ADVERTISEMENT

ರಬ್ಬರ್ ಬ್ಯಾಂಡ್‌ ಮ್ಯಾಜಿಕ್

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2020, 19:30 IST
Last Updated 8 ಫೆಬ್ರುವರಿ 2020, 19:30 IST
Rubber band
Rubber band   

ಬೇಕಿರುವ ವಸ್ತುಗಳು:

ಒಂದು ದೊಡ್ಡ ರಬ್ಬರ್ ಬ್ಯಾಂಡ್, ಹೇರ್‌ ಡ್ರಯರ್, ಪ್ಲಾಸ್ಟಿಕ್ಕಿನ ಸಣ್ಣ ಗೊಂಬೆ, ರಬ್ಬರ್‌ ಬ್ಯಾಂಡನ್ನು ನೇತುಹಾಕಲು ಬಾಗಿಲಿನ ಹಿಡಿಕೆ, ಪುಟ್ಟ ಟೇಬಲ್.

ಏನು ಮಾಡಬೇಕು?

ADVERTISEMENT

1. ರಬ್ಬರ್‌ ಬ್ಯಾಂಡ್‌ನ ಒಂದು ತುದಿಗೆ ಗೊಂಬೆಯನ್ನು ಅಂಟಿಸಿ ಅಥವಾ ಕಟ್ಟಿ.

2. ಬಾಗಿಲಿನ ಹಿಡಿಕೆಗೆ ಆ ರಬ್ಬರ್‌ ಬ್ಯಾಂಡನ್ನು ನೇತುಹಾಕಿ. ಆಗ ಆ ಗೊಂಬೆಯು ಕೆಳಭಾಗದಲ್ಲಿ ನೇತಾಡುತ್ತ ಇರಬೇಕು.

3. ಗೊಂಬೆಯ ಕೆಳಗಡೆ ಟೇಬಲ್ ಇರಿಸಿ. ಆ ಗೊಂಬೆಯ ಕಾಲುಗಳು ಟೇಬಲ್‌ಅನ್ನು ಸ್ಪರ್ಶಿಸುತ್ತಿರುವಂತೆ ಇರಬೇಕು.

4. ಈಗ ಹೇರ್‌ ಡ್ರಯರ್‌ ಬಳಸಿಕೊಂಡು ರಬ್ಬರ್‌ ಬ್ಯಾಂಡ್‌ ಮೇಲೆ ಗಾಳಿ ಹಾಕಿ. ಆ ರಬ್ಬರ್‌ ಬ್ಯಾಂಡ್‌ ಬಿಸಿ ಆಗುವವರೆಗೆ ಗಾಳಿ ಹಾಕುತ್ತ ಇರಿ (ಆದರೆ ಬಿಸಿ ಹೆಚ್ಚಾಗಿ ರಬ್ಬರ್ ಬ್ಯಾಂಡ್‌ ಕರಗದಂತೆ ನೋಡಿಕೊಳ್ಳಿ).

ಏನಾಗುತ್ತದೆ?

ರಬ್ಬರ್‌ ಬ್ಯಾಂಡ್‌ನ ಬಿಸಿ ಹೆಚ್ಚಾದಾಗ ಗೊಂಬೆಯು ಟೇಬಲ್‌ನಿಂದ ತುಸು ಮೇಲಕ್ಕೆ ಏಳುತ್ತದೆ! ರಬ್ಬರ್‌ ಬ್ಯಾಂಡ್‌ನ ಬಿಸಿ ತಗ್ಗಿದಾಗ, ಆ ಗೊಂಬೆಯು ಪುನಃ ಮೊದಲಿನ ಸ್ಥಿತಿಗೆ ಮರಳುತ್ತದೆ.

ಏಕೆ?: ರಬ್ಬರ್‌ನ ಗುಣ ಇತರ ಬಹುತೇಕ ವಸ್ತುಗಳಂತ‌ಲ್ಲ. ಇದು ಬಿಸಿಯಾದಾಗ ಹಿಗ್ಗುವುದಿಲ್ಲ. ಬದಲಿಗೆ, ಸಂಕುಚಿತಗೊಳ್ಳುತ್ತದೆ.

ಶೇಂಗಾ ತಲೆಯ ಹುಳು

ಮಧ್ಯ ಹಾಗೂ ದಕ್ಷಿಣ ಅಮೆರಿಕದ ಮಳೆ ಕಾಡುಗಳಲ್ಲಿ ಒಂದು ಬಗೆಯ ಹುಳು ಪತ್ತೆಯಾಗಿದೆ. ಇದಕ್ಕೆ ಶೇಂಗಾತಲೆಯ (ಶೇಂಗಾ ಬೀಜವನ್ನು ಹೋಲುವ ತಲೆ) ಹುಳು ಎನ್ನುವ ಹೆಸರು ನೀಡಲಾಗಿದೆ. ಆ ಹುಳುವಿನ ತಲೆಯು ಸಿಪ್ಪೆ ಸುಲಿಯದ ಶೇಂಗಾ ರೀತಿಯಲ್ಲಿ ಕಾಣಿಸುತ್ತದೆ ಎಂಬುದೇ ಈ ಹೆಸರು ಇರಿಸಲು ಕಾರಣ.

ಈ ಹುಳುವಿಗೆ ಹಲ್ಲುಗಳು ಇಲ್ಲ. ಹಾಗಾಗಿ ಇದು ಸಸ್ಯಗಳಿಂದ ರಸವನ್ನು ಮಾತ್ರ ಹೀರಬಲ್ಲದು. ಆದರೆ ಪ್ರಕೃತಿಯು ಈ ಕೊರತೆಯನ್ನು ಇನ್ನೊಂದು ಬಗೆಯಲ್ಲಿ ತುಂಬಿಕೊಟ್ಟಿರುವಂತಿದೆ. ಈ ಹುಳುವಿಗೆ ಹಲವು ಬಗೆಯ ಅಸ್ತ್ರಗಳನ್ನು ನೀಡಿರುವ ಪ್ರಕೃತಿ, ತನ್ನನ್ನು ತಿನ್ನಲು ಬರುವ ಇತರ ಜೀವಿಗಳಿಂದ ರಕ್ಷಿಸಿಕೊಳ್ಳಲು ನೆರವಾಗಿದೆ.

ಈ ಹುಳುವಿನ ರೆಕ್ಕೆಗಳ ಮೇಲೆ ಕಣ್ಣಿನ ದೊಡ್ಡದಾದ ಚಿತ್ರಗಳಿವೆ. ತನ್ನ ಮೇಲೆ ಆಕ್ರಮಣ ನಡೆದಾಗ ಈ ಹುಳುವು, ರೆಕ್ಕೆಯ ಮೇಲಿರುವ ಕಣ್ಣಿನ ಈ ಚಿತ್ರಗಳನ್ನು ಶತ್ರುವಿನತ್ತ ಮುಖಮಾಡಿ ಹಿಡಿಯುತ್ತದೆ. ಇದು ಆಕ್ರಮಣಕಾರನನ್ನು ಬೆದರಿಸದೆ ಇದ್ದರೆ, ದುರ್ವಾಸನೆ ಇರುವ, ವಿಷಕಾರಿ ದ್ರವವೊಂದನ್ನು ಹಾರಿಸುತ್ತದೆ.

ಇದರ ಉಬ್ಬಿದ ತಲೆಯು ಹಲ್ಲಿಯ ತಲೆಯಂತೆಯೂ ಕಾಣುವುದಿದೆ. ಹಲ್ಲಿಗಳನ್ನು ಭಕ್ಷಿಸದ ಇತರ ಜೀವಿಗಳು ಈ ಹುಳುವಿನ ಹತ್ತಿರ ಬಾರದಿರಲಿ ಎಂಬ ಕಾರಣದಿಂದ, ಪ್ರಕೃತಿಯೇ ನೀಡಿದ ರಕ್ಷಣೆ ಇದು ಎಂದೂ ವಿಜ್ಞಾನಿಗಳು ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.