ADVERTISEMENT

ಅಡುಗೆ ಮನೆಯಲ್ಲಿ ಕುದಿಯುವ ಒತ್ತಡ

ಸುನಿಧಿ ಆರ್‌.ಎಸ್‌.
Published 13 ಆಗಸ್ಟ್ 2021, 19:30 IST
Last Updated 13 ಆಗಸ್ಟ್ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಈಗಿನ್ನೂ 32ರ ಹರೆಯದ ಮುಕ್ತಾಗೆ ಅಡುಗೆ ಮನೆ ಪ್ರವೇಶಿಸುವುದೆಂದರೆ ಕೋಪವೇ ಬಂದು ಬಿಡುತ್ತದೆ. ಒಂದು ದಿನವಂತೂ ಪಾತ್ರೆಗಳನ್ನೆಲ್ಲ ಗೋಡೆಗೆ ಎಸೆದು ಸಿಟ್ಟು ತೀರಿಸಿಕೊಂಡಾಗ ಮನೆಯವರೆಲ್ಲ ಆತಂಕದಿಂದ ಆಕೆಯ ಆರೋಗ್ಯವನ್ನು ವಿಚಾರಿಸಿಕೊಂಡಿದ್ದರು.

‘ಕಚೇರಿಗೆ ಹೋಗುವಾಗ ಕೂಡ ಬೆಳಗಿನ ಉಪಾಹಾರ, ನನಗೆ, ಪತಿಗೆ ಹಾಗೂ ಮಕ್ಕಳ ಡಬ್ಬಿ ತುಂಬಿಸಲು ಅಡುಗೆ ಮಾಡಬೇಕಿತ್ತು. ಆದರೂ ಒತ್ತಡ ಎನಿಸಿರಲಿಲ್ಲ. ಕಳೆದ ಒಂದೂವರೆ ವರ್ಷದಿಂದ ಮನೆಯಿಂದಲೇ ಕಚೇರಿ ಕೆಲಸ. ಆರಾಮವಾಗಿ ಎಲ್ಲವನ್ನೂ ಮಾಡಬಹುದು ಎಂದುಕೊಂಡರೆ ಎಲ್ಲಾ ಉಲ್ಟಾ ಆಗಿದೆ. ಕೆಲಸದ ಮಧ್ಯೆ ಗಡಿಬಿಡಿಯಲ್ಲಿ ಮಾಡಬೇಕು, ಆದರೂ ಮುಗಿಯುವುದೇ ಇಲ್ಲ. ಸಾಕಾಗಿಬಿಟ್ಟಿದೆ’ ಎನ್ನುವ ಮುಕ್ತ, ‘ಈ ಒತ್ತಡದಿಂದ ದೈಹಿಕವಾಗಿ, ಮಾನಸಿಕವಾಗಿ, ಭಾವನಾತ್ಮಕವಾಗಿ ಖಾಲಿಯಾಗಿಬಿಟ್ಟಿದ್ದೇನೆ. ಈ ‘‘ಬರ್ನ್‌ಔಟ್‌’’ ನಿಂದಾದ ಬಳಲಿಕೆಗೆ ಆಪ್ತ ಸಮಾಲೋಚಕರ ಸಲಹೆಗೆ ಮೊರೆ ಹೋಗಿದ್ದೇನೆ’ ಎಂದು ಅಳಲು ತೋಡಿಕೊಳ್ಳುತ್ತಾರೆ.

ಟಿವಿ ಚಾನೆಲ್‌, ಡಿಜಿಟಲ್‌ ಮಾಧ್ಯಮದಲ್ಲಿ ಕೆಲಸ ಮಾಡಿರುವ ಮುಕ್ತಾಗೆ ಈ ತರಹದ ಒತ್ತಡ, ಅದರಿಂದಾಗುವ ಖಾಲಿತನ ಹೊಸದೇನಲ್ಲ. ಆದರೆ ಕೋವಿಡ್‌–19, ಅದರಿಂದಾದ ಹತ್ತಾರು ಸಮಸ್ಯೆಗಳು.. ಇವಕ್ಕೆಲ್ಲ ಪರಿಹಾರವೇ ಇಲ್ಲವೇ ಎನ್ನುವಷ್ಟು ಹತಾಶೆ ಮೂಡಿಸುವಂಥದ್ದು. ಹೀಗಾಗಿ ಸಣ್ಣಪುಟ್ಟ ಕೆಲಸಗಳೂ ಕಿರಿಕಿರಿ ಉಂಟು ಮಾಡುತ್ತವೆ. ಅದರಲ್ಲೂ ಅಡುಗೆ ಮನೆ ಹೊಕ್ಕರೆ ಹಲವು ಮಹಿಳೆಯರಿಗೆ ಇಂತಹ ಕೋಪ ಮತ್ತು ಹತಾಶೆ ನಿಯಂತ್ರಿಸಲಾಗದಷ್ಟು ಮಿತಿಮೀರಿ, ತಾಳ್ಮೆ ಕಳೆದುಕೊಂಡು ಕುಟುಂಬದ ಇತರ ಸದಸ್ಯರೂ ನೆಮ್ಮದಿ ಕಳೆದುಕೊಳ್ಳುವಂತೆ ಮಾಡುತ್ತಿದ್ದಾರೆ ಎನ್ನುತ್ತದೆ ಭಾರತವೂ ಸೇರಿದಂತೆ ಹಲವು ದೇಶಗಳಲ್ಲಿ ಯುನೆಸ್ಕೊ ನಡೆಸಿದ ಸಮೀಕ್ಷೆಯ ವರದಿ.

ADVERTISEMENT

‘ಮೊದಲೆಲ್ಲ ಅಡುಗೆ ಮನೆಯೆಂದರೆ ಒತ್ತಡ ಕಡಿಮೆ ಮಾಡಿಕೊಳ್ಳುವ ಜಾಗವಾಗಿತ್ತು. ಇಷ್ಟವಾದ ಅಡುಗೆ ಮಾಡುತ್ತ ಖುಷಿಪಡುತ್ತಿದ್ದೆ. ಆದರೆ ಈಗ ಅಡುಗೆ ಬಗ್ಗೆ ಯೋಚಿಸಿದರೇ ಸಿಟ್ಟು ಬಂದು ಬಿಡುತ್ತದೆ. ಎಷ್ಟೋ ಸಲ ಸಮೀಪದ ಹೋಟೆಲ್‌ನಿಂದ ಪಾರ್ಸೆಲ್‌ ತಂದು ತಿಂದಿದ್ದೇವೆ. ಝೊಮ್ಯಾಟೊ, ಸ್ವಿಗ್ಗಿಯಿಂದ ತರಿಸಿದ್ದೇನೆ. ಕೆಲವು ಸಲ ಇವೆಲ್ಲ ದಿನಾ ತಿಂದರೆ ಆರೋಗ್ಯ ಹಾಳಾಗುತ್ತದೆ ಎಂಬ ಆಲೋಚನೆ ಬಂದು ಅಸಹಾಯಕತೆಯಿಂದ ನನ್ನ ಮೇಲೆ ನನಗೇ ಬೇಸರ ಬಂದುಬಿಡುತ್ತದೆ’ ಎನ್ನುತ್ತಾಳೆ ಬೆಂಗಳೂರಿನ ಮ್ಯಾನೇಜ್‌ಮೆಂಟ್‌ ಏಜೆನ್ಸಿಯೊಂದರಲ್ಲಿ ಕೆಲಸ ಮಾಡುತ್ತಿರುವ ಕೋಯಲ್‌ ಕಾಮತ್‌.

ಅಡುಗೆಯೆಂದರೆ ಒತ್ತಡವೂ ಕೊತಕೊತ!

ಹೆಚ್ಚಿನ ಉದ್ಯೋಗಸ್ಥ ಮಹಿಳೆಯರಿಗೆ ಊಟ, ತಿಂಡಿ, ಅಡುಗೆ ವಿಷಯ ಬಂದ ಕೂಡಲೇ ತಾಳ್ಮೆ ಕಳೆದುಕೊಂಡಂತಾಗಿಬಿಡುತ್ತದಂತೆ. ಏನು ತಯಾರಿಸಬೇಕು, ಅದಕ್ಕೆ ಎಲ್ಲಿಂದ ತರಕಾರಿ, ಇತರ ಸಾಮಗ್ರಿಗಳನ್ನು ತರಬೇಕು ಎಂಬ ವಿಷಯದಿಂದ ಹಿಡಿದು, ಸೊಪ್ಪು, ಮಾಂಸವಾದರೆ ಶುಚಿಗೊಳಿಸುತ್ತ ಸಮಯ ವ್ಯರ್ಥ ಮಾಡಬೇಕಲ್ಲ ಎಂಬಲ್ಲಿವರೆಗಿನ ಆಲೋಚನೆಗಳು ಮಾನಸಿಕ ಒತ್ತಡ ಸೃಷ್ಟಿಸಿಬಿಡುತ್ತವೆ. ಜೊತೆಗೆ ಕೋವಿಡ್‌ ಭಯದಿಂದ ತರಕಾರಿ, ಮಾಂಸ– ಮೀನು ಎಲ್ಲವನ್ನೂ ಉಪ್ಪು ನೀರು ಹಾಕಿ ಶುಚಿಗೊಳಿಸುವ ಹೆಚ್ಚುವರಿ ಕೆಲಸ ಬೇರೆ.

‘ಮನೆಯಲ್ಲಿ ವಯಸ್ಸಾದ ಅತ್ತೆ ಇದ್ದಾರೆ. ಪತಿ, ಇಬ್ಬರು ಮಕ್ಕಳ ಜೊತೆ ನನ್ನ ಅಕ್ಕನ ಮಗನೂ ನಮ್ಮ ಮನೆಯಲ್ಲೇ ಇರುವುದು. ಇಷ್ಟು ಮಂದಿಗೆ ಅಡುಗೆ ಮಾಡುವುದು, ಮಧ್ಯೆ ನನ್ನ ಕಚೇರಿ ಕೆಲಸ ಎಂದೆಲ್ಲ ಸುಸ್ತಾಗಿಬಿಡುತ್ತದೆ. ಇದು ಹೀಗೇ ಮುಂದುವರಿದರೆ ಖಂಡಿತ ಮನಶ್ಶಾಸ್ತ್ರಜ್ಞರ ಬಳಿಗೆ ಹೋಗಬೇಕಷ್ಟೆ’ ಎಂದು ಅಲವತ್ತುಕೊಳ್ಳುವ ಸ್ನೇಹಿತೆ ರುಚಿತಾ ಜತ್ಕರ್‌, ‘ಈ ಕೋವಿಡ್‌ ಎಂಬ ಜಾಗತಿಕ ಪಿಡುಗಿನಿಂದ ಅಡುಗೆ, ಆಹಾರ, ತಿನ್ನುವುದು... ಇವೆಲ್ಲ ಶಬ್ದಗಳು ಕಿರಿಕಿರಿ ಹುಟ್ಟಿಸುವಂತಾಗಿಬಿಟ್ಟಿವೆ’ ಎಂದು ಬೇಸರದಿಂದ ಮುಖ ಹಿಂಡುತ್ತಾಳೆ. ಮಕ್ಕಳು ತಿಂಡಿ ಬೇಕೆಂದರೆ ಸಿಟ್ಟಾಗಿ ಅವರ ಮೇಲೆ ರೇಗುವುದು, ಅಡುಗೆ ಮಾಡಲು ಹೋದಾಗ ಯಾವುದೋ ಬೇಳೆ, ಮಸಾಲೆ ಅಥವಾ ಒಗ್ಗರಣೆಗೆ ಕರಿಬೇವು ಸಿಗದಿದ್ದರೂ ಸಾಕು ಕೋಪದಿಂದ ಕೂಗಾಡುವುದು, ಹೆಚ್ಚು ಶುಚಿ ಮಾಡಬೇಕಾದ ಸೊಪ್ಪಿನಂತಹ ತರಕಾರಿ ಅಥವಾ ಕತ್ತರಿಸಲು ಹೆಚ್ಚು ಸಮಯ ಬೇಡುವಂತಹ ಬೆಂಡೆಕಾಯಿಯಂತಹ ತರಕಾರಿ ತಂದರೂ ಕೂಡ ತಾಳ್ಮೆಗೆಟ್ಟಂತೆ ವರ್ತಿಸುವುದು... ಇವೆಲ್ಲ ಈ ಅಡುಗೆಯಿಂದ ಸೃಷ್ಟಿಯಾದ ಬಳಲಿಕೆ ಅಥವಾ ಬರ್ನ್‌ಔಟ್‌ ಎನ್ನುತ್ತಾರೆ ತಜ್ಞರು.

ಒತ್ತಡದ ಜೊತೆ ಬಳಲಿಕೆಯೂ ಉಚಿತ

‘ಜಾಸ್ತಿ ಕೆಲಸದಿಂದ ಉಂಟಾಗುವ ಒತ್ತಡದಿಂದ ಇಂತಹ ಬರ್ನ್‌ಔಟ್‌ ಅಥವಾ ಸಾಮಾನ್ಯವಾಗಿ ಹೇಳುವುದಾದರೆ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಬಳಲಿಕೆ ತಲೆದೋರುತ್ತದೆ. ಮುಂಚೆ ಇದಕ್ಕೆಲ್ಲ ಸಿಟ್ಟು ಎನ್ನುವುದು ರೂಢಿಯಲ್ಲಿತ್ತು. ಆದರೆ ಇದೊಂದು ಸಮಸ್ಯೆ, ಅದೂ ಆಧುನಿಕ ಜೀವನಶೈಲಿಯಿಂದ ತಲೆದೋರುವ ಒತ್ತಡವನ್ನು ಸರಿಯಾಗಿ ನಿರ್ವಹಣೆ ಮಾಡಲು ಸಾಧ್ಯವಾಗದಿದ್ದರೆ ಕ್ರಮೇಣ ಹೆಚ್ಚಾಗುವ ತೀವ್ರತರದ ತೊಂದರೆ ಎಂದು ಪರಿಗಣಿಸಲಾಗಿದೆ’ ಎನ್ನುತ್ತಾರೆ ಮನಶ್ಶಾಸ್ತ್ರಜ್ಞೆ ಡಾ. ಪ್ರೇಮಾ ಸುಜಯ್‌.

ಅವರ ಪ್ರಕಾರ ಈ ಬಳಲಿಕೆ ಸಾಮಾನ್ಯವಾಗಿ ಉದ್ಯೋಗದಿಂದ ತಲೆದೋರುವಂಥದ್ದು. ಆದರೆ ಕೋವಿಡ್‌, ಲಾಕ್‌ಡೌನ್‌ ಸಂದರ್ಭದಲ್ಲಿ ನಾವು ಬದುಕಬೇಕಾದ ರೀತಿ ಕೂಡ ಈ ಸಮಸ್ಯೆಯನ್ನು ಹೆಚ್ಚು ಮಾಡುತ್ತಿದೆ. ಬೇರೆ ದಿನಗಳಲ್ಲಿ ನಿತ್ಯದ ಬರ್ನ್‌ಔಟ್‌ ಎಂಬ ಕೆಲಸದ ಸುಸ್ತು ಸಂಜೆ ಕಚೇರಿಯಿಂದ ಹೊರಟ ಕೂಡಲೇ ಕಡಿಮೆಯಾಗುತ್ತಿತ್ತು. ಆದರೆ ಈಗ ಮನೆಯಿಂದಲೇ ಕಚೇರಿ ಕೆಲಸ ಮಾಡುವುದರಿಂದ ಈ ರೀತಿಯ ಬಳಲಿಕೆ ಹೆಚ್ಚಾಗಿದ್ದು, ಬಹುತೇಕ ಮಹಿಳೆಯರಿಗೆ ತಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ.

ಕಾರಣಗಳು ಹತ್ತಾರು

ಹೀಗಾಗಿ ಈ ಹಿಂದೆ ಖುಷಿಪಡುತ್ತಿದ್ದ ಕೆಲಸಗಳೂ ಕೂಡ ನಕಾರಾತ್ಮಕ ಪರಿಣಾಮ ಬೀರುತ್ತಿವೆ ಎಂಬುದು ಡಾ. ಪ್ರೇಮಾ ಅವರ ಅಭಿಮತ. ನಾವು ಕೆಲಸದಿಂದ ದೂರ ಸರಿಯುವಂತಹ ಮನೋಭಾವ ಬೆಳೆಸಿಕೊಂಡಿದ್ದೇವೆ. ಅದರಲ್ಲಿ ಆಸಕ್ತಿ ಕಳೆದುಕೊಂಡಿದ್ದು, ನಮಗೆ ನಾವೇ ಪ್ರೇರೇಪಣೆ ಮಾಡಿಕೊಳ್ಳುವುದು ಕಷ್ಟವೆನಿಸುತ್ತದೆ. ಅಡುಗೆ ವಿಷಯವನ್ನೇ ತೆಗೆದುಕೊಂಡರೆ, ಕಡಿಮೆ ಕೆಲಸವಿದ್ದರೂ ಹೆಚ್ಚು ಸುಸ್ತು ಎನಿಸುತ್ತದೆ. ಇದರಿಂದ ಆ ಕೆಲಸವನ್ನು ತಿರಸ್ಕಾರ ಮಾಡುತ್ತ ಹೋಗುತ್ತೇವೆ. ಅದನ್ನು ಮಾಡುವುದನ್ನು ತಪ್ಪಿಸಿಕೊಳ್ಳುತ್ತೇವೆ. ಅನಿವಾರ್ಯವಾದಾಗ ಹೆಚ್ಚು ಪ್ರಯತ್ನ ಹಾಕದೇ ಅಸಮಾಧಾನ ಹೊರಹಾಕುತ್ತೇವೆ.

ಇನ್ನೊಂದು ಕಾರಣವೆಂದರೆ ಪದೇ ಪದೇ ಕೋವಿಡ್‌ ಮುಂಚಿನ ದಿನಗಳನ್ನು ನೆನಪು ಮಾಡಿಕೊಳ್ಳುವುದು. ಆಗ ಕಾಫಿ ಶಾಪ್‌, ಕಚೇರಿಯ ಕೆಫೆಟೇರಿಯ, ಸ್ನೇಹಿತರ ಜೊತೆ ಆಗಾಗ ಹೋಟೆಲ್‌ನಲ್ಲಿ ಊಟ.. ಎಂದೆಲ್ಲ ನೆನೆಸಿಕೊಂಡು ಸದ್ಯದ ಸಂದರ್ಭಕ್ಕೆ ತಾಳೆ ಹಾಕಿ ನೊಂದುಕೊಳ್ಳುವುದು, ದಿನಕ್ಕೆ ಹಲವಾರು ಬಾರಿ ಅಡುಗೆ ಮಾಡಬೇಕಾದ ಅನಿವಾರ್ಯತೆಯಿಂದ ಒಳಗಿನ ಸಿಟ್ಟನ್ನು ತೋರಿಸುವುದು.

‘ನಿತ್ಯ ಹಲವಾರು ಸಲ ಅಡುಗೆ ಮನೆಯಲ್ಲಿ ಊಟ– ತಿಂಡಿ ತಯಾರಿಸುವುದರಿಂದ, ವೈವಿಧ್ಯತೆ, ಆಯ್ಕೆ ಕಮ್ಮಿಯಾಗಿ ಹಲವರಿಗೆ ಈ ಬರ್ನ್‌ಔಟ್‌ ಅನುಭವವಾಗುತ್ತಿದೆ. ಜೊತೆಗೆ ‘ಅಡುಗೆ ಮಾಡುತ್ತ ಮಾಡುತ್ತ ಕಳೆದು ಹೋಗುತ್ತಿದ್ದೇವೆ. ಇದರಿಂದೇನೂ ಲಾಭವಿಲ್ಲ’ ಎಂದು ಹಲವರು ಹೇಳುವುದನ್ನು ಕೇಳಿರಬಹುದು’ ಎಂದು ವಾಸ್ತವ ಬಿಚ್ಚಿಡುತ್ತಾರೆ ಡಾ. ಪ್ರೇಮಾ.

ಹಾಗೆಯೇ ಲಾಕ್‌ಡೌನ್‌ ಸಂದರ್ಭದಲ್ಲಿ ಬೇಳೆಕಾಳು, ಇನ್ನಿತರ ಸಾಮಗ್ರಿಗಳ ಕೊರತೆ ಈ ಒತ್ತಡವನ್ನು ಜಾಸ್ತಿ ಮಾಡಿದೆ. ಮತ್ತೊಂದು ಕಾರಣ ಮನೆಯಲ್ಲಿ ಒಬ್ಬೊಬ್ಬರದೂ ಒಂದೊಂದು ರೀತಿಯ ಬಾಯಿರುಚಿ. ರುಚಿ ಇಲ್ಲ, ಹಾಗಾಗಿದೆ, ಹೀಗಾಗಿದೆ ಎಂಬ ಟೀಕೆ ಬೇರೆ.

ಎಲ್ಲವೂ ಸೇರಿ ಅಡುಗೆ ಮಾಡುವುದೆಂದರೆ ಎಷ್ಟೋ ಮಂದಿಗೆ ಹೇವರಿಕೆ ಹುಟ್ಟಿಬಿಟ್ಟಿದೆ. ಕುಕರ್‌ನಲ್ಲಿ ಆವಿಯ ಒತ್ತಡ ಜಾಸ್ತಿಯಾಗುವಂತೆ ಅಡುಗೆ ಮಾಡುವ ಹೆಂಗಳೆಯರಲ್ಲೂ ಒತ್ತಡ ಜಾಸ್ತಿಯಾಗುವುದು ಸಹಜ.

ಇದಕ್ಕೆ ಪರಿಹಾರವೇನು?

ದಿನದ ಕೆಲವು ಸಮಯವನ್ನು ನಿಮಗೆ ಬೇಕಾದಂತೆ ಕಳೆಯಲು ಮೀಸಲಿಡಿ.

ಕೊಂಚ ಸವಾಲೆನಿಸುವಂತಹ, ಮಾಡಿದ ಮೇಲೆ ಉತ್ಪಾದಕತೆ ಇದೆ ಎಂದೆನಿಸುವಂತಹ ಚಟುವಟಿಕೆ ಮಾಡಿ.

ನಿತ್ಯ ಒಂದೇ ತರಹದ ಅಡುಗೆಗಿಂತ ಹೊಸರುಚಿಯ ಪ್ರಯೋಗ ಮಾಡಿ.

ಮನೆಯ ಇತರ ಸದಸ್ಯರಿಗೆ ನೆರವಾಗುವಂತೆ ಹೇಳಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.