ಭಾರತದ ಪ್ರಮುಖ ನಿರ್ದೇಶಕರಲ್ಲಿ ಒಬ್ಬರಾದ ಗಿರೀಶ ಕಾಸರವಳ್ಳಿ ಅವರು ಮಲೆನಾಡಿನ ಸೊಗಡಿನವರು. ಪುಣೆಯ ರಾಷ್ಟ್ರೀಯ ಚಲನಚಿತ್ರ ತರಬೇತಿ ಸಂಸ್ಥೆಯಲ್ಲಿ ನಿರ್ದೇಶನ ವಿಭಾಗದಲ್ಲಿ ಡಿಪ್ಲೊಮಾ ಪದವಿ ಗಳಿಸಿ, ವೃತ್ತಿ ಜೀವನಕ್ಕೆ ಇಳಿದವರು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಯು.ಆರ್. ಅನಂತಮೂರ್ತಿ ಅವರ ‘ಘಟಶ್ರಾದ್ಧ’ ಕಾದಂಬರಿಯನ್ನು ತೆರೆಮೇಲೆ ತಂದು ಸ್ವರ್ಣ ಕಮಲ ಪ್ರಶಸ್ತಿ ಪಡೆದವರು. ಇವರ ‘ತಬರನ ಕಥೆ’, ‘ತಾಯಿಸಾಹೇಬ’, ‘ದ್ವೀಪ’ ಚಿತ್ರಗಳಿಗೂ ಸ್ವರ್ಣ ಕಮಲ ಪ್ರಶಸ್ತಿ ದೊರಕಿದೆ. ರಾಜ್ಯ ಪ್ರಶಸ್ತಿಗಳನ್ನೂ ಇವರು ಪಡೆದಿದ್ದಾರೆ. ಪರ್ಯಾಯ ಸಿನಿಮಾ ಆಂದೋಲನದ ದೃಷ್ಟಿಯಿಂದ ಇವರನ್ನು ಚಲನಚಿತ್ರ ವೈಯಾಕರಣಿ ಎಂದು ಕರೆಯುವವರೂ ಇದ್ದಾರೆ.