ಭಾನುವಾರ, 29 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸೋಲೂರನ್ನು ನೆಲಮಂಗಲಕ್ಕೆ ಸೇರಿಸಲು ಬದ್ಧ: ಡಿ.ಕೆ.ಶಿವಕುಮಾರ್

Published : 29 ಸೆಪ್ಟೆಂಬರ್ 2024, 16:21 IST
Last Updated : 29 ಸೆಪ್ಟೆಂಬರ್ 2024, 16:21 IST
ಫಾಲೋ ಮಾಡಿ
Comments

ನೆಲಮಂಗಲ:‘ರಾಮನಗರ ಜಿಲ್ಲೆಯಲ್ಲಿರುವ ಸೋಲೂರನ್ನು ನೆಲಮಂಗಲ ತಾಲ್ಲೂಕಿಗೆ ಸೇರಿಸುವುದು, ಪಟ್ಟಣಕ್ಕೆ ಮೆಟ್ರೊ ವಿಸ್ತರಿಸುವುದು, ವೃಷಭಾವತಿ ಹಾಗೂ ಎತ್ತಿನಹೊಳೆ ಮೂಲಕ ಶಾಶ್ವತ ನೀರಾವರಿ ಕಲ್ಪಿಸುವುದು– ಈ ಮೂರು ಕೆಲಸಗಳನ್ನು ಮಾಡಿಕೊಡಲು ನಾನು ಬದ್ಧನಿದ್ದೇನೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭರವಸೆ ನೀಡಿದರು.

ಇಲ್ಲಿನ ಒಕ್ಕಲಿಗರ ಕ್ಷೇಮಾಭಿವೃದ್ಧಿ ಟ್ರಸ್ಟ್‌ನ ದಶಮಾನೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ನೆಲಮಂಗಲ ವಿಧಾನಸಭಾ ಕ್ಷೇತ್ರದಲ್ಲಿರುವ ಸೋಲೂರನ್ನು ನೆಲಮಂಗಲ ತಾಲ್ಲೂಕಿಗೆ ಸೇರಿಸುವ ವಿಚಾರದಲ್ಲಿ ಸಂಸದ ಡಾ.ಕೆ.ಸುಧಾಕರ್‌ ರಾಜಕೀಯ ಮಾಡುತ್ತಿದ್ದಾರೆ. ಆ ಪ್ರಯತ್ನದ ಫಲ ಶಾಸಕ ಎನ್‌.ಶ್ರೀನಿವಾಸ್‌ ಅವರಿಗೆ ಸಲ್ಲಬೇಕು‘ ಎಂದು ಹೇಳಿದರು.

’ವಿದ್ಯಾರ್ಥಿಗಳು ಉದ್ಯೋಗಿಗಳಾಗುವ ಬದಲು, ಉದ್ಯೋಗದಾತರಾಗಲು ಪ್ರಯತ್ನಿಸಬೇಕು. ವಿದ್ಯಾರ್ಥಿಗಳು ದೊಡ್ಡದಾಗಿ ಕನಸು ಕಾಣಬೇಕು. ಆ ಕನಸು ನನಸಾಗಿಸಲು ಹಂಬಲಿಸಬೇಕು. ಅದಕ್ಕಾಗಿ ಬದ್ಧತೆ, ಪರಿಶ್ರಮ ಹಾಕಬೇಕು’ ಎಂದು ಕಿವಿ ಮಾತು ಹೇಳಿದರು.

ಶಾಸಕ ಎನ್.‌ಶ್ರೀನಿವಾಸ್‌ ಮಾತನಾಡಿ, ‘ಒಕ್ಕಲಿಗರ ಕ್ಷೇಮಾಭಿವೃದ್ಧಿ ಟ್ರಸ್ಟ್‌ ಭವನ ನಿರ್ಮಾಣಕ್ಕೆ ನಗರದ ವ್ಯಾಪ್ತಿಯಲ್ಲಿ 1 ಎಕರೆ 19 ಗುಂಟೆ ಜಮೀನು ಮಂಜೂರಾತಿ ಪ್ರಕ್ತಿಯೆ ಚಾಲನೆಯಲ್ಲಿದೆ. ಭವನದ ಶಂಕು ಸ್ಥಾಪನೆಗೆ ₹ 1 ಕೊಟಿ ವೈಯಕ್ತಿಕ ನೆರವು ನೀಡಲಾಗುವುದು. ₹400 ಕೋಟಿ ವೆಚ್ಚದಲ್ಲಿ ಕೆ.ಸಿ ವ್ಯಾಲಿ ಮೂಲಕ ತಾಲ್ಲೂಕಿನ 69 ಕೆರೆಗಳನ್ನು ತುಂಬಿಸಲಾಗುವುದು’ ಎಂದು ಭರವಸೆ ನೀಡಿದರು.

ವಿಧಾನ ಪರಿಷತ್‌ ಸದಸ್ಯ ರವಿ ಮಾತನಾಡಿ, ದೊಡ್ಡ ಹಿಡುವಳಿದಾರರಾಗಿದ್ದ ಒಕ್ಕಲಿಗರು ವಿಭಕ್ತ ಕುಟುಂಬಗಳಾಗಿ ಸಣ್ಣ ಹಿಡುವಳಿದಾರರಾಗುತ್ತಿದ್ದಾರೆಂದು ವಿಷಾಧಿಸಿದ ಅವರು, ಯಾವುದೇ ಕಾರಣಕ್ಕೂ ಜಮೀನುಗಳನ್ನು ಮಾರದಂತೆ ಎಚ್ಚರಿಸಿದರು.

ಕಾರ್ಯಕ್ರಮದಲ್ಲಿ, ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಉತ್ತಮ ಅಂಕ ಪಡೆದ 200ಕ್ಕೂ ಹೆಚ್ಚು ಪ್ರತಿಭಾನ್ವಿತರನ್ನು ಪುರಸ್ಕರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT