‘ಮಾತು ಬೆಳ್ಳಿ, ಮೌನ ಬಂಗಾರ’ ಎನ್ನುವ ನುಡಿಗಟ್ಟನ್ನು ಕನ್ನಡದ ಹಲವು ಜಾಣ ಬರಹಗಾರರು ಅಕ್ಷರಶಃ ಅನುಸರಿಸುತ್ತಿರುವ ಸಂದರ್ಭದಲ್ಲಿ, ಎನ್.ಎಸ್. ಶಂಕರ್ ಪ್ರಜ್ಞಾಪೂರ್ವಕವಾಗಿ ಮಾತನಾಡುತ್ತಿದ್ದಾರೆ – ‘ಉಸಾಬರಿ’ ಕೃತಿಯ ಮೂಲಕ. ಅವರು ಹೀಗೆ ಮಾತನಾಡುತ್ತಿರುವುದು ಹೊಸದೇನೂ ಅಲ್ಲ. ಲೇಖಕನಾಗಿ, ಪತ್ರಕರ್ತನಾಗಿ ಸಮಕಾಲೀನ ಸಂದರ್ಭಕ್ಕೆ ತಮ್ಮ ಸೃಜನಶೀಲ ಪ್ರತಿಕ್ರಿಯೆಯನ್ನು ಶಂಕರ್ ವ್ಯಕ್ತಪಡಿಸುತ್ತಲೇ ಇದ್ದಾರೆ. ಆ ಪ್ರತಿಕ್ರಿಯೆಯ ಮುಂದುವರಿದ ರೂಪವಾದುದರಿಂದಲೇ ತಮ್ಮ ಕೃತಿಯನ್ನು ಅವರು, ‘ಮತ್ತಷ್ಟು ಸಮಕಾಲೀನ ಬರಹಗಳು’ ಎಂದು ಕರೆದುಕೊಂಡಿರುವುದು ಸಮಂಜಸವಾಗಿದೆ.

‘ಉಸಾಬರಿ’ ಎನ್ನುವ ಶಬ್ದಕ್ಕೆ ಗೊಡವೆ, ತಂಟೆ ಎನ್ನುವ ಜನಪ್ರಿಯ ಅರ್ಥಗಳ ಜೊತೆಗೆ ‘ತೊಡಕು’ ಎನ್ನುವ ಮತ್ತೊಂದು ಅರ್ಥವೂ ಇದೆ. ಪ್ರಸ್ತುತ ಸಂದರ್ಭದಲ್ಲಿ ಸಮಕಾಲೀನ ಸಂಗತಿಗಳ ತಂಟೆಗೆ ಹೋಗುವುದೆಂದರೆ, ತೊಡಕನ್ನು ಮೈಮೇಲೆ ಎಳೆದುಕೊಳ್ಳುವುದೆಂದೇ ಅರ್ಥ. ಆ ನಿಟ್ಟಿನಲ್ಲಿ ‘ಉಸಾಬರಿ’ ಶೀರ್ಷಿಕೆ ಇಡೀ ಕೃತಿಯ ಆಶಯವನ್ನು ಧ್ವನಿಸುವ ಅರ್ಥಪೂರ್ಣ ರೂಪಕವಾಗಿದೆ.

ಈ ಸಂಕಲನದ ಬರಹಗಳು ಮೂರು ಭಾಗಗಳಲ್ಲಿ ವಿಂಗಡಣೆಗೊಂಡಿವೆ. ಮೊದಲ ಭಾಗದ ಮೂರು ಬರಹಗಳು – ನಟರಾಜ್ ಹುಳಿಯಾರರ ‘ಇಂತೀ ನಮಸ್ಕಾರಗಳು’, ದೇವನೂರ ಮಹಾದೇವರ ‘ಎದೆಗೆ ಬಿದ್ದ ಅಕ್ಷರ’ ಹಾಗೂ ಯಶವಂತ ಚಿತ್ತಾಲರ ‘ಶಿಕಾರಿ’ ಕೃತಿಗೆ ಲೇಖಕರ ಸ್ಪಂದನಗಳಾಗಿವೆ. ಈ ಬರಹಗಳು ಆಯಾ ಕೃತಿಗಳ ಈವರೆಗಿನ ಓದಿಗೆ ಹೊಸ ಆಯಾಮವೊಂದನ್ನು ನೀಡುವ ಪ್ರಯತ್ನವಾಗಿರುವುದರ ಜೊತೆಗೆ, ಕೃತಿಗಳ ಕೇಂದ್ರದಲ್ಲಿರುವ ವ್ಯಕ್ತಿಗಳ ಕುರಿತಂತೆ ಲೇಖಕರ ವಿಮರ್ಶಾತ್ಮಕ ಅನಿಸಿಕೆಗಳೂ ಆಗಿವೆ. ಲಂಕೇಶ್, ದೇವನೂರರನ್ನು ಮೆಚ್ಚಿಕೊಳ್ಳುತ್ತಲೇ, ಆ ಮೆಚ್ಚುಗೆ ಆರಾಧನೆಯಾಗದಂತೆ ಲೇಖಕರು ವಹಿಸಿರುವ ಎಚ್ಚರ ತುಂಬಾ ಅಪರೂಪದ್ದು. ‘ಎದೆಗೆ ಬಿದ್ದ ಅಕ್ಷರ’ ಕೃತಿಯ ಬರಹಗಳ ಅನನ್ಯತೆಗೆ ಅಡಿಗೆರೆ ಎಳೆದೂ, ‘ಮನುಷ್ಯರನ್ನು ಮನುಷ್ಯರನ್ನಾಗಿ ಮಾಡುವ ವ್ರತ ಹಿಡಿದವನು’ ಮಾಡಿರುವ ಕೆಲಸವಿದು ಎಂದು ದೇವನೂರರ ಬರಹಗಳನ್ನು ಬಣ್ಣಿಸಿಯೂ, ‘ಹೀಗೆ ಮುಂದುವರೆದರೆ’ ವಿಭಾಗದ ಬಹುತೇಕ ಬರಹಗಳು ಮೈ ಕೈ ನೋಯಿಸಿಕೊಳ್ಳದ, ಯಾವ ತೊಳಲಾಟವೂ ಇಲ್ಲದ ಸಂಪಾದಕೀಯ ಧಾಟಿಯ ಬರಹಗಳು ಎಂದು ಹೇಳುವುದು ಅವರಿಗೆ ಸಾಧ್ಯವಾಗಿದೆ.

ಪುಸ್ತಕದ ಎರಡನೇ ಭಾಗದ ಬರಹಗಳನ್ನು ಸಮಕಾಲೀನ ವಿದ್ಯಮಾನಗಳಿಗೆ ಲೇಖಕರ ಪ್ರತಿಕ್ರಿಯೆಯ ರೂಪದಲ್ಲಿ ನೋಡಬಹುದು. ವರ್ತಮಾನಕ್ಕೆ ಮುಖಾಮುಖಿಯಾಗುವ, ನೆನಪುಗಳನ್ನು ಆಶ್ರಯಿಸುವ ಕ್ರಮ ‘ಉಸಾಬರಿ’ ಬರಹಗಳಿಗೆ ಸಾಂಸ್ಕೃತಿಕ ಆಯಾಮವನ್ನು ದೊರಕಿಸಿಕೊಟ್ಟಿದೆ. ‘ಮೇಷ್ಟ್ರಿಲ್ಲದ ಹತ್ತು ವರ್ಷ’ ಶೀರ್ಷಿಕೆಯೇ, ಮೇಷ್ಟ್ರು ಇದ್ದಿದ್ದರೆ ಕನ್ನಡದ ವೈಚಾರಿಕತೆಗೆ ದೊರೆಯಬಹುದಿದ್ದ ಹೊಸ ನೋಟವೊಂದರ ಅಗತ್ಯವನ್ನು ಸೂಚಿಸುವಂತಿದೆ. ಇದೊಂದು ಬರಹ ಮಾತ್ರವಲ್ಲ, ಇಡೀ ಕೃತಿಯುದ್ದಕ್ಕೂ ಲಂಕೇಶ್ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಇಣುಕಿದ್ದಾರೆ. ಗಾಂಧಿ, ಅಂಬೇಡ್ಕರ್ ಅವರನ್ನು ಶಂಕರ್ ತಮ್ಮ ಜೊತೆಗಿರಿಸಿಕೊಂಡು ಮಾತನಾಡಿದ್ದಾರೆ.

ಪತ್ರಿಕೋದ್ಯಮ, ಕಮ್ಯುನಿಸ್ಟರು, ಟಾಲ್‌ಸ್ಟಾಯ್, ಶಿವರಾಮ ಕಾರಂತ, ರೈತ ಚಳವಳಿ, ‘ಮೀ ಟೂ’ ಆಂದೋಲನ, ರೈತರು, ದೇಶಭಕ್ತಿ ಮತ್ತು ದೇಶದ್ರೋಹ – ಹೀಗೆ ಹಲವರು, ಹಲವು ಸಂಗತಿಗಳನ್ನು ಶಂಕರ್ ತಮ್ಮ ಬರಹಗಳಲ್ಲಿ ಮುಖಾಮುಖಿಯಾಗಿಸುತ್ತಾರೆ. ಈಶ್ವರ ಮತ್ತು ಅಲ್ಲಾನನ್ನು ಒಟ್ಟಿಗೆ ಕಾಣುವ ಹಾಗೂ ಈಗ ಮರೆವಿಗೆ ಸಂದಂತೆ ಕಾಣಿಸುತ್ತಿರುವ ಬಹುತ್ವ ಭಾರತದ ಜೊತೆಗೆ, ಏಕರೂಪದ ಸಂಸ್ಕೃತಿಯನ್ನು ಪ್ರತಿಪಾದಿಸುತ್ತಿರುವ ಈ ಹೊತ್ತಿನ ಸಂಘರ್ಷದ ಮಾದರಿಯ ಭಾರತದ ಚಿತ್ರಣವನ್ನೂ ಶಂಕರ್ ಕಟ್ಟಿಕೊಡುತ್ತಾರೆ. ಈ ಮುಖಾಮುಖಿಯಲ್ಲಿ ‘ನಿಮ್ಮ ಆಯ್ಕೆ ಯಾವುದು?’ ಎನ್ನುವ ಪ್ರಶ್ನೆಯನ್ನು ಅವರು ಓದುಗರ ಮುಂದಿಡುತ್ತಾರೆ. ಸಾರ್ವಜನಿಕ ಸ್ಥಳಗಳಲ್ಲಿ ಮುಸ್ಲಿಂ ವಿರೋಧಿ ವಾದಗಳು ತಂತಾನೇ ಹೊರಬರಲು ನೆಪ ಕಾಯುತ್ತಿರುವುದನ್ನು ಗುರ್ತಿಸುವ ಲೇಖಕರು, ‘ಈ ಬೆಳವಣಿಗೆಗೆ ಸಂಪೂರ್ಣ ಹೊಣೆ ಮೋದಿ ಮತ್ತು ಮೋದಿ ಮಾತ್ರ’ ಎಂದು ಕಡ್ಡಿಮುರಿದಂತೆ ಹೇಳುತ್ತಾರೆ.

ಮರೆಮಾಚಿ ಹೇಳುವ ಅಥವಾ ಸುಡುಸತ್ಯಗಳಿಗೂ ಒಂದು ರಮ್ಯ ಪೋಷಾಕು ತೊಡಿಸುವ ಮನೋಧರ್ಮ ಶಂಕರ್ ಅವರದ್ದಲ್ಲ. ಅವರ ಬರಹಗಳು ನೇರವಾಗಿವೆ, ಸರಳವಾಗಿವೆ. ಸಂಕ್ಷಿಪ್ತತೆ ಶಂಕರ್ ಬರಹಗಳ ಮತ್ತೊಂದು ಗುಣ. ಫೇಸ್‌ಬುಕ್ ಬರಹಗಳನ್ನೂ ಸಂಕಲನದಲ್ಲಿ ಬಳಸಿಕೊಂಡಿರುವುದೂ ಈ ಸಂಕ್ಷೇಪಕ್ಕೆ ಕಾರಣವಾಗಿರಬಹುದು. ಎರಡು ಮತ್ತು ಮೂರನೇ ಭಾಗದ ಕೆಲವು ಬರಹಗಳು ಪ್ರತಿಕ್ರಿಯೆಯ ರೂಪದಲ್ಲೇ ಮುಗಿದುಹೋಗಿ, ಓದುಗನಲ್ಲಿ ಅಸಮಾಧಾನ ಉಳಿಸುತ್ತವೆ.

ತಮ್ಮ ಬರಹಗಳಿಗೆ ಬರೆದಿರುವ ಪುಟ್ಟ ಪ್ರಸ್ತಾವನೆಯಲ್ಲಿ, ‘ಮೌನವೇ ಪಾಪಮಯ’ ಎನ್ನುವ ಟೋನಿ ಮಾರಿಸನ್ ಮಾತನ್ನು ಶಂಕರ್ ನೆನಪಿಸಿಕೊಂಡಿದ್ದಾರೆ. ಮೌನದ ಕುರಿತ ಈ ಮಾತು, ‘ಉಸಾಬರಿ’ ಕೃತಿಯ ನೆಲೆಯನ್ನು ಮೀರಿ, ಸಮಕಾಲೀನ ಕನ್ನಡ ಸಾಂಸ್ಕೃತಿಕ ಜಗತ್ತಿನ ಕಿವುಡು–ಮೂಕತನವನ್ನು ಸೂಚಿಸುವಂತಿದೆ.

ಉಸಾಬರಿ
ಲೇ: ಎನ್.ಎಸ್. ಶಂಕರ್
ಪು: 234; ಬೆ: ₹ 200
ಪ್ರ: ಅಕ್ಷರ ಮಂಟಪ, 1667, 6ನೇ ’ಸಿ’ ಮುಖ್ಯರಸ್ತೆ, ಹಂಪಿನಗರ, ಬೆಂಗಳೂರು–560104,

ಫೋನ್: 99861 67684.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.