‘ಯಾ ಕ್ ಈ ಪ್ರಾಜೆಕ್ಟ್ ಆರಂಭ ಆಯ್ತು? ಈ ಪ್ರಶ್ನೆ ನಮ್ಮ ಮುಂದ ಇಟ್ಕೊಂಡ್ರ ಅಗ್ದಿ ಸರಳ ಉತ್ತರ ಅದ. ನಮಗ ಗೋಳಗುಮ್ಮಟ, ಆದಿಲ್ಶಾಹಿ, ಆನಿ ಬಂತಾನಿ... ಈ ಮೂರು ಸಾಲು ಬಿಟ್ರ ಮತ್ತ ಏನು ಗೊತ್ತದ? ಈ ಎಳಿ ಹಿಡ್ಕೊಂಡು ಸಂಶೋಧನೆ ಆರಂಭಿಸಿದಾಗ ನನ್ನ ಕಣ್ಣುಗಳು ಅರಳಿದ್ದವು. ತೋರುಬೆರಳು, ಪುಸ್ತಕದ ಸಾಲುಗಳಿಂದ ಮೂಗಿನ ಮ್ಯಾಲೆ ಬಂದು ಕೂತಿತ್ತು...’

ಸಂಶೋಧಕ ಮತ್ತು ಇತಿಹಾಸಕಾರ ಕೃಷ್ಣ ಕೊಲ್ಹಾರ ಕುಲಕರ್ಣಿ ಅವರು ಮಾತನಾಡುತ್ತಿದ್ದರು. ಅವರ ಕಂಗಳಲ್ಲಿ ಉತ್ಸಾಹದ ಬೆಳಕುಮಿಂಚುತ್ತಿತ್ತು. ಹೌದು, ಬೆಳ್ಳಿಬಣ್ಣದ ಕೂದಲುಗಳಷ್ಟೇ ಐತಿಹಾಸಿಕ ಡೇಟಾ ಅವರ ಮನದ ಕಪಾಟುಗಳಲ್ಲಿ ಅಚ್ಚುಕಟ್ಟಾಗಿ ಸಂಗ್ರಹವಾಗಿದೆ. ಯಾವುದನ್ನೇ ಹೇಳಲು ಆರಂಭಿಸಿದರೂ ಕರಾರುವಕ್ಕಾಗಿ ಕಾಲದ ಯಂತ್ರದಲ್ಲಿರುವಂತೆ ಪದಚಿತ್ರಣ ಕಟ್ಟುವುದು ಅವರ ವಿಶೇಷ.

ವಿಜಯಪುರದಲ್ಲಿ ಸತತ ಮಳೆಯ ನಂತರ ಎಳೆಬೆಳಕೊಂದು ಮೋಡಗಳೊಡನೆ ಆಟವಾಡುತ್ತ ಕಣ್ಣುಮುಚ್ಚಾಲೆ ಆಡುತ್ತಿತ್ತು. ಆದರೆ, ಬೆವರು ಸುರಿಸುವ ಕಾಯಕಜೀವಿಗಳ ಊರಿನಲ್ಲಿ ಏನೂ ಮಾಡದಿದ್ದರೂ ಬೆವರಿಳಿಯುತ್ತಿತ್ತು. ನಾನೂ ಅವರಂತೆಯೇ ಕಣ್ಣರಳಿಸಿ ಕುಳಿತಿದ್ದೆ.

ಪರ್ಷಿಯನ್, ಉರ್ದು, ದಖನಿ ಭಾಷೆಗಳಲ್ಲಿ ನಮ್ಮ ವಿಜಯಪುರದ ತುತ್ತೂರಿ ದಶದಿಕ್ಕುಗಳಲ್ಲಿಯೂ ಹರಡಿದೆ. ಪರ್ಷಿಯಾ, ಪೋರ್ಚುಗಲ್ ಮತ್ತು ಬ್ರಿಟಿಷ್ ಸಾಮ್ರಾಜ್ಯವನ್ನು ಸದಾ ಸೆಳೆದಿಟ್ಟ ವಿಜಯಪುರದ ಕೊನೆಯ ಐದು ಶತಮಾನಗಳ ಅಂತಹ ಎಲ್ಲ ಸಾಹಿತ್ಯವನ್ನೂ ಈಗ ಕನ್ನಡಕ್ಕೆ ತರಲಾಗಿದೆ.

ಆದಿಲ್ಶಾಹಿ ಸಾಮ್ರಾಜ್ಯಕ್ಕೆ ಸಂಬಂಧಿಸಿದಂತೆ ಲಭ್ಯ ಇರುವ ಎಲ್ಲ ಸಾಹಿತ್ಯವನ್ನೂ ಕನ್ನಡಕ್ಕೆ ತಂದ ಯೋಜನೆಯ ಹಿಂದೆ ಅಪಾರ ಪರಿಶ್ರಮವಿದೆ.2013ರಲ್ಲಿ ಎಂ.ಎಂ. ಕಲಬುರ್ಗಿ ಅವರ ಅಧ್ಯಕ್ಷತೆಯಲ್ಲಿ ಈ ಯೋಜನೆಯನ್ನು ಆರಂಭಿಸಲಾಯಿತು. ಕೃಷ್ಣ ಕೊಲ್ಹಾರ ಕುಲಕರ್ಣಿ ಅವರು ಆದಿಲ್ಶಾಹಿ ಸಾಹಿತ್ಯ ಅನುವಾದ ಯೋಜನೆಯ ನಿರ್ದೇಶಕರಾದರು.ನಂತರದ ಕಥನವನ್ನು ಅವರು ಇಲ್ಲಿ ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ.

‘ಈ ಯೋಜನೆ ಆರಂಭವಾದಾಗ ಒಂದೇ ಒಂದು ಹಾಳೆಯೂ ನಮ್ಮ ಬಳಿ ಇರಲಿಲ್ಲ.ಅಗತ್ಯ ಇರುವ ಸಾಹಿತ್ಯ ದಾಖಲೆ, ಕೃತಿಗಳನ್ನು ಪಟ್ಟಿ ಮಾಡಿದೆವು.ಈ ಪಟ್ಟಿ ಸಿದ್ಧವಾದ ನಂತರ ಇವು ಎಲ್ಲಿ ಲಭ್ಯ ಇರಬಹುದು ಎಂದು ಮಾಹಿತಿ ಕಲೆ ಹಾಕಿದೆವು. ಪತ್ರಾಗಾರ ಇಲಾಖೆ, ಪುರಾತತ್ವ ಇಲಾಖೆಗಳಲ್ಲದೆ ಹೈದರಾಬಾದ್, ಪುಣೆ, ನವದೆಹಲಿ ಹೀಗೆ ಎಲ್ಲೆಡೆ ಓಡಾಡಿ ಲಭ್ಯ ಇರುವ ಪ್ರತಿಗಳನ್ನೆಲ್ಲ ಹುಡುಕಿದೆವು. ಅವುಗಳ ಫೋಟೊ ಕಾಪಿ ಮಾಡಿಕೊಳ್ಳಲು ಅನುಮತಿ ಪಡೆದೆವು. ಜೀರ್ಣವಾಗುವ ಹಂತದಲ್ಲಿ ಇದ್ದ ಅವುಗಳನ್ನು ಮುಟ್ಟಲೂ ಭಯ ಆಗುತ್ತಿತ್ತು. ಎಚ್ಚರಿಕೆಯಿಂದಲೇ ಎಲ್ಲವನ್ನೂ ಫೋಟೊ ಕಾಪಿ ಮಾಡಿಸಿ ಕೊಂಡೆವು. ಇದಾದ ನಂತರ ಅರೆಬಿಕ್, ಪರ್ಷಿಯನ್, ದಖನಿ, ಉರ್ದು, ಮರಾಠಿ ಭಾಷೆ ಬಲ್ಲವರನ್ನು ಗುರುತಿಸಿದೆವು. ಪರ್ಷಿಯನ್ ಮತ್ತು ಅರೆಬಿಕ್ ಓದುವವರು, ಅನುವಾದಿಸುವವರು ಕಡಿಮೆ ಇದ್ದರು. ಉರ್ದು ಭಾಷೆ ಬಲ್ಲವರಿಂದ ಪರ್ಷಿಯನ್ ಮತ್ತು ಅರೆಬಿಕ್ನಿಂದ ಮೊದಲು ಆ ಸಾಹಿತ್ಯವನ್ನು ಉರ್ದು ಭಾಷೆಗೆ ತರ್ಜುಮೆ ಮಾಡಿಸಲಾಯಿತು. ಹಾಗೆ ಅನುವಾದಿಸಿದ್ದನ್ನು ಉರ್ದುವಿನಿಂದ ಕನ್ನಡಕ್ಕೆ ತರುವ ಕೆಲಸ ಆರಂಭವಾಯಿತು.

ಇದಕ್ಕಾಗಿ ನಾಡಿನಾದ್ಯಂತ ವಿದ್ವಾಂಸರನ್ನು ಗುರುತಿಸಲಾಯಿತು. ಅನುವಾದಕ್ಕೆ ಒಪ್ಪಿಸಲಾಯಿತು. ಪ್ರತಿ ಅನುವಾದ ಕೈಗೆ ಸಿಕ್ಕನಂತರ ಅದನ್ನು ಪುನಃ ಬರೆಯಲು ಆರಂಭಿಸಿದೆವು. ಹೀಗಾಗಿ ಇಡೀ ಕೃತಿಯಲ್ಲಿ ಎಲ್ಲಿಯೂ ಬರವಣಿಗೆಯ ಶೈಲಿಯಲ್ಲಿ ವ್ಯತ್ಯಾಸವಾಗದಂತೆ ಏಕರೂಪತೆ ಸಾಧ್ಯವಾಯಿತು.

ತಾರೀಖೆ ಫರಿಸ್ತಾ ಪುಸ್ತಕದಲ್ಲಿ ಹಿಂದೂ ಧರ್ಮ, ದೇವದೇವತೆಗಳ ವಿವರ, ಆಚರಣೆಗಳು, ರಾಜ, ಜೀವನ, ಹಳ್ಳಿಗಳು, ಹಳ್ಳಿಜೀವನ ಹೀಗೆ ಸಣ್ಣ ಸಣ್ಣ ವಿವರಗಳನ್ನೂ ಬಿಡದೆ ದಾಖಲಿಸಲಾಗಿದೆ. 25 ಇತಿಹಾಸ ಗ್ರಂಥಗಳನ್ನು ಆಕರವಾಗಿಸಿಕೊಂಡ ಬಗ್ಗೆಯೂ ಉಲ್ಲೇಖಿಸಲಾಗಿದೆ. ಈ ಇಡಿಯ ಪುಸ್ತಕವನ್ನು ನಾಲ್ಕು ಸಂಪುಟಗಳಲ್ಲಿ ಪ್ರಕಟಿಸಲಾಗಿದೆ.

ಇಬ್ರಾಹಿಂನಾಮಾ ಕರ್ತೃ ಅಬ್ದುಲ್ಲಾ ದೆಹಲ್ವಿ 712 ದ್ವಿಪದಿಗಳನ್ನು ರಚಿಸಿದ್ದ. ಭಾರತೀಯ ಪುರಾಣಗಳನ್ನು, ಪಾರಂಪರಿಕ ಕಾವ್ಯಗಳನ್ನು ಆತ ಬಲ್ಲವನಾಗಿದ್ದ ಎಂಬುದನ್ನು ಕೃತಿ ಸೂಚಿಸುತ್ತದೆ. ಕಿತಾಬ್ ಎ ನವರಸ್ದಲ್ಲಿ ಸರಸ್ವತಿಯ ಸ್ತುತಿಯೊಂದಿಗೆ ಗ್ರಂಥ ಆರಂಭವಾಗುತ್ತದೆ. ಹಿಂದೂಸ್ತಾನಿ ಸಂಗೀತದ ರಾಗಗಳನ್ನು ಸೂಚಿಸಿಯೇ ಬರೆಯಲಾಗಿದೆ.

ಮೊಹಮ್ಮದ್ ನಾಮಾದಲ್ಲಿ ಯುದ್ಧ, ಯಾತ್ರೆ, ಮದುವೆ, ಮರಣ, ಹಜ್ ಯಾತ್ರೆ ಮುಂತಾದವುಗಳನ್ನು ಸವಿಸ್ತಾರವಾಗಿ ವರ್ಣಿಸಿರುವುದರಿಂದ ಆ ಕಾಲದ ಸಾಮಾಜಿಕ ಜೀವನ ಅರ್ಥವಾಗುತ್ತದೆ.

ಅಲೀನಾಮಾ ಬರೆದಿರುವ, ನುಸ್ರತಿ ಎಂದು ಖ್ಯಾತರಾಗಿರುವ ಮಹ್ಮದ್ ನುಸ್ರತ್ ಅವರು ಲಕ್ಷ್ಮೀ, ಅರ್ಜುನ, ಸೂರ್ಯ, ಚಂದ್ರ, ಲಕ್ಷ್ಮಣ, ರಾಮ ಹೀಗೆ ಪೌರಾಣಿಕ ಪಾತ್ರಗಳನ್ನು ತಮ್ಮ ಕೃತಿಯಲ್ಲಿ ಬರುವ ವ್ಯಕ್ತಿಗಳೊಂದಿಗೆ ಸಂದರ್ಭದ
ಅನುಸಾರ ಹೋಲಿಸಿದ್ದಾರೆ. ಅವರು ಕುಮಾರವ್ಯಾಸನ ಕಾವ್ಯವನ್ನೂ ಓದಿರಬಹುದು. ‘ಅರಸುಗಳಿಗಿದು ವೀರ, ದ್ವಿಜರಿಗೆ ಪರಮವೇದದ ಸಾರ, ಮಂತ್ರಿ ಜನಕೆ ಬುದ್ಧಿ ಗುಣ, ವಿರಹಿಗಳ ಶೃಂಗಾರ’ ಎಂದು ವರ್ಣಿಸಿದಂತೆ, ‘ಅರಸರ ದರ್ಬಾರಿನ ಸಂಗೀತ, ಮಂತ್ರಿಗಳಿಗೆ ಅತ್ಯುನ್ನತ ಕಾರಣ, ಸೌಂದರ್ಯದಲ್ಲಿ ಇದು ಯಾವ ಮಾತಿಗಿಂತ ಕಡಿಮೆಯಿಲ್ಲ, ಇದು ನಿತ್ಯ ಮೆಚ್ಚುಗೆ ಪಡೆಯುತ್ತದೆ. ದೇವ ಭಕ್ತರು ಈ ಪಂಕ್ತಿಗಳನ್ನು ಕೇಳಿದರೆ ಅವಿರೋಧವಾಗಿ ಇದರಿಂದ ಆಸಕ್ತಿ ಪಡೆಯುವರು’ ಎಂದು ಹೇಳುತ್ತಾರೆ. ಇಂಥ ಹಲವಾರು ಸಾಮ್ಯಗಳು ಅವರ ಕೃತಿಯಲ್ಲಿ ಕಾಣುತ್ತವೆ.

ನಾವು ಇತಿಹಾಸವನ್ನು ಒಂದೇ ದೃಷ್ಟಿಯಿಂದ ನೋಡಿದ್ದೇವೆ ಎಂದೆನಿಸುತ್ತದೆ. ಔರಂಗ್ಜೇಬ್ ವಿಜಯಪುರದ ಕೋಟೆಯನ್ನೂ ಪ್ರವೇಶಿಸಲಾಗದೆ ಆರು ತಿಂಗಳು ಊರಿಂದಾಚೆ ಠಿಕಾಣಿ ಹೂಡುತ್ತಾನೆ. ಎರಡನೆಯ ಆದಿಲ್ಶಾಹಿಯೂ ಹಟ ಬಿಡದೆ ಕೋಟೆಯನ್ನು ಭದ್ರಪಡಿಸುತ್ತಾನೆ. ಆದರೆ ಆರು ತಿಂಗಳ ನಂತರ ಅನಾಜಿಗೆ ತೊಂದರೆಯಾಗುತ್ತದೆ. ದವಸ, ಧಾನ್ಯಗಳ ದಾಸ್ತಾನು ಮುಗಿಯುತ್ತ ಬಂದಾಗ, ಜನರು ಹಸಿವಿನಿಂದ ಸಾಯುವುದು ಬೇಡವೆಂದು ಸೋಲನ್ನು ಒಪ್ಪಿಕೊಳ್ಳುತ್ತಾನೆ.ಯುದ್ಧ ಮತ್ತು ವಿಜಯಗಳನ್ನೇ ನಂಬಿದ್ದ ಸಾಮ್ರಾಜ್ಯವೊಂದರ ರಾಜನೊಬ್ಬ, ಪ್ರಜಾನುರಾಗಿಯಾಗಿ ಹೀಗೆ ಸೋಲನ್ನು ಒಪ್ಪಿದ. ಹಾಡುಗಳಲ್ಲಿ ಆತ ಅಮರನಾಗಿದ್ದಾನೆ.

ಶಿವಾಜಿಯನ್ನು ಹಲವೆಡೆ ಕಪಟ, ಕಳ್ಳ, ದಂಗೆಕೋರ ಎಂದೆಲ್ಲ ಹೇಳಿದ್ದರೂ, ಆತನ ಶೌರ್ಯ, ಚತುರ ರಾಜಕೀಯ ನೀತಿ, ಮರಾಠರ ಧೈರ್ಯ, ಸ್ಥೈರ್ಯಗಳನ್ನು ಗುಣಕ್ಕೆ ಮತ್ಸರ ಇಲ್ಲವೆಂಬಂತೆ ಈ ಕೃತಿಗಳಲ್ಲಿ ಚಿತ್ರಿಸಿರುವುದೂ ಗಮನಾರ್ಹ.

ಹೀಗೆ ಇಡೀ ಹದಿನೆಂಟು ಸಂಪುಟಗಳ ಸಂಗ್ರಹ ಹೊಸ ಹೊಳಹುಗಳನ್ನು ನೀಡುತ್ತಲೇ ಹೋಗುತ್ತದೆ. ಈ ಸಾಮ್ರಾಜ್ಯದ ಪರಿಚಯಕ್ಕಾಗಿ ಕೇವಲ ಕಾವ್ಯಗಳನ್ನು ಅವಲಂಬಿಸಿದರೆ ಅದು ಸಂಪೂರ್ಣ ಚಿತ್ರಣ ನೀಡಿದಂತಾಗುವುದಿಲ್ಲ ಎಂದೇ, ಫರ್ಮಾನು, ಸನ್ನದು ಮತ್ತು ಕೈಫಿಯತ್ತುಗಳನ್ನು ಸೇರ್ಪಡೆಗೊಳಿಸಲಾಗಿದೆ. ಕೊಟ್ಟ ಅವಧಿಯಲ್ಲಿ ಯೋಜನೆಯನ್ನು ಪೂರ್ಣಗೊಳಿಸಿದ್ದೇವೆ. ಆಗ ಅದೆಷ್ಟು ಶ್ರಮ ವಹಿಸಿದೆವು ಎಂದರೆ ಕಲೆ ಹಾಕಿದ ಐತಿಹಾಸಿಕ ದಾಖಲೆಗಳಿಂದ ಮತ್ತಷ್ಟು ಸಂಪುಟಗಳನ್ನು
ಪ್ರಕಟಿಸಬಹುದು.

ಪ್ರತಿದಿನ ಬೆಳಗ್ಗೆ ಎದ್ದೊಡನೆ ಕಲಬುರ್ಗಿ ಅವರು ಕರೆ ಮಾಡುತ್ತಿದ್ದರು. ‘ಏನು ಮಾಡಿದ್ರ? ಎಲ್ಲಿ ಹೋಗಿ ಬಂದ್ರಿ? ಏನು ಸಿಕ್ಕಿತು? ಹೀಗೆ ಚರ್ಚೆ ಆಗುತ್ತಿತ್ತು. ಅವರೊಂದಿಗೆ ಮಾತನಾಡಿದಾಗಲೆಲ್ಲ ಯೋಜನೆಗೆ ಒಂದು ವೇಗ, ಸ್ಪಷ್ಟ ಸ್ವರೂಪ ದೊರೆಯುವಂತಾಯಿತು.

2015ರ ಒಂದು ಬೆಳಗು, ಇದ್ದಕ್ಕಿದ್ದಂತೆ ಕಲಬುರ್ಗಿಯವರ ಹತ್ಯೆ ಆಯ್ತು. ಆ ಎರಡು ವರ್ಷಗಳಲ್ಲಿ ಇಡೀ ಯೋಜನೆ ಒಂದು ಹಂತಕ್ಕೆ ಬಂದಿತ್ತು. ಅವರ ಮರಣಾನಂತರವೂ ನಮ್ಮ ಸಮಿತಿ, ಅವರು ತೋರಿದ ಬೆಳಕಿನಲ್ಲಿಯೇ ಕೆಲಸ ಮಾಡಿತು. ಅವರ
ನಂತರದ ಸಂಪುಟಗಳಿಗೂ ಅವರದ್ದೇ ಅಧ್ಯಕ್ಷತೆ ಇತ್ತು.

ಕುಲಕರ್ಣಿಯವರು ಮಾತು ಮುಗಿಸಿದಾಗ ಸಣ್ಣದೊಂದು ಮೌನ ಮನೆಮಾಡಿತು. ಇತಿಹಾಸದ ವೈಭವಯಾನ, ವರ್ತಮಾನ ಇವೆರಡನ್ನೂ ಬೆಸೆದಿಡುತ್ತಿದ್ದ ಮಾತುಗಳಿಗೂ ಪೂರ್ಣವಿರಾಮ ಬಿತ್ತು.

ಸಂಶೋಧಕ ಎಂ.ಎಂ. ಕಲಬುರ್ಗಿ ಅವರ ಸಾವಿಗೆ ನ್ಯಾಯ ಸಿಗುತ್ತದೆಯೋ ಇಲ್ಲವೋ ಗೊತ್ತಿಲ್ಲ. ಅವರು ಕೈಗೊಂಡ ಕಾರ್ಯವನ್ನು ಪೂರ್ಣಗೊಳಿಸಿ, ಅವರ ಕನಸನ್ನು ಸಾಕಾರಗೊಳಿಸುವಲ್ಲಿ ನ್ಯಾಯ ಸಲ್ಲಿಸುವ ಕೆಲಸವನ್ನಂತೂ ಮಾಡುತ್ತಿರುವೆವು ಎನ್ನುವ ಸಮಾಧಾನ ಅವರ ಮುಖದಲ್ಲಿ ತುಂಬಿತ್ತು.

ಸಂಪರ್ಕಕ್ಕೆ: 99643 76645

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.