ಭಾನುವಾರ, 29 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜಮಖಂಡಿ | ಮಗನ ಸಾವಿನಲ್ಲಿ ಅನುಮಾನ; ಪೋಷಕರ ಪ್ರತಿಭಟನೆ

Published : 29 ಸೆಪ್ಟೆಂಬರ್ 2024, 16:04 IST
Last Updated : 29 ಸೆಪ್ಟೆಂಬರ್ 2024, 16:04 IST
ಫಾಲೋ ಮಾಡಿ
Comments

ಜಮಖಂಡಿ: ‘ಮಾಜಿ ಶಾಸಕ ಆನಂದ ನ್ಯಾಮಗೌಡ ಒಡೆತನದ ರಾಯಲ್ ಪ್ಯಾಲೇಸ್ ಶಾಲೆಯಲ್ಲಿ ಸಾವನಪ್ಪಿದ ನನ್ನ ಮಗನ ಸಾವಿನಲ್ಲಿ ನಮಗೆ ಸಂಶಯ ಮೂಡುತ್ತಿದೆ. ಮಗನ ಸಾವಿಗೆ ನ್ಯಾಯ ಸಿಗಬೇಕು’ ಎಂದು ಬಬಲೇಶ್ವರ ತಾಲ್ಲೂಕಿನ ಕಣಬೂರ ಗ್ರಾಮದ ಮೃತ ವಿದ್ಯಾರ್ಥಿಯ ತಂದೆ ತಾಯಿ, ಸಂಬಂಧಿಕರು ಕಣ್ಣಿರು ಸುರಿಸುತ್ತ ಭಾನುವಾರ ಗ್ರಾಮಿಣ ಠಾಣೆಯ ಮುಂದೆ ಪ್ರತಿಭಟಿಸಿದರು.

‘ಸಿಸಿಟಿವಿ ದೃಶ್ಯಾವಳಿ ನೀಡದೆ ಶಾಲೆಯವರು ಹಾಗೂ ಪೊಲೀಸರು ನಮ್ಮ ಮಗನ ಸಾವಿಗೆ  ಸರಿಯಾಗಿ ಮಾಹಿತಿ ನೀಡುತ್ತಿಲ್ಲ. ಪೊಲೀಸ್ ಠಾಣೆಗೆ ಹೋದರೆ ನಮಗೆ ದಬ್ಬಾಳಿಕೆ ಮಾಡಿ ಹೊರಹಾಕುತ್ತಿದ್ದಾರೆ’ ಎಂದು ಮೃತ ವಿದ್ಯಾರ್ಥಿ ತಂದೆ ಅಣ್ಣಪ್ಪ ಗುಳೆದಗುಡ್ಡ, ತಾಯಿ ಸಕ್ಕುಬಾಯಿ ಗುಳೆದಗುಡ್ಡ, ಅಜ್ಜಿ ಲಕ್ಷ್ಮೀಬಾಯಿ ಗುಳೆದಗುಡ್ಡ ಸೇರಿದಂತೆ ಇತರರು  ದೂರಿದರು.

‘ಸೆ.23 ರಂದು ಮಧ್ಯಾಹ್ನ ಮಗನಿಗೆ ಅನಾರೋಗ್ಯ ಎಂದು ನಮ್ಮನ್ನು ಕರೆಯಿಸಿದ್ದರು. ನಾವು ಬಂದು ನೋಡಿದರೆ ಮಗ ಸರ್ಕಾರಿ ಆಸ್ಪತ್ರೆಯಲ್ಲಿದ್ದು ಕಿಟಕಿಯಿಂದ ಮಗನ ಮೃತ ಶರೀರ ತೋರಿಸಿದ್ದಾರೆ. ಇದರ ಹಿಂದೆ ಷಡ್ಯಂತ್ರ ನಡೆದಿದೆ, ಅದಕ್ಕೆ ನಮಗೆ ಸರಿಯಾಗಿ ಯಾರು ಮಾಹಿತಿ ನೀಡುತ್ತಿಲ್ಲ’ ಎಂದು ರೋದಿಸಿದರು

‘ಈ ಹಿಂದೆಯೂ ಶಾಲೆಯಲ್ಲಿ ವಿದ್ಯಾರ್ಥಿಗಳ ಸಾವುಗಳಾಗಿವೆ, ನನ್ನ ಮಗನಿಗೆ ಆದಂತೆ ಬೇರೆ ಮಕ್ಕಳಿಗೆ ಆಗಬಾರದು ಎಂದು ನಾವು ನ್ಯಾಯ ಕೇಳುತ್ತಿದ್ದೇವೆ. ಶಾಲೆಯ ಪ್ರತಿಯೊಂದು ಕೊಠಡಿಗೂ ಸಿಸಿ ಟಿವಿಗಳಿವೆ. ಆದರೆ ದೃಶ್ಯಾವಳಿಗಳನ್ನು ಏಕೆ ಕೊಡುತ್ತಿಲ್ಲ’ ಎಂದು ಪ್ರಶ್ನಿಸಿ ‘ನಮ್ಮ ಮಗನ ಸಾವನ್ನು ಮುಚ್ಚಿ ಹಾಕುವುದಕ್ಕೆ ಬಿಡುವುದಿಲ್ಲ, ಮೇಲಾಧಿಕಾರಿಗಳ ಬಳಿ ಹೋಗುತ್ತೇವೆ’ ಎಂದರು.

ಠಾಣೆಯ ಮುಂದೆ ತಮ್ಮ ಮಗನ ಸಾವಿಗೆ ನ್ಯಾಯ ಸಿಗಬೇಕು ಎಂದು ಪ್ರತಿಭಟನೆ ನಡೆಸಿ, ‘ನಮ್ಮ ಮಗನಿಗೆ ನ್ಯಾಯ ಸಿಗುವರೆಗೂ ನಾವು ಏಳುವುದಿಲ್ಲ’ ಎಂದು ಪಟ್ಟು ಹಿಡಿದು ಪ್ರತಿಭಟಿಸಿದರು.

ದೂರು ದಾಖಲು:

‘ರಾಯಲ್ ಪ್ಯಾಲೇಸ್ ಶಾಲೆಯಲ್ಲಿ ಪ್ರಥಮ ವಿಜ್ಞಾನ ವಿಭಾಗದಲ್ಲಿ ಓದುತ್ತಿದ್ದ ಕಣಬೂರ ಗ್ರಾಮದ ಆಕಾಶ ಅಣ್ಣಪ್ಪ ಗುಳೆದಗುಡ್ಡ (17) ತನಗೆ ವಿಜ್ಞಾನ ವಿಷಯ ತಲೆಗೆ ಹತ್ತದೇ ಇದ್ದುದರಿಂದ ಹಾಗೂ ಕಿಡ್ನಿ ಸ್ಟೋನ್‌ ಉಂಟಾಗಿ ಆಸ್ಪತ್ರೆಗೆ ತೋರಿಸಿದರೂ ಕಡಿಮೆ ಆಗಿಲ್ಲವೆಂದು ಮನಸ್ಸಿಗೆ ಹಚ್ಚಿಕೊಂಡು ಶಾಲೆಯ ಕೊಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ’ ಎಂದು ಸೆ.23 ರಂದು ಪಿಎಸ್‌ಐ ಜಿ.ಎಂ.ಪೂಜಾರ ದೂರು ದಾಖಲಿಸಿಕೊಂಡಿದ್ದಾರೆ.

ಗ್ರಾಮೀಣ ಪೊಲೀಸ್ ಠಾಣೆಯ ಮುಂದೆ ಮೃತ ವಿದ್ಯಾರ್ಥಿಯ ಸಂಬಂಧಿಕರು ಭಾನುವಾರ ಪ್ರತಿಭಟನೆ ನಡೆಸಿದರು
ಗ್ರಾಮೀಣ ಪೊಲೀಸ್ ಠಾಣೆಯ ಮುಂದೆ ಮೃತ ವಿದ್ಯಾರ್ಥಿಯ ಸಂಬಂಧಿಕರು ಭಾನುವಾರ ಪ್ರತಿಭಟನೆ ನಡೆಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT