ಶುಕ್ರವಾರ, 27 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅನುಸಂಧಾನ: ತಪ್ಪಿ ನಡೆದರೆ ಮೆಚ್ಚನಾ ಮತದಾರನು!

ಇತಿಹಾಸದಿಂದ ಪಾಠ ಕಲಿಯಬೇಕು, ಆದರೆ ರಾಜಕಾರಣಿಗಳು ಪಾಠ ಕಲಿತಿದ್ದು ಕಡಿಮೆ
Published : 27 ಸೆಪ್ಟೆಂಬರ್ 2024, 20:45 IST
Last Updated : 27 ಸೆಪ್ಟೆಂಬರ್ 2024, 20:45 IST
ಫಾಲೋ ಮಾಡಿ
Comments

ಕೆಂಗಲ್ ಹನುಮಂತಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಟಿ.ಸಿದ್ದಲಿಂಗಯ್ಯ ಅಂತ ಒಬ್ಬರು ಸಚಿವರಿದ್ದರು. ಮೈಸೂರು ಭಾಗದವರಾದ ಅವರು ಅಪ್ಪಟ ಗಾಂಧಿವಾದಿ. ಮದ್ದೂರು ಶಿವಪುರಧ್ವಜ ಸತ್ಯಾಗ್ರಹ, ವಿದುರಾಶ್ವತ್ಥದಲ್ಲಿನ ಕಾಂಗ್ರೆಸ್ ಕಾರ್ಯಕರ್ತರ ಮೇಲಿನ ಗೋಲಿಬಾರ್ ವಿರೋಧಿ ಚಳವಳಿ, ಕ್ವಿಟ್ ಇಂಡಿಯಾ ಚಳವಳಿ, ಜವಾಬ್ದಾರಿಯುತ ಸರ್ಕಾರಕ್ಕಾಗಿ ನಡೆದ ಹೋರಾಟ, ಮೈಸೂರು ಚಲೋ ಚಳವಳಿ, ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗಿಯಾಗಿದ್ದ ಅವರು ಮೈಸೂರು ಭಾಗದ ಪ್ರಭಾವಿ ಜನನಾಯಕರಾಗಿದ್ದರು. ಸ್ವಾತಂತ್ರ್ಯಾನಂತರ ಮೈಸೂರು ರಾಜ್ಯದ ಅಧಿಕಾರ ಸೂತ್ರ ಹಿಡಿದ ಕೆ.ಸಿ.ರೆಡ್ಡಿ ಮತ್ತು ಕೆಂಗಲ್ ಹನುಮಂತಯ್ಯ ನೇತೃತ್ವದ ಸಚಿವ ಸಂಪುಟಗಳಲ್ಲಿ ಸಹಜವಾಗಿಯೇ ಸಚಿವ ಸ್ಥಾನ ಗಳಿಸಿದ್ದರು.

ಕೆಂಗಲ್ ಹನುಮಂತಯ್ಯ ನೇತೃತ್ವದ ಸಚಿವ ಸಂಪುಟ ಅಸ್ತಿತ್ವಕ್ಕೆ ಬಂದ ಕೆಲವೇ ತಿಂಗಳಿನಲ್ಲಿ, ಕೈಗಾರಿಕೆ ಮತ್ತು ವಿದ್ಯುತ್ ಖಾತೆ ಸಚಿವರಾಗಿದ್ದ ಸಿದ್ದಲಿಂಗಯ್ಯ ಅವರ ಮೇಲೆ ಸ್ವಜನಪಕ್ಷಪಾತದ ಆರೋಪ ಕೇಳಿಬಂತು. ಆರೋಪ ಮಾಡಿದವರು ಕಾಂಗ್ರೆಸ್ ಶಾಸಕರೇ ಆಗಿದ್ದ ನಾಗಯ್ಯ ರೆಡ್ಡಿ ಅವರು. ವಿದ್ಯುತ್ ಇಲಾಖೆಗೆ ತುರ್ತಾಗಿ ಅಗತ್ಯವಾಗಿದ್ದ 176 ಟನ್ ತಾಮ್ರದ ತಂತಿಗಳನ್ನು ಪುಣೆಯ ದೇಹು ರಸ್ತೆಯ ಮಿಲಿಟರಿ ಡಿಪೊದಿಂದ ಬೆಂಗಳೂರಿಗೆ ಸಾಗಿಸುವ ಗುತ್ತಿಗೆಯನ್ನು ಸಚಿವರು ತಮ್ಮ ಸಹೋದರ ಸಿದ್ಧಬಸಪ್ಪ ಅವರು ಪಾಲುದಾರರಾಗಿರುವ ಶ್ರೀ ಶಂಕರ್ ಆ್ಯಂಡ್ ಕಂಪನಿಗೆ ದೊರಕಿಸಿಕೊಟ್ಟಿದ್ದಾರೆ ಎಂಬುದು ನಾಗಯ್ಯ ರೆಡ್ಡಿ ಅವರ ಆರೋಪ. ತಾಮ್ರದ ತಂತಿ ಸಾಗಾಣಿಕೆಗೆ ಮುಂಬೈನ ವಾಲಿ ಆ್ಯಂಡ್ ಕಂಪನಿ ಟೆಂಡರ್ ಅರ್ಜಿ ಸಲ್ಲಿಸಿತ್ತು. ಒಂದು ಪೌಂಡ್ ತಾಮ್ರದ ತಂತಿ ಸಾಗಾಣಿಕೆಗೆ ವಾಲಿ ಆ್ಯಂಡ್ ಕಂಪನಿ ಮೂರು ಆಣೆ ದರ ನಮೂದಿಸಿತ್ತು. ಆದರೂ ಶ್ರೀ ಶಂಕರ್ ಆ್ಯಂಡ್‌ ಕಂಪನಿಗೆ ಒಂದು ಪೌಂಡ್ ತಂತಿ ಸಾಗಣೆಗೆ ಐದು ಆಣೆ ದರ ನಿಗದಿಪಡಿಸಿ ಗುತ್ತಿಗೆ ನೀಡಲಾಗಿದೆ. ಸರ್ಕಾರದ ಬೊಕ್ಕಸಕ್ಕೆ ನಷ್ಟವಾದರೂ ಪರವಾಗಿಲ್ಲ ತಮ್ಮ ಸಹೋದರ ಪಾಲುದಾರರಾಗಿರುವ ಕಂಪನಿಗೆ ಲಾಭ ಮಾಡಿಕೊಡಬೇಕು ಎನ್ನುವುದು ಸಚಿವರ ಉದ್ದೇಶ. ಸರಕು ಸಾಗಣೆ ಕ್ಷೇತ್ರದಲ್ಲಿ ಶ್ರೀ ಶಂಕರ್‌ ಕಂಪನಿಗೆ ಯಾವುದೇ ಅನುಭವ ಇಲ್ಲ. ಅಲ್ಲದೆ ಟೆಂಡರ್ ಪಡೆದುಕೊಂಡ ಕಂಪನಿ ಮುಂಬೈನ ನ್ಯೂ ಪಂಜಾಬ್ ವರ್ಕ್ಸ್‌ಗೆ ಉಪಗುತ್ತಿಗೆ ನೀಡಿದೆ. ಪಕ್ಷಪಾತವಿಲ್ಲದೆ, ರಾಗ ಅಥವಾ ದ್ವೇಷವಿಲ್ಲದೆ ತನಗೆ ವಹಿಸಿದ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ಮಾಡುವುದಾಗಿ ಪ್ರಮಾಣವಚನ ಸ್ವೀಕರಿಸಿದ ಸಚಿವ ಟಿ.ಸಿದ್ದಲಿಂಗಯ್ಯ ಅವರು ಸ್ವಜನಪಕ್ಷಪಾತ ಮಾಡಿರುವುದು ಸ್ಪಷ್ಟವಾಗಿರುವುದರಿಂದ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಖೆ ಎದುರಿಸಬೇಕು ಎಂದು ರೆಡ್ಡಿ ಒತ್ತಾಯಿಸಿದರು. ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಅಲ್ಲದೆ ಈ ವಿಚಾರ ವಿಧಾನಸಭೆಯಲ್ಲಿಯೂ ಪ್ರಸ್ತಾಪವಾಗಿ ಭಾರಿ ಕೋಲಾಹಲವನ್ನೇ ಎಬ್ಬಿಸಿತು.

1953ರ ಫೆಬ್ರುವರಿಯಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ ಸಿದ್ದಲಿಂಗಯ್ಯ ಅವರು ‘ತಾಮ್ರದ ತಂತಿ ಸಾಗಣೆ ಗುತ್ತಿಗೆ ನೀಡಿಕೆಯಲ್ಲಿ ನಾನು ಸ್ವಜನಪಕ್ಷಪಾತ ಮಾಡಿಲ್ಲ. ಶ್ರೀ ಶಂಕರ್ ಆ್ಯಂಡ್‌ ಕಂಪನಿಯ ಆರಂಭದ ಹಂತದಲ್ಲಿ ನನ್ನ ಸಹೋದರ ಸಿದ್ಧಬಸಪ್ಪ ಪಾಲುದಾರರಾಗಿದ್ದು ನಿಜ. ಆದರೆ ನಂತರ ಅವರು ಕಂಪನಿಯಿಂದ ಹೊರಬಂದಿದ್ದರು. ಗುತ್ತಿಗೆ ಒಪ್ಪಂದ ನಡೆಯುವ ಸಂದರ್ಭದಲ್ಲಿ ಅವರು ಆ ಕಂಪನಿಯಲ್ಲಿ ಇರಲಿಲ್ಲ. ತಂತಿ ಸಾಗಾಣಿಕೆ ಗುತ್ತಿಗೆಯನ್ನು ಶ್ರೀ ಶಂಕರ್ ಆ್ಯಂಡ್‌ ಕಂಪನಿಯ ಚೌಡಪ್ಪ ಅವರು ಪಡೆದಿದ್ದರು. ಇದು ವಾಸ್ತವ. ಆದರೂ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರು ಯಾವುದೇ ರೀತಿಯ ತನಿಖೆ ನಡೆಸಿದರೂ ಅದನ್ನು ಎದುರಿಸಲು ಸಿದ್ಧನಿದ್ದೇನೆ. ನಿಷ್ಪಕ್ಷಪಾತ ತನಿಖೆಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ತಕ್ಷಣವೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ’ ಎಂದು ಪ್ರಕಟಿಸಿದರು.

ನಂತರ ತನಿಖೆ ನಡೆದು, ಸಿದ್ದಲಿಂಗಯ್ಯ ಅವರದ್ದು ಯಾವುದೇ ತಪ್ಪಿಲ್ಲ ಎನ್ನುವುದು ಸಾಬೀತಾಯಿತು. ಆಗ ಕೆಂಗಲ್ ಹನುಮಂತಯ್ಯ ಅವರು ಸಿದ್ದಲಿಂಗಯ್ಯ ಅವರಿಗೆ ಮತ್ತೆ ಸಚಿವರಾಗಿ ಮುಂದುವರಿಯಿರಿ ಎಂದು ಒತ್ತಾಯಿಸಿದರೂ ಅವರು ಒಪ್ಪಲಿಲ್ಲ.

ಕೆಂಗಲ್ ಅವರ ಕಾಲದ ಈ ಕತೆ ಕೇಳಿದಾಗ ನಿಮಗೆ ಈಗಿನ ಸಿದ್ದರಾಮಯ್ಯ ಅವರ ಮುಡಾ ಪ್ರಕರಣ ನೆನಪಾಗುವುದು ಸಹಜ. ಅವರು ಸಿದ್ದಲಿಂಗಯ್ಯ, ಇವರು ಸಿದ್ದರಾಮಯ್ಯ. ಅವರು ಗಾಂಧಿವಾದಿ, ಇವರು ಸಮಾಜವಾದಿ. ಅವರು ಮೈಸೂರು ಪ್ರಾಂತ್ಯದವರು, ಇವರೂ ಮೈಸೂರಿನವರು. ಅವರು ಹೋರಾಟಗಾರರು, ಇವರೂ ಹೋರಾಟಗಾರರು. ಅವರು ಜನನಾಯಕರಾಗಿದ್ದರು, ಇವರೂ ಜನನಾಯಕರು. ಇಬ್ಬರ ಮೇಲೂ ಸ್ವಜನಪಕ್ಷಪಾತದ ಆರೋಪ. ಅವರೂ ತಮ್ಮ ಮೇಲಿನ ಆರೋಪವನ್ನು ಅಲ್ಲಗಳೆದಿದ್ದರು, ಇವರೂ ತಾನು ಯಾವುದೇ ತಪ್ಪು ಮಾಡಿಲ್ಲ ಎಂದು ಪ್ರಬಲವಾಗಿ ವಾದಿಸುತ್ತಿದ್ದಾರೆ. ಅವರೂ ತನಿಖೆ ಎದುರಿಸಿದರು, ಇವರೂ ತನಿಖೆ ಎದುರಿಸಲು ಸಿದ್ಧರಾಗಿ ನಿಂತಿದ್ದಾರೆ. ಆದರೆ ಅವರು ‘ಸತ್ಯ ವಾಕ್ಯಕೆ ತಪ್ಪಿ ನಡೆದರೆ ಮೆಚ್ಚನಾ ಪರಮಾತ್ಮನು’ ಎಂದು ಹುದ್ದೆಯಿಂದ ಕೆಳಗಿಳಿದರು. ಇವರು ‘ಯಾವುದೇ ತನಿಖೆಗೂ ಸಿದ್ಧ. ಆದರೆ ರಾಜೀನಾಮೆ ಪ್ರಶ್ನೆಯೇ ಇಲ್ಲ’ ಎಂದು ಘೋಷಿಸಿದ್ದಾರೆ.

ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ತನಿಖೆ ನಡೆಸಲು ರಾಜ್ಯಪಾಲರು ಒಪ್ಪಿಗೆ ಸೂಚಿಸಿದ್ದಾರೆ. ಹೈಕೋರ್ಟ್ ಕೂಡ ಅನುಮತಿ ನೀಡಿದೆ. ಲೋಕಾಯುಕ್ತ ತನಿಖೆ ನಡೆಯಲಿದೆ. ಸಿದ್ದರಾಮಯ್ಯ ಅವರೇ ಹೇಳಿಕೊಂಡ ಹಾಗೆ ಅವರ 40 ವರ್ಷದ ರಾಜಕೀಯ ಜೀವನದಲ್ಲಿ ಒಂದೂ ಕಪ್ಪುಚುಕ್ಕಿ ಇಲ್ಲ. 2013ರಿಂದ 2018ರ ಅವಧಿಗೆ ಮುಖ್ಯಮಂತ್ರಿ ಆಗಿದ್ದಾಗ ಅವರು ಯಾವುದೇ ಹಗರಣದಲ್ಲಿ . ತಮ್ಮ ರಾಜಕೀಯ ಜೀವನದ ಕೊನೆಯ ಇನಿಂಗ್ಸ್‌ನಲ್ಲಿರುವ ಅವರು ಈಗ ಬಟ್ಟೆ ಕೊಳೆ ಮಾಡಿಕೊಳ್ಳುವುದು ತರವಲ್ಲ.

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದು ರಾಜಕೀಯವಾಗಿ ಸರಿಯಾದ ಕ್ರಮವಲ್ಲ ಎಂದು ಸಿದ್ದರಾಮಯ್ಯ ಅಂದುಕೊಂಡಿರಬಹುದು. ತಪ್ಪನ್ನು ಒಪ್ಪಿಕೊಂಡಂತೆ ಆಗುತ್ತದೆ ಎಂದೂ ಅಂದಾಜಿಸಿರ
ಬಹುದು. ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಒತ್ತಡಕ್ಕೆ ಮಣಿದೆ ಎಂಬ ಭಾವ ಬರಬಹುದು ಎಂದು ಅವರಿಗೆ ಅನ್ನಿಸಿರಬಹುದು. ಹೈಕೋರ್ಟ್ ತೀರ್ಪು ಏಕಪಕ್ಷೀಯವಾಗಿದೆ ಎಂದು ಸಹ ಅವರು
ಅಂದುಕೊಂಡಿರಬಹುದು. ಮೇಲ್ಮನವಿ ಸಲ್ಲಿಸಲು ಎಲ್ಲ ಹಕ್ಕುಗಳೂ ಅವರಿಗೆ ಇರಬಹುದು. ಆದರೂ ಬಿಡುವುದರಲ್ಲಿ ಇರುವ ಗೌರವ ಅಂಟಿಕೊಳ್ಳುವುದರಲ್ಲಿ ಇಲ್ಲ ಎಂಬುದೂ ಅವರ ಅರಿವಿನಲ್ಲಿರಬೇಕು.

‘ಇದು ವಿಧಾನಸೌಧವೋ ವಿಷಾದಸೌಧವೋ’ ಎಂದು ಮುಖ್ಯಮಂತ್ರಿಯಾಗಿದ್ದ ಎಸ್.ನಿಜಲಿಂಗಪ್ಪ ಒಮ್ಮೆ ಪ್ರಶ್ನೆ ಮಾಡಿದ್ದರು. ವಿಧಾನಸೌಧಕ್ಕೆ ಶಂಕುಸ್ಥಾಪನೆ ಮಾಡಿದ ಕಾಲದಿಂದಲೂ ಒಂದಲ್ಲ ಒಂದು ವಿವಾದಕ್ಕೆ ಇದು ಕೇಂದ್ರಬಿಂದು ಆಗುತ್ತಲೇ ಇದೆ. ಮುಖ್ಯಮಂತ್ರಿ ಹುದ್ದೆಗೆ ಏರಿದ ಬಹುತೇಕ ಮಂದಿ ಏನಾದರೊಂದು ಕಾರಣಕ್ಕೆ ಸಂಕಷ್ಟಕ್ಕೆ ಸಿಲುಕಿದವರೇ ಆಗಿದ್ದಾರೆ. ವಿಧಾನಸೌಧವನ್ನು ಕಟ್ಟಿದ ಕೆಂಗಲ್ ಹನುಮಂತಯ್ಯ ಅವರೂ ಭ್ರಷ್ಟಾಚಾರದ ಆರೋಪಕ್ಕೆ ಗುರಿಯಾದರು. ಹಿಂದುಳಿದ ವರ್ಗಗಳ ಚಾಂಪಿಯನ್ ಎಂದು ಕರೆಸಿಕೊಂಡ, ರಾಜ್ಯದಲ್ಲಿ ಸುಧಾರಣೆಯ ಪರ್ವವನ್ನು ಆರಂಭಿಸಿದ, ಸಾಮಾಜಿಕ ಪರಿವರ್ತನೆಗೆ ನಾಂದಿ ಹಾಡಿದ ದೇವರಾಜ ಅರಸು ಅವರೂ ಆರೋಪಗಳಿಂದ ಮುಕ್ತರಾಗಿರಲಿಲ್ಲ. ಭ್ರಷ್ಟಾಚಾರವನ್ನು ಸಾಂಸ್ಥೀಕರಿಸಿದರು ಎಂಬ ಆರೋಪದ ಗುಮ್ಮ ಅವರ ಹೆಗಲೇರಿತು.

ಮುಂದೆ ಅಧಿಕಾರಕ್ಕೆ ಬಂದ ಗುಂಡೂರಾವ್‌, ರಾಮಕೃಷ್ಣ ಹೆಗಡೆ, ದೇವೇಗೌಡ, ಬಂಗಾರಪ್ಪ, ಕುಮಾರಸ್ವಾಮಿ, ಯಡಿಯೂರಪ್ಪ ಎಲ್ಲರೂ ಒಂದಲ್ಲ ಒಂದು ಹಗರಣದಲ್ಲಿ ಸಿಲುಕಿದರು. ಸತ್ಯವಾಕ್ಯಕೆ ತಪ್ಪಿ ನಡೆಯುವುದೇ ಪರಿಪಾಟ ಎನ್ನುವಂತಾಯಿತು. ಈಗ ಅದು ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನೆಯ ಬಾಗಿಲಿಗೂ ಬಂದು ನಿಂತಿದೆ. ಸತ್ಯ ವಾಕ್ಯಕೆ ತಪ್ಪಿ ನಡೆದ ನಾಯಕರನ್ನು ಮತದಾರರು ತಕ್ಷಣಕ್ಕೆ ಕ್ಷಮಿಸಿಲ್ಲ ಎನ್ನುವುದು ಇತಿಹಾಸ ಕಲಿಸಿದ ಪಾಠ. ಆದರೆ ನಮ್ಮ ನಾಯಕರು ಇತಿಹಾಸದಿಂದ ಪಾಠ ಕಲಿತಿದ್ದು ಕಡಿಮೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT