ಇಲ್ಲಿವರೆಗೆ...

ತಾಜಾ ಮೀನು ಫ್ರೈ ತಿನ್ನೊ ಆಸೆ, ತೆಂಗಿನ ಗಾಣದೆಣ್ಣೆ ಮೇಲಿನ ಮೋಹ ನನ್ನನ್ನು ಸಂಕಷ್ಟಕ್ಕೆ ತಂದಿಟ್ಟಿತು. ಬೆಂಕಿ ಮುಂದೆ ಕುಂತು ಫ್ರೈ ಮಾಡಿದ್ದು, ಅತಿ ಭಾರ ಎತ್ತಿದ ಪರಿಣಾಮ ನನ್ನ ಬಲಗೈಗೆ ಬಾವು ಬಂದಿತು. ಎಷ್ಟೆಂದರೆ ನನ್ನ ಜೀವಮಾನ ಪೂರ್ತಿ ಅದರಲ್ಲೇ ಕಳೆಯುವಂಥ ಶಾಶ್ವತ ಬಾವು ಅದಾಗಿತ್ತು. ಮುಂದೆ ಓದಿ.

ಸ್ತನ ಕ್ಯಾನ್ಸರ್ನ ಪ್ರಯಾಣದಲ್ಲಿ ಸಾಕಷ್ಟು ಪಾಠ ಕಲಿತೆ. ನಾನು ಪತ್ರಕರ್ತೆಯಾಗಿರುವುದರಿಂದ ಕ್ಯಾನ್ಸರ್ನ ಅನುಭವಗಳ ಲೇಖನ ಬರೆದೆ. ಕೆಲವು ಲೇಖನಗಳಲ್ಲಿ ನನ್ನ ಹೆಸರಿನ ಜೊತೆ ಕೊನೆಯಲ್ಲಿ ಮೊಬೈಲ್ ಫೋನ್ ನಂಬರ್ ಹಾಕಿದ್ದರಿಂದ ರಾಜ್ಯದ ವಿವಿಧೆಡೆಗಳಿಂದ ಕರೆಗಳು ಬರಲು ಶುರುವಿಟ್ಟವು. ನಾನು ಕ್ಯಾನ್ಸರ್ ಚಿಕಿತ್ಸೆ ಜೊತೆಗೆ ಕ್ಯಾನ್ಸರ್ ನಿವಾರಣಾ ಗಾಯತ್ರಿ ಮುದ್ರೆಗಳನ್ನು, ಯೋಗ, ಧ್ಯಾನವನ್ನು ಅನುಸರಿಸಿ ಅದರಿಂದ ಹೇಗೆಲ್ಲ ಪ್ರಯೋಜನ ಪಡೆದುಕೊಂಡೆ ಎಂಬುದನ್ನು ಉಲ್ಲೇಖಿಸಿದ್ದರಿಂದ ಸಹಜವಾಗಿ ಎಲ್ಲರಿಗೂ ಕುತೂಹಲ. ಅದನ್ನು ವಿಸ್ತೃತವಾಗಿ ತಿಳಿದುಕೊಳ್ಳುವ ಹಂಬಲದೊಂದಿಗೆ ಬರುವ ಕರೆಗಳೇ ಹೆಚ್ಚಿದ್ದವು. ಅವರಲ್ಲಿ ಕ್ಯಾನ್ಸರ್ಗೆ ಚಿಕಿತ್ಸೆ ಪಡೆದರೂ ಗುಣಮುಖರಾಗದೇ ಇದ್ದವರು, ಚಿಕಿತ್ಸೆ ಪಡೆಯುತ್ತಿರುವವರೂ ಇದ್ದರು. ಕ್ಯಾನ್ಸರ್ ಪಾಸಿಟಿವ್ ಬಂದು, ಇನ್ನೇನು ಚಿಕಿತ್ಸೆಗೆ ಮುಂದಾಗಬೇಕು ಎಂಬ ಅದೆಷ್ಟೊ ರೋಗಿಗಳೊಂದಿಗೂ ನಾನು ಮಾತನಾಡಿದ್ದೇನೆ. ಹೀಗೆ ಮಾತನಾಡುತ್ತ ನಾನಿಂದು ಕ್ಯಾನ್ಸರ್ ರೋಗಿಗಳಿಗೆ ಆಪ್ತಸಮಾಲೋಚಕಿಯೂ ಆಗಿದ್ದೇನೆ ಎಂಬ ಹೆಮ್ಮೆಯಿದೆ. ಸಂತೃಪ್ತಿಯೂ ಇದೆ. ಕ್ಯಾನ್ಸರ್ ರೋಗಿಗಳಿಗೆ ಕ್ಯಾನ್ಸರ್ ಗೆದ್ದುಬಂದವರು ನೀಡುವ ಆಪ್ತಸಮಾಲೋಚನೆ ಟಾನಿಕ್ ಇದ್ದಂತೆ ಎಂಬುದನ್ನು ನಾನು ಮನಗಂಡಿದ್ದೇನೆ.

ಕಾರಣ ಇಷ್ಟೇ; ಕ್ಯಾನ್ಸರ್ಗೆ ನೀಡಲಾಗುವ ಚಿಕಿತ್ಸಾ ಕ್ರಮ ತುಂಬಾ ಕಠಿಣ. ಅಷ್ಟೇ ಸುದೀರ್ಘವಾದದ್ದು. ಸುದೀರ್ಘ ಚಿಕಿತ್ಸೆಗೆ ದೇಹವನ್ನು ಒಗ್ಗಿಸಿಕೊಳ್ಳಲು ಕ್ಯಾನ್ಸರ್ ರೋಗಿಗಳು ಮೊದಲು ಮಾನಸಿಕವಾಗಿ ಸಿದ್ಧರಾಗಬೇಕು. ಕ್ಯಾನ್ಸರ್ ರೋಗದಿಂದ ಬಳಲುವವರ ಸಂಖ್ಯೆ ಹೆಚ್ಚುತ್ತಿದ್ದರೆ ಅದಕ್ಕೆ ಸರಿಯಾಗಿ ಕ್ಯಾನ್ಸರ್ ಆಸ್ಪತ್ರೆಗಳ ಸಂಖ್ಯೆಯೂ ಹೆಚ್ಚುತ್ತಿದೆ. ಅಲ್ಲಿ ಕ್ಯಾನ್ಸರ್ಗಷ್ಟೇ ಅಂದರೆ ರೋಗಿಯ ದೇಹಕ್ಕೆ ಮಾತ್ರ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ದೇಹಕ್ಕೆ ಚಿಕಿತ್ಸೆ ನೀಡುವುದಕ್ಕೂ ಮೊದಲು ರೋಗಿಯ ಮನಸ್ಸಿಗೊಂದಿಷ್ಟು ಆಪ್ತ ಸಲಹೆಗಳ ಅಗತ್ಯವಿರುತ್ತದೆ. ಕೆಲವು ಆಸ್ಪತ್ರೆಗಳಲ್ಲಿ ಕ್ಯಾನ್ಸರ್ ಸಂತ್ರಸ್ತರನ್ನೇ ಆಪ್ತಸಮಾಲೋಚಕರನ್ನಾಗಿ ನೇಮಿಸಿಕೊಂಡಿರುವುದು ಖುಷಿ ಸಂಗತಿ. ಆದರೆ ಹೆಚ್ಚಿನ ಆಸ್ಪತ್ರೆಗಳಲ್ಲಿ ಇಂಥ ಆಪ್ತಸಮಾಲೋಚಕರು ಇರುವುದಿಲ್ಲ. ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆಗೆ ಮೊದಲು ನಡೆಸುವ ಆಪ್ತ ಸಮಾಲೋಚನೆಯಿಂದ ಸಾಕಷ್ಟು ಉಪಯೋಗವಾಗಲಿದೆ. ಕ್ಯಾನ್ಸರ್ ಎಂಬ ಮೂರಕ್ಷರದ ಭಯದಿಂದ ಹೊರಬರಲು ಸಾಧ್ಯ. ಆತ್ಮವಿಶ್ವಾಸ, ಮನೋಸ್ಥೈರ್ಯವೂ ಮುಖ್ಯ. ಧೈರ್ಯವಾಗಿದ್ದಲ್ಲಿ ಕ್ಯಾನ್ಸರ್ ಅನ್ನು ಅರ್ಧ ಗೆದ್ದಂತೆ.

ಆ ನಿಟ್ಟಿನಲ್ಲಿ ನಾನು ಕ್ಯಾನ್ಸರ್ ರೋಗಿಗಳಲ್ಲಿ ಧೈರ್ಯವನ್ನು ಬಿತ್ತಿದೆ. ‘ನೀವು ಧೈರ್ಯವಾಗಿದ್ದಲ್ಲಿ ನಿಮ್ಮನ್ನು ಈ ಕ್ಯಾನ್ಸರ್ ಏನೂ ಮಾಡಲು ಸಾಧ್ಯವಿಲ್ಲ. ಯಾವುದಕ್ಕೂ ಧೈರ್ಯವಾಗಿರಿ. ಕ್ಯಾನ್ಸರ್ ಬಂದಾಗಿದೆ. ಅದರಿಂದ ಹೊರಬರಲು ಮೊದಲು ಅದನ್ನು ಒಪ್ಪಿಕೊಳ್ಳಬೇಕು. ಕ್ಯಾನ್ಸರ್ ಪಾಸಿಟಿವ್ ರಿಪೋರ್ಟ್ ಅನ್ನು ಪಾಸಿಟಿವ್ ಆಗಿ ಸ್ವೀಕರಿಸಬೇಕು. ಕ್ಯಾನ್ಸರ್ ನನ್ನನ್ನು ಏನೂ ಮಾಡಲು ಸಾಧ್ಯವಿಲ್ಲ. ಅದನ್ನು ಗೆದ್ದೇ ಗೆಲ್ಲುವೆ ಎಂಬ ಬಲವಾದ ವಿಶ್ವಾಸ ನಮ್ಮಲ್ಲಿ ಮೂಡಿದರೆ ಖಂಡಿತ ನೀವು ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಅರ್ಧ ಗೆದ್ದಂತೆ. ಮಾನಸಿಕವಾಗಿ ಇಷ್ಟರ ಮಟ್ಟಿಗೆ ಸಿದ್ಧರಾದರೆ ಉಳಿದಿದ್ದು ವೈದ್ಯರಿಗೆ ಬಿಟ್ಟರಾಯಿತು’ ಎಂದು ಮಾನಸಿಕವಾಗಿ ಗಟ್ಟಿಗೊಳಿಸಿದೆ. ಚಿಕಿತ್ಸೆಗೆ ಮೊದಲು ಕ್ಯಾನ್ಸರ್ ಎಲ್ಲೆಲ್ಲಿ ಹರಡಿದೆ ಎಂಬುದನ್ನು ತಿಳಿದುಕೊಳ್ಳಲು ಮಾಡುವ ಪೆಟ್ ಸ್ಕ್ಯಾನ್ ಹೇಗಿರಲಿದೆ ಎಂಬುದರ ಅರಿವನ್ನೂ ನಾನು ಕೌನ್ಸೆಲಿಂಗ್ನಲ್ಲಿ ಹೇಳುತ್ತೇನೆ.

ಇದು ಕ್ಯಾನ್ಸರ್ ಚಿಕಿತ್ಸೆಗೆ ಮೊದಲಿನ ಮಾತಾದರೆ, ಚಿಕಿತ್ಸೆ ಆರಂಭವಾದ ಮೇಲೆ, ಕಿಮೊಥೆರಪಿಯಿಂದಾಗುವ ಸಾಲುಸಾಲು ಅಡ್ಡಪರಿಣಾಮಗಳ ಅರಿವು ಮೂಡಿಸುವುದು ಅಗತ್ಯ. ಹೆಚ್ಚಿನವರು ಕೊರಗಿ ಸೊರಗುವುದು ಪ್ರೀತಿಯಿಂದ ಜತನ ಮಾಡಿದ ಕೂದಲು ಉದುರಿದಾಗ. ‘ಕಿಮೊಥೆರಪಿ ಜಾರಿಯಲ್ಲಿರುವವರೆಗೂ ಕೂದಲು ಉದುರುತ್ತದೆ. ಅದು ಉದುರಿಕೊಂಡು ಹೋಗಲಿ ಬಿಡಿ. ಮತ್ತೆ ದಟ್ಟವಾಗಿ ಬರಲಿದೆ. ಈಗ ನನ್ನನ್ನೇ ನೋಡಿ...’ ಎಂಬ ಮಾತೂ ರೋಗಿಗಳ ಮೊಗದಲ್ಲಿ ವಿಶ್ವಾಸ ಮೂಡಿಸುತ್ತಿತ್ತು.

‘ಕಿಮೊ ಇಂಜೆಕ್ಷನ್ ಇನ್ನಿಲ್ಲವೆಂಬಷ್ಟು ನೋವು ನೀಡಬಹುದು. ಯಾತನೆ ನೀಡಬಹುದು. ಆದರೆ ಅದು ಒಂದು ವಾರದ ಮಟ್ಟಿಗಷ್ಟೆ. ನಂತರ ಮತ್ತೆ ನಾರ್ಮಲ್ ಲೈಫ್. ಅಷ್ಟು ದಿನ ಆ ಯಾತನೆ ಅನುಭವಿಸಲು ಮಾನಸಿಕವಾಗಿ ನೀವು ಸಜ್ಜಾದರೆ ಯಾತನೆಯ ಪ್ರಮಾಣ ಅರ್ಧದಷ್ಟು ಕಮ್ಮಿಯಾದಂತೆ. ಮೊದಲ ಕಿಮೊ ಹೊಸತೆನಿಸುವುದರಿಂದ ಸ್ವಲ್ಪ ಕಷ್ಟವೆನಿಸಬಹುದು. ಆದರೆ ಅದರ ಒಳಗುಟ್ಟು ಅರಿತ ಮೇಲೆ ಅದು ಯಾವ ಲೆಕ್ಕವೂ ಅಲ್ಲ ಬಿಡಿ. ಕಿಮೊ ಇಂಜೆಕ್ಷನ್ ತೆಗೆದುಕೊಂಡಾಗ ಮನಸ್ಸು ವಿಚಲಿತವಾಗುವುದು ಸಹಜ. ಅದಕ್ಕಾಗಿ ಭಯಪಡಬೇಡಿ. ಕೊರಗಿ ಖಿನ್ನತೆಗೆ ಜಾರಬೇಡಿ. ಮನಸ್ಸನ್ನು ಬೇರೆಡೆಗೆ ಜಾರಿಸಿ. ಅದಕ್ಕಾಗಿ ಏನಾದರೂ ಓದಿ. ಸಿನಿಮಾ ನೋಡಿ. ಮೊಬೈಲ್ನಲ್ಲಿ, ಸೋಷಿಯಲ್ ಮಿಡಿಯಾದಲ್ಲಿ ಬ್ಯುಸಿಯಾಗಿ. ಧ್ಯಾನ ಮಾಡಿ. ಒಟ್ಟಿನಲ್ಲಿ ಕಿಮೊ ನೋವು, ಯಾತನೆಯಿಂದ ಮನಸ್ಸನ್ನು ದೂರವಿಡಲು ಪ್ರಯತ್ನಿಸಿ. ಇದು ಪ್ರತಿ ಕಿಮೊ ಪಡೆದ ನಂತರ ಒಂದೈದು ದಿನಗಳಷ್ಟೆ. ನಂತರ ಮತ್ತೆ ಮೊದಲಿನಂತಾಗುತ್ತೀರಿ’ ಎಂದಾಗ, ರೋಗಿಗೆ ಕಿಮೊಥೆರಪಿ ಎಂದರೇನು ಎಂಬುದು ಮನದಟ್ಟಾಗುತ್ತಿತ್ತು.

ರೆಡಿಯೋಥೆರಪಿಗೂ ಅಂಜುವವರು ಹಲವರಿದ್ದರು ಎಂಬ ಸಂಗತಿ ಆಪ್ತಸಮಾಲೋಚನೆಯಲ್ಲಿ ಗೊತ್ತಾಗಿತ್ತು. ಅದು ಸಹಜ. ಗೊತ್ತಿಲ್ಲದ ಸಂಗತಿ ಕುರಿತು ಕುತೂಹಲ ಸಹಜವೆ. ರೆಡಿಯೋಥೆರಪಿ ಕರೆಂಟ್ ಶಾಕ್ ಕೊಡೊದಾ? ಅದರಿಂದ ನೋವಾಗಲ್ವಾ? ಎಂದು ಪ್ರಶ್ನಿಸಿದವರು ಸಾಕಷ್ಟು ಮಂದಿಯಿದ್ದರು. ’ಶಾಕೂ ಇಲ್ಲ; ನೋವು ಇಲ್ಲ. ರೆಡಿಯೋಥೆರಪಿ ಅಂದರೆ ವಿಕಿರಣ ಹಾಯಿಸೋದಷ್ಟೆ. ಅದು ನಮ್ಮ ದೇಹವನ್ನು ಹಾಯುವಾಗ ನಮಗೇನು ಗೊತ್ತಾಗದು. ಅದರ ಪಾಡಿಗೆ ಅದು ನಡೆಯುತ್ತಿದ್ದರೆ, ನಮ್ಮ ಪಾಡಿಗೆ ನಾವು ಸುಮ್ಮನೆ ಮಲಗಿದ್ದರಾಯಿತು’ ಎಂದಾಗ, ಹೌದಾ, ಅಷ್ಟೇನಾ ಎಂಬ ಮಾತು, ರೋಗಿಯಲ್ಲಿ ಮೂಡಿದ್ದ ರೆಡಿಯೋಥೆರಪಿ ಬಗೆಗಿರುವ ತಪ್ಪುಕಲ್ಪನೆ, ಭಯವನ್ನು ದೂರಮಾಡಿಸಿದೆ ಎಂದೇ ಅರ್ಥ.

ನನ್ನ ಆಪ್ತಸಮಾಲೋಚನೆ ಇಷ್ಟಕ್ಕೆ ನಿಲ್ಲದೆ, ಕ್ಯಾನ್ಸರ್ ಚಿಕಿತ್ಸೆ ಮುಗಿದ ನಂತರ ಹೇಗೆ ಎಚ್ಚರ ವಹಿಸಬೇಕು ಎಂಬುದನ್ನೂ ಹೇಳುತ್ತೇನೆ.

ಕ್ಯಾನ್ಸರ್ ನಂತರ ಜೀವನಕ್ರಮವನ್ನುಆಹಾರಕ್ರಮವನ್ನು ಬದಲಿಸಿಕೊಳ್ಳುವುದು ಅಗತ್ಯ. ಯೋಗ, ಧ್ಯಾನ, ಪ್ರಾಣಾಯಾಮವನ್ನು ಜೀವನದ ಭಾಗವಾಗಿಸಿಕೊಂಡರೆ ಕ್ಯಾನ್ಸರ್ ಮರುಕಳಿಸದಂತೆ ನೋಡಿಕೊಳ್ಳಬಹುದು. ಆದರೆ ವೈದ್ಯರ ಸಲಹೆಯಂತೆ ನಿಯಮಿತ ತಪಾಸಣೆ ಮಾಡಿಸಿಕೊಳ್ಳಬೇಕು. ಇಷ್ಟು ಮಾಡಿದರೆ ಸಹಜ ಜೀವನ ನಮ್ಮದಾಗಿಸಿಕೊಳ್ಳಬಹುದು. ಈಗ ನಾನೀದ್ದೇನೆ ನೋಡಿ ಹಾಗೆ... ಎಂದಾಗ ಎದುರಿದ್ದ ರೋಗಿ ಮನಸ್ಸು ನಿರಾಳವಾಗಿ ಅವರಲ್ಲಿ ಭರವಸೆ ಮೂಡಿದ್ದನ್ನೂ ಕಂಡಿದ್ದೇನೆ.

ನಾನು ಚಿಕಿತ್ಸೆ ಪಡೆದ ಎಚ್ಸಿಜಿ ಎನ್ಎಂಆರ್ ಆಸ್ಪತ್ರೆಯಲ್ಲೂ ಆಗಾಗ ನಡೆಸುವ ಸಂವಾದ/ಚರ್ಚೆಗಳ ಮೂಲಕ ರೋಗಿಗಳಿಗೆ ಅರಿವು ಮೂಡಿಸಿದೆ. ಫೇಸ್ಬುಕ್ ಲೈವ್, ಸ್ತನ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮಗಳಲ್ಲೂ ನಾನು ಪಾಲ್ಗೊಳ್ಳುತ್ತಿದ್ದೇನೆ. ರೆಡಿಯೊ ಮಿರ್ಚಿ, ರೆಡ್ ಎಫ್.ಎಂ ಕೂಡ ನಾನು ಕ್ಯಾನ್ಸರ್ ಹೇಗೆ ಗೆದ್ದು ಬಂದೆ ಎಂಬ ಅನುಭವವನ್ನು ಬಿತ್ತರಿಸಿದವು.

ಕ್ಯಾನ್ಸರ್ ರೋಗಿಗಳ ಮನದಲ್ಲಿ ಬೇರು ಬಿಟ್ಟ ಭಯವನ್ನು ಬುಡಸಮೇತ ಕಿತ್ತು ಹಾಕಿದಲ್ಲಿ ರೋಗ ಅರ್ಧದಷ್ಟು ಕಮ್ಮಿಯಾದಂತೆ. ಭಯ ಬಿಟ್ಟು ಭರವಸೆಯೊಂದಿಗೆ, ಅದನ್ನು ಒಪ್ಪಿಕೊಂಡು, ಸಕಾರಾತ್ಮಕವಾಗಿ ಮುಂದುವರಿದಲ್ಲಿ ಕ್ಯಾನ್ಸರ್ ರೋಗದಿಂದ ಗುಣವಾಗುವುದು ಯಾವ ಲೆಕ್ಕವೂ ಅಲ್ಲ.

ಆದರೂ ಹೆಚ್ಚಿನ ಕ್ಯಾನ್ಸರ್ ರೋಗಿಗಳು ತಮಗಾದ ಸಮಸ್ಯೆಯನ್ನು ಮುಚ್ಚಿಡುತ್ತಿರುವುದು ಯಾಕೆಂದು ಗೊತ್ತಿಲ್ಲ. ಕ್ಯಾನ್ಸರ್ ಇದೆ ಎಂಬುದು ಕೀಳರಿಮೆಯಾಗಿ ಕಾಡುವುದೇ ಎಂಬ ಪ್ರಶ್ನೆ ನನ್ನದು. ಆದರೆ ಹೀಗೆ ಮುಚ್ಚಿಡುವ ಬದಲು ಮುಕ್ತ ಮನಸ್ಸಿನಿಂದ ಹಂಚಿಕೊಂಡಲ್ಲಿ ಮನಸ್ಸು ನಿಜಕ್ಕೂ ಹಗುರವಾಗುತ್ತದೆ. ಅದನ್ನು ಗೆದ್ದು ಬಂದ ಬಗೆಯನ್ನು ಇನ್ನೊಬ್ಬರಲ್ಲಿ ಹೇಳಿಕೊಳ್ಳುವುದರಿಂದ ನಮ್ಮೊಳಗಿನ ಆತ್ಮವಿಶ್ವಾಸ ಹೆಚ್ಚುವುದು ಸುಳ್ಳಲ್ಲ. ಮತ್ತೊಬ್ಬ ಕ್ಯಾನ್ಸರ್ ರೋಗಿಗೆ ಸ್ಫೂರ್ತಿಯಾಗಬಹುದು.

ಕ್ಯಾನ್ಸರ್: ಆಹಾರ ಕ್ರಮ ಹೀಗಿರಲಿ

ಜೀವನ ಕ್ರಮ, ಯೋಗ, ನಿರ್ದಿಷ್ಟ ಆಹಾರ ಕ್ರಮವನ್ನು ನಮ್ಮ ನಿತ್ಯ ಜೀವನದಲ್ಲಿ ಬಳಸಿಕೊಂಡಲ್ಲಿ ಕ್ಯಾನ್ಸರ್ ರೋಗದಿಂದ ದೂರವಿರಬಹುದು. ಕ್ಯಾನ್ಸರ್ ಚಿಕಿತ್ಸೆ ನಂತರ ನಾನು ನನ್ನ ಜೀವನ ಕ್ರಮವನ್ನು ಬದಲಾಯಿಸಿಕೊಳ್ಳುವುದರೊಂದಿಗೆ ಆಹಾರ ಕ್ರಮದಲ್ಲೂ ಬದಲಾವಣೆ ಮಾಡಿಕೊಂಡಿದ್ದೇನೆ. ಅವುಗಳಲ್ಲಿ ಲಿಂಬು, ಅಣಬೆ, ಅಗಸೆ ಬೀಜ, ಹಣ್ಣು, ಹಸಿ ತರಕಾರಿಗಳು, ಡ್ರೈಫ್ರುಟ್ಸ್ ಕೂಡ ಸೇರಿವೆ.

ಲಿಂಬು: ಎಲ್ಲ ಋತುಮಾನಗಳಲ್ಲಿ, ಎಲ್ಲೆಡೆ ಸಿಗುವ ಲಿಂಬು ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ಕುಂಠಿತಗೊಳಿಸಿ, ರೋಗ ಬರದಂತೆ ಕಾಯುವಲ್ಲಿ ಪ್ರಮುಖಪಾತ್ರ ವಹಿಸಲಿದೆ. ನಿತ್ಯ ಬೆಳಿಗ್ಗೆ ಬಿಸಿನೀರಿಗೆ ಒಂದು ಕಡಿ (ಭಾಗ)ಲಿಂಬೆ ರಸವನ್ನು ಸೇರಿಸಿ ಕುಡಿಯುವುದರಿಂದ ಹೆಚ್ಚಿನ ಉಪಯೋಗವಾಗಲಿದೆ. ಲಿಂಬು ರಸ ತೆಗೆದ ನಂತರ ಸಿಪ್ಪೆಯನ್ನು ಕಸದಬುಟ್ಟಿಗೆ ಹಾಕುವವರೇ ಹೆಚ್ಚು. ಆದರೆ ಲಿಂಬು ಸಿಪ್ಪೆ ಸೇವನೆ ಕೂಡ ಹೆಚ್ಚು ಪರಿಣಾಮಕಾರಿಯೆನಿಸಲಿದೆ.

ಅಣಬೆ: ಪ್ರತಿದಿನ ಒಂದು ಔನ್ಸ್ ನಷ್ಟು ಅಣಬೆ ಸೇವಿಸಿದರೆ ಸ್ತನ ಕ್ಯಾನ್ಸರ್ ಬರುವ ಸಾಧ್ಯತೆ ಶೇಕಡಾ 64 ರಷ್ಟು ಕಡಿಮೆಯಾಗುತ್ತದೆ ಎಂದು ಸಂಶೋಧನೆ ತಿಳಿಸಿದೆ. ಇಂತಹುದೇ ಇನ್ನೊಂದು ಅಧ್ಯಯನ, ಸ್ತನ ಕ್ಯಾನ್ಸರ್ ತಗುಲುವ ಸಾಧ್ಯತೆಯನ್ನು ಅಣಬೆ ಶೇ 90 ರಷ್ಟು ಕಡಿಮೆಗೊಳಿಸುತ್ತದೆ ಎಂದೂ ವರದಿ ಮಾಡಿದೆ. ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ಕುಂಠಿತಗೊಳಿಸುವ ಶಕ್ತಿ ಅಣಬೆಯಲ್ಲಿದೆ. ಶಿಟಾಕೆ, ಆಯಿಸ್ಟರ್ ಪ್ರಭೇದದ ಅಣಬೆಗಳು ಉಪಕಾರಿ. ನಿತ್ಯವೂ ಆಹಾರದ ಜೊತೆ ಸೂಪ್, ಕರಿ, ಪಲ್ಯದ ರೂಪದಲ್ಲೂ ಅಣಬೆಯನ್ನು ಸೇವಿಸುತ್ತ ಬಂದರೆ ಕ್ಯಾನ್ಸರ್ ರೋಗದ ತೀವ್ರತೆ ತಗ್ಗಲಿದೆ. ಕ್ಯಾನ್ಸರ್ ಭಯವನ್ನು ದೂರದಲ್ಲಿಡಬಹುದು.

ಅಗಸೆ ಬೀಜ: ಅಗಸೆ ಬೀಜ ಎಲ್ಲೆಡೆ ಸಿಗುವ ಧಾನ್ಯ. ಅದನ್ನು ಹುರಿದು, ಸ್ವಲ್ಪ ಒಣಮೆಣಸಿನ ಕಾಯಿ, ಉಪ್ಪು, ಶೇಂಗಾ ಸೇರಿಸಿ ಪುಡಿ ಮಾಡಿದ ಅಗಸೆ ಚಟ್ನಿಯನ್ನು ಊಟದ ಜೊತೆ, ರೊಟ್ಟಿ, ದೋಸೆ ಜೊತೆ ನಿತ್ಯವೂ ಬಳಸಬೇಕು.

ಡ್ರೈಫ್ರುಟ್ಸ್: ಡ್ರೈಫ್ರುಟ್ಸ್ನಲ್ಲಿ ಅಗ್ರಪಂಕ್ತಿಯಲ್ಲಿರುವ ಅಕ್ರೂಟ್, ಬಾದಾಮಿ, ಗೋಡಂಬಿಯನ್ನು ಸ್ವಲ್ಪ ಪ್ರಮಾಣದಲ್ಲಾದರೂ ನಿಯಮಿತವಾಗಿ ಸೇವಿಸುತ್ತ ಬಂದರೆ ಉತ್ತಮ ಪರಿಣಾಮ ಸಿಗಲಿದೆ.

ಸೇಬು, ಕಿತ್ತಳೆ, ಮೊಸುಂಬಿ, ರಸ್ಬೆರ್ರಿ ಹಣ್ಣು (ಹಣ್ಣಿನ ಪೌಡರ್):ಯಥೇಚ್ಛ ಹಣ್ಣು–ತರಕಾರಿಗಳ ಸೇವನೆ ಕ್ಯಾನ್ಸರ್ ರೋಗಿಗಳ ಪಾಲಿಗೆ ಪ್ರಮುಖ ಪಾತ್ರ ವಹಿಸಲಿದೆ. ನಿತ್ಯವೂ ಒಂದು ಸೇಬು, ಕಿತ್ತಳೆ, ಮೊಸಂಬಿಯನ್ನು ಸೇವಿಸಿದಲ್ಲಿ ಕ್ಯಾನ್ಸರ್ನಿಂದ ದೂರವಿರಬಹುದು. ಬೀಜವುಳ್ಳ ದ್ರಾಕ್ಷಿ ಹಣ್ಣು, ದಾಳಿಂಬೆ ರಸ ಕೂಡ ಉತ್ತಮ ಆ್ಯಂಟಿಆಕ್ಸಿಡೆಂಟ್.

ಮೀನು: ಮಾಂಸಾಹಾರವೆನಿಸುವ ಮೀನು ಸೇವನೆ ಅದರಲ್ಲೂ ಭೂತಾಯಿ (ತಾರ್ಲೆ), ಸಾಲ್ಮನ್ ಮೀನು ಕೂಡ ಕ್ಯಾನ್ಸರ್ ನಿಯಂತ್ರಣಕ್ಕೆ ಉಪಯುಕ್ತ ಆಹಾರ. ಮೀನಿನಲ್ಲಿರುವ ಒಮೆಗಾ ಪ್ಯಾಟಿ ಆ್ಯಸಿಡ್ ಕ್ಯಾನ್ಸರ್ ಕೋಶಗಳ ವಿರುದ್ಧ ಹೋರಾಡುತ್ತದೆ.

ಗ್ರೀನ್ ಟೀ: ಗ್ರೀನ್ ಟೀಯಿಂದ ಸಹಜವಾಗಿ ಸಾಕಷ್ಟು ಪ್ರಯೋಜನಗಳಿವೆ. ಅದರಲ್ಲೂ ಕ್ಯಾನ್ಸರ್ ವಿಷಯದಲ್ಲೂ ಗ್ರೀನ್ ಟೀ ಕಾರ್ಯಚಟುವಟಿಕೆ ಮಹತ್ವ ಪಡೆದುಕೊಂಡಿದೆ.

ಕ್ಯಾನ್ಸರ್ ರೋಗ ಗುಣಪಡಿಸುವಲ್ಲಿ ಲಕ್ಷ್ಮಣ ಫಲದ ಹೆಸರು ಹೆಚ್ಚು ಕೇಳಿ ಬರುತ್ತಿದೆ. ಆದರೆ ಈ ಹಣ್ಣುಗಳು ಎಲ್ಲೆಂದರಲ್ಲಿ ಅಷ್ಟು ಸುಲಭವಾಗಿ ಸಿಗುವುದಿಲ್ಲ. ಆದರೆ ಅದರ ಬೀಜವನ್ನು ಮಡಿಕೇರಿಯಿಂದ ಅಕ್ಷಯ ಕಾಂತಬೈಲ್ ಪೋಸ್ಟ್ ಮೂಲಕ ಕಳುಹಿಸಿಕೊಟ್ಟಿದ್ದರು. ಅದೀಗ ಶಿರಸಿಯಲ್ಲಿ ಗಿಡವಾಗಿ ಬೆಳೆಯುತ್ತಿದೆ. ನನ್ನ ಅಂಕಲ್ ಎಂ.ಎಸ್.ದೇವಾಡಿಗ ಅದರ ಬೀಜವನ್ನು ಸಸಿಯಾಗಿಸಿ, ನೆಟ್ಟು ಜತನದಿಂದ ನೋಡಿಕೊಳ್ಳುತ್ತಿದ್ದಾರೆ. ಎರಡು ಗಿಡಗಳು ಈ ವರ್ಷ ಫಲ ಬಿಡುವ ನಿರೀಕ್ಷೆ ಇವೆ. ಲಕ್ಷ್ಮಣ ಫಲದ ಎಲೆಯ ಚೂರ್ಣವನ್ನು ಕಷಾಯ ಮಾಡಿಕೊಂಡು ಕುಡಿದರೂ ಅದು ಒಳ್ಳೆಯ ಪ್ರತಿಫಲ ಕೊಡುತ್ತದೆ.

ವಿಮಾ ಸೌಲಭ್ಯ

ಬಹುತೇಕ ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸೆ ಆಧಾರಿತ ರೋಗಗಳಿಗೆ ಮಾತ್ರ ವಿಮಾಸೌಲಭ್ಯ ಸಿಗಲಿದೆ. ಪೂರ್ತಿ ದೇಹದ ಸ್ಕ್ಯಾನಿಂಗ್ಗೆ ₹ 20 ಸಾವಿರ ಶುಲ್ಕ ನಿಗದಿಯಿರುವುದರಿಂದ ದುಬಾರಿಯೆನಿಸುತ್ತದೆ. ಆದರೆ ಎಚ್ಸಿಜಿ, ಎನ್ಎಂಆರ್ನಲ್ಲಿ ಪೆಟ್ ಸಿ.ಟಿ.ಗೆ ವಿಮೆ ಸೌಲಭ್ಯವನ್ನು ಒದಗಿಸಲಾಗಿದೆ. ವಿಶೇಷವಾಗಿ ಇಎಸ್ಐ ಸೌಲಭ್ಯ, ರೈಲ್ವೇಸ್, ಕೆಎಸ್ಆರ್ಟಿಸಿ, ಬಿಎಸ್ಎನ್ಎಲ್, ಹೆಸ್ಕಾಂ ಸಿಬ್ಬಂದಿಗೆ ಸಂಪೂರ್ಣ ರಿಯಾಯಿತಿ ದರದಲ್ಲಿ ಸೇವೆ ಲಭ್ಯವಾಗಲಿದೆ.

ಹೈಟೆಕ್ ಸ್ಕ್ಯಾನ್ಗಳಲ್ಲೇ ಪೆಟ್ ಸಿ.ಟಿ ಉತ್ತಮ ಹಾಗೂ ನಿಖರ. ತಲೆ, ಎದೆ, ಹೊಟ್ಟೆ ಭಾಗಗಳ ಪ್ರತ್ಯೇಕ ಸ್ಕ್ಯಾನಿಂಗ್ ಬದಲು ಪೆಟ್ ಸ್ಕ್ಯಾನ್ನಲ್ಲಿ ಪೂರ್ತಿ ದೇಹದ ವರದಿ ಸಿಗಲಿದೆ. ಸ್ಕ್ಯಾನಿಂಗ್ ವೇಳೆ ದೇಹಕ್ಕೆ ಸೇರಿಸಲಾಗುವ ರೇಡಿಯೇಷನ್ನಿಂದಲೂ ಯಾವುದೇ ರೀತಿಯ ಹಾನಿಯಾಗದು. ಕ್ಯಾನ್ಸರ್ನ ಕೋಶಗಳ ಸ್ಪಷ್ಟ ಚಿತ್ರಣವನ್ನು ಈ ಸ್ಕ್ಯಾನಿಂಗ್ನಲ್ಲಿ ರೋಗಿ ಪಡೆದುಕೊಳ್ಳಬಹುದು.

(ಕ್ಯಾನ್ಸರ್ ಜೊತೆ ನನ್ನ ಪಾಸಿಟಿವ್ ಪಯಣದ ಸರಣಿ ಇಲ್ಲಿಗೆ ಮುಕ್ತಾಯವಾಗಲಿದೆ. ಸ್ತನ ಕ್ಯಾನ್ಸರ್ ಕುರಿತು ಆಪ್ತಸಲಹೆಗಳ ಅಗತ್ಯವಿದ್ದವರು 9482558576 ಈ ನಂಬರ್ಗೆ ಸಂಪರ್ಕಿಸಬಹುದು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.