Top 10 News | ಈ ದಿನದ ಪ್ರಮುಖ 10 ಸುದ್ದಿಗಳು, 29 ಜೂನ್‌ 2023

ಪ್ರಜಾವಾಣಿ ವೆಬ್‌ ಡೆಸ್ಕ್‌ 

ಹಿಂಸಾಚಾರ ಪೀಡಿತ ಮಣಿಪುರದ ಬಿಷ್ಣುಪುರ ಬಳಿ ರಾಹುಲ್ ಗಾಂಧಿ ಅವರನ್ನು ತಡೆದ ಪೊಲೀಸರ ಕ್ರಮವನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸಿದೆ. ಜನಾಂಗೀಯ ಹಿಂಸಾಚಾರದಿಂದ ತತ್ತರಿಸಿರುವ ಜನರಿಗೆ ಕಾಂಗ್ರೆಸ್‌ನ ಸಹಾನುಭೂತಿಯ ಪ್ರಭಾವವನ್ನು ತಡೆಯಲು ಪ್ರಧಾನಿ ನರೇಂದ್ರ ಮೋದಿ ಅವರು ‘ನಿರಂಕುಶ ಪ್ರಭುತ್ವದ ವಿಧಾನ’ವನ್ನು ಬಳಸುತ್ತಿದ್ದಾರೆ ಎಂದು ಆರೋಪಿಸಿದೆ.

‘ಮೀಸಲಾತಿಯ ಕೊಡುಗೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯ ಕೊಡುಗೆ ಶೂನ್ಯ. ಮಹಾತ್ಮಾ ಗಾಂಧೀಜಿ ಮತ್ತು ಪಂಡಿತ್ ಜವಾಹರಲಾಲ್ ನೆಹರೂ ಅವರು ಮೀಸಲಾತಿಯ ವಿರೋಧಿಗಳಾಗಿದ್ದರು’ ಎಂದು ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಹೇಳಿದರು.

ನಾವೆಲ್ಲಾರೂ ವಿವಿಧ ಧರ್ಮ, ಜಾತಿಗೆ ಸೇರಿದ್ದರೂ ನಾವೆಲ್ಲ ಮನುಷ್ಯರು. ಎಲ್ಲರೂ ಪರಸ್ಪರ ಪ್ರೀತಿ, ವಿಶ್ವಾಸದಿಂದ ಬದುಕಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು. ಬಕ್ರೀದ್ ಹಬ್ಬದ ಅಂಗವಾಗಿ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಗುರುವಾರ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ರಾಂಚಿಯ ಖಾದಗಡ ಅಂತರರಾಜ್ಯ ಬಸ್‌ ನಿಲ್ದಾಣದಲ್ಲಿ ನಿಲ್ಲಿಸಿದ್ದ ನಾಲ್ಕು ಬಸ್‌ಗಳು ಗುರುವಾರ ಬೆಂಕಿಗೆ ಆಹುತಿಯಾಗಿವೆ ಎಂದು ಲೋರ್ ಬಜಾರ್ ಪೊಲೀಸರು ತಿಳಿಸಿದ್ದಾರೆ. ಬಸ್‌ನಲ್ಲಿ ಯಾರೊಬ್ಬರೂ ಇರದಿದ್ದರಿಂದ ಯಾವುದೇ ಅಪಾಯ ಸಂಭವಿಸಿಲ್ಲ ಎಂದಿದ್ದಾರೆ.

'ರಾಜ್ಯದಲ್ಲಿ ಆಸಕ್ತ ಪದವೀಧರ ಯುವಕ-ಯುವತಿಯರಿಗೆ ರಾಜಕೀಯ ತರಬೇತಿ ನೀಡಲು ಸಂಸ್ಥೆಯೊಂದನ್ನು ಸ್ಥಾಪಿಸುವ ಪ್ರಸ್ತಾಪ ಇದೆ' ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ತಿಳಿಸಿದರು.

ಪ್ಯಾನ್ ಕಾರ್ಡ್ ಜೊತೆಗೆ ಆಧಾರ್ ಜೋಡಿಸಲು ನಾಳೆ (ಜೂನ್‌ 30) ಕೊನೆಯ ದಿನವಾಗಿದೆ. ಪ್ಯಾನ್ ಕಾರ್ಡ್ ಹಾಗೂ ಆಧಾರ್ ಜೋಡಣೆಗೆ ಕೊನೇ ದಿನಾಂಕವನ್ನು ಕೇಂದ್ರ ಹಣಕಾಸು ಇಲಾಖೆಯು ಈ ಹಿಂದೆ ಮಾರ್ಚ್ 31ಕ್ಕೆ ನಿಗದಿ ಮಾಡಿತ್ತು. ಆದರೆ, ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ ಅವರು ಗಡುವು ವಿಸ್ತರಣೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದರು.

ರಾಜ್ಯದಾದ್ಯಂತ ಮುಸ್ಲಿಮರು ಶ್ರದ್ಧೆ, ಭಕ್ತಿಯಿಂದ ಗುರುವಾರ ಈದ್‌ ಉಲ್‌ ಅಧಾ ಆಚರಿಸಿದರು. ತಮ್ಮ ಅನುಕೂಲಕ್ಕೆ ತಕ್ಕಂತೆ ಸಮಯ ನಿಗದಿ ಮಾಡಿಕೊಂಡು ಮೈದಾನ ಹಾಗೂ ಮಸೀದಿಗಳಲ್ಲಿ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಏಷ್ಯನ್‌ ಗೇಮ್ಸ್‌ನಲ್ಲಿ ಭಾರತ ಕ್ರಿಕೆಟ್ ತಂಡಗಳ ಭಾಗವಹಿಸುವಿಕೆ, ತಂಡದ ಪ್ರಾಯೋಜಕತ್ವ ಮತ್ತು ಮಾಧ್ಯಮ ಹಕ್ಕುಗಳಂತಹ ಪ್ರಮುಖ ವಿಚಾರಗಳು ಜುಲೈ 7ರಂದು ನಡೆಯಲಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಪೆಕ್ಸ್‌ ಕೌನ್ಸಿಲ್‌ ಸಭೆಯಲ್ಲಿ ಚರ್ಚೆಯಾಗಲಿವೆ.

ವರ್ಲ್ಡ್‌ ಅಸೋಶಿಯೇಷನ್‌ ಆಫ್‌ ನ್ಯೂಸ್‌ ಪಬ್ಲಿಷರ್ಸ್‌ (ವ್ಯಾನ್‌–ಇಫ್ರಾ) ಕೊಡಮಾಡುವ ಪ್ರಸಕ್ತ ಸಾಲಿನ ವಾರ್ಷಿಕ ‘ಗೋಲ್ಡನ್‌ ಪೆನ್‌ ಆಫ್‌ ಫ್ರೀಡಂ’ ಪ್ರಶಸ್ತಿಗೆ ಇರಾನ್ ಪತ್ರಕರ್ತೆಯರಾದ ಇಲಾಹೆ ಮೊಹಮ್ಮದಿ ಮತ್ತು ನಿಲೋಫರ್ ಹಮೇದಿ ಭಾಜನರಾಗಿದ್ದಾರೆ. ಈ ಇಬ್ಬರೂ ಪತ್ರಕರ್ತೆಯರು ಈಗ ಜೈಲಿನಲ್ಲಿದ್ದಾರೆ.

18 ತಿಂಗಳ ಕಾಲ ಹೊರಗಿಳಿದು ತಂಡಕ್ಕೆ ಸೇರ್ಪಡೆಗೊಂಡಿರುವ ಅಜಿಂಕ್ಯ ರಹಾನೆ ಅವರನ್ನು ಭಾರತ ಟೆಸ್ಟ್ ಕ್ರಿಕೆಟ್ ತಂಡದ ಉಪನಾಯಕರನ್ನಾಗಿ ನೇಮಕ ಮಾಡಲಾಗಿದೆ. ಆಯ್ಕೆದಾರರ ಈ ನಿರ್ಧಾರವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.