ಮತ್ತೆ ಬಂದಿದೆ ಗುಡ್ ಫ್ರೈಡೇ. ಕನ್ನಡದ ಜಾಯಮಾನದಲ್ಲಿ ಶುಭಶುಕ್ರವಾರ. ಮಾನವಪ್ರೇಮಿ ಯೇಸುಕ್ರಿಸ್ತನು ಶಿಲುಬೆಗೇರಿದ ದಿನ.

ಧೂಳು, ಕಸ, ಸಗಣಿ, ಕೆಸರು, ಉಗುಳು, ಬೆವರು, ರಕ್ತಗಳಲ್ಲಿ ಮಿಂದು ಬಿಸಿಲಲ್ಲಿ ಬೆಂದು ಶೂಲದ ಪ್ರತೀಕವಾಗಿ ಸಾಧುಸಜ್ಜನರು ಕಲ್ಪಿಸಿಕೊಳ್ಳಲೂ ಹೇಸುತ್ತಿದ್ದ ಒರಟು ಮರದ ಶಿಲುಬೆ ಈವೊತ್ತು ಬಂಗಾರದ ತಗಡು ಹೊದ್ದು ಜೆರುಸಲೇಮ್ ನಗರದಲ್ಲಿ ವಿಶ್ವದಲ್ಲೆಡೆಯ ಜನರಿಂದ ಪೂಜೆಗೊಳ್ಳುತ್ತಿದೆ. ಮರಣದ ಸಂಕೇತವಾಗಿದ್ದ ಶಿಲುಬೆಯು ಕ್ರಿಸ್ತನ ತ್ಯಾಗಬಲಿದಾನದ ನಂತರ ಪ್ರೀತಿಯ ಮತ್ತು ಜೀವದ ಸಂಕೇತವಾಗಿದೆ. ಅಮೃತಫಲದ ದೆಸೆಯಿಂದ ಮರಣವೃಕ್ಷವು ಚಿಗುರಿ ನಳನಳಿಸುತ್ತಿದೆ.

ಕ್ರಿಸ್ತನೆಂದೂ ರಾಜ್ಯ ಕಟ್ಟಲಿಲ್ಲ. ಸೈನಿಕರನ್ನು ಸೇರಿಸಿಕೊಂಡು ಯುದ್ಧಸಾರಿ ಕೊಚ್ಚಿ ಕೆಡವಿ ಲೂಟಿ ಮಾಡಿ ಮಾನಭಂಗ ಮಾಡಿ ಎನ್ನಲಿಲ್ಲ. ಬಲಗೆನ್ನೆಗೆ ಹೊಡೆದವಗೆ ಎಡಗೆನ್ನೆ ತೋರು ಎಂದ. ಸ್ತ್ರೀಯೊಬ್ಬಳಿಗೆ ಹಾದರಗಿತ್ತಿ ಪಟ್ಟ ಹೊರಿಸಿದ ಜನರಿಗೆ ಹಾದರದಲ್ಲಿ ಪುರುಷನ ಪಾತ್ರವೂ ಇರಬೇಕಲ್ಲವೇ, ಅವನೂ ಸಮಾನ ತಪ್ಪಿತಸ್ಥನಲ್ಲವೇ - ಎಂದು ಜಂಕಿಸಿ ಕೇಳಿದ. ನಿನ್ನ ಶತ್ರುಗಳನ್ನೂ ಪ್ರೀತಿಸು, ನಿನಗೆ ಕೆಡಕು ಮಾಡುವವನನ್ನೂ ಕ್ಷಮಿಸು, ಯಜಮಾನನಂತೆ ದರ್ಪ ತೋರದೆ ಸೇವಕನಂತೆ ತಗ್ಗಿ ಬಗ್ಗಿ ನಡೆ ಎಂದ, ಬೇರೆಯವರ ತಪ್ಪನ್ನು ಎತ್ತಿ ತೋರುವ ಮೊದಲು ನಿನ್ನ ಕಣ್ಣನ್ನು ಸ್ವಚ್ಛಪಡಿಸಿಕೋ ಎಂದ, ಇತರರನ್ನೂ ನಿನ್ನಂತೆಯೇ ಪರಿಭಾವಿಸಿದರೆ ಅದೇ ಸ್ವರ್ಗ ಎಂದ.

ಆದರೆ ಅವನ ಮಾತುಗಳು ಧರ್ಮದ ಸೂತ್ರ ಹಿಡಿದ ಕೆಲವರಿಗೆ ಅಪಥ್ಯವೆನಿಸಿತು. ತಮ್ಮನ್ನಾಳುತ್ತಿದ್ದ ಚಕ್ರವರ್ತಿಯ ಪ್ರತಿನಿಧಿಯಲ್ಲಿಗೆ ತೆರಳಿ ಯೇಸುಕ್ರಿಸ್ತನ ಮೇಲೆ ಇಲ್ಲಸಲ್ಲದ ದೂರು ಹೊರಿಸಿ ಕ್ರೂರವಾದ ಶಿಲುಬೆಮರಕ್ಕೆ ಮೊಳೆಗಳಿಂದ ಜಡಿದು ಕೊಂದರು. ಅದೊಂದು ಬಲು ಘೋರ ಶಿಕ್ಷೆ.

ತನ್ನ ಅತಿಮಾನುಷ ಶಕ್ತಿಯಿಂದ ಕ್ರಿಸ್ತ ಕುಷ್ಟವನ್ನು ತೊಳೆದಿದ್ದ, ಕುರುಡರು ನೋಡುವಂತೆ ಮಾಡಿದ್ದ, ಸತ್ತವರನ್ನು ಬದುಕಿಸಿದ್ದ, ಜಡರಲ್ಲಿ ಜೀವಚೈತನ್ಯ ತುಂಬಿದ್ದ, ದೀನದಲಿತರೆಡೆಗೆ ಪ್ರೇಮಕಾರಂಜಿಯನ್ನೇ ಹರಿಸಿದ್ದ. ಆದರೆ ಧರ್ಮಾಂಧರ ಪಾಲಿಗೆ ಸಿಂಹಸ್ವಪ್ನವಾಗಿದ್ದ. ಅದೇ ಅವನಿಗೆ ಮುಳುವಾಯಿತು.

ಶುಭಶುಕ್ರವಾರದ ಮತ್ತೊಂದು ಆಚರಣೆ ಶಿಲುಬೆಯಾತ್ರೆ, ಇಂದು ಜಗದಲ್ಲೆಡೆ ಕ್ರೈಸ್ತರು ಉಪವಾಸ ಮಾಡಿ ಶಿಲುಬೆ ಮುಂದೆ ಮಂಡಿಯೂರಿ ‘ಇದೇ ಪವಿತ್ರ ಶಿಲುಬೆಯಿಂದ ಲೋಕವು ಉದ್ಧಾರವಾಯಿತು’ ಎನ್ನುತ್ತಾ ಮೌನಧ್ಯಾನ ಮಾಡುತ್ತಾರೆ. ಶಿಲುಬೆಯಾತ್ರೆಯು ಯೇಸುವಿನ ಕೊನೇ ಕ್ಷಣಗಳ ದೃಶ್ಯಧ್ಯಾನ. ಗುಡಿಯೊಳಗಿನ ಗೋಡೆಯಲ್ಲಿ ಇರಿಸಲಾದ ಹದಿನಾಲ್ಕು ಭಿತ್ತಿಚಿತ್ರಗಳಲ್ಲಿ ಯೇಸುವಿನ ಯಾತ್ರೆಯ ಘಟ್ಟಗಳನ್ನು ಚಿತ್ರಿಸಲಾಗಿರುತ್ತದೆ. ಮರಣದಂಡನೆಗೆ ಗುರಿಯಾದ ಯೇಸುವಿನ ಭುಜದ ಮೇಲೆ ಭಾರವಾದ ಶಿಲುಬೆ ಹೊರಿಸಿ ಜೆರುಸಲೇಮಿನ ಹೊರವಲಯದ ಗುಡ್ಡದತ್ತ ಮೆರವಣಿಗೆ ಸಾಗಿದ್ದು, ದಾರಿಮಧ್ಯೆ ಯೇಸು ಬಳಲಿ ಬೆಂಡಾಗಿ ನೆಲಕ್ಕೆ ಬಿದ್ದು ಸಿಮೋನನೆಂಬ ವ್ಯಕ್ತಿ ಶಿಲುಬೆ ಹೊರಲು ನೆರವಾದದ್ದು ವೆರೋನಿಕಾ ಎಂಬ ಹೆಣ್ಣುಮಗಳು ಮುನ್ನುಗಿಬಂದು ಯೇಸುವಿನ ಮುಖ ಒರೆಸಿ ಸಾಂತ್ವನ ಹೇಳಿದ್ರು ತನಗೆ ಅನುಕಂಪ ತೋರಿದ ಹೆಂಗಳೆಯರಿಗೆ ಯೇಸು ಮುಂದಿನ ಪೀಳಿಗೆಯ ಬಗ್ಗೆ ಚಿಂತಿಸಿರಿ ಎಂದು ನುಡಿದಿದ್ದು, ಸೈನಿಕರು ಯೇಸುವಿನ ಕೈಕಾಲುಗಳಿಗೆ ಚೂಪಾದ ಮೊಳೆಗಳಿಂದ ಶಿಲುಬೆಮರಕ್ಕೆ ಜಡಿದಿದ್ದು ಮುಂತಾದ ಘಟನೆಗಳ ಚಿತ್ರಗಳವು.

ಜನರು ಪ್ರತಿ ಭಿತ್ತಿಚಿತ್ರದ ಮುಂದೆ ಮೊಣಕಾಲೂರಿ ನಮಸ್ಕಾರ ಮಾಡುತ್ತಾರೆ. ತದೇಕಚಿತ್ತದಿಂದ ಧ್ಯಾನಿಸುತ್ತಾರೆ, ಕಿಸೆಪುಸ್ತಕದಲ್ಲಿನ ಜಪ ಓದುತ್ತಾರೆ, ನಿಡುಸುಯ್ಯುತ್ತಾ ತಮ್ಮ ಮನದ ದೌರ್ಬಲ್ಯಗಳಿಗಾಗಿ ವ್ಯಥೆ ಪಡುತ್ತಾರೆ. ಈ ದಿನ ಉಪವಾಸವಿದ್ದು ದೇವಾಲಯದಲ್ಲಿ, ಮನೆಯಲ್ಲಿ, ರಸ್ತೆಯಲ್ಲಿ, ಊರಹೊರಗಿನ ಗುಡ್ಡದಲ್ಲಿ, ಯೇಸುಕ್ರಿಸ್ತನ ಶಿಲುಬೆಯಾತ್ರೆಯನ್ನು ಅನುಭವಿಸುತ್ತಾ ಕ್ರಿಸ್ತನ ನೋವು ಸಂಕಟಗಳಲ್ಲಿ ಭಾಗಿಯಾಗುತ್ತಾ ಆತ್ಮಶೋಧನೆ ಮಾಡಿಕೊಳ್ಳುತ್ತಾರೆ.

ಇಂದು ದೇವಾಲಯದಲ್ಲಿ ಶೋಕಾಚರಣೆಯ ಕಾರಣ ಯಾವ ಅಲಂಕಾರವೂ ಇರುವುದಿಲ್ಲ. ಸುಮಧುರ ಗಂಟೆಯೂ ನಿನದಿಸದ ಹಾಗೆ ಅದರ ನಾಲಗೆಯನ್ನು ಬಟ್ಟೆಯಿಂದ ಸುತ್ತಿರುತ್ತಾರೆ. ಪೂಜಾಪೀಠವನ್ನು ಹೂದಾನಿ ಮೇಣದಬತ್ತಿ ವಸ್ತ್ರಗಳಿಲ್ಲದೆ ಕಾಲಿ ಬಿಡುತ್ತಾರೆ. ಅಲಂಕಾರಿಕ ಪ್ರತಿಮೆಗಳಿಗೆ ಮುಸುಕು ಹಾಕಿ ಮುಚ್ಚುತ್ತಾರೆ. ಯೇಸು ಶಿಲುಬೆಯ ಮೇಲೆ ಮಡಿದ ಆ ದಿನ ಖಗ್ರಾಸ ಸೂರ್ಯಗ್ರಹಣವಂತೆ; ಅಂತೆಯೇ ಈ ದಿನ ಮಾತು ಗ್ರಹಣವಿಡಿದು ಮೌನವೇ ಆಳುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.