ನೋಡಲು ಅದೊಂದು ಸಾಮಾನ್ಯ ಮೋಟರ್ ಬೈಕ್. ತುಸು ಹಳೆಯದು ಬೇರೆ. ಸೀಟ್ ಕವರ್ ಅಲ್ಲಲ್ಲಿ ಸವೆದಿದೆ, ಹರಿದಿದೆ. ಆದರೆ ಆ ಬೈಕ್ನಲ್ಲಿ ಕೆಲವು ವಿಶೇಷಗಳನ್ನೂ ಈಗಷ್ಟೇ ಜೋಡಿಸಲಾಗಿದೆ. ಅದರ ಮೇಲೆ ಕೂತು ಸ್ಟಾರ್ಟ್ ಮಾಡುವ ಮುನ್ನ ನೀವು ನಿಮ್ಮ ಒಂದು ಬೆರಳನ್ನು ಒತ್ತಬೇಕು. ನಿಮ್ಮದೇ ಬೆರಳಚ್ಚು ಹೌದೆಂದು ಖಾತ್ರಿಯಾದರೆ ಮಾತ್ರ ಎಂಜಿನ್ ಚಾಲೂ ಆಗುತ್ತದೆ. ಆದರೆ ಆಗಲೂ ಬೈಕ್ ಮುಂದಕ್ಕೆ ಹೋಗಲಾರದು. ಹೆಲ್ಮೆಟ್ ಹಾಕಿಕೊಂಡರೆ ಮಾತ್ರ ನೀವು ಕ್ಲಚ್ ಒತ್ತಬಹುದು; ಗಾಡಿ ಓಡಿಸಬಹುದು. ಆ ಹೆಲ್ಮೆಟ್ನಲ್ಲಿ ಇನ್ನೂ ಒಂದು ವಿಶೇಷ ಇದೆ: ನೀವು 90 ಎಮ್ಮೆಲ್ ಹಾಕಿದ್ದಿದ್ದರೆ ಗಾಡಿ ಓಡುವುದಿಲ್ಲ.

ಎರಡು ವಾರಗಳ ಹಿಂದೆ, ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ)ಯಲ್ಲಿ ‘ಹಾರ್ಡ್ವೇರ್ ಹ್ಯಾಕಥಾನ್’ ಎಂಬ ತಂತ್ರಜ್ಞಾನ ಸ್ಪರ್ಧೆ ನಡೆಯಿತು. ದೇಶದ ವಿವಿಧ ಭಾಗಗಳಿಂದ ಯುವ ವಿಜ್ಞಾನಿಗಳು, ಟೆಕಿಗಳು ತಂತಮ್ಮ ಪ್ರತಿಭಾ ಪ್ರದರ್ಶನ ಮಾಡಲೆಂದು ಇಲ್ಲಿಗೆ ಬಂದಿದ್ದರು. ಬೆಂಗಳೂರಿನ ಈ ಹ್ಯಾಕಥಾನ್ ಸ್ಪರ್ಧೆ ಕೇವಲ ಸಂಚಾರ ಸಾಗಾಟದ ಸಮಸ್ಯೆಗಳ ಪರಿಹಾರಕ್ಕೆ ಸಂಬಂಧಿಸಿದ ತಂತ್ರಜ್ಞಾನಕ್ಕಷ್ಟೇ ಸೀಮಿತವಾಗಿತ್ತು. ಚುರುಕು ಯುವಕ ಯುವತಿಯರು ಐದು ದಿನಗಳ ಕಾಲ ಸೆಕೆ, ದೂಳು, ಮಳೆ ಎನ್ನದೆ ನಾನಾ ಬಗೆಯ ಯಂತ್ರ ತಂತ್ರಗಳನ್ನು ರೂಪಿಸಿದರು. ಮಾರುತಿ 800ನ ಎಂಜಿನ್ನನ್ನು ಕಳಚಿ ಹಾಕಿ ಬರೀ ಅದರ ಗಿಯರ್ ಬಾಕ್ಸ್ ಮತ್ತು ಆಕ್ಸಲ್ಗಳಿಗೆ ಬ್ಯಾಟರಿ ಜೋಡಿಸಿ ಹೊಸ ಮಾದರಿಯ ಕಾರನ್ನು ಓಡಿಸಿದವರು ಒಂದು ಕಡೆ; ಪೆಟ್ರೋಲ್ ಡೀಸೆಲ್ ಟ್ಯಾಂಕರ್ಗಳು ಸಂಚರಿಸುವಾಗ ಮಾರ್ಗ ಮಧ್ಯದಲ್ಲೇ ಯಾರಾದರೂ ಕಲಬೆರಕೆ ಅಥವಾ ಕಳ್ಳಸಾಗಣೆಗೆ ಯತ್ನಿಸಿದಾಗ ಸಿಕ್ಕಿ ಬೀಳುವಂಥ ತಂತ್ರವನ್ನು ರೂಪಿಸಿದವರು ಇನ್ನೊಂದು ಕಡೆ; ಯಾವುದೇ ಕಂಪನಿಯ ಯಾವುದೇ ಮಾಡೆಲ್ನ ಕಾರನ್ನಾದರೂ ಚಾಲಕ ಇಲ್ಲದೇ ಚಲಿಸುವಂತೆ ಮಾಡಬಲ್ಲ ಸಲಕರಣೆ ಜೋಡಿಸಿದವರ ತಂಡ ಮತ್ತೊಂದು ಕಡೆ. ಯಾವುದೇ ಪೆಟ್ರೋಲ್ ಎಂಜಿನ್ ಗಾಡಿಯನ್ನು ವಿದ್ಯುತ್ ಶಕ್ತಿಯಿಂದ ಓಡುವಂತೆ ಮಾಡುತ್ತೇವೆಂದು ಹೇಳಿ ಗುಜರಿಯಿಂದ ಆಟೊರಿಕ್ಷಾ ಬಿಡಿಭಾಗವನ್ನು ತಂದು ಜೋಡಿಸಿದವರ ಗುಂಪು ಮಗದೊಂದು ಕಡೆ. ಅಧಿಕಾರಿಗಳ ಕೈಬಿಸಿ ಮಾಡದೆ ಅಥವಾ ದಲ್ಲಾಳಿಗಳ ನೆರವಿಲ್ಲದೆ ಡ್ರೈವಿಂಗ್ ಲೈಸೆನ್ಸ್ ಪಡೆಯಬಹುದಾದ ಆಟೊಮ್ಯಾಟಿಕ್ ವ್ಯವಸ್ಥೆಯನ್ನು ರೂಪಿಸಲೆಂದು ಹೆಣಗಿದ ಲಲನೆಯರು ಈಚೆ ಕಡೆ... ಒಟ್ಟಾರೆ ಐದು ದಿನಗಳ ಕಾಲ ಐಐಎಸ್ಸಿ ಕ್ಯಾಂಪಸ್ಸಿನಲ್ಲಿ ಹವ್ಯಾಸಿ ಟೆಕಿಗಳ ಗಲಾಟೆ ಭರಾಟೆ.

ಇದೇ ಐದು ದಿನಗಳ ಅವಧಿಯಲ್ಲಿ ಭಾರತದ ಬೇರೆ ಬೇರೆ ಪ್ರಮುಖ ತಾಂತ್ರಿಕ ವಿದ್ಯಾಸಂಸ್ಥೆಗಳಲ್ಲಿ ಇಂಥದ್ದೇ ಹ್ಯಾಕಥಾನ್ಗಳು ನಡೆದವು. ಕಾನಪುರದ ಐಐಟಿಯಲ್ಲಿ ಅಖಿಲ ಭಾರತ ಡ್ರೋನ್ ವಿನ್ಯಾಸ ಸ್ಪರ್ಧೆ ನಡೆದರೆ, ಗುವಾಹಾಟಿಯ ಐಐಟಿಯಲ್ಲಿ ಗ್ರಾಮೀಣ ತಂತ್ರಜ್ಞಾನದ ಮೇಲೆ ತುರುಸಿನ ಸಂಶೋಧನಾ ಪ್ರಾತ್ಯಕ್ಷಿಕೆಗಳು ನಡೆದವು. ಖರಗಪುರ ಐಐಟಿಯಲ್ಲಿ ನಡೆದ ಕೃಷಿ ತಂತ್ರಜ್ಞಾನ ಸ್ಪರ್ಧೆಯಲ್ಲಿ ಮೊದಲ ಮೂರೂ ಪ್ರಶಸ್ತಿಗಳು ಯುವತಿಯರ ಪಾಲಾದ ವರದಿ ಬಂತು. ರೂರ್ಕಿ ಐಐಟಿಯಲ್ಲಿ ನೀರಿನ ಶುದ್ಧೀಕರಣಕ್ಕೆ ಸಂಬಂಧಿಸಿದ ಹೊಸ ಹೊಸ ತಾಂತ್ರಿಕ ಸಾಧನಗಳ ನಿರ್ಮಾಣದ ಪೈಪೋಟಿ ನಡೆದರೆ, ತ್ರಿಚಿಯ ಎನ್ಐಟಿಯಲ್ಲಿ ತ್ಯಾಜ್ಯ ವಸ್ತುಗಳ ಮರುಸಂಸ್ಕರಣೆಯ ತಂತ್ರಗಳ ಬಗ್ಗೆ ವಿಜ್ಞಾನ ವಿದ್ಯಾರ್ಥಿಗಳು ತಂತಮ್ಮ ಅತ್ಯುತ್ತಮ ತಂತ್ರಗಳನ್ನು ಪ್ರದರ್ಶಿಸಲು ತಿಣುಕಾಡಿದರು.

ಇದು ನಮ್ಮ ದೇಶದ ಮೊದಲ ‘ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್’. ಮಾಮೂಲು ಕ್ಲಾಸ್ರೂಮ್, ಲ್ಯಾಬ್, ಥಿಯರಿ ಪರೀಕ್ಷೆಗಳಲ್ಲಿ ಮುಳುಗಿದ ಯುವಜನರನ್ನು ಹೊರಕ್ಕೆಳೆದು ತಂದು ವಿಜ್ಞಾನ ತಂತ್ರಜ್ಞಾನದ ಮುಂಚೂಣಿಯತ್ತ ಕೊಂಡೊಯ್ಯುವ ಈ ಮೊದಲ ಪ್ರಯತ್ನದಲ್ಲಿ 106 ತಂಡಗಳು ಏಕಕಾಲಕ್ಕೆ ಹೆಜ್ಜೆ ಹಾಕಿದವು. ದೇಶದ ಹತ್ತು ಪ್ರಮುಖ ಸಮಸ್ಯೆಗಳ ಪರಿಹಾರ ಹುಡುಕಬೇಕೆಂಬ ಸವಾಲನ್ನು ಅವರೆದುರು ಒಡ್ಡಲಾಗಿತ್ತು. ಈ ಫೈನಲ್ ಪೈಪೋಟಿಗೂ ಮುನ್ನ ದೇಶಾದ್ಯಂತ 752 ತಾಂತ್ರಿಕ ವಿದ್ಯಾಸಂಸ್ಥೆಗಳಿಂದ ಒಟ್ಟೂ 4362 ತಂಡಗಳು ಹ್ಯಾಕಥಾನ್ಗೆ ಪ್ರವೇಶ ಪಡೆದಿದ್ದವು. ಭ್ರಷ್ಟಾಚಾರವನ್ನು ಹಿಮ್ಮೆಟ್ಟಿಸಬಲ್ಲ ಉಪಾಯಗಳನ್ನು ಯಾಕೊ ಯಾರೂ ಪ್ರಸ್ತಾಪ ಮಾಡಿದಂತಿಲ್ಲ.

ಹ್ಯಾಕಥಾನ್ ಅಂದರೆ ಏನೆಂದು ನೋಡೋಣ. ಮ್ಯಾರಥಾನ್ ಏನೆಂದು ನಮಗೆ ಗೊತ್ತು. ನೂರಾರು, ಸಾವಿರಾರು ಜನರು ಒಟ್ಟಾಗಿ ರಸ್ತೆಯುದ್ದಕ್ಕೂ 42 ಕಿಲೊಮೀಟರ್ ದೂರ (ನಿಖರವಾಗಿ 42,195 ಮೀಟರ್) ಓಡುವುದಕ್ಕೆ ಮ್ಯಾರಥಾನ್ ಎನ್ನುತ್ತಾರೆ. ಕ್ರಿಸ್ತಪೂರ್ವ 490ರಲ್ಲಿ ಪರ್ಶಿಯನ್ ಸೈನಿಕರು ಗ್ರೀಸ್ ವಿರುದ್ಧ ಮ್ಯಾರಥಾನ್ ಎಂಬ ಊರಲ್ಲಿ ಯುದ್ಧಕ್ಕಿಳಿದು, ಅದರಲ್ಲಿ ಗ್ರೀಕರೇ ಜೈಸಿದಾಗ ಆ ಸಂತಸದ ಸುದ್ದಿಯನ್ನು ರಾಜಧಾನಿಗೆ ತಿಳಿಸಲೆಂದು ಯೋಧನೊಬ್ಬ ಅಲ್ಲಿಂದ ಓಡುತ್ತ ಓಡುತ್ತ ಅಥೆನ್ಸ್ ತಲುಪಿದ ನೆನಪಿಗಾಗಿ ನಡೆಸುವ ಓಟ ಅದು. ಪಶ್ಚಿಮದ ಬಹಳಷ್ಟು ರಾಷ್ಟ್ರಗಳಲ್ಲಿ ವಾರ್ಷಿಕ ಹಬ್ಬದಂತೆ ನಡೆಯುವ ಈ ಓಟದಲ್ಲಿ ಎಳೆಯರಿಂದ ಹಿಡಿದು ಹಣ್ಣುವೃದ್ಧರೂ ಓಡುತ್ತಾರೆ. ಓಟದ ಈ ಹಬ್ಬದಲ್ಲಿ ಗುರಿ ಮುಟ್ಟುವುದು ಮುಖ್ಯವೇ ವಿನಾ ಓಟದ ವೇಗ ಮುಖ್ಯವಲ್ಲ (ಅಂದಹಾಗೆ ಮ್ಯಾರಥಾನ್ ಓಡಿ ಗುರಿ ಮುಟ್ಟಿದ ವಿಶಿಷ್ಟ ದಾಖಲೆಗಳೆಲ್ಲ ಭಾರತೀಯರದ್ದೇ ಆಗಿವೆ. ಪಂಜಾಬಿ ಮೂಲದ ನೂರು ವರ್ಷದ ಫೌಜಾ ಸಿಂಗ್, ಒಡಿಶಾದ ಮೂರು ವರ್ಷದ ಅತಿ ಕಿರಿಯ ಹುಡುಗ ಬುಧಿಯಾ ಹಾಗೂ ಬಾಹ್ಯಾಕಾಶ ನೌಕೆಯಲ್ಲೇ ಉರುಳುಪಟ್ಟಿಯ ಮೇಲೆ ಓಡುತ್ತ ಬೋಸ್ಟನ್ ಮ್ಯಾರಥಾನ್ ಮುಗಿಸಿದ ಸುನಿತಾ ವಿಲಿಯಮ್ಸ್). ಮ್ಯಾರಥಾನ್ ಹಾಗೇ ಹ್ಯಾಕಥಾನ್ ಪದಕ್ಕೂ ದಾಳಿ- ಪ್ರತಿದಾಳಿಯ ಹಿನ್ನೆಲೆ ಇದೆ. 25 ವರ್ಷಗಳ ಹಿಂದೆ ಗಣಕಯಂತ್ರಗಳಲ್ಲಿ ಹುದುಗಿದ್ದ ಸಂಜ್ಞಾಸೂತ್ರಗಳ ಭದ್ರಕೋಟೆಯನ್ನು ಭೇದಿಸಬಲ್ಲ ತಿಜೋರಿಕಳ್ಳರನ್ನು ಹ್ಯಾಕರ್ಸ್ (ಕೊಚ್ಚಪ್ಪ)ಗಳೆಂದು ಕರೆಯುತ್ತಿದ್ದರು. ಮನೆಯಲ್ಲೇ ಕೂತು ಕಂಪ್ಯೂಟರ್ ವೈರಸ್ಗಳನ್ನೂ ಸೃಷ್ಟಿಸಬಲ್ಲ ಅಂಥ ಚುರುಕು ಬುದ್ಧಿಯ ಸಾಫ್ಟ್ವೇರ್ ಕೇಡಿಗಳ ನೆರವು ಪೊಲೀಸರಿಗೂ ಮಿಲಿಟರಿಗೂ ಬೇಕಾಯಿತು. ವೈರಸ್ ದಾಳಿಗೆ ಚುಚ್ಚುಮದ್ದು ತಯಾರಿಸುವ ಕಂಪನಿಗಳೂ ಹ್ಯಾಕರ್ಗಳ ನೆರವು ಕೋರತೊಡಗಿದವು. ಹೊಸ ಸಾಫ್ಟ್ವೇರ್ಗಳನ್ನು ಸೃಷ್ಟಿಸಿದ ಕಂಪನಿಗಳು ನಂತರ ಅದರ ಸುತ್ತ ಕೋಟೆ ಕಟ್ಟಿ, ಹ್ಯಾಕರ್ಗಳನ್ನು ಕರೆದು ‘ಭೇದಿಸಿ ನೋಡೋಣ’ ಎಂದು ಸವಾಲು ಹಾಕುತ್ತ, ಕೆಡವಿಸಿ ಕಟ್ಟುತ್ತ ತಮ್ಮ ಡಿಜಿಟಲ್ ಗಾರೆಯ ಗುಣಮಟ್ಟ ಹೆಚ್ಚಿಸಿಕೊಳ್ಳತೊಡಗಿದವು. ಕಂಪ್ಯೂಟರ್ ತಂತ್ರಾಂಶಗಳ ವಿಕಾಸದ ಹಾದಿಯಲ್ಲಿ ಹ್ಯಾಕರ್ ಖದೀಮರೇ ಹೀರೋಗಳಾದರು. ಗರಡಿಮನೆಯ ಗುರುಗಳಾದರು.

ಮ್ಯಾರಥಾನ್ ಮಾದರಿಯಲ್ಲೇ ತಂತ್ರಾಂಶ ಪರಿಣತರನ್ನೂ ಬಚ್ಚಾಗಳನ್ನೂ ಅಜ್ಜಂದಿರನ್ನೂ ಆಗಾಗ ಒಟ್ಟಿಗೆ ಸೇರಿಸಿ ಒಂಥರಾ ಶತಾವಧಾನ ನಡೆಸುವ ಸಾಫ್ಟ್ವೇರ್ ಹ್ಯಾಕಥಾನ್ ಇಂದು ಅನೇಕ ದೇಶಗಳಲ್ಲಿ ನಡೆಯುತ್ತಿವೆ. ಹ್ಯಾಕ್ಫೆಸ್ಟ್, ಹ್ಯಾಕ್ಡೇ ಇತ್ಯಾದಿ ಹೆಸರಿನಲ್ಲೂ ನಡೆಯುವ ಈ ಕಂಬಳಕ್ಕೆಂದು ವರ್ಷವಿಡೀ ಸಿದ್ಧತೆ ನಡೆಸುವವರಿದ್ದಾರೆ. ಸ್ಪರ್ಧೆಯಲ್ಲಿ ಪಾಲ್ಗೊಳ್ಳುವವರು ಪದವೀಧರರೇ ಆಗಬೇಕೆಂದಿಲ್ಲ. ಗೆದ್ದವರಿಗೆ ದೊಡ್ಡ ಮೊತ್ತದ ಬಹುಮಾನಗಳಿರುತ್ತವೆ. ಅವರ ಬೌದ್ಧಿಕ ಬೆವರಿನ ಹನಿಗಳೇ ಮುತ್ತುಗಳಾಗಿ, ಉದ್ಯಮಿಗಳ ಪಾಲಿಗೆ ಹಣದ ಹೊಳೆ ಹರಿಸುತ್ತ ತಂತ್ರಜ್ಞಾನದ ಗಡಿಗಳನ್ನು ವಿಸ್ತರಿಸುತ್ತಿರುತ್ತವೆ. ಸಮಾಜ ಸುಧಾರಣೆಗೂ ಅವು ನೆರವಾಗುತ್ತವೆ. ಉದಾ: ಹಾಂಗ್ಕಾಂಗ್ನಲ್ಲಿ ಕಳೆದ ಜೂನ್ನಲ್ಲಿ ಜಾಗತಿಕ ಸಾಫ್ಟ್ವೇರ್ ಹ್ಯಾಕಥಾನ್ ನಡೆಯಿತು. ಭಾರತದ ಸ್ಮಾರ್ಟ್ ಸಿಟಿಗಳಲ್ಲಿ ಗುತ್ತಿಗೆ ಟೆಂಡರ್ ಕರೆಯುವ ಸಂದರ್ಭದಲ್ಲಿ ಪಾರದರ್ಶಕತೆಯನ್ನು ಉಳಿಸಿಕೊಳ್ಳುವ ತಂತ್ರಾಂಶವನ್ನು ಸೃಷ್ಟಿಸಿದ ತಂಡಕ್ಕೆ ವಿಶೇಷ ಬಹುಮಾನ ಲಭಿಸಿತು. ಭಾರತದಲ್ಲೂ ಈಗೀಗ ದೊಡ್ಡ ಮಟ್ಟದ ಸಾಫ್ಟ್ವೇರ್ ಹ್ಯಾಕಥಾನ್ಗಳು ನಡೆಯುತ್ತಿವೆ. ಹೆಣ್ಣುಮಕ್ಕಳಿಗಾಗಿಯೇ ವಿಶೇಷ ಕೋಡಿಂಗ್ ಹ್ಯಾಕಥಾನ್ ಬೆಂಗಳೂರಿನಲ್ಲೂ ನಡೆದಿದೆ. ಭಾರತ ಸರ್ಕಾರವೇ ಮುಂದೆ ನಿಂತು ‘ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ 2018’ ಹೆಸರಿನಲ್ಲಿ ನಮ್ಮಲ್ಲಿನ ಪ್ರತಿಷ್ಠಿತ ಸಂಶೋಧನ ಸಂಸ್ಥೆಗಳ ಹಾಗೂ ಖಾಸಗಿ ಕಂಪನಿಗಳ ನೆರವಿನಿಂದ ಕಳೆದ ಮಾರ್ಚ್ನಲ್ಲಿ ದೇಶದ 22 ಪ್ರತಿಷ್ಠಿತ ಸಂಸ್ಥೆಗಳಲ್ಲಿ ಏಕಕಾಲಕ್ಕೆ ಸಾಫ್ಟ್ವೇರ್ ಹ್ಯಾಕಥಾನ್ ಏರ್ಪಡಿಸಿತ್ತು. ಅದರ ಇನ್ನೊಂದು ರೂಪವೇ ಹಾರ್ಡ್ವೇರ್ ಹ್ಯಾಕಥಾನ್. ಅದರ ಪೂರ್ವಭಾವಿ ಸಿದ್ಧತೆಯಲ್ಲಿ 50 ಸಾವಿರಕ್ಕೂ ಹೆಚ್ಚು ಯುವ ಉತ್ಸಾಹಿಗಳು ಪಾಲ್ಗೊಂಡರು.

ಪಿಲಾನಿಯ ಯುವ ಸಂಶೋಧಕರ ತಂಡವೊಂದು ‘ಮಾತಾಡುವ ಕೈಗವಸು’ಗಳನ್ನು ಮೊನ್ನಿನ ಹಾರ್ಡ್ವೇರ್ ಹ್ಯಾಕಥಾನಿನಲ್ಲಿ ಸೃಷ್ಟಿಸಿತ್ತು. ಈ ಗವಸಿನಲ್ಲಿ ಕೈಹಾಕಿ ಬೆರಳುಗಳನ್ನು ಆಡಿಸುವ ಮೂಲಕ ಧ್ವನಿಯನ್ನು ಹೊಮ್ಮಿಸಬಹುದು. ಮಾತಾಡಲು ಸಾಧ್ಯವಾಗದ ವಿಶೇಷಚೇತನರಿಗೆ ಅದೊಂದು ವರದಾನವೇ ಹೌದು. ಯಾಂತ್ರಿಕ ಸಾಧನ ಸಲಕರಣೆಗಳ ಚಾಣಾಕ್ಷತೆಯನ್ನು ಹೆಚ್ಚಿಸುತ್ತ ಹೋಗುವ ಇಂಥ ಹ್ಯಾಕಥಾನ್ಗಳು ಬದುಕಿನ ಗುಣಮಟ್ಟವನ್ನು ಸುಧಾರಿಸುತ್ತವೆ ನಿಜ. ಸೃಜನಶೀಲ ಮನಸ್ಸಿನಲ್ಲಿ ಮೂಡುವ ಹುಚ್ಚು ಕಲ್ಪನೆಗಳೆಲ್ಲ ಸಾಕಾರಗೊಂಡು ನಾಳಿನ ವಾಸ್ತವಗಳನ್ನಾಗಿಸುವ ಅವಕಾಶ ಅದು. ಇದರಲ್ಲಿ ಪಾಲ್ಗೊಳ್ಳುವವರು ತಂತಮ್ಮ ಪ್ರತಿಸ್ಪರ್ಧಿಗಳಿಂದ ಹೊಸದನ್ನು ಕಲಿಯುತ್ತ, ಮೋಜುಮಸ್ತಿಯ ಮಧ್ಯೆಯೇ ತಮ್ಮ ಪರಿಣತಿಯನ್ನು ಇನ್ನಷ್ಟು ಹರಿತಗೊಳಿಸುತ್ತ, ಪೈಪೋಟಿಯ ನಡುವೆಯೇ ಸಹಕಾರಿ ಗುಣಗಳನ್ನೂ ಆವಾಹಿಸಿಕೊಳ್ಳುತ್ತ ಮಾಮೂಲು ಕ್ಲಾಸ್ರೂಮಿನಲ್ಲಿ ಸಿಗದ ವಿಶೇಷ ಅನುಭೂತಿಗಳನ್ನು ಪಡೆಯುತ್ತಾರೆ.

ಅದಕ್ಕೇ ಇಂದು ಹಾರ್ವರ್ಡ್, ಪ್ರಿನ್ಸ್ಟನ್, ಬೀಜಿಂಗ್, ಹಾಂಗ್ಕಾಂಗ್ಗಳಲ್ಲಿ ನಡೆಯುವ ಹ್ಯಾಕಥಾನ್ಗಳೆಂದರೆ ಚುರುಕು ಮಿದುಳುಗಳ ಸಮಾವೇಶವೆಂದೇ ಬಣ್ಣಿಸಲಾಗುತ್ತಿದೆ. ನಾಸಾ, ಸರ್ನ್ಗಳಂಥ ಪ್ರತಿಷ್ಠಿತ ಸಂಸ್ಥೆಗಳು ಸಾಮಾಜಿಕ ಸಮಸ್ಯೆಗಳ ನಿವಾರಣೆಗೆಂದೇ ಹ್ಯಾಕಥಾನ್ಗಳನ್ನು, ಐಡಿಯಾಥಾನ್ಗಳನ್ನು ಸಂಘಟಿಸುತ್ತಿವೆ. ಭೌತ ವಿಜ್ಞಾನ, ಕ್ವಾಂಟಮ್ ಸಂಶೋಧನೆಗಳ ನಾಭಿಕೇಂದ್ರವೆನಿಸಿದ ಸರ್ನ್ ಸಂಸ್ಥೆ ಇಂದು ಮಕ್ಕಳ ಭದ್ರತೆ, ಸುಸ್ಥಿರ ಬದುಕು, ತ್ಯಾಜ್ಯ ವಿಲೆವಾರಿಯಂಥ ಸಮಸ್ಯೆಗಳ ನಿವಾರಣೆಗೆ ಹ್ಯಾಕಥಾನ್ ನಡೆಸುತ್ತಿದೆ. ಚಿತ್ತ ವೈಕಲ್ಯದಿಂದ ನರಳುವ ಹಾಗೂ ಅಂಥವರನ್ನು ಸಂಭಾಳಿಸಲು ಹೆಣಗುವವರ ಸಮಸ್ಯೆಗಳಿಗೆ ಪರಿಹಾರ ಹುಡುಕಲೆಂದೇ ಬ್ರಿಟಿಷ್ ಸರ್ಕಾರ ‘ಡೆಮೆನ್ಶಿಯಾ ಹ್ಯಾಕಥಾನ್’ ನಡೆಸಿತ್ತು. ಆಫ್ರಿಕಾ, ಕೆನಡಾ, ಆಸ್ಟ್ರೇಲಿಯಾಗಳಲ್ಲಿ ಸಂಚಾರಿ ಹ್ಯಾಕಥಾನ್ಗಳು ನಡೆಯುತ್ತಿವೆ. ಮೊದಲೇ ನಿಗದಿತ ಮಾರ್ಗದಗುಂಟ ಅಲ್ಲಲ್ಲಿ ಸಿಗುವ ಊರುಗಳ ಸಮಸ್ಯೆಗಳನ್ನು ಆಲಿಸುತ್ತ, ಆಯಾ ಊರಿನವರ ನೆರವಿನಿಂದಲೇ ಸಮಸ್ಯೆಗಳ ಪರಿಹಾರಕ್ಕೆ ಹೊಸ ಮಾರ್ಗೋಪಾಯಗಳನ್ನು ಕಂಡುಕೊಳ್ಳುತ್ತ ಸಾಗುವ ಮ್ಯಾರಥಾನ್ ಮಾದರಿಯ ಹ್ಯಾಕಥಾನ್ಗಳು ಅವು.

ಸುಧಾರಿತ ರಾಷ್ಟ್ರಗಳ ಸಾಲಿಗೆ ಸೇರಲೆಂದು ಒಂದೊಂದೇ ಮೆಟ್ಟಿಲು ಏರುತ್ತಿರುವ ಭಾರತದಲ್ಲಿ ಹ್ಯಾಕಥಾನ್ಗಳು ಆರಂಭವಾಗಿದ್ದು ಒಳ್ಳೆಯ ಬೆಳವಣಿಗೆಯೇ ಹೌದು. ಸದ್ಯಕ್ಕೇನೊ ಅವು ಐಐಟಿ, ಐಐಎಸ್ಸಿಗಳ ಉನ್ನತ ಸ್ತರಗಳಲ್ಲಷ್ಟೇ ನಡೆಯುತ್ತಿವೆ. ಅಲ್ಲಿಗೆ ಪ್ರವೇಶ ಪಡೆಯಲಾಗದ ಎಳೆಯರಿಗೂ ಅಂಥ ಅವಕಾಶಗಳನ್ನು ಕಲ್ಪಿಸಬೇಕು (ರಾಷ್ಟ್ರದ ಏಕೈಕ ಸೈನ್ಸ್ ಹ್ಯಾಕ್ಡೇ ನಮ್ಮ ಬೆಳಗಾವಿಯಲ್ಲಿ ನಡೆಯುತ್ತದೆ). ಚಿಕ್ಕ ಮಟ್ಟದ್ದಾದರೂ ಸರಿ, ವಿ.ವಿ. ಕ್ಯಾಂಪಸ್ಗಳಲ್ಲಿ, ಹೈಸ್ಕೂಲು ಕಾಲೇಜುಗಳಲ್ಲಿ ಹಾಡು ಕುಣಿತಗಳ ಯುವ ಜನ ಮೇಳಗಳ ಮಾದರಿಯಲ್ಲಿ ಮಿದುಳಿಗೂ ಶಾಖ ಕೊಡುವ ಅವಕಾಶಗಳು ಸೃಷ್ಟಿಯಾಗಬೇಕು. ಸ್ಥಳೀಯ ಪ್ರತಿಭೆಗಳಿಗೆ ಅಷ್ಟೇ ಅಲ್ಲ, ಹಿರಿಯ ತಲೆಗಳಿಗೂ ನಮ್ಮ ಸಮಾಜದ ಸಮಸ್ಯೆಗಳ ಬಗ್ಗೆ ಗಂಭೀರ ಚಿಂತನೆ ನಡೆಸಲು ಅವಕಾಶ ಸಿಗಬೇಕು. ಪರಿಹಾರ ಸಿಗುತ್ತೊ ಬಿಡುತ್ತೊ ಬೇರೆ ಮಾತು. ಸಮಸ್ಯೆಗಳನ್ನು ಗುರುತಿಸುವ ಸಾಮರ್ಥ್ಯ ಬಂದರೂ ಎಷ್ಟೋ ಆದಂತಾಯಿತು. ಈಗಿನ ಶಿಕ್ಷಣ ಕ್ರಮದಲ್ಲಿ ಅದಕ್ಕೂ ಅಭಾವ ತಾನೆ?

ಇಂದು ಶಿಕ್ಷಣ, ನ್ಯಾಯದಾನ, ವೈದ್ಯಕೀಯ, ಆಡಳಿತ, ಸಂಚಾರ, ನಗರ ನೈರ್ಮಲ್ಯ, ಗ್ರಾಮೀಣ ಬದುಕು ಹೀಗೆ ಎಲ್ಲ ರಂಗಗಳಲ್ಲೂ ಸಮಸ್ಯೆಗಳು ಕ್ಲಿಷ್ಟವಾಗುತ್ತಿವೆ. ‘ತಿಪ್ಪೆ ರಾಶಿ ಬೆಳೆದರೆ ಗುಂಡಿ ತೋಡು’ ‘ನೀರಿನ ಅಭಾವವಾದರೆ ನದಿ ತಿರುಗಿಸು’ ಎಂಬಂಥ ಸಿದ್ಧಸೂತ್ರದ ಆಚೆಗೂ ಚಿಂತಿಸಬಲ್ಲ ಪೀಳಿಗೆಯನ್ನು ನಾವು ರೂಪಿಸಬೇಕಿದೆ. ಇಷ್ಟಕ್ಕೂ ಹೊಸ ತಲೆಮಾರು ಸೃಷ್ಟಿಯಾಗುವಷ್ಟೇ ಚುರುಕಾಗಿ ಚುರುಕಿನ ಹೊಸ ತಲೆಗಳೂ ಸೃಷ್ಟಿಯಾಗಬೇಕಲ್ಲ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.