ಅಂದು ಸಂಜೆಯ ಮಬ್ಬುಗತ್ತಲಲ್ಲಿ ಎದುರು ಮನೆಗೆ ಅಡಿಕೆ ಸುಲಿಯಲು ಹೊರಟಿದ್ದ ಶಂಭುವಮ್ಮ, ರಸ್ತೆ ದಾಟುವ ವೇಳೆ ಬೈಕ್ ಡಿಕ್ಕಿ ಹೊಡೆದ. ಗುದ್ದಿದ ರಭಸಕ್ಕೆ ಆಕೆ ಮೈಮೂಳೆ ಮುರಿದುಕೊಂಡು ನಡುರಸ್ತೆಯಲ್ಲಿ ಬಿದ್ದು ಬೊಬ್ಬೆಹೊಡೆ ಯುತ್ತಿದ್ದರು. ಊರವರೆಲ್ಲ ಅವರನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಥಮಚಿಕಿತ್ಸೆ ಕೊಡಿಸಿ ಶಿವಮೊಗ್ಗದ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲು ತೀರ್ಮಾನಿಸಿದ್ದರು. ಅಪಘಾತ ಮಾಡಿದ ಹುಡುಗರಿಬ್ಬರು ಚಿಕಿತ್ಸೆಯ ವೆಚ್ಚವನ್ನು ಬರಿಸುವ ವಾಗ್ಧಾನವನ್ನು ನಂಬಿದ್ದ ಊರ ಜನರಿಂದ ಬೈಕಿನ ಕೀ ಪಡೆದು ಆಂಬುಲೆನ್ಸ್ ಕರೆತಂದರು. ಬಡ ಕೂಲಿಕಾರ್ಮಿಕ ಕುಟುಂಬದ ಶಂಭುವಮ್ಮನನ್ನು ಮಗ ಮಂಜಣ್ಣ ಮತ್ತು ಸೊಸೆ ಜಯಕ್ಕ ಅವರೊಂದಿಗೆ ಉಟ್ಟಬಟ್ಟೆಯಲ್ಲೇ ಕಳಿಸಲಾಯಿತು. ಚಾಲಾಕಿ ಹುಡುಗರು ಶಿವಮೊಗ್ಗೆಯ ಸರ್ಕಾರಿ ಜಿಲ್ಲಾಸ್ಪತ್ರೆಗೆ ಹೋಗದಂತೆ ಒತ್ತಡ ಹೇರಿ ಚಿಕಿತ್ಸಾವೆಚ್ಚವನ್ನು ತಾವು ಭರಿಸುವವರೆಂದು ಗದರಿ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದರು. ಅಪಘಾತವೇನಾಗಿಲ್ಲ, ಜಾರಿಬಿದ್ದರು ಅಂತ ಸುಳ್ಳುಹೇಳಿ, ತಾವು ಜತೆಗಿದ್ದರು. ರಾತ್ರಿಯಿಡೀ ಚಿಕಿತ್ಸೆ, ಎಕ್ಸ್-ರೇ, ಸ್ಕ್ಯಾನಿಂಗ್ ಮುಂದುವರೆದಿತ್ತು. ಎದುರಿನ ಬೆಂಚುಮೇಲೆ ಕೂತಿದ್ದ ಯುವಕರಿಬ್ಬರೂ ಬೆಳಕು ಹರಿಯುವಷ್ಟರಲ್ಲಿ ನಾಪತ್ತೆಯಾಗಿದ್ದರು !
ದುಬಾರಿ ಬಿಲ್ ಕಟ್ಟಲು ಪೀಡಿಸುತ್ತಿದ್ದ ಆಸ್ಪತ್ರೆ ಸಿಬ್ಬಂದಿಯ ಕಾಟಕ್ಕೆ ಮಂಜಣ್ಣ ಕಂಗಾಲಾಗಿದ್ದರು. ಕೊನೆಗೆ ಎಲ್ಲೆಲ್ಲಿಗೋ ಫೋನಾಯಿಸಿ ಹೇಗೋ ಹಣವನ್ನು ಹೊಂದಿಸಿಕೊಂಡು ಬಿಲ್‍ಕಟ್ಟಿದವರೇ ಸರ್ಕಾರಿ ಆಸ್ಪತ್ರೆಗೆ ಅಮ್ಮನನ್ನು ಸ್ಥಳಾಂತರಿಸಿದ್ದೂ ಆಯ್ತು.
ಮೂರ್ನಾಲ್ಕು ದಿನ ಉಪಚರಿಸಿದ ಆಸ್ಪತ್ರೆಯವರು ಚಿಕಿತ್ಸೆ ಪರಿಣಾಮಕಾರಿಯಾಗದ ಕಾರಣನೀಡಿ ಕೈಚೆಲ್ಲಿ ಡಿಸ್ಚಾರ್ಜ್ ಮಾಡಿದರು. ಜರ್ಜರಿತರಾಗಿದ್ದ ಅಮ್ಮನನ್ನು ಸಂಜೆ ಮನೆಗೆ ಕರೆತಂದ ಮಂಜಣ್ಣ ಎಲ್ಲರೊಟ್ಟಿಗೆ ಸಮಾಲೋಚಿಸಿ ಮತ್ತೊಂದು ಪ್ರಯತ್ನಕ್ಕೆ ಮುಂದಾದರು. ಮೈಯಲ್ಲಿರುವ ಮೂಳೆಗಳು ಮುರಿದಿದ್ದರಿಂದ ಶಂಭುವಮ್ಮ ಮಿಸುಕಾಡಲೂ ಸಾಧ್ಯವಾಗುತ್ತಿರಲಿಲಲ್ಲ. ಅತೀವ ರೋದನೆಗಳ ನಡುವೆಯೇ ರಾತ್ರೋರಾತ್ರಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯನ್ನು ತಲುಪಿದ್ದಾಯ್ತು. ಅವತ್ತು ನಾನೂ ಜತೆಗಿದ್ದೆ.
‘ಅಯ್ಯೋ.. ನಂಗೆ ಅಂಥದ್ದೇನೂ ಆಗಿಲ್ಲ.. ನೋವು ಅಷ್ಟೇ.. ನೋವಿಗೆ ಮದ್ದುಕೊಡಿ ಸಾಕು’ ಅಂತ ಚೀರಾಡುತ್ತಿದ್ದರು ಶಂಭುವಮ್ಮ. ಶಿವಮೊಗ್ಗದ ಎರಡೂ ಆಸ್ಪತ್ರೆಗಳ ವರದಿಗಳು ಮತ್ತು ಮಾಹಿತಿಗಳನ್ನೆಲ್ಲಾ ಗಂಟೆಗಟ್ಟಲೆ ಪರಿಶೀಲಿಸಿದ ತಜ್ಞವೈದ್ಯರ ತಂಡ ‘ಪರಿಸ್ಥಿತಿ ಕೈಮೀರಿಯಾಗಿದೆ’ ಅಂದುಬಿಟ್ಟರು. ಕಾಡಿದರೂ ಬೇಡಿದರೂ ಚಿಕಿತ್ಸೆಗೆ ನಿರಾಕರಿಸಿ ‘ಬೇಕಿದ್ದರೆ ಬೆಂಗಳೂರಿನ ಸಂಜಯಗಾಂಧಿ ಆಸ್ಪತ್ರೆಯಲ್ಲಿ ಪ್ರಯತ್ನಿಸಬಹುದಷ್ಟೇ’ ಅಂತ ಮುಖ ತಿರುಗಿಸಿಬಿಟ್ಟರು. ಮನೆಗೇ ಹೋಗೋಣ ಎಂದ ಶಂಭುವಮ್ಮನ ಮಾತಿಗೆ ಓಗೊಟ್ಟು ಅದೇ ಆ್ಯಂಬುಲೆನ್ಸ್‌ನಲ್ಲಿ ಮನೆಗೆ ಹಿಂದಿರುಗುವಷ್ಟರಲ್ಲಿ ಬೆಳಗಾಗಿತ್ತು.
ಆ ದಿನ ಊರಲೆಲ್ಲಾ ಶೋಕದ ಛಾಯೆ. ಬಂದು ನೋಡಿದವರಲ್ಲೂ ಕಳವಳ. ಮೂರುಹೊತ್ತೂ ಎಲ್ಲರ ಕಣ್ಣು-ಕಿವಿಗಳು ಶಂಭುವಮ್ಮನ ಮನೆಕಡೆಗೇ ನೆಟ್ಟಿದ್ದವು. ಯಾವ ಸಮಯದಲ್ಲದರೂ ಆ ಸುದ್ದಿ ಬರಬಹುದೆಂಬ ದಿಗಿಲು. ಆದರೆ ಹಾಗಾಗಲಿಲ್ಲ. ದಿನಗಳು ಉರುಳುತ್ತಿದ್ದವು. ವಾರ ಕಳೆಯುವಷ್ಟರಲ್ಲಿ ಗೋಡೆಗೊರಗಿ ಕೂತಿದ್ದರು ಶಂಭುವಮ್ಮ. ಹದಿನೈದೇ ದಿನಗಳಲ್ಲಿ ಆಧಾರ ಹಿಡಿದು ನಿಂತಿದ್ದರು. ಒಂದೆರಡು ತಿಂಗಳು ಕಳೆಯುವಷ್ಟರಲ್ಲಿ ಕೋಲು ಹಿಡಿದು ಓಡಾಡಲು ಶುರು ಮಾಡಿಬಿಟ್ಟಿದ್ದರು. ವಿಚಿತ್ರವೇನೆಂದರೆ, ಕನಿಷ್ಟ ಮೂರುದಿನ ಬದುಕುಳಿಯುವ ಭರವಸೆಯನ್ನೂ ನೀಡದ ಮೂರು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ಆತಂಕಗಳು ಒಂದುಕಡೆ, ಅಸಾಧ್ಯತೆಗಳಿಗೆಲ್ಲಾ ಸವಾಲು ಎಸೆದು ಮೂರು ವರ್ಷಕಳೆದ ಮೇಲೂ ತನ್ನದೆಲ್ಲಾ ಕೆಲಸವನ್ನು ಮಾಡಿಕೊಂಡು ಲವಲವಿಕೆಯಿಂದ ಓಡಾಡಿಕೊಂಡಿರುವ ಶಂಭುವಮ್ಮ ಜೀವನೋತ್ಸಾಹ ಮತ್ತೊಂದೆಡೆ. ಹತ್ತಾರು ಪ್ರಶ್ನೆಗಳನ್ನು ಹುಟ್ಟುಹಾಕಿದ್ದರು.
ಅತ್ಯಾಧುನಿಕ ಸೌಲಭ್ಯಗಳುಳ್ಳ ಆಸ್ಪತ್ರೆಗಳ ಸ್ಕ್ಯಾನಿಂಗ್ ಮತ್ತು ಎಕ್ಸ್-ರೇ ವರದಿಗಳು ಸುಳ್ಳು ಹೇಳಿದವಾ? ಬಹುಮೂಳೆ ಮುರಿತಗಳು ತಂತಾನೆ ಸರಿಹೋದವಾ?. ಆಂತರಿಕ ರಕ್ತಸ್ರಾವ ಅದಾಗಿಯೇ ನಿಂತುಬಿಡ್ತಾ? ಸೋಂಕು ತನ್ನಷ್ಟಕ್ಕೆ ಬಲಹೀನವಾಯ್ತಾ? ಅಥವಾ ಶಂಭುವಮ್ಮನ ಆತ್ಮವಿಶ್ವಾಸ ಮತ್ತು ಜೀವನ ಪ್ರೀತಿಯೇ ಅವರನ್ನು ಬದುಕಿಸಿಬಿಟ್ಟಿತಾ? ಅಥವಾ ಕೆಲವೊಮ್ಮೆ ದೇವರಮೇಲೆ ಭಾರ ಹಾಕಿ ಸುಮ್ಮನಿದ್ದುಬಿಟ್ಟರೆ ದೇಹವೇ ತಂತಾನೆ ಶುಶ್ರೂಷೆ ಮಾಡಿಕೊಳ್ಳಬಹುದಾದ ಹೊಸ ಸಾಧ್ಯತೆಗಳ ಆವಿಷ್ಕಾರವೊಂದು ಬಾಕಿಯಿದೆಯಾ? ಗೊತ್ತಿಲ್ಲ. ಸತ್ಯಸಂಗತಿ ಏನೆಂದರೆ ಇವತ್ತಿನವರೆಗೂ ವಿಜ್ಞಾನಕ್ಕೆ ನಿಲುಕರುವುದು ಹನಿಯಷ್ಟಾದರೆ, ಬಾಕಿ ಉಳಿದಿರುವುದು ಸಾಗರದಷ್ಟು. ಜೀವನ ಒಂದು ಹುಡುಕಾಟವಷ್ಟೇ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.