ಕೊರೊನಾ ಕಾಲಘಟ್ಟದಲ್ಲಿ ಲಾಕ್‌ಡೌನ್ ಇದ್ದಂಥ ವೇಳೆ ಗುಬ್ಬಚ್ಚಿಗಳ ಕಲರವ ಊರೊಳಗೆ ಕೇಳುವಂತಾಗಿತ್ತು. ಆದರೀಗ ಮತ್ತದೇ ಪರಿಸ್ಥಿತಿ! ಕೊರೊನಾ ಕ್ಷೀಣಿಸಿದೆ ಬದುಕು ಮುಕ್ತವಾಗಿದೆ. ಮತ್ತೆ ಗುಬ್ಬಚ್ಚಿಗಳು ಮಾಯವಾಗಿವೆ.

ಗ್ವಾಡಿಯೊಳಗ ಸಂದಿ ಕೊರದು
ಗೂಡ ಮಾಡ್ಕೊಂಡ ಬದಕ್ತಿದ್ದಿ
ಮನಿಯೊಳಗ ಹಾರಿ ಬಂದು
ಕನ್ನಡಿ ನೋಡಿ ಕುಣಿದಾಡ್ತಿದ್ದಿ
ಈಗ ಮಾತ್ರ ಕಾಣವಲ್ಲಿ
ಊರ್ಗುಬ್ಬಿ ಎಲ್ಲಿಗ್ಹೋದಿ!

ಪುಟ್ಟ ಪುಟ್ಟ ದೇಹ, ಟುಣು ಟುಣು ಜಿಗಿತ, ಅತ್ತಿತ್ತ ಹೊರಳಾಡಿಸುವ ಕತ್ತು, ಮಿಂಚುಗಣ್ಣು, ಚಿಕ್ಕ ಚುಂಚು, ಚಿಂವ್ ಚಿಂವ್ ನಾದ, ಪುರ‍್ರನೆ ಹಾರುವ ಸದ್ದು, ಇಂಥ ಗುಣ ವಿಶೇಷಣದ ಗುಬ್ಬಚ್ಚಿಗಳು ಎಂಥವರನ್ನೂ ಮಂತ್ರಮುಗ್ಧಗೊಳಿಸುತ್ತವೆ. ಅವುಗಳ ಸರಸ-ವಿರಸ, ಆಟ-ಚೆಲ್ಲಾಟ, ಲಾಲನೆ-ಪಾಲನೆ, ಗೂಡ ಕಟ್ಟುವ ಅಂದ-ಚಂದ, ಚಿಲಿಪಿಲಿಗುಟ್ಟುವ ನಾದಸ್ವರ, ಕೆಲಹೊತ್ತು ನಿಂತು ಗಮನಿಸಿದರೆ ಸಾಕು ಮೈಮರೆಯುವಂತಾಗುತ್ತದೆ. ಇಂಥ ಗುಬ್ಬಚ್ಚಿಗಳು ಇಂದು ಕಾಣಸಿಗುವುದು ಅಪರೂಪ!

ನಮ್ಮ ಮನೆಯ ಸದಸ್ಯರ ಹಾಗೆ ಅಂಗಳದಲ್ಲಿ, ಪಡಸಾಲೆಯಲ್ಲಿ, ಫೋಟೊಗಳ ಹಿಂದೆ, ಜಂತಿ, ಮಾಳಗಿ, ಗೋಡೆಯ ಸಂದಿಯಲ್ಲಿ ಗೂಡು ಕಟ್ಟಿಕೊಂಡು ಇರುತ್ತಿದ್ದವು. ಹಿಡಿಯಷ್ಟು ಆಕಾರದ ಗುಬ್ಬಿಗಳ ಸಂಸಾರ ಅದೆಷ್ಟು ಚಂದ! ಗಂಡು ಹೆಣ್ಣು ಜತೆ ಜತೆಯಾಗಿ ಹಾರಾಡುತ್ತ ಇರುವುದನ್ನು ನೋಡಿದರೆ ಎರಡು ಕಣ್ಣು ಸಾಲುತ್ತಿರಲಿಲ್ಲ. ಗುಬ್ಬಿಗಳು ಇಲ್ಲದ ಮನೆಗಳೇ ಇಲ್ಲ ಅನ್ನುವಂಥ ಸನ್ನಿವೇಶ ಆಗಿನ ಕಾಲದ್ದು. ಕುಟುಂಬ ಜೀವನ ಹೇಗೆ ನಡೆಸಬೇಕೆಂಬುದನ್ನು ಅವುಗಳು ಕಲಿಸಿಕೊಡುತ್ತಿದ್ದವು.

ಪ್ರತಿಯೊಂದು ಹಳ್ಳಿಯಲ್ಲಿ ಕುರಿ, ಕೋಳಿ, ದನಕರುಗಳನ್ನು ಸಾಕುವುದು ಸರ್ವೇಸಾಮಾನ್ಯ. ಅವುಗಳಿಗೆ ಮೇವು, ನೀರು, ಕಾಳು ಕಡಿ ಇಡುವುದೊಂದೇ ತಡ ಗುಬ್ಬಿಗಳು ಹಿಂಡಗೂಡಿ ಬಂದು ಹೊಟ್ಟೆ ತುಂಬ ತಮಗೆ ಬೇಕಾದುದನ್ನು ತಿಂದು, ನೀರು ಕುಡಿದು ಹಾಯಾಗಿರುತ್ತಿದ್ದವು. ಮಧ್ಯಾಹ್ನದ ಸುಡುವ ಬಿಸಿಲಿನಲ್ಲಿ ಗಿಡದ ಕೆಳಗೆ ಒಡೆದ ಮಣ್ಣಿನ ಗಡಿಗೆ ನೆಲದೊಳಗೆ ಅರ್ಧ ಹುದುಗಿಸಿ, ಕೋಳಿ ನಾಯಿ ಬೆಕ್ಕುಗಳು ಕುಡಿಯಲೆಂದು ನೀರು ತುಂಬಿಸಿ ಇಡುತ್ತಿದ್ದರು. ಅಲ್ಲಿಗೆ ಖುಷಿ ಖುಷಿಯಾಗಿ ಹಾರಿ ಬಂದು ಅವುಗಳ ಜತೆಗೆ ತಾವೂ ಬೆರೆತು ನೀರು ಕುಡಿಯುತ್ತಿದ್ದವು. ಸ್ವಲ್ಪ ಹೊತ್ತು ಅದೇ ನೀರಿನಲ್ಲಿ ಪುರ‍್ರ್ ಪುರ‍್ರ್ ಅಂತ ಈಜಾಡಿ ಮೈ ತಂಪು ಮಾಡಿಕೊಳ್ಳುವುದನ್ನು ನೋಡಿದರೆ ನಮಗೂ ಬಾವಿಗೆ ಹೋಗಿ ಗುಬ್ಬಚ್ಚಿಗಳಂತೆ ನೀರಿನಲ್ಲಿ ಈಜಾಡಬೇಕು ಅನಿಸುತ್ತಿತ್ತು. ಎಷ್ಟೋ ಬಾರಿ ಹಾಗೆ ಮಾಡಿ ನಮ್ಮಾಸೆ ಈಡೇರಿಸಿಕೊಂಡಿದ್ದೇವೆ.

ಗುಬ್ಬಿ ಗುಬ್ಬಿ
ಚಿಂವ್ ಚಿಂವ್ ಎಂದು
ಕರೆಯುವೆ ಯಾರನ್ನು?
ಆಚೆ ಈಚೆ
ಹೊರಳಿಸಿ ಕಣ್ಣು
ನೋಡುವೆ ಏನನ್ನು?

ಎನ್ನುವ, ಗುಬ್ಬಿ ಕುರಿತು ಎ.ಕೆ.ರಾಮೇಶ್ವರ ಅವರು ಬರೆದ ಹಾಡು ನಮಗೆ ಪ್ರಾಥಮಿಕ ಶಾಲೆಯಲ್ಲಿ ಕಲಿಯುವಾಗ ಕನ್ನಡ ಪುಸ್ತಕದಲ್ಲಿ ಇತ್ತು. ಗುರುಗಳಿಂದ ಈ ಪದ್ಯ ಕೇಳಿದ ಮೇಲಂತೂ ಗುಬ್ಬಿ ಕಂಡರೆ ಹೆಚ್ಚೆಚ್ಚು ಪ್ರೀತಿ ಉಕ್ಕಲು ಶುರುವಾಯಿತು.

ಗಿಡದ ರೆಂಬೆಗೆ ನೆಲುವು ಕಟ್ಟಿ ಅದರೊಳಗೆ ನೀರು ತುಂಬಿದ ಪಾತ್ರೆ ಇಡುವುದು, ಮನೆ ಮನೆಗಳ ಅಂಗಳದಲ್ಲಿ ಕಾಳ ಕಡಿ ಚೆಲ್ಲುವುದನ್ನು ರೂಢಿ ಮಾಡಿಕೊಂಡೆವು. ಇದರಿಂದ ನಮಗೂ ಮತ್ತು ಗುಬ್ಬಿಗಳಿಗೆ ದೋಸ್ತಿ ಬೆಳೆಯಿತು! ನಮ್ಮನ್ನು ಕಂಡು ಅವುಗಳು ಹಿಂಡು ಹಿಂಡಾಗಿ ಹತ್ತಿರಕ್ಕೆ ಬರುತ್ತಿದ್ದವು.

ಊರ ಅಗಸಿಯ ಬಾಗಿಲು, ಚಾವಡಿಯ ಮೇಲ್ಚಾವಣಿ, ಮಣ್ಣು, ಹುಲ್ಲು, ಹೆಂಚಿನ ಮನೆಗಳ ಗೋಡೆ, ಮಾಡು, ಕಿಟಕಿಗಳಲ್ಲಿ, ಗುಡಿ, ಚರ್ಚು, ಮಸೀದಿ, ಬಸದಿಗಳ ಸಂಧಿ ಗೊಂದಿಗಳಲ್ಲಿ ಗುಬ್ಬಿಗಳು ಗೂಡು ಕಟ್ಟಿ ಬದುಕುತ್ತಿದ್ದವು. ಜಾತಿ ಧರ್ಮಗಳ ಕಿರಿಕಿರಿ ಇಲ್ಲ. ಮೈಕು, ಸೌಂಡು, ಮೊಬೈಲು, ಟವರ್, ಹಾರ್ನು, ಟ್ಯಾಕ್ಟರು, ಫ್ಯಾಕ್ಟ್ರಿ ಸೈರನ್ನು, ಕೊಳೆ, ಇಂಥವುಗಳ ಹಾವಳಿ ಇಲ್ಲದ ಕಾಲವದು. ಗುಬ್ಬಿಗಳ ನೆಮ್ಮದಿಗೆ ಆಗ ಭಂಗವಿರಲಿಲ್ಲ.

ಅಚ್ಚುಮೆಚ್ಚಿನ ಜೋಡಿ

ಅನುಕೂಲ ದಾಂಪತ್ಯ

ಬೆರಗುಗೊಳಿಸುವ ಪ್ರತಿಭೆ ಗುಬ್ಬಿಗಳಿಗೆ

ಉಭಯ ಪಕ್ಷಿಗಳಲ್ಲಿ

ಮಿಗಿಲು ಯಾವುದು ಎಂದು

ಹೇಳಲಾಗದು ಬುದ್ಧಿಜೀವಿಗಳಿಗೆ!

ಹೀಗೆ ತಮ್ಮ 'ಹೊಸಬಾಳು' ಪದ್ಯದಲ್ಲಿ ಬಿ.ಎಸ್.ಕುರ್ಕಾಲರು ಗಂಡು ಹೆಣ್ಣು ಗುಬ್ಬಿಗಳಲ್ಲಿ ಯಾವುದು ಹೆಚ್ಚು ಎಂದು ಹೇಳಲಾಗದು. ಅವುಗಳ ಪ್ರತಿಭೆ ಸಮಸಮ. ಅಲ್ಲಿ ಅನುಕೂಲ ದಾಂಪತ್ಯವಿದೆ. ಅದು ಮನುಕುಲಕ್ಕೆ ಮಾದರಿ. ಅವುಗಳಿಂದ ತಿಳಿದುಕೊಳ್ಳಬೇಕಿರುವುದು ಬಹಳಷ್ಟಿದೆ ಎನ್ನುವುದು ಅವರ ಧಾಟಿಯಾಗಿದೆ. ಗುಬ್ಬಿಗಳ ಬಣ್ಣ ಕಂದು. ಬೆನ್ನು ಮತ್ತು ರೆಕ್ಕೆಗಳಲ್ಲಿ ಬಿಳಿ ಹಾಗೂ ಕರಿ ಬಣ್ಣಗಳು ಮಿಶ್ರಿತವಾಗಿರತ್ತವೆ. ಗಂಡು ಗುಬ್ಬಿ ನೋಡಲು ಆಕರ್ಷಕವಾಗಿದ್ದು ಅದರ ಗಂಟಲು ಮೇಲೆ ಕಪ್ಪುಕಲೆ ಇದೆ. ಕಪ್ಪು ಕೊಕ್ಕು ಹೊಂದಿದೆ.

ಒಂದನ್ನೊಂದು ಬಿಟ್ಟಿರದ ಇವು ತಮ್ಮ ಸಂತಾನದ ಅಭಿವೃದ್ಧಿಗಾಗಿ ಉತ್ತಮ ನೆಲೆ ಕಂಡುಕೊಂಡು ಅಲ್ಲಿಗೆ ಹುಲ್ಲು, ಕಡ್ಡಿ, ಅರಳೆ ತಂದು ಬೆಚ್ಚನೆಯ ಗೂಡುಕಟ್ಟುತ್ತವೆ. ಹೆಣ್ಣು ಗುಬ್ಬಿ ಮೊಟ್ಟೆಯಿಟ್ಟು ಕಾವುಕೊಟ್ಟು ಮರಿ ಮಾಡಿದರೆ ಗಂಡುಗುಬ್ಬಿ ರಕ್ಷಣೆಯಾಗುತ್ತದೆ. ಮೊಟ್ಟೆಯೊಡೆದು ಹೊರಬಂದ ಮರಿಗಳು ಅಗಲ ಬಾಯಿ ಪಡೆದಿರುತ್ತವೆ. ಅವುಗಳಿಗೆ ತಂದೆ ತಾಯಿ ಗುಬ್ಬಿಗಳು ಹುಳು ಹುಪ್ಪಟೆ, ಚಿಗುರು ಹುಡುಕಿ ತಂದು ತೆರೆದ ಬಾಯೊಳಗೆ ಹಾಕುತ್ತವೆ. ಈ ದೃಶ್ಯ ನೋಡಲು ಹೃದಯ ತುಂಬಿ ಬರುತ್ತದೆ. ಮಕ್ಕಳ ಮೇಲೆ ಹೆತ್ತವರ ಕಾಳಜಿ ಎಷ್ಟಿರುತ್ತದೆ ಎಂಬುದು ಗೋಚರಿಸಿ ಕಣ್ಣುಗಳು ಒದ್ದೆಯಾಗುತ್ತವೆ. ಎಷ್ಟು ಉಣಿಸಿದರೂ ಇನ್ನೂ ಇನ್ನೂ ಬೇಕೆಂದು ಕಿರುಚಿ ಬಾಯ್ತೆರೆದು ಹಲಬುವ ಕಂದಮ್ಮಗಳ ಕಿರಿಕಿರಿಗೆ ಬೇಸರಿಸಿಕೊಳ್ಳದೆ ಹುಡುಕಿ ತಂದದ್ದೆಲ್ಲವೂ ಮರಿಗಳಿಗೆ ಗುಟುಕು ನೀಡುವ ಗುಬ್ಬಚ್ಚಿಗಳು ನಿಜಕ್ಕೂ ಗ್ರೇಟ್!

ಗುಬ್ಬಚ್ಚಿಗಳ ಮೊಟ್ಟೆ ಮತ್ತು ಮರಿಗಳು ಆಗಾಗ ಬೆಕ್ಕು, ನಾಯಿ, ನರಿ, ಗೂಬೆ, ಹಾವು ಮೊದಲಾದ ಸರ್ವಭಕ್ಷಕಗಳಿಗೆ ಹಾಗೂ ಮಳೆ, ಗಾಳಿ, ಸಿಡಿಲುಗಳಿಗೆ ಬಲಿಯಾಗುತ್ತಿದ್ದವು. ಮರಿಗಳಿಗೆ ಆಹಾರ ತರಲು ದಂಪತಿ ಹೋದಾಗ ಇಂಥ ಅವಘಡಗಳು ಸಂಭವಿಸುತ್ತಿದ್ದವು. ಮರಳಿ ಬಂದಾಗ ಮರಿಗಳು ಕಾಣೆಯಾಗಿದ್ದರೆ ಅವುಗಳ ಸಂಕಟ ಹೇಳತೀರದು. ಇಷ್ಟಿದ್ದರೂ ಗುಬ್ಬಚ್ಚಿಗಳ ಸಂತತಿಗೆ ದೊಡ್ಡ ಪ್ರಮಾಣದ ಧಕ್ಕೆಯುಂಟಾಗುತ್ತಿರಲಿಲ್ಲ. ಕೆಲವು ದಶಕಗಳ ಹಿಂದೆ ಪರಿಸರ ಸಮತೋಲನದಲ್ಲಿಈಗಿನಷ್ಟು ಏರುಪೇರು ಆಗುತ್ತಿರಲಿಲ್ಲ. ಎಲ್ಲರೂ ಪ್ರಾಣಿ ಪಕ್ಷಿಗಳನ್ನು ಪ್ರೀತಿಸುವವರೇ ಆಗಿದ್ದರು. ಎಲ್ಲವನ್ನೂ ಬೇಟೆಯಾಡಿ ಕಬಳಿಸುವ ಮನೋಭಾವ ಆಗಿನದಲ್ಲವೆಂಬುದು ಸತ್ಯ. ಅವಶ್ಯಕತೆಗೆ ತಕ್ಕಂಥ ಬದುಕು ಇತ್ತು. ದುರಾಸೆಯ ಪ್ರಮಾಣ ಕಡಿಮೆ. ಇದಕ್ಕೆಲ್ಲ ಕಾರಣ ಆಧುನಿಕ ತಂತ್ರಜ್ಞಾನ ಅಡಿಯಿಟ್ಟಿರಲಿಲ್ಲ. ಕುಟ್ಟುವುದು, ಬೀಸುವುದು, ಕೇರುವುದು, ಒಣಗಿಸುವುದು, ರಾಶಿ ಮಾಡುವುದು, ಸ್ವಚ್ಛಗೊಳಿಸುವುದು ಹೀಗೆ ಇಂಥ ಕಾರ್ಯಗಳೆಲ್ಲವೂ ಮನುಷ್ಯರಿಂದ ನಡೆಯುತ್ತಿದ್ದವು. ಇದರಿಂದ ಊರುಗುಬ್ಬಿಗಳಿಗೆ ಸಾಕಷ್ಟು ಆಹಾರ ಸಿಗುತ್ತಿದ್ದುದರಿಂದ ಊರು ಬಿಡುತ್ತಿರಲಿಲ್ಲ.

ಮನೆಮನೆಗಳ ಅಂಗಳ, ರಸ್ತೆ, ಬೀದಿ, ತಿಪ್ಪೆ, ಮಾಳಿಗೆ ಹೀಗೆ ಎಲ್ಲೆಂದರಲ್ಲಿ ಕಾಳು, ಹುಳು ಹುಪ್ಪಟೆ ಗುಬ್ಬಚ್ಚಿಗಳ ಹೊಟ್ಟೆ ತುಂಬಿಸುತ್ತಿದ್ದವು. ಅಪ್ಪ ರಾಶಿ ಮಾಡುವಾಗ, ಅವ್ವ ಕಾಳು ಹಸನು ಮಾಡುವಾಗ, ಅಕ್ಕ ಕೇರುವಾಗ, ಅಜ್ಜಿ ಅಳೆಯುವಾಗ, ಅಜ್ಜ ದಾನ ಮಾಡುವಾಗ, ಅಣ್ಣ ಚೀಲ ತುಂಬುವಾಗ, ತಂಗಿ ಉಣ್ಣುವಾಗ, ತಮ್ಮ ಚೆಲ್ಲುವಾಗ ನಾನು ಒಂದಗುಳು ಎತ್ತಿಡುವಾಗ ಗುಬ್ಬಿಗಳಿಗೆ ಹಬ್ಬ! ಇದೆಲ್ಲ ಕ್ರಿಯೆ ನಡೆಯುವ ವೇಳೆ ಕಾಳು ಉದುರುದುರಿ ಬೀಳುವುದು ಸಹಜ. ಗುಬ್ಬಚ್ಚಿಗಳು ಕುಪ್ಪಳಿಸಿ ಆಯ್ದು ಕುಕ್ಕಿ ಕುಕ್ಕಿ ತಿನ್ನುತ್ತ ಹೊಟ್ಟೆ ಹೊರೆದುಕೊಳ್ಳುತ್ತಿದ್ದವು. ಜತೆಗೆ ಮಕ್ಕಳಿಗೆ ಉಣಿಸಲು ಒಯ್ಯುತ್ತಿದ್ದವು.

ವಾಹನಗಳ ದಟ್ಟಣೆ, ಕೈಗಾರಿಕೆಗಳ ಹೆಚ್ಚಳ, ಮೊಬೈಲ್ ಟವರ್‌ಗಳ ಸ್ಥಾಪನೆ ಮೊದಲಾದ ಕಾರಣಗಳಿಂದ ಗುಬ್ಬಚ್ಚಿಗಳ ಸಂತತಿ ನಶಿಸಿ ಹೋಗುವಂತಾಗಿದೆ. ಹುಲ್ಲು, ಮಣ್ಣು, ಹೆಂಚಿನ ಮನೆಗಳ ಸ್ಥಳದಲ್ಲಿ ಕಲ್ಲು, ಇಟ್ಟಿಗೆ, ಸಿಮೆಂಟ್ ಮನೆಗಳು ನಿರ್ಮಾಣವಾಗಿವೆ, ಗೂಡು ಕಟ್ಟಲು ಜಾಗವಿಲ್ಲ. ರಾಸಾಯನಿಕ ಗೊಬ್ಬರಗಳ ಉಪಯೋಗ ಅನಿವಾರ್ಯವಾಗಿದೆ. ಹೀಗಾಗಿ ಎಲ್ಲೆಂದರಲ್ಲಿ ಗುಬ್ಬಿಗಳಿಗೆ ಆಹಾರ ದಕ್ಕದಾಗಿದೆ. ಅವುಗಳತ್ತ ಕಾಳಜಿ ತೋರುವ ಸಂಸ್ಕೃತಿಯೂ ಮಾಯವಾಗುತ್ತಿದೆ.

ಬಂಧು ಬಳಗ ಕೂಡಿಕೊಂಡು

ಅಂಗಳ ತುಂಬಾ ಆಡ್ತಿದ್ದಿ

ಕಾಳ್ಕಡಿ ಹುಡುಕಿ ತಿಂದು

ಮಕ್ಳು ಮರಿ ಸಾಕ್ತಿದ್ದಿ

ಈಗ ಮಾತ್ರ ಕಾಣುವಲ್ಲಿ

ಊರ್ಗುಬ್ಬಿ ಎಲ್ಲಿಗ್ಹೋದಿ!?

ಎನ್ನುವ ನೋವು ಕಾಡುವಂತಾಗಿದೆ. ಇದು ಹೀಗೇ ಉಳಿಯಬಾರದು. ಅಳಿದುಳಿದ ಗುಬ್ಬಚ್ಚಿಗಳಿಗೆ ನೆಲೆ ಒದಗಿಸೋಣ. ಅವುಗಳಿಗೆ ಪೂರಕವಾದ ಪರಿಸರ ಒದಗಿಸುವತ್ತ ದಾಪುಗಾಲು ಇಟ್ಟು ಗುಬ್ಬಿಗಳ ಸಂತತಿ ಹೆಚ್ಚಿಸೋಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.