‘ಕಾಡಂಚಿನ ಗ್ರಾಮವಾದ ಮಾವಿನಕೊಪ್ಪದತ್ತ ಆಹಾರ ಅರಸಿ ಚುಕ್ಕಿ ಜಿಂಕೆಯೊಂದು ಧಾವಿಸಿತ್ತು. ಅದೆಲ್ಲಿದ್ದವೋ ಎರಡು ಬೀದಿ ನಾಯಿಗಳು ನೋಡ ನೋಡುತ್ತಿದ್ದಂತೆ ಜಿಂಕೆಯ ಮೇಲೆ ಎರಗಿದವು. ಮೃದುವಾದ ತೊಡೆ ಭಾಗಕ್ಕೆ ಬಾಯಿ ಹಾಕಿ, ಹರಿದು ತಿನ್ನಲು ಯತ್ನಿಸುತ್ತಿದ್ದವು. ಅಷ್ಟರಲ್ಲಿ ಸುತ್ತಲಿನ ನಿವಾಸಿಗಳು ಕೂಗಾಟ ನಡೆಸಿ, ಕಲ್ಲುಗಳನ್ನು ನಾಯಿಗಳತ್ತ ತೂರಿದರು. ನಾಯಿಗಳು ದಿಕ್ಕಾಪಾಲಾಗಿ ಓಡಿದವು. ಗಾಯಗೊಂಡು ಬಳಲಿದ್ದ ಜಿಂಕೆಯನ್ನು ಗ್ರಾಮಸ್ಥರು ರಕ್ಷಿಸಿ, ನಂತರ ಅರಣ್ಯ ಇಲಾಖೆ ಸಿಬ್ಬಂದಿಗೆ ಹಸ್ತಾಂತರಿಸಿದರು. ಈ ದಾಳಿಯ ಸಂದರ್ಭದಲ್ಲಿ ತೆಗೆದ ಚಿತ್ರವೊಂದು ನನಗೆ ದೊಡ್ಡ ಹೆಸರು ತಂದುಕೊಟ್ಟಿತು. ಆದರೆ, ಆ ಘಟನೆ ನನ್ನ ಮನಸ್ಸಿಗೆ ತುಂಬ ನೋವುಂಟು ಮಾಡಿತು’
ವನ್ಯಜೀವಿ ಲೋಕದಲ್ಲಿನ ಇಂಥ ಅಪರೂಪದ ಘಟನೆಯನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದ ಚಿತ್ರದ ಬಗ್ಗೆ ಹುಬ್ಬಳ್ಳಿಯ ವನ್ಯಜೀವಿ ಯುವ ಛಾಯಾಗ್ರಾಹಕ ವಿಕಾಸ ಪಾಟೀಲ ವಿವರಿಸುವಾಗ, ಅವರ ದನಿಯಲ್ಲಿ ಸಂಭ್ರಮವೂ ಇತ್ತು, ಕೊಂಚ ಬೇಸರವೂ ಇತ್ತು. ಈ ಫೋಟೊ ತೆಗೆದಿದ್ದು, ದಾಂಡೇಲಿಯತ್ತ ಬೈಕ್‌ನಲ್ಲಿ ಹೋಗುವಾಗ. ಫೋಟೊ ತೆಗೆಯಲು ಬಳಸಿದ್ದು ಕೆನಾನ್ 7ಡಿ ಕ್ಯಾಮೆರಾ ಮತ್ತು 150–600ಎಂ.ಎಂ. ಲೆನ್ಸ್. ಇವೆರಡನ್ನೂ ಆಗಷ್ಟೇ ಖರೀದಿಸಿದ್ದರು. ಈ ಚಿತ್ರವನ್ನು ಫೆಬ್ರುವರಿ 2019ರಲ್ಲಿ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ ನಂತರ ‘ಬಿಬಿಸಿ ವರ್ಲ್ಡ್ ನ್ಯೂಸ್’ನವರು ವಿಕಾಸ್ ಅವರನ್ನು ಸಂಪರ್ಕಿಸಿ, ಛಾಯಾಚಿತ್ರ ಬಳಸಲು ಅನುಮತಿ ಕೇಳಿದರು. ನಂತರ ‘DOGS THREATEN WILDLIFE” ಸ್ಟೋರಿಯಲ್ಲಿ ಇವರ ಫೋಟೊ ಪ್ರಸಾರ ಮಾಡಿದರು. ‘ಕನ್‌ಸರ್ವೇಷನ್ ಇಂಡಿಯಾ’ ವೆಬ್‌ಸೈಟ್‌ನಲ್ಲೂ ಸುದ್ದಿ ಪ್ರಕಟಗೊಂಡು ಸಂಚಲನ ಸೃಷ್ಟಿಸಿತು. ಇದರಿಂದ ಎಚ್ಚೆತ್ತ ಕೆಲವು ವನ್ಯಜೀವಿ ತಜ್ಞರು ಮತ್ತು ಪರಿಸರಪ್ರೇಮಿಗಳು, ಕಾಡುಪ್ರಾಣಿಗಳ ಮೇಲಿನ ದಾಳಿಯನ್ನು ತಡೆಗಟ್ಟುವುದಕ್ಕಾಗಿ ‘ವಿಶೇಷ ರಕ್ಷಣಾ ಪಡೆ’ ಸ್ಥಾಪಿಸಬೇಕು ಎಂದು ಅರಣ್ಯ ಇಲಾಖೆಗೆ ಮನವಿಯನ್ನೂ ನೀಡಿದ್ದಾರೆ.
ಹವ್ಯಾಸವಷ್ಟೇ ಅಲ್ಲ, ವೃತ್ತಿಯೂ ಹೌದು...
ಕಾಡು ಮತ್ತು ವನ್ಯಜೀವಿಗಳ ಬಗ್ಗೆ ಅಪಾರ ಆಸಕ್ತಿ ಹೊಂದಿರುವ ವಿಕಾಸ್‌ಗೆ ಛಾಯಾಗ್ರ
ಹಣ ಕೇವಲ ಹವ್ಯಾಸವಷ್ಟೇ ಅಲ್ಲ, ವೃತ್ತಿಯೂ ಹೌದು. ಬಿ.ಕಾಂ. ಮುಗಿಸಿದ ನಂತರ ಕ್ಯಾಮೆರಾ ಕಣ್ಣಲ್ಲೇ ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವ ತೀರ್ಮಾನ ಕೈಗೊಂಡರು. ಪ್ರೀ ವೆಡ್ಡಿಂಗ್ ಶೂಟಿಂಗ್, ಮದುವೆ, ಜಾಹೀರಾತು, ಡಾಕ್ಯುಮೆಂಟರಿಗಳಿಗೆ ಸ್ಟಿಲ್, ವಿಡಿಯೊ ಛಾಯಾಗ್ರಾಹಕರಾಗಿ ಕೆಲಸ ಮಾಡುತ್ತಾರೆ. ಅದರಿಂದ ಗಳಿಸಿದ ಹಣದಲ್ಲಿ ಮನೆ ಮತ್ತು ಸ್ವಂತ ಖರ್ಚಿಗೆ ಸ್ವಲ್ಪ ಹಣವನ್ನು ತೆಗೆದಿರಿಸಿ, ಉಳಿದ ಹಣವನ್ನು ‘ವೈಲ್ಡ್‌ಲೈಫ್ ಫೋಟೊಗ್ರಫಿ’ಗೆ ಮೀಸಲಿಟ್ಟಿದ್ದಾರೆ. ಕೈಗೆ ಹಣ ಬಂದ ತಕ್ಷಣ ರಾಷ್ಟ್ರೀಯ ಉದ್ಯಾನಗಳಲ್ಲಿ ಸಫಾರಿ ನಡೆಸಲು ಕ್ಯಾಮೆರಾವನ್ನು ಬಗಲಿಗೇರಿಸಿಕೊಂಡು ವಿಕಾಸ್ ಅಣಿಯಾಗುತ್ತಾರೆ.
ದಾಂಡೇಲಿ, ದರೋಜಿ ಕರಡಿಧಾಮ, ಬಂಡೀಪುರ, ನಾಗರಹೊಳೆ, ತಮಿಳುನಾಡಿನ ವಾಲ್‌ಪರೈ ನ್ಯಾಷನಲ್ ಪಾರ್ಕ್, ಕೇರಳದ ಎರ್ವಿಕುಲಂ ನ್ಯಾಷನಲ್ ಪಾರ್ಕ್, ಮಹಾರಾಷ್ಟ್ರದ ತಡೋಬಾ ಟೈಗರ್ ರಿಸರ್ವ್, ಮಧ್ಯಪ್ರದೇಶದ ಬಂಧ್ವಾಗಢ್ ರಾಷ್ಟ್ರೀಯ ಉದ್ಯಾನ, ಅಂಬೋಲಿ ಗಿರಿಧಾಮ ಸೇರಿದಂತೆ ವಿವಿಧ ಕಾಡು ಪ್ರದೇಶಗಳಲ್ಲಿ ಅಲೆದಾಡುತ್ತಾ, ಸಫಾರಿ ಮಾಡುತ್ತಾ, ವನ್ಯಜೀವಿಗಳ ಅಪರೂಪದ ಫೋಟೊಗಳನ್ನು ವಿಕಾಸ್ ಸೆರೆಹಿಡಿದಿದ್ದಾರೆ. ವನ್ಯಜೀವಿ ಛಾಯಾಗ್ರಹಣಕ್ಕೆ ಬೇಕಿರುವ ಅಪಾರ ತಾಳ್ಮೆ ಮತ್ತು ಅಪರಿಮಿತ ಆಸಕ್ತಿ ಈ ಎರಡೂ ಗುಣಗಳು ವಿಕಾಸ್ ಅವರಲ್ಲಿವೆ. ವಾರಗಟ್ಟಲೆ ಕಾಡಿನಲ್ಲಿ ಅಲೆಯುವ, ದಿನಗಟ್ಟಲೆ ಪೊದೆಗಳಲ್ಲಿ ಅಡಗಿ ಕುಳಿತುಕೊಳ್ಳುವ, ಗಂಟೆಗಟ್ಟಲೆ ನೀರಿನಲ್ಲಿ ನಿಲ್ಲುವ ಸವಾಲುಗಳನ್ನು ಪ್ರೀತಿಯಿಂದ ಸ್ವೀಕರಿಸಿ, ವನ್ಯಲೋಕದ ವಿಸ್ಮಯ ದೃಶ್ಯಗಳನ್ನು ಹೆಕ್ಕಿಕೊಂಡು ಬರುತ್ತಾರೆ.
ನೃತ್ಯ ಮಾಡುವ ಕಪ್ಪೆ ಹುಡುಕುತ್ತಾ...
ಉರಗತಜ್ಞ ಯಲ್ಲಾನಾಯ್ಕ್ ಅವರು ವಿಕಾಸ್ ಅವರಿಗೆ ಹಾವುಗಳ ವಿಶಿಷ್ಟ ಲೋಕದ ಬಗ್ಗೆ ಪರಿಚಯ ಮಾಡಿಕೊಟ್ಟರು. ಒಮ್ಮೆ ‘ಡಾನ್ಸಿಂಗ್ ಫ್ರಾಗ್’ ಬಗ್ಗೆ ಪ್ರಸ್ತಾಪ ಮಾಡಿದರು. ವಿಕಾಸ್ ಅವರಿಗೆ ‘ನೃತ್ಯ ಮಾಡುವ ಕಪ್ಪೆಗಳ ವಿಡಿಯೊ ಮಾಡಲೇಬೇಕು’ ಎಂಬ ಬಯಕೆ ಉಂಟಾಯಿತು. ನಂತರ ಯಲ್ಲಾನಾಯ್ಕ್ ಅವರ ಸಲಹೆಯೊಂದಿಗೆ ಪಶ್ಚಿಮಘಟ್ಟಗಳಲ್ಲಿ ಅವುಗಳ ಅನ್ವೇಷಣೆಗೆ ಮುಂದಾಗಿ ಯಶಸ್ವಿಯಾದರು.
‘ಮಳೆ ಕಡಿಮೆಯಾಗಿ, ಝರಿಗಳು ತುಂಬಿ ಹರಿಯುವ ವೇಳೆ ಈ ನೃತ್ಯದ ಕಪ್ಪೆಗಳು ಹೊರಬರುತ್ತವೆ. ಝರಿ ಪಕ್ಕದ ಬಂಡೆಗಳ ಮೇಲೆ ಬರುವ ಗಂಡು ಕಪ್ಪೆಗಳು ಮೊದಲಿಗೆ ಧ್ವನಿ ಹೊರಡಿಸುತ್ತವೆ. ಆ ಕಡೆಯಿಂದ ಹೆಣ್ಣು ಕಪ್ಪೆಯೊಂದು ಈ ಧ್ವನಿಗೆ ಸ್ಪಂದಿಸುತ್ತದೆ. ಆಗ ಶುರುವಾಗುತ್ತದೆ ಗಂಡು ಕಪ್ಪೆಗಳ ನಡುವೆ ಯುದ್ಧ.
ಬಲಿಷ್ಠ ಕಪ್ಪೆ ಇತರ ಕಪ್ಪೆಗಳ ಮೇಲೆ ನೆಗೆಯುತ್ತಾ, ಅವುಗಳನ್ನು ನೀರಿಗೆ ಬೀಳಿಸಿ, ತಾನು ಪರಾಕ್ರಮಿ ಎಂಬುದನ್ನು ಸಾಬೀತುಪಡಿಸುತ್ತದೆ. ನಂತರ ಹಿಂಗಾಲುಗಳನ್ನು ಕುಣಿಸಿ ನೃತ್ಯ ಮಾಡುತ್ತದೆ. ಆಗ ಹೆಣ್ಣು ಕಪ್ಪೆ ಸನಿಹ ಬಂದು ಕೂಡಿಕೊಳ್ಳುತ್ತದೆ. ಈ ಅಪರೂಪದ ದೃಶ್ಯವನ್ನು ಸೆರೆಹಿಡಿಯಲು 3 ದಿನಗಳ ಕಾಲ ಪಶ್ಚಿಮ ಘಟ್ಟದಲ್ಲೇ ಅಲೆದಾಡಿದ್ದೇನೆ’ ಎನ್ನುತ್ತಾರೆ.
ವಿಕಾಸ್ ಅವರ ತಂದೆ ಎಸ್.ಕೆ.ಪಾಟೀಲ ಅವರು ರೇಷ್ಮೆ ಇಲಾಖೆಯಲ್ಲಿ ನೌಕರ. ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕು ಕೂಡಗಿಗೆ ವರ್ಗಾವಣೆಯಾದ ನಿಮಿತ್ತ, ವಿಕಾಸ್ ತನ್ನ ಬಾಲ್ಯದ ದಿನಗಳನ್ನು ಪ್ರಕೃತಿ ಮಡಿಲಲ್ಲಿ ಕಳೆಯುವ ಅಪೂರ್ವ ಅವಕಾಶ ಸಿಕ್ಕಿತು. ಮನೆಯ ಹಿಂದೆಯೇ ಹರಿಯುತ್ತಿದ್ದ ಹೊಳೆಯಲ್ಲಿ ಈಜುವ ಸಮಯದಲ್ಲಿ ದಡದಲ್ಲಿ ಕಾಣುತ್ತಿದ್ದ ಹಾವು, ಕಪ್ಪೆ, ಕೀಟಗಳು ವಿಕಾಸ್ ಗಮನಸೆಳೆದವು. ನಂತರ ಮನೆಯಲ್ಲಿದ್ದ ಮೊಬೈಲ್, ಪವರ್‌ಶಾಟ್ ಕ್ಯಾಮೆರಾಗಳ ಮೂಲಕ ಸರಿಸೃಪ ಮತ್ತು ಸಸ್ತನಿಗಳ ಸೆರೆ ಹಿಡಿಯುತ್ತಿದ್ದರು. ಹೀಗೆ ಬಾಲ್ಯದಿಂದಲೇ ಕಾಡು, ಪ್ರಾಣಿ, ಪಕ್ಷಿಗಳ ಬಗ್ಗೆ ಕುತೂಹಲ ಬೆಳೆಸಿಕೊಂಡರು.
‘ವನ್ಯಜೀವಿ ಛಾಯಾಗ್ರಾಹಕ ಸುಧೀರ್ ಶಿವರಾಮ್ ಅವರು ಮಧ್ಯಪ್ರದೇಶದ ಬಂಧ್ವಾಗಡ್ನಲ್ಲಿ ನಡೆಸಿದ 3 ದಿನಗಳ ಕಾರ್ಯಾಗಾರ ನನಗೆ ಕ್ಯಾಮೆರಾ ಬಳಸುವ ಕೌಶಲ ಕಲಿಸಿತು. ಅಷ್ಟೇ ಅಲ್ಲ, ಪ್ರಾಣಿಗಳ ಬಗ್ಗೆ ಅಧ್ಯಯನ ಮಾಡಿದರೆ
ಮಾತ್ರ ಉತ್ತಮ ವನ್ಯಜೀವಿ ಛಾಯಾಗ್ರಾಹಕ ಆಗಬಹುದು ಎಂಬುದು ಮನದಟ್ಟಾಯಿತು’ ಎಂದು ವಿವರಿಸುತ್ತಾರೆ. ಅರಣ್ಯ ಇಲಾಖೆಗೆ ಪರಿಸರ ಸಂರಕ್ಷಣೆ ಸಾರುವ ‘ಹಸಿರು ಕರ್ನಾಟಕ’ ಪ್ರೊಮೊ ವಿಡಿಯೊ ಮಾಡಿಕೊಟ್ಟಿದ್ದಾರೆ. ಕರ್ನಾಟಕದ ಅರಣ್ಯ ಸಂಪತ್ತು ಮತ್ತು ಕಾಡುಪ್ರಾಣಿಗಳ ವೈವಿಧ್ಯವನ್ನು ಕಟ್ಟಿಕೊಡುವ ‘ವೈಲ್ಡ್ ಕರ್ನಾಟಕ ಡಾಕ್ಯುಮೆಂಟರಿ’ ಪ್ರಾಜೆಕ್ಟ್‌ನಲ್ಲಿ ಅಮೋಘ ವರ್ಷ, ಪ್ರಶಾಂತ್ ನಾಯಕ್ ಅವರೊಂದಿಗೆ ಕೆಲಸ ಮಾಡಿದ್ದಾರೆ. ವಿಶೇಷವಾಗಿ ವಿದೇಶಿ ಪ್ರವಾಸಿಗರನ್ನು ಆಕರ್ಷಿಸಲು ಈ ಡಾಕ್ಯುಮೆಂಟರಿ ನೆರವಾಗುತ್ತದೆ.
‘ಮೊಟ್ಟೆ ಒಡೆದು ಹೊರಬರುವ ನಾಗರಹಾವಿನ ಮರಿಗಳು, ಮಳೆಯಲ್ಲಿ ಚಲಿಸುವ ಶಂಖುಹುಳುಗಳು, ಹಸಿರು ಹಾವಿನ ಚಲನವಲನದ ದೃಶ್ಯಗಳನ್ನು ಸೆರೆ ಹಿಡಿಯುವ ತಂಡದಲ್ಲಿ ನಾನೂ ಕೆಲಸ ಮಾಡಿದ್ದೇನೆ ಎಂಬುದು ನನಗೆ ಹೆಮ್ಮೆಯ ವಿಚಾರ’ ಎನ್ನುತ್ತಾರೆ ವಿಕಾಸ್.
‘ವೈಲ್ಡ್‌ಲೈಫ್ ಫಿಲ್ಮ್ ಮೇಕರ್ಸ್‌ಗಳಾದ ಸಂದೇಶ್ ಕಡೂರು, ಅಮೋಘ ವರ್ಷ, ಕಲ್ಯಾಣ್ ವರ್ಮ, ನಲ್ಲಾ ಮುತ್ತುರಂಥವರ ಜತೆ ಕೆಲಸ ಮಾಡುವ ಅವಕಾಶಕ್ಕಾಗಿ ಕಾಯುತ್ತಾ ಇದ್ದೀನಿ. ಫೋಟೊಗ್ರಫಿ, ವಿಡಿಯೊಗ್ರಫಿ ಜತೆ ವನ್ಯಜೀವಿ ಸಂರಕ್ಷಣೆಯ ಕಾರ್ಯಕ್ಕೂ ಆದ್ಯತೆ ನೀಡುತ್ತೇನೆ. ಯೂಟ್ಯೂಬ್‌ನಲ್ಲಿ ನನ್ನದೇ ಆದ ಚಾನಲ್ ಹಾಗೂ ವೆಬ್‌ಸೈಟ್ ಆರಂಭಿಸಿ, ಅದರಲ್ಲಿ ವನ್ಯಜೀವಿ ಲೋಕದ ಛಾಯಾಚಿತ್ರಗಳು ಮತ್ತು ಅತ್ಯುತ್ತಮ ಡಾಕ್ಯುಮೆಂಟರಿಗಳನ್ನು ಅಪ್‌ಲೋಡ್ ಮಾಡಬೇಕು. ವನ್ಯಜೀವಿಗಳ ಕುರಿತು ಅಧ್ಯಯನ ಮಾಡುವವರಿಗೆ ಉತ್ತಮ ಆಕರ ಆಗಬೇಕು’ ಎಂದು ಭವಿಷ್ಯದ ಕನಸುಗಳನ್ನು ಹಂಚಿಕೊಂಡರು ವಿಕಾಸ್.
ಜಿಗಿದ ಹುಲಿ, ನಡುಗಿದ ಪ್ರವಾಸಿಗರು!
‘ಮಹಾರಾಷ್ಟ್ರದ ತಡೋಬಾ ಟೈಗರ್ ರಿಸರ್ವ್‌ನಲ್ಲಿ ಸಫಾರಿ
ಹೋಗಿದ್ದಾಗ, ಕಾಡೆಮ್ಮೆಯನ್ನು ಬೇಟೆಯಾಡಿ ಹೊಳೆದಂಡೆಯಲ್ಲಿ ನೀರು ಕುಡಿಯಲು ‘ಭಜರಂಗಿ’ ಹುಲಿ ಕುಳಿತಿತ್ತು. ಹುಲಿಯನ್ನು ನೋಡಿದ ತಕ್ಷಣ, ಒಂದರ ಹಿಂದೆ ಒಂದು ಬರುತ್ತಿದ್ದ ಒಟ್ಟು 13 ಸಫಾರಿ ಜೀಪ್‌ಗಳು ಗಕ್ಕನೆ ನಿಂತವು. ಪ್ರವಾಸಿಗರು ಕ್ಯಾಮೆರಾ ಹೊರತೆಗೆದು ಒಂದೇ ಸಮನೆ ಹುಲಿಯನ್ನು ಕ್ಲಿಕ್ಕಿಸುತ್ತಿದ್ದರು. ಹಿಂದೆ ಇದ್ದ ಜೀಪ್‌ವೊಂದು ಇದ್ದಕ್ಕಿದ್ದಂತೆ ವೇಗವಾಗಿ ಮುನ್ನುಗ್ಗಿ, ಮುಂದೆ ಬಂದು ನಿಂತಿತು. ಇದರಿಂದ ಬೆದರಿದ ಹುಲಿ ಹೊಳೆದಂಡೆ ಕಡೆಯಿಂದ ಜಿಗಿದು, ನಮ್ಮ ಸಮೀಪಕ್ಕೆ ಬಂದು ಘರ್ಜಿಸಿತು. ಅದರ ಆರ್ಭಟಕ್ಕೆ ಅಲ್ಲಿದ್ದ ಎಲ್ಲ ಜೀಪ್‌ಗಳು ಪಲಾಯನಗೊಂಡವು. ನಾವು ಮಾತ್ರ ಅಲ್ಲಿಂದ ಕದಲದೆ, ಅದರ ಛಾಯಾಚಿತ್ರ ಮತ್ತು ವಿಡಿಯೊಗಳನ್ನು ತೃಪ‍್ತಿಯಾಗುವವರೆಗೂ ತೆಗೆದುಕೊಂಡೆವು. ಆದರೆ ಆ ಕ್ಷಣವನ್ನು ಈಗಲೂ ನೆನಪಿಸಿಕೊಂಡರೆ ಮೈ ಜುಮ್ಮೆನ್ನುತ್ತದೆ’ ಎಂದು ರೋಚಕ ಕ್ಷಣವೊಂದನ್ನು ವಿಕಾಸ್ ಹಂಚಿಕೊಂಡರು.
(ವನ್ಯಜೀವಿ ಆಸಕ್ತರಿಗೆInstagram link: vikas.patil_)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.