ಶುಕ್ರವಾರ, 27 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದಸರಾ ನೆಪದಲ್ಲಿ ಅಭಿವೃದ್ಧಿ ಮರೆಯಬೇಡಿ: ಅಧಿಕಾರಿಗಳಿಗೆ ಸಿಎಂ ಸೂಚನೆ

Published : 27 ಸೆಪ್ಟೆಂಬರ್ 2024, 11:21 IST
Last Updated : 27 ಸೆಪ್ಟೆಂಬರ್ 2024, 11:21 IST
ಫಾಲೋ ಮಾಡಿ
Comments

ಮೈಸೂರು: ‘ದಸರಾ ನೆಪದಲ್ಲಿ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತ ಆಗಬಾರದು. ಉತ್ಸವದ ಜವಾಬ್ದಾರಿ ಇರುವವರನ್ನು ಹೊರತುಪಡಿಸಿ ಉಳಿದವರು ಕಳ್ಳಾಟವಾಡದೆ ಜನರ ಕೆಲಸಗಳನ್ನು ಮಾಡಬೇಕು’ ಎಂದು ಮಖ್ಯಮಂತ್ರಿ ಸಿದ್ದರಾಮಯ್ಯ ತಾಕೀತು ಮಾಡಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ದಸರಾ ಜನರ ಉತ್ಸವವೇ ಹೊರತು ಸರ್ಕಾರದ್ದಲ್ಲ. ಇದರ ಹೊಣೆ ಜಿಲ್ಲಾಡಳಿತದ್ದು’ ಎಂದು ಹೇಳಿದರು.

‘ಮೈಸೂರು ಸಾಂಸ್ಕೃತಿಕವಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದೆ. ಪ್ರತಿ ವರ್ಷ ದಸರೆಯನ್ನು ಸರ್ಕಾರ ಅತ್ಯಂತ ಅರ್ಥಪೂರ್ಣವಾಗಿ ಆಚರಿಸುತ್ತಿದೆ. ಕಳೆದ ವರ್ಷ ಬರಗಾಲ ಇತ್ತು. ಈ ವರ್ಷ ವಾಡಿಕೆಗಿಂತ ಹೆಚ್ಚು ಮಳೆ ಆಗಿದೆ. ಎಲ್ಲಾ ಜಲಾಶಯಗಳೂ ತುಂಬಿವೆ. ಹೀಗಾಗಿ ಅದ್ದೂರಿಯಾಗಿ, ಅರ್ಥಪೂರ್ಣವಾಗಿ ಆಚರಿಸುವ ಜೊತೆಗೆ ವೈಭವ ಮತ್ತು ಸಂಭ್ರಮಕ್ಕೆ ಕೊರತೆ ಆಗದಂತೆಯೂ ನೋಡಿಕೊಳ್ಳಬೇಕು. ನಮ್ಮ ಪರಂಪರೆ, ಚರಿತ್ರೆ, ಇತಿಹಾಸದ ವೈಭವ ಮಹೋತ್ಸವದಲ್ಲಿ ಜನರಿಗೆ ಕಾಣಿಸುವಂತಿರಬೇಕು’ ಎಂದು ಸೂಚಿಸಿದರು.

ಜನತಾ ನ್ಯಾಯಾಲಯ ಮುಖ್ಯ...

‘ಎಲ್ಲಾ ನ್ಯಾಯಾಲಯಗಳಿಗಿಂತ ಜನತಾ ನ್ಯಾಯಾಲಯ ಮುಖ್ಯ; ಆತ್ಮಸಾಕ್ಷಿ ಮುಖ್ಯ’ ಎಂಬ ಮಹಾತ್ಮ ಗಾಂಧೀಜಿಯವರ ಮಾತನ್ನು ನೆನಪಿಸಿದ ಮುಖ್ಯಮಂತ್ರಿ, ‘ನೆಪ–ಸುಳ್ಳು ಹೇಳುವುದನ್ನು ಅಧಿಕಾರಿಗಳು ನಿಲ್ಲಿಸಬೇಕು. ಒಂದು ಸುಳ್ಳು ಹೇಳಿದರೆ ಅದನ್ನು ಸಮರ್ಥಿಸಲು ಮತ್ತೊಂದು, ಇನ್ನೊಂದು ಸುಳ್ಳು ಹೇಳುತ್ತಲೇ ಹೋಗಬೇಕಾಗುತ್ತದೆ. ಸುಳ್ಳು ಮತ್ತು ನೆಪ ಹೇಳುವ ಅಧಿಕಾರಿಗಳು ಸಿಕ್ಕಿ ಬೀಳುತ್ತಾರೆ. ಇದು ವೃತ್ತಿ ಜೀವನಕ್ಕೆ ಒಳ್ಳೆಯದಲ್ಲ’ ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.

‘ಕಾನೂನು–ಸುವ್ಯವಸ್ಥೆ ಸರಿ ಇಲ್ಲದಿದ್ದರೆ ರಾಜ್ಯದ ಅಭಿವೃದ್ಧಿ ಮತ್ತು ಆರ್ಥಿಕತೆಯ ಪ್ರಗತಿ ಅಸಾಧ್ಯ. ಪೊಲೀಸ್ ಇಲಾಖೆಯ ಬೇಜವಾಬ್ದಾರಿಯಿಂದ ಅಪರಾಧಗಳು ಆಗಬಾರದು. ರಾಜ್ಯದ ಬಂಡವಾಳ ಹೂಡಿಕೆಗೂ, ಕಾನೂನು-ಸುವ್ಯವಸ್ಥೆಗೂ ನೇರಾನೇರ ಸಂಬಂಧವಿದೆ. ಈ ಬಗ್ಗೆ ಕಟ್ಟೆಚ್ಚರ ವಹಿಸಬೇಕು’ ಎಂದು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.

‘ಆರೋಗ್ಯ, ಶಿಕ್ಷಣ, ಅನ್ನ, ನೀರು, ವಿದ್ಯುತ್, ರಸ್ತೆ ಹಾಗೂ ಸುರಕ್ಷತೆ ನನ್ನ ಪ್ರಥಮ ಆದ್ಯತೆ. ಅಧಿಕಾರಿಗಳಲ್ಲಿ ಯಾವುದೇ ಕಾರಣಕ್ಕೂ ಜಾತಿ ಸೋಂಕು ಇರಬಾರದು. ಸರ್ಕಾರದ ಕಾರ್ಯಕ್ರಮಗಳನ್ನು ಸಂವಿಧಾನಬದ್ದ ಮತ್ತು ಜಾತ್ಯತೀತವಾಗಿ ಅನುಷ್ಠಾನಗೊಳಿಸಬೇಕು ಹಾಗೂ ಜನರ ಸೇವೆ ಮಾಡಬೇಕು’ ಎಂದು ನಿರ್ದೇಶನ ನೀಡಿದರು.

ಫಲಾನುಭವಿಗಳಿಗೆ ತಲುಪಿಸುವುದು ಆದ್ಯತೆಯಾಗಬೇಕು:

‘ನಾವು ಜಾರಿಗೊಳಿಸಿರುವ ಪಂಚ ಗ್ಯಾರಂಟಿ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪಿಸುವುದನ್ನು ಮೊದಲ ಆದ್ಯತೆಯಾಗಿ ಪರಿಗಣಿಸಬೇಕು. ಮಧ್ಯವರ್ತಿಗಳಿಗೆ ಅವಕಾಶ ಇಲ್ಲದೆ ನೇರವಾಗಿ ಫಲಾನುಭವಿಗಳಿಗೆ ಸೇರುತ್ತಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಈ ವಿಚಾರದಲ್ಲಿ ಅಸಡ್ಡೆ ಮತ್ತು ಉದಾಸೀನವನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ’ ಎಂದು ಎಚ್ಚರಿಕೆ ನೀಡಿದರು.

‘ಸರ್ಕಾರ ಅಗತ್ಯವಿದ್ದಷ್ಟು ಹಣವನ್ನು ನೀಡುತ್ತಿದೆ. ಈ ಹಣ ಫಲಾನುವಿಗಳಿಗೆ ತಲುಪದಿದ್ದರೆ ಸಂಬಂಧಪಟ್ಟ ಅಧಿಕಾರಿಗಳನ್ನು ಹೊಣೆ ಮಾಡಲಾಗುವುದು. ಇದಕ್ಕೆಂದು ತೆಗೆದಿರಿಸಿರುವ ಹಣವಷ್ಟೂ ಜನರನ್ನು ತಲುಪಬೇಕು. ಅಭಿವೃದ್ಧಿ ಕೆಲಸಗಳಿಗೂ ಹಣ ಹೇರಳವಾಗಿ ಬಿಡುಗಡೆ ಆಗುತ್ತಿದೆ. ಬಜೆಟ್‌ನಲ್ಲಿ ಹೇಳಿದ ಕಾರ್ಯಕ್ರಮಗಳಿಗೂ ಘೋಷಿಸಿದ್ದಷ್ಟು ಹಣ ಬಿಡುಗಡೆ ಆಗುತ್ತಿದೆ. ನಾವು ಅನುದಾನ ಕೊಟ್ಟಾಗ ಕ್ರಿಯಾಯೋಜನೆ ಸಿದ್ಧವಿರಬೇಕು. ಕ್ರಿಯಾಯೋಜನೆ ತಯಾರಿಸಿಲ್ಲದವರ ಮೇಲೆ ಮುಲಾಜಿಲ್ಲದೆ ಕಠಿಣ ಕ್ರಮ ಜರುಗಿಸಲಾಗುವುದು’ ಎಂದು ತಿಳಿಸಿದರು.

‘ಅಭಿವೃದ್ಧಿ ಕಾರ್ಯಗಳ ವಿಚಾರದಲ್ಲಿ ನಿರ್ಲಕ್ಷ್ಯ ಮಾಡಿದರೆ ಅಂತಹ ಅಧಿಕಾರಿಗಳನ್ನು ಸಹಿಸಲ್ಲ. ಜಿಲ್ಲಾ ಮಂತ್ರಿಗಳೂ ಈ ವಿಚಾರದಲ್ಲಿ ಮುಲಾಜು ತೋರಿಸಬಾರದು’ ಎಂದರು.

‘ನಾನು ಎಲ್ಲ ಹಂತದ ಅಧಿಕಾರವನ್ನೂ ನೋಡಿದ್ದೇನೆ. ವಿಧಾನಸಭೆಯ ವಿರೋಧ ಪಕ್ಷದ ನಾಯಕನಾಗಿ ಹೋರಾಟ ಮಾಡಿದ್ದೇನೆ. ಎಲ್ಲಾ ಹಂತದ ಅಧಿಕಾರಿಗಳನ್ನೂ ಕಂಡಿದ್ದೇನೆ. ಅಧಿಕಾರಿಗಳು ಸಮಯ ನಿರ್ವಹಣೆಯಲ್ಲಿ ಜಾಗರೂಕರಾಗಿರಬೇಕು. ಶಿಸ್ತು ಇಲ್ಲದವರು ಕರ್ತವ್ಯಲೋಪ ಮಾಡುತ್ತಾರೆ ಎನ್ನುವುದು ನನ್ನ ಅನುಭವಕ್ಕೆ ಬಂದಿದೆ’ ಎಂದು ತಿಳಿಸಿದರು.

‘ಕಳೆದ ವರ್ಷ ಬರಗಾಲ ಇದ್ದಾಗಲೂ ತೊಂದರೆ ಆಗದಷ್ಟು ವಿದ್ಯುತ್ ಉತ್ಪಾದನೆ ಮಾಡಿದ್ದೇವೆ. ಇದಕ್ಕಾಗಿ ಇಂಧನ ಇಲಾಖೆಗೆ ಅಭಿನಂದನೆ ಸಲ್ಲಿಸುತ್ತೇನೆ’ ಎಂದರು.

‘ಸರ್ಕಾರದ ಮೇಲೆ ಸುಮಾರು ಇಪ್ಪತ್ತು ಸಾವಿರ ಕೋಟಿ ರೂಪಾಯಿ ಹೊರೆಯಾದರು ಕೂಡ 7ನೇ ವೇತನ ಆಯೋಗ ಜಾರಿ ಮಾಡಿ ನಿಮ್ಮ (ಅಧಿಕಾರಿಗಳು, ಸಿಬ್ಬಂದಿಯ) ವೇತನ ಹೆಚ್ಚಿಸಿದ್ದೇವೆ. ಗ್ಯಾರಂಟಿಗಳಿಗೆ ಹಣ ಕೊಟ್ಟೂ, ನಿಮ್ಮ ಕೆಲಸಕ್ಕೆ ತಕ್ಕಂತೆ ಸಂಬಳ ಕೊಡಬೇಕು ಎನ್ನುವ ಉದ್ದೇಶದಿಂದ ಆಯೋಗದ ಶಿಫಾರಸಿನಂತೆ ವೇತನ ಹೆಚ್ಚಿಸಿದ್ದೇವೆ. ಜನರ ಸೇವೆಗೆ ನೀವೆಲ್ಲರೂ ಆದ್ಯತೆ ಕೊಡಬೇಕು’ ಎಂದರು.

‘ನಾವೆಲ್ಲರೂ ಗ್ರಾಮೀಣ ಬದುಕಿನಿಂದಲೇ ಬಂದವರು. ಗ್ರಾಮೀಣ ಪ್ರದೇಶ ಹಾಗೂ ಅಲ್ಲಿನವರನ್ನು ಮೇಲ್ದರ್ಜೆಗೆ ಏರಿಸಬೇಕು ಎನ್ನುವುದು ನನ್ನ ಗುರಿ. ಅದಕ್ಕೆ ತಕ್ಕಂತೆ ನೀವೂ ಕೈ ಜೋಡಿಸಿ ಕೆಲಸ ಮಾಡಬೇಕು. ಶೇ 90ರಷ್ಟು ಅಧಿಕಾರಿ ಮತ್ತು ಸಿಬ್ಬಂದಿಯೂ ಗ್ರಾಮೀಣ ಭಾಗದಿಂದ ಬಂದವರೇ. ಇದನ್ನು ಮರೆಯಬಾರದು’ ಎಂದು ಹೇಳಿದರು.

ಸಚಿವರಾದ ಡಾ.ಎಚ್‌.ಸಿ. ಮಹದೇವಪ್ಪ, ಕೆ.ವೆಂಕಟೇಶ್, ಶಾಸಕರಾದ ಜಿ.ಟಿ. ದೇವೇಗೌಡ, ಕೆ.ಹರೀಶ್‌ಗೌಡ, ಅನಿಲ್‌ ಚಿಕ್ಕಮಾದು, ಡಿ.ರವಿಶಂಕರ್‌, ದರ್ಶನ್‌ ಧ್ರುವನಾರಾಯಣ, ಜಿ.ಡಿ. ಹರೀಶ್‌ ಗೌಡ, ವಿಧಾನಪರಿಷತ್‌ ಸದಸ್ಯರಾದ ಡಾ.ಡಿ. ತಿಮ್ಮಯ್ಯ, ಸಿ.ಎನ್. ಮಂಜೇಗೌಡ, ಡಾ.ಯತೀಂದ್ರ ಸಿದ್ದರಾಮಯ್ಯ, ಬಿ.ವಿವೇಕಾನಂದ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ‍ಪ್ರಾಧಿಕಾರದ ಅಧ್ಯಕ್ಷ ಎಚ್‌.ಎಂ. ರೇವಣ್ಣ, ಉಪಾಧ್ಯಕ್ಷೆ ಪುಷ್ಪಾ ಅಮರನಾಥ್‌, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಕೆಡಿಪಿ ಸದಸ್ಯರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT