ಚಿಕ್ಕಮಗಳೂರು: ವಿಧಾನಸಭಾ ಕ್ಷೇತ್ರಗಳನ್ನು ಭೌಗೋಳಿಕ ವಿಸ್ತೀರ್ಣದ ಆಧಾರದ ಮೇಲೆ ಪುನರ್ ವಿಂಗಡಿಸಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಕಲ್ಕುಳಿ ವಿಠಲ ಹೆಗ್ಡೆ ಆಗ್ರಹಿಸಿದರು.

ಶೃಂಗೇರಿಯ ಬಿಜಿಎಸ್ ಸಮುದಾಯ ಭವನದ ಆವರಣದಲ್ಲಿ ಶುಕ್ರವಾರ ಶುರುವಾದ 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷೀಯ ಭಾಷಣ ಮಾಡಿದರು. ‘ವಿಧಾನಸಭಾ ಕ್ಷೇತ್ರಗಳನ್ನು ಜನಸಂಖೆ ಆಧರಿಸಿ ಮಾಡಿರುವುದರಿಂದ ಮಲೆನಾಡಿನ ವಿರಳ ಜನಸಂಖ್ಯೆಯಿಂದಾಗಿ ಶಾಸನ ಸಭೆಗಳಲ್ಲಿ ಈ ಭಾಗಗಳ ಪ್ರತಿನಿಧಿಗಳ ಸಂಖ್ಯೆ ಕಡಿಮೆಯಾಗಿದೆ. ಮಲೆನಾಡಿನ ಸಮಸ್ಯೆಗಳು ವಿಧಾನಸಭೆಗಳಲ್ಲಿ ನಿರೀಕ್ಷೆಯಷ್ಟು ಪ್ರಸ್ತಾಪವಾಗುತ್ತಿಲ್ಲ. ಒಬ್ಬ ಶಾಸಕರ ಕ್ಷೇತ್ರ ವ್ಯಾಪ್ತಿ 100 ಕಿ.ಮೀ. ಇದ್ದರೆ ಮಲೆನಾಡು ಭಾಗ ಯಾವ ರೀತಿ ಅಭಿವೃದ್ಧಿ ಕಾಣಲು ಸಾಧ್ಯ’ ಎಂದು ಪ್ರಶ್ನಿಸಿದರು.

‘ಮಲೆನಾಡಿನ ತಾಲ್ಲೂಕುಗಳನ್ನು ಮಾತ್ರ ಸೇರಿಸಿ, ಜಿಲ್ಲೆಗಳನ್ನು ಪುನರ್ ರೂಪಿಸಬೇಕಾಗಿದೆ. ಇದೆಲ್ಲದಕ್ಕಿಂತ ಮುಖ್ಯವಾಗಿ, ನಮ್ಮ ನೆಲ, ಜಲದ ಮೇಲೆ ನಮಗೇ ಹಕ್ಕು ಬೇಕಾಗಿದೆ. ಈಶಾನ್ಯ ರಾಜ್ಯಗಳಲ್ಲಿ ಇರುವಂತೆ ಮಲೆನಾಡನ್ನು ವಿಶೇಷ ಪ್ರದೇಶವೆಂದು ಘೋಷಿಸಿ, ಮಲೆನಾಡಿನ ಅಭಿವೃದ್ಧಿಗೆ ವಿಶೇಷ ಪ್ರಾಧಿಕಾರವನ್ನು ರಚಿಸಬೇಕು. ಮಲೆನಾಡಿನ ಸರ್ವತೋಮುಖ ಅಭಿವೃದ್ಧಿಯ ನಿಯಂತ್ರಣವನ್ನು ಪ್ರಾಧಿಕಾರಕ್ಕೆ ನೀಡಿ, ಅದಕ್ಕೆ ಸರ್ವಾಧಿಕಾರ ವಹಿಸಬೇಕು’ ಎಂದು ಒತ್ತಾಯಿಸಿದರು.

‘ಬ್ರಿಟಿಷರು ಕಾಡನ್ನು ಎಷ್ಟೇ ದೋಚಿದ್ದರೂ ಕಾಡಿನ ಜನರನ್ನು ಮಾತ್ರ ಒಕ್ಕಲೆಬ್ಬಿಸಿರಲಿಲ್ಲ! ಈಗ ಪರಿಸರದ ಹೆಸರಿನಲ್ಲಿ ಅರಣ್ಯದೊಂದಿಗೆ ಪರಿಸರ ಸ್ನೇಹಿಯಾಗಿ ಬದುಕುವ ಅರಣ್ಯ ನಿವಾಸಿಗಳನ್ನೆ ಹೊರ ಹಾಕುವ ಪರಿಸರ ಸಾಮ್ರಾಜ್ಯಶಾಹಿ ದಾಳಿ ನಡೆಯುತ್ತಿದೆ. ನಮ್ಮ ಮಲೆನಾಡು, ಇಲ್ಲಿಯ ಪರಿಸರ ನಮ್ಮದು, ಇದನ್ನು ನಮ್ಮದಾಗಿಯೇ ಉಳಿಸಿಕೊಳ್ಳಬೇಕಾಗಿದೆ. ಇದಕ್ಕಾಗಿ ಹೊರಗಿನವರು ಪರಿಸರ ಸಂರಕ್ಷಣೆಯ ಹೆಸರಿನಲ್ಲಿ, ನಮ್ಮ ಕಷ್ಟ-ಸುಖ ಕೇಳದೆ, ವಿಶ್ವಾಸಕ್ಕೆ ತೆಗೆದುಕೊಳ್ಳದೆ ನೀಡಿದ ಕಸ್ತೂರಿ ರಂಗನ್ ವರದಿ, ಗಾಡ್ಗೀಳ್ ವರದಿಯನ್ನು ತಿರಸ್ಕರಿಸಬೇಕು’ ಎಂದು ಒತ್ತಾಯಿಸಿದರು.

‘ನಮ್ಮ ಮಲೆನಾಡಿನಲ್ಲಿ ಕಳೆದ ಒಂದು ಶತಮಾನದಲ್ಲಿ ಎಷ್ಟು ಕಾಡು ನಾಶವಾಗಿದೆ, ಇದು ಮಳೆಯ ಮೇಲೆ ಯಾವೆ ಪರಿಣಾಮ ಬೀರಿದೆ ಎಂಬುದನ್ನು ನಾನು ದಾಖಲೆ ಸಹಿತ ವಿವರಿಸಬಲ್ಲೆ. ಆದರೆ ಎಲ್ಲದಕ್ಕೂ ಸ್ಥಳಿಯರೇ ಕಾರಣ ಎಂದು ಒಪ್ಪಲಾರೆ. ಈ ರೀತಿಯ ಆರೋಪ ಮಾಡುತ್ತಾ ಇಲ್ಲಿಯ ನಿವಾಸಿಗಳಿಗೆ ಅಗತ್ಯ ಮೂಲಸೌಕರ್ಯ ಒದಗಿಸದೇ ಇರುವುದು ಘೋರ ಅನ್ಯಾಯ’ ಎಂದರು.

‘ಮಲೆನಾಡು ಎಲ್ಲರಿಗೂ, ಎಲ್ಲದಕ್ಕೂ ಬೇಕು. ಮಲೆನಾಡನ್ನು ಅವಲಂಬಿಸದೇ ಇರುವವರು ಯಾರೂ ಇಲ್ಲ. ಹುಲಿ, ಹಾವು, ಆನೆ, ಮಂಗ ಇತ್ಯಾದಿ ಪ್ರಾಣಿಗಳ ಹೆಸರಿನಲ್ಲಿ ಹೊಸ ಯೋಜನೆಗಳನ್ನು, ಹೊಸ ಕಾಯ್ದೆ-ಕಾನೂನುಗಳನ್ನು ಜಾರಿಗೆ ತಂದು ಮಲೆನಾಡನ್ನು ಜನರಹಿತವಾಗಿ ಮಾಡಲಾಗುತ್ತಿದೆ’ ಎಂದು ಹೇಳಿದರು.

‘ಅರಣ್ಯ ಯೋಜನೆಗಳಿಂದ ಮಲೆನಾಡಿಗರು ಸಂಕಷ್ಟಕ್ಕೆ ಸಿಲುಕಿರುವ ಹೊತ್ತಿನಲ್ಲಿಯೇ ಇಲ್ಲಿಯ ಕೃಷಿ ಕೂಡ ಬಹುದೊಡ್ಡ ಬಿಕ್ಕಟ್ಟನ್ನು ಎದುರಿಸುತ್ತಿದೆ. ಮಲೆನಾಡೆಂದರೆ ಅಡಿಕೆ. ಇಂತಹ ಅಡಿಕೆಗೆ ಮಾರಕ ರೋಗವೊಂದು ತಗುಲಿ ಸುಮಾರು ನೂರು ವರ್ಷಗಳಾಗುತ್ತಿವೆ. ಮಲೆನಾಡಿನಿಂದ ಅಡಿಕೆ ಮಾಯವಾಗುವ ಮುಂಚೆ ಈ ರೋಗಕ್ಕೊಂದು ಪರಿಹಾರ ಕಂಡು ಹಿಡಿಯಲೇಬೇಕು’ ಎಂದು ಮನವಿ ಮಾಡಿದರು.

‘ಗುಟ್ಕಾ ಅಡಿಕೆಯ ಮಾನ ತೆಗೆದಿದೆ. ಈಗ ಅಡಿಕೆಯನ್ನು ಹಾನಿಕಾರಕ ಎಂದು ವ್ಯವಸ್ಥಿತವಾಗಿ ಪ್ರಚಾರ ಮಾಡಿ, ಅದನ್ನು ನಿಷೇಧಿಸುವ ಹುನ್ನಾರ ನಡೆದಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆದಿರುವ ಈ ಬೆಳವಣಿಗೆ ಎದುರಿಸಲು ನಮ್ಮ ಸರ್ಕಾರಗಳು ಸಿದ್ಧತೆಯನ್ನೇ ನಡೆಸಿಲ್ಲ. ವಿಶ್ಚ ಆರೋಗ್ಯ ಸಂಸ್ಥೆ (ಡಬ್ಲುಎಚ್‌ಒ) ಅಂಗ ಸಂಸ್ಥೆಯಾದ ಐಎಆರ್‌ಸಿ (ಇಂಟರ್ ನ್ಯಾಷನಲ್ ಏಜೆನ್ಸಿ ಫಾರ್ ಕ್ಯಾನ್ಸರ್ ರಿಸರ್ಚ್) ನೀಡಿರುವ ವರದಿ ಅಡಿಕೆಗೆ ಮರಣಶಾಸನವಾಗಿ ಪರಿಣಮಿಸಿದೆ. ಇದನ್ನು ಎದುರಿಸಲು ಸಂಶೋಧನೆಗಳು ನಡೆಯಲೇಬೇಕು’ ಎಂದರು.

‘ಸಾಹಿತ್ಯ ಒಣ ಹರಟೆ, ಪುಂಡರ ಗೋಷ್ಠಿಯಲ್ಲ. ಅದು ಪ್ರತಿಪಾದಿಸುವುದೇನೆಂದರೆ ಮನುಷ್ಯನನ್ನು ಮನುಷ್ಯನನ್ನಾಗಿ ಕಾಣುವುದು, ಮನಸ್ಸನ್ನು ಅರಳಿಸುವುದು. ಅವನಲ್ಲಿ ಹುದುಗಿರುವ ದುರಾಸೆ, ಕ್ರೌರ್ಯ, ಅಸೂಯೆ, ಆಕ್ರಮಣ ಪ್ರವೃತ್ತಿಗಳನ್ನು ತೊಡೆದು ಉದಾತ್ತತೆಯಿಂದ, ಸುಂದರ ಸುಖಮಯ ನೆಮ್ಮದಿಯನ್ನು ಅಭಿವ್ಯಕ್ತಿಸುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.