ಸಂಡೂರಿನ ಪ್ರತಿಷ್ಠೆಯ ಚುನಾವಣೆ ಎಂದು ಕಾಂಗ್ರೆಸ್ ಹೇಳಿಕೊಂಡಿದೆ. ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿರುವುದಾಗಿ ಬಿಜೆಪಿಯೂ ಹೇಳಿದೆ. ಅದೇನೆ ಇದ್ದರೂ ಇದು ಸಚಿವ ಸಂತೋಷ್ ಲಾಡ್ ಮತ್ತು ಶಾಸಕ ಜನಾರ್ದನ ರೆಡ್ಡಿ ಪ್ರತಿಷ್ಠೆಯ ಚುನಾವಣೆ ಎಂಬ ಮಾತು ರಾಜಕೀಯ ವಲಯದಲ್ಲಿ ಗಟ್ಟಿಯಾಗಿ ಕೇಳಿಸುತ್ತಿದೆ. ಸಂತೋಷ್ ಲಾಡ್‌ಗೆ ಕ್ಷೇತ್ರವನ್ನು ಉಳಿಸಿಕೊಳ್ಳಲೇ ಬೇಕಿರುವ ಅನಿವಾರ್ಯತೆ ಇದೆ. ಇಲ್ಲಿ ಬರುವ ಫಲಿತಾಂಶ ಇನ್ನು ಕೆಲವೇ ತಿಂಗಳಲ್ಲಿ ನಡೆಯುವ ಸಂಪುಟ ಪುನರಚನೆ ಮೇಲೆ ಪರಿಣಾಮ ಬೀರಿದರೂ ಬೀರಬಹುದು ಎಂಬ ಅಭಿಪ್ರಾಯವಿದೆ. ಜನಾರ್ದನ ರೆಡ್ಡಿಗೂ ಇದು ಅತ್ಯಂತ ಪ್ರಮುಖ ಚುನಾವಣೆ. ಹಿಂದೊಮ್ಮೆ ಬಿ.ಎಸ್ ಯಡಿಯೂರಪ್ಪ ಅವರ ವಿರುದ್ಧವೇ ಗುಟುರು ಹಾಕುತ್ತಿದ್ದ ರೆಡ್ಡಿಗೆ ಈಗ ಬಿಜೆಪಿಯಲ್ಲಿ ಅಂಥ ಬಲವಿಲ್ಲ. ಆ ಬಲ ತಂದುಕೊಳ್ಳಬೇಕಿದ್ದರೆ ಇಲ್ಲಿ ಗೆದ್ದು ತೋರಿಸಲೇಬೇಕು ಎಂಬ ಅನಿವಾರ್ಯವಿದೆ. ಹೀಗಾಗಿ ಸಂಡೂರಿನ ಚುನಾವಣೆ ಹಲವು ಕಾರಣಗಳಿಂದ ಪ್ರಾಮುಖ್ಯತೆ ಪಡೆದಿದೆ.
ಕೈಕೊಟ್ಟ ಜೆಡಿಎಸ್ ‘ಮಿತ್ರ’
ರಾಜ್ಯದ ಮೂರು ಕ್ಷೇತ್ರಗಳ ಉಪ ಚುನಾವಣೆಯನ್ನು ಮೈತ್ರಿ ಮೂಲಕ ಎದುರಿಸಲು ಬಿಜೆಪಿ ಮತ್ತು ಜೆಡಿಎಸ್ ನಿರ್ಧರಿಸಿದ್ದವು. ಚನ್ನಪಟ್ಟಣದಲ್ಲಿ ಬಿಜೆಪಿಯ ಅಗ್ರ ನಾಯಕರೇ ಪ್ರಚಾರ ಮಾಡಿದ್ದರು. ಆದರೆ ಸಂಡೂರಿನಲ್ಲಿ ಜೆಡಿಎಸ್‌ನ ಸ್ಥಳೀಯ ಕೆಲ ನಾಯಕರು ಹೊರತುಪಡಿಸಿದರೆ ರಾಜ್ಯ ನಾಯಕರು ಪ್ರಚಾರಕ್ಕೆ ಬರಲೇ ಇಲ್ಲ. ಒಂದು ದಿನ ಪ್ರಚಾರಕ್ಕೆ ಬರುವ ಮಾತು ನೀಡಿದ್ದ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಮಿತ್ರ ಪಕ್ಷಕ್ಕೆ ಕೈಕೊಟ್ಟಿದ್ದರು. ಹೀಗಾಗಿ ಸಂಡೂರಿನ ಮಟ್ಟಿಗೆ ಮೈತ್ರಿ ಎಂಬುದು ಮಾತಿಗಷ್ಟೇ ಎಂಬಂತಾಗಿತ್ತು.
ಸಮೀಕ್ಷೆಯಲ್ಲಿ ಕಾಂಗ್ರೆಸ್ ಮುಂದು
ರಾಜ್ಯದ ಮೂರು ವಿಧಾನಸಭಾ ಕ್ಷೇತ್ರದ ಚುನಾವಣೆಯ ಮತಗಟ್ಟೆ ಸಮೀಕ್ಷೆಯನ್ನು ಕೆಲ ಸಂಸ್ಥೆಗಳು ಮಾಡಿವೆ. ಎಲ್ಲ ಸಮೀಕ್ಷಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಲಿದ್ದಾರೆ ಎಂದು ಹೇಳಲಾಗಿದೆ. ಆದರೆ ಇದನ್ನು ನಿರಾಕರಿಸಿರುವ ಬಿಜೆಪಿ ನಾಯಕರು ನಾವೇ ಗೆಲ್ಲುತ್ತೇವೆ ಎಂದು ಹೇಳುತ್ತಿದ್ದಾರೆ.