ಸೋಂಕಿತರಾಗಿದ್ದರೂ ಶವ ಸಾಗಿಸುತ್ತಿದ್ದ ನರೇಂದ್ರಕುಮಾರ್

ದಾವಣಗೆರೆ: ದಾವಣಗೆರೆಯ ಚಿಗಟೇರಿ ಜಿಲ್ಲಾ ಆಸ್ಪತ್ರೆಯ ಆಂಬುಲೆನ್ಸ್ ಚಾಲಕ ಕೆ.ಎನ್. ನರೇಂದ್ರಕುಮಾರ್ ಕೊರೊನಾ ಸೋಂಕಿಗೆ ಒಳಗಾಗಿದ್ದರೂ ವಿಶ್ರಾಂತಿ ಪಡೆಯದೇ ಕೋವಿಡ್ನಿಂದ ಮೃತರ ಶವಗಳನ್ನು ಆಸ್ಪತ್ರೆಯಿಂದ ಸ್ಮಶಾನಕ್ಕೆ ಸಾಗಿಸಿ ನಿಷ್ಠೆ ತೋರಿದ್ದಾರೆ.

ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿಯಲ್ಲಿ ಚಾಲಕರಾಗಿ 19 ವರ್ಷಗಳ ಕಾಲ ಕೆಲಸ ಮಾಡಿದ್ದ ನರೇಂದ್ರಕುಮಾರ್ ಕಳೆದ ವರ್ಷವಷ್ಟೇ ಜಿಲ್ಲಾ ಆಸ್ಪತ್ರೆಯ ಆಂಬುಲೆನ್ಸ್ ಚಾಲಕರಾಗಿ ವರ್ಗಾವಣೆಗೊಂಡಿದ್ದರು. ಆರಂಭದ ದಿನಗಳಲ್ಲಿ 190 ರೋಗಿಗಳನ್ನು ಕೋವಿಡ್ ಆಸ್ಪತ್ರೆಗೆ ಕರೆತಂದಿದ್ದಾರೆ.

ಮೇ 1ರಂದು ಜಾಲಿನಗರದ ವೃದ್ಧ ಕೋವಿಡ್ನಿಂದ ಮೃತಪಟ್ಟಾಗ ಜಿಲ್ಲೆಯಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು. ಮರಣೋತ್ತರ ಪರೀಕ್ಷೆ ನಡೆಸುವ ಡಾ. ಮೋಹನ್ ಅವರು ಧೈರ್ಯ ತುಂಬಿದ್ದರಿಂದ ನರೇಂದ್ರ ಅವರು ಆಂಬುಲೆನ್ಸ್ನಲ್ಲಿ ಶವವನ್ನು ಸಾಗಿಸಿ ಅಂತ್ಯಸಂಸ್ಕಾರ ನೆರವೇರಿಸಲು ಕೈಜೋಡಿಸಿದ್ದರು. ಆ ಬಳಿಕ ನರೇಂದ್ರ ಅವರನ್ನು ಸೋಂಕಿತ ಶವಗಳನ್ನು ಸಾಗಿಸುವ ಕೆಲಸಕ್ಕೇ ನಿಯೋಜಿಸಲಾಯಿತು.

ಜಿಲ್ಲಾ ಆಸ್ಪತ್ರೆಯಿಂದ ಇದುವರೆಗೆ 200ಕ್ಕೂ ಹೆಚ್ಚು ಶವಗಳನ್ನು ದಾವಣಗೆರೆ, ಹರಿಹರ, ಹೊನ್ನಾಳಿ, ಜಗಳೂರು, ಹರಪನಹಳ್ಳಿ, ಚನ್ನಗಿರಿ ತಾಲ್ಲೂಕಿನ ಹಳ್ಳಿಗಳ ಸ್ಮಶಾನಕ್ಕೆ ತಲುಪಿಸಿದ್ದಾರೆ. ಕೆಲ ಬಾರಿ ಶವಗಳನ್ನು ಎತ್ತಿಕೊಂಡು ಹೋಗಿ ಗುಂಡಿಗೂ ಹಾಕಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗಿದ್ದ ಕಾಲದಲ್ಲಿ ಆಂಬುಲೆನ್ಸ್ನಲ್ಲಿ ಒಂದೇ ಬಾರಿಗೆ ಆರು ಶವಗಳನ್ನು ಹಾಕಿಕೊಂಡು ಹೋಗಿರುವುದೂ ಇದೆ.

ಆಗಸ್ಟ್ನಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ರೋಗ ಲಕ್ಷಣ ಇಲ್ಲದಿದ್ದರಿಂದ ಆ ಸಮಯದಲ್ಲೂ ವಿಶ್ರಾಂತಿ ಪಡೆಯದೇ ಶವ ಸಾಗಿಸಿ ಯೋಧರಂತೆ ಕೆಲಸ ಮಾಡಿದ್ದಾರೆ. 44 ವರ್ಷದ ನರೇಂದ್ರ ನಾಲ್ಕು ತಿಂಗಳ ಕಾಲ ಒಂದು ದಿನವೂ ರಜೆ ತೆಗೆದುಕೊಳ್ಳದೇ ದಿನದಲ್ಲಿ ಎಂಟು–ಹತ್ತು ಗಂಟೆಗಳ ಕಾಲ ಪಿಪಿಇ ಕಿಟ್ ಹಾಕಿಕೊಂಡು ಕೆಲಸ ಮಾಡಿದ್ದಾರೆ.

‘ಆರಂಭದಲ್ಲಿ ನನಗೂ ಭಯವಾಗುತ್ತಿತ್ತು. ಎಷ್ಟೋ ದಿನ ಶವಗಳನ್ನು ಸ್ಮಶಾನಕ್ಕೆ ತೆಗೆದುಕೊಂಡು ಹೋಗಿ ಅಂತ್ಯಕ್ರಿಯೆ ಮಾಡಿ ಕೊಠಡಿಗೆ ಬರುವಾಗ ರಾತ್ರಿ 2, 3 ಗಂಟೆಯಾಗುತ್ತಿತ್ತು. ಸಂಬಂಧಿಕರು ಅಂತ್ಯಕ್ರಿಯೆ ಮಾಡಲಾಗದ ಸಂದರ್ಭದಲ್ಲಿ ನಾವು ನೆರವು ನೀಡಿದ್ದೇವೆ. ಸಂಕಷ್ಟದಲ್ಲಿ ಮಾಡಿದ ಕೆಲಸ ತೃಪ್ತಿ ತಂದಿದೆ’ ಎಂದು ನಗೆ ಬೀರುತ್ತಾರೆ ನರೇಂದ್ರಕುಮಾರ್.

ಶವಸಂಸ್ಕಾರದಲ್ಲಿ ಧನ್ಯತೆ ಕಂಡ ಸಾಜಿದ್

ದಾವಣಗೆರೆ: ಚಿಕ್ಕಂದಿನಲ್ಲಿಯೇ ಅಮ್ಮ ಮಾಡುತ್ತಿದ್ದ ಸಮಾಜ ಸೇವೆ ಬಾಲಕನಲ್ಲಿ ತಾನೂ ಸಮಾಜಕ್ಕೆ ನೆರವಾಗಬೇಕೆಂಬ ಕನಸು ಚಿಗುರೊಡೆಯುವಂತೆ ಮಾಡಿಸಿತು.

ಆ ಪ್ರೇರಣೆಯೇ ಸಾಜಿದ್ ಅಹಮ್ಮದ್ ಅವರನ್ನು ಇಂದು ಸಮಾಜ ಸೇವಕ ಎಂದು ಜನರು ಗುರುತಿಸುವಂತೆ ಮಾಡಿದೆ. ಇಲ್ಲಿನ ಆಜಾದ್ನಗರದ 1ನೇ ಮುಖ್ಯರಸ್ತೆಯ ವಾಸಿ ಕೆ. ಅಮೀರ್ ಜಾನ್, ಪರ್ವೀನ್ ಬಾನು ದಂಪತಿ ಪುತ್ರ ಸಾಜಿದ್ಗೆ ವೈದ್ಯಕೀಯ ನೆರವು, ರಕ್ತದಾನಕ್ಕಾಗಿ ದಿನಕ್ಕೆ ಹತ್ತಾರು ಕರೆಗಳು ಬರುತ್ತವೆ.

ಕೊರೊನಾ ಸಂಕಷ್ಟದಲ್ಲಿ ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಕೊರೊನಾ ವಾರಿಯರ್ನಂತೆ ಕೆಲಸ ಮಾಡಿದ ಅವರು, ಕೋವಿಡ್ ಕಾಲದಲ್ಲಿ ಉಚಿತವಾಗಿ ರೋಗ ನಿರೋಧಕ ಶಕ್ತಿ ಔಷಧದ ಕಿಟ್ ವಿತರಿಸಿದರು. ಕೋವಿಡ್ನಿಂದ ಮೃತಪಟ್ಟವರ ಬಳಿ ಮಕ್ಕಳೇ ಬರಲು ಹೆದರುತ್ತಿದ್ದ ಸಮಯದಲ್ಲಿ ಹಲವು ಶವಗಳಿಗೆ ಅವರವರ ಸಂಪ್ರದಾಯದಂತೆ ಅಂತಿಮ ವಿಧಿ ನೆರವೇರಿಸಿದವರು. ಜಾತಿ, ಧರ್ಮ ಭೇದವಿಲ್ಲದೆ 100ಕ್ಕೂ ಅಧಿಕ ಜನರಿಗೆ ಅಂತ್ಯಸಂಸ್ಕಾರ ಮಾಡಿದ್ದಾರೆ.

ಮಧ್ಯರಾತ್ರಿಯಲ್ಲೂ ಕೋವಿಡ್ ರೋಗಿಗಳಿಗೆ ಆಹಾರ ಪೂರೈಸುತ್ತಿದ್ದ ಅವರು, ದಾನಿಗಳಿಂದ ಪಡೆದ ಹಾಗೂ ತಮ್ಮಲ್ಲಿದ್ದ ಆಂಬುಲೆನ್ಸ್ ಮೂಲಕ ಹತ್ತಾರು ಕೋವಿಡ್ ರೋಗಿಗಳನ್ನು ಆಸ್ಪತ್ರೆಗೆ, ಆಸ್ಪತ್ರೆಯಿಂದ ಗುಣಮುಖರಾದವರನ್ನು ಮನೆಗೆ ತಲುಪಿಸಿ ನೆರವಾದವರು.

ಕೊರೊನಾದಲ್ಲಿ ಪ್ರತಿದಿನ 200ಕ್ಕೂ ಅಧಿಕ ಕೋವಿಡ್ ರೋಗಿಗಳಿಗೆ ಉಚಿತ ಊಟದ ವ್ಯವಸ್ಥೆ ಮಾಡಿದ್ದರು. ಹಳೆ ದಾವಣಗೆರೆ ಭಾಗದ ಬಡವರಿಗೆ ಆಹಾರದ ಕಿಟ್ ನೀಡಿ ಸಹಾಯಹಸ್ತ ಚಾಚಿದ್ದಾರೆ. 2005ರಿಂದ ಇಲ್ಲಿಯವರೆಗೆ ಸಮಾಜಸೇವೆಯಲ್ಲಿ ತೊಡಗಿರುವ ಅವರು ಸಮಾನ ಮನಸ್ಕರ ಗೆಳೆಯರ ಜೊತೆ ಸೇರಿ ಎನ್ಜಿಒ ‘ಸೋಷಿಯಲ್ ಫ್ರೆಂಡ್ಸ್ ಕಲ್ಚರಲ್ ಲಿಂಕ್’ (SFCL) ಕೂಡ ನಡೆಸುತ್ತಿದ್ದಾರೆ.

ರಸಪ್ರಶ್ನೆ ಸ್ಪರ್ಧೆ ಆಯೋಜಿಸುವ ಮೂಲಕ ಜಿಲ್ಲೆಯ ಪ್ರತಿಭಾವಂತ ಮಕ್ಕಳನ್ನು ಪ್ರೋತ್ಸಾಹಿಸುತ್ತಿದ್ದಾರೆ.

ಹಲವು ವರ್ಷಗಳ ಹಿಂದೆ ಚಿಟಗೇರಿ ಆಸ್ಪತ್ರೆಯಲ್ಲಿ ನವಜಾತ ಶಿಶು ಕಾಣೆಯಾಗಿದ್ದ ಸಂದರ್ಭದಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೆ ಆಸ್ಪತ್ರೆ ಎದುರಿನ ರಸ್ತೆಯಲ್ಲೇ ನಮಾಜ್ ಮಾಡಿ ರೋಜಾ ಬಿಟ್ಟಿದ್ದು, ಕೋವಿಡ್ಗೆ ತುತ್ತಾದ ಮಗುವೊಂದಕ್ಕೆ ಮಧ್ಯರಾತ್ರಿ ಅಲೆದಾಡಿ ಹಾಲು ತಂದಾಗ ತಾಯಿಯಲ್ಲಿ ಕಂಡ ಧನ್ಯತಾಭಾವ ಮರೆಯಲಾಗದ ಕ್ಷಣ ಎಂದು ನೆನಪಿಸಿಕೊಳ್ಳುತ್ತಾರೆ ಅವರು.

ಪ್ರಾಣ ಪಣಕ್ಕಿಟ್ಟ ಗೋಪಾಲಕೃಷ್ಣ

ದಾವಣಗೆರೆ: ಕೋವಿಡ್ ರೋಗಿಗಳ ಸಂಪರ್ಕಕ್ಕೆ ಬರುವವರಲ್ಲಿ ಪ್ರಥಮ ಸಾಲಿನಲ್ಲಿ ನಿಲ್ಲುವ ‘ಪ್ರಯೋಗಾಲಯ ತಂತ್ರಜ್ಞ’ರ ಕೆಲಸವನ್ನು ಶ್ರದ್ಧೆಯಿಂದ ಮಾಡಿ ಪ್ರಶಂಸೆ ಗಳಿಸಿರುವವರು ಜೆ.ವಿ. ಗೋಪಾಲಕೃಷ್ಣ.

ಬಳ್ಳಾರಿಯವರಾದ ಗೋಪಾಲಕೃಷ್ಣ ಅವರ ಕುಟುಂಬದವರು ದಾವಣಗೆರೆಯಲ್ಲಿ ನೆಲೆನಿಂತಿದ್ದು 1980ರಲ್ಲಿ. ಆನೆಕೊಂಡದಲ್ಲಿರುವ ಎಸ್ಎಎಸ್ಬಿಎಚ್ ಕಾಲೇಜಿನ ಪ್ರಥಮ ವಿದ್ಯಾರ್ಥಿಯಾಗಿರುವ ಅವರು ‘ಡಿಪ್ಲೊಮಾ ಇನ್ ಮೆಡಿಕಲ್ ಲ್ಯಾಬೊರೇಟರಿ ಟೆಕ್ನಾಲಜಿ’ ಕೋರ್ಸ್ ಮುಗಿಸಿ 2002ರಲ್ಲಿ ಜಿಲ್ಲಾ ಸರ್ವೇಕ್ಷಣಾ ತಂಡಕ್ಕೆ ಸೇರಿದರು.

ಜನರ ಗಂಟಲು ದ್ರವ ಸಂಗ್ರಹ, ಮೃತಪಟ್ಟವರ ಮೂಗಿನ ದ್ರವ ಸಂಗ್ರಹ ಹಾಗೂ ಕೊರೊನಾ ಸೋಂಕಿನಿಂದ ಮೃತಪಟ್ಟವರ ದೇಹಗಳನ್ನು ಪ್ಯಾಕ್ ಮಾಡುವ ಸವಾಲಿನ ಕೆಲಸವನ್ನು ಹಿಂಜರಿಕೆಯಿಲ್ಲದೇ ಮಾಡಿದ ಹೆಗ್ಗಳಿಕೆ ಇವರದ್ದು. ಮಾರ್ಚ್ 4ರಿಂದ ಕೋವಿಡ್ ಕೆಲಸಗಳು ಆರಂಭವಾಗಿದ್ದು, ಇಂದಿನವರೆಗೂ ಜಿಲ್ಲಾ ಸರ್ವೇಕ್ಷಣಾ ತಂಡದಲ್ಲಿರುವ 6 ತಂತ್ರಜ್ಞರು ರಜೆ ತೆಗೆದುಕೊಂಡಿಲ್ಲ. ಹಗಲು–ರಾತ್ರಿ ಎನ್ನದೇ ಪ್ರಾಣವನ್ನೇ ಪಣಕ್ಕಿಟ್ಟು ಗಂಟಲು ದ್ರವ ಸಂಗ್ರಹಿಸಿದ್ದಾರೆ. ಈಗ ಕೋವಿಡ್ ಪ್ರಕರಣಗಳು ಕಡಿಮೆಯಾಗಿದ್ದರೂ ಅವರ ಗಂಟಲುದ್ರವ ಸಂಗ್ರಹ ಕಾರ್ಯ ಮುಂದುವರಿದಿದೆ.

ಈ ಮೊದಲು ಎಚ್1ಎನ್1 ಸೋಂಕಿನ ಪತ್ತೆಗಾಗಿ ಗಂಟಲು ದ್ರವ ಸಂಗ್ರಹಿಸುವ ಕೆಲಸ ಮಾಡಿದ್ದ ಗೋಪಾಲಕೃಷ್ಣ ಅವರಿಗೆ ‘ಕೋವಿಡ್’ ಭಯ ಹುಟ್ಟಿಸಲಿಲ್ಲ. ಆದರೆ ಎಚ್1ಎನ್1ನಲ್ಲಿ ರೋಗಿಗಳ ಗಂಟಲು ದ್ರವ ಮಾತ್ರ ಸಂಗ್ರಹಿಸಬೇಕಿತ್ತು. ಈಗ ಬಹಳ ದೀರ್ಘ ಸಮಯದವರೆಗೆ ರೋಗಿಗಳಷ್ಟೇ ಅಲ್ಲದೇ ಸಾವಿರಾರು ಜನರ ಗಂಟಲು ದ್ರವ ಸಂಗ್ರಹಿಸಬೇಕಾದ ಕಾರಣ ಪ್ರಾಣ, ಶ್ರಮ, ತಾಳ್ಮೆ ಪಣಕ್ಕಿಡುವಂತಾಗಿದೆ. ಆದರೂ ಜನಸೇವೆ ಮಾಡುವ ಅವಕಾಶ ಸಿಕ್ಕಿತು ಎಂಬುದೇ ಅವರ ಖುಷಿ.

ತಾಯಿಪ್ರೇಮ ಮೆರೆದ ಭಾಗ್ಯಮ್ಮ

ದಾವಣಗೆರೆ: ಆಸ್ಪತ್ರೆ ವಾರ್ಡ್ಗಳಲ್ಲಿ ಸ್ವಚ್ಛತಾ ಕೆಲಸದ ಜತೆಗೆ ಲೆಕ್ಕವಿಲ್ಲದಷ್ಟು ಕೊರೊನಾ ರೋಗಿಗಳ ಆರೈಕೆಯನ್ನೂ ಮಾಡುವ ಮೂಲಕ ತಾಯಿಪ್ರೇಮ ಮೆರೆದವರು ‘ಡಿ’ ಗ್ರೂಪ್ ನೌಕರರಾದ ಭಾಗ್ಯಮ್ಮ .

ಪತಿ ತೀರಿಕೊಂಡ ನಂತರ 20 ವರ್ಷಗಳಿಂದ ಸಿ.ಜೆ. ಆಸ್ಪತ್ರೆಯಲ್ಲಿ ಸ್ವಚ್ಛತಾ ಕೆಲಸ ನಿರ್ವಹಿಸುತ್ತಾ ಬಂದಿರುವ ಭಾಗ್ಯಮ್ಮ ಅವರಿಗೆ ಮೂವರು ಹೆಣ್ಣುಮಕ್ಕಳು. ಇಬ್ಬರು ಹೆಣ್ಣುಮಕ್ಕಳಿಗೆ ಮದುವೆಯಾಗಿದ್ದು, ಒಬ್ಬ ಮಗಳು, ಮಗನೊಂದಿಗೆ ಬೂದಾಳ್ ರಸ್ತೆಯಲ್ಲಿ ವಾಸವಿದ್ದಾರೆ.

ಕೊರೊನಾ ಆರಂಭದಲ್ಲಿ ಕೋವಿಡ್ ವಾರ್ಡ್ಗಳಲ್ಲೇ ಕರ್ತವ್ಯ. ಕಸ ಗುಡಿಸುವುದು, ನೆಲ ಒರೆಸುವುದು, ಶೌಚಾಲಯಗಳನ್ನು ಸ್ವಚ್ಛಗೊಳಿಸುವುದು, ತುಂಬಾ ಸುಸ್ತಾಗಿದ್ದ ರೋಗಿಗಳ ಮುಖ ತೊಳೆಸುವುದು, ಊಟ ಮಾಡಿಸುವುದು, ಕೆಲ ರೋಗಿಗಳು ಹಾಸಿಗೆಯಲ್ಲೇ ಮಲ, ಮೂತ್ರ ಮಾಡಿಕೊಂಡರೆ ಸ್ವಚ್ಛ ಮಾಡುವುದು, ಸಿ.ಟಿ. ಸ್ಕ್ಯಾನ್, ಎಕ್ಸ್ರೇಗೆ ಕರೆದುಕೊಂಡು ಹೋಗುವುದು... ಇಂತಹ ಕಾರ್ಯಗಳ ಮೂಲಕ ವೈದ್ಯರನ್ನೂ ಮೀರಿಸುವ ಸೇವೆ ಸಲ್ಲಿಸಿದ್ದಾರೆ.

ಒಂದು ವಾರ ಕರ್ತವ್ಯ ನಿರ್ವಹಿಸಿದರೆ, ಮತ್ತೊಂದು ವಾರ ಕ್ವಾರಂಟೈನ್ನಲ್ಲಿರಬೇಕು. ಮೂರು ತಿಂಗಳುಗಳ ಕಾಲ ಮನೆ, ಮಕ್ಕಳತ್ತ ಮುಖ ಮಾಡಲೂ ಸಾಧ್ಯವಾಗಿರಲಿಲ್ಲ. ನಂತರ ಮಕ್ಕಳ ಕರೆಗೆ ಓಗೊಟ್ಟು ಕ್ವಾರಂಟೈನ್ನಲ್ಲಿರುವಾಗ ಮನೆಗೆ ಹೋದ ಮರುದಿನವೇ ‘ನಿಮಗೆ ಪಾಸಿಟಿವ್ ಬಂದಿದ್ದು, ಕೂಡಲೇ ದಾಖಲಾಗಿ’ ಎಂದು ಆಸ್ಪತ್ರೆಯಿಂದ ಕರೆ ಬಂತು. ಮಕ್ಕಳು, ಮನೆಯ ಅಕ್ಕಪಕ್ಕದವರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಿದ್ದರಿಂದ ದೂಷಣೆಯನ್ನೂ ಎದುರಿಸಬೇಕಾಯಿತು. ಈಗ ದೂಷಿಸಿದ್ದವರೇ ಭಾಗ್ಯಮ್ಮ ಅವರನ್ನು ಗೌರವದಿಂದ ಕಾಣುತ್ತಿದ್ದಾರೆ.

‘ಪಿಪಿಇ ಕಿಟ್ ಧರಿಸಿ ಬೆಳಿಗ್ಗೆ 8ಕ್ಕೆ ಕೆಲಸ ಆರಂಭಿಸಿದರೆ ಮಧ್ಯಾಹ್ನ 2ರ ವರೆಗೂ ತೆಗೆಯುತ್ತಿರಲಿಲ್ಲ. ಹನಿ ನೀರನ್ನೂ ಕುಡಿಯುತ್ತಿರಲಿಲ್ಲ. ಜೀವದ ಆಸೆಯನ್ನೇ ಬಿಟ್ಟು ಕರ್ತವ್ಯ ನಿರ್ವಹಿಸಿದೆ. ಜೈಲಿನಲ್ಲಿ ಕೈದಿಗಳನ್ನು ದೂರದಿಂದ ಮಾತನಾಡಿಸುವಂತೆ ನಾನು ಉಳಿದುಕೊಂಡಿದ್ದ ಲಾಡ್ಜ್ ರಸ್ತೆ ಒಂದು ಬದಿ, ಮತ್ತೊಂದು ಬದಿಯಲ್ಲಿ ಮಕ್ಕಳು ನಿಂತು ಮಾತನಾಡುತ್ತಿದ್ದೆವು. ಆ ವೇಳೆ ಮಕ್ಕಳಿಗೆ ತಿಂಡಿ ನೀಡಿ ಉಪಚರಿಸಿದ ರೇವಣ್ಣ ಅವರ ಸಹಾಯ ಮರೆಯಲಾಗಲ್ಲ’ ಎನ್ನುತ್ತಾರೆ ಭಾಗ್ಯಮ್ಮ.

ಮಗಳ ಮದುವೆಗಿಂತ ಕರ್ತವ್ಯವೇ ಮೇಲು ಎಂದ ರತ್ನಮ್ಮ

ದಾವಣಗೆರೆ: ‘ಪ್ರಾಥಮಿಕ, ದ್ವಿತೀಯ ಸಂಪರ್ಕಿತರನ್ನು ಪತ್ತೆ ಹಚ್ಚಲು ಮನೆ ಮನೆಗೆ ಭೇಟಿ ನೀಡುವಾಗ ‘ಎಲ್ಲ ಸೇರ್ಕೊಂಡು ದುಡ್ಡು ಮಾಡಲು ಹೀಗೆ ಮಾಡ್ತಿದ್ದೀರ. ನಾವು ಆರೋಗ್ಯವಾಗಿದ್ದರೂ ಆಸ್ಪತ್ರೆಗೆ ಕರೆದುಕೊಂಡು ಹೋಗ್ತೀರ’ ಎಂದು ದೂರುತ್ತಿದ್ದರು. ಸಾರ್ವಜನಿಕರ ಬಳಿ ಬೈಸಿಕೊಂಡೇ ಕರ್ತವ್ಯ ನಿರ್ವಹಿಸಿದೆವು’ ಎನ್ನುವಾಗ ರತ್ನಮ್ಮ ಅವರ ಧ್ವನಿಯಲ್ಲಿ ಸಾರ್ಥಕತೆಯ ಭಾವವೊಂದು ಇಣುಕುತಿತ್ತು.

24 ವರ್ಷಗಳಿಂದ ಕಿರಿಯ ಆರೋಗ್ಯ ಸಹಾಯಕಿಯಾಗಿ ಕಾರ್ಯ ನಿರ್ವಹಿಸುತ್ತಿರುವ ವಿ.ರತ್ನಮ್ಮ ಲಾಕ್ಡೌನ್ನಲ್ಲಿ ಕೊರೊನಾ ವಾರಿಯರ್ ಆಗಿ ಕಾರ್ಯನಿರ್ವಹಿಸಿದ ಸಾಧಕರು.

ಕೊಂಡಜ್ಜಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೃತ್ತಿ ಜೀವನ ಆರಂಭಿಸಿದ ರತ್ನಮ್ಮ 2016ರಿಂದ ದಾವಣಗೆರೆಯ ಎಸ್ಎಂಕೆ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತಿ, ಪುತ್ರಿ, ಪುತ್ರ ಇರುವ ತುಂಬು ಕುಟುಂಬ ಅವರದ್ದು.

ಕೊರೊನಾ ಆರಂಭದಲ್ಲಿ ದಾವಣಗೆರೆಯ ಜಾಲಿ ನಗರ ಕೊರೊನಾ ಹಾಟ್ಸ್ಪಾಟ್ ಆಗಿ ಗುರುತಿಸಿಕೊಂಡಿತ್ತು. ಆ ನಗರದಲ್ಲೇ ರತ್ನಮ್ಮ ಕರ್ತವ್ಯ ನಿರ್ವಹಣೆ ಮುಂದುವರಿದಿತ್ತು. 3600 ಮನೆಗಳಿರುವ ಜಾಲಿ ನಗರದಲ್ಲಿ ತಂಡಗಳನ್ನು ರಚಿಸಿಕೊಂಡು ನಿತ್ಯ ಮನೆಗಳಿಗೆ ಭೇಟಿ ನೀಡಿ ನಿವಾಸಿಗಳ ಆರೋಗ್ಯ ಪರೀಕ್ಷಿಸುತ್ತಿದ್ದರು. ಹಜ್ ಯಾತ್ರೆಗೆ ಹೋಗಿದ್ದ ಜಿಲ್ಲೆಯ 42 ಜನರಲ್ಲಿ 22 ಜನ ಜಾಲಿ ನಗರದವರೇ ಆಗಿದ್ದರು. ಒಂದು ತಿಂಗಳು ಅವರೆಲ್ಲರ ಮನೆಗಳಿಗೆ ಬೆಳಿಗ್ಗೆ, ಸಂಜೆ ಭೇಟಿ ನೀಡಿ ತಪಾಸಣೆ ಮಾಡಿದರು. ಸಾರ್ವಜನಿಕರಿಂದ ದೂಷಿಸಿಕೊಂಡರೂ ಮುಗುಳ್ನಗುತ್ತಲೇ ಎಲ್ಲರ ಕಾಳಜಿ ವಹಿಸಿದರು.

ಅವರ ಕರ್ತವ್ಯ ಪ್ರಜ್ಞೆ ಎಷ್ಟಿತ್ತೆಂದರೆ ಮೇ 27ರಂದು ನಡೆದ ಮಗಳ ಮದುವೆಯಲ್ಲೂ ಪಾಲ್ಗೊಳ್ಳಲಿಲ್ಲ. ‘ಲಾಕ್ಡೌನ್ಗೂ ಮುನ್ನ ಮಗಳ ಮದುವೆ ನಿಶ್ಚಯವಾಗಿದ್ದರಿಂದ ಮುಂದೂಡಲಾಗಲಿಲ್ಲ. ಆಗ ನನಗಿದ್ದದ್ದು ಎರಡೇ ಆಯ್ಕೆ. ಕರ್ತವ್ಯ ಅಥವಾ ಮಗಳ ಮದುವೆ. ಸೀಲ್ಡೌನ್ ಪ್ರದೇಶಗಳ ನಿವಾಸಿಗಳನ್ನು ನೋಡಿದರೆ ಕರುಳು ಹಿಂಡುತ್ತಿತ್ತು. ಅವರಿಗೆ ಸೌಲಭ್ಯ ಒದಗಿಸುವುದು ನನ್ನ ಆದ್ಯತೆಯಾಗಿತ್ತು. ಹೀಗಾಗಿ, ಕರ್ತವ್ಯವೇ ಮೇಲಾಯಿತು’ ಎಂದರು ರತ್ನಮ್ಮ.

‘ಸಂಕಷ್ಟದ ಸಮಯದಲ್ಲೂ ಎದೆಗುಂದದೆ, ಕುಟುಂಬದವರಿಗೆ ಸಮಾಧಾನ ಹೇಳುತ್ತ ಕಾರ್ಯ ನಿರ್ವಹಿಸಿದ್ದೇವೆ. ನನ್ನೊಂದಿಗೆ ಕೆಲಸ ಮಾಡಿದ ಶ್ರುತಿ, ತಿಪ್ಪಮ್ಮ, ಟಿ.ಕೆ.ಶೋಭಾ, ಮಂಜುಳಾ, ಮೀನಾಕ್ಷಿ ಅವರ ತ್ಯಾಗವೂ ಅನನ್ಯ’ ಎಂದು ನೆನೆಯುತ್ತಾರೆ ರತ್ನಮ್ಮ.

ಸೋಂಕಿತರ ಪಕ್ಕಾ ಲೆಕ್ಕ ಕೊಟ್ಟ ನವೀನ್

ದಾವಣಗೆರೆ: ಕೊರೊನಾ ಸೋಂಕಿತ ಒಂದು ಪ್ರಕರಣ ಪತ್ತೆಯಾದರೆ ಕನಿಷ್ಠ 20 ಮಂದಿ ಪ್ರಥಮ, ದ್ವಿತೀಯ ಸಂಪರ್ಕಿರು ಇರುತ್ತಿದ್ದರು. ಅವರನ್ನು ತಂದು ಲಾಡ್ಜ್ಗಳ ಕೊಠಡಿಗಳಲ್ಲಿ ಇರಿಸಲಾಗುತ್ತಿತ್ತು. ಪ್ರತಿ ಕೊಠಡಿಯಲ್ಲಿ ಒಬ್ಬರನ್ನೇ ಇಡಲಾಗುತ್ತಿತ್ತು. 25 ಲಾಡ್ಜ್ಗಳು ಇದಕ್ಕೆ ಬಳಕೆಯಾಗುತ್ತಿದ್ದವು. ಯಾವ ಕೊಠಡಿಯಲ್ಲಿ ಯಾರಿದ್ದಾರೆ? ಅವರು ಯಾರ ಸಂಪರ್ಕಿತರು? ಎಂಬ ಎಲ್ಲ ಮಾಹಿತಿಗಳನ್ನು ನಾಲಗೆಯ ತುದಿಯಲ್ಲೇ ಇಟ್ಟುಕೊಂಡು ಮಾಹಿತಿ ನೀಡುತ್ತಿದ್ದವರು ಜಿಲ್ಲಾ ಕೀಟಜನ್ಯ ರೋಗಗಳ ನಿಯಂತ್ರಣಾಧಿಕಾರಿ ಕಚೇರಿಯಲ್ಲಿ ಆರೋಗ್ಯ ಸಹಾಯಕರಾಗಿರುವ ನವೀನ್.

ಜಿಲ್ಲೆಯಲ್ಲಿ ಎಷ್ಟು ಕೊರೊನಾ ಪ್ರಕರಣಗಳು ಬರಬಹುದು? ಬಂದರೆ ಅದಕ್ಕೆ ಸಿಬ್ಬಂದಿ ಎಷ್ಟು ಬೇಕಾಗಬಹುದು ಎಂದೆಲ್ಲ ಪೂರ್ವಯೋಜನೆ ತಯಾರಿಸುವ ಜವಾಬ್ದಾರಿಯನ್ನು ಡಾ. ನಟರಾಜ್, ಡಾ. ಗಂಗಾಧರ್ ಅವರಿಗೆ ನೀಡಲಾಗಿತ್ತು. ಅವರಿಗೆ ಸಹಾಯಕರಾಗಿ ನವೀನ್ ಇದ್ದರು. ಹಾಗಾಗಿ ಜಿಲ್ಲೆಯಲ್ಲಿ ಕೊರೊನಾ ಸೋಂಕು ಪತ್ತೆಯಾಗುವ ಮೊದಲೇ ವಾರಿಯರ್ ಆಗಿ ಕೆಲಸ ಮಾಡಿದ ಬೆರಳೆಣಿಕೆಯ ಮಂದಿಯಲ್ಲಿ ನವೀನ್ ಒಬ್ಬರು.

ಸೋಂಕಿತರನ್ನು ಆಸ್ಪತ್ರೆಗೆ ಕರೆ ತರುವುದು, ಶಂಕಿತರನ್ನು ಲಾಡ್ಜ್ಗೆ ಕರೆ ತರುವುದು, ಯಾವ ಲಾಡ್ಜ್ನಲ್ಲಿ ಯಾವ ಕೊಠಡಿ ಖಾಲಿ ಇದೆ ಎಂದು ನೋಡಿ ವ್ಯವಸ್ಥೆ ಮಾಡುವುದು. ಊಟ ನೀಡುವುದು, ಮಕ್ಕಳಿಗೆ ಆಟದ ಸಾಮಾನು, ಬಿಸ್ಕತ್ ನೀಡುವುದರಿಂದ ಹಿಡಿದು ಎಲ್ಲವನ್ನೂ ನಿರ್ವಹಿಸುವ ತಂಡದಲ್ಲಿ ಕೆಲಸ ಮಾಡಿದರು. ಬೆಳಿಗ್ಗೆ 7ರಿಂದ ರಾತ್ರಿ 12ರ ವರೆಗೆ ನಿತ್ಯ ಕೆಲಸ. ಒಂದು ದಿನ ರಾತ್ರಿ ಎರಡೂವರೆಗೆ ಊಟ ಸಿಗದೇ ಹಾಲು ಕುಡಿದು ಲಾಡ್ಜ್ನಲ್ಲಿ ಮಲಗಿದ್ದರು.

ಚಿತ್ರದುರ್ಗದ ಹೊಳಲ್ಕೆರೆಯವರಾದ ನವೀನ್ 12 ವರ್ಷ ಚಿತ್ರದುರ್ಗದಲ್ಲಿ ಕೆಲಸ ಮಾಡಿ 2019ರ ಜೂನ್ನಲ್ಲಿ ದಾವಣಗೆರೆಗೆ ವರ್ಗಾವಣೆಗೊಂಡವರು. ಪತ್ನಿ ಶೋಭಾ, ಐದು ವರ್ಷದ ಮಗಳು, ಎರಡು ವರ್ಷದ ಮಗ, ತಾಯಿ ಎಲ್ಲರನ್ನೂ ಊರಲ್ಲಿ ಬಿಟ್ಟು ಐದು ತಿಂಗಳು ಲಾಡ್ಜ್ನಲ್ಲೇ ಉಳಿದು ಕೆಲಸ ಮಾಡಿದರು.

‘ಮನೆಗೆ ಫೋನ್ ಮಾಡಿದಾಗ ಮಕ್ಕಳು ಕರೆವಾಗ ಮಾತ್ರ ಮನಸ್ಸಿಗೆ ನೋವಾಗುತ್ತಿತ್ತು. ಆದರೂ ಕರ್ತ್ಯವ್ಯದ ಕಾರಣ ನೋವು ನುಂಗಿ ಕೆಲಸ ಮಾಡಿದೆ’ ಎಂದು ನೆನಪಿಸಿಕೊಳ್ಳುತ್ತಾರೆ ನವೀನ್.

ವರ್ಷದ ಮಗುವನ್ನು ಬಿಟ್ಟು ಕೆಲಸ ಮಾಡಿದ ಅರುಣಾಕುಮಾರಿ

ದಾವಣಗೆರೆ: ಮಗನಿಗೆ ಒಂದು ವರ್ಷ ದಾಟಿದೆಯಷ್ಟೆ. ಅಷ್ಟು ಹೊತ್ತಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತು. ಆಗ ಮಗನನ್ನೇ ಮಂಗಳೂರಿನಲ್ಲಿರುವ ಅಕ್ಕನ ಮನೆಯಲ್ಲಿ ಬಿಟ್ಟು ಬಂದು ನಿರಂತರ 9 ತಿಂಗಳುಗಳ ಕಾಲ ಮಗುವಿನಿಂದ ದೂರ ಇದ್ದು, ಕೊರೊನಾ ಸೋಂಕಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯೆಯ ಹೆಸರು ಡಾ. ಅರುಣಾಕುಮಾರಿ. ಈಗಲೂ ಮಗುವಿನಿಂದ ದೂರವೇ ಇದ್ದಾರೆ.

ಶಿವಮೊಗ್ಗದವರಾದ ಡಾ. ಅರುಣಾಕುಮಾರಿ ಚಿಗಟೇರಿ ಆಸ್ಪತ್ರೆಯಲ್ಲಿ ಫಿಶಿಷಿಯನ್. ಪತಿ ಡಾ. ಗಿರೀಶ್ ಇಲ್ಲೇ ವೈದ್ಯರು. ಕೊರೊನಾ ಸೋಂಕಿಗೆ ನಿರಂತರ ಚಿಕಿತ್ಸೆ ನೀಡಿದ ಹಲವು ವೈದ್ಯರಲ್ಲಿ ಈ ದಂಪತಿಯೂ ಸೇರಿದ್ದಾರೆ.

ಹೂವಿನ ಹಡಗಲಿಯ ಒಂದು ಕುಟುಂಬಕ್ಕೆ ಕೊರೊನಾ ಬಂದಿತ್ತು. ಆ ಕುಟುಂಬ ಚಿಗಟೇರಿ ಆಸ್ಪತ್ರೆಯಲ್ಲಿ ದಾಖಲಾಗಿತ್ತು. ಅದರಲ್ಲಿ ಒಂದು ಮಗು ಕೂಡ ಇತ್ತು. ಆ ಮಗುವಿನ ಮೊದಲ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಲು ಹೆತ್ತವರು ತಿಂಗಳುಗಟ್ಟಲೆ ಯೋಚಿಸಿದ್ದರು. ಆದರೆ ಹುಟ್ಟುಹಬ್ಬಕ್ಕೆ ಸರಿಯಾಗಿ ಆಸ್ಪತ್ರೆ ಸೇರಿದ್ದರು. ಆಗ ಡಾ. ಅರುಣಾಕುಮಾರಿ ಮತ್ತು ಸಿಬ್ಬಂದಿ ಆಸ್ಪತ್ರೆಯಲ್ಲಿಯೇ ಆ ಮಗುವಿನ ಹುಟ್ಟುಹಬ್ಬ ಆಚರಿಸಿ ಹೆತ್ತವರ ನೋವು ದೂರ ಮಾಡಿದ್ದರು.

ಪತಿಗೇ ಕೊರೊನಾ ಬಂದಾಗ ಐದು ದಿನ ಅರುಣಾಕುಮಾರಿ ಕೂಡ ಹೋಂ ಐಸೊಲೇಶನ್ನಲ್ಲಿದ್ದರು. ಬಳಿಕ ಪರೀಕ್ಷೆ ಮಾಡಿಸಿದಾಗ ಅರುಣಾಕುಮಾರಿಗೆ ನೆಗೆಟಿವ್ ಎಂದು ವರದಿ ಬಂದಿದ್ದರಿಂದ ಮರುದಿನದಿಂದಲೇ ಮತ್ತೆ ಆಸ್ಪತ್ರೆಯಲ್ಲಿ ಕೆಲಸ ಮಾಡಿದ್ದರು. ಅತ್ತ ಮನೆಯಲ್ಲಿ ಪ್ರತ್ಯೇಕ ಕೊಠಡಿಯಲ್ಲಿರುವ ಪತಿ ಆರೈಕೆಯನ್ನೂ ಮಾಡಿಕೊಂಡು ಕರ್ತವ್ಯ ನಿರ್ವಹಿಸಿದ್ದರು.

ದಿನಕ್ಕೆ 6 ಗಂಟೆ ಪಿಪಿಇ ಕಿಟ್ ಹಾಕಿಕೊಂಡೇ ಕರ್ತವ್ಯ ನಿರ್ವಹಿಸಬೇಕು. ಬಳಿಕ ಇನ್ನೊಂದು ಶಿಫ್ಟ್ನವರು ಬರುತ್ತಾರೆ. ಕೊರೊನಾ ಒಂದೇ ಸಮನೆ ಏರಿಕೆಯಾದಾಗ ಅರುಣಾಕುಮಾರಿ ಪತಿ ಜತೆಗೇ ಆಸ್ಪತ್ರೆಗೆ ಹೋಗಿ ಎರಡು ಶಿಫ್ಟ್ ಮುಗಿಸಿಕೊಂಡು ಬರುತ್ತಿದ್ದರು. 12 ಗಂಟೆಗಳ ಕಾಲ ಕೆಲಸ.

‘ಆರೋಗ್ಯ ಇಲಾಖೆಯ ‘ಡಿ’ ಗ್ರೂಪ್ ನೌಕರರು, ಶುಷ್ರೂಷಕರು, ವೈದ್ಯರು ಎಲ್ಲರೂ ಕೊರೊನಾದಲ್ಲಿ ವೈಯಕ್ತಿಕ ಬದುಕನ್ನು ತ್ಯಾಗ ಮಾಡಿ ಕೆಲಸ ಮಾಡಿದ್ದಾರೆ. ಹಾಗಾಗಿ ನನ್ನ ಹೆಚ್ಚುಗಾರಿಕೆ ಏನಿಲ್ಲ’ ಎಂದು ವಿನಮ್ರವಾಗಿ ಹೇಳಿಕೊಳ್ಳುತ್ತಾರೆ ಅರುಣಾಕುಮಾರಿ.

ನಿರ್ಗತಿಕರ ಪಾಲಿನ ಆಶಾಕಿರಣ ‘ಸ್ಫೂರ್ತಿ ಸೇವಾ ಟ್ರಸ್ಟ್’

ದಾವಣಗೆರೆ: ಇಲ್ಲೊಂದು ಸಂಸ್ಥೆ ಸಿಕ್ಕ ಅವಕಾಶವನ್ನು ಬಳಸಿಕೊಂಡು ಬಡವರ ನಿರ್ಗತಿಕರ ಹಸಿವು ನೀಗಿಸುವ ಕೆಲಸ ಮಾಡುತ್ತಿದೆ.

ಇಲ್ಲಿನ ಎಂಸಿಸಿ ‘ಎ’ ಬ್ಲಾಕ್ನಲ್ಲಿರುವ ಸ್ಫೂರ್ತಿ ಸೇವಾ ಟ್ರಸ್ಟ್ ದಾನಿಗಳ ನೆರವಿನಿಂದ 15 ವರ್ಷಗಳಿಂದ ದಾವಣಗೆರೆಯ ಅನಾಥಾಲಯಗಳು, ವೃದ್ಧಾಶ್ರಮಗಳಲ್ಲಿನ ಬಡ, ಅನಾಥ ಮಕ್ಕಳು, ವೃದ್ಧರು, ನಿರ್ಗತಿಕರಿಗೆ ಅನ್ನ ನೀಡುವ ಮೂಲಕ ಅವರ ಪಾಲಿನ ಆಶಾಕಿರಣವಾಗಿದೆ.

20 ವರ್ಷಗಳ ಹಿಂದೆ ರಾಜಕೀಯ ಪಕ್ಷವೊಂದರಲ್ಲಿ ಸಕ್ರಿಯರಾಗಿ ಗುರುತಿಸಿಕೊಂಡಿದ್ದ ಬಿ.ಸತ್ಯನಾರಾಯಣ ಮೂರ್ತಿ ಅವರಿಗೆ ಕ್ರಮೇಣ ರಾಜಕೀಯದಲ್ಲಿ ನಿರಾಸಕ್ತಿಯಾಯಿತು. ಸಮಾಜ ಸೇವೆ ಮಾಡಬೇಕು ಎಂಬ ತುಡಿತವೇ ಈ ಸ್ಫೂರ್ತಿ ಸೇವಾ ಟ್ರಸ್ಟ್ ಜನ್ಮ ತಾಳಲು ಕಾರಣವಾಯಿತು. ತುಮಕೂರಿನ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರೇ ಸಂಸ್ಥೆಗೆ ಪ್ರೇರಣೆ. 2005ರಲ್ಲಿ ಸ್ವಾಮೀಜಿಗಳೇ ಸಂಸ್ಥೆಯನ್ನು ಉದ್ಘಾಟಿಸಿದ್ದರು.

ಎಲ್ಲಿ ಆಹಾರ ಉಳಿಯುತ್ತದೆಯೋ ಅದನ್ನು ಹಸಿದವರಿಗೆ ಹಂಚುವ ಕೆಲಸವನ್ನು ಸಂಸ್ಥೆ ಮಾಡುತ್ತಿದೆ. ಹೆಚ್ಚಿನ ಆಹಾರ ಉಳಿಯುವುದು ಕಲ್ಯಾಣ ಮಂಟಪಗಳಲ್ಲಿ. ನಗರದ ಎಲ್ಲಾ ಕಲ್ಯಾಣ ಮಂಟಪಗಳಲ್ಲಿಯೂ ಸಂಸ್ಥೆಯ ದೂರವಾಣಿ ಸಂಖ್ಯೆ ಇದೆ. ಆಹಾರ ಮಿಕ್ಕ ಕೂಡಲೇ ಸಂಸ್ಥೆಗೆ ಕರೆ ಬರುತ್ತದೆ. ನಗರದಲ್ಲಿ 30ಕ್ಕೂ ಹೆಚ್ಚು ಅನಾಥಾಲಯಗಳು ಇದ್ದು, ಎಲ್ಲಿ ಅಗತ್ಯವಿದೆಯೇ ಅಲ್ಲಿಗೆ ಆದ್ಯತೆಯ ಮೇರೆಗೆ ಆಹಾರ ಪೂರೈಸಲಾಗುತ್ತದೆ. ಈವರೆಗೆ 25 ಲಕ್ಷಕ್ಕೂ ಹೆಚ್ಚು ಜನರಿಗೆ ಆಹಾರ ಪೂರೈಕೆ ಮಾಡಿದ ಶ್ರೇಯಸ್ಸು ಈ ಸಂಸ್ಥೆಯದು.

ಲಾಕ್ಡೌನ್ನಲ್ಲಿ ಪ್ರತಿ ದಿನ 2500 ಮಂದಿಗೆ ಅನ್ನ:

ಲಾಕ್ಡೌನ್ ವೇಳೆ ಸಿ.ಜಿ. ಆಸ್ಪತ್ರೆಯ ರೋಗಿಗಳು, ಸಂಬಂಧಿಕರು, ಪೌರಕಾರ್ಮಿಕರು, ಆರೋಗ್ಯ ಸಿಬ್ಬಂದಿ ಸೇರಿ ಪ್ರತಿದಿನ 2000ದಿಂದ 2500 ಸಾವಿರ ಮಂದಿಗೆ ಅನ್ನ ನೀಡಿದೆ.

ಸತ್ಯನಾರಾಯಣ ಮೂರ್ತಿ ತಮ್ಮದೇ ಆದ ಮತ್ತೊಂದು ಸಂಸ್ಥೆ ವಿಕಾಸ ತರಂಗಿಣಿ ಟ್ರಸ್ಟ್ ಮೂಲಕ ಪಾಲಿಕೆ ಎದುರು ಬೇಸಿಗೆ ಸಂದರ್ಭದಲ್ಲಿ ಉಚಿತ ಮಜ್ಜಿಗೆ ವಿತರಿಸುವುದನ್ನೂ ಮಾಡುತ್ತಿದ್ದಾರೆ. ಸೇವಾ ಕಾರ್ಯಗಳಲ್ಲಿ ಅವರ ಪುತ್ರ ಶ್ರೀನಿವಾಸ್ ಕೈಜೋಡಿಸಿದ್ದಾರೆ.

ರೋಗಿಗಳ ಪತ್ತೆಹಚ್ಚಿದ ಚಾಣಾಕ್ಷ ಅಜ್ಜಯ್ಯ

ದಾವಣಗೆರೆ: ಜಿಲ್ಲೆಯಲ್ಲಿ ಆರಂಭದಲ್ಲಿ ಕೋವಿಡ್ ಪತ್ತೆಯಾದಾಗ ಕೋವಿಡ್ ಸೋಂಕಿತರನ್ನಷ್ಟೇ ಅಲ್ಲ, ಪ್ರಾಥಮಿಕ ಸಂಪರ್ಕ, ದ್ವಿತೀಯ ಸಂಪರ್ಕಕ್ಕೆ ಬಂದ ವ್ಯಕ್ತಿಗಳನ್ನೆಲ್ಲಾ ಪತ್ತೆಹಚ್ಚಬೇಕಿತ್ತು. ಆದರೆ ಆ ವ್ಯಕ್ತಿಗಳು ಮೊಬೈಲ್ ಸ್ವಿಚ್ ಆಫ್ ಮಾಡಿಕೊಳ್ಳುತ್ತಿದ್ದರು. ಅವರನ್ನು ಹುಡುಕುವುದು ಹರಸಾಹಸ. ಆ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದವರು ಎಸ್ಪಿ ಕಚೇರಿಯ ಜಿಲ್ಲಾ ವಿಶೇಷ ವಿಭಾಗದ ಎಆರ್ಎಸ್ಐ (ಸಹಾಯಕ ಪೊಲೀಸ್ ಉಪ ನಿರೀಕ್ಷಕ) ಬಿ.ಕೆ.ಅಜ್ಜಯ್ಯ.

ಕೊರೊನಾ ಕಾಣಿಸಿಕೊಂಡ ಮೂರು ತಿಂಗಳು ಸಂಪರ್ಕಿತರ ಲೊಕೇಶನ್ ಹುಡುಕಬೇಕಿತ್ತು. ಮೊಬೈಲ್ ಮೂಲಕವೇ ಅವರ ಮನವೊಲಿಸುವಲ್ಲಿ ಅಜ್ಜಯ್ಯ ನೇತೃತ್ವದ 12 ಜನರ ತಂಡ ಸಫಲವಾಯಿತು. ಹೊರ ಜಿಲ್ಲೆಯವರಿಗೂ ಪತ್ರ ಬರೆದು ಆಸ್ಪತ್ರೆಗೆ ದಾಖಲಾಗುವಂತೆ ಸೂಚಿಸಿದರು. ಸೀಲ್ಡೌನ್ ಮಾಡಿದ್ದರೂ ಸೋಂಕಿತರು ಬ್ಯಾರಿಕೇಡ್ ಹಾರಿ ಹೋಗುತ್ತಿದ್ದರು. ಅವರು ಹೋಗದಂತೆ ಎಚ್ಚರವಹಿಸುವುದು ಪ್ರಮುಖವಾಗಿತ್ತು. ಮಾರುಕಟ್ಟೆ, ಜನನಿಬಿಡ ಪ್ರದೇಶಗಳಲ್ಲಿ ಅಂತರ ಕಾಯಲು, ಮಾಸ್ಕ್ ಧರಿಸಲು ಜಾಗೃತಿ ಮೂಡಿಸಿ, ನಿಯಮಗಳನ್ನು ಪಾಲಿಸದವರಿಗೆ ದಂಡ ಹಾಕುವಂತೆ ನಿರ್ದೇಶನ ನೀಡುತ್ತಿದ್ದುದು ಇದೇ ಅಜ್ಜಯ್ಯ.

ಆರಂಭದಲ್ಲಿ ಫೋಟೊಗ್ರಾಫರ್ ಆಗಿ ಕರ್ತವ್ಯ ನಿರ್ವಹಿಸಿದ್ದ ಅಜ್ಜಯ್ಯ, 24 ವರ್ಷಗಳ ಸೇವೆಯಲ್ಲಿ ಮಾಹಿತಿ ಸಂಗ್ರಹಣೆಯ ಜೊತೆಯಲ್ಲೇ ಆರೋಪಿಗಳನ್ನು ವೈಜ್ಞಾನಿಕ ರೀತಿಯಲ್ಲಿ ಪತ್ತೆಹಚ್ಚಲು ನೆರವಾಗಿದ್ದಾರೆ. ಗಣ್ಯವ್ಯಕ್ತಿಗಳ ಬಂದೋಬಸ್ತ್ ಸೇರಿ ಸಮಾಜದ ಮುಖಂಡರೊಡನೆ ಸಮನ್ವಯ ಸಾಧಿಸಿ ಹಬ್ಬಗಳು ನಿರ್ವಿಘ್ನವಾಗಿ ನಡೆಯುವಂತೆ ನೋಡಿಕೊಂಡಿದ್ದಾರೆ.

1999ರಲ್ಲಿ ದೇವರ ಬೆಳೆಕೆರೆ ಡ್ಯಾಂನಲ್ಲಿ ಸಂಭವಿಸಿದ ಅಪಘಾತದಲ್ಲಿ ಬಸ್ ಮೇಲೆತ್ತುವ ಕಾರ್ಯಾಚರಣೆ ವಿಳಂಬವಾದಾಗ ಜನರು ಆಕ್ರೋಶಗೊಂಡು ಕಲ್ಲು ತೂರಾಟ ನಡೆಸಿದ್ದರು. ವಿಡಿಯೊ ಚಿತ್ರೀಕರಣ ಮಾಡಿ ಸ್ಥಳದಿಂದ ಜನರನ್ನು ಚದುರಿಸಿ ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದರು. ಇದು ಮೇಲಧಿಕಾರಿಗಳ ಪ್ರಶಂಸೆಗೂ ಕಾರಣವಾಗಿತ್ತು.

2004ನೇ ಸಾಲಿನಲ್ಲಿ ರಾಜ್ಯಮಟ್ಟದ ಅಖಿಲ ಭಾರತ ಕರ್ತವ್ಯಕೂಟದ ವಿಡಿಯೊಗ್ರಾಫರ್ ಸ್ಪರ್ಧೆಯಲ್ಲಿ ರಾಜ್ಯಕ್ಕೆ ಪ್ರಥಮ, ಅದೇ ವರ್ಷ ಆಂಧ್ರಪ್ರದೇಶದಲ್ಲಿ ನಡೆದ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದಿದ್ದಾರೆ. 6 ಬಾರಿ ಅಖಿಲ ಭಾರತ ಪೊಲೀಸ್ ಕರ್ತವ್ಯಕೂಟದಲ್ಲಿ ಭಾಗವಹಿಸಿದ್ದಾರೆ.

[ಸಾಧಕರ ಬಗ್ಗೆ ಬರೆದವರು: ವಿನಾಯಕ ಭಟ್, ಡಿ.ಕೆ. ಬಸವರಾಜು, ಬಾಲಕೃಷ್ಣ ಪಿ.ಎಚ್. ಚಂದ್ರಶೇಖರ ಆರ್. ಸ್ಮಿತಾ ಶಿರೂರ, ಸುಮಾ ಬಿ., ಅನಿತಾ ಎಚ್.]

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.