ಶಾಸ್ತ್ರೀಯ ಹಾಗೂ ಪಾಶ್ಚಾತ್ಯ ಸಂಗೀತದ ಆಲಾಪಗಳನ್ನು ಹದವಾಗಿ ಬೆರೆಸಿ ಹೊಸ ಸಂಗೀತದ ರೆಸಿಪಿಯನ್ನು ರುಚಿ ರುಚಿಯಾಗಿ ನೀಡಿರುವ ಕಲಾ ಜೋಡಿಯ ಹೆಸರು ನಿಲಿಮಾರಾವ್ ಮತ್ತು ಯು.ಪಿ.ರಾಕೇಶ್.
ರಾಕ್‌ಎನ್ ನಿಲಿಟಿವಿ ಯೂಟ್ಯೂಬ್ ಚಾನೆಲ್ ಮೂಲಕ ತಮ್ಮ ಸಂಗೀತ ಪ್ರತಿಭೆಯನ್ನು ಪ್ರದರ್ಶಿಸುತ್ತಿದ್ದ ಈ ಜೋಡಿ, ಈಗ ‘ಮಹಿರ’ ಕನ್ನಡ ಸಿನಿಮಾ ಮೂಲಕ ಬೆಳ್ಳಿತೆರೆಗೂ ಅಡಿ ಇಟ್ಟಿದೆ. ಲಂಡನ್‌ನಲ್ಲಿರುವ ನಿಲಿಮಾ, ಮಣಿಪಾಲದಲ್ಲಿರುವ ರಾಕೇಶ್ ಸೇರಿ ತಯಾರಿಸಿರುವ ಯೂಟ್ಯೂಬ್ ವಿಡಿಯೊ ಹಾಡುಗಳು ಎಲ್ಲರ ಕಿವಿಯೊಳಗೂ ತಾಳ ಹಾಕುತ್ತಿವೆ. ವಿಡಿಯೊ ಗೀತೆಗಳಿಗೆ ರಾಕೇಶ್ ಗಿಟಾರ್ ನುಡಿಸಿದ್ದಾರೆ. ನಿಲಿಮಾ ರಾವ್ ಹಾಡುಗಳಿಗೆ ದನಿಯಾಗಿದ್ದಾರೆ.
ಅಂದ ಹಾಗೆ, ನಿಲಿಮಾ ಮಂಗಳೂರಿನವರು. ಅಪ್ಪಟ ಶಾಸ್ತ್ರೀಯ ಸಂಗೀತ ಶಾರದೆ. ಅಪ್ಪನ ಪ್ರೇರಣೆಯಿಂದ ಬಾಲ್ಯದಲ್ಲೇ ಹಿಂದೂಸ್ಥಾನಿ ಸಂಗೀತವನ್ನು ಮೈಗೂಡಿಸಿಕೊಂಡಿ ದ್ದರೂ, ವೇದಿಕೆ ಏರಿ ಹಾಡುವುದೆಂದರೆ ಸ್ವಲ್ಪ ನಾಚಿಕೆ. ಐಟಿ ಉದ್ಯೋಗಿಯಾಗಿದ್ದ ನಿಲಿಮಾ ಮದುವೆಯ ನಂತರ ಲಂಡನ್ ಸೇರಿದರು. ಅಲ್ಲಿ ಹಲವಾರು ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದಾರೆ.
ಮಣಿಪಾಲದ ರಾಕೇಶ್, ಗಿಟಾರ್ ಪ್ಲೇಯರ್. ಪಾಶ್ಚಾತ್ಯ ಸಂಗೀತ ಪ್ರೇಮಿ. ಸದಾ ರಾಕ್ ಸಂಗೀತ ಆಲಿಸುತ್ತಿರುತ್ತಾರೆ. ಗಿಟಾರ್ ತರಗತಿಗೆ ಹೋಗಿದ್ದು ಮೂರೇ ತಿಂಗಳು, ನಂತರ ಕಲಿತಿದ್ದು ಯೂಟ್ಯೂಬ್‌ನಿಂದ.
ರಾಕೇಶ್ –ನಿಲಿಮಾ ಅವರನ್ನು ಸೇರಿಸಿದ್ದು ಇಬ್ಬರಿಗೂ ಕಾಮನ್ ಸ್ನೇಹಿತನಾಗಿದ್ದ ಪ್ರಕಾಶ್ ಕಾಂಚನ್. ಅಂದಹಾಗೆ, ಈ ಜೋಡಿಯ ಯೂಟ್ಯೂಬ್ ಗೀತೆಗಳಿಗೆ ಬೆನ್ನೆಲುಬಾಗಿ ನಿಂತವರು ನಿಲಿಮಾ ಪತಿ ಮಧುಸೂದನ್. ಇವರು ಯೂಟ್ಯೂಬ್‌ನಲ್ಲಿರುವ ಎಲ್ಲ ವಿಡಿಯೊ ಗೀತೆಗಳಿಗೆ ವಿಡಿಯೊಗ್ರಾಫರ್ ಕೂಡ.
ಸೋಚ್ ನಾ ಹೆ ಕ್ಯಾ ಮೊದಲ ಗೀತೆ
ಯೂಟ್ಯೂಬ್‌ನಲ್ಲಿ ‘ಸೋಚ್ ನಾ ಹೆ ಕ್ಯಾ’ ಎಂಬುದು ರಾಕೇಶ್–ನಿಲಿಮಾ ತಯಾರಿಸಿದ ಮೊದಲ ವಿಡಿಯೊ ಗೀತೆ. ಈ ಹಾಡಿಗೆ ನಿಲಿಮಾ ಅವರದೇ ಸಾಹಿತ್ಯವಿದೆ. ಇನ್ನೂ ಹಲವು ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ.
ಸದ್ಯ ಯೂಟ್ಯೂಬ್‌ನಲ್ಲಿ ಒಟ್ಟು ಆರು ಹೊಸ ಹಾಡುಗಳಿವೆ. ಇದೂವರೆಗಿನ ಇವರ ಸಂಗೀತ ಪಯಣದಲ್ಲಿ ನೂರಕ್ಕೂ ಅಧಿಕ ಹೊಸ ಸಾಹಿತ್ಯದ ಹಾಡುಗಳು ಸೃಷ್ಟಿಯಾಗಿವೆ.
ಈ ಎಲ್ಲ ಹಾಡುಗಳಿಗೆ ಸ್ವರ ಸಂಯೋಜನೆಯೂ ಆಗಿದೆ. ಆದರೆ ಅವುಗಳು ಇನ್ನೂ ಯೂಟ್ಯೂಬ್‌ಗೆ ಅಪ್‌ಲೋಡ್ ಅಗಿಲ್ಲ. ಸದ್ಯಕ್ಕೆ ಅಪ್‌ಲೋಡ್ ಮಾಡುವ ಯೋಚನೆಯೂ ಇಲ್ಲವಂತೆ. ಏಕೆಂದರೆ, ಮುಂದೆ ಇದೇ ಗೀತೆಗಳು ಯಾವುದಾದರೂ ಸಿನಿಮಾಕ್ಕೆ ಹೊಂದುವುದಾದರೆ, ಬಳಸಬಹುದು ಎಂಬುದು ಅವರ ಯೋಜನೆ.
ಸ್ಕೈಪ್‌ನಲ್ಲೇ ರಾಗ– ತಾಳ
ರಾಕೇಶ್ ಮತ್ತು ನಿಲಿಮಾ ಇಬ್ಬರೂ ಪರಿಚಯದ ವೇಳೆಯಲ್ಲಿ ಮಾತ್ರ ಮುಖಾಮುಖಿ ಭೇಟಿಯಾಗಿದ್ದು. ಅಷ್ಟು ಬಿಟ್ಟರೆ, ಉಳಿದಂತ ಎಲ್ಲ ಸಂಗೀತ ಸಂಭಾಷಣೆಗಳೂ ಸ್ಕೈಪ್‌ನಲ್ಲೇ (Skype) ನಡೆಯಿತು. ಹೊಸ ಹಾಡಿಗೆ ಸಾಹಿತ್ಯ ಬರೆದದ್ದು, ಸ್ವರ ಸಂಯೋಜನೆ ಮಾಡಿದ್ದು, ಸಾಹಿತ್ಯದಲ್ಲಿ ಬದಲಾವಣೆ, ಸ್ವರ ಏರಿಳಿತದ ತಪ್ಪುಗಳನ್ನು ತಿದ್ದಿದ್ದು, ಶಾಸ್ತ್ರೀಯ ಸಂಗೀತಕ್ಕೆ ಅಗತ್ಯವಿದ್ದ ಪಾಶ್ಚಾತ್ಯ ಸಂಗೀತದ ಟಚ್ ನೀಡಿದ್ದು ಎಲ್ಲವೂ ಸ್ಕೈಪ್‌ನಲ್ಲೇ.
ಅಂದ ಹಾಗೆ, ಈ ಜೋಡಿ ಮಹಿರಾ ಸಿನಿಮಾದ ನಾಲ್ಕು ಹಾಡುಗಳಿಗೆ ಸ್ವರ ಸಂಯೋಜನೆ ಮಾಡಿದೆ. ಅದು ಕೂಡ ಸ್ಕೈಪ್‌ನಲ್ಲೇ ನಡೆದಿದ್ದು ಎಂಬುದು ವಿಶೇಷ. ಈ ಸಿನಿಮಾದ ನಾಲ್ಕು ಹಾಡುಗಳಲ್ಲಿ ಒಂದು ಹಾಡನ್ನು ನಿಲಿಮಾ ಹಾಡಿದ್ದಾರೆ. ಉದ್ಯೋಗ ಮಾಡುತ್ತಲೇ, ಬಿಡುವಿನ ವೇಳೆಯಲ್ಲಿ ಹಾಡುಗಳಿಗೆ ಸ್ವರ ಸಂಯೋಜನೆ ಮಾಡಿದ್ದಾರೆ.
‘ತಂತ್ರಜ್ಞಾನ ಎಷ್ಟೇ ಮುಂದುವರಿದಿದ್ದರೂ, ಸಂಗೀತಕ್ಕೆ ಬೇಕಾದ ತಕ್ಷಣದ ಪ್ರತಿಕ್ರಿಯೆ, ಈ ಮಾಧ್ಯಮದ ಮೂಲಕ ಪಡೆಯುವುದು ಕಷ್ಟ. ಪರಸ್ಪರ ಎದುರು ಕುಳಿತು ತಪ್ಪುಗಳನ್ನು ತಿದ್ದಿದಂತೆ ಸ್ಕೈಪ್‌ನಲ್ಲಿ ಸಾಧ್ಯವಿಲ್ಲ. ಪ್ರತಿ ಹಾಡುಗಳಿಗೂ ಜೀವ ತುಂಬಬೇಕಾದ್ದರಿಂದ ತಾಳ್ಮೆ ಕಾಯ್ದುಕೊಳ್ಳುವುದು ಆದ್ಯತೆಯಾಗಿತ್ತು’ ಎಂದು ತಮ್ಮ ಅನುಭವ ಹಂಚಿಕೊಳ್ಳುತ್ತಾರೆ ಇವರು.
‘ಮೊದಲು ಫುಲ್‌ಟೈಮ್ ಕ್ರಿಯೇಟಿವ್ ಅಸೋಸಿಯೇಟ್ ವೃತ್ತಿಯಲ್ಲಿದ್ದೆ. ಕೆಲಸದ ಮಧ್ಯೆ ಕೆಲವೊಮ್ಮೆ ಸಂಗೀತಕ್ಕೆ ಸಮಯ ಕೊಡುವುದು ಕಷ್ಟವಾಗುತ್ತಿತ್ತು. ಗಿಟಾರ್ ಮುಟ್ಟದಿದ್ದರೆ ಕೈ ತುರಿಕೆ ಬಂದಹಾಗೆ ಆಗುತ್ತಿತ್ತು. ಈಗ ವೃತ್ತಿ ಬಿಟ್ಟು ಸಂಗೀತದಲ್ಲೇ ವೃತ್ತಿಯನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ಜತೆಗೆ ಕಾರ್ಪೋರೇಟ್ ಜಿಂಗಲ್ಸ್, ವಿಡಿಯೊ ಜಿಂಗಲ್ಸ್‌ಗಳನ್ನು ಮಾಡುತ್ತಿದ್ದೇನೆ.ನಮ್ಮ ಶಾಸ್ತ್ರೀಯ ಸಂಗೀತವನ್ನು ಬಿಟ್ಟು ಕೊಡಲು ಸಾಧ್ಯವಿಲ್ಲ. ಭವಿಷ್ಯದಲ್ಲಿ ಶಾಸ್ತ್ರೀಯ ಸಂಗೀತಕ್ಕೆ ಪಾಶ್ಚಾತ್ಯದ ಲೇಪನದೊಂದಿಗೆ ವಿಭಿನ್ನ ಆಸ್ವಾದವಿರುವ ಹಾಡುಗಳನ್ನು ನೀಡಬೇಕು ಎಂಬ ಕನಸುಗಳಿವೆ’ ಎನ್ನುತ್ತಾರೆ ರಾಕೇಶ್.
‘ಮಹಿರ’ದ ಗುಂಗಿನಲ್ಲಿ
ಮಹಿರ ಸಿನಿಮಾ ನಿರ್ದೇಶಕ ಮಹೇಶ್ ಗೌಡ ಅವರ ‘ಓ ಒಲವೇ’ ಎಂಬ ಕಿರುಚಿತ್ರಕ್ಕೆ ಈ ಹಿಂದೆಯೇ ಸಾಹಿತ್ಯ ಹಾಗೂ ಸಂಗೀತ ನೀಡಿದ್ದೆವು. ಲಂಡನ್‌ನಲ್ಲಿದ್ದ ಮಹೇಶ್ ಗೌಡ, ಒಂದು ದಿನ ಮನೆಗೆ ಬಂದು ‘ಮಹಿರ’ ಸಿನಿಮಾ ಹಾಡುಗಳಿಗೆ ಸ್ವರ ಸಂಯೋಜನೆ ಮಾಡುವಂತೆ ಕೇಳಿದ್ದರು. ಅಲ್ಲಿವರೆಗೆ ಯೂಟ್ಯೂಬ್ ಚಾನೆಲ್‌ಗೆ ಸೀಮಿತವಾಗಿದ್ದ ನಮ್ಮ ಸಂಗೀತ ಪ್ರತಿಭೆ, ಬೆಳ್ಳಿತೆರೆಯತ್ತ ಹೊರಟಿದ್ದು ಖುಷಿಯಾಗಿತ್ತು. ಅಲ್ಲದೇ, ಮೊದಲ ಅವಕಾಶ ಸಿಕ್ಕಾಗ ಸಂತೋಷ ಎನ್ನುವುದು ಆಕಾಶದಲ್ಲಿ ತೇಲುತ್ತಿತ್ತು. ನಾವು ಸ್ವರ ಸಂಯೋಜಿಸಿದ ಹಾಡುಗಳು ಬಿಡುಗಡೆಯಾಗುತ್ತಿದ್ದಂತೆ ಉತ್ತಮ ಪ್ರತಿಕ್ರಿಯೆಗಳು ಬಂದಿವೆ. ಎಲ್ಲರೂ ಹಾಡನ್ನು ಇಷ್ಟಪಡುತ್ತಿದ್ದಾರೆ. ಮಹಿರ ಸಿನಿಮಾ ನಮ್ಮ ಪಯಣಕ್ಕೆ ತಿರುವು ನೀಡುವ ಭರವಸೆಯಿದೆ’ ಎನ್ನುತ್ತಾರೆ ನಿಲಿಮಾ ರಾವ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.