ಇಟಲಿಯ ಪೀಸಾದಲ್ಲೊಂದು ಗೋಪುರವಿದೆ, ಅದು ನೂರಾರು ವರ್ಷಗಳಿಂದ ಓರೆಯಾಗಿ ನಿಂತಿದೆ ಎಂದು ಪಠ್ಯಗಳಲ್ಲಿ ಓದಿ ಆಶ್ಚರ್ಯಪಡುತ್ತಿದ್ದ ನಮಗೆ ಅದನ್ನು ಪ್ರತ್ಯಕ್ಷ ನೋಡಿದಾಗ ಆಗುವ ಆನಂದ ಪದಗಳಿಗೆ ನಿಲುಕದ್ದು.
ಪೀಸಾದ ‘ಅಚ್ಚರಿಗಳ ಚೌಕ’ (Square of Miracles ಅಥವಾ Cathedral Square) ಸುಮಾರು ಒಂಬತ್ತು ಹೆಕ್ಟೇರ್ ಪ್ರದೇಶವನ್ನು ಒಳಗೊಂಡಿದ್ದು ಇದರಲ್ಲಿ ವರ್ಜಿನ್ ಮೇರಿಗೆ ಸಮರ್ಪಿತವಾದ ಪೀಸಾದ ಆರ್ಚ್ ಬಿಷಪ್ ಇರುವ ರೋಮನ್ ಕ್ಯಾಥೊಲಿಕ್ ಕ್ಯಾಥೆಡ್ರಲ್ (ನಿರ್ಮಾಣ 1092), ದೀಕ್ಷೆ ಕೊಡುವ ಸ್ಥಳವಾದ ಸೇಂಟ್ ಜಾನ್ ಬಾಪ್ಟಿಸ್ಟ್ರಿ (ನಿರ್ಮಾಣ 1153) ಮತ್ತು ವಾಲು ಗೋಪುರ ಇವೆ. ಇದನ್ನು ವಿಶ್ವ ಪಾರಂಪರಿಕ ಸ್ಥಳವೆಂದು ಘೋಷಿಸಲಾಗಿದೆ.
The Leaning Tower of Pisa ಪೀಸಾದ ಚರ್ಚಿನ ಗಂಟೆ ಗೋಪುರ. ಸಾಧಾರಣವಾಗಿ ಗಂಟೆ ಗೋಪುರಗಳು ಚರ್ಚ್ ಕಟ್ಟಡದ ಭಾಗವಾಗಿಯೇ ಇರುತ್ತವಾದರೂ, ಇದು ಹೊರಭಾಗದಲ್ಲಿ ಸ್ವತಂತ್ರವಾಗಿ ನಿಂತಿರುವುದು ವಿಶೇಷ. ನಮ್ಮ
ದೇವಾಲಯಗಳೆದುರು ಗರುಡಗಂಬ ಇರುತ್ತದೆಯಲ್ಲ ಹಾಗೆ. ನೆಲಕ್ಕೆ ನೇರ ಲಂಬವಾಗಿರದೆ ನಾಲ್ಕು ಡಿಗ್ರಿಗಳಷ್ಟು ಓರೆಯಾಗಿರುವುದರಿಂದ ಇದನ್ನು ಪೀಸಾದ ವಾಲು ಗೋಪುರ ಎಂದು ಕರೆಯುವುದುಂಟು. The falling Tower ಎಂದೂ ಕರೆಯುವ ರೂಢಿಯಿದೆ. ಆ ಕಾರಣದಿಂದಲೇ ವಿಶ್ವಪ್ರಸಿದ್ಧವೂ ಆಗಿದೆ.
ಪೀಸಾ ಗೋಪುರದ ಎತ್ತರ ದಕ್ಷಿಣ ಭಾಗದಲ್ಲಿ 55.86 ಮೀಟರ್, ಉತ್ತರದ ಕಡೆಯಲ್ಲಿ 56.67 ಮೀಟರ್ ಎತ್ತರವಿದ್ದು ಒಟ್ಟು ಎಂಟು ಮಹಡಿಗಳನ್ನು ಹೊಂದಿದೆ. ಕಟ್ಟಡದ ಒಳಗೆ ಒಂದು ಬದಿಯಲ್ಲಿ 296, ಮತ್ತೊಂದು ಬದಿಯಲ್ಲಿ 294 ಮೆಟ್ಟಿಲುಗಳು ಇವೆ. ಈ ವೃತ್ತಾಕಾರದ ಕಟ್ಟಡದ ವ್ಯಾಸ 15.50 ಮೀಟರ್ ಮತ್ತು ಗೋಡೆಯ ದಪ್ಪ ಕೆಳಭಾಗದಲ್ಲಿ 4.1 ಮೀಟರ್ ಮತ್ತು ಉಳಿದ ಮಹಡಿಗಳಲ್ಲಿ 2.7 ಮೀಟರ್ ಇದೆ. ಈ ಗೋಪುರದ ಒಟ್ಟು ತೂಕ 14,700 ಮೆಟ್ರಿಕ್ ಟನ್ ಎಂದು ಅಂದಾಜು ಮಾಡಲಾಗಿದೆ.
ನಿರ್ಮಾಣದ ರೋಚಕ ಕಥೆ
ಆಗಸ್ಟ್ 1173ರಲ್ಲಿ ಅಡಿಪಾಯ ಹಾಕುವುದರೊಂದಿಗೆ ಆರಂಭವಾದ ಇದರ ನಿರ್ಮಾಣ ಕಾರ್ಯ ಸುಮಾರು 200 ವರ್ಷಗಳ ನಂತರ 1370ರಲ್ಲಿ ಕೊನೆಗೊಂಡಿತು. ಆರಂಭದಲ್ಲಿ ಮೊದಲ ನಾಲ್ಕು ಮಹಡಿಗಳು ನಿರ್ಮಾಣವಾಗಿದ್ದವು. ಒಂದು ಶತಮಾನದ ನಂತರ ನಂತರದ ಮೂರು ಮಹಡಿಗಳನ್ನು ಕಟ್ಟಲಾಯಿತು. ಮತ್ತೂ ಒಂದು
ಶತಮಾನದ ನಂತರ (1360–1370ರಲ್ಲಿ) ಕೊನೆಯ ಮಹಡಿಯ ನಿರ್ಮಾಣ ಮತ್ತು ಗಂಟೆಗಳನ್ನು ಅಳವಡಿಸುವ ಕೆಲಸಗಳು ನಡೆದವು. ಇಲ್ಲಿ ಸ್ವರಕ್ಕೊಂದರಂತೆ ಒಟ್ಟು ಏಳು ಗಂಟೆಗಳು ಇವೆ.
ಕಂಚಿನ ಕೆಲಸಗಳಲ್ಲಿ ಪರಿಣತಿ ಹೊಂದಿದ ಪಿಸಾನೊ ಈ ಗೋಪುರವನ್ನು ವಿನ್ಯಾಸ ಮಾಡಿದ ವಾಸ್ತುಶಿಲ್ಪಿ ಎಂದು ನಂಬಲಾ
ಗಿತ್ತು. ಆದರೆ 2001ರ ಒಂದು ಅಧ್ಯಯನದ ಪ್ರಕಾರ ಡಯೋಟಿಸಾಲ್ವಿ ಇದರ ವಿನ್ಯಾಸಕಾರ ಎಂದು ನಿರ್ಧರಿಸಲಾಯಿತು. ಪಿಸಾನೊ ಚರ್ಚಿನ ಕಂಚಿನ ಬಾಗಿಲನ್ನು ಮಾತ್ರ ಮಾಡಿರಬಹುದೆಂಬ ಅಭಿಪ್ರಾಯಕ್ಕೆ ಬರಲಾಗಿದೆ.
ಎರಡನೇ ಮಹಡಿಯ ನಿರ್ಮಾಣವಾಗುವ ಹೊತ್ತಿಗೇ ಈ ಕಟ್ಟಡವು ದಕ್ಷಿಣದ ಬದಿಯಲ್ಲಿ ಕುಸಿಯಲು ಪ್ರಾರಂಭವಾಗಿತ್ತು. ಇನ್ನೆರಡು ಮಹಡಿಗಳನ್ನು ಕಟ್ಟಿದ ನಂತರ, ಸುಮಾರು ಒಂದು ಶತಮಾನ ಕಾಲ ಕಟ್ಟಡದ ಕಾರ್ಯ ಸ್ಥಗಿತಗೊಂಡಿತ್ತು. ಅದಕ್ಕೆ ಯುದ್ಧ, ಅರಾಜಕತೆ ಇತ್ಯಾದಿ ರಾಜಕೀಯ ಕಾರಣಗಳೂ ಇದ್ದವು. ಸಡಿಲಗೊಂಡಿದ್ದ ಮಣ್ಣು 1233ರ ವೇಳೆಗೆ ಸ್ವಲ್ಪ ಮಟ್ಟಿಗೆ ಗಟ್ಟಿಗೊಂಡಿತ್ತು. ಇಲ್ಲದೇ ಹೋಗಿದ್ದರೆ ಕಟ್ಟಡವು ಕುಸಿಯುವ ಸಾಧ್ಯತೆಯೇ ಅಧಿಕವಾಗಿತ್ತು. ವಾಲುವಿಕೆಯ ಪರಿಣಾಮವನ್ನು ತಗ್ಗಿಸಲು ಉತ್ತರ ದಿಕ್ಕಿನ ಅಂತಸ್ತುಗಳು ತುಸು ಎತ್ತರವಾಗಿರುವಂತೆ ನೋಡಿಕೊಳ್ಳಲು ವಾಸ್ತುತಜ್ಞರು ಸಲಹೆಯಿತ್ತರು. ಯುದ್ಧದ ಕಾರಣ ನಿರ್ಮಾಣ ಮತ್ತೆ ಸ್ಥಗಿತಗೊಂಡಿತು. ಹಲವು ವರ್ಷಗಳ ಬಳಿಕ ಏಳನೇ ಮಹಡಿಯನ್ನು ಕಟ್ಟಲಾಯಿತು. ಗಂಟೆ ಗೋಪುರ
ವನ್ನು ಮತ್ತೊಬ್ಬ ಪಿಸಾನೊ ಉಸ್ತುವಾರಿಯಲ್ಲಿ ಸೇರಿಸಲಾಯಿತು. ಅಂತೂ ಇಂತೂ ಹಟ ಬಿಡದೆ ಈ ಗೋಪುರದ ಕೆಲಸವನ್ನು ಪೂರ್ಣ
ಗೊಳಿಸಲಾಯಿತು. 12ನೇ ಶತಮಾನದಲ್ಲಿ ನಿರ್ಮಾಣ ಕಾರ್ಯ ಶುರುವಾದಾಗಲೇ, ಒಂದು ಭಾಗದ ಮೆದು ಮಣ್ಣಿನ ಕಾರಣದಿಂದ, ಓರೆಯಾಗಲು ತೊಡಗಿದ ಈ ಗೋಪುರ 14ನೇ ಶತಮಾನದಲ್ಲಿ ನಿರ್ಮಾಣ ಪೂರ್ಣವಾದಾಗ ಸಾಕಷ್ಟು ಓರೆಯಾಗಿತ್ತು.
ಪೀಸಾದ ವಾಲು ಗೋಪುರ ವರ್ಷ ವರ್ಷವೂ ತುಸು ಬಾಗುತ್ತಲೇ ಶತಮಾನಗಳನ್ನು ಕಾಣುತ್ತಾ ಹೋಯಿತು. 1990ರ ಹೊತ್ತಿಗೆ 5.5 ಡಿಗ್ರಿಗಳಷ್ಟು ಓರೆಯಾದಾಗ, ಕಟ್ಟಡವನ್ನು ಉಳಿಸಿಕೊಳ್ಳಲು ಏನಾದರೂ ಪರಿಹಾರೋಪಾಯಗಳನ್ನು ಮಾಡಲೇಬೇಕಾದ ಅನಿವಾರ್ಯ ಉಂಟಾಯಿತು.
ಗೋಪುರ ಕುಸಿದುಬೀಳುವ ಅಪಾಯವನ್ನು ಮನಗಂಡು ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ವಾಲುವಿಕೆಯನ್ನು ಸರಿಪಡಿಸಿ, ಕುಸಿಯುವ ಅಪಾಯವನ್ನು ತಪ್ಪಿಸಲು ಯೋಜನೆ ರೂಪಿಸಲಾಯಿತು. ಕಟ್ಟಡದ ತೂಕವನ್ನು ಕಡಿಮೆ ಮಾಡಲು ಗೋಪುರದ ಮೇಲಿನ ಹಂತದಲ್ಲಿದ್ದ ಗಂಟೆಗಳನ್ನು ಸ್ಥಳಾಂತರಿಸಿದ್ದಲ್ಲದೆ, ಗೋಪುರ ಬೀಳಬಹುದಾದ ಪ್ರದೇಶದ ಎಲ್ಲಾ ಕಟ್ಟಡಗಳಿಂದ ಜನರನ್ನು ತೆರವುಗೊಳಿಸಲಾಯಿತು. ಮೂರನೇ ಮಹಡಿಯ ಸುತ್ತ ಬಲವಾದ ಕೇಬಲ್‌ಗಳನ್ನು ಅಳವಡಿಸಿ ನೂರು ಮೀಟರ್ ದೂರದ ಸ್ಥಳದಲ್ಲಿ ಗೂಟಗಳನ್ನು ನೆಟ್ಟು, ಬಿಗಿದು ಕಟ್ಟಲಾಯಿತು. ವಾಲುವಿಕೆಯ ವಿರುದ್ಧ ದಿಕ್ಕಿನಲ್ಲಿ ಅಡಿಪಾಯದ ಕೆಳಗಿನ 38 ಘನ ಮೀಟರ್ ಮಣ್ಣನ್ನು ಹೊರತೆಗೆದು, ಆ ಗುಂಡಿಯಲ್ಲಿ 870 ಟನ್ ತೂಕದ ಲೋಹದ ವಸ್ತುಗಳನ್ನು ತುಂಬಿದ್ದರಿಂದ ಮತ್ತಷ್ಟು ವಾಲುವಿಕೆ ತಪ್ಪಿತು. ಸ್ವಲ್ಪ ನೇರಗೊಂಡ ಪೀಸಾದ ಗೋಪುರ ಕುಸಿಯುವ ಅಪಾಯದಿಂದ ಪಾರಾಗಿ ನಿಂತಿದೆ. ಗೋಪುರದ ವಾಲುವಿಕೆಯನ್ನು ಐದೂವರೆ ಡಿಗ್ರಿಗಳಿಂದ ನಾಲ್ಕು ಡಿಗ್ರಿಗಳಿಗೆ ಇಳಿಸಿ ಕಟ್ಟಡವನ್ನು ಸುಭದ್ರಗೊಳಿಸಲಾಯಿತು. ಬಳಿಕ ಮತ್ತೆ ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳಿಸಲಾಯಿತು.
ಆಗಿಂದಾಗ್ಗೆ ಸಾಕಷ್ಟು ರಿಪೇರಿ ಮತ್ತು ಗಟ್ಟಿಗೊಳಿಸುವ ಕೆಲಸಗಳು ನಡೆಯುತ್ತಲೇ ಇರುತ್ತವೆ. ಗೋಪುರ ನಿರ್ಮಾಣವಾದಾಗಿನಿಂದ ಕನಿಷ್ಠವೆಂದರೂ ನಾಲ್ಕು ಬಲವಾದ ಭೂಕಂಪನಗಳನ್ನು ಎದುರಿಸಿ ನಿಂತಿದೆ ಈ ವಾಲುಗೋಪುರ. ಯಾವ ಮೆದುಮಣ್ಣಿನ ಕಾರಣದಿಂದ ಗೋಪುರ ತುಸು ಓರೆಯಾಯಿತೋ, ಅದೇ ಮಣ್ಣಿನ ಕಾರಣಕ್ಕೆ ಅದು ಈ ಭೂಕಂಪನಗಳನ್ನು ತಡೆದುಕೊಳ್ಳಲು ಸಾಧ್ಯವಾಗಿದೆಯೆಂಬುದು ಆಶ್ಚರ್ಯಕರ. ಮೆದುಮಣ್ಣಿನ ಕಾರಣ ದಿಂದಲೇ ಭೂಕಂಪನದ ಅಲೆಗಳು ಗೋಪುರವನ್ನು ತಲುಪುವ ವೇಳೆಗೆ ಕ್ಷೀಣಗೊಳ್ಳುತ್ತವೆಯಂತೆ.
ಎರಡನೇ ಮಹಾಯುದ್ಧದ ಸಮಯದಲ್ಲಿ ಜರ್ಮನ್ನರು ಈ ಗೋಪುರವನ್ನು ಕಣ್ಗಾವಲಿಗೆ ಬಳಸುತ್ತಿದ್ದಾರೆಂಬ ಅನುಮಾನದಿಂದ ಅಮೆರಿಕದ ಸೈನ್ಯಾಧಿಕಾರಿಯೊಬ್ಬ ಇದನ್ನು ಹಾಳುಗೆಡಹುವ ಉದ್ದೇಶದಿಂದ ಬಂದವನು ಇದರ ಸೌಂದರ್ಯಕ್ಕೆ ಮನಸೋತು ಹಾಗೆಯೇ ಹಿಂದಿರುಗಿದನಂತೆ!
ಚರ್ಚ್ ಮತ್ತು ದೀಕ್ಷಾ ಸ್ಥಳಗಳು ಅದ್ಭುತ ವಾಸ್ತುಶಿಲ್ಪವನ್ನು ಹೊಂದಿದ್ದು ನೋಡಲು ಕಣ್ಣುಗಳು ಸಾಲವು ಎನ್ನುವಂತಿವೆ. ಕಲಾ ಸಿರಿವಂತಿಕೆಯನ್ನು ಪ್ರದರ್ಶಿಸುವ ಬೃಹತ್ ಚರ್ಚ್ ಮತ್ತು ಧ್ವನಿಯನ್ನು ಸ್ಪಷ್ಟವಾಗಿ ಕೇಳಿಸುವ ವಿಶೇಷ ತಂತ್ರಜ್ಞಾನ ಹೊಂದಿದ ಬ್ಯಾಪ್ಟಿಸ್ಟ್ರಿ ನೋಡಲೇಬೇಕಾದ ಸ್ಥಳಗಳು. ವಿಚಿತ್ರ ಎಂದರೆ ತನ್ನ ವಾರೆಯಾಗಿರುವ ಗುಣದಿಂದಲೇ ಪ್ರಖ್ಯಾತವಾದ ಗಂಟೆ ಗೋಪುರ ಅವೆರಡರ ವಿಶೇಷತೆಯನ್ನು ಮರೆಯಾಗಿಸಿಬಿಡುತ್ತದೆ!
ಓರೆಗೋಪುರವೂ ತನ್ನಲ್ಲಿ ಅನೇಕ ವಿಶೇಷತೆಗಳನ್ನು ಹೊಂದಿದ್ದು, ಎಂಟು ಮಹಡಿಗಳನ್ನು ಮೆಟ್ಟಿಲುಗಳ ಮೂಲಕ ಹತ್ತಿ ಅಲ್ಲಿಂದ ಸುತ್ತಲಿನ ನೋಟವನ್ನು ಕಣ್ತುಂಬಿಕೊಳ್ಳುವುದು ಅದ್ಭುತ ಅನುಭವವೇ ಸರಿ. ಚಿತ್ರ ವಿಚಿತ್ರ ಭಂಗಿಗಳಲ್ಲಿ ವಾಲುಗೋಪುರದ ಜತೆಗೆ ಫೋಟೊ ತೆಗೆಸಿಕೊಳ್ಳುವ ಪ್ರವಾಸಿಗರನ್ನಿಲ್ಲಿ ನಾವು ಕಾಣಬಹುದು. ಮೂರೂ ಸ್ಮಾರಕಗಳಿಗೆ ಪ್ರತ್ಯೇಕ ಪ್ರವೇಶ ಶುಲ್ಕವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.