ADVERTISEMENT

ರೇಷ್ಮೆ ವಸ್ತ್ರ ಕಾಳಜಿಯೂ ನವಿರಾಗಿರಲಿ

ಜಾನಕಿ ಎಸ್.
Published 11 ಮಾರ್ಚ್ 2022, 19:30 IST
Last Updated 11 ಮಾರ್ಚ್ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಭಾವ ತುಂಬಿದ ನೆನಪುಗಳನ್ನು ಮೆಲುಕು ಹಾಕುವಂತೆ ಮಾಡುವ ರೇಷ್ಮೆ ದಿರಿಸುಗಳನ್ನು ಜತನದಿಂದ ಕಾಪಾಡಿಕೊಳ್ಳಬೇಕು. ಅದು ಹೇಗೆ? ಇಲ್ಲಿದೆ ಟಿಪ್ಸ್‌...

***

ಹೆಣ್ಣುಮಕ್ಕಳಿಗೆ ಮೊದಲ ಬಾರಿ ಸೀರೆ ಉಡುವುದೆಂದರೆ ಅದೇನೋ ಸಂಭ್ರಮ. ಅದರಲ್ಲೂ ತನ್ನ ತಾಯಿಯ ಮದುವೆಯ ರೇಷ್ಮೆ ಸೀರೆ ಉಡುವುದೆಂದರೆ ವರ್ಣಿಸಲಾಗದ ಆನಂದ. ಅಷ್ಟು ವರ್ಷಗಳಿಂದ ಕಾಪಾಡಿ ಕೊಂಡು ಬಂದಿರುವ ತನ್ನ ರೇಷ್ಮೆ ಸೀರೆಯನ್ನು ಮಗಳು ಉಡುತ್ತಾಳೆ ಎಂದರೆ ತಾಯಿಗೂ ಅಷ್ಟೇ ಖುಷಿ. ಹೀಗೆ ರೇಷ್ಮೆ ಸೀರೆಗೂ ಹೆಣ್ಣುಮಕ್ಕಳಿಗೂ ಬಿಡಿಸಲಾರದ ನಂಟು.

ADVERTISEMENT

ಇಂಥ ಅನುಬಂಧವಿರುವ ‘ರೇಷ್ಮೆ’ ಜೊತೆಗಿನ ಒಡನಾಟಗಳನ್ನು ಮೆಲುಕು ಹಾಕುತ್ತಿದ್ದರೆ, ಎಷ್ಟೊಂದು ನವಿರಾದ ನೆನಪುಗಳು ಗರಿಬಿಚ್ಚಿಕೊಳ್ಳುತ್ತವೆ. ನನಗೆ ನೆನಪಿದ್ದ ಹಾಗೆ, ಕಾಲೇಜಿನ ಗೆಳತಿಯ ಅಕ್ಕನ ಮದುವೆಯಲ್ಲಿ ನಾನು ಮೊದಲ ಬಾರಿಗೆ ರೇಷ್ಮೆ ಸೀರೆ ಉಟ್ಟಿದ್ದೆ. ನಂತರ, ನನ್ನ ಮದುವೆಯ ಧಾರೆಯಲ್ಲಿ. ಮೊದಲ ಕಂದ ಹೊಟ್ಟೆಯಲ್ಲಿದ್ದಾಗ ಉಟ್ಟ ಹಸಿರು ಬಣ್ಣದ ರೇಷ್ಮೆ ಸೀರೆ, ಸಣ್ಣವಳಿದ್ದಾಗ ಅಮ್ಮ ಹೊಲಿಸಿದ ರೇಷ್ಮೆ ಲಂಗ.. ಹೀಗೆ ರೇಷ್ಮೆ ದಿರಿಸುಗಳನ್ನು ನೆನಪಿಸಿಕೊಂಡಾಗ ಮನಸ್ಸಿನಲ್ಲಿ ನೆನಪುಗಳು ಮೆರವಣಿಗೆ ಹೊರಡುತ್ತವೆ.

ಭಾವ ತುಂಬಿದ ನೆನಪುಗಳನ್ನು ಮೆಲುಕು ಹಾಕುವಂತೆ ಮಾಡುವ ರೇಷ್ಮೆ ದಿರಿಸುಗಳನ್ನು ಜತನದಿಂದ ಕಾಪಾಡಿಕೊಳ್ಳಬೇಕು. ಅದು ಹೇಗೆ? ಇಲ್ಲಿದೆ ಟಿಪ್ಸ್‌...

ಬಿಸಿಲು ಥೆರಪಿ

ರೇಷ್ಮೆ ಸೀರೆ, ಶಾಲು, ಜರಿ ಲಂಗ, ದೋತಿ.. ಇಂಥ ರೇಷ್ಮೆ ಬಟ್ಟೆಗಳನ್ನು ವರ್ಷಕ್ಕೊಮ್ಮೆ ಎಳೆ ಬಿಸಿಲಿಗೆ (ಮುಂಜಾನೆಯ ಬಿಸಿಲು) ಹರವಿಡಿ. ಚಾಪೆ ಅಥವಾ ಚಾದರದ ಮೇಲೆ 10 ನಿಮಿಷ ಹರಡಿ. ಈ ಪ್ರಕ್ರಿಯೆಗೆ ಶ್ರಾವಣದ ಬಿಸಿಲು ಒಳ್ಳೆಯದು(ಬೇರೆ ಕಾಲದಲ್ಲಿಯೂ ಹಾಕಬಹುದು). ಈ ಅವಧಿಯಲ್ಲಿ ಎರಡು ಬದಿಗೂ ಬಿಸಿಲು ಬೀಳುವಂತೆ ತಿರುವಿ ಹಾಕಿ. ಇದರಿಂದ ವಸ್ತ್ರದ ಮೇಲೆ ಸಣ್ಣ ಕ್ರಿಮಿಗಳಿದ್ದರೂ ನಾಶವಾಗುತ್ತವೆ. ರೇಷ್ಮೆ ವಸ್ತ್ರದ ಬಿಸಿಲು ಥೆರಪಿ ಅಥವಾ ಚಿಕಿತ್ಸೆ ನಮ್ಮ ಅಜ್ಜಿ ಕಾಲದಿಂದಲೂ ಚಾಲ್ತಿಯಲ್ಲಿದೆ.

ಮನೆಯಲ್ಲಿ ಬಿಸಿಲು ಬೀಳುವ ಅಂಗಳ ಅಥವಾ ವೈರ್‌ಮೆಷ್‌ ಗ್ಯಾಲರಿಯಿದ್ದರೆ (ತಂತಿಯಿಂದ ಆವೃತಗೊಂಡ ಜಾಗ) ಅಲ್ಲಿ ಹಗ್ಗ ಕಟ್ಟಿ. ಅದರ ಮೇಲೆ ರೇಷ್ಮೆ ಬಟ್ಟೆಗಳನ್ನು ಹಾಕಿ. ನೆನಪಿರಲಿ, ಈ ಬಟ್ಟೆಗಳಿಗೆ ಬಿಸಿಲು ತಾಗಬೇಕು. ಹೀಗೆ ಹತ್ತು ನಿಮಿಷ ಹಗ್ಗದ ಮೇಲೆ ಇಡಿ.

ಬೆವರಿನ ಪಸೆ ಆರಲಿ

ಧರಿಸಿದ ರೇಷ್ಮೆ ವಸ್ತ್ರವನ್ನು ತೆಗೆದ ಕೂಡಲೇ ಮಡಿಸಿಡಬೇಡಿ. ಏಕೆಂದರೆ, ಬಟ್ಟೆಯ ಮೇಲೆ ಬೆವರಿನ ಹಸಿ ಇರುತ್ತದೆ. ಬಟ್ಟೆ ಲಡ್ಡ (ನವೆಯುವುದು, ಹಿಂಜುವುದು) ಆಗುವ ಸಾಧ್ಯತೆ ಹೆಚ್ಚು. ಹಾಗಾಗಿ, ಮೇಲೆ ಹೇಳಿದಂತೆ ಹಗ್ಗದ ಮೇಲೆ ಹರಡಿ ಒಣಗಿಸಬೇಕು.‌

ರೇಷ್ಮೆ ಬಟ್ಟೆಗಳ ಒಳ ಪದರಗಳನ್ನು ಇಸ್ತ್ರಿ ಮಾಡಿ, ಗಾಳಿಯಲ್ಲಿ ಒಮ್ಮೆ ಕೊಡವಿ ಮಡಿಸಿಟ್ಟರೆ ವಸ್ತ್ರಗಳು ಹಾಳಾಗದೇ, ಹೆಚ್ಚು ಬಾಳಿಕೆ ಬರುತ್ತವೆ.

ಹತ್ತಿ ಬಟ್ಟೆಯಲ್ಲಿ ಸುತ್ತಿಡಿ

ಯಾವುದೇ ರೇಷ್ಮೆ ಬಟ್ಟೆಯನ್ನು ಹತ್ತಿ ಬಟ್ಟೆಯಿಂದ ತಯಾರಿಸಿದ ಬ್ಯಾಗ್‌ಗಳಲ್ಲಿ ಇಡಬೇಕು ಅಥವಾ ಹತ್ತಿ ಬಟ್ಟೆಯನ್ನು ಸುತ್ತಿ ಇಡುವುದು ಸೂಕ್ತ.

ರೇಷ್ಮೆ ವಸ್ತ್ರಗಳನ್ನಿಟ್ಟ ಚೀಲಗಳ ಮೂಲೆಗಳಲ್ಲಿ ಲಾವಂಚದ ಬೇರುಗಳನ್ನು ಇರಿಸುವುದರಿಂದ ಬಟ್ಟೆಗೆ ಪರಿಮಳ ಬರುತ್ತದೆ. ಈ ಸುವಾಸನೆ, ಕ್ರಿಮಿನಾಶಕವಾಗಿಯೂ ಕೆಲಸ ಮಾಡುತ್ತದೆ. ಇದು ನಮ್ಮ ಕುಟುಂಬದಲ್ಲಿ ತಲೆತಲಾಂತರದಿಂದ ರೂಢಿಗತವಾಗಿ ನಡೆದುಕೊಂಡು ಬಂದಿದೆ.‌ ‌

ಯಾವ ಕಾರಣಕ್ಕೂ ಪ್ಲಾಸ್ಟಿಕ್ ಕವರ್‌ಗಳಲ್ಲಿ ರೇಷ್ಮೆ ಬಟ್ಟೆಯನ್ನು ಇಡಬಾರದು.

ರೇಷ್ಮೆ ಬಟ್ಟೆ ಮೇಲೆ ಎಣ್ಣೆ ಕಲೆಗಳಿದ್ದರೆ, ಆ ಜಾಗಕ್ಕೆ ಫೇಸ್‌ಪೌಡರ್ ಸಿಂಪಡಿಸಿ. ನಂತರ ಒಣಬಟ್ಟೆಯಿಂದ ಮೃದುವಾಗಿ ಉಜ್ಜಿ. ಆಮೇಲೆ ತೇವವಿರುವ ಬಿಳಿ ಬಟ್ಟೆಯಿಂದ ಆ ಜಾಗವನ್ನು ಸ್ವಚ್ಛಗೊಳಿಸಿ, ಇಸ್ತ್ರಿ ಮಾಡಿದರೆ, ಎಣ್ಣೆ ಕಲೆ ಹೋಗುತ್ತದೆ.

ನೆನಪಿಡಿ..

ಹೊಸ ರೇಷ್ಮೆ ಬಟ್ಟೆಗಳನ್ನು ತೆಳುವಾಗಿ ಇಸ್ತ್ರಿ ಮಾಡಿದರೆ ಮೃದುವಾಗುತ್ತದೆ. ನೆರಿಗೆ ಮಾಡಲು ಸುಲಭವಾಗುತ್ತದೆ.

ರೇಷ್ಮೆ ರವಿಕೆ, ಡ್ರೆಸ್ ಬಳಸುವಾಗ ಅವುಗಳ ಕಂಕುಳ ಭಾಗದಲ್ಲಿ ಸ್ಟಿಕ್ ಪ್ಯಾಡ್ ಹಚ್ಚಿ ಧರಿಸುವುದರಿಂದ ಬೆವರು ತಾಗಿ ಕಲೆ ಬೀಳುವುದು ತಪ್ಪುತ್ತದೆ.

ಯಾವುದೇ ರೇಷ್ಮೆ ವಸ್ತ್ರಗಳನ್ನು ಪದೇ ಪದೇ ಡ್ರೈ ವಾಷ್ ಅಥವಾ ಡ್ರೈ ಕ್ಲೀನ್‌ ಮಾಡಿಸಬಾರದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.