ಮೈಸೂರು: ಇಲ್ಲಿನ ಮಾನಸ ಗಂಗೋತ್ರಿಯಲ್ಲಿರುವ ಪಾರಂಪರಿಕ ಕಟ್ಟಡವಾದ ‘ಜಯಲಕ್ಷ್ಮಿವಿಲಾಸ ಅರಮನೆ’ಯ ಸಂರಕ್ಷಣೆಗೆ ಅಮೆರಿಕ ಸರ್ಕಾರ ಮತ್ತು ಮುಂಬೈನ ಹರೀಶ್–ಬೀನಾ ಶಾ ಫೌಂಡೇಶನ್ ಆರ್ಥಿಕ ಬೆಂಬಲ ಘೋಷಿಸಿವೆ.

‘ಅಮೆರಿಕ ಸರ್ಕಾರದ ಎಎಫ್‌ಸಿಪಿ (ಅಂಬಾಸಿಡರ್ಸ್ ಫಂಡ್ ಫಾರ್ ಕಲ್ಚರಲ್ ಪ್ರಿಸರ್ವೇಷನ್) ಮೂಲಕ ₹ 2.4 ಕೋಟಿ ಧನಸಹಾಯ ನೀಡಲಾಗಿದೆ. ಅರಮನೆಯ ಜಾನಪದ ವಸ್ತುಸಂಗ್ರಹಾಲಯ ಕಟ್ಟಡದ ಪಶ್ಚಿಮ ಭಾಗ ಮತ್ತು ಅಲ್ಲಿ ರಾಜ್ಯದಾದ್ಯಂತ ಸಂಗ್ರಹಿಸಲಾಗಿರುವ 6,500ಕ್ಕೂ ಹೆಚ್ಚು ಕಲಾಕೃತಿಗಳ ಸಂರಕ್ಷಣೆಗೆ ಅನುದಾನ ಬಳಸಲಾಗುತ್ತದೆ’ ಎಂದು ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಪತ್ರಿಕಾಗೋಷ್ಠಿಯಲ್ಲಿ ಗುರುವಾರ ತಿಳಿಸಿದರು.

‘ವಿಶ್ವವಿದ್ಯಾಲಯವು ‘ಡೆಕ್ಕನ್ ಹೆರಿಟೇಜ್ ಫೌಂಡೇಶನ್’ (ಡಿಎಚ್‌ಎಫ್) ಸಹಭಾಗಿತ್ವದಲ್ಲಿ ಪುನಶ್ಚೇತನ ಹಾಗೂ ಸಂರಕ್ಷಣಾ ಪ್ರಯತ್ನಗಳನ್ನು ಮಾಡುತ್ತಿದೆ. ಒಂದು ವರ್ಷದಿಂದ ಪ್ರಾರಂಭವಾಗಿರುವ ಕಾಮಗಾರಿಯು 2025ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಅಲ್ಲಿರುವ ಕಲಾಕೃತಿಗಳ ಡಿಜಿಟಲೀಕರಣವೂ ನಡೆಯಲಿದೆ. ಕಟ್ಟಡವು ತೀವ್ರ ಶಿಥಿಲಗೊಂಡಿದ್ದು, ಅದನ್ನು ಉಳಿಸಿಕೊಳ್ಳುವುದು ತುರ್ತಾಗಿ ಆಗಬೇಕಿರುವುದರಿಂದ ಸಹಭಾಗಿತ್ವದ ಮೂಲಕ ಸಂರಕ್ಷಣಾ ಕೆಲಸ ಕೈಗೊಳ್ಳಲಾಗಿದೆ. ಅಮೆರಿಕ ರಾಯಭಾರಿ ಕಚೇರಿಗೆ ನಾವು ಪ್ರಸ್ತಾವ ಸಲ್ಲಿಸಿದ್ದೆವು’ ಎಂದು ಮಾಹಿತಿ ನೀಡಿದರು.

‘ಸಂರಕ್ಷಣೆ ಕಾರ್ಯ ಕೈಗೊಳ್ಳಲು ತಜ್ಞರ ಸಮಿತಿ ರಚಿಸಲಾಗಿದೆ. ವಿವಿಯ ಅಧಿಕಾರಿಗಳೊಂದಿಗೆ ಪರಿಣತರಾದ ಜೆ.ರಂಗನಾಥ್, ಅರುಣ್ ಮೆನನ್, ಶ್ರೀಕುಮಾರ್ ಮೆನನ್, ಸ್ಕಾಟ್ ಇ. ಹ್ಯಾಟ್‌ಮನ್, ಪ್ರೊ.ನರೇಂದ್ರ, ಶರತ್ ಚಂದ್ರ ಮೊದಲಾದವರು ಇದ್ದಾರೆ. ಅರಮನೆಯಲ್ಲಿ ಒಟ್ಟು 14ಸಾವಿರಕ್ಕೂ ಹೆಚ್ಚು ಕಲಾಕೃತಿಗಳಿವೆ. ಅವುಗಳನ್ನೆಲ್ಲಾ ಸಂರಕ್ಷಿಸಲಾಗುವುದು’ ಎಂದು ಮಾಹಿತಿ ನೀಡಿದರು.

‘ಯುಎಸ್ ಕಾನ್ಸುಲೇಟ್ ಜನರಲ್ ಚೆನ್ನೈ ಇಲ್ಲಿನ ಒಆರ್‌ಐ (ಒರಿಯೆಂಟಲ್ ರಿಸರ್ಚ್ ಇನ್‌ಸ್ಟಿಟ್ಯೂಟ್) ಸಂರಕ್ಷಣೆ ಹಾಗೂ ಅದರ 40ಸಾವಿರ ಪುರಾತನ ತಾಳೆಗರಿಗಳು, ಹಸ್ತಪ್ರತಿಗಳು ಮತ್ತು ಪುಸ್ತಕಗಳ ಸಂಗ್ರಹಕ್ಕೆ ಅನುದಾನ ನೀಡಿತ್ತು’ ಎಂದು ತಿಳಿಸಿದರು.

ಸ್ನೇಹ–ಗೌರವಕ್ಕೆ ಸಾಕ್ಷಿ

ಅನುದಾನ ಘೋಷಿಸಿದ ಚೆನ್ನೈನ ಯುಎಸ್ ಕಾನ್ಸಲ್ ಜನರಲ್‌ನ ಕ್ರಿಸ್ಟೋಫರ್ ಡಬ್ಲ್ಯು. ಹಾಡ್ಜಸ್ ಮಾತನಾಡಿ, ‘ಜಯಲಕ್ಷ್ಮಿವಿಲಾಸ ಅರಮನೆಯ ಜಾನಪದ ಮ್ಯೂಸಿಯಂ ಸಂರಕ್ಷಣಾ ಯೋಜನೆಗೆ ನೀಡಿರುವ ಬೆಂಬಲವು ಭಾರತದ ಜನರು ಹಾಗೂ ಅದರ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಕುರಿತಂತೆ ಅಮೆರಿಕವು ಹೊಂದಿರುವ ಸ್ನೇಹ ಮತ್ತು ಗೌರವಕ್ಕೆ ಸಾಕ್ಷಿಯಾಗಿದೆ. ಕಾಮಗಾರಿ ಪೂರ್ಣಗೊಂಡ ನಂತರ ಮುಂದಿನ ಪೀಳಿಗೆಯ ಭಾರತೀಯರು ಹಾಗೂ ಅಂತರರಾಷ್ಟ್ರೀಯ ಪ್ರವಾಸಿಗರನ್ನು ಆಕರ್ಷಿಸಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಮೈಸೂರು ವಿಶ್ವವಿದ್ಯಾಲಯಕ್ಕೆ ಯುಎಸ್ ಮಿಷನ್ ಇಂಡಿಯಾದಿಂದ ಎಎಫ್‌ಸಿಪಿ ನೀಡಿರುವ ಅನುದಾನವು, ಕಳೆದ 20 ವರ್ಷಗಳಲ್ಲಿ ಭಾರತದಲ್ಲಿ ನೀಡಲಾದ 2ನೇ ಅತಿ ಹೆಚ್ಚು ಪ್ರಮಾಣದ್ದಾಗಿದೆ. ವಿಶ್ವದರ್ಜೆಯ ಮ್ಯೂಸಿಯಂ ಆಗಿ ಇದನ್ನು ರೂಪಿಸಲಾಗುವುದು. ಅಮೆರಿಕ ಸರ್ಕಾರವು ಜಾಗತಿಕವಾಗಿ ಇಂತಹ 30ರಿಂದ 40 ಯೋಜನೆಗಳನ್ನು ಕೈಗೆತ್ತಿಕೊಂಡಿದೆ’ ಎಂದು ಹೇಳಿದರು.

ಡಿಎಚ್‌ಎಫ್ ಇಂಡಿಯಾದ ಅಧ್ಯಕ್ಷೆ ಲತಾ ರೆಡ್ಡಿ ಮಾತನಾಡಿ, ‘ಈ ವಸ್ತುಸಂಗ್ರಹಾಲಯದಲ್ಲಿ ವಾಸ್ತುಶಿಲ್ಪದ ಪುನರ್‌ರಚನೆ ಹಾಗೂ ವಸ್ತುಸಂರಕ್ಷಣೆಯಲ್ಲಿ ಮಾದರಿ ಕ್ರಮಗಳನ್ನು ಕೈಗೊಳ್ಳಲಿದೆ’ ಎಂದು ತಿಳಿಸಿದರು.

ಕುಲಸಚಿವರಾದ ವಿ.ಎಸ್. ಶೈಲಜಾ, ಹಣಕಾಸು ಅಧಿಕಾರಿ ರೇಖಾ ಕೆ.ಎಸ್. ಪಾಲ್ಗೊಂಡಿದ್ದರು.

ಇಲ್ಲಿ ಜಾಗ ಕೊಡಲಾಗದು: ಕುಲಪತಿ

‘ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ ಸ್ಥಾಪನೆಗೆ ಜಯಲಕ್ಷ್ಮಿವಿಲಾಸ ಅರಮನೆಯಲ್ಲಿ ಜಾಗ ನೀಡಲಾಗಿತ್ತು. ಆದರೆ, ಒಂದು ವರ್ಷದಿಂದ ಬಳಸಿಕೊಳ್ಳಲಿಲ್ಲ. ಈಗ ನವೀಕರಣ ಕಾರ್ಯ ನಡೆಯಬೇಕಿರುವುದರಿಂದ ಸ್ಥಳಾವಕಾಶ ಒದಗಿಸಲಾಗುವುದಿಲ್ಲ’ ಎಂದು ಕುಲಪತಿ ಲೋಕನಾಥ ಸ್ಪಷ್ಟಪಡಿಸಿದರು.

‘ಅರಮನೆಯ ಕಟ್ಟಡ ಸಂರಕ್ಷಣೆಗೆ ದೊಡ್ಡ ಮೊತ್ತದ ಅನುದಾನ ಬೇಕಾಗುತ್ತದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಭರಿಸಲು ಸಾಧ್ಯವಾಗದೇ ಇರುವುದರಿಂದ ನಾವು ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಬೇಕಾಯಿತು. ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರಕ್ಕೆ ಗಂಗೋತ್ರಿಯಲ್ಲೇ ಜಾಗ ನೀಡಿದ್ದೇವೆ’ ಎಂದು ತಿಳಿಸಿದರು.

‘₹30 ಕೋಟಿಯ ಯೋಜನೆ’

‘ಅರಮನೆಯ ಕಟ್ಟಡದ ಇತರ ಭಾಗವನ್ನು ಸಂರಕ್ಷಿಸಲು ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿ, ಉದ್ಯಮಿ ಹರೀಶ್ ಶಾ ನೇತೃತ್ವದ ಹರೀಶ್–ಬೀನಾ ಶಾ ಫೌಂಡೇಶನ್ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ’ ಎಂದು ಕುಲಪತಿ ಲೋಕನಾಥ್ ವಿವರ ನೀಡಿದರು.

‘ಯೋಜನಾ ಮೊತ್ತ ₹ 30 ಕೋಟಿ ಆಗಿದ್ದು, ಹಂತ ಹಂತವಾಗಿ ಒದಗಿಸಲಾಗುವುದು ಎಂದು ಹರೀಶ್ ಸಮ್ಮತಿಸಿದ್ದಾರೆ. ಕಾಮಗಾರಿಯು ಭೌತಿಕವಾಗಿ ಇನ್ನಷ್ಟೇ ಆರಂಭವಾಗಬೇಕಿದೆ. ಹಂತ ಹಂತವಾಗಿ ನಡೆಯಲಿದ್ದು, ಪುನರುಜ್ಜೀವನಕ್ಕೆ 5ರಿಂದ 7 ವರ್ಷ ಬೇಕಾಗುತ್ತದೆ. ಇದಕ್ಕಾಗಿ ಪರಂಪರೆ ಇಲಾಖೆಯಿಂದ ಅನುಮತಿ ಪಡೆಯಲಾಗಿದೆ’ ಎಂದರು.

‘ಮಣಿಪಾಲ್ ತಾಂತ್ರಿಕ ಕಾಲೇಜು ಮೈಸೂರು ವಿಶ್ವವಿದ್ಯಾಲಯದ ಭಾಗವಾಗಿದ್ದಾಗ ನಾನು ಎಂಜಿನಿಯರಿಂಗ್ ಪದವಿ ಪಡೆದಿದ್ದೆ. ಈ ವಿವಿಯ ಜಯಲಕ್ಷ್ಮಿ ವಿಲಾಸ ಅರಮನೆಯ ಸಂರಕ್ಷಣೆಗೆ ಕೈಜೋಡಿಸಿರುವುದು ಖುಷಿ ನೀಡಿದೆ. ಇದು, ಮೈಸೂರಿನ ಹೆಗ್ಗುರುತಾಗಿ ಸಿದ್ಧಗೊಳ್ಳಲಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.