ಭಾನುವಾರ, 29 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

₹ 35 ಲಕ್ಷ ಆನ್‌ಲೈನ್‌ ವಂಚನೆ: ದೂರು ದಾಖಲು

ಅಂತರರಾಷ್ಟ್ರೀಯ ಡ್ರಗ್ಸ್ ಕಳ್ಳಸಾಗಣೆ ಪ್ರಕರಣದಲ್ಲಿ ಸಿಲುಕಿಸುವ ಬೆದರಿಕೆ
Published : 29 ಸೆಪ್ಟೆಂಬರ್ 2024, 7:19 IST
Last Updated : 29 ಸೆಪ್ಟೆಂಬರ್ 2024, 7:19 IST
ಫಾಲೋ ಮಾಡಿ
Comments

ಮಂಗಳೂರು: ಸೈಬರ್‌ ಕ್ರೈಂ ವಿಭಾಗದ ಅಧಿಕಾರಿ ಎಂದು ಪರಿಚಯಿಕೊಂಡ ವ್ಯಕ್ತಿಯೊಬ್ಬರು ಮಾದಕ ಪದಾರ್ಥದ ಅಂತರರಾಷ್ಟ್ರೀಯ ಕಳ್ಳಸಾಗಣೆ ಪ್ರಕರಣದಲ್ಲಿ ಸಿಲುಕಿಸುವುದಾಗಿ ವಿಡಿಯೊ ಕಾಲ್‌ ಮೂಲಕ ಬೆದರಿಕೆ ಒಡ್ಡಿ ₹ 35 ಲಕ್ಷ ಹಣ ಪಡೆದು ವಂಚಿಸಿದ ಬಗ್ಗೆ ಇಲ್ಲಿನ ಸೈಬರ್‌ ಅಪರಾಧ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

‘ಇದೇ 24ರಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಕರೆ ಮಾಡಿದ ವ್ಯಕ್ತಿ ತಮ್ಮನ್ನು ಡಿಎಚ್‌ಎಲ್‌ ಕೋರಿಯರ್ ಸಂಸ್ಥೆಯ ಕಾರ್ತಿಕ್ ಶರ್ಮ ಎಂದು ಪರಿಚಯಿಸಿಕೊಂಡರು. ಮುಂಬೈನಿಂದ ತೈವಾನ್‌ಗೆ ನೀವು ಕಳುಹಿಸಿದ್ದ ಮಾದಕ ಪದಾರ್ಥಗಳಿರುವ ಕೋರಿಯರ್‌ ಅನ್ನು ಮುಂಬೈ ಅಪರಾಧ ಪತ್ತೆದಳ ವಿಭಾಗದ ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ತಿಳಿಸಿದರು. ಈ ಬಗ್ಗೆ ಸೈಬರ್ ಅಪರಾಧ ಪತ್ತೆ ವಿಭಾಗದ ಪೊಲೀಸರ ಜೊತೆ ಮಾತನಾಡಬೇಕು ಎಂದು ಹೇಳಿ ಪೋನ್‌ ನಂಬರ್‌ ಒಂದನ್ನು ನೀಡಿದ್ದರು ಎಂದು ದೂರುದಾರರು ತಿಳಿಸಿದ್ದಾರೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

‘ಆ ಫೋನ್‌ ನಂಬರ್‌ಗೆ ಕರೆ ಮಾಡಿದ್ದೆ. ಕರೆ ಸ್ವೀಕರಿಸಿದ್ದ ವ್ಯಕ್ತಿ ತನ್ನನ್ನು ಮುಂಬೈ ಸೈಬರ್ ಅಪರಾಧ ಪತ್ತೆ ದಳದ ಅಧಿಕಾರಿ ಪ್ರಾಣೇಶ್ ಗುಪ್ತಾ ಎಂದು ಪರಿಚಯಿಸಿಕೊಂಡ. ನಂತರ ವಿಡಿಯೊ ಕಾಲ್‌ನಲ್ಲಿ ಮಾತನಾಡಿದ್ದ ಆ ವ್ಯಕ್ತಿ, ‘ಅಂತರಾಷ್ಟ್ರೀಯ ಡ್ರಗ್ಸ್ ಪ್ರಕರಣದಲ್ಲಿ ನಿಮ್ಮ ಹೆಸರು ನಮೂದಾಗಿದೆ. ನಿಮ್ಮನ್ನು ಬಂಧಿಸಲಿದ್ದೇವೆ’ ಎಂದು ಬೆದರಿಸಿದ್ದರು. ನಂತರ ಹಣ ಕೊಟ್ಟರೆ ಪ್ರಕರಣ ಕೈಬಿಡುವ ಭರವಸೆ ನೀಡಿದ್ದರು. ಅದರಂತೆ ನಾನು ₹ 35 ಲಕ್ಷವನ್ನು ಅವರು ಸೂಚಿಸಿದ ಬ್ಯಾಂಕ್ ಖಾತೆಗೆ ಪಾವತಿಸಿರುವುದಾಗಿ ದೂರುದಾರರು ತಿಳಿಸಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT