ಶ್ರಾವಣ ಮತ್ತು ಭಾದ್ರಪದ ಮಾಸದಲ್ಲಿ ಬರುವ ಹಬ್ಬದ ಸಾಲುಗಳು ಹಿಂದಿನ ಕಾಲದ ಹೆಣ್ಣುಮಕ್ಕಳಿಗೆ ಅತ್ಯಂತ ಖುಷಿ ಕೊಡುವ ದಿವಸಗಳಾಗಿತ್ತು. ಸುಮಾರು ಬಾರಿ ನಾನು ಅದನ್ನು ಹೆಣ್ಣುಮಕ್ಕಳ ‘ಸೋಶಿಯಲೈಸಿಂಗ್ ವೇ’ ಎಂದು ಕರೆಯುತ್ತೇನೆ. ಅರಿಸಿನ–ಕುಂಕುಮಕ್ಕೆ ಕರೆಯುವುದು, ಆ ಮೊದಲು ಆಚೆಯೇ ಬರದ್ದಿದ್ದ ಹೆಣ್ಣುಮಕ್ಕಳಿಗೆ ಅವರ ಸುತ್ತ ಆಗುತ್ತಿರುವ ಬದಲಾವಣೆಯನ್ನು ಗಮನಿಸುವುದಕ್ಕೆ. ನಮ್ಮಲ್ಲಿನ ಪ್ರತಿ ಹಬ್ಬಕ್ಕೂ ಒಂದು ನಿರ್ದಿಷ್ಟ ಕಾರಣ, ಸಂಪ್ರದಾಯವಿರುತ್ತದೆ. ಗೌರೀಹಬ್ಬವೂ ಅದಕ್ಕೆ ಹೊರತಾಗಿಲ್ಲ. ಚಿಕ್ಕವಳಿದ್ದಾಗ ಅದೊಂದು ರಜೆಯ ದಿನವಾಗಿ ಉಳಿಯುತಿತ್ತು. ಹೊಸ ಬಟ್ಟೆ, ಒಳ್ಳೆಯ ಅಡುಗೆ – ಇವುಗಳಷ್ಟೆ ಹಬ್ಬದ ವಿಶೇಷ. ದೊಡ್ಡವಳಾಗುತ್ತಾ ಅದರ ಮಹತ್ವವನ್ನು ತಿಳಿಯುವ ಪ್ರಯತ್ನ ಮಾಡುತ್ತಾ ಇದ್ದೇನೆ. ಇದರ ಜಾಡಿನಲ್ಲಿ ನನಗೆ ಸಿಕ್ಕಿದ್ದು ಎರಡು ಕಥೆಗಳು; ಈ ಎರಡೂ ಕಥೆಗಳು ನಮಗೆ ಬದುಕನ್ನು ಸುಂದರವನ್ನಾಗಿಸುವ ಪ್ರಯತ್ನವನ್ನು ಮಾಡುತ್ತದೆ.

ಮೊದಲನೆಯ ಕಥೆ, ಎಲ್ಲ ಪೂಜೆಗೂ ಮುನ್ನ ವಿಘ್ನವಿನಾಶಕ ಗಣೇಶನನ್ನು ಪೂಜಿಸುವುದು ವಾಡಿಕೆ. ಆದರೆ ಗಣೇಶನೇ ತನಗಿಂತ ತನ್ನ ಅಮ್ಮ ಆದಿಶಕ್ತಿಯ ಪೂಜೆ ಮೊದಲು ಮಾಡಬೇಕು, ನಾನು ನಿಮಗೆಲ್ಲ ಮೊದಲಿಗನಾದರೂ ನನಗೆ ಮೊದಲು ನನ್ನ ಅಮ್ಮ – ಎನ್ನುವ ತಾಯಿಪ್ರೀತಿಯನ್ನು ಈ ಗಣೇಶಹಬ್ಬ ಕಲಿಸಿಕೊಡುತ್ತದೆ. ಮಕ್ಕಳಿಗೆ ತಮ್ಮ ಮೂಲವನ್ನು ಗೌರವಿಸುವ, ಪೂಜಿಸುವ ರೀತಿಯನ್ನು ಇದು ಕಲಿಸಿಕೊಡುತ್ತದೆ. ಇದು ಕೇವಲ ಹಬ್ಬವೆಂದುಕೊಂಡು ಮಾಡುವ ಗೊಡ್ಡು ಆಚರಣೆಗಳಿಗಿಂತ ಇದರಲ್ಲಿ ಸಿಗುವ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಹಬ್ಬಗಳು ಸಾರ್ಥಕವಾಗುತ್ತವೆ.

ಮತ್ತೊಂದು ಕಥೆ, ಈ ನಡುವೆ ಕೇಳುತ್ತಿದ್ದದ್ದು, ಗೌರಿ ತನ್ನ ತವರುಮನೆಗೆ ಎಲ್ಲ ಹೆಣ್ಣುಮಕ್ಕಳಂತೆ ಬರುತ್ತಾಳೆ. ತವರು ಮನೆಯಿಂದ ಉಪಚಾರ ಮಾಡಿಸಿಕೊಂಡು, ಮರುದಿವಸ ಬರುವ ಮಗನ ಜೊತೆ ವಾಪಸ್ಸು ಕೈಲಾಸಕ್ಕೆ ಹೋಗುತ್ತಾಳೆ. ಇದು ಹೆಣ್ಣು-ತವರುಮನೆ ಇವೆಲ್ಲದರ ಮಹತ್ವವನ್ನೂ ಸಾರುತ್ತದೆ. ಹೆಣ್ಣುಮಕ್ಕಳನ್ನು ಮದುವೆ ಮಾಡಿಕೊಟ್ಟ ಬಳಿಕ ಗಂಡನ ಮನೆಯನ್ನು ಸೇರುತ್ತಾರೆ. ತವರುಮನೆಗೆ ಹೋಗಬೇಕಾದರೆ ಗಂಡನ ಒಪ್ಪಿಗೆಯನ್ನು ಪಡೆದೇ ಹೋಗುವ ಪರಿಪಾಠವಿತ್ತು. ಈಗಲೂ ಊರಿಂದ ಊರಿಗೆ ಹೋಗುವಾಗ ಗಂಡನ ಮನೆಯಲ್ಲಿ ಎಲ್ಲವನ್ನೂ ಏರ್ಪಾಟು ಮಾಡಿಯೇ ಅವಳು ಹೊರಡಬೇಕು; ಇನ್ನು ಲೋಕದಿಂದ ಲೋಕಕ್ಕೆ ಹೋಗುವಾಗ ಎಷ್ಟೆಲ್ಲ ತ್ರಾಸು ಹೆಣ್ಣುಮಕ್ಕಳಿಗೆ ಇರುತ್ತದೆ, ಯೋಚಿಸಿ ನೋಡಿ!

ಹಬ್ಬದ ಮುಂಚೆಯೂ ತವರು ಮನೆಯವರು ಬಂದು ಅರಿಸಿನ–ಕುಂಕುಮ ಕೊಟ್ಟು, ಆಹ್ವಾನ ಇತ್ತು, ಹಬ್ಬಕ್ಕೆ ಕರೆತರುವ ಪ್ರಯತ್ನ ಒಂದು ಥರ ಆಗಿನ ಕಾಲದಲ್ಲಿ ಜನ ಬದುಕುವ ಪರಿಯನ್ನು ತಿಳಿಸುತ್ತಿತ್ತು. ಬಾಗಿನ ಕೊಟ್ಟಾಗಲೇ ತವರುಮನೆಯವರನ್ನು ಮತ್ತೆ ನೆನೆಯುವ, ನೋಡುವ ಸಂಭ್ರಮ.

ಇವೆಲ್ಲವೂ ಹಬ್ಬಕ್ಕೆಂದೇ ಮಾಡಿದ್ದ ಅಭ್ಯಾಸಗಳು. ಆಗಿನ ಕಾಲಕ್ಕೆ ಸರಿ ಹೋಗುತ್ತಿತ್ತು. ಈಗಿನ ಕಾಲಕ್ಕೆ ಇವೆಲ್ಲಾ ಅಭ್ಯಾಸಗಳು ಎಷ್ಟು ಸಮಂಜಸವೆಂಬ ಪ್ರಶ್ನೆ ಮೂಡುತ್ತದೆ. ಈಗ ಮದುವೆಯಾಗಿರುವ ಹೆಣ್ಣುಮಕ್ಕಳು, ಅವರಿರುವ ಪರಿಸರ ತುಂಬಾ ಭಿನ್ನ. ತಾಯಿಯ ಮನೆ ಬೇರೆಯದು, ಗಂಡನ ಮನೆ ಮಾತ್ರ ತನ್ನದು ಎಂಬ ಪರಿಕಲ್ಪನೆ ಈಗಿನವರಿಗೆ ಇಲ್ಲ. ಎರಡು ಮನೆಯೂ ನನ್ನದೂ ಎಂಬ ಸತ್ಯ ಅರಿವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಒಂದು ಹೆಚ್ಚು, ಕಡಿಮೆ ಎಂಬ ವ್ಯತ್ಯಾಸ ಈಗಿನವರಿಗೆ ಇರುವುದಿಲ್ಲ. ಹೀಗಿರುವಾಗ ವರ್ಷಕ್ಕೊಮ್ಮೆ ಅಮ್ಮನ ಮನೆಯೆಂಬ ಈ ಸಂಪ್ರದಾಯ ಒಮ್ಮೊಮ್ಮೆ ದಿಗಿಲು ಬಡಿಸುತ್ತದೆ.

ನಮ್ಮ ಪೀಳಿಗೆಯವರು ಅತ್ತ ಕಡೆ ಹಿಂದಿನ ಕಾಲದವರೂ ಅಲ್ಲ ಅಥವಾ ಪೂರ್ತಿ ಈಗಿನ ಕಾಲದ ಹೊಸ ಕಾಲಕ್ಷೇಪಗಳಿಗೆ ಒಡ್ಡಿಕೊಂಡವರೂ ಅಲ್ಲ. ಇದರ ಮಧ್ಯದಲ್ಲಿ ಸಿಕ್ಕಿಹಾಕೊಂಡವರಿಗೆ ಯಾವುದು ಸರಿಯಾಗಿ ತಿಳಿದಿರುವುದಿಲ್ಲ. ಇಂತಹ ಸಂದರ್ಭದಲ್ಲಿ ನಾವು ಯಾವುದನ್ನು ಪಾಲಿಸುವುದು, ಏನು ಮಾಡುವುದು – ಎಂಬ ಪ್ರಶ್ನೆ ಮೂಡುವುದು ಸಹಜ. ಏನ್ನನ್ನು ಅಳವಡಿಸಿಕೊಳ್ಳಬೇಕು ಎಂದು ಅರಿತು ಮುನ್ನಡೆಯಬೇಕಾದುದು ನಮ್ಮ ಕರ್ತವ್ಯ. ಮುಂಚಿನ ಕಾಲದ ಹಾಗೆ ತೀರ ಗಂಡನ ಆಯಸ್ಸು ವೃದ್ಧಿ, ದೇವರು ಶಾಪ ಕೊಡುತ್ತಾರೆ ಎಂಬ ಕಾರಣಗಳು ಈಗಿನ ಕಾಲದವರಿಗೆ ಅರ್ಥವಾಗುವುದಿಲ್ಲ ಅಥವಾ ಅದೊಂದೇ ಕಾರಣಕ್ಕೆ ಯಾವುದೇ ಪೂಜೆ ಮಾಡುವುದಿಲ್ಲ. ಕಂಪ್ಯೂಟರ್ನಲ್ಲಿ ‘ಕುಟು ಕುಟು’ ಕುಟ್ಟುವ ಬೆರಳುಗಳಿಗೆ ಈಗ ಒಬ್ಬಟ್ಟನ್ನು ತಟ್ಟಿ ಮಾಡುವ ಚಾಣಾಕ್ಷತನವಿಲ್ಲ; ಮಾಡುವ ಆಸೆಯಿದ್ದರೂ ಕೆಲವೊಮ್ಮೆ ರಜೆಯೂ ಇರುವುದಿಲ್ಲ. ಇಂತಹ ಸಂದರ್ಭದಲ್ಲಿ ಹಬ್ಬಗಳು ಈಗಿನ ಕಾಲಕ್ಕೆ ಈಗಿನ ಹೆಣ್ಣುಮಕ್ಕಳಿಗೆ ಎಷ್ಟು ಸಮಂಜಸ ಎಂಬ ಪ್ರಶ್ನೆ ಮೂಡುವುದು ಸಹಜ.

ಇಲ್ಲಿಯೂ ಪರಮ ನಾಸ್ತಿಕರ ಮನೆಯಲ್ಲಿಯೂ ಒಪ್ಪಬಹುದಾದ ತತ್ವಗಳು ಇವೆ. ಅಮ್ಮನ ಮನೆ-ಗಂಡನ ಮನೆ – ಎಲ್ಲರಲ್ಲೂ ಇದೆ. ಇಂತಹ ಸಂದರ್ಭದಲ್ಲಿ ಮನೆಯವರೆಲ್ಲರನ್ನೂ ಒಗ್ಗೂಡಿಸುವ ದಿನವಾಗಿ ಹಬ್ಬವನ್ನು ಆಚರಿಸಬಹುದು; ಇಲ್ಲ ನಾವೆಂದೋ ಮರೆತು ಹೋದ ಒಬ್ಬಟ್ಟು, ಲಕೋಟೆ ಹೋಳಿಗೆ, ಹಯಗ್ರೀವ ಮಾಡುವ ವಿಧಾನವನ್ನು ಅಜ್ಜಿಯಿಂದಲೋ, ಅಮ್ಮನಿಂದಲೋ ಕಲಿಯಬಹುದು; ಅಥವಾ ನಿತ್ಯದ ಗಡಿಬಿಡಿಯ ಒತ್ತಡಗಳನ್ನು ನಮಗೆ ಮರೆಯೋಕೆ ಒಂದೆರಡು ದಿವಸ ಮಾತ್ರ ಇರುವುದು, ಜೀವನದಲ್ಲಿ ಯಾವತ್ತೋ ಒಂದು ದಿನ ಮುಳುಗುತ್ತೇವೆ – ಎಂಬ ಸತ್ಯ ಅರಿವಾಗಿ ಗರ್ವ ಪಡದೆ ಹುಶಾರಾಗಿ ಇರಬಹುದು. ಇಂತಹ ಸಂದೇಶಗಳಿರುವ ಹಬ್ಬಗಳನ್ನು ಈಗಿನ ಕಾಲಕ್ಕೂ ಅರ್ಥಗರ್ಭಿತವಾಗಿ ಆಚರಿಸಬಹುದು.

ನಮ್ಮ ಪೂರ್ವಜರ ಪ್ರಕಾರ ಗೌರಿ–ಗಣೇಶ ಹಬ್ಬ ನಮ್ಮ ಪ್ರಕೃತಿಗೆ ಬಹಳ ಹತ್ತಿರವಾದ ಹಬ್ಬ. ಮಣ್ಣಿನಲ್ಲಿ ಗೌರಿ–ಗಣೇಶನ್ನು ಮಾಡಿ ಅದನ್ನು ಮತ್ತೆ ಅದೇ ಕೆರೆಯ ನೀರಿನಲ್ಲಿ ಮುಳುಗಿಸುವ ಪ್ರಕ್ರಿಯೆ. ನಾವು ಎಲ್ಲಿಂದ ಬಂದೆವೋ ಅಲ್ಲಿಗೇ ವಾಪಸ್ಸು ಹೋಗಬೇಕೆಂಬ ವಿಚಾರ ಇಲ್ಲಿ ಕಾಣುತ್ತದೆ. ನಮ್ಮಜ್ಜ ಹೇಳುತ್ತಿದ್ದರು, ಆಗ ಮನೆಯಲ್ಲಿಯೇ ಮಕ್ಕಳೆಲ್ಲ ಸೇರಿ ಗಣೇಶನನ್ನೂ ಗೌರಿಯನ್ನೂ ಮಾಡಿ, ಆ ಮೂರ್ತಿಗಳನ್ನೇ ಪೂಜೆ ಮಾಡುತ್ತಿದ್ದರಂತೆ. ಇದೊಂದು ರೀತಿಯಲ್ಲಿ, ಮನೆಯವರೆಲ್ಲರೂ ಕಲಾಕೌಶಲವನ್ನು ಪ್ರದರ್ಶಿಸುವ ರೀತಿ. ಯಾವ ದೇವರು ಸಹ ‘ಹೀಗೆ ಹಾಗೆ’ ಎಂದು ಬೇಡಿಕೆಯಿಡದಿದ್ದ ಕಾರಣ ನಮಗೆ ಬೇಕಾದ ಹಾಗೆ ಗಣೇಶನ ಸೊಂಡಿಲು, ಕಿವಿಗಳನ್ನು ಮಾಡಿ, ಗೌರಿಗೆ ಒಳ್ಳೆಯ ಅಲಂಕಾರಮಾಡಿ, ಮಂಟಪದಲ್ಲಿ ಕೂಡಿಸುತ್ತಿದ್ದರು. ಆದರೆ ಈಗ ಪ್ಲಾಸ್ಟರ್ ಆಫ್ ಪ್ಯಾರಿಸ್ನಲ್ಲಿ ಮಾಡಿರುವ ಹೊಳೆಯುವ ಮೂರ್ತಿಯನ್ನು ತರುತ್ತೇವೆ. ಈ ಮೊದಲು ಗೌರಿಗೆ ಯಾವುದೇ ಬಣ್ಣ ಹೊಡೆದರೂ ಅರಿಸಿನದ ಹಳದಿ ಬಂದರೆ ಮಾತ್ರ ಪೂಜೆಗೆ ಯೋಗ್ಯ ಎಂದು ದೊಡ್ಡವರು ಹೇಳುತ್ತಿದ್ದರು. ಈಗ ಗೌರಿ ನಮ್ಮಂತೆ ಪೇಲ್ ಸ್ಕಿನ್ ಕಲರ್ ಆಗಿ ಅವಳೂ ನಮ್ಮ ರೀತಿಯೇ ಕೆನ್ನೆಗೆ ಬ್ಲಶ್ ಹಚ್ಚಿಕೊಂಡಿರುತ್ತಾಳೆ. ಇದು ಬಹಳ ಕೃತಕವಾಗಿ ಕಾಣುತ್ತದೆ. ಅಲ್ಲಲ್ಲಿ ಪ್ಲಾಸ್ಟಿಕ್ಕಿನ ಕಮಾನುಗಳು ಸೇರಿ ಭೂಮಿತಾಯಿಯ ಮಗಳ ಹಬ್ಬವನ್ನು ಕಲುಷಿತಗೊಳಿಸುತ್ತಿದ್ದೇವೆ. ಹಬ್ಬದ ನಿಜವಾದ ಅರ್ಥವನ್ನೇ ಕೆಡಿಸುತ್ತಿದ್ದೇವೆ ಎಂದು ಅನ್ನಿಸುತ್ತದೆ.

ಈಗಿನ ಬೆಂಗಳೂರಿನ ಟ್ರಾಫಿಕ್ಕಿನಲ್ಲಿ, ಮನೆಮನೆಗೂ ಹೋಗಿ 15 ಮುತ್ತೈದೆಯರಿಗೆ ಬಾಗಿನ ಕೊಡೋದು ತೀರ ಕಷ್ಟ. ಆ ಟ್ರಾಫಿಕ್, ಮತ್ತೆ ಯಾವತ್ತೂ ಉಪಯೋಗಿಸದ ಬಾಗಿನ, ಅಲ್ಲಿರುವ ಸಾಮಾನುಗಳು – ಒಮ್ಮೊಮ್ಮೆ ನಮ್ಮನ್ನು ಕಸಿವಿಸಿಗೊಳಿಸುತ್ತದೆ. ಇದು ಹಳೆಯ ಕಾಲದಿಂದ ಆಧುನಿಕತೆಗೆ ಹೋಗುವ ಟ್ರಾನ್ಸಿಶನ್ ಪೀಳಿಗೆಯ ಸಂಕಟ. ನಮಗೆ ಯಾವುದು ಬೇಕು ಎಂಬ ಆಯ್ಕೆಯನ್ನು ಮಾಡಿಕೊಳ್ಳುವುದು ಬಹು ಕಷ್ಟ. ಯಾರಾದರೂ ಏನಾದರೂ ಅಂದುಕೊಳ್ಳುತ್ತಾರೆ ಎಂಬ ಕಾರಣದಿಂದ ತುಂಬ ಜನರ ಮನೆಯಲ್ಲಿ ಎಲ್ಲ ಶಾಸ್ತ್ರಗಳನ್ನು ಪಾಲಿಸುತ್ತಾರೆ; ಕೆಲವರು ಮಾತ್ರವೇ ಅವನ್ನು ಇಷ್ಟಪಟ್ಟು ಪಾಲಿಸುತ್ತಾರೆ. ಈಗಿನ ಕಾಲದ ಹೆಣ್ಣುಮಕ್ಕಳು ಮನೆಯಲ್ಲಿಯೇ ಇರುವುದಿಲ್ಲ; ಅವರಿಗೇ ಎಂದು ಒಂದು ಕೆಲಸವಿರುತ್ತದೆ. ಅವೆಲ್ಲದರ ಜೊತೆ ಈ ಹಳೆಯ ಕಾಲದ ಸಂಪ್ರದಾಯಪಾಲನೆಯ ಬ್ಯಾಲೆನ್ಸ್ ಮಾಡುವುದು ಕಷ್ಟವೇ ಸರಿ. ಗೌರೀಹಬ್ಬ ಕೆಲವು ಪ್ರಾಂತ್ಯಗಳಿಗೆ ಮಾತ್ರ ಸೀಮಿತವಾಗಿರುವ ಹಬ್ಬ. ಅವತ್ತಿನ ದಿವಸ ಸಾರ್ವತ್ರಿಕ ರಜೆ ಇರುವುದಿಲ್ಲ. ಇನ್ನು ಶ್ರಾವಣಮಾಸ, ಭಾದ್ರಪದ ಮಾಸದಲ್ಲಿ ‘ಕೂತ್ರೆ ಹಬ್ಬ, ನಿಂತ್ರೆ ಹಬ್ಬ’. ಇದು ಯಾವುದನ್ನೂ ಅಮೆರಿಕದ ಸಮಯಕ್ಕೆ ಕೆಲಸ ಮಾಡುವ ಕಂಪನಿಗೆ ಅರ್ಥ ಮಾಡಿಸುವುದಕ್ಕಾಗುವುದಿಲ್ಲ. ಇಂತಹ ಪಡಿಪಾಟಲುಗಳು ಹೆಣ್ಣುಮಕ್ಕಳಿಗೇ ಜಾಸ್ತಿ. ಹೀಗಿರುವಾಗ ಹೇಗೆ ಹಬ್ಬವನ್ನು ಆಚರಿಸುವುದು – ಎನ್ನುವ ಪ್ರಶ್ನೆಗೆ ನನಗಿನ್ನೂ ಉತ್ತರ ಸಿಕ್ಕಿಲ್ಲ. ಆದರೆ ಹಬ್ಬದ ಸಂದೇಶಗಳು ನನಗೆ ಬಹಳ ಇಷ್ಟವಾಗುತ್ತವೆ. ಆದರೆ ಆಚರಣೆಗಳನ್ನು ಬಿಟ್ಟರೆ ನಮ್ಮ ಪೀಳಿಗೆಗೇ ನಮ್ಮ ಸಂಪ್ರದಾಯಗಳು ನಿಂತುಹೋಗುತ್ತವೆ. ನಮ್ಮ ಮುಂದಿನದಕ್ಕೆ ಏನು ಹೇಳೋದು ಎಂಬ ಯೋಚನೆ ಬರುವುದು ಸಹಜ. ಇಂತಹ ಸನ್ನಿವೇಶದಲ್ಲಿ ನಾವು ಹಬ್ಬಗಳನ್ನು ಯಾವ ಕಾರಣದಿಂದ, ಯಾರಿಗಾಗಿ ಆಚರಿಸುತ್ತೇವೆ – ಎಂದು ತಿಳಿದು, ಅವನ್ನು ಮುಂದುವರಿಸಬೇಕಿದೆ.

ಹಬ್ಬಗಳು ನಮ್ಮನ್ನು ಒಟ್ಟುಗೂಡಿಸಬೇಕು. ಮನೆಯಲ್ಲಿನ ಎಲ್ಲ ಮನಸ್ಸುಗಳು ನಗುತ್ತಿರಬೇಕು. ಅದು ಹಬ್ಬಗಳ ಕೆಲಸ. ಯಾವುದೇ ಆಚರಣೆಗಳು ಮಕ್ಕಳ ಮನಸ್ಸನ್ನು ನೋಯಿಸಬಾರದು. ಅಜ್ಜ ಯಾವಾಗಲೂ ನಮಗೆ ಹೇಳುತ್ತಿದ್ದರು, ‘ಮಕ್ಕಳಿಗೆ ನಗುವನ್ನು ತರದೇ ಇದ್ದದ್ದು ಹಬ್ಬವೇ ಅಲ್ಲ’ ಎಂದು. ಹಾಗೆಯೇ ಹಬ್ಬ ನಮ್ಮ ಜೀವನದಲ್ಲಿ ನಗು ತರಲಿ; ಮುರಿದುಹೋದ ಮನಸ್ಸುಗಳನ್ನು ಒಗ್ಗೂಡಿಸಲಿ. ಒಳ್ಳೆಯ ಊಟ, ಬಟ್ಟೆಗಳ ಜೊತೆಯಲ್ಲಿ ಒಳ್ಳೆಯ ಮನಸ್ಸನ್ನೂ ನೀಡಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.