ಯಾವುದೇ ಮಾಹಿತಿ ಅಥವಾ ವಿಷಯಗಳ ಬಗ್ಗೆ ತಿಳಿಯಲು ನಾವು ಗೂಗಲ್ ಮೊರೆ ಹೋಗುತ್ತೇವೆ. ಗೂಗಲ್ ಸರ್ಚ್ ಎಂಜಿನ್ ನಮ್ಮ ದೈನಂದಿನ ಜೀವನದಲ್ಲಿ ಎಷ್ಟು ಹಾಸುಹೊಕ್ಕಾಗಿದೆ ಎಂದರೆ ಗೂಗಲಿಸಿ ನೋಡದೇ ಇದ್ದರೆ ಸಮಾಧಾನವೇ ಇಲ್ಲ ಎನ್ನುವಷ್ಟು. ಸುದ್ದಿಗಾಗಿ, ಅಡುಗೆ ಅಥವಾ ಅನಾರೋಗ್ಯ.. ಹೀಗೆ ಅನೇಕ ಮಾಹಿತಿಗಳಿಗಾಗಿ ಪಡೆಯಲು ಸರ್ಚ್ ಎಂಜಿನ್‌ಗಳನ್ನು ಬಳಸುವ ನಾವು ನೌಕರಿ ಹುಡುಕಲು ಗೂಗಲ್ ಸರ್ಚ್ ಎಂಜಿನ್ ಅನ್ನು ಸಮರ್ಪಕವಾಗಿ ಹೇಗೆ ಬಳಸಬಹುದು ಎಂಬುದನ್ನು ನೋಡೋಣ.
ಏನು ಮಾಡಬೇಕು?
ಗೂಗಲ್ ಸರ್ಚ್ ಬಾರ್‌ನಲ್ಲಿ ನೀವು ಹುಡುಕುತ್ತಿರುವ ನೌಕರಿ ಟೈಪಿಸಿ. ಉದಾಹರಣೆಗೆ ಡಿಸೈನರ್ ಕೆಲಸ ನೀವು ಹುಡುಕುತ್ತಿರುವಿರಾದರೆ Designer job ಎಂದು ಟೈಪಿಸಿ ಎಂಟರ್ ಕೀ ಒತ್ತಿ.
ತಕ್ಷಣವೇ ನೌಕರಿ ಮಾಹಿತಿಯ ಪುಟ ತೆರೆದುಕೊಳ್ಳುತ್ತದೆ. ಲಿಂಕ್ಡ್ ಇನ್(Linked In) ಮಾನ್ಸ್ಟರ್ ಡಾಟ್ ಕಾಮ್ (Monster.com) ಮೊದಲಾದ ನೌಕರಿ ವೆಬ್‌ಸೈಟ್‌ಗಳಿಂದ ಪಡೆದ ಮಾಹಿತಿಯೇ ಈ ಪುಟದಲ್ಲಿ ಕಾಣಿಸಿಕೊಳ್ಳುತ್ತದೆ.
ನೀಲಿ ಪಟ್ಟಿಯಲ್ಲಿ Jobs ಎಂದು ಕಾಣಿಸಿಕೊಳ್ಳುತ್ತದೆ. ಅದರ ಕೆಳಗೆ ನೀವಿರುವ ಜಾಗವೂ ಡಿಸ್‌ಪ್ಲೇ ಆಗುತ್ತದೆ. ಉದಾಹರಣೆಗೆ ನೀವು ಬೆಂಗಳೂರಿನವರಾಗಿದ್ದು ಕೆಲಸ ಹುಡುಕುತ್ತಿದ್ದರೆ ಬೆಂಗಳೂರು ಸುತ್ತಮುತ್ತವಿರುವ ಉದ್ಯೋಗಾವಕಾಶಗಳು ಕಾಣಿಸುತ್ತವೆ. ಅದರ ಕೆಳಗೆ ಯಾವ ವಿಭಾಗದಲ್ಲಿ ನೀವು ಕೆಲಸ ಹುಡುಕುತ್ತಿದ್ದೀರಿ, ಉದ್ಯೋಗವಕಾಶ ಜಾಹೀರಾತು ಎಷ್ಟು ದಿನ ಹಿಂದಿನದ್ದು ಎಲ್ಲವನ್ನೂ ಆಯ್ಕೆ ಮಾಡಬಹುದಾಗಿದೆ.
ನೀವು ಯಾವುದಾದರೊಂದು ವಿಭಾಗ ಕ್ಲಿಕ್ ಮಾಡಿದ ಕೂಡಲೇ ಇನ್ನೊಂದು ನೀಲಿ ಪಟ್ಟಿ ಕಾಣಿಸುತ್ತದೆ. ಅದರಲ್ಲಿ ಇನ್ನಷ್ಟು ವಿಭಾಗಗಳು ಉದಾಹರಣೆಗೆ ಡಿಸೈನರ್ ಕೆಲಸಕ್ಕಾಗಿ ನಾವು ಹುಡುಕುತ್ತಿದ್ದೇವೆ ಎಂದರೆ ಫ್ಯಾಷನ್ ಡಿಸೈನ್ ಅಥವಾ ಕಂಪ್ಯೂಟರ್ ಐಟಿ ವಿಭಾಗ ಹೀಗೆ ಹಲವಾರು ವಿಭಾಗಗಳನ್ನು ಅಲ್ಲಿ ನೀಡಲಾಗಿದ್ದು ನಿಮಗಿಷ್ಟವಿರುವ ವಿಭಾಗವನ್ನು ಆಯ್ಕೆ ಮಾಡಬಹುದು.
ನಂತರ ನೀವು ನಿರ್ದಿಷ್ಟವಾಗಿ ಯಾವ ನೌಕರಿ ಹುಡುಕುತ್ತಿದ್ದೀರಿ ಎಂಬುದನ್ನು ಆಯ್ಕೆ ಮಾಡಿ. ಉದಾಹರಣೆಗೆ ಡಿಸೈನರ್ ಎಂದು ಹೇಳುವಾಗ ಅದು ವೆಬ್ ಡಿಸೈನರ್ ಅಥವಾ ಗ್ರಾಫಿಕ್ ಡಿಸೈನರ್ ಆಗಿರಬಹುದು ಇಲ್ಲವೇ ಗೇಮ್ ಡಿಸೈನರ್ ಆಗಿರಬಹುದು. ಇದರಲ್ಲಿ ನೀವು ಏನು ಎಂಬುದನ್ನು ಆಯ್ಕೆ ಮಾಡಿಕೊಳ್ಳಿ
ಮುಂದಿನ ಆಯ್ಕೆ ಯಾವ ಸ್ಥಳದಲ್ಲಿ ನೌಕರಿ ಹುಡುಕುತ್ತಿದ್ದೀರಿ ಎಂಬುದು. ಬೆಂಗಳೂರಲ್ಲಿ ನೀವಿರುವುದಾದರೆ ಬೆಂಗಳೂರಿನ ಸುತ್ತಮುತ್ತ ಎಷ್ಟು ಕಿ.ಮೀ. ಒಳಗಿನ ಪ್ರದೇಶದಲ್ಲಿ ಅಥವಾ ದೇಶದ ಯಾವ ಭಾಗದಲ್ಲಿ ಆದರೂ ಸರಿ ಎನ್ನುವುದಾದರೆ ಎಲ್ಲಿ ಎಂಬುದನ್ನು ಆಯ್ಕೆ ಮಾಡಿಕೊಳ್ಳಬಹುದು.
ಜಾಹೀರಾತು ಯಾವಾಗ ಪೋಸ್ಟ್ ಮಾಡಿದ್ದು ಎಂಬುದನ್ನು ತಿಳಿಯಲು ಪೋಸ್ಟ್ ಮಾಡಿದ ದಿನಾಂಕ ಕ್ಲಿಕ್ಕಿಸಿ.
ನಿಮಗೆ ಯಾವ ರೀತಿಯ ಕೆಲಸ ಬೇಕು?
ಪೂರ್ಣಾವಧಿ (Full time), ಅರೆಕಾಲಿಕ ಅಥವಾ ಗುತ್ತಿಗೆ ಆಧಾರದಲ್ಲಿ ಬೇಕೆ? ಎಂಬುದನ್ನು ಆಯ್ಕೆ ಮಾಡಿ. ಆನಂತರ ಯಾವ ರೀತಿಯ ಸಂಸ್ಥೆ ಬೇಕು ಮತ್ತು ಯಾವ ಸಂಸ್ಥೆಯಲ್ಲಿ ಬೇಕು ಎಂಬುದನ್ನು ಆಯ್ಕೆ ಮಾಡಿ.
ಇಷ್ಟೆಲ್ಲ ಫಿಲ್ಟರ್ ಉಪಯೋಗಿಸಿದ ನಂತರ ನಿಮ್ಮ ಆಯ್ಕೆಗೆ ತಕ್ಕ ಉದ್ಯೋಗಾವಕಾಶ ಲಭ್ಯವಾಗಿದ್ದರೆ ಅದು ಪುಟದಲ್ಲಿ ಕಾಣಿಸಿಕೊಳ್ಳುತ್ತದೆ.
ನಿಮಗೆ ಇಷ್ಟವಾದ ಉದ್ಯೋಗಾವಕಾಶವನ್ನು ಸೇವ್ ಮಾಡಿಟ್ಟು ಆಮೇಲೆ ಮುಂದುವರಿಯುವ ಅವಕಾಶವೂ ಇಲ್ಲಿದೆ.
ಇಷ್ಟೆಲ್ಲಾ ಮಾಡಿ ನಿಮಗೆ ತಕ್ಕುದಾದ ಉದ್ಯೋಗಾವಕಾಶ ಪುಟದಲ್ಲಿ ಕಾಣಿಸಿಕೊಳ್ಳದೇ ಇದ್ದರೆ ನಿರಾಶರಾಗಬೇಡಿ. ಅಲ್ಲಿ ಮೇಲೆ ಅಲರ್ಟ್ ಅಂತ ಇರುತ್ತದೆ ಅದು ಆನ್ ಮಾಡಿ. ನೀವು ಹುಡುಕಿದ ಅಥವಾ ನೀವು ಬಯಸಿದ ರೀತಿಯ ಉದ್ಯೋಗಾವಕಾಶಗಳು ಈ ಪುಟದಲ್ಲಿ ಕಾಣಿಸಿಕೊಂಡಾಗ ಗೂಗಲ್ ನಿಮಗೆ ನೋಟಿಫಿಕೇಶನ್ ಕಳಿಸುತ್ತಿರುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.