ದಪ್ಪ ಅಕ್ಷರದ ತಲೆಬರಹಗಳ ಮೂಲಕ ಬ್ಯಾಂಕ್‌ಗಳು ಮತ್ತೆ ಸುದ್ದಿಯಲ್ಲಿವೆ. ಬ್ಯಾಂಕಿಂಗ್ ವ್ಯವಸ್ಥೆಯಲ್ಲಿನ ಕಳೆ-ಕೊಳೆ ಬಹಳ ಆಳವಾಗಿ ಬೇರುಬಿಟ್ಟಿರುವಂತೆ ಕಾಣುತ್ತಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ (ಪಿಎನ್‌ಬಿ) ₹ 12,500 ಕೋಟಿ ಮೊತ್ತದ ಬೃಹತ್ ಹಗರಣ ನಡೆಯಿತು. ಫೆಬ್ರುವರಿ ಮಧ್ಯಭಾಗದಲ್ಲಿ ಈ ಹಗರಣ ಬಯಲಾಯಿತು. ಇದು ಹಲವು ಪ್ರಶ್ನೆಗಳನ್ನು ಎತ್ತಿದೆ. ಆದರೆ ಇವುಗಳಿಗೆ ಇರುವ ಉತ್ತರಗಳು ಮಾತ್ರ ಕೆಲವೇ ಕೆಲವು. ಐಸಿಐಸಿಐ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಕೂಡ ವಿವಾದಕ್ಕೆ ಸಿಲುಕಿದ್ದಾರೆ.

ವಿಡಿಯೊಕಾನ್ ಕಂಪನಿಗೆ ವಸೂಲಾಗದ ಸಾಲ ನೀಡಿರುವಲ್ಲಿ ಸ್ವಜನಪಕ್ಷಪಾತ ನಡೆದಿದೆ ಹಾಗೂ ಅಪೇಕ್ಷಣೀಯವಲ್ಲದ ಹೆಜ್ಜೆಗಳನ್ನು ಇಡಲಾಗಿದೆ ಎಂಬ ಆರೋಪಗಳಿವೆ. ಆ್ಯಕ್ಸಿಸ್ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಹುದ್ದೆಗೆ ಮೂರು ವರ್ಷಗಳ ಅವಧಿಗೆ ನಾಲ್ಕನೆಯ ಬಾರಿ ಮರುನೇಮಕ ಆದವರು ಭಾರತೀಯ ರಿಸರ್ವ್ ಬ್ಯಾಂಕ್ ಎತ್ತಿದ ಗಂಭೀರ ಪ್ರಶ್ನೆಗಳ ಕಾರಣದಿಂದಾಗಿ ಹುದ್ದೆ ಬಿಟ್ಟು ಕೆಳಗಿಳಿಯಬೇಕಾಗಿದೆ. ಆಡಳಿತ ಮತ್ತು ನಿಯಂತ್ರಣ ವ್ಯವಸ್ಥೆಯಲ್ಲೇ ದೋಷಗಳು ಇರುವ ಕಾರಣ, ಈ ನಿದರ್ಶನಗಳು ದೊಡ್ಡದೊಂದು ಸಮಸ್ಯೆಯ ಕಿರುನೋಟಗಳಷ್ಟೇ ಆಗಿದ್ದಿರಬಹುದು.

ಪಿಎನ್‌ಬಿ ಕಥೆಯಂತೂ ತಬ್ಬಿಬ್ಬುಗೊಳಿಸುವಂತೆ ಇದೆ. ಈ ಬ್ಯಾಂಕ್‌ನ ಮುಂಬೈ ಬ್ರ್ಯಾಡಿ ಹೌಸ್ ಶಾಖೆಯು, ಕೋಟ್ಯಧಿಪತಿ ವಜ್ರದ ವ್ಯಾಪಾರಿ ನೀರವ್ ಮೋದಿ ಅವರಿಂದ ಅಡಮಾನದ ರೂಪದಲ್ಲಿ ಏನನ್ನೂ ಪಡೆದುಕೊಳ್ಳದೆಯೇ 'ಸಾಲ ಮರುಪಾವತಿ ಖಾತರಿ ಪತ್ರ'ಗಳನ್ನು (ಎಲ್‌ಒಯು) ನೀಡಿತು. ಈ ಎಲ್‌ಒಯುಗಳನ್ನು ಮೋದಿ ಅವರು ತಾವು ಆಮದು ಮಾಡಿಕೊಳ್ಳುವ ವಸ್ತುಗಳಿಗೆ ಹಣ ಹೊಂದಿಸಲು ಭಾರತದ ಬ್ಯಾಂಕ್‌ಗಳ ವಿದೇಶಿ ಶಾಖೆಗಳಿಂದ ಸಾಲ ಪಡೆಯಲು ಬಳಸಿಕೊಂಡರು. 2011ರಲ್ಲಿ ಆರಂಭವಾದ ಈ ವ್ಯವಹಾರವು 2018ರವರೆಗೂ ಬೇರೆಯವರಿಗೆ ಗೊತ್ತಾಗದಂತೆ ನಡೆಯಿತು. ಇದು ಬಯಲಾಗಿದ್ದು ಒಂದು ಆಕಸ್ಮಿಕ. ಈ ವಹಿವಾಟಿನಲ್ಲಿ ಶಾಮೀಲಾಗಿದ್ದ ಅಧಿಕಾರಿ ತೀರಾ ಈಚೆಗಷ್ಟೇ ನಿವೃತ್ತರಾಗಿದ್ದಾರೆ ಎಂಬುದನ್ನು ತಿಳಿಯದಿದ್ದ, ಮೋದಿ ಅವರ ಕಂಪನಿಯ ವ್ಯಕ್ತಿಯೊಬ್ಬರು, ಬ್ಯಾಂಕಿಗೆ ನಿಶ್ಚಿತ ಠೇವಣಿಯ ಖಾತರಿ ನೀಡದೆಯೇ, ಹೊಸದಾಗಿ ಎಲ್‌ಒಯು ನೀಡುವಂತೆ ಕೇಳಿಕೊಂಡರು. ನಿಶ್ಚಿತ ಠೇವಣಿಯ ಖಾತರಿಯನ್ನು ಹಿಂದೆಂದೂ ಕೇಳಿರಲಿಲ್ಲ ಎಂದೂ ಅವರು ಹೇಳಿಕೊಂಡರು.

ವಿವರಣೆಗಳನ್ನು ತಕ್ಷಣಕ್ಕೆ ನಂಬಿಬಿಡುವುದು ಕಷ್ಟದ ಕೆಲಸ. ಅಂತರರಾಷ್ಟ್ರೀಯ ವಹಿವಾಟುಗಳಿಗೆ ಸಂಬಂಧಿಸಿದ ಸಂದೇಶಗಳನ್ನು ಬ್ಯಾಂಕಿನ ಮಧ್ಯಮ ಕ್ರಮಾಂಕದ ಅಧಿಕಾರಿಗಳು ಸಿದ್ಧಪಡಿಸಿ, ಪರಿಶೀಲಿಸಿ, ದೃಢೀಕರಿಸಿ ‘ಸ್ವಿಫ್ಟ್’ ವ್ಯವಸ್ಥೆಗೆ ರವಾನಿಸುತ್ತಿದ್ದರು. ಈ ಸಂದೇಶಗಳನ್ನು ಕೋರ್ ಬ್ಯಾಂಕಿಂಗ್ ವ್ಯವಸ್ಥೆಯ ಜೊತೆ ಜೋಡಿಸದೆಯೇ, ಪಿಎನ್‌ಬಿ ಪರವಾಗಿ ಕೋಟ್ಯಂತರ ರೂಪಾಯಿ ಮೊತ್ತವನ್ನು ಖಾತರಿಯಾಗಿ ನೀಡುತ್ತಿದ್ದರು. ವ್ಯವಸ್ಥೆಯಲ್ಲೇ ಇದ್ದ ಈ ಗಂಭೀರ ಲೋಪವನ್ನು ಆಂತರಿಕ ಲೆಕ್ಕಪರಿಶೋಧಕರು ಅಥವಾ ಶಾಸನಬದ್ಧ ಲೆಕ್ಕಪರಿಶೋಧಕರು ಏಳು ವರ್ಷಗಳ ಅವಧಿಯಲ್ಲಿ ಎಂದಾದರೂ ಗಮನಿಸಿದ್ದರೇ? ಪಿಎನ್‌ಬಿಗೆ ಸರಿಸುಮಾರು ₹ 13 ಸಾವಿರ ಕೋಟಿ ನಷ್ಟ ಉಂಟುಮಾಡಿದ ಈ ಲೋಪಕ್ಕೆ ಯಾರಾದರೂ ಹೊಣೆಗಾರರೇ?

ಆರಂಭದಲ್ಲಿ, ಇದರ ಪರಿಣಾಮವು ಆರೋಪ–ಪ್ರತ್ಯಾರೋಪಗಳ ರೂಪದಲ್ಲಿ ಕಾಣಿಸಿಕೊಂಡಿತು. ರಾಜಕಾರಣಿಗಳನ್ನು ದೂಷಿಸಲಾಗುತ್ತದೆಯೇ ವಿನಾ ವಹಿವಾಟುಗಳನ್ನು ನಿಯಂತ್ರಿಸುವವರನ್ನು ಹೊಣೆ ಮಾಡುವುದೇ ಇಲ್ಲ ಎಂದು ಕೇಂದ್ರ ಹಣಕಾಸು ಸಚಿವರು ಹೇಳಿದರು. ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ವ್ಯವಹಾರಗಳಲ್ಲಿ ಪರಿಣಾಮಕಾರಿ ಮಧ್ಯಪ್ರವೇಶಕ್ಕೆ ತಮಗೆ ಅವಕಾಶವನ್ನೇ ನೀಡದ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ ಇದಕ್ಕೆ ಹೊಣೆ ಎಂದು ಆರ್‌ಬಿಐ ಗವರ್ನರ್ ಹೇಳಿದರು. ಎರಡು ತಿಂಗಳು ಕಳೆದ ನಂತರ ನಾವು ಎಲ್ಲಿಗೆ ಬಂದು ನಿಂತಿದ್ದೇವೆ? ಪಿಎನ್‌ಬಿಯ ಮಧ್ಯಮ ಕ್ರಮಾಂಕದ ಕೆಲವು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಕೆಟ್ಟ ದಿನಗಳು ಮುಗಿದಿವೆ, ಪರಿಸ್ಥಿತಿ ನಿಯಂತ್ರಣದಲ್ಲಿದೆ, ಆರು ತಿಂಗಳ ಅವಧಿಯಲ್ಲಿ ಎಲ್ಲವೂ ಸರಿಹೋಗಲಿದೆ ಎಂದು ಪಿಎನ್‌ಬಿಯ ವ್ಯವಸ್ಥಾಪಕ ನಿರ್ದೇಶಕರು ಹೇಳಿದ್ದಾರೆ. ಇವೆಲ್ಲದರ ಬಿಸಿ ಅಂತಿಮವಾಗಿ ವರ್ಗಾವಣೆ ಆಗುವುದು ಷೇರುದಾರರು ಮತ್ತು ಠೇವಣಿದಾರರ ಹೆಗಲಿಗೆ ಎಂಬುದು ನಿಜ. ಈ ಬಗ್ಗೆ ಯಾರಾದರೂ ಆಲೋಚಿಸಿದ್ದಾರೆಯೇ?

ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳನ್ನು ಖಾಸಗೀಕರಣ ಮಾಡುವುದು ಹಲವರಿಗೆ ಈ ಸಮಸ್ಯೆಗೆ ಪರಿಹಾರದ ರೂಪದಲ್ಲಿ ಕಾಣಿಸುತ್ತಿದೆ. ಆದರೆ ಖಾಸಗಿ ಬ್ಯಾಂಕ್‌ಗಳ ಪರಿಸ್ಥಿತಿ ಕೂಡ ಭಿನ್ನವಾಗಿಲ್ಲ. ಬ್ಯಾಂಕ್‌ಗಳಿಗೆ ಆದಾಯ ತಂದುಕೊಡದ ‘ವಸೂಲಾಗದ ಸಾಲ’ದ (ಎನ್‌ಪಿಎ) ಪ್ರಮಾಣ ಹೆಚ್ಚುತ್ತಲೇ ಇದೆ. ಬ್ಯಾಂಕ್‌ಗಳ ಆಡಳಿತದಲ್ಲಿ ಗಂಭೀರ ಲೋಪಗಳಾಗಿವೆ. ಐಸಿಐಸಿಐ ಮತ್ತು ಆ್ಯಕ್ಸಿಸ್ ಬ್ಯಾಂಕ್‌ಗಳ ಕಥೆ ಈ ಮಾತನ್ನು ಪುಷ್ಟೀಕರಿಸುತ್ತದೆ.

ಐಸಿಐಸಿಐ ಬ್ಯಾಂಕ್‌ನಲ್ಲಿ, ಒಟ್ಟು ಆಸ್ತಿಯ ಜೊತೆ ಹೋಲಿಕೆ ಮಾಡಿ ಹೇಳುವುದಾದರೆ, 2010ರ ಮಾರ್ಚ್‌ನಲ್ಲಿ ಶೇಕಡ 2.6ರಷ್ಟಿದ್ದ ಎನ್‌ಪಿಎ ಪ್ರಮಾಣ 2017ರ ಮಾರ್ಚ್ ವೇಳೆಗೆ ಶೇಕಡ 5.8ರಷ್ಟಕ್ಕೆ ಏರಿಕೆಯಾಗಿದೆ. ಇದು 2017ರ ಡಿಸೆಂಬರ್ ವೇಳೆಗೆ ಶೇಕಡ 7.8ರಷ್ಟಕ್ಕೆ ತಲುಪಿದೆ. ಈ ಅಂಕಿ–ಅಂಶಗಳಲ್ಲಿ ತೋರಿಸಿರದ, ಮುಚ್ಚಿಟ್ಟಿರುವ ಎನ್‌ಪಿಎಗಳು ಇರುವ ಸಾಧ್ಯತೆಯೂ ಇದೆ. ಹಾಗಾಗಿ, ಕಾರ್ಪೊರೇಟ್ ಆಡಳಿತ ವ್ಯವಸ್ಥೆ ಕೂಡ ಪ್ರಶ್ನೆಗಳನ್ನು ಎದುರಿಸುತ್ತಿದೆ. ವಿಡಿಯೊಕಾನ್ ಅಧ್ಯಕ್ಷ ವೇಣುಗೋಪಾಲ್ ಧೂತ್ ಅವರು ಐಸಿಐಸಿಐ ಬ್ಯಾಂಕ್‌ನ ಸಿಇಒ ಚಂದಾ ಕೊಚ್ಚರ್ ಪತಿ ದೀಪಕ್ ಕೊಚ್ಚರ್ ಅವರ ವಾಣಿಜ್ಯ ಪಾಲುದಾರ ಆಗಿದ್ದರೂ, ವಿಡಿಯೊಕಾನ್ ಕಂಪನಿಗೆ 2012ರಲ್ಲಿ ₹ 3,250 ಕೋಟಿ ಸಾಲ ಮಂಜೂರು ಮಾಡಿದ ಸಮಿತಿಯಲ್ಲಿ ಚಂದಾ ಇದ್ದರು ಎಂಬ ಆರೋಪಗಳು ಕೇಳಿಬಂದಿವೆ.

ಇಲ್ಲಿ ನಡೆದಿರುವ ವಹಿವಾಟುಗಳ ಬಗ್ಗೆ ಈಗ ತನಿಖೆ ನಡೆಯುತ್ತಿದೆ. ಇಲ್ಲಿ ‘ಕೊಡು–ಕೊಳ್ಳುವ’ ವ್ಯವಹಾರ ನಡೆದಿತ್ತೇ ಎಂಬುದನ್ನು ತನಿಖೆಯೊಂದೇ ಬಯಲುಮಾಡಬಲ್ಲದು. ‘ಹಿತಾಸಕ್ತಿಗಳ ಸಂಘರ್ಷ’ ಆಗಬಾರದು ಎನ್ನುವ ತತ್ವಕ್ಕೆ ಅನುಗುಣವಾಗಿ ಚಂದಾ ಅವರು ಸಮಿತಿಯಿಂದ ಹೊರಗುಳಿಯಬೇಕಿತ್ತಾದರೂ, ವಿಡಿಯೊಕಾನ್‌ಗೆ ಸಾಲ ಮಂಜೂರು ಮಾಡಿದ ಸಮಿತಿಯಲ್ಲಿ ಚಂದಾ ಅವರು ಇದ್ದಿದ್ದು ಸ್ಪಷ್ಟ. ಆದರೆ, ಐಸಿಐಸಿಐ ಮಂಡಳಿ ಮತ್ತು ಅದರ ಅಧ್ಯಕ್ಷರು ತಮ್ಮ ಮೊದಲ ಪ್ರತಿಕ್ರಿಯೆಯಲ್ಲಿ ಸಿಇಒ ಅವರನ್ನು ಬಲವಾಗಿ ಸಮರ್ಥಿಸಿಕೊಂಡರು, ಸ್ವಜನಪಕ್ಷಪಾತ ಅಥವಾ ತಪ್ಪು ನಿರ್ಧಾರಗಳು ಆಗಿವೆ ಎಂಬ ಆರೋಪಗಳನ್ನು ಅಲ್ಲಗಳೆದರು. ಆದರೆ, ಷೇರುದಾರರು, ಮುಖ್ಯವಾಗಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು, ಕಳವಳ ವ್ಯಕ್ತಪಡಿಸುತ್ತಿರುವ ಕಾರಣ ಮಂಡಳಿಯಲ್ಲಿ ಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತಿದ್ದು, ಇಡೀ ವಿಚಾರದ ಪುನರಾವಲೋಕನ ನಡೆಸುತ್ತಿದೆ ಎಂಬ ವರದಿಗಳು ದಿನಪತ್ರಿಕೆಗಳಲ್ಲಿ ಬಂದಿವೆ.

ಆ್ಯಕ್ಸಿಸ್ ಬ್ಯಾಂಕ್ ವಿಚಾರದಲ್ಲಿ, ಒಟ್ಟು ಆಸ್ತಿಯ ಜೊತೆ ತುಲನೆ ಮಾಡಿದರೆ ಎನ್‌ಪಿಎ ಪ್ರಮಾಣ 2010ರ ಮಾರ್ಚ್‌ನಲ್ಲಿ ಶೇಕಡ 0.7ರಷ್ಟು ಇದ್ದಿದ್ದು 2017ರ ಮಾರ್ಚ್ ವೇಳೆಗೆ ಶೇಕಡ 3.9ರಷ್ಟಾಯಿತು. ಇದು 2017ರ ಡಿಸೆಂಬರ್ ವೇಳೆಗೆ ಶೇಕಡ 5.3ರಷ್ಟಕ್ಕೆ ಹೆಚ್ಚಳ ಆಯಿತು. ಆದರೆ, ವಿಷಯ ಇಷ್ಟೇ ಅಲ್ಲ. ಆದಾಯ ಗುರುತಿಸುವಿಕೆ ಮತ್ತು ಆಸ್ತಿ ವರ್ಗೀಕರಣ ನಿಯಮಗಳ ಅನ್ವಯ ಆ್ಯಕ್ಸಿಸ್ ಬ್ಯಾಂಕ್ ಹೇಳಿರುವ ಎನ್‌ಪಿಎ ಪ್ರಮಾಣ ಮತ್ತು ಆರ್‌ಬಿಐ ಗುರುತಿಸಿರುವ ಎನ್‌ಪಿಎ ಪ್ರಮಾಣದ ನಡುವೆ ದೊಡ್ಡ ವ್ಯತ್ಯಾಸ ಇದೆ ಎಂಬುದಾಗಿ ವರದಿಯಾಗಿದ್ದು, ಅದು: 2015–16ನೇ ಸಾಲಿನಲ್ಲಿ ₹ 9,480 ಕೋಟಿ, 2016–17ನೇ ಸಾಲಿನಲ್ಲಿ ₹ 5,630 ಕೋಟಿಗಳಷ್ಟು ಎನ್ನಲಾಗಿದೆ. ಇದರ ಪರಿಣಾಮವಾಗಿ, ನಿಯಮಗಳನ್ನು ಸರಿಯಾಗಿ ಪಾಲಿಸಿಲ್ಲ ಎಂದು ಆ್ಯಕ್ಸಿಸ್ ಬ್ಯಾಂಕ್‌ಗೆ ಆರ್‌ಬಿಐ ದಂಡ ವಿಧಿಸಿದೆ. ಹೀಗಿದ್ದರೂ, ಆ್ಯಕ್ಸಿಸ್ ಬ್ಯಾಂಕಿನ ಸಿಇಒ ಶಿಖಾ ಶರ್ಮಾ ಅವರನ್ನು ಆಡಳಿತ ಮಂಡಳಿಯು ಜೂನ್‌ನಿಂದ ಅನ್ವಯ ಆಗುವಂತೆ ನಾಲ್ಕನೆಯ ಬಾರಿಗೆ (ಇದರ ಅವಧಿ ಮೂರು ವರ್ಷಗಳು) ಮುಂದುವರಿಯುವಂತೆ ಶಿಫಾರಸು ಮಾಡಿದೆ. ಇದಕ್ಕೆ ಅನುಮೋದನೆ ದೊರೆತಿಲ್ಲ.

ಬ್ಯಾಂಕಿನ ಸಾಧನೆ ಮತ್ತು ಸಕಾಲಕ್ಕೆ ಮರುಪಾವತಿ ಆಗುವ ಸಾಲಗಳ ಪ್ರಮಾಣ ಕುಸಿಯುತ್ತಿರುವ ಕಾರಣಗಳನ್ನು ಉಲ್ಲೇಖಿಸಿ ಆರ್‌ಬಿಐ, ಸಿಇಒ ಅವರ ಮರುನೇಮಕದ ಶಿಫಾರಸನ್ನು ಪುನರ್ ಪರಿಶೀಲಿಸುವಂತೆ ಆಡಳಿತ ಮಂಡಳಿಗೆ ಪತ್ರ ಬರೆದಿದೆ ಎಂದು ವರದಿಯಾಗಿದೆ. ಶಿಖಾ ಶರ್ಮಾ ಅವರ ಕೋರಿಕೆ ಅನುಸಾರ ಸಿಇಒ ಆಗಿ ಅವರ ಅವಧಿಯನ್ನು ಡಿಸೆಂಬರ್‌ವರೆಗೆ ಮಾತ್ರ ವಿಸ್ತರಿಸಲಾಗುತ್ತಿದೆ ಎಂದು ಆ್ಯಕ್ಸಿಸ್ ಬ್ಯಾಂಕಿನ ಆಡಳಿತ ಮಂಡಳಿ ಈಗ ಘೋಷಿಸಿದೆ.

ಪರಿಸ್ಥಿತಿ ಕಠಿಣವಾಗಿದೆ. ಆರ್‌ಬಿಐ ಸಿದ್ಧಪಡಿಸಿರುವ ಹಣಕಾಸು ಸ್ಥಿರತೆ ವರದಿಯು, ಎಲ್ಲ ವಾಣಿಜ್ಯ ಬ್ಯಾಂಕುಗಳ ಎನ್‌ಪಿಎ ಪ್ರಮಾಣ 2017ರ ಮಾರ್ಚ್ ವೇಳೆಗೆ ಶೇಕಡ 9.6ರಷ್ಟು, 2017ರ ಸೆಪ್ಟೆಂಬರ್ ವೇಳೆಗೆ ಶೇಕಡ 10.2ರಷ್ಟು ಮತ್ತು 2018ರ ಮಾರ್ಚ್ ವೇಳೆಗೆ ಶೇಕಡ 10.8ರಷ್ಟು ಇತ್ತು ಎಂದು ಹೇಳಿದೆ. ಇದೇ ಅವಧಿಯಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ಎನ್‌ಪಿಎ ಪ್ರಮಾಣ ಕ್ರಮವಾಗಿ ಶೇಕಡ 11.4ರಷ್ಟು, ಶೇಕಡ 13.5ರಷ್ಟು ಮತ್ತು ಶೇಕಡ 14.5ರಷ್ಟು ಇತ್ತು. ಎಲ್ಲ ಬ್ಯಾಂಕುಗಳ ಒಟ್ಟು ಎನ್‌ಪಿಎ ಮೊತ್ತದಲ್ಲಿ ಖಾಸಗಿ ಬ್ಯಾಂಕುಗಳ ಎನ್‌ಪಿಎ ಪ್ರಮಾಣ ಅಂದಾಜು ನಾಲ್ಕನೆಯ ಒಂದರಷ್ಟಿದೆ. ಹಾಗಾಗಿ, ಅವರಲ್ಲಿ ಸಮಸ್ಯೆ ಇರುವುದು ನಿಜ.

ವಸೂಲಾದ ಸಾಲಗಳಿಗೆ ತೆಗೆದಿರಿಸಬೇಕಿರುವ ಹಣವು ಬ್ಯಾಂಕಿನ ವೆಚ್ಚಗಳ ಪಟ್ಟಿಗೆ ಸೇರುವ ಕಾರಣ, ಎನ್‌ಪಿಎಗಳು ಬ್ಯಾಂಕ್‌ಗಳ ಲಾಭವನ್ನು ಕಡಿಮೆ ಮಾಡುತ್ತವೆ. ಇದು ಬ್ಯಾಂಕುಗಳು ಕಂಪನಿಗಳಿಗೆ ಸಾಲ ನೀಡದಂತೆ ಮಾಡಿ, ಸಾಲವನ್ನು ಸಕಾಲಕ್ಕೆ ಮರುಪಾವತಿ ಮಾಡುವವರಿಗೂ ತೊಂದರೆ ತಂದಿಡುತ್ತದೆ. ಇದು ಹಣಕಾಸು ವ್ಯವಸ್ಥೆ ದುರ್ಬಲವಾಗುವಂತೆಯೂ ಮಾಡುತ್ತದೆ. ಕೊನೆಯಲ್ಲಿ ಇದು, ಠೇವಣಿದಾರರು ಮತ್ತು ತೆರಿಗೆದಾರರಿಗೆ ಹೊರೆಯಾಗಿ ಪರಿಣಮಿಸುತ್ತದೆ.

ಇಂತಹ ಪರಿಸ್ಥಿತಿಯಲ್ಲಿ ಬ್ಯಾಂಕುಗಳಿಗೆ ಷೇರು ಬಂಡವಾಳದ ಅಗತ್ಯ ಎದುರಾಗುತ್ತದೆ. ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಿಗೆ ₹ 2.11 ಲಕ್ಷ ಕೋಟಿ ಮೊತ್ತದ ಪುನರ್ಧನ ಯೋಜನೆಯನ್ನು ಕೇಂದ್ರ ಸರ್ಕಾರ 2017ರ ಅಕ್ಟೋಬರ್‌ನಲ್ಲಿ ಘೋಷಿಸಿತು. ಈ ಘೋಷಣೆಯ ಹಿಂದೆ ಎರಡು ಕಾರಣಗಳಿದ್ದವು. ಮೊದಲನೆಯದು ನಿಯಮಗಳಿಗೆ ಸಂಬಂಧಿಸಿದ್ದು. ಬ್ಯಾಂಕುಗಳ ಮೂಲ ಬಂಡವಾಳ (ಅಂದರೆ, ಷೇರು ಮತ್ತು ಮೀಸಲು ನಿಧಿಗಳು) ಬಾಸೆಲ್–3 ನಿಯಮಗಳಲ್ಲಿ ಹೇಳಿರುವ ಜಾಗತಿಕ ಮಟ್ಟವನ್ನು 2019ರ ಏಪ್ರಿಲ್‌ಗೆ ಮುನ್ನ ತಲುಪಬೇಕು. ಎರಡನೆಯ ಕಾರಣ, ಆರ್ಥಿಕ ಅನಿವಾರ್ಯಗಳು. ವಸೂಲಾಗದ ಸಾಲಗಳಿಗೆ ಬ್ಯಾಂಕುಗಳು ನಿರ್ದಿಷ್ಟ ಮೊತ್ತ ತೆಗೆದಿರಿಸಬೇಕಿರುವ ಕಾರಣ, ಅವುಗಳ ಸಾಲ ನೀಡಿಕೆ ಸಾಮರ್ಥ್ಯ ಕುಂಠಿತವಾಗುತ್ತದೆ ಅಥವಾ ಕನಿಷ್ಠ ಮೀಸಲು ಬಂಡವಾಳದ ನಿಯಮಗಳಿಗೆ ಬದ್ಧವಾಗಿರುವುದು ಕಷ್ಟವಾಗುತ್ತದೆ. ಮಾರುಕಟ್ಟೆ ಆಧಾರಿತ ಅರ್ಥ ವ್ಯವಸ್ಥೆಯ ಜೀವಜಲ ‘ಸಾಲ’ ಎಂಬುದರಲ್ಲಿ ಎರಡು ಮಾತಿಲ್ಲ. ಬ್ಯಾಂಕ್ ಪುನರ್ಧನ ಯೋಜನೆಯು ಅಗತ್ಯವಾಗಿತ್ತಾದರೂ ಅಷ್ಟೇ ಸಾಕಾಗುವುದಿಲ್ಲ.

ಬ್ಯಾಂಕುಗಳು ನೀಡಿರುವ ಕೆಟ್ಟ ಸಾಲದ ಪ್ರಮಾಣವನ್ನು ಇಲ್ಲವಾಗಿಸಲು ಅಥವಾ ಕಡಿಮೆ ಮಾಡಲು ಪುನರ್ಧನ ಯೋಜನೆಯು ನೆರವಾಗುತ್ತದೆ. ಆದರೆ, ‘ಕೆಟ್ಟ ಸಾಲ’ ನೀಡುವ ಪದ್ಧತಿ ಮುಂದುವರಿದರೆ ವಸೂಲಾಗದ ಸಾಲದ ಸಮಸ್ಯೆ ಸೃಷ್ಟಿಯಾಗದಂತೆ ಈ ಯೋಜನೆ ಏನನ್ನೂ ಮಾಡುವುದಿಲ್ಲ. ಇದನ್ನು ಸರಿಪಡಿಸುವುದು ಪರಿಣಾಮಕಾರಿ ನಿಯಂತ್ರಣ ವ್ಯವಸ್ಥೆ, ಉತ್ತಮ ಆಡಳಿತ ಮತ್ತು ಪ್ರಾಮಾಣಿಕ ಉತ್ತರದಾಯಿತ್ವದಿಂದ ಮಾತ್ರ ಸಾಧ್ಯ.

ಖಾಸಗಿ ರಂಗದ ವಾಣಿಜ್ಯ ಬ್ಯಾಂಕುಗಳ ಪಾಲಿಗೆ ನಿಯಂತ್ರಕ ಮತ್ತು ಮೇಲ್ವಿಚಾರಕ ಆರ್‌ಬಿಐ.

ಈ ಬ್ಯಾಂಕುಗಳ ಸಿಇಒ, ನಿರ್ದೇಶಕರು ಮತ್ತು ಸ್ವತಂತ್ರ ನಿರ್ದೇಶಕರ ಸ್ಥಾನಗಳಿಗೆ ನೇಮಕ ಮಾಡಬೇಕಿರುವವರ ಹೆಸರನ್ನು ಆಡಳಿತ ಮಂಡಳಿ ಶಿಫಾರಸು ಮಾಡುತ್ತದೆ, ಅದಕ್ಕೆ ಆರ್‌ಬಿಐ ಅನುಮೋದನೆ ನೀಡುತ್ತದೆ. ಅವರ ಮೇಲ್ವಿಚಾರಣೆ ನಡೆಸುವುದು ಕೂಡ ಆರ್‌ಬಿಐ ಹೊಣೆ. ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ಸಿಇಒ, ನಿರ್ದೇಶಕರು ಮತ್ತು ಸ್ವತಂತ್ರ ನಿರ್ದೇಶಕರ ನೇಮಕಗಳ ವಿಚಾರದಲ್ಲಿ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಯ ಅನ್ವಯ ಸರ್ಕಾರವೇ ತೀರ್ಮಾನ ಕೈಗೊಳ್ಳುತ್ತದೆ. ಇವುಗಳಲ್ಲಿ ಆರ್‌ಬಿಐ ಪಾತ್ರ ಮೇಲ್ವಿಚಾರಣೆಗೆ ಮಾತ್ರ ಸೀಮಿತವಾಗಿರುತ್ತದೆ. ಸರ್ಕಾರಿ ಮತ್ತು ಖಾಸಗಿ ಸ್ವಾಮ್ಯದ ಬ್ಯಾಂಕುಗಳಲ್ಲಿ ಕಾರ್ಪೊರೇಟ್ ಆಡಳಿತ ವ್ಯವಸ್ಥೆ ಇರುವಂತೆ ನೋಡಿಕೊಳ್ಳುವ ಹೊಣೆ ಆಯಾ ಬ್ಯಾಂಕುಗಳ ನಿರ್ದೇಶಕರ ಮಂಡಳಿ, ಲೆಕ್ಕಪರಿಶೋಧನಾ ಸಮಿತಿ, ನಾಮನಿರ್ದೇಶನ ಮತ್ತು ಗೌರವಧನ ಸಮಿತಿ, ಸ್ವತಂತ್ರ ನಿರ್ದೇಶಕರು ಮತ್ತು ಶಾಸನಬದ್ಧ ಲೆಕ್ಕಪರಿಶೋಧಕರದ್ದು.

ಪಿಎನ್‌ಬಿಯಲ್ಲಿ ನಡೆದ ಅವ್ಯವಹಾರ ಜನ್ಮತಳೆದಿದ್ದು 2011ರಲ್ಲಿ, ಅವ್ಯವಹಾರ ಗೊತ್ತಾಗಿದ್ದು 2018ರಲ್ಲಿ. ಹಾಗಾಗಿ, ಮಾಲೀಕನೂ ನಿಯಂತ್ರಕನೂ ಆಗಿರುವ ಸರ್ಕಾರ ಇದರ ಪ್ರಾಥಮಿಕ ಜವಾಬ್ದಾರಿ ಹೊರಬೇಕು ಎನ್ನುವುದು ಸ್ಪಷ್ಟ. ಮೇಲ್ವಿಚಾರಣೆ ವಿಚಾರದಲ್ಲಿ ಆರ್‌ಬಿಐ ಕೂಡ ವಿಫಲವಾಗಿರುವುದು ಇಷ್ಟೇ ಸ್ಪಷ್ಟ. ಇವೆರಡರ ಜೊತೆ, ಕಾರ್ಪೊರೇಟ್ ಆಡಳಿತದ ತತ್ವಗಳನ್ನು ಪಾಲಿಸುವಲ್ಲಿ ಪಿಎನ್‌ಬಿಯ ನಿರ್ದೇಶಕರ ಮಂಡಳಿ, ಲೆಕ್ಕಪರಿಶೋಧನಾ ಸಮಿತಿ ಮತ್ತು ಸ್ವತಂತ್ರ ನಿರ್ದೇಶಕರಿಂದ ಕೂಡ ಗಂಭೀರ ಸ್ವರೂಪದ ಲೋಪ ಆಗಿದೆ. ನಿಯಂತ್ರಕ, ಮೇಲ್ವಿಚಾರಕ ಮತ್ತು ಆಡಳಿತ ನಡೆಸುವವರು ನಿದ್ರಿಸುತ್ತಿದ್ದರು ಎಂಬಂತೆ ಕಾಣಿಸುತ್ತಿದೆ. ಉತ್ತರದಾಯಿತ್ವವು ಈಗ ಅಮಾನತಾಗಿರುವ ಕೆಲವು ಮಧ್ಯಮ ಕ್ರಮಾಂಕದ ಅಧಿಕಾರಿಗಳ ಮಟ್ಟದಲ್ಲಿಯೇ ನಿಂತುಹೋಗುತ್ತದೆಯೇ? ಖಂಡಿತ ಇಲ್ಲ. ಸಿಇಒ ಮತ್ತು ಆಡಳಿತ ಮಂಡಳಿ ಕೂಡ ಇದಕ್ಕೆ ಉತ್ತರದಾಯಿ ಆಗಬೇಕು.

ದಶಕಕ್ಕೂ ಹೆಚ್ಚಿನ ಕಾಲದಿಂದ ಉಳಿದುಕೊಂಡು ಬಂದಿರುವ ವಸೂಲಾಗದ ಸಾಲದ ಗಂಭೀರ ಸಮಸ್ಯೆಯನ್ನು ಐಸಿಐಸಿಐ ಬ್ಯಾಂಕ್ ಎದುರಿಸುತ್ತಿದೆ. ತನಿಖೆಯ ವ್ಯಾಪ್ತಿಯಲ್ಲಿರುವ ವಹಿವಾಟುಗಳಲ್ಲಿ ಬ್ಯಾಂಕಿನ ಸಿಇಒ ಹೆಸರು ಕೂಡ ಇದೆ, ಅವರು ‘ಹಿತಾಸಕ್ತಿಗಳ ಸಂಘರ್ಷ’ದ ತತ್ವವನ್ನು ಉಲ್ಲಂಘಿಸಿರುವುದು ಖಚಿತ. ಅಲ್ಲಿ ಕಾರ್ಪೊರೇಟ್ ಆಡಳಿತದ ತತ್ವಗಳ ಪಾಲನೆಯಲ್ಲಿ ಸ್ಪಷ್ಟವಾದ ಉಲ್ಲಂಘನೆ ಆಗಿದೆ. 2016–17ನೇ ಸಾಲಿಗೆ ಚಂದಾ ಕೊಚ್ಚರ್ ಅವರಿಗೆ ಬೋನಸ್ ರೂಪದಲ್ಲಿ ₹ 2.2 ಕೋಟಿ ಕೊಡಬೇಕು ಎನ್ನುವ ಆಡಳಿತ ಮಂಡಳಿ ತೀರ್ಮಾನಕ್ಕೆ ಆರ್‌ಬಿಐ ಸಮ್ಮತಿ ನೀಡಿಲ್ಲ ಎಂದು ವರದಿಯಾಗಿದೆ. ಆದರೆ, ನಿಯಂತ್ರಕನ ಅಥವಾ ಮೇಲ್ವಿಚಾರಕನ ರೂಪದಲ್ಲಿ ಆರ್‌ಬಿಐ ಇದುವರೆಗೂ ಮುಂದಡಿ ಇಟ್ಟಿಲ್ಲ. ಕಾರ್ಪೊರೇಟ್ ಆಡಳಿತ ಸರಿಯಾಗಿ ನಡೆಯುವಂತೆ ನೋಡಿಕೊಳ್ಳುವ ಹೊಣೆ ಹೊತ್ತಿರುವ ನಿರ್ದೇಶಕರ ಮಂಡಳಿ, ಲೆಕ್ಕಪರಿಶೋಧನ ಸಮಿತಿ ಸದಸ್ಯರು, ಸ್ವತಂತ್ರ ನಿರ್ದೇಶಕರು ಇದುವರೆಗೆ ಸಿಇಒ ಅವರನ್ನು ಸಮರ್ಥಿಸಿಕೊಂಡು ಬಂದಿದ್ದಾರೆ.

ವಸೂಲಾಗದ ಸಾಲದ ಪ್ರಮಾಣ ಹೆಚ್ಚುತ್ತಿರುವ ಸಮಸ್ಯೆಯನ್ನು ಆ್ಯಕ್ಸಿಸ್ ಬ್ಯಾಂಕ್ ಕೂಡ ಎದುರಿಸುತ್ತಿದೆ. ಎನ್‌ಪಿಎ ಪ್ರಮಾಣವನ್ನು ಸತತ ಎರಡು ವರ್ಷಗಳಿಂದ ಸರಿಯಾಗಿ ಅಂದಾಜು ಮಾಡಿರಲಿಲ್ಲ, ಆ ಮೂಲಕ ವಸೂಲಾಗದ ಸಾಲದ ಪ್ರಮಾಣವನ್ನು ಮುಚ್ಚಿಡಲಾಯಿತು. ಈ ಪ್ರಕರಣದಲ್ಲಿ ಆರ್‌ಬಿಐ ನಿಯಂತ್ರಕ ಮತ್ತು ಮೇಲ್ವಿಚಾರಕನಾಗಿ ಕೆಲಸ ಮಾಡಿರುವ ಸಾಧ್ಯತೆ ಇದೆ. 2016–17ನೇ ಸಾಲಿಗೆ ಶರ್ಮಾ ಅವರಿಗೆ ₹ 1.35 ಕೋಟಿಯನ್ನು ಬೋನಸ್ ರೂಪದಲ್ಲಿ ಪಾವತಿಸುವ ಆಡಳಿತ ಮಂಡಳಿ ತೀರ್ಮಾನಕ್ಕೆ ಆರ್‌ಬಿಐ ಒಪ್ಪಿಗೆ ನೀಡಿಲ್ಲ ಎಂದು ವರದಿಗಳು ಹೇಳುತ್ತಿವೆ. ಶರ್ಮಾ ಅವರನ್ನು ಪುನಃ ಸಿಇಒ ಆಗಿ ನೇಮಿಸಿದ ಕ್ರಮವನ್ನು ಪುನರ್‌ಪರಿಶೀಲನೆ ಮಾಡುವಂತೆ ಬ್ಯಾಂಕಿನ ಅಧ್ಯಕ್ಷರು ಮತ್ತು ಆಡಳಿತ ಮಂಡಳಿಯನ್ನು ಆರ್‌ಬಿಐ ಕೇಳಿತ್ತು ಎಂದು ಈ ತಿಂಗಳ ಆರಂಭದಲ್ಲಿ ವರದಿಯಾಗಿದೆ. ಈ ಸೂಚನೆಯನ್ನು ಆಡಳಿತ ಮಂಡಳಿ ಪಾಲಿಸಿದೆ. ಹೀಗಿದ್ದರೂ, ಕಾರ್ಪೊರೇಟ್ ಆಡಳಿತದ ವಿಚಾರದಲ್ಲಿ ಪ್ರಾಥಮಿಕ ಹೊಣೆ ಹೊರಬೇಕಿರುವವರು ನಿರ್ದೇಶಕರ ಮಂಡಳಿ ಸದಸ್ಯರು, ಲೆಕ್ಕಪರಿಶೋಧನಾ ಸಮಿತಿ ಮತ್ತು ಸ್ವತಂತ್ರ ನಿರ್ದೇಶಕರು.ಉತ್ತರದಾಯಿತ್ವವನ್ನು ದುರ್ಬಲಗೊಳಿಸುವ ಇಂತಹ ಪರಿಸ್ಥಿತಿಗಳಲ್ಲಿ, ತಪ್ಪು ಸರಿಪಡಿಸುವ ಕ್ರಮ ಜಾರಿಗೊಳಿಸದಿದ್ದರೆ ‘ನೈತಿಕ ಅಪಾಯ’ವೊಂದು ಸೃಷ್ಟಿಯಾಗುತ್ತದೆ. ತಾವು ಮಾಡಿದ ತಪ್ಪುಗಳಿಗೆ ಯಾವುದೇ ಬೆಲೆ ತೆರದ, ನಿರ್ಲಕ್ಷ್ಯದಿಂದ ಕೆಲಸ ಮಾಡುವ ಬ್ಯಾಂಕರ್‌ಗಳು ತಮ್ಮ ತಪ್ಪುಗಳನ್ನು ಪುನಃ ಮಾಡಬಹುದು.

ಮೂಲಭೂತ ಬದಲಾವಣೆಗಳನ್ನು ತಾರದಿದ್ದರೆ ಇಂತಹ ಘಟನೆಗಳು ಮತ್ತೆ ಆಗುತ್ತವೆ. ಸರ್ಕಾರವೇ ಜಾರಿಗೆ ತಂದ, ಇನ್ನೊಬ್ಬರು ಹೇಳಿದ್ದಕ್ಕಾಗಿ ಸಾಲ ಕೊಡುವ ವ್ಯವಸ್ಥೆ ನಿಲ್ಲಬೇಕು. ವೃತ್ತಿಪರತೆ ಇಲ್ಲದೆ ಸಾಲ ಕೊಡುವುದು, ಬ್ಯಾಂಕ್‌ಗಳಲ್ಲಿ ಭ್ರಷ್ಟ ಕೆಲಸಗಳು ನಡೆಯುವುದು ನಿಲ್ಲಬೇಕು. ಬ್ಯಾಂಕುಗಳು ಸಾಲ ಕೊಡುವಾಗ ಎಚ್ಚರ ವಹಿಸಬೇಕು. ಸ್ವತಂತ್ರ ನಿರ್ದೇಶಕರ ನೇಮಕದಲ್ಲಿ ಹಸ್ತಕ್ಷೇಪಕ್ಕೆ ಅವಕಾಶ ಇರಬಾರದು. ಬ್ಯಾಂಕುಗಳ ನಿಯಂತ್ರಣ ಮತ್ತು ಮೇಲ್ವಿಚಾರಣಾ ವ್ಯವಸ್ಥೆಯಲ್ಲಿ ವೈಫಲ್ಯಗಳು ಉಂಟಾಗದಂತೆ ಆರ್‌ಬಿಐ ಕ್ರಮ ಕೈಗೊಳ್ಳಬೇಕು. ಮಾಲೀಕನಾಗಿ ಉತ್ತರದಾಯಿತ್ವ ಬಯಸುವುದನ್ನು ಹೊರತುಪಡಿಸಿದರೆ ಸರ್ಕಾರವು ತನ್ನ ಮಾಲೀಕತ್ವದ ಬ್ಯಾಂಕ್‌ಗಳ ಚಟುವಟಿಕೆಗಳಲ್ಲಿ ಮಧ್ಯಪ್ರವೇಶ ಮಾಡಬಾರದು. ವಾಣಿಜ್ಯ ಬ್ಯಾಂಕ್‌ಗಳಲ್ಲಿ ಉತ್ತಮ ಆಡಳಿತ ಇರುವಂತೆ ನಿರ್ದೇಶಕರ ಮಂಡಳಿ ನೋಡಿಕೊಳ್ಳಬೇಕು. ತಮ್ಮ ಹೊಣೆ ನಿಭಾಯಿಸಲು ವಿಫಲರಾದವರನ್ನು ಉತ್ತರದಾಯಿ ಆಗಿಸಬೇಕು. ನಮ್ಮ ಬ್ಯಾಂಕಿಂಗ್ ವ್ಯವಸ್ಥೆಯ ಭವಿಷ್ಯ ಇವುಗಳ ಮೇಲೆ ನಿಂತಿದೆ.

(ಲೇಖಕರು 1989–91ರ ನಡುವೆ ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರಾಗಿ ಕೆಲಸ ಮಾಡಿದವರು)

ಈ ಲೇಖನವು ಇಂಗ್ಲಿಷ್ ದಿನಪತ್ರಿಕೆ ‘ದ ಮಿಂಟ್’ನಲ್ಲಿ ಇದಕ್ಕೂ ಮೊದಲು ಪ್ರಕಟವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.