ಡಿ.ಆರ್. ನಾಗರಾಜ್ ನೆನಪಿನ ಅಕ್ಷರ ಚಿಂತನ ಮಾಲೆಯ ‘ಕುಮಾರಿಲ ಭಟ್ಟ’ (2001) ಕೃತಿಯ ಒಂದು ಸಾಲಿನಿಂದ ಪ್ರಸ್ತುತ ಪುಸ್ತಕವನ್ನು ಪರಿಚಯಿಸುವುದು ಸೂಕ್ತವೆನಿಸುತ್ತದೆ: ‘ಇಂದಿನವರು ತಮಗೆ ತಿಳಿಯದಿದ್ದ ಶಬ್ದಾರ್ಥ ಸಂಬಂಧವನ್ನು ಹಿಂದಿನವರ ವ್ಯವಹಾರದಿಂದ ತಿಳಿಯುತ್ತಾರೆ.’ ಹಾಗೆಯೇ ಆಧುನಿಕ ಕರ್ನಾಟಕದ ನಿನ್ನೆಗಳ ಸ್ಮೃತಿ ನಮಗೆ ಇಂದು ಮುಖ್ಯವೆನಿಸಿದರೆ, ನಮ್ಮ ಬೌದ್ಧಿಕ ಲೋಕವನ್ನು ಸೃಷ್ಟಿಸಿ, ರೂಪಿಸಿದ ನಿನ್ನೆಯ ಪೂರ್ವಸೂರಿಗಳ ಜೊತೆ ನಾವು ಅನುಸಂಧಾನ ನಡೆಸುವುದು ಹೆಚ್ಚು ಉಪಯುಕ್ತವೆನಿಸುತ್ತದೆ.

ಇಂತಹ ಸಂದರ್ಭದಲ್ಲಿ ನಮ್ಮ ವಿಮರ್ಶೆಯ ಗತವನನ್ನೂ ಮತ್ತೆ ಮತ್ತೆ ನೆನಪಿಸಿಕೊಳ್ಳುವುದು ಮುಖ್ಯ. ಆದ್ದರಿಂದ ಮುಳಿಯ ತಿಮ್ಮಪ್ಪಯ್ಯನವರ ತಲೆಮಾರಿನಿಂದ ಹಿಡಿದು, ಆಧುನಿಕ ಕನ್ನಡ ವಿಮರ್ಶಾ ವಿವೇಕದ ಎರಡು ಕಣ್ಣುಗಳಂತಿರುವ ಕೀರ್ತಿನಾಥ ಕುರ್ತಕೋಟಿ ಮತ್ತು ಡಿ.ಆರ್. ನಾಗರಾಜ್ ಅವರವರೆಗೆ ಎಲ್ಲರೊಡನೆ ಮಾತುಕತೆ ನಡೆಸುವುದು ಸೂಕ್ತ. ಈ ನಿಟ್ಟಿನಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಭಾರತೀಯ ಸಾಹಿತ್ಯ ನಿರ್ಮಾಪಕರು (‘ಭಾಸಾನಿ’) ಮಾಲೆ ಯಲ್ಲಿ ಈಗಾಗಲೇ ಕುರ್ತಕೋಟಿ ಅವರ ಕುರಿತು ಎಸ್.ಆರ್. ವಿಜಯಶಂಕರ ಅವರಿಂದ ಕೃತಿ ಬಂದಿದೆ. ಇದೇ ಮಾಲೆಯಲ್ಲಿ ನಟರಾಜ್ ಹುಳಿಯಾರ್ ಅವರ ಪ್ರಸ್ತುತ ಪುಸ್ತಕ ಡಿ.ಆರ್. ಬರಹಗಳ ಸಾರವನ್ನು ಪುನರ್ ಸೃಷ್ಟಿಸಿ, ಕನ್ನಡದ ವಿಮರ್ಶೆ ಕುರಿತು ನಾವು ಆಲೋಚಿಸುವಂತೆ ಮಾಡುತ್ತದೆ.

ಡಿ.ಆರ್. ಅವರನ್ನು ಆರಾಧಿಸುವ ಹಾಗೂ ಕಟುಟೀಕೆಗೆ ಒಳಪಡಿಸುವ ಅತಿರೇಕಗಳಿಗೆ ಹೋಗದೆ, ಅವರನ್ನು ಹೇಗೆ ನೋಡಬಹುದು? ದಕ್ಷಿಣ ಏಷ್ಯಾದ ಒಬ್ಬ ತರುಣ ಚಿಂತಕ ಕೇವಲ 44 ವರ್ಷ ಬದುಕಿ, ಅಂತರರಾಷ್ಟ್ರೀಯಮಟ್ಟದ ಬೌದ್ಧಿಕ ಹಂಬಲವನ್ನಿಟ್ಟುಕೊಂಡಿದ್ದು ವಿಸ್ಮಯವೇ ಸರಿ. ಆದರೆ, ಅವರ ಅತ್ತ್ಯುತ್ತಮ ಎನ್ನಬಹುದಾದ ಬರಹ ಅವರ ಬದುಕಿನ ನಂತರದ ದಿನಗಳಲ್ಲಿ ಬರುವುದಿತ್ತು. ಆದ್ದರಿಂದ ಡಿ.ಆರ್. ಜಗತ್ತನ್ನು ಗ್ರಹಿಸಿ, ಸೃಷ್ಟಿಸಿದ ಲೋಕಜ್ಞಾನವು, ಕನ್ನಡದ ಬೌದ್ಧಿಕತೆಯ ಫಸಲು ಭರ್ಜರಿಯಾಗಿ ಬೆಳೆಯುವಂತೆ ಬಿತ್ತಿದ ಬೀಜವೆಂದೇ ಹೇಳಬಹುದು. ಅವರ ಚಿಂತನ
ಕ್ರಮ, ಬರವಣಿಗೆಗಳಲ್ಲಿರುವ ಮಿತಿಗಳಿಗೆ ಕುರುಡಾಗದೆ ಈ ಮಾತನ್ನು ಹೇಳುತ್ತಿದ್ದೇನೆ.

ಕಥನ ಕ್ರಮವನ್ನು ಜ್ಞಾನ ಉತ್ಪಾದನೆಯ ಸಾಧನ ಎಂದು ನಂಬಿದ್ದ ಡಿ.ಆರ್., ವಾಲ್ಟರ್ ಬೆಂಜಮಿನ್‌ನ ಕಥನ-ರೂಪಕದ ವಿಮರ್ಶಾ ಮಾದರಿಯನ್ನು ರೂಢಿಗೊಳಿಸಿ, ಕನ್ನಡ ವಿಮರ್ಶೆಯ ನುಡಿಗಟ್ಟನ್ನು ರೂಪಿಸಲು ಪ್ರಯತ್ನಿಸಿದ್ದರು. ಅವರ ಇಂಗ್ಲಿಶ್ ಪ್ರಬಂಧಗಳ ಸಂಕಲನವಾದ ಲಿಸ್‌ನಿಂಗ್ ಟು ದ ಲ್ಯೂಮ್‌ನ (2012) ಪೀಠಿಕೆಯಲ್ಲಿ ಪೃಥ್ವಿದತ್ತ ಚಂದ್ರ ಶೋಭಿ ಅವರು ಡಿ.ಆರ್. ಅವರ ವಿಮರ್ಶೆಯ ಕಸುಬನ್ನು ‘ನಿರೂಪಣಾ ಕಲ್ಪನೆ’ (ನರೇಟಿವ್ ಇಮ್ಯಾಜಿನೆಶನ್) ಎಂದು ಗುರುತಿಸುತ್ತಾರೆ. ಅವರ ಪ್ರಕಾರ ಡಿ.ಆರ್. ನಮ್ಮ ನಾಗರಿಕತೆಯ ಪುರಾಣಕಾರ.

ಈಗಾಗಲೇ ಡಿ.ಆರ್. ಅವರ ಬರಹ, ಚಿಂತನೆಗಳನ್ನು ಕುರಿತು ಲೇಖನಗಳು, ಪುಸ್ತಕಗಳು, ಸಂಶೋಧನಾ ಮಹಾಪ್ರಬಂಧಗಳು ಬಂದಿವೆ. ಉದಾಹರಣೆಗೆ, ವಿ. ಚಂದ್ರಶೇಖರ ನಂಗಲಿ ಅವರು ಬರೆದ ‘ಡಿ.ಆರ್. ನಾಗರಾಜ್’ ಪುಸ್ತಿಕೆ; ಲಿಂಗಪ್ಪ ಗೋನಾಳರ ‘ಡಿ.ಆರ್ ನಾಗರಾಜ್‌ರ ಸಾಹಿತ್ಯ ಚಿಂತನೆ’, ಅಜಕ್ಕಳ ಗಿರೀಶ್ ಭಟ್ಟ ಅವರ
‘ಡಿ.ಆರ್. ಅವರ ಮೂಡು ಪಡು’ ಹಾಗೂ ಪ್ರಕಾಶ ಬಡವನಹಳ್ಳಿಯವರ ‘ಡಿ.ಆರ್. ನಾಗರಾಜ್ ವಿಮರ್ಶೆಯ ಕಥನ’. ಇತ್ತೀಚಿಗೆ ಬಂದ ಶಿವರಾಜ ಬ್ಯಾಡರಹಳ್ಳಿ ಸಂಪಾದಿಸಿದ ‘ಅನನ್ಯ ಪ್ರತಿಭೆಯ ಪರಿ’ ಹಾಗೂ ವೆಂಕಟೇಶ ಇಂದ್ವಾಡಿ ಸಂಪಾದಿಸಿದ ‘ಡಿ.ಆರ್. ನಾಗರಾಜ್ ಅವರ ಸಮಗ್ರ ಸಾಹಿತ್ಯ ಚಿಂತನೆ’ ಬಿಡಿ ಲೇಖನಗಳನ್ನೊಳಗೊಂಡಿವೆ. ಹುಳಿಯಾರ್ ಅವರು ಪಿ. ಲಂಕೇಶ ಮತ್ತು ಡಿ.ಆರ್ ಅವರನ್ನು ಮುಖಾಮುಖಿಯಾಗಿಸಿ ಈ ಹಿಂದೆಯೇ ‘ಇಂತಿ ನಮಸ್ಕಾರಗಳು’ ಎಂಬ ಕೃತಿಯನ್ನು ಬರೆದಿದ್ದು, ಪ್ರಸ್ತುತ ಪುಸ್ತಕದಲ್ಲಿ ಡಿ.ಆರ್. ಅವರನ್ನು ಸಮಗ್ರವಾಗಿ, ಆತ್ಮೀಯತೆಯಿಂದ ಚಿತ್ರಿಸಿದ್ದಾರೆ.

ಪುಸ್ತಕದಲ್ಲಿ ಒಟ್ಟು 12 ಅಧ್ಯಾಯಗಳಿವೆ. ಡಿ.ಆರ್. ಅವರು ಬಳಸಿ, ಬೆಳೆಸಿದ ಪರಿಕಲ್ಪನೆಗಳು, ಬೌದ್ಧಿಕ ಮಾರ್ಗಗಳನ್ನೊಳಗೊಂಡಂತೆ, ಅವರ ಎಲ್ಲ ಕೃತಿಗಳಿಗೆ ತಲಾ ಒಂದೊಂದು ಅಧ್ಯಾಯವನ್ನು ಮೀಸಲಿಡಲಾಗಿದೆ. ‘ಭಾಸಾನಿ’ ಮಾಲೆಯ ಮೂಲ ಉದ್ದೇಶ ಬಹುಶಃ ಲೇಖಕರನ್ನು ಸಾಮಾನ್ಯ ಓದುಗನಿಗೆ ಪರಿಚಯಸುವುದು. ಆದ್ದರಿಂದ ಇಲ್ಲಿ ಬರಹಗಾರರ ಬೌದ್ಧಿಕ ಚರಿತ್ರೆಯನ್ನು, ಅವರ ಅಧ್ಯಯನ ವಿಧಾನ ಹಾಗೂ ಚಿಂತನ ಕ್ರಮಗಳನ್ನು ಕುರಿತು ಸಂಕೀರ್ಣವಾದ ಪ್ರಮೇಯಗಳನ್ನು ಬೆಳೆಸಲು ಅವಕಾಶ ಇಲ್ಲ. ಇಂತಹ ಮಿತಿಗಳ ಮಧ್ಯೆಯೇ ಹುಳಿಯಾರ್ ಅವರು ಡಿ.ಆರ್. ಅವರ ಬೌದ್ದಿಕ ಪಲ್ಲಟಗಳನ್ನು ಸೆರೆ ಹಿಡಿದು, ಅವರ ಕೃತಿಗಳನ್ನು ಓದಿಗೆ ಒಳಪಡಿಸಿದ್ದಾರೆ. ಕೆಲವೊಮ್ಮೆ ಸಾರಾಂಶ ಪುನರುಕ್ತಿಗೊಂಡಿದ್ದರೂ, ಡಿ.ಆರ್. ಅವರ ಚಿಂತನೆಗಳ ಪುನರ್ ಸೃಷ್ಟಿ ಸ್ಪಷ್ಟವಾಗಿದೆ. ಆದರೆ ಅವರನ್ನು ವಿಶಾಲವಾದ ಕನ್ನಡದ ವೈಚಾರಿಕ ಪರಂಪರೆಯ ಹಿನ್ನೆಲೆಯಲ್ಲಿಟ್ಟು ನೋಡಿದ್ದರೆ ಇನ್ನೂ ಹೆಚ್ಚಿನ ಪ್ರಯೋಜನ ಆಗಬಹುದಿತ್ತೇನೋ.

ಈ ಪುಸ್ತಕದಲ್ಲಿ ನನಗೆ ಇಷ್ಟವಾದ ಕೆಲವು ಸಂಗತಿಗಳನ್ನು ಉಲ್ಲೇಖಿಸಲೇಬೇಕು. ಅಗ್ರಹಾರ ಕೃಷ್ಣಮೂರ್ತಿ ತಮ್ಮೊಡನೆ ಹಂಚಿಕೊಂಡಿದ್ದ ಡಿ.ಆರ್. ಅವರ ವೈಯಕ್ತಿಕ ಟಿಪ್ಪಣಿಗಳನ್ನು ಹುಳಿಯಾರ್ ಅವರು ಸೂಕ್ಷ್ಮತೆಯಿಂದ ಬಳಸಿಕೊಂಡಿರುವುದು ಅನನ್ಯವಾಗಿದೆ. ಕೊನೆಯ ಎರಡು ಅಧ್ಯಾಯಗಳು ಸಂಶೋಧನಾ ವಿದ್ಯಾರ್ಥಿಗಳಿಗೆ ಒಳನೋಟಗಳನ್ನು ಒದಗಿಸುವಲ್ಲಿ ಸಹಾಯಕವಾಗಲಿವೆ. ‘ಡಿ.ಆರ್. ಅವರ ವಿಮರ್ಶಾ ಮತ್ತು ಸಂಶೋಧನಾ ವಿಧಾನ’ ಎಂಬ ಅಧ್ಯಾಯವು ಈ ವಿಮರ್ಶಕನ ಅಂತರ್ ಶಿಸ್ತೀಯ ವಿಧಾನವನ್ನು ಪರಿಚಯಿಸುತ್ತ, ಅವರ ಬೌದ್ಧಿಕ ನಂಬಿಕೆಯನ್ನು ವಿವರಿಸುತ್ತದೆ.

ಹುಳಿಯಾರ್ ಅವರು ಈ ಪುಸ್ತಕದ ಕೊನೆಯ ಅಧ್ಯಾಯದಲ್ಲಿ ಡಿ.ಆರ್. ವಿಮರ್ಶಾ ಮಾದರಿಗಳಿಂದ ನಮ್ಮ ಲೇಖಕರು ಮತ್ತು ಓದುಗರು ಕಲಿತಿರುವ ಹಾಗೂ ಕಲಿಯುವ ಸಾಧ್ಯತೆಗಳನ್ನು ಊಹಿಸಿದ್ದಾರೆ. ಉದಾಹರಣೆಗೆ, ಬರಗೂರು ರಾಮಚಂದ್ರಪ್ಪ ಹಾಗೂ ತೇಜಸ್ವಿ ಅವರ ಕಾದಂಬರಿಗಳನ್ನು ಕುರಿತು ಡಿ.ಆರ್. ಮಾಡಿರುವ ವಿಶ್ಲೇಷಣೆಗಳು ಸ್ವತಃ ಆ ಲೇಖಕರುಗಳನ್ನು ಹಾಗೂ ಪರೋಕ್ಷವಾಗಿ ಇತರ ಕಾದಂಬರಿಕಾರರನ್ನು ತಟ್ಟಿ, ಅವರ ಮುಂದಿನ ಬರವಣಗೆಯ ದಿಕ್ಕುಗಳನ್ನು ಬದಲಾಯಿಸಿರಬಹುದಾದ ಸಾಧ್ಯತೆಯನ್ನು ವಿಶ್ಲೇಷಿಸಿದ್ದು ವಿಶಿಷ್ಟವಾಗಿದೆ. ಡಿ.ಆರ್. ಅವರ ವಿಶ್ಲೇಷಣೆಯಿಂದ ದೇವನೂರ ಮಹಾದೇವ ಅವರೂ ತಮ್ಮ ಬರವಣಿಗೆ ಕುರಿತು ಮರು ಆಲೋಚಿಸಿದ್ದರ ಬಗ್ಗೆ ಸಂದರ್ಶನವೊಂದರಲ್ಲಿ ಉಲ್ಲೇಖಿಸಿದ್ದನ್ನು ಇಲ್ಲಿ ನೆನೆಯಬಹುದು.

ಕೊನೆಯದಾಗಿ, ನಮ್ಮ ಆಧುನಿಕ ವಿಮರ್ಶೆ ಸುಮಾರು ಒಂದು ಶತಮಾನದಷ್ಟು ಹಳೆಯದಾದರೂ ಈ ವಿಮರ್ಶಾ ವಿವೇಕ ಕನ್ನಡದ ಸಾಮಾಜಿಕ ಹಾಗೂ ಸಾರ್ವಜನಿಕ ಪ್ರಜ್ಞೆಯ ಭಾಗವಾಗಿಲ್ಲ. ಇಂತಹ ಸಂದರ್ಭದಲ್ಲಿ ಈ ತರಹದ ಪರಿಚಯಾತ್ಮಕ ಪುಸ್ತಕಗಳು ವಿಮರ್ಶಾ ಲೋಕಕ್ಕೆ ನಮಗೆ ಪ್ರವೇಶವನ್ನು ಒದಗಿಸುತ್ತವೆ ಎಂಬುದೇನೋ ನಿಜ. ಆದರೆ, ನಮ್ಮ ವಿಮರ್ಶಕರ ಕೃತಿಗಳನ್ನು ನಿಕಟವಾಗಿ ಓದಿ, ಕಲಿಯದಿದ್ದರೆ ನಮಗೆ ಯಾವ ಪ್ರಯೋಜನವೂ ಆಗುವುದಿಲ್ಲ. ಪೂರ್ವಸೂರಿಗಳು ಮಾತನಾಡುತ್ತಾರೆ, ನಾವು ಕೇಳಿಸಿಕೊಳ್ಳಬೇಕಷ್ಟೇ!

ಕೃತಿ: ಡಿ.ಆರ್.ನಾಗರಾಜ್

ಲೇ: ನಟರಾಜ್ ಹುಳಿಯಾರ್

ಪ್ರ: ಸಾಹಿತ್ಯ ಅಕಾದೆಮಿ

ಸಂ: 080–22245152

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.