ನಿಖಿಲ್- ಸೌಮ್ಯಾ ಮದುವೆಯಾಗಿ ಆರು ತಿಂಗಳುಗಳಾಗಿವೆ. ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾದ ಇವರ ಸ್ನೇಹ ಪ್ರೀತಿಗೆ ತಿರುಗಿ ಮದುವೆಯ ಬಾಂಧವ್ಯಕ್ಕೆ ಕೊಂಡಿಯಾಗಿತ್ತು. ಇನ್ನೂ ಒಬ್ಬರನ್ನೊಬ್ಬರು ಸರಿಯಾಗಿ ಅರ್ಥ ಮಾಡಿಕೊಂಡಿರಲಿಲ್ಲ. ಅದಕ್ಕೂ ಮೊದಲೇ ವಿಚ್ಛೇದನದ ಕುರಿತು ಚರ್ಚೆ ಮಾಡುವ ಹಂತ ತಲುಪಿಬಿಟ್ಟಿದ್ದಾರೆ.
ಕಾರಣ ಕೆದಕಿದರೆ ಬಿಡುವಿಲ್ಲದ ಕೆಲಸದ ಮಧ್ಯೆ ಸಿಗುವ ಸಮಯದಲ್ಲಿ ಸೌಮ್ಯಾ ಡೇಟಿಂಗ್ ಆ್ಯಪ್‌ನಲ್ಲಿ ಇನ್ನೊಬ್ಬ ಗೆಳೆಯನನ್ನು ಹುಡುಕಿಕೊಂಡು ಚ್ಯಾಟಿಂಗ್ ಶುರು ಮಾಡಿದ್ದಳು. ಇದು ನಿಖಿಲ್ ಗಮನಕ್ಕೆ ಬಂದು ವಿಚ್ಛೇದನದ ಪ್ರಸ್ತಾಪವಿಟ್ಟಿದ್ದ.
ಲೆಕ್ಕಾಚಾರದ ಪ್ರೀತಿ
ಇದು ಒಂದು ಉದಾಹರಣೆ ಅಷ್ಟೇ. ಇಂತಹ ಮನೋಭಾವದವರು ನಮ್ಮ ಮಧ್ಯೆ ಸಾಕಷ್ಟು ಜನರಿದ್ದಾರೆ. ಪ್ರೀತಿಸುವಾಗ ಇದ್ದ ಮಧುರ ಭಾವಗಳು ಮದುವೆಯಾದ ಕೂಡಲೇ ಮರೆಯಾಗಿದ್ದು ಹೇಗೆ? ಜೀವನ, ಮದುವೆಯನ್ನು ಇಷ್ಟು ಹಗುರವಾಗಿ ತೆಗೆದುಕೊಳ್ಳಲು ಸಾಧ್ಯವೇ ಎಂಬ ಯೋಚನೆ ಅರೆಕ್ಷಣ ಕಾಡಿದರೂ ಈಗಿನ ಜಗತ್ತನ್ನು ನೋಡಿದರೆ ‘ಹೌದು’ ಎಂಬ ಉತ್ತರವನ್ನು ನೀಡಬಹುದೇನೋ. ಪ್ರೀತಿ ಎನ್ನುವುದು ಈಗ ಲೆಕ್ಕಾಚಾರವಾಗಿದೆ. ಹರೆಯದ ಮನಸ್ಸಿನಲ್ಲಿ ಚಿಗುರೊಡೆದ ಪ್ರೀತಿಯನ್ನು ತಮ್ಮ ಸಂಗಾತಿಯ ಮುಂದೆ ನಿವೇದಿಸಿಕೊಳ್ಳುವುದೇ ಈಗ ಫ್ಯಾಷನ್ ಆಗಿಬಿಟ್ಟಿದೆ. ಮನಸ್ಸಿನಲ್ಲಿ ಮೂಡಿದ ಪ್ರೀತಿಯನ್ನು ಕೊನೆಯತನಕ ಜೋಪಾನವಾಗಿ ಕಾಪಿಟ್ಟುಕೊಳ್ಳುವ ಮನಃಸ್ಥಿತಿಯವರು ಈಗ ಕಡಿಮೆಯಾಗಿದ್ದಾರೆ. ಪ್ರೀತಿಸುವ ಹೃದಯಗಳು ಬದ್ಧತೆಗಿಂತ ಹೆಚ್ಚಾಗಿ ಯಾವುದೋ ಒಂದು ಆಕರ್ಷಣೆಗೆ ಒಳಗಾಗುವುದೇ ಹೆಚ್ಚು.
ಮೊದಲೆಲ್ಲಾ ಪ್ರೇಮ ನಿವೇದನೆ ಮಾಡಿಕೊಳ್ಳುವುದೇ ಕಷ್ಟದ ಕೆಲಸವಾಗಿತ್ತು. ಪ್ರೇಮಪತ್ರ ಬರೆದು ತಮ್ಮ ಸಂಗಾತಿಯನ್ನು ಮೆಚ್ಚಿಸಬೇಕಿತ್ತು. ಪ್ರೇಮಿಗಳಿಬ್ಬರ ಪ್ರೀತಿಯ ಪಿಸುಮಾತು, ಮೆಚ್ಚುಗೆಯ ನೋಟ, ಬೆಚ್ಚಗಿನ ಸ್ಪರ್ಶ ಎಲ್ಲವೂ ಅಲ್ಲಿರುತ್ತಿತ್ತು. ಮೊದಲು ಹುಟ್ಟಿದ ಪ್ರೇಮವನ್ನು ಕಾಪಿಟ್ಟುಕೊಳ್ಳುವ ಒಂದು ಜವಾಬ್ದಾರಿ ಇರುತ್ತಿತ್ತು. ಇದೆಲ್ಲವೂ ನವಿರಾದ ಅನುಭೂತಿಯನ್ನು ನೀಡುತ್ತಿತ್ತು. ಆದರೆ ಈಗ ಬೆಳಿಗ್ಗೆ ನೋಡಿದ ಹುಡುಗಿ/ ಹುಡುಗ ಸಾಮಾಜಿಕ ಜಾಲತಾಣದ ಮೂಲಕ ರಿಕ್ವೆಸ್ಟ್ ಕಳುಹಿಸಿ ಸಂಜೆಯೊಳಗೆ ಡೇಟಿಂಗ್ ಹೋಗುವ ವೇಗದ ಜಗತ್ತಿನಲ್ಲಿ ನಾವಿದ್ದೇವೆ. ಇಲ್ಲಿ ಪ್ರೀತಿ ಪಕ್ವಗೊಳ್ಳುವ ಮೊದಲೇ ಕಮರಿ ಹೋಗುವುದೇ ಜಾಸ್ತಿ .
ಡಿಜಿಟಲ್ ಪ್ರೀತಿ...
ತಮ್ಮ ಸಂಗಾತಿಯಿಂದ ದೈಹಿಕ ಸಾಂಗತ್ಯ ಸಿಗುತ್ತಿಲ್ಲ ಎನ್ನುವವರು, ತಮ್ಮಿಬ್ಬರ ಮನಃಸ್ಥಿತಿಗಳು ಬೇರೆ ಬೇರೆ ಎನ್ನುವವರು, ತನ್ನೊಂದಿಗೆ ಕಾಲ ಕಳೆಯಲು ಸಂಗಾತಿಗೆ ಸಮಯವಿಲ್ಲ ಎನ್ನುವವರು.. ಹೀಗೆ ಏನೇನೋ ನೆಪ ಹೇಳಿಕೊಂಡು ಇಂದು ಡೇಟಿಂಗ್, ಚ್ಯಾಟಿಂಗ್ ಎಂದು ಸಾಮಾಜಿಕ ಜಾಲತಾಣದ ಜಾಲದಲ್ಲಿ ಬಂಧಿಯಾಗುವವರೇ ಹೆಚ್ಚು. ಇದೊಂದು ರೀತಿಯ ‘ಡಿಜಿಟಲ್ ವಿಶ್ವಾಸ ದ್ರೋಹ’ ಎನ್ನಬಹುದು.
ಮನಮೆಚ್ಚಿದ ಹುಡುಗ/ ಹುಡುಗಿಯನ್ನು ಮದುವೆಯಾಗಿದ್ದರೂ ಆ ಪ್ರೀತಿಯನ್ನು, ಬಂಧನವನ್ನು ಉಳಿಸಿಕೊಳ್ಳುವತ್ತ ದೃಷ್ಟಿಹರಿಸದೇ ಮನಸ್ಸನ್ನು ಲಗಾಮಿಲ್ಲದೇ ಹರಿಯಬಿಡುತ್ತಾರೆ. ನಾವು ಒಬ್ಬರಿಗೆ ಬದ್ಧರಾಗಿರಬೇಕು ಎಂಬ ಮನಃಸ್ಥಿತಿ ಕಡಿಮೆಯಾಗುತ್ತಿದೆ. ಪ್ರೀತಿಸಿದ ಮರುಕ್ಷಣವೇ ದೈಹಿಕ ವ್ಯಾವೋಹವೇ ಮುಖ್ಯವಾಗುತ್ತದೆ. ಚ್ಯಾಟಿಂಗ್‌ನಲ್ಲಿ ಕೂಡ ತೀರಾ ಖಾಸಗಿ ವಿಷಯಗಳನ್ನು ಯಾವುದೇ ಮುಜುಗರವಿಲ್ಲದೇ ಹಂಚಿಕೊಳ್ಳುತ್ತಾರೆ. ಈಗ ಇಬ್ಬರೂ ಆರ್ಥಿಕವಾಗಿ ಸ್ವತಂತ್ರರಾಗಿರುವುದರಿಂದ ಯಾವುದೇ ಭಾವನಾತ್ಮಕ ಬಂಧಗಳಿಗೆ ಕಟ್ಟುಬೀಳುವುದು ಕಡಿಮೆಯಾಗಿದೆ.
ಪ್ರೀತಿ ಕುದುರುವುದೇ ಆ್ಯಪ್ ಮೂಲಕ
ವಾಟ್ಸ್‌ಆ್ಯಪ್ ಡೇಟಿಂಗ್ ಆ್ಯಪ್ , ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಫೇಸ್‌ಬುಕ್‌ಗಳೇ ಈಗ ಪ್ರೀತಿಯ ಕೊಂಡಿಗಳಾಗಿವೆ. ತಮ್ಮ ಇಷ್ಟಕಷ್ಟಗಳನ್ನೆಲ್ಲಾ ಅಲ್ಲಿ ಸೇರಿಸಿ ತಮಗೆ ತಕ್ಕದಾದ ಸಂಗಾತಿ ಸಿಕ್ಕಿದರೆ ಡೇಟಿಂಗ್ ಶುರುವಾಗುತ್ತದೆ. ಮದುವೆಯೊಂದು ಬಂಧನವೆನ್ನುತ್ತಾ ಲಿವಿಂಗ್ ರಿಲೆಷನ್‌ಶಿಪ್ ಅನ್ನು ನೆಚ್ಚಿಕೊಳ್ಳುತ್ತಾರೆ. ಇಲ್ಲಿ ಒಬ್ಬರನ್ನೊಬ್ಬರು ಅರಿಯುವ ಮೊದಲೇ ಬ್ರೇಕ್ ಅಪ್ ಆಗುತ್ತದೆ. ಇನ್ನು ಒಂದಷ್ಟು ಸಂಬಂಧಗಳು ಮುಂದುವರಿದು ಮದುವೆಯವರೆಗೆ ಕಾಲಿಟ್ಟರೂ ವರ್ಷದೊಳಗೆ ವಿಚ್ಛೇದನಕ್ಕೆ ಅರ್ಜಿ ಹಾಕಿರುತ್ತಾರೆ. ಇದಕ್ಕೆ ಸಂಗಾತಿಗಳಿಬ್ಬರ ನಿರೀಕ್ಷೆ, ಮಾಡುವ ಉದ್ಯೋಗ, ಒಬ್ಬರಿಗೊಬ್ಬರು ಹೊಂದಿಕೊಳ್ಳದೇ ಹೋಗುವ ಗುಣಸ್ವಭಾವ ಕೂಡ ಕಾರಣವಾಗಿರಬಹುದೆನೋ!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.