೆ. ಅಲ್ಲದೇ ಸೋಲಿನ ಕಹಿ ನಮ್ಮನ್ನು ಭಾದಿಸುವುದು ಕಡಿಮೆ.

ನಿಮ್ಮ ಸಂತಸವನ್ನು ಹಂಚಿಕೊಳ್ಳಿ

ಆಪ್ತರೊಂದಿಗೆ ನಿಮ್ಮ ಮನದ ಭಾವನೆಗಳನ್ನು ಹಂಚಿಕೊಳ್ಳಿ. ಹಾಗೆ ಹಂಚಿ ಕೊಳ್ಳುವಾಗ ಕೇವಲ ದುಃಖವನ್ನಷ್ಟೇ ಅಲ್ಲದೇ, ಸಂತಸವನ್ನೂ ಹಂಚಿಕೊಳ್ಳಿ.

ಪ್ರತಿದಿನ ನಿಮ್ಮ ದುಃಖದ ಕಥೆ ಕೇಳುತ್ತಿದ್ದವರು ಬೇಸರಪಟ್ಟುಕೊಂಡು ಮುಂದೆ ನಿಮ್ಮ ಮಾತನ್ನು ಆಲಿಸದಿರಬಹುದು. ಆ ಕಾರಣಕ್ಕೆ ಸಂತಸವನ್ನು ಹಂಚಿಕೊಳ್ಳಿ. ಸಂತಸ ಹಂಚಿಕೊಂಡಾಗ ನಿಮ್ಮ ಸಂತಸಕ್ಕೆ ದನಿಯಾಗುವವರು ಹಲವರಿರುತ್ತಾರೆ. ಇದರಿಂದ ನಿಮಗೂ ಖುಷಿಯಗುತ್ತದೆ. ಒಟ್ಟಾರೆ ಸಂತಸ– ಸಂಭ್ರಮಗಳನ್ನು ಹಂಚಿಕೊಂಡು ಬದುಕಲು ಪ್ರಯತ್ನಿಸಿ. ಬದುಕು ಸುಂದರವಾಗಿರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.