ಮನೆ ಕಸ ಗುಡಿಸಿ ಮೂಲೆಯಲ್ಲಿ ಕೂರುವ ಪೊರಕೆಗಳದ್ದು ಎಂಥಾ ಅದ್ಭುತ ಲೋಕ, ಅದರ ಸುತ್ತಾ ಎಷ್ಟೆಲ್ಲಾ ನಂಬಿಕೆಗಳು, ನಿಷೇಧಗಳು, ಚರಿತ್ರೆ, ಪುರಾಣಗಳು. ಇಂಥ ಪೊರಕೆಗಳ ಲೋಕಕ್ಕೊಂದು ದೇವತೆಯೂ ಇದ್ದಾಳೆ, ಜೋಧಪುರದಲ್ಲೊಂದು ಮ್ಯೂಸಿಯಂ ಕೂಡಾ ಇದೆ.
***
ಅಸ್ಸಾಮಿನ ಫಲ್ಬರಿ ಹಳ್ಳಿಯ ಬುಡಕಟ್ಟು ಜನಾಂಗದ ಮನೆಯೊಂದರಲ್ಲಿ ಒಂದು ವಿಶಿಷ್ಟ ವಸ್ತು ನೋಡಿದೆವು. ಅತ್ಯಂತ ಕಲಾತ್ಮಕ, ಮೋಹಕ ಹಾಗೂ ಬೆರಗು ಹುಟ್ಟಿಸುವಂತಹ ವಸ್ತು ಅದು. ಅದೇನೆಂದು ಕುತೂಹಲದಿಂದ ಕೇಳಿದರೆ, ಅವರು ತೀರಾ ನಿರ್ಲಕ್ಷ್ಯದಿಂದ ‘ಪೊರಕೆ’ ಎಂದರು. ಎಂಟು ಜನರಿದ್ದ ನಮ್ಮೆಲ್ಲರ ಬಾಯಿಂದ ಒಂದೇ ಸಲ ‘ಪೊರಕೇನಾ’ ಎಂಬ ಉದ್ಗಾರ ಹೊರಬಿತ್ತು.
ನಮ್ಮ ಅನುಮಾನವನ್ನು ಪರಿಹರಿಸಲು ಹೆಣ್ಣುಮಗಳೊಬ್ಬಳು ಅಂಗಳ ಗುಡಿಸಿ ತೋರಿಸಿದಳು. ಹೌದು ಅದು ಪೊರಕೆಯೇ.
ಆದರೆ, ಅದರ ಹಿಡಿಕೆ, ಅದನ್ನು ಕಲಾತ್ಮಕವಾಗಿ ಹೆಣೆದಿರುವ ರೀತಿ ಬೆರಗುಗೊಳಿಸುವಂತಿತ್ತು. ಮೊಳೆಗೆ ಸಿಗಿಸಲು ಹಿಡಿಕೆಗೆ ಒಂದು ದಾರ, ನವಿಲು ಗರಿಯಂತೆ ಬಿಚ್ಚಿಕೊಂಡ ಮುಂಭಾಗ ನೋಡಲು ಸೊಗಸಾಗಿತ್ತು. ನಿಜಕ್ಕೂ ಅದೊಂದು ಆ್ಯಂಟಿಕ್ ಪೀಸ್. ನಮ್ಮ ಗುಂಪಿನವರೆಲ್ಲಾ ಅದರೊಟ್ಟಿಗೆ ಫೋಟೊ ತೆಗೆಸಿಕೊಂಡೆವು. ಪೊರಕೆಯೇ ರೂಪದರ್ಶಿ. ಅಲ್ಲಿನ ಕಾಡುಗಳಲ್ಲಿ ಸಿಗುವ ಹುಲ್ಲಿನಿಂದ ಹೆಣೆಯುತ್ತಾರಂತೆ ಅದನ್ನು.
ಆ ಕಲಾತ್ಮಕ ಪೊರಕೆಯನ್ನು ನೋಡಿ ಊರಿಗೆ ಬಂದ ಬಳಿಕ ಪೊರಕೆಗಳ ಲೋಕದತ್ತ ಗಮನಹರಿಯಿತು. ಹುಡುಕುತ್ತಾ ಹೋದಂತೆ ಸಾಧಾರಣ ದಿನಬಳಕೆ ವಸ್ತುವೆಂದುಕೊಂಡಿದ್ದ ಅನಿಸಿಕೆಯೆಲ್ಲಾ ತಲೆಕೆಳಗು. ಅಷ್ಟೊಂದು ವೈವಿಧ್ಯ ಪೊರಕೆಗಳಲ್ಲಿ.
ಎಲ್ಲರ ನಿತ್ಯದ ಬದುಕು ಚಾಲೂ ಆಗುವುದೇ ಪೊರಕೆಗಳಿಂದ. ಅವು ಸ್ವಚ್ಛತೆಯ ಸಾಧನಗಳು. ಅವುಗಳಿಲ್ಲದ ಮನೆಯೇ ಇಲ್ಲ. ಪೊರಕೆಗಳಲ್ಲಿ ಅಚ್ಚರಿಯಾಗುವಷ್ಟು ವೈವಿಧ್ಯ. ಹಳ್ಳಿಗಳಲ್ಲಂತೂ ಮನೆ ಒಳಗೆ, ಹೊರಗೆ, ಕೊಟ್ಟಿಗೆಗೆ, ಹಟ್ಟಿಗೆ, ಬೀದಿಗೆ, ಕಣಕ್ಕೆ, ಕುರಿ ರೊಪ್ಪಕ್ಕೆ ಈ ರೀತಿ ಪ್ರತಿಯೊಂದು ಸ್ಥಳಕ್ಕೂ ಬೇರೆ ಬೇರೆ ಪೊರಕೆಗಳನ್ನಿಟ್ಟಿರುತ್ತಾರೆ. ನಗರಗಳಲ್ಲಿ ಇಷ್ಟು ವೈವಿಧ್ಯ ಇಲ್ಲದಿದ್ದರೂ ಮೂರ‍್ನಾಲ್ಕು ಬಗೆಯನ್ನಂತೂ ಕಾಣಬಹುದು.
ಪೊರಕೆಯಲ್ಲಷ್ಟೇ ಅಲ್ಲ, ಅವುಗಳ ಹೆಸರಲ್ಲೂ ವೈವಿಧ್ಯವಿದೆ. ಬರಲು, ಹಿಪ್ಪು, ಕಡ್ಡಿಪೊರಕೆ, ಕಸಬರಿಗೆ, ಸಿಂಧಿಬರಿಗೆ, ಹಿಡಿಸೂಡಿ, ಹಿಡಿ, ಹಿಡ್ಲು, ಕುಂಚಮಟ್ಟೆ ಹೀಗೆ ಪ್ರದೇಶವಾರು ಹೆಸರುಗಳಿವೆ.
ಗ್ರಾಮೀಣರು ಹಿಂದೆಲ್ಲಾ ಸ್ಥಳೀಯವಾಗಿ ಸಿಗುವ ಕಡ್ಡಿ, ಸೊಪ್ಪು, ಗರಿಗಳಿಂದಲೇ ಪೊರಕೆ ಮಾಡಿಕೊಳ್ಳುತ್ತಿದ್ದರು. ಬೇಸಿಗೆಯ ಬಿಡುವಿನ ವೇಳೆಯಲ್ಲಿ ವರ್ಷಕ್ಕಾಗುವಷ್ಟು ಪೊರಕೆ ಕಡ್ಡಿಗಳನ್ನು ಕುಯ್ದು ಕಟ್ಟುವುದು ಸರ್ವೇಸಾಮಾನ್ಯ. ಹೆಣ್ಣುಮಕ್ಕಳು ತಲೆಮೇಲೆ ಪೊರಕೆಗಳನ್ನು ಹೊತ್ತು ನಗರಗಳಲ್ಲಿ ಮಾರುತ್ತಿದ್ದ ದೃಶ್ಯ 10-15 ವರ್ಷಗಳ ಹಿಂದೆ ನೋಡಬಹುದಿತ್ತು. ಈಗ ಅಪರೂಪ.
ಎಂತೆಂಥಾ ಪೊರಕೆಗಳಿದ್ದವು ನೋಡಿ...
ಹಂಚಿಕಡ್ಡಿ ಪೊರಕೆ ಅತ್ಯಂತ ಜನಪ್ರಿಯ. ಬಯಲುಸೀಮೆಯ ಕಾಡು, ಹೊಲ, ಬದುಗಳಲ್ಲಿ ಬೆಳೆಯುವ ಹಂಚಿ ತೆಂಡೆಗಳ ಕಡ್ಡಿಗಳನ್ನು ಬೇಸಿಗೆಯಲ್ಲಿ ಕುಯ್ದು ಮಾಳಿಗೆ ಮೇಲೆ ಒಣಗಿಸಿ ತುದಿಯಲ್ಲಿನ ಊಗುಮುಳ್ಳನ್ನು ಉದುರಿಸಿ ಕಟ್ಟಿ ಎತ್ತಿಡುತ್ತಿದ್ದರು. ಮನೆ ಒಳಾಂಗಣ ಗುಡಿಸಲು ಹೇಳಿ ಮಾಡಿಸಿದ್ದು. ತೇವದ ನೆಲಕ್ಕೆ ಸೂಕ್ತವಲ್ಲ. ಇದರ ಕೆಲಸ ಕಸ ತೆಗೆಯಲಿಕ್ಕೆ ಸೀಮಿತವಲ್ಲ. ಹಬ್ಬಗಳಲ್ಲಿ ಮಾವಿನ ತೋರಣ ಕಟ್ಟಲು ಇದರ ಕಡ್ಡಿಗಳೇ ಆಗಬೇಕು. ಮಕ್ಕಳಿಗೆ ದೃಷ್ಟಿಯಾದಾಗ, ಹೊಟ್ಟೆನೋವು ಬಂದಾಗ ಹಂಚಿ ಪೊರಕೆ ಕಡ್ಡಿಗಳಿಂದ ನೀವಳಿಸಿ ಸುಡುತ್ತಿದ್ದರು.
ಇಡುಗನ ಬರಲನ್ನು ಈಚಲು ಗಿಡದ ಗರಿಗಳಿಂದ ಕಟ್ಟುತ್ತಾರೆ. ನುಣುಪಾದ ನೆಲ ಗುಡಿಸಲು, ಗೋಡೆಗೆ ಸುಣ್ಣ ಹೊಡೆಯಲು ಹೆಚ್ಚಾಗಿ ಸೂಕ್ತ. ಅಂಗರು ಅಥವಾ ಬಂದರೆ ಪೊರಕೆ ದನಗಾಹಿಗಳ ಅಚ್ಚುಮೆಚ್ಚು. ಕುರಿ, ಮೇಕೆಗಳ ರೊಪ್ಪ ಗುಡಿಸಲು ಇದೇ ಆಗಬೇಕು. ತುಂಬಾ ದಿವಸ ಬಾಳಿಕೆ ಬರುತ್ತದೆ. ಪೊದೆಯ ರೀತಿ ಕಾಡು, ಬಯಲುಗಳಲ್ಲಿ ಬೆಳೆಯುವ ಬಂದರೆ ಗಿಡದ ಮೊಳದುದ್ದದ ಕಡ್ಡಿಗಳನ್ನು ತಂದು ಬುಡದ ಎಲೆಗಳನ್ನು ಕಿತ್ತು, ಬಿಗಿಯಾಗಿ ದಾರ ಕಟ್ಟಿ ಭಾರ ಹೇರುತ್ತಾರೆ. ಭಾರಕ್ಕೆ ಇಸ್ತ್ರಿ ಮಾಡಿದಂತೆ ನಿರ್ದಿಷ್ಟ ಆಕಾರ ಪಡೆಯುತ್ತವೆ ಪೊರಕೆಗಳು. ಹಂಚಿ ಪೊರಕೆಯಂತೆ ನೇರ ಇರುವುದಿಲ್ಲ. ಮುಂಭಾಗ ಅಗಲವಾಗಿರುತ್ತದೆ.
ಕೊಟ್ಟಿಗೆ, ಬೀದಿ ಹಾಗೂ ಕಣ ಗುಡಿಸಲು ಬಳಕೆಯಾಗುವುದು ಸೀರೆಕಡ್ಡಿ ಪೊರಕೆ. ರಸ್ತೆ ಬದಿ, ಹೊಲದ ಬದುಗಳಲ್ಲಿ ಬೆಳೆಯುವ ಗಿಡದಿಂದ ಸಿದ್ಧವಾದ ಪೊರಕೆ ಇದು. ಬಿದಿರು ಪೊರಕೆಯೂ ಹೆಚ್ಚಾಗಿ ಕೊಟ್ಟಿಗೆ ಗುಡಿಸಲು ಬಳಕೆಯಾಗುತ್ತದೆ. ಆದಿವಾಸಿಗಳಿಂದ ಹೆಚ್ಚು ಬಳಕೆಯಾಗುತ್ತದೆ. ಉತ್ತರ ಕರ್ನಾಟಕದಲ್ಲಿ ತೊಗರಿ ಕಡ್ಡಿ ಪೊರಕೆಗಳನ್ನು ಈ ಉದ್ದೇಶಕ್ಕೆ ಹೆಚ್ಚು ಬಳಸುತ್ತಾರೆ.
ಹಿಂದೆ ರಾಗಿ ಕಣ ಮಾಡುವಾಗ ಉತ್ತರಾಣಿ ಗಿಡದ ಕಡ್ಡಿಗಳಿಂದ ಮಾಡಿದ ಪೊರಕೆ ವ್ಯಾಪಕ ಬಳಕೆಯಲ್ಲಿತ್ತು. ಕಾಂಡದಲ್ಲಿ ಕೊಂಕಿಯಂತಹ ಮುಳ್ಳು ಹೊಂದಿರುವ ಉತ್ತರಾಣಿ ಪೊರಕೆಗಳು ರಾಗಿಯ ರಾಶಿ ತೂರುವಾಗ ಬರುವ ಹೊಟ್ಟನ್ನು ಗುಡಿಸಲು ಬಳಸಲ್ಪಡುತ್ತಿದ್ದವು. ರಾಗಿ ಕಣದಲ್ಲಿ ಇದನ್ನು ಪೂಜ್ಯಭಾವನೆಯಿಂದ ಕಾಣಲಾಗುತ್ತಿತ್ತು.
ತೆಂಗಿನ ಕಡ್ಡಿ ಪೊರಕೆಗಳ ಬಳಕೆ 90ರ ದಶಕದ ನಂತರ ಹೆಚ್ಚುತ್ತಾ ಹೋಯಿತು. ತೇವದ ನೆಲಕ್ಕೆ ಹೇಳಿ ಮಾಡಿಸಿದ್ದು. ತಿಪಟೂರು, ಅರಸೀಕೆರೆ, ಹಾಸನ, ತುಮಕೂರು, ಚಿತ್ರದುರ್ಗ ಭಾಗಗಳಲ್ಲಿ ಈಗ ಇದೊಂದು ದೊಡ್ಡ ಉದ್ಯಮ. ಸಾವಿರಾರು ಕುಟುಂಬಗಳಿಗೆ, ಹೆಣ್ಣುಮಕ್ಕಳಿಗೆ ಆದಾಯ ತರುವ ಮಾರ್ಗ. ಇಲ್ಲಿಂದ ಉತ್ತರ ಭಾರತಕ್ಕೆ ಟನ್ನುಗಟ್ಟಲೆ ತೆಂಗಿನ ಪೊರಕೆಗಳು ರವಾನೆಯಾಗುತ್ತವೆ.
ತೆಂಗಿನ ಕಡ್ಡಿ ಪೊರಕೆ ನಮ್ಮಲ್ಲಿ ಬಳಕೆಯಲ್ಲಿರುವ ಪೊರಕೆಗಳಲ್ಲೇ ಅತ್ಯಂತ ಬಿರುಸಾದುದು. ಹೆಚ್ಚು ಬಾಳಿಕೆಯೂ ಬರುತ್ತದೆ. ಉಳಿದವು ಮೃದು, ಬೇಗ ಸವೆಯುತ್ತವೆ. ಅಲ್ಲದೆ ಬೀದಿಯ ಕಸ ಗುಡಿಸಲು ತೆಂಗಿನ ಕಡ್ಡಿಗಿಂತ ಮಿಗಿಲಾದ ಪೊರಕೆ ಮತ್ತೊಂದಿಲ್ಲ. ಇವು ಉದ್ದವಿದ್ದು ಸ್ವಲ್ಪ ಬಾಗಿ ಗುಡಿಸಲು ಅನುಕೂಲಕರ. ಮುನಿಸಿಪಾಲಿಟಿ ಕಸ ಗುಡಿಸುವ ಸಿಬ್ಬಂದಿ ಉದ್ದನೆಯ ಬಿದಿರುಗಳಕ್ಕೆ ಈ ಪೊರಕೆಯನ್ನು ಹಿಮ್ಮುಖವಾಗಿ (ಬುಡದ ಭಾಗದಲ್ಲಿ ಗುಡಿಸುವಂತೆ) ಕಟ್ಟಿಕೊಂಡು ಬಳಸುತ್ತಾರೆ. ಏಕೆಂದರೆ ಕಡ್ಡಿಗಳ ತುದಿ ಭಾಗಕ್ಕೆ ಹೋಲಿಸಿದರೆ ಬುಡದ ಭಾಗವು ದಪ್ಪ ಮತ್ತು ಗಡುಸಾಗಿರುತ್ತದೆ.
ಹಿಂದೆ ಹೊಡೆಯುವ ಅಸ್ತ್ರಗಳಾಗಿಯೂ ಪೊರಕೆಗಳು ಬಳಕೆಯಾಗುತ್ತಿದ್ದವು. ಎಷ್ಟೋ ಸಿನಿಮಾಗಳಲ್ಲಿ ಅಮ್ಮ ಮಗಳಿಗೆ ಪೊರಕೆಯಿಂದ ಬಾರಿಸುವ ದೃಶ್ಯವನ್ನು ನೋಡಿದ್ದೇವೆ. ನಮ್ಮ ರಾಜ್ಯದಲ್ಲಿ ಪೊರಕೆ ವೈವಿಧ್ಯ ಇದೆಯಾದರೂ ಅಂತಹ ಕಲಾತ್ಮಕತೆ ಇಲ್ಲ. ಆದರೆ ಉತ್ತರ ಭಾರತ ಮತ್ತು ಈಶಾನ್ಯ ಭಾರತದಲ್ಲಿ ಇರುವ ಪೊರಕೆಗಳ ಸೊಬಗೇ ಬೇರೆ. ಹಿಡಿಕೆಗಳಿಗೆ ಬಗೆಬಗೆಯ ಅಲಂಕಾರ ಮಾಡುವುದು ಅವರ ವೈಶಿಷ್ಟ್ಯ.
ಅಲ್ಲಿನವರ ಪೊರಕೆ ಪ್ರೀತಿ ಎಷ್ಟಿದೆಯೆಂದರೆ ಜೋಧಪುರದಲ್ಲಿ ಪೊರಕೆ ಮ್ಯೂಸಿಯಮ್ಮನ್ನೇ ಮಾಡಿ
ದ್ದಾರೆ. ಇಲ್ಲಿ 260ಕ್ಕೂ ಅಧಿಕ ಪೊರಕೆಗಳ ಸಂಗ್ರಹವಿದೆ. ಇಲ್ಲಿ ಪೊರಕೆ ಬಗ್ಗೆ ಕುತೂಹಲಕಾರಿ ಮಾಹಿತಿಗಳಿವೆ. ಉದಾಹರಣೆಗೆ ಬಂಜಾರ ಸಮುದಾಯವು ಪನ್ನಿ ಎಂಬ ಹುಲ್ಲಿನಿಂದ ಪೊರಕೆ ತಯಾರಿಸಿದರೆ, ಕೋಲಿ, ಭಗರಿಯಾ ಸಮುದಾಯಗಳಿಗೆ ಈಚಲು ಪೊರಕೆ ಶ್ರೇಷ್ಠ. ಅಲ್ಲದೆ ದಲಿತರು ಸಾಮಾನ್ಯವಾಗಿ ಬಿದಿರು ಪೊರಕೆಗಳನ್ನು ಬಳಸುತ್ತಾರೆ. ಹೀಗೆ...
ಪೊರಕೆ ವಿಚಾರದಲ್ಲಿ ಪಶ್ಚಿಮ ಬಂಗಾಳ ಉಳಿದೆಲ್ಲಾ ರಾಜ್ಯಗಳನ್ನೂ ಮೀರಿಸುತ್ತದೆ. ಏಕೆಂದರೆ ಇಲ್ಲಿ ಪೊರಕೆ ದೇವರೂ ಉಂಟು. ಹೆಸರು ಶೀತಲ ಮಾತಾ. ಸ್ವಚ್ಛತೆಯ ಅಧಿದೇವತೆಯೆಂದೇ ಪ್ರಸಿದ್ಧ. ಈಕೆಯ ಎಡಗೈಯಲ್ಲಿ ಪೊರಕೆ ಇರುತ್ತದೆ. ಸಿಡುಬು ನಿವಾರಿಸುತ್ತಾಳೆ ಎಂಬ ನಂಬಿಕೆ ಇದೆ. ಗೃಹಿಣಿಯರು ಪೊರಕೆಯನ್ನೇ ಹರಕೆ ರೂಪದಲ್ಲಿ ಅರ್ಪಿಸುತ್ತಾರೆ. ದೇವಾಲಯದ ಪ್ರಾಂಗಣದಲ್ಲಿ ಅಡ್ಡಾಡಿದರೆ ಚಿಕ್ಕ, ತುಂಡ, ಉದ್ದ, ದಪ್ಪ, ತರಹೇವಾರಿ ಹುಲ್ಲು, ಕಡ್ಡಿ, ಸೊಪ್ಪುಗಳಿಂದ ತಯಾರಿಸಿದ ಪೊರಕೆ ವೈವಿಧ್ಯವನ್ನೇ ಕಾಣಬಹುದು.
ರಾಜಸ್ಥಾನದ ನಾಗೌರ್ ಜಿಲ್ಲೆಯಲ್ಲಿಯೂ ಒಂದು ಪೊರಕೆ ದೇವತೆಯಿದೆ. ಬುಂಗ್ರಿ ಮಾತಾ ಎನ್ನುತ್ತಾರೆ. ದೇಶದ ಬಹುತೇಕ ಜನಸಮುದಾಯ ಪೊರಕೆಯನ್ನು ಲಕ್ಷ್ಮಿ ಎಂದು ನಂಬುತ್ತಾರೆ.
ಈ ಪೊರಕೆ ಆಧಾರಿತ ಆಚರಣೆ, ನಂಬಿಕೆ, ಪೂಜನೀಯ ಭಾವಗಳು ನಮಗಷ್ಟೇ ಮೀಸಲಲ್ಲ. ಜಗತ್ತಿನಾದ್ಯಂತ ಕಾಣಬಹುದು. ಪ್ರಾಚೀನ ರೋಮ್‌ನಲ್ಲಿ ದೇವೇರಾ ಹೆಸರಿನ ದೇವತೆಯು ಶುದ್ಧೀಕರಣಕ್ಕೆ ಬಳಸುವ ಪೊರಕೆಗಳ ಪೋಷಕಿಯೆಂದೇ ಪ್ರಸಿದ್ಧ. ಚೀನಾದಲ್ಲಿ ಸಾವೋ ಚಿಂಗ್ ನಿಯಾಂಗ್ ನಿಯಾಂಗ್ ಪೊರಕೆಗಳ ದೇವತೆ.
ಇನ್ನು ಜನಪ್ರಿಯ ಹಾಲಿವುಡ್ ಸಿನಿಮಾ ಹ್ಯಾರಿ ಪಾಟರ್ ಸರಣಿಗಳಲ್ಲಿ ಬರುವ ಮಾಯಾ ಪೊರಕೆಯನ್ನು ಸಿನಿಪ್ರಿಯರು ಮರೆಯಲು ಸಾಧ್ಯವೇ? ನಮ್ಮ ದೇಶದಲ್ಲಿ ಆಮ್ ಆದ್ಮಿ ಪಕ್ಷದ ಗುರುತೇ ಪೊರಕೆ. ಉದ್ದದ ಪೊರಕೆ ಹಿಡಿದು ಗುಡಿಸುವಂತೆ ಪೋಸು ಕೊಡುವ ರಾಜಕಾರಿಣಿಗಳ ಫೋಟೊಗಳು ಆಗಾಗ ಪ್ರಕಟವಾಗುತ್ತಲೇ ಇರುತ್ತವೆ.
ಮನೆ ಕಸ ಗುಡಿಸಿ ಮೂಲೆಯಲ್ಲಿ ಕೂರುವ ಪೊರಕೆಗಳದ್ದು ಎಂಥಾ ಅದ್ಭುತ ಲೋಕ, ಅದರ ಸುತ್ತಾ ಎಷ್ಟೆಲ್ಲಾ ನಂಬಿಕೆಗಳು, ನಿಷೇಧಗಳು, ಚರಿತ್ರೆ, ಪುರಾಣಗಳು. ಇಷ್ಟೆಲ್ಲಾ ಇತಿಹಾಸವಿರುವ, ಹಿಂದೆ ಮನೆಮನೆಯಲ್ಲಿ ತಯಾರಾಗುತ್ತಿದ್ದ ಪೊರಕೆಗಳು ಕ್ರಮೇಣ ಕಂಪನಿಗಳ ಸರಕಾದವು. ಈಗಂತೂ ಇಡೀ ಭಾರತಕ್ಕೆ ಕೆಲವೇ ಕಂಪನಿಗಳ ಪೊರಕೆಗಳು ಸರಬರಾಜಾಗುತ್ತವೆ. ಯಾವುದೇ ಅಂಗಡಿ ಮುಂದೆ ನೋಡಿದರೂ ಇವನ್ನೇ ಮಾರಾಟಕ್ಕಿಟ್ಟಿರುತ್ತಾರೆ. ಇನ್ನು ತೇವದ ಜಾಗ,ಬಚ್ಚಲುಮನೆಗಳನ್ನು ಪ್ಲಾಸ್ಟಿಕ್ ಪೊರಕೆಗಳು ಆಕ್ರಮಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.