ಇತ್ತೀಚೆಗೆ ಗದಗ, ಲಕ್ಕುಂಡಿಯ ಐತಿಹಾಸಿಕ ಸ್ಮಾರಕಗಳನ್ನು ನೋಡಲು ಹೋಗಿದ್ದೆ. ಹಿಂದೆ ಆಕಾಶವಾಣಿಗೆ ‘ಮರೆತ ಪುಟಗಳು’ ಕಾರ್ಯಕ್ರಮ ಮಾಡುವಾಗ ಹೋಗಿದ್ದರೂ ಇವುಗಳನ್ನು ಸೂಕ್ಷ್ಮವಾಗಿ ನೋಡಲು ಆಗಿರಲಿಲ್ಲ.

ಒಂದೇ ದಿನ ಎರಡು–ಮೂರು ಸ್ಮಾರಕಗಳನ್ನು ನೋಡುತ್ತಾ ದಾಖಲೆ ಮಾಡುವಾಗ ವಿವರವಾಗಿ ನೋಡಲು ಆಗಿರಲಿಲ್ಲ. ಗದುಗಿನ ತ್ರಿಕೂಟಾಚಲ ಅಥವಾ ತ್ರಿಕೂಟೇಶ್ವರ ಮಂದಿರದಲ್ಲಿರುವ ಶಿಲ್ಪಕಲಾವೈಭವ ಕಣ್ಣು ಮನಸ್ಸು ತುಂಬುವಂಥದ್ದು. ನಾನು ಅಲ್ಲಿಗೆ ತಲುಪಿದ್ದಾಗ ಮಧ್ಯಾಹ್ನ ಮೂರು ಗಂಟೆ. ಆದರೆ ಆರು ಗಂಟೆಯವರೆಗೆ ತ್ರಿಕೂಟೇಶ್ವರ ದೇವಸ್ಥಾನದ ಬಾಗಿಲು ತೆಗೆಯುವುದಿಲ್ಲ ಎಂದು ತಿಳಿಯಿತು. ಹೀಗಾಗಿ ಗುಡಿಯ ಸುತ್ತಲಿನ ಶಿಲ್ಪಕಲಾವೈಭವ ಮತ್ತು ಸರಸ್ವತಿ ಮಂದಿರದ ಅದ್ಭುತವಾದ ಕೆತ್ತನೆಯಿರುವ ಕಂಬಗಳನ್ನು ನೋಡಲು ಸಾಧ್ಯವಾಯಿತು.

ಸರಸ್ವತಿ ಮಂದಿರ ಅತ್ಯಂತ ಸುಂದರವಾಗಿ ಸುಸ್ಥಿತಿಯಲ್ಲಿದ್ದರೂ ಮುಖ್ಯ ಮೂರ್ತಿ ಭಗ್ನವಾಗಿದ್ದರಿಂದ ಆ ಮೂರ್ತಿಗೆ ಪೂಜೆಯಿಲ್ಲ. ಹೀಗಾಗಿ ಆ ಮಂದಿರಕ್ಕೆ ಬಾಗಿಲು, ಬೀಗ ಯಾವುದೂ ಇಲ್ಲ.

11ನೇ ಶತಮಾನದಲ್ಲಿ ಕಲ್ಯಾಣ ಚಾಲುಕ್ಯರ ಸೋಮೇಶ್ವರ ಎಂಬ ಅರಸನಿಂದ ನಿರ್ಮಾಣವಾದ ತ್ರಿಕೂಟೇಶ್ವರ, ಸರಸ್ವತಿ, ಗಾಯತ್ರಿ ಮಂದಿರಗಳು ತಮ್ಮ ಶಿಲ್ಪಕಲಾವೈಭವವನ್ನು ಇಂದಿಗೂ ತೋರುತ್ತಾ ಆಕರ್ಷಿಸುತ್ತಿವೆ. ಇಂದಿನ ಅಧಿಕಾರಸ್ಥರಿಗೆ ವೈಭವಯುತ ಬಂಗಲೆಗಳು, ಹೋಟೆಲ್ಗಳನ್ನು ಕಟ್ಟಿಸಲು ಆಸಕ್ತಿ. ಆದರೆ, ಹಿಂದಿನ ಕಾಲದ ರಾಜರು ಮಂದಿರಗಳನ್ನು ನಿರ್ಮಿಸುವಲ್ಲಿ ಬಹಳ ಆಸಕ್ತಿ ತೋರುತ್ತಿದ್ದರು. ಅವೂ ವಿಭಿನ್ನ ಶಿಲ್ಪಕಲೆ, ಸೂಕ್ಷ್ಮಕೆತ್ತನೆಯ ಮೂರ್ತಿಗಳಿಂದ ಕಂಗೊಳಿಸುತ್ತಿದ್ದವು.

ಕಲ್ಯಾಣ ಚಾಲುಕ್ಯರು ಕರ್ನಾಟಕವನ್ನು ಮತ್ತು ಇತರೆ ರಾಜ್ಯಗಳನ್ನು ಅಥವಾ ಅವುಗಳ ಕೆಲ ಭಾಗವನ್ನು ಸುಮಾರು 200 ವರ್ಷಗಳ ಕಾಲ ಆಳಿ ಈ ನೆಲವನ್ನು ಸಮೃದ್ಧಿಗೊಳಿಸಿದ್ದಾರೆ. ಪ್ರತೀ ಊರಿನಲ್ಲಿ, ಸಣ್ಣ ಸಣ್ಣ ಹಳ್ಳಿಯಲ್ಲೂ ಆ ಕಾಲದ ಒಂದಲ್ಲ ಒಂದು ದೇವಾಲಯವಿದ್ದೇ ಇದೆ. ‘ನಮ್ಮ ಊರಿಗೆ ಬನ್ನಿ, ಇಲ್ಲಿ ಚಾಲುಕ್ಯರ ಕಾಲದ ದೇಗುಲವೊಂದಿದೆ. ನೋಡುವಿರಂತೆ’ ಎಂದು ಕರೆಯುವ ಆತ್ಮೀಯರ ಮಾತುಗಳು ನಮಗೆ ಇಂಥ ದೇಗುಲಗಳ, ಅಲ್ಲಿನ ಶಿಲ್ಪಕಲೆಯ ದರ್ಶನ ಮಾಡಿಸುತ್ತವೆ.

ಶಿಲೆಯಲ್ಲವೀ ಗುಡಿಯು ಕಲೆಯ ಬಲೆಯು ಎಂಬ ಮಾತು ಗದಗಿನ ಸರಸ್ವತಿ ದೇವಾಲಯಕ್ಕೆ ಅತ್ಯಂತ ಅನ್ವಯವಾಗುತ್ತದೆ. ಚಾಲುಕ್ಯರ ಕಾಲವನ್ನು ಶಿಲ್ಪಕಲಾವೈಭವದ ಮೇರು ಕಾಲವೆಂದೇ ಹೇಳಬಹುದು. ಏಕೆಂದರೆ ಇಲ್ಲಿನ ವೈಶಿಷ್ಟ್ಯಪೂರ್ಣವಾದ ಕುಸುರಿ ಕೆತ್ತನೆಯ ಕಂಬಗಳು, ಭಿತ್ತಿ ಶಿಲ್ಪಗಳು, ಅಧಿಷ್ಠಾನ, ವಿನ್ಯಾಸ, ಮೂರ್ತಿಗಳಲ್ಲಿನ ಜೀವಂತಿಕೆ ಇವೆಲ್ಲ ಮುಂದೆ ಬೇಲೂರು, ಹಳೆಬೀಡಿನ ಶಿಲ್ಪಕಲೆಗೆ ತಳಹದಿ ಆದವು. ಐಹೊಳೆ, ಪಟ್ಟದಕಲ್ಲುಗಳನ್ನಂತೂ ಶಿಲ್ಪಕಲೆಯ ತರಬೇತಿ ಶಾಲೆಗಳು ಎಂದೇ ಕರೆಯುತ್ತಾರೆ.

ಸರಸ್ವತಿ ದೇವಾಲಯದ ಒಳಗಿರುವ ಸರಸ್ವತಿ ಮೂರ್ತಿ ಪೂಜೆಗೊಳ್ಳುತ್ತಿದ್ದ ಕಾಲದಲ್ಲಿ ಹೇಗಿದ್ದಿರಬಹುದು, ಎಷ್ಟು ಪವಿತ್ರ ಭಾವನೆ, ಭಕ್ತಿ ಭಾವ ಹುಟ್ಟುತ್ತಿರಬಹುದು ಎಂದೆನಿಸುತ್ತದೆ. ಗುಡಿಯ ಪ್ರತಿಯೊಂದು ಕಂಬ, ಕಟ್ಟೆ, ಕಟ್ಟೆಯ ಹೊರಗೋಡೆ, ಪ್ರದಕ್ಷಿಣಾ ಪಥದಲ್ಲಿ ಕಾಣಸಿಗುವ ಸುಂದರ ಕಲಾಕೃತಿಗಳು ಒಂದಕ್ಕಿಂತ ಒಂದು ಸುಂದರವಾಗಿವೆ. ಇಂಥ ಕಲಾಕೃತಿಗಳನ್ನೂ ನಾವು ನೋಡಿ ಆನಂದಿಸಬೇಕಾದರೆ ನಮಗೆ ಒಂದು ಸಂಸ್ಕಾರ ಬೇಕು.

ಇಲ್ಲಿ ಸಂಸ್ಕಾರವೆಂದರೆ, ನಮ್ಮ ಮೇಲೆ ಪರಂಪರೆ, ಸಂಪ್ರದಾಯಗಳಿಂದ ಆದ ಪ್ರಭಾವ ಮಾತ್ರ ಎಂದು ಭಾವಿಸದೆ, ನಮ್ಮ ಕಣ್ಣು, ಮನಸ್ಸು ಕಲೆಯ ಯಾವುದೇ ಭಾಗವನ್ನು ನೋಡಿ, ಹ್ಞಾಂ ಇದು ಇಲ್ಲಿ ಹೊಂದಿಕೆಯಾಗುತ್ತದೆ. ಇಲ್ಲಿ ಇದು ಬೇಕಿತ್ತೇ, ಈ ಭಾಗ ಇಷ್ಟು ಸೂಕ್ಷ್ಮವಾಗಿದ್ದೇ ಒಳ್ಳೆಯದಾಯಿತು, ಇದು ಮನದಲ್ಲಿ ತುಂಬಿನಿಲ್ಲುವಂಥದ್ದು ಎಂಬ ಭಾವ. ಸರಸ್ವತಿ ದೇವಾಲಯದ ಕಂಬಗಳನ್ನು, ದೇವಾಲಯದ ಹೊರಗೋಪುರದ ಸುಂದರ ಶಿಲ್ಪಗಳನ್ನು ನೋಡಿದಾಗ ಆಗುವ ಅನುಭವ ವಿಶಿಷ್ಟ. ಜಡವಾದ ಕಲ್ಲುಗಳಲ್ಲಿ ಶಿಲ್ಪ ಹೊರಡಿಸಿದ ಲಾಲಿತ್ಯ, ಬೆರಗು ಬಿನ್ನಾಣ, ವಿಸ್ಮಯ ನೋಡಿದಾಗ ಶಿಲ್ಪಿಗೆ ಒಲಿದ ಕಲೆ ದೈವದತ್ತವೇನೋ ಅನ್ನಿಸುತ್ತದೆ.

ಕಲ್ಲಿನ ಚಾವಣಿ ಹೊಂದಿರುವ ಸರಸ್ವತಿ ದೇವಾಲಯದ ಕಂಬಗಳದೇ ಒಂದು ವೈಶಿಷ್ಟ್ಯ. ಪ್ರತೀ ಕಂಬವೂ ಅದರದೇ ಆದ ವಿಶೇಷ ಹೊಂದಿದೆ. ದೇವಾಲಯದ ಒಳಾಂಗಣದ ಸುಮಾರು ಎಂಟು ಕಂಬಗಳನ್ನು ಹೊಂದಿದ ನವರಂಗ, ನೋಡಿದೊಡನೆ ಮನಸೆಳೆಯುವಂತಿದೆ. ಕಾರಣ, ಅದರಲ್ಲಿನ ಸೂಕ್ಷ್ಮ ಕೆತ್ತನೆಗಳು. ಇವುಗಳು ಪೌರಾಣಿಕ ಘಟನೆಗಳನ್ನು ಹೇಳುವ ಫಲಕಗಳೇನೋ ಎಂಬಂತೆ ತೋರುತ್ತವೆ. ಅಷ್ಟೊಂದು ಘಟನಾವಳಿಗಳು ಆರಾಧ್ಯದ ಮೂರ್ತಿಗಳು, ಅವರನ್ನು ಸುತ್ತುವರಿದ ಲತೆಬಳ್ಳಿಗಳು ಈ ಎಲ್ಲ ಕಂಬಗಳಲ್ಲಿ ಇವೆ. ನಂದಿಯನ್ನೇರಿದ ಶಿವಪಾರ್ವತಿ ಮೂರ್ತಿ, ಅವರ ತಲೆಯ ಮೇಲಿರುವ ಪ್ರಭಾವಳಿ, ಕೆಳಗೆ ಇರುವ ಗಣಗಳು ಕೈಲಾಸದ ಕಲ್ಪನೆ ನೀಡುತ್ತವೆ.

ಎರಡೂ ಬದಿಯಲ್ಲಿ ಚಿಕ್ಕಚಿಕ್ಕ ಗೋಪುರಗಳನ್ನು ಹೊಂದಿರುವ ಕಂಬಗಳು, ಮತ್ತೊಂದು ಕಂಬದ ಮೇಲೆ ಯಕ್ಷ, ಯಕ್ಷಿಣಿಯರ ಮಧ್ಯೆ ವಿಷ್ಣು, ಲಕ್ಷ್ಮಿ ಸುಂದರವಾಗಿ ಕಂಗೊಳಿಸುತ್ತಾರೆ. ಕಂಬಗಳನ್ನು ನೋಡುತ್ತಾ ಕಣ್ಣುಗಳನ್ನೂ ಮೇಲೆ ಹಾಯಿಸಿದಾಗ ಸುಂದರವಾದ ಭವನಾಶಿ, ಅಂದರೆ ಛತ್ತಿನಲ್ಲಿರುವ ಉಬ್ಬು ನೆತ್ತನೆಯ ಅಲಂಕಾರ ಮನಸೆಳೆಯುತ್ತದೆ. ಇಡೀ ದೇವಾಲಯದ ಹೊರಾಂಗಣ ಗೋಡೆಗಳಲ್ಲೂ ಸಾಕಷ್ಟು ಶಿಲ್ಪಕಲಾ ವೈಭವ, ದೇವಾಲಯದ ಕಟ್ಟೆಯ ಮೇಲೂ ಸುಂದರವಾದ ಉಬ್ಬು ಶಿಲ್ಪಗಳಿವೆ.

ಈ ದೇವಾಲಯಕ್ಕೆ ಗೋಪುರವಿಲ್ಲ. ಕಲ್ಲಿನ ಚಾಚು ಗೋಡೆಗಳಿಂದ ದೇವಾಲಯ ನಿರ್ಮಿಸಿದ್ದಾರೆ. ಆದರೆ ಇಂಥ ಶಿಲ್ಪಕಲಾ ವೈಭವದ ತ್ರಿಕೂಟೇಶ್ವರ ದೇವಾಲಯದ ಪ್ರಾಂಗಣ ಸ್ವಲ್ಪವೂ ಸ್ವಚ್ಛವಾಗಿಲ್ಲ. ಕಾಲಹರಣ ಮಾಡುವ ಅನೇಕರು ಇಲ್ಲಿ ಕಾಣಸಿಗುತ್ತಾರೆ. ಸುಂದರವಾದ ಕಂಬಗಳಿಗೆ ಒರಗಿ ಕುಳಿತರೆ ಆ ಶಿಲ್ಪಕಲೆ ಹಾಗೇ ಉಳಿದೀತೇ? ಇಡೀ ಆವರಣ ಕಸಕಡ್ಡಿಯಿಂದ ತುಂಬಿದೆ. ಇಂಥ ಪರಿಸರದಲ್ಲೂ ತನ್ನತ್ತ ಸೆಳೆಯುವ ಈ ಶಿಲ್ಪಕಲೆ ಹೀಗೆ ಉಳಿಯಬಹುದೇ ಎಂಬ ವಿಷಾದ ಕಾಡದೇ ಇರದು. ಆದರೆ, ತ್ರಿಕೂಟೇಶ್ವರದ ಒಂದೇ ಅಧಿಷ್ಠಾನದಲ್ಲಿ ಮೂರು ಶಿವಲಿಂಗಗಳು ಇರುವ ಗುಡಿಯ ಪಕ್ಕ ಸರಸ್ವತಿ ದೇವಾಲಯ ಇರಬೇಕು ಎಂಬ ಅರಸನ ಅಭಿಲಾಷೆಗೆ ಕಾರಣವೇನು?.

–ಸ್ಮಿತಾ ಮೈಸೂರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.