ಶುಕ್ರವಾರ, 27 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕೋಡಿ: ಶಿಕ್ಷಕರ ಕೊರತೆ, ಸುಧಾರಿಸದ ಫಲಿತಾಂಶ

ವರ್ಷದಿಂದ ವರ್ಷಕ್ಕೆ ರ್‍ಯಾಂಕ್‌ ಪಟ್ಟಿಯಲ್ಲಿ ಕೆಳಗೆ ಸರಿಯುತ್ತಿದೆ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ
ಚಂದ್ರಶೇಖರ ಎಸ್. ಚಿನಕೇಕರ
Published : 17 ಜೂನ್ 2024, 6:17 IST
Last Updated : 17 ಜೂನ್ 2024, 6:17 IST
ಫಾಲೋ ಮಾಡಿ
Comments

ಚಿಕ್ಕೋಡಿ: ಎಸ್‌ಎಸ್‌ಎಲ್‌ಸಿ ಫಲಿತಾಂಶ ಬಂದರೆ ಸಾಕು ಇಡೀ ರಾಜ್ಯವೇ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯತ್ತ ನೋಡುವ ಕಾಲವೊಂದಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಫಲಿತಾಂಶದ ಪ್ರಮಾಣ ವರ್ಷದಿಂದ ವರ್ಷಕ್ಕೆ ಕುಸಿಯುತ್ತಲೇ ಇದೆ. ಜಿಲ್ಲೆಯಲ್ಲಿ ಸಾಕಷ್ಟು ಶಿಕ್ಷಕರ ಕೊರತೆ ಇರುವುದೇ ಇದಕ್ಕೆ ಕಾರಣ ಎನ್ನುವುದು ಶಿಕ್ಷಣ ತಜ್ಞರ ಅಭಿಮತ. ಈ ಬಾರಿಯ ಫಲಿತಾಂಶ ಕೂಡ ಇದನ್ನೇ ಸಾಬೀತು ಮಾಡುವಂತಿದೆ.

ಕುಸಿಯುತ್ತಿರುವ ಫಲಿತಾಂಶದ ಜತೆಗೆ ಗರಿಷ್ಠ ಫಲಿತಾಂಶ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ ಕೂಡ ಕಡಿಮೆಯಾಗುತ್ತ ಸಾಗಿದೆ. ಹಿಂದೆ ಪ್ರತಿಶಾಲೆಯಿಂದಲೂ ಹಲವು ಮಕ್ಕಳು ಡಿಸ್ಟಿಂಗ್ಷನ್‌ ಪಡೆದು ಪಾಸಾಗಿದ್ದರು. ಆದರೆ, ಈ ವರ್ಷ ಅವರ ಸಂಖ್ಯೆಯೂ ಕಡಿಮೆಯಾಗಿದೆ.

ಈ ಸಮಸ್ಯೆ ಪ್ರೌಢಶಾಲೆ ಮಾತ್ರವಲ್ಲ; ಪ್ರಾಥಮಿಕ ಶಾಲೆಯನ್ನೂ ತಳಕು ಹಾಕಿಕೊಂಡಿದೆ.

ಹೌದು. ಮಕ್ಕಳ ಪ್ರಾಥಮಿಕ ಹಂತದಲ್ಲಿ ಸರಿಯಾದ ಮೂಲ ಶಿಕ್ಷಣ ಪಡೆದರೆ ಪ್ರೌಢ ಹಂತದಲ್ಲಿ ಅವರಿಗೆ ಹೆಚ್ಚಿನ ಬೆಳವಣಿಗೆ ಸಾಧ್ಯವಾಗುತ್ತದೆ. ಆದರೆ, ಪ್ರಾಥಮಿಕ ಹಂತದಲ್ಲೇ ಶಿಕ್ಷಣ ಗುಣಮಟ್ಟ ಕುಸಿದರೆ ಪ್ರೌಢಶಾಲೆಗೆ ಬಂದಾಗಲೂ ಅವರು ಮತ್ತಷ್ಟು ಪರದಾಡುವಂತಾಗುತ್ತದೆ. ಪ್ರೌಢಶಾಲೆಯಲ್ಲಿ ಇದ್ದುಕೊಂಡೇ ಮೂಲ ಶಿಕ್ಷಣವನ್ನು ಗಟ್ಟಿಗೊಳಿಸಿಕೊಂಡು ನಂತರದ ಹಂತದಲ್ಲಿ ಪ್ರೌಢಶಿಕ್ಷಣಕ್ಕೆ ಅಣಿಯಾಗಬೇಕಾಗುತ್ತದೆ.

ಪ‍್ರಾಥಮಿಕ ಶಾಲೆಗಳಲ್ಲಿ ಕೂಡ ಅಪಾರ ಸಂಖ್ಯೆಯ ಶಿಕ್ಷಕರ ಕೊರತೆ ಇರುವುದು ಕೂಡ ಪ್ರೌಢಶಿಕ್ಷಣ ಫಲಿತಾಂಶ ಕುಸಿಯಲು ಕಾರಣ ಎಂಬುದು ಅಧಿಕಾರಿಗಳ ವಿಶ್ಲೇಷಣೆ.

2,51,742 ಮಕ್ಕಳ ಕಲಿಕೆ:

ಇತ್ತೀಚಿನ ಶೈಕ್ಷಣಿಕ ಬೆಳವಣಿಗೆಗಳು ವಿದ್ಯಾರ್ಥಿಗಳ ಹಾಗೂ ಪಾಲಕರ ಆತಂಕಕ್ಕೆ ಕಾರಣವಾಗಿದೆ. ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ವ್ಯಾಪ್ತಿಯ ಎಂಟು ಶಿಕ್ಷಣ ವಲಯಗಳಲ್ಲಿ 1,20,793 ಬಾಲಕರು ಹಾಗೂ 1,30,949 ಬಾಲಕಿಯರು ಸೇರಿದಂತೆ ಒಟ್ಟು 2,51,742 ವಿದ್ಯಾರ್ಥಿಗಳು ಪ್ರಸಕ್ತ ಸಾಲಿನಲ್ಲಿದ್ದಾರೆ.

ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ 2021-22ರಲ್ಲಿ 16ನೇ ಸ್ಥಾನ, 2022-23ರಲ್ಲಿ 12ನೇ ಸ್ಥಾನ, 2023-24ನೇ ಸಾಲಿನಲ್ಲಿ 25ನೇ ಸ್ಥಾನಕ್ಕೆ ಕುಸಿತ ಕಂಡಿದ್ದು, ಕಳೆದ ವರ್ಷ 1 ಸಾವಿರಕ್ಕೂ ಹೆಚ್ಚು ಜಿಪಿಟಿ (ಪದವೀಧರ ಪ್ರಾಥಮಿಕ ಶಿಕ್ಷಕರ) ನೇಮಕ ಮಾಡಿಕೊಳ್ಳಲಾಗಿದ್ದರೂ ಪ್ರಸಕ್ತ ಸಾಲಿನಲ್ಲಿ ಶಿಕ್ಷಕರ ಕೊರತೆ ತುಂಬುವಲ್ಲಿ ಇಲಾಖೆ ಕ್ರಮ ಕೈಗೊಂಡಿಲ್ಲ. ಹೀಗಾಗಿ 2024-25ನೇ ಸಾಲಿನಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 2,235 ಸಹ ಶಿಕ್ಷಕರು, 418 ಮುಖ್ಯ ಶಿಕ್ಷಕರು ಹಾಗೂ 115 ದೈಹಿಕ ಶಿಕ್ಷಕರ ಕೊರತೆ ಕಾಡುತ್ತಿದೆ.

233 ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ಹೊಂದಿರುವ ಮೂಡಲಗಿ ವಲಯದಲ್ಲಿ ಅತಿ ಹೆಚ್ಚು ಅಂದ್ರೆ 448 ಸಹ ಶಿಕ್ಷಕರ ಕೊರತೆ ಇದ್ದು, 259 ಸರ್ಕಾರಿ ಪ್ರಾಥಮಿಕ ಶಾಲೆಗಳು ಇರುವ ಹುಕ್ಕೇರಿ ವಲಯದಲ್ಲಿ ಅತಿ ಹೆಚ್ಚು ಅಂದ್ರೆ 74 ಮುಖ್ಯ ಶಿಕ್ಷಕರ ಕೊರತೆ ಇದೆ. ಮೂಡಲಗಿ ವಲಯದಲ್ಲಿ ಅತಿ ಹೆಚ್ಚು ಅಂದ್ರೆ 33 ದೈಹಿಕ ಶಿಕ್ಷಕರ ಕೊರತೆ ಇದೆ.

ಹಾಗೆಯೇ, ಚಿಕ್ಕೋಡಿ ಶೈಕ್ಷಣಿಕ ವಲಯದಲ್ಲಿ 193 ಸರ್ಕಾರಿ ಪ್ರೌಢ ಶಾಲೆಗಳಿದ್ದು, 36 ಸರ್ಕಾರಿ ಪ್ರೌಢಶಾಲೆಗಳು ಮೂಡಲಗಿ ವಲಯದಲ್ಲಿ ಇದ್ದು, ಇಲ್ಲಿಯೇ ಅತಿ ಹೆಚ್ಚು ಅಂದ್ರೆ 120 ಸಹ ಶಿಕ್ಷಕರ ಕೊರತೆ ಇದೆ. ಇನ್ನು ಚಿಕ್ಕೋಡಿ ಹಾಗೂ ಹುಕ್ಕೇರಿ ಕ್ರಮವಾಗಿ 23 ಹಾಗೂ 35 ಸರ್ಕಾರಿ ಪ್ರೌಢ ಶಾಲೆಗಳು ಇದ್ದು, ಈ ಎರಡೂ ವಲಯಗಳಲ್ಲಿ ಅತಿ ಹೆಚ್ಚು ಅಂದ್ರೆ ತಲಾ ವಲಯಗಳಲ್ಲಿ ಐವರು ಮುಖ್ಯ ಶಿಕ್ಷಕರ ಕೊರತೆ ಇದೆ. ದೈಹಿಕ ಶಿಕ್ಷಕರ ಕೊರತೆ ಕೂಡ ಹುಕ್ಕೇರಿ ವಲಯದಲ್ಲಿಯೇ ಅತಿ ಹೆಚ್ಚು ಅಂದ್ರೆ 14 ಶಿಕ್ಷಕರ ಕೊರತೆ ಇದೆ.

ವರ್ಷದಿಂದ ವರ್ಷಕ್ಕೆ ನಿವೃತ್ತಿಯಾಗುವ ಶಿಕ್ಷಕರು ಹೆಚ್ಚುತ್ತಲೇ ಇದ್ದು, ನೇಮಕಾತಿಯ ಪ್ರಮಾಣ ಮಾತ್ರ ಕಡಿಮೆಯಾಗುತ್ತಲೇ ಇದೆ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗಣುವಾಗಿ ಶಿಕ್ಷಕರ ನೇಮಕಾತಿ ಇಲ್ಲದ ಕಾರಣ ಕಲಿಕಾ ಗುಣಮಟ್ಟ ಕುಸಿಯುತ್ತಲಿದ್ದು, ಇದು ಫಲಿತಾಂಶದ ಮೇಲೆ ಪರಿಣಾಮ ಬೀರುತ್ತಿದೆ. ಶಿಕ್ಷಣ ಇಲಾಖೆಯು ಪ್ರತಿ ವರ್ಷ ಅತಿಥಿ ಶಿಕ್ಷಕರನ್ನು ತಾತ್ಕಾಲಿಕವಾಗಿ ನೇಮಕಾತಿಯನ್ನು ಮಾಡಿಕೊಳ್ಳುವ ಮೂಲಕ ಕಣ್ಣೊರೆಸುವ ತಂತ್ರ ಮಾಡುತ್ತಿದೆ. ಶಿಕ್ಷಣ ಗುಣಮಟ್ಟ ಸುಧಾರಣೆಗೆ ಶಾಶ್ವತವಾಗಿ ಶಿಕ್ಷಕರ ನೇಮಕಾತಿ ಮಾಡಿಕೊಂಡಲ್ಲಿ ಮಾತ್ರ ಸರ್ಕಾರಿ ಶಾಲೆಗಳಲ್ಲಿ ಕಲಿಕಾ ಗುಣಮಟ್ಟ ಹೆಚ್ಚಳವಾಗಲು ಸಾಧ್ಯ ಎಂಬುವುದು ಪಾಲಕರ ಒಕ್ಕೋರಲಿನ ಧ್ವನಿಯಾಗಿದೆ.

ಆಟವಾಡುತ್ತಿರುವ ಕರೋಶಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ಮಕ್ಕಳು
ಆಟವಾಡುತ್ತಿರುವ ಕರೋಶಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ಮಕ್ಕಳು

ಇವರೇನಂತಾರೆ?

ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಎಸ್.ಎಸ್.ಎಲ್.ಸಿ ಫಲಿತಾಂಶ ವರ್ಷದಿಂದ ವರ್ಷಕ್ಕೆ ಕುಸಿತವಾಗುತ್ತಿರುವುದಕ್ಕೆ ಪ್ರಮುಖ ಕಾರಣ ಶಿಕ್ಷಕರ ಕೊತೆ. ಕೂಡಲೇ ಶಿಕ್ಷಣ ಇಲಾಖೆಯು ಅತಿಥಿ ಶಿಕ್ಷಕರ ನೇಮಕಾತಿಯ ಕಣ್ಣೊರೆಸುವ ತಂತ್ರ ಮಾಡದೇ ಶಾಶ್ವತವಾಗಿ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಬೇಕಿದೆ.

–ಸಂಜು ಬಡಿಗೇರ ಸಾಮಾಜಿಕ ಕಾರ್ಯಕರ್ತ

* ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಇದೀಗ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಅತಿಥಿ ಶಿಕ್ಷಕರ ತಾತ್ಕಾಲಿಕ ನೇಮಕಾತಿಯನ್ನು ಮಾಡಿಕೊಳ್ಳುವ ಮೂಲಕ ಪ್ರಸಕ್ತ ಸಾಲಿನಲ್ಲಿ ಶಿಕ್ಷಕರ ಕೊರತೆಯನ್ನು ನೀಗಿಸಲು ಪ್ರಯತ್ನಿಸಲಾಗುತ್ತಿದೆ. ಇದು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸಹಕಾರಿಯಾಗಲಿದೆ.

–ಮೋಹನಕುಮಾರ ಹಂಚಾಟೆ ಡಿಡಿಪಿಐ

* ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳಿಗೇನು ಕೊರತೆ ಇಲ್ಲ. ಆದರೆ ಶಿಕ್ಷಕರ ಕೊರತೆ ಮಾತ್ರ ಕಾಡುತ್ತಿದೆ. ಗುಣಮಟ್ಟದ ಶಿಕ್ಷಣಕ್ಕಾಗಿ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕಾಯಂ ನೇಮಕಾತಿ ಅವಶ್ಯಕತೆ ಇದೆ.

–ರಾಚಪ್ಪ ಶಿವಾಪೂರೆ ಪಾಲಕ ಡೊಣವಾಡ

* ‌ಸರ್ಕಾರಿ ಶಾಲೆಗಳಲ್ಲಿ ಅತಿಥಿ ಶಿಕ್ಷಕರನ್ನು ವರ್ಷಕ್ಕೊಮ್ಮೆ ತಾತ್ಕಾಲಿಕ ನೇಮಕಾತಿ ಮಾಡಿಕೊಳ್ಳುವುದು ಸರಿಯಾದ ಕ್ರಮವಲ್ಲ. ಇದರಿಂದ ಶಿಕ್ಷಕರ ಮೇಲೆ ಮಕ್ಕಳಿಗೆ ಪ್ರೀತಿ– ವಾತ್ಸಲ್ಯ ಮೂಡುವುದಿಲ್ಲ. ಮಕ್ಕಳಿಗೂ ಶಿಕ್ಷಕರ ಮೇಲೆ ಭಕ್ತಿ ಭಾವ ಮೂಡುವುದಿಲ್ಲ. ಕಾಯಂ ಶಿಕ್ಷಕರನ್ನು ನೇಮಿಸಿಕೊಳ್ಳಬೇಕು. ಇಲ್ಲವೇ 3ರಿಂದ 5 ವರ್ಷಗಳ ಅವಧಿಗಾದರೂ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಬೇಕು.‌

–ಶಾಂಭವಿ ಅಶ್ವತ್ಥಪೂರ ಸಾಮಾಜಿಕ ಕಾರ್ಯಕರ್ತೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT