ಸಂತೋಷದ ಸಂಭ್ರಮಾಚರಣೆ ಸಾತ್ವಿಕವಾಗಿ ನೆರವೇರಿದಾಗ ಅದು ಒಳಿತಿನ ಫಲವನ್ನೇ ಕೊಡುತ್ತದೆ. ವೈಯಕ್ತಿಕವಾದ ಖುಷಿಯನ್ನು ಸಾಮುದಾಯಿಕಗೊಳಿಸುವುದು ಜೀವನ್ಮುಖಿ ನಡವಳಿಕೆ
***
ಭಾರತೀಯರು ಆನಂದವನ್ನು ಬ್ರಹ್ಮ ಎಂದು ಕರೆದಿದ್ದಾರೆ. ಅಂದರೆ ಇದೊಂದು ಪರಮ ಗುರಿ. ಎಲ್ಲರೂ ತಲುಪಬೇಕಾದ ಅಥವಾ ಪಡೆದುಕೊಳ್ಳಬೇಕಾದ ಶಾಶ್ವತ ಸ್ಥಿತಿ. ಲೌಕಿಕದ ಕಷ್ಟ-ನಷ್ಟಗಳನ್ನು, ನೋವು-ಅಪಮಾನಗಳನ್ನು ಮೀರಿದ ಅಥವಾ ಮರೆವಿಗೆ ತಳ್ಳಿದ ಸ್ಥಿತಿಯಲ್ಲಿ ಮನಸ್ಸು ಆನಂದದ ಸ್ಥಿತಿಯನ್ನು ತಲುಪಬಹುದು. ನಾವು ಬಾಲ್ಯದಿಂದ ಯಾವ ಸಂಗತಿಗಳನ್ನು ಸುಖ ಎಂದು ಅರ್ಥೈಸಿಕೊಂಡಿರುತ್ತೇವೆಯೋ ಅವುಗಳನ್ನು ಪಡೆದುಕೊಂಡಾಗ ಮನಸ್ಸು ಸಂಭ್ರಮಿಸುತ್ತದೆ. ಉದಾಹರಣೆಗೆ ಹಾಲು-ತುಪ್ಪ-ಸಿಹಿತಿಂಡಿಗಳ ಷಡ್ರಸ ಭೋಜನವನ್ನು, ಬೆಲೆಬಾಳುವ ಒಡವೆ-ಬಟ್ಟೆಗಳನ್ನು, ವಿದೇಶಿ ಯಾತ್ರೆಯನ್ನು ಸುಖವೆಂದು ಭಾವಿಸಿಕೊಂಡಾತ ಮೋಜು-ಮೇಜವಾನಿಗಳನ್ನು ಪಡೆದುಕೊಳ್ಳುವುದನ್ನೇ ತನ್ನ ಜೀವನದ ಧ್ಯೇಯವಾಗಿಟ್ಟುಕೊಂಡು ಹೆಣಗುತ್ತಾನೆ. ದೊಡ್ಡ ಮನೆ, ಕಾರು, ಬೆಲೆಬಾಳುವ ಪೀಠೋಪಕರಣಗಳಂಥ ಸಂಪತ್ತನ್ನು ಸುಖವೆಂದು ವ್ಯಾಖ್ಯಾನಿಸಿಕೊಂಡವನು ಅವುಗಳನ್ನು ಹೊಂದುವಲ್ಲಿ ಆಸಕ್ತನಾಗಿರುತ್ತಾನೆ.
ಇತ್ತೀಚಿನ ದಿನಗಳಲ್ಲಿ ಸಣ್ಣ-ಪುಟ್ಟ ಸಂಗತಿಗಳನ್ನೂ ಸಂಭ್ರಮಿಸುವ ಪ್ರತೀತಿ ಹೆಚ್ಚುತ್ತಿದೆ. ಯಾವುದೇ ಉತ್ಸವ ಅಥವಾ ಮೆರವಣಿಗೆ ನಡೆದರೆ ರಸ್ತೆಗಳಲ್ಲಿ ವಾಹನಗಳ ಸಂಚಾರಕ್ಕೆ ಅಡಚಣೆಯುಂಟಾಗಿ ಸಮಸ್ಯೆ ಉದ್ಭವಿಸುತ್ತದೆ. ಜೋರಾಗಿ ವಾದ್ಯ ನುಡಿಸುವುದು, ಪಟಾಕಿ ಸಿಡಿಸುವುದು, ಕಿವಿ ತಮಟೆ ಹರಿಯುವಂತಹ ಡಿಜೆಗಳ ಸಂಗೀತವನ್ನು ಹಾಕಿಕೊಂಡು ಕುಣಿಯುವುದನ್ನು ನಾವು ಆನಂದದ ಅನುಭೂತಿ ಎಂದು ಒಪ್ಪಿಕೊಂಡರೆ ಸೂಕ್ಷ್ಮ ಜೀವಿಗಳು, ಅನಾರೋಗ್ಯದಿಂದ ಬಳಲುವವರು, ಶಿಶು-ಬಾಣಂತಿ-ಗರ್ಭಿಣಿಯರು ಇವರೆಲ್ಲ ಬಲಿಪಶುಗಳಾಗುತ್ತಾರೆ. ಹಬ್ಬಗಳ ಮರುದಿನ ರಸ್ತೆಗಳಲ್ಲಿ ಹೊರಟರೆ ಎರಡೂ ಕಡೆ ಪಟಾಕಿ ಚೂರುಗಳು ರಾಶಿ ರಾಶಿ ಬಿದ್ದಿರುತ್ತವೆ. ಥರ್ಮೋಕೋಲಿನ ಬೋರ್ಡ್‌ಗಳು, ಬ್ಯಾನರುಗಳು ಅನಾಥವಾಗಿ ಬಿದ್ದಿರುತ್ತವೆ. ರಬ್ಬರಿನ ಬಲೂನು ಚೂರುಗಳು ಮಣ್ಣಲ್ಲಿ ಒಂದಾಗುವುದಿಲ್ಲವೆಂದು ಹಠ ಹಿಡಿದು ಪಿಳಿಪಿಳಿ ನೋಡುತ್ತಿರುತ್ತವೆ. ಪ್ಲಾಸ್ಟಿಕ್ ತಟ್ಟೆ ಲೋಟಗಳು ಔತಣಕೂಟದ ಪಳೆಯುಳಿಕೆಗಳಾಗಿ ಕೂತಿರುತ್ತವೆ. ಈ ತಟ್ಟೆ ಲೋಟಗಳನ್ನೂ ಮೀರಿಸಿದ ಇನ್ನೊಂದು ಪರ್ವತ ಅರ್ಧ ತಿಂದು ಬಿಟ್ಟ ಮೃಷ್ಟಾನ್ನದ ತಿನಿಸುಗಳದ್ದು. ಮಣ್ಣಲ್ಲಿ ಕರಗದಿರುವ ತ್ಯಾಜ್ಯಗಳನ್ನು ಖಾಲಿ ಸೈಟುಗಳಲ್ಲಿ ಅಥವಾ ಊರ ಹೊರಗೆ ರಸ್ತೆ ಪಕ್ಕದಲ್ಲಿ ಎಸೆದು ಬಿಡುತ್ತಾರೆ. ಅವು ಹೊಲಸು ವಾಸನೆ ಬೀರುತ್ತ ನಾಯಿ-ಹಂದಿಗಳಿಗೂ ಆಹಾರವಾಗುವ ಯೋಗ್ಯತೆಯಿಲ್ಲದೇ ಕೇವಲ ಅವುಗಳ ಕಚ್ಚಾಟಕ್ಕೆ ಕಾರಣವಾಗುತ್ತ ಬಿದ್ದಿರುತ್ತವೆ.
ಭೋಗ ಮತ್ತು ಸುಖ – ಎರಡೂ ವಿಭಿನ್ನ ನೆಲೆಗಳು, ವಿಭಿನ್ನ ಅನುಭವಗಳು. ಭೋಗದಲ್ಲಿ ಸುಖದ ಅಂಶವೂ ಇರಬಹುದು. ಆದರೆ ಸುಖವೆಲ್ಲವೂ ಭೋಗವಲ್ಲ. ಸುಖಕ್ಕೆ ಅಂತರಂಗದ ಭಾವನೆಯಿರುತ್ತದೆ. ಭೋಗಕ್ಕೆ ಬಹಿರಂಗದ ಕಾಮನೆಯಿರುತ್ತದೆ. ಈ ಸತ್ಯದ ಸಾಕ್ಷಾತ್ಕಾರವಾಗುವ ತನಕ ಆನಂದದ ಅನ್ವೇಷಣೆ ನಡೆಯುತ್ತಲೇ ಇರುತ್ತದೆ. ಐಹಿಕ ಸಂಪತ್ತಿನ ಸಂಗ್ರಹ ಹಾಗೂ ಪ್ರದರ್ಶನಗಳು ಕೊಡುತ್ತಿರುವ ಸುಖದ ಕ್ಷಣಿಕತನ ಅರಿವಾಗುತ್ತ ಸಾಗಿದಂತೆ ಬಹಿರ್ಮುಖಿಯಾದ ಮನಸ್ಸು ನಿಧಾನವಾಗಿ ತನ್ನ ಅಂತರಂಗದೊಳಗಿನ ಚೈತನ್ಯದೊಂದಿಗೆ ಸಂವಾದಿಸಲು ಆರಂಭಿಸುತ್ತದೆ.
‘ಬಾರದಿರುವುದಕೆ ಕೊರಗುವುದ ಬಿಟ್ಟು ಇರುವುದನು ಪ್ರೀತಿಸು ಹರುಷಕಿದೇ ದಾರಿ’ ಎನ್ನುತ್ತಾರೆ ಡಿ.ವಿ.ಜಿ.ಯವರು. ನಮ್ಮ ಬದುಕಿನಲ್ಲಿ ದೊರಕಿರುವ ಒಳ್ಳೆಯ ಅಂಶಗಳಾವವು ಎಂದು ಪಟ್ಟಿ ಮಾಡುತ್ತ ಹೋದಂತೆ ಮನಸ್ಸು ಸಕಾರಾತ್ಮಕವಾಗಿ ಸ್ಪಂದಿಸಲು ಶುರು ಮಾಡುತ್ತದೆ. ಆಗ ಖುಷಿಯ ಕಾಮನಬಿಲ್ಲು ಮೂಡುತ್ತದೆ. ಸಂತೋಷದ ಹುಡುಕಾಟ ಎನ್ನುವುದು ಆದಿಯಿಂದಲೂ ಮಾನವನ ಹಸಿವುಗಳಲ್ಲಿ ಒಂದಾಗಿದೆ. ಆದರೆ ಸಂತೋಷದ ಪರಿಕಲ್ಪನೆ ಮಾತ್ರ ಕಾಲದಿಂದ ಕಾಲಕ್ಕೆ ಹಾಗೂ ಪ್ರದೇಶದಿಂದ ಪ್ರದೇಶಕ್ಕೆ ವಿಭಿನ್ನವಾಗುತ್ತ ಸಾಗಿದೆ. ಸಂತೋಷ ಪಡುವುದು ಅಥವಾ ನಮಗಾದ ಸಂತೋಷವನ್ನು ಎಲ್ಲರೊಂದಿಗೆ ಹಂಚಿಕೊಳ್ಳುವುದು ಅತ್ಯಂತ ಆರೋಗ್ಯಪೂರ್ಣವಾದ ವಿಚಾರ. ವೈಯಕ್ತಿಕವಾದ ಖುಷಿಯನ್ನು ಸಾಮುದಾಯಿಕಗೊಳಿಸುವುದು ಒಂದು ಜೀವನ್ಮುಖಿ ನಡವಳಿಕೆ. ನಮ್ಮ ಸಂತೋಷವನ್ನು ಸಂಭ್ರಮಿಸುವ ಮೂಲಕ ಇತರರಿಗೆ ಹಂಚುತ್ತ ಹೋದಾಗ ಅದು ಅವರ ವೈಯಕ್ತಿಕ ನೋವನ್ನು ಮಾಯಿಸುವ ಮುಲಾಮಿನಂತೆ ಕೆಲಸ ಮಾಡಬಹುದು. ಮನುಷ್ಯ ಖುಷಿಗೊಂಡಾಗ ಮಿದುಳಿನಲ್ಲಿ ‘ಎಂಡೊರ್ಫಿನ್’ ಹಾರ್ಮೊನ್ ಸೃಜಿಸುತ್ತದೆ. ಅದರಿಂದ ನೋವಿನ ಅನುಭೂತಿ ಮಾಯವಾಗುತ್ತದೆ. ‘ಡೊಪಾಮೈನ್’ ಎನ್ನುವ ನರಕೋಶಗಳ ಉತ್ತೇಜಕವು ಬಿಡುಗಡೆಗೊಳ್ಳುತ್ತದೆ. ಇದು ಧನಾತ್ಮಕ ಆಲೋಚನೆಗಳಿಗೆ ಪ್ರೇರಣೆ ನೀಡುತ್ತದೆ. ‘ಸೆರೆಟೊನಿನ್’ ಹಾಗೂ ‘ಒಕ್ಸಿಟೊಸಿನ್’ ಎಂಬ ರಾಸಾಯನಿಕಗಳು ಕೂಡ ಬಿಡುಗಡೆಯಾಗುತ್ತವೆ. ಇವು ಮಿದುಳನ್ನು ಚುರುಕುಗೊಳಿಸುವ ಮೂಲಕ ಹೃದಯಕ್ಕೆ ಹೆಚ್ಚಿನ ರಕ್ತ ಸಂಚಾರವಾಗುವಂತೆ ನೋಡಿಕೊಳ್ಳುತ್ತವೆ.
ಸಂತೋಷವನ್ನು ಅನುಭವಿಸುವ ಸ್ಥಿತಿಯಲ್ಲಿರುವ ಮನುಷ್ಯನ ಪಚನಕ್ರಿಯೆ ಕೂಡ ಚೆನ್ನಾಗಿ ನಡೆಯುತ್ತದೆ. ಸಂತೋಷದ ಸ್ಥಿತಿಯಲ್ಲಿ ಮನಸ್ಸು ನಿರಾಳ ಭಾವವನ್ನು ಹೊಂದುವುದರಿಂದ ನಿದ್ದೆ ಕೂಡ ಚೆನ್ನಾಗಿ ಬರುತ್ತದೆ. ಹೀಗೆ ಇದು ಆರೋಗ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಕಾರಾತ್ಮಕವಾಗಿ ಕಾರ್ಯವೆಸಗುತ್ತದೆ. ಸಂತೋಷ-ನೆಮ್ಮದಿಗಳು ಮನುಷ್ಯನ ಕಾರ್ಯಕ್ಷಮತೆಯನ್ನು ಕೂಡ ಹೆಚ್ಚಿಸುತ್ತವೆ. ಸಂತೋಷದ ಸಂಭ್ರಮಾಚರಣೆ ಸಾತ್ವಿಕವಾಗಿ ನೆರವೇರಿದಾಗ ಅದು ಒಳಿತಿನ ಫಲವನ್ನೇ ಕೊಡುತ್ತದೆ.⇒v
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.