ಕೊರೆಯುವ ಚಳಿ, ಕೊರೊನಾದ ಭಯ ಮತ್ತು ಪೊಲೀಸರ ಕ್ರೌರ್ಯ. ಒಂದೇ ತಕ್ಕಡಿಯಲ್ಲಿ ಇಡಬಹುದಾದ ಈ ಸವಾಲುಗಳನ್ನು ಎದುರಿಸಿ, ದೆಹಲಿ ಪ್ರವೇಶಿಸುವ ರಸ್ತೆಗಳಲ್ಲಿ ಬೀಡುಬಿಟ್ಟು, ಕೃಷಿಗೆ ಸಂಬಂಧಿಸಿದ ಹೊಸ ಕಾನೂನುಗಳ ವಿರುದ್ಧ ಹತ್ತು ದಿನಗಳಿಂದ ಪ್ರತಿಭಟಿಸುತ್ತಿರುವ ರೈತರು ತಮ್ಮ ಬೇಡಿಕೆಗಳಾಚೆಗೆ ದೇಶಕ್ಕೇನೋ ಒಂದಷ್ಟು ಸಂದೇಶಗಳನ್ನು ನೀಡುತ್ತಿದ್ದಾರೆ.

ಆ ಸಂದೇಶಗಳು ಯಾರನ್ನೂ ತಲುಪಬಾರದು ಎನ್ನುವ ಉದ್ದೇಶದಿಂದ, ಪ್ರತಿಭಟಿಸುತ್ತಿರುವ ರೈತರನ್ನು ದೇಶದ್ರೋಹಿಗಳೆಂದೂ ನಕ್ಸಲರೆಂದೂ ಖಲಿಸ್ತಾನಿಪ್ರತ್ಯೇಕತಾವಾದಿಗಳೆಂದೂ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಪಕ್ಷದ ಕೆಲವರು ಮತ್ತು ಅದರ ಭಕ್ತವೃಂದದವರು ಕರೆದರು. ತಮ್ಮನ್ನು ಪ್ರಶ್ನಿಸುವವರ ವಿಶ್ವಾಸಾರ್ಹತೆಯನ್ನೇ ಕೆಡಿಸುವ ಅವರ ಮಾಮೂಲಿ ಹುನ್ನಾರ ಈ ಬಾರಿ ಕೆಲಸಕ್ಕೆ ಬರಲಿಲ್ಲ. ಆಪಾದನೆಗಳು ಹೆಚ್ಚಾದಂತೆ ಆಪಾದನೆಗಳನ್ನು ಮಾಡಿದವರೇ ನಗೆಪಾಟಲಿಗೆ ಈಡಾಗತೊಡಗಿದರು.

ಪ್ರತಿಭಟನಕಾರರ ಮೇಲೆ ಎಂದಿನಂತೆ ಪೊಲೀಸರನ್ನು ಛೂ ಬಿಡಲಾಯಿತು. ಆದರೆ ಪ್ರತಿಭಟನಕಾರರು ಮಾತ್ರ ನೋವು ಮರೆತು, ಹೊಡೆದ ಪೊಲೀಸರನ್ನು ಕರೆದು ಅನ್ನ ನೀಡಿದರು. ‘….ಗೆ ಹಾಲೆರೆದರೇನು ಫಲ, ರಂಗ’ ಎಂಬಂತಹ ವಾಣಿಗಳ ಬಗ್ಗೆ ರೈತರು ತಲೆಕೆಡಿಸಿಕೊಳ್ಳಲಿಲ್ಲ. ಫಲಾಫಲಗಳ ಯುಕ್ತಾಯುಕ್ತತೆಯ ಬಗ್ಗೆ ಈ ದೇಶದ ಮಣ್ಣಿನ ಮಕ್ಕಳಿಗೆ ಅವರದ್ದೇ ಆಂತರ್ಯದ ಕಾಣ್ಕೆಗಳಿರುತ್ತವೆ. ಸರ್ಕಾರವು ಸಂಧಾನಕ್ಕೆ ಕರೆದ ವೇಳೆ ನೀಡಿದ ಊಟವನ್ನು ಪ್ರತಿಭಟನಕಾರರು ನಿರಾಕರಿಸಿದರು.

ಸಂಧಾನಕ್ಕೆ ಕರೆದವರು ನೀಡಿದ ಆತಿಥ್ಯ ಸ್ವೀಕರಿಸಬಾರದು ಎನ್ನುವುದು ನೀತಿ. ಮಹಾಭಾರತದಲ್ಲಿ ಚಾಣಾಕ್ಷ ಸಂಧಾನಕಾರನಾಗಿದ್ದ ಶ್ರೀಕೃಷ್ಣನು ದುರ್ಯೋಧನನ ಆತಿಥ್ಯವನ್ನು ನಿರಾಕರಿಸಿ ಎತ್ತಿ ಹಿಡಿದ ನೀತಿಯೂ ಅದೇ ತಾನೇ? ಸಂಸ್ಕೃತಿ, ನೀತಿ ಇತ್ಯಾದಿ ಕಲಿಯಲು ದಂಡ ಬೀಸಬೇಕಾಗಿಲ್ಲ, ಸಮವಸ್ತ್ರ ತೊಡಬೇಕಾಗಿಲ್ಲ ಅಂತ, ಪ್ರತಿಭಟನಾನಿರತ ರೈತರು ದೇಶಕ್ಕೆ ಸಾರಿದರು.

ಒಂದಷ್ಟು ಮಂದಿ ಪ್ರತಿಭಟನಕಾರರು ಕಾಣಿಸಿಕೊಂಡಾಕ್ಷಣ ವೈರಿಸೈನ್ಯವೇ ತಮ್ಮ ಮೇಲೆರಗಿದೆ ಎನ್ನುವ ಗುಮಾನಿಯು ಬಲಿಷ್ಠ ನಾಯಕತ್ವದ ಈ ಸುಭದ್ರಸರ್ಕಾರವನ್ನೂ ಬಾಧಿಸಲಾರಂಭಿಸಿತು ಅನ್ನಿಸುತ್ತದೆ. ಹಾಗಾಗಿ, ಪ್ರತಿಭಟನಕಾರರು ಬರುವ ರಸ್ತೆಗಳಲ್ಲಿ ಸರ್ಕಾರದ ವತಿಯಿಂದಲೇ ಕಂದಕಗಳನ್ನು ತೋಡಿಸಲಾಯಿತು. ಚಳಿಯಲ್ಲಿ ಥರಗುಟ್ಟುತ್ತಿದ್ದ ಆ ಮಂದಿಯ ಮೇಲೆ ಜಲಫಿರಂಗಿಗಳ ಮೂಲಕ ತಣ್ಣೀರಧಾರೆ ಸುರಿಯಲಾಯಿತು. ಪ್ರತಿಭಟನಕಾರರು ವಿಚಲಿತರಾಗಲಿಲ್ಲ. ಕೆರಳಲಿಲ್ಲ. ‘ಪ್ರತಿಭಟಿಸುವವರು ಕೆರಳಲಿ ಅಂತ ಆಳುವವರು ಕಾಯುತ್ತಿರುತ್ತಾರೆ. ಕೆರಳಿದರೆ ಕಾರ್ಯ ಕೆಟ್ಟೀತು’ ಅಂತ ಮುಂದಿನ ದಿನಗಳಲ್ಲಿ ಪ್ರತಿಭಟಿಸುವವರಿಗೆಲ್ಲಾ ಆ ರೈತರು ಮೌನವಾಗಿ ಪಾಠ ಹೇಳಿದರು.

ಯುಪಿಎ ನೇತೃತ್ವದ ಸರ್ಕಾರ ಅಧಿಕಾರದಲ್ಲಿದ್ದಾಗ ಅದರ ವಿರುದ್ಧ ನಡೆದಿದ್ದ ಎರಡು ಬೃಹತ್ ಪ್ರತಿಭಟನೆಗಳನ್ನು (ಒಂದು, ಭ್ರಷ್ಟಾಚಾರದ ವಿರುದ್ಧ, ಇನ್ನೊಂದು, ನಿರ್ಭಯಾ ಅತ್ಯಾಚಾರ ಪ್ರಕರಣದ ವಿರುದ್ಧ) ನೆನಪಿಸಿಕೊಳ್ಳಿ. ಅವೆರಡನ್ನೂ ಈ ದೇಶದ ಮಾಧ್ಯಮಗಳೇ ಪೋಷಿಸಿ, ಬೆಳೆಸಿದ್ದವು. ಆದರೆ, ಈಗ ನಡೆಯುತ್ತಿರುವ ರೈತ ಚಳವಳಿಯ ವಿಚಾರದಲ್ಲಿ ಬಹುತೇಕ ಮಾಧ್ಯಮಗಳು ಕಣ್ಣು ಮುಚ್ಚಿಕೊಂಡವು. ಇನ್ನು ಕೆಲವು ಮಾಧ್ಯಮ ಸಂಸ್ಥೆಗಳು ಸರ್ಕಾರದ ವಕ್ತಾರಿಕೆ ವಹಿಸಿಕೊಂಡು, ಪ್ರತಿಭಟನಾನಿರತ ರೈತರ ಮೇಲೆ ವಿವಿಧ ದ್ರೋಹಗಳ ಆಪಾದನೆ ಹೊರಿಸಿದವು. ಕೊನೆಗೆ ಮಾಧ್ಯಮಗಳ ಮಂದಿಗೇ ಮಾಧ್ಯಮಗಳ ನಡವಳಿಕೆಯಿಂದ ನಾಚಿಕೆಯಾಯಿತು. ‘ವೃತ್ತಿಧರ್ಮ ಪಾಲಿಸಿ, ರೈತರ ಈ ಚಳವಳಿಯ ವಿಚಾರದಲ್ಲಿ ಪಕ್ಷಪಾತಿ ಧೋರಣೆ ಬೇಡ’ ಅಂತ ‘ಎಡಿಟರ್ಸ್ ಗಿಲ್ಡ್’ ಪ್ರಕಟಣೆ ಹೊರಡಿಸಿತು. ನಾಚಿಕೆ ಎಂಬ ಸಂವೇದನೆ ಏನೆಂದೇ ತಿಳಿಯದ ಈ ದೇಶದ ಕೆಲವು ಮಾಧ್ಯಮ ಸಂಸ್ಥೆಗಳಿಗೆ ನಾಚಿಕೆಯಾಗುವ ಹಾಗೆ ಮಾಡಿದ ರೈತರ ಸಾಧನೆ ಚಾರಿತ್ರಿಕ.

ರೈತರು ವಿವಾದಿತ ಕೃಷಿ ಕಾನೂನುಗಳ ರದ್ದತಿಗಾಗಿ ಪಟ್ಟುಹಿಡಿದಿದ್ದಾರೆ. ಅವರ ಪ್ರಕಾರ, ಈ ಕಾನೂನುಗಳು ದೇಶದ ಕೃಷಿ ವ್ಯವಸ್ಥೆಯನ್ನು ಬಂಡವಾಳಶಾಹಿಗಳ ಕೈಗೊಪ್ಪಿಸಿ, ಕೃಷಿಕರನ್ನು ಕಾರ್ಪೊರೇಟ್ ಕುಳಗಳ ಕೈಗೊಂಬೆಗಳನ್ನಾಗಿ ಮಾಡಲಿವೆ. ಈಗ ಸಿಗುತ್ತಿರುವ ಕನಿಷ್ಠ ಬೆಂಬಲ ಬೆಲೆಯ ಆಸರೆ ಇಲ್ಲವಾಗಲಿದೆ. ಆದರೆ, ಸರ್ಕಾರದ ವಾದ ಬೇರೆಯೇ ಇದೆ. ಹೊಸ ಕಾನೂನುಗಳಿಂದಾಗಿ ಕೃಷಿ ಕ್ಷೇತ್ರವು ಎಲ್ಲಾ ನಿರ್ಬಂಧಗಳಿಂದ ಮುಕ್ತವಾಗಲಿದೆ. ಕೈಗಾರಿಕಾ ರಂಗ ಉದಾರೀಕರಣಗೊಂಡು ಸಮೃದ್ಧವಾದಂತೆ ಕೃಷಿಯೂ ಸಮೃದ್ಧಗೊಳ್ಳಲಿದೆ. ಬೆಂಬಲ ಬೆಲೆ ರದ್ದಾಗುವುದಿಲ್ಲ. ಆದರೆ ಈ ಭರವಸೆಯನ್ನು ಕಾನೂನಿನಲ್ಲಿ ಸೇರಿಸಲು ಸರ್ಕಾರ ನಿರಾಕರಿಸುತ್ತಿದೆ. ಈ ಕಾನೂನುಗಳಿಂದ ರೈತರಿಗೆ ಅನುಕೂಲಗಳೇ ಹೆಚ್ಚಿದ್ದರೆ, ರೈತರ ಮನವೊಲಿಸುವಲ್ಲಿ ಈ ಸರ್ಕಾರದ ನಾಯಕತ್ವ ಹೊತ್ತವರ ಅದ್ಭುತ ಸಂವಹನ ಶಕ್ತಿ ಸೋತದ್ದೆಲ್ಲಿ ಅಂತ ಅರ್ಥವಾಗುವುದಿಲ್ಲ. ಇಡೀ ಚಳವಳಿ ಒಂದಷ್ಟು ದಲ್ಲಾಳಿಗಳ ಮತ್ತು ಶ್ರೀಮಂತ ರೈತರ ಹುನ್ನಾರ ಎನ್ನುವ ಸರ್ಕಾರದ ವಾದದಲ್ಲಿ ಹುರುಳಿದೆ ಅಂತಲೂ ಅನ್ನಿಸುವುದಿಲ್ಲ.

ಈ ಚಳವಳಿಯು ದೇಶದ ಮುಂದಿರಿಸಿದ್ದು ಕೃಷಿ ಕ್ಷೇತ್ರದ ಆಗುಹೋಗುಗಳ ವಿಚಾರಕ್ಕಿಂತ ಹೆಚ್ಚಾಗಿ ಈ ಸರ್ಕಾರದ ವಿಶ್ವಾಸಾರ್ಹತೆಯ ಪ್ರಶ್ನೆಯನ್ನು. ತಾನು ನಡೆದದ್ದೇ ದಾರಿ ಎನ್ನುವ ಸರ್ಕಾರದ ಧೋರಣೆಯ ಹಿಂದಿನ ಅಪಾಯವನ್ನು. ದೇಶದ ಕೃಷಿ ಕ್ಷೇತ್ರವು ಉದ್ಯಮ ರಂಗದಂತಲ್ಲ. ಕೈಗಾರಿಕಾ ಸರಕೊಂದರ ಉತ್ಪಾದನೆಯ ವ್ಯವಹಾರವು ದೇಶದ ಉದ್ದಗಲಕ್ಕೂ ಒಂದೇ ರೀತಿಯಲ್ಲಿ ಇರುತ್ತದೆ. ಕೃಷಿ ಉತ್ಪನ್ನಗಳ ಉತ್ಪಾದನೆ ಮತ್ತು ವ್ಯವಹಾರ ಒಂದೊಂದು ಪ್ರದೇಶಕ್ಕೆ ಒಂದೊಂದು ರೀತಿಯದ್ದಾಗಿರುತ್ತದೆ. ಕೃಷಿಯ ಜತೆಗೆ ಗ್ರಾಮೀಣ ಬದುಕಿನ ಸಂಬಂಧದ ಸಂಕೀರ್ಣತೆ ಅಗಾಧವಾದದ್ದು. ಅದನ್ನು ಅಧಿಕಾರದ ಮೂಲಕ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಸರ್ಕಾರವು ಅವಲಂಬಿಸಿರುವ ಪರಿಣತರ ಯೋಚನೆಯ ವ್ಯಾಪ್ತಿಗೂ ಅದು ನಿಲುಕುವುದಿಲ್ಲ. ಆದುದರಿಂದ, ಕೃಷಿಯನ್ನು ಬಾಧಿಸುವ ಮಹತ್ವದ ಬದಲಾವಣೆಗಳನ್ನು ತರುವಾಗ ರೈತಾಪಿವರ್ಗದ ಜತೆ ಸಮಾಲೋಚನೆ ನಡೆಸಬೇಕಿತ್ತು, ಅವರ ಮನವೊಲಿಸಬೇಕಿತ್ತು. ಸರ್ಕಾರ ಅದನ್ನು ಮಾಡಲಿಲ್ಲ.

ಕೃಷಿಯು ಸಾಂವಿಧಾನಿಕವಾಗಿ ರಾಜ್ಯಗಳ ವ್ಯಾಪ್ತಿಗೆ ಸೇರಿದ್ದಾದರೂ ರಾಜ್ಯಗಳನ್ನೂ ಎಂದಿನಂತೆ ಕಡೆಗಣಿಸಲಾಯಿತು. ದಶಕಗಳ ಹಿಂದೆ ನಡೆದ ಕೈಗಾರಿಕಾ ರಂಗದ ಉದಾರೀಕರಣವು ಸಂಸತ್ತನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ನಡೆದ ವಿದ್ಯಮಾನ. ಆದರೆ ಕೃಷಿರಂಗಕ್ಕೆ ಅದನ್ನು ವಿಸ್ತರಿಸುವಾಗ ಈ ಸರ್ಕಾರವು ಮೊದಲಿಗೆ ಸುಗ್ರೀವಾಜ್ಞೆಯ ಹಾದಿ ಹಿಡಿಯಿತು.

ಕೊರೊನಾ ಬಾಧೆಯಿಂದ ಇಡೀ ದೇಶವೇ ಗರಬಡಿದ ಸ್ಥಿತಿಯಲ್ಲಿದ್ದಾಗ ಇದ್ದಕ್ಕಿದ್ದಂತೆಯೇ ಈ ಕಾನೂನುಗಳನ್ನು ತರಲಾಯಿತು. ಅಂತಹ ತರಾತುರಿಯ ಅಗತ್ಯವಾದರೂ ಏನಿತ್ತು ಎನ್ನುವ ಪ್ರಶ್ನೆಗೆ ಉತ್ತರವಿಲ್ಲ. ರಾಜ್ಯಗಳು ಲೆಕ್ಕಕ್ಕಿಲ್ಲ, ಸಂಸತ್ತು ಬೇಕಿಲ್ಲ, ಜನಾಭಿಪ್ರಾಯದ ಅಗತ್ಯವೇ ಇಲ್ಲ. ‘ನಮಗೆ ಎಲ್ಲವೂ ತಿಳಿದಿದೆ ಮತ್ತು ನಾವು ಮಾಡಿದ್ದನ್ನು ಎಲ್ಲರೂ ಒಪ್ಪಿಕೊಳ್ಳಬೇಕು’ ಎನ್ನುವ ವೈಖರಿಯನ್ನು ಸರ್ಕಾರ ಎಲ್ಲಾ ವಿಷಯಗಳಲ್ಲೂ ಅನುಸರಿಸುತ್ತಾ ಬಂದಿದೆ. ಹಾಗಾಗಿ, ಈ ಕಾನೂನುಗಳ ಉದ್ದೇಶವು ಸಹಜವಾಗಿಯೇ ಗುಮಾನಿಗೆ ಒಳಗಾಗಿದೆ.

ಕೈಗಾರಿಕಾ ರಂಗದಲ್ಲಿ ತಂದ ಆರ್ಥಿಕ ಉದಾರೀಕರಣದ ನೀತಿಯನ್ನು ಒಮ್ಮಿಂದೊಮ್ಮೆಲೆ ಕೃಷಿ ಕ್ಷೇತ್ರದ ಮೇಲೆ ಹೇರುವ ಮೂಲಕ ಕೃಷಿಯ ಎಲ್ಲಾ ಸಮಸ್ಯೆಗಳು ಪರಿಹಾರವಾಗುತ್ತವೆ, ಎರಡನೆಯ ಹಸಿರುಕ್ರಾಂತಿಯಾಗಿ ಬಿಡುತ್ತದೆ ಎನ್ನುವ ತಾಂತ್ರಿಕ- ವ್ಯಾವಹಾರಿಕ (techno-managerial) ತರ್ಕವನ್ನು ರೈತರು ಪ್ರಶ್ನಿಸುತ್ತಿದ್ದಾರೆ. ‘ನಮ್ಮ ಹಿತಾಸಕ್ತಿ ಏನು ಅಂತ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಹೇಗೆ ನಿರ್ಣಯಿಸಿದ್ದೀರಿ’ ಅಂತ ಕೇಳುತ್ತಿದ್ದಾರೆ. ಸರ್ಕಾರ ಮತ್ತು ಸರ್ಕಾರಿ ಪ್ರಾಯೋಜಿತ ಪರಿಣತರಿಗೆ ಎಲ್ಲವೂ ತಿಳಿದಿದೆ ಎನ್ನುವ ವ್ಯವಸ್ಥೆಯ ಅಹಂ ಅನ್ನು ಅಲುಗಾಡಿಸುತ್ತಿದ್ದಾರೆ. ಹಾಗಾಗಿ ರೈತರು ಪ್ರತಿಭಟಿಸುತ್ತಿರುವುದು ಮೂರು ಕಾನೂನುಗಳ ವಿರುದ್ಧ ಮಾತ್ರವಲ್ಲ. ಅವರು ಈ ಸರ್ಕಾರ ಅನುಸರಿಸುತ್ತಿರುವ ಅಪಾಯಕಾರಿ ಆಡಳಿತದ ಮಾದರಿಯ ವಿರುದ್ಧ ಧ್ವನಿಯೆತ್ತಿದ್ದಾರೆ. ಇದನ್ನು ಪ್ರಶ್ನಿಸಬೇಕಿದ್ದವರು ಹೊದ್ದು ಮಲಗಿರುವ ಹೊತ್ತಿನಲ್ಲಿ ರೈತರು ಹೊಸ ನೊಗವೊಂದಕ್ಕೆ ಹೆಗಲು ನೀಡಿದಂತೆ ಕಾಣುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.