ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಜಾವಾಣಿ ಸಂದರ್ಶನ | ನಿರ್ಲಿಪ್ತ, ಮುಕ್ತ, ಪಕ್ಷದ ಆದೇಶಕ್ಕೆ ಬದ್ಧ: ಸಿಪಿವೈ

ಟಿಕೆಟ್ ಕೊಟ್ಟರೆ ಗೆಲುವು ಖಚಿತ l ಸೋಲಿಗೆ ಸಿದ್ಧರಾದರೆ ಯಾರನ್ನಾದರೂ ಕಣಕ್ಕಿಳಿಸಲಿ l ಹೈಕಮಾಂಡ್‌ ಬುದ್ಧಿವಾದದ ಬಳಿಕ ತಂತ್ರಗಾರಿಕೆ ಬದಲು
Published : 6 ಸೆಪ್ಟೆಂಬರ್ 2024, 4:54 IST
Last Updated : 6 ಸೆಪ್ಟೆಂಬರ್ 2024, 4:54 IST
ಫಾಲೋ ಮಾಡಿ
Comments
ಟಿಕೆಟ್‌ಗಾಗಿ ವಿವಿಧ ರೀತಿಯಲ್ಲಿ ಕಸರತ್ತು ನಡೆಸುತ್ತಾ, ಮೈತ್ರಿ ಪಕ್ಷಗಳ ನಾಯಕರ ಮೇಲೆ ಒತ್ತಡ ಹೇರುತ್ತಿದ್ದ ಯೋಗೇಶ್ವರ್, ಇತ್ತೀಚೆಗೆ ದೆಹಲಿಗೆ ಹೋಗಿ ಬಂದ ನಂತರ ಮೆದುವಾಗಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲೇ, ‘ಪ್ರಜಾವಾಣಿ’ಗೆ ಸಂದರ್ಶನ ನೀಡಿರುವ ಅವರು ಚನ್ನಪಟ್ಟಣ ಉಪ ಕದನದ ರಾಜಕಾರಣದ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ.
ಪ್ರ

ಟಿಕೆಟ್ ವಿಷಯದಲ್ಲಿ ದೆಹಲಿ ಭೇಟಿ ಬಳಿಕ ನೀವು ಮೆದುವಾಗಿದ್ದೇಕೆ?

ನನ್ನ ಬೆಂಬಲಿಗರು ‘ಸ್ವಾಭಿಮಾನಿ ಸಂಕಲ್ಪ’ ಸಮಾವೇಶ ಮಾಡಲು ತೀರ್ಮಾನಿಸಿದಾಗ ಪಕ್ಷದ ವರಿಷ್ಠರು ದೆಹಲಿಗೆ ಕರೆದು ಮಾತನಾಡಿದರು. ‘ಉಪ ಚುನಾವಣೆ ಟಿಕೆಟ್ ವಿಷಯದಲ್ಲಿ ಯಾಕೆ ತಪ್ಪು ಹೆಜ್ಜೆ ಇಡುತ್ತೀಯಾ? ನೀನು ಚುನಾವಣೆ ಸೋತಾಗಲೂ ಎಂಎಲ್‌ಸಿ ಮಾಡಿ ಸಚಿವನನ್ನಾಗಿ ಮಾಡಿಲ್ಲವೆ. ಈ ಪಕ್ಷಕ್ಕೆ ನಿನ್ನ ಅಗತ್ಯವಿದ್ದು ಮುಂದೆ ಇದಕ್ಕಿಂತಲೂ ಹೆಚ್ಚಿನ ಅವಕಾಶ ಸಿಗುತ್ತವೆ ಕಾಯಬೇಕು’ ಎಂಬ ಭರವಸೆ ಮಾತನ್ನಾಡಿದರು. ಈ ಚುನಾವಣೆ ನನ್ನ ಭವಿಷ್ಯ ನಿರ್ಧರಿಸುವುದಿಲ್ಲ. ಆದರೂ, ಹೋರಾಟ ಮಾಡಿ ಸ್ಪರ್ಧಿಸಿ, ಗೆದ್ದರೆ ಏನಾದರೂ ಅಧಿಕಾರ ಸಿಗುತ್ತದೆ ಎನ್ನುವುದಕ್ಕೆ ನಮ್ಮ ಸರ್ಕಾರವೂ ಇಲ್ಲ. ವರಿಷ್ಠರ ಸಲಹೆ ಮೇರೆಗೆ ನಾನು ಸ್ವಲ್ಪ ನಿಧಾನವಾಗಿ ಯೋಚಿಸಿ ನಡೆಯಲ್ಲಿ ಬದಲಾವಣೆ ಮಾಡಿಕೊಂಡಿದ್ದೇನೆ. ನಾನೀಗ ಮುಕ್ತವಾಗಿದ್ದು ಬಿಜೆಪಿ ಅಥವಾ ಜೆಡಿಎಸ್‌ನಿಂದ ಟಿಕೆಟ್ ಕೊಟ್ಟರೂ ಸ್ಪರ್ಧೆಗೆ ಸಿದ್ಧನಿದ್ದೇನೆ.

ಪ್ರ

ಮೈತ್ರಿ ನಾಯಕರು ಟಿಕೆಟ್ ತೀರ್ಮಾನಿಸುವ ಮುಂಚೆ ನಾನೇ ಅಭ್ಯರ್ಥಿ ಎಂದು ಹೇಳಿಕೊಂಡಿದ್ದು ಯಾಕೆ? ಟಿಕೆಟ್ ಕೈ ತಪ್ಪುವ ಆತಂಕವಿತ್ತೆ?

ಕ್ಷೇತ್ರವನ್ನು ಪರ್ಸನಲ್ ಆಗಿ ತೆಗೆದುಕೊಂಡಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಾನೇ ಅಭ್ಯರ್ಥಿ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ಯಾರೇ ಅಭ್ಯರ್ಥಿಯಾದರೂ ನನ್ನ ಮುಖ ನೋಡಿ ಮತ ಕೊಡಿ ಎನ್ನುತ್ತಾ ಮತದಾರರನ್ನು ಓಲೈಸಿ ಹಿಡಿದಿಟ್ಟುಕೊಳ್ಳುತ್ತಿದ್ದಾರೆ. ಅವರ ಪಕ್ಷದ ಸಚಿವರು ಹಾಗೂ ಶಾಸಕರು ಸಹ ಕ್ಷೇತ್ರದಲ್ಲಿ ಸಕ್ರಿಯವಾಗಿದ್ದಾರೆ. ಅವರೆದುರು ನಾವು ಸುಮ್ಮನಿದ್ದರೆ ನಮ್ಮ ಕಾರ್ಯಕರ್ತರು ವಿಚಲಿತರಾಗುತ್ತಾರೆಂದು ನಾನೇ ಅಭ್ಯರ್ಥಿ ಎಂಬ ಹೇಳಿಕೆ ನೀಡಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಿದೆ.

ಪ್ರ

‘ಸ್ವಾಭಿಮಾನದ ಅಸ್ತ್ರ’ ಪ್ರಯೋಗಿಸುವ ಅನಿವಾರ್ಯತೆ ಯಾಕೆ ಬಂತು?

ಸ್ಥಳೀಯನಾಗಿ ನನ್ನ ಸ್ವಾಭಾವಿಕ ಹಕ್ಕು ಚಲಾಯಿಸಿದ್ದೇನೆ. ಚನ್ನಪಟ್ಟಣ ನನ್ನ ಕರ್ಮಭೂಮಿ. ನನಗಿರುವ ಏಕೈಕ ಕ್ಷೇತ್ರ. ಕುಮಾರಸ್ವಾಮಿ ಮತ್ತು ನಿಖಿಲ್‌ ಎಲ್ಲಿ ಬೇಕಾದರೂ ಸ್ಪರ್ಧಿಸಲು ಅವಕಾಶವಿದೆ. ಕ್ಷೇತ್ರದೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿರುವ ನಾನು, ಜನಮಾನಸದಲ್ಲಿ ಉಳಿಯುವ ಕೆಲಸ ಮಾಡಿರುವುದರಿಂದ ಟಿಕೆಟ್ ಕೇಳಿದ್ದೇನೆ. ಕುಮಾರಸ್ವಾಮಿ ಅವರಿಗೆ ತಾಲ್ಲೂಕಿನ ಮೇಲೆ ಅಭಿಮಾನ ಮತ್ತು ಅಂತಕರಣ ಇದ್ದರೆ ನನಗೆ ಟಿಕೆಟ್ ಕೊಡಬೇಕು. ಅವರೂ ಇಲ್ಲ ಎಂದಿಲ್ಲ. ಈಗಲೇ ಎಲ್ಲವೂ ಮುಗಿದಿಲ್ಲ. ಇನ್ನೂ ಹಲವು ಹಂತಗಳಿವೆ. ಅದರ ಮಧ್ಯೆ ಕಾರ್ಯಕರ್ತರನ್ನು ಹಿಡಿದಿಟ್ಟುಕೊಳ್ಳಬೇಕಾಗುತ್ತದೆ. ಅದರ ಭಾಗವಾಗಿಯೇ, ಬೆಂಬಲಿಗರು ಸ್ವಾಭಿಮಾನಿ ಸಂಕಲ್ಪದ ಸಮಾವೇಶಕ್ಕೆ ಮುಂದಾದರು. ಎಲ್ಲವನ್ನೂ ಗಮನಿಸಿರುವ ವರಿಷ್ಠರು ಅಂತಿಮವಾಗಿ ನಿರ್ಧಾರ ತಿಳಿಸುತ್ತಾರೆ. ಕಾದು ನೋಡೋಣ.

ಪ್ರ

ಟಿಕೆಟ್ ವಿಷಯದಲ್ಲಿ ಎಚ್‌ಡಿಕೆ ಜೊತೆಗಿನ ಭಿನ್ನಾಭಿಪ್ರಾಯ, ನಿಮ್ಮಿಬ್ಬರ ಸಂಬಂಧ ಹಳಸುವಂತೆ ಮಾಡಿದೆಯಂತೆ ಹೌದೆ?

ಟಿಕೆಟ್ ವಿಷಯದಲ್ಲಿ ಸ್ವಲ್ಪ ಭಿನ್ನಾಭಿಪ್ರಾಯ ಬಂದಿತ್ತು. ಮೈತ್ರಿ ನಾಯಕರು ಟಿಕೆಟ್ ವಿಷಯದಲ್ಲಿ ಒಮ್ಮತಕ್ಕೆ ಬಂದರೆ ಎಲ್ಲವೂ ದೂರಾಗಲಿದೆ. ಕ್ಷೇತ್ರ ಜೆಡಿಎಸ್ ಮತ್ತು ಬಿಜೆಪಿಗೆ ಪ್ರತಿಷ್ಠೆಯಾಗಿದೆ. ನಾಯಕರೊಂದಿಗೆ ದೆಹಲಿಗೆ ಹೋದಾಗ ಈ ಕುರಿತು ಎಚ್‌ಡಿಕೆ ಜೊತೆ ಚರ್ಚಿಸಿದ್ದೇವೆ. ಕಾಂಗ್ರೆಸ್ ವಿರುದ್ಧ ಭ್ರಷ್ಟಾಚಾರ ಕೂಗು ಜೋರಾಗಿರುವ ಈ ಹೊತ್ತಿನಲ್ಲಿ ನಾವು ಗೆದ್ದರೆ ಮುಂದಿನ ರಾಜಕೀಯ ಭವಿಷ್ಯಕ್ಕೆ ಅದು ದಿಕ್ಸೂಚಿಯಾಗುತ್ತದೆ. ಕಿತ್ತಾಡಿಕೊಂಡರೆ ಕಾಂಗ್ರೆಸ್‌ಗೆ ಲಾಭವಾಗಲಿದೆ. ಗೆಲ್ಲಲೇಬೇಕಾದರೆ ನನಗೆ ಟಿಕೆಟ್ ಕೊಡಬೇಕು. ಸೋತರೂ ಪರವಾಗಿಲ್ಲ ಎಂದಾದರೆ ಯಾರನ್ನಾದರೂ ಕಣಕ್ಕಿಳಿಸಬಹುದು. ವೈಯಕ್ತಿಕ ಹಿತಾಸಕ್ತಿ ಬದಿಗಿಟ್ಟು ಮೈತ್ರಿ ಹಿತಾಸಕ್ತಿ ಕುರಿತು ನಿರ್ಧಾರ ಕೈಗೊಳ್ಳಬೇಕು.

ಪ್ರ

ಟಿಕೆಟ್ ಸಿಗದಿದ್ದರೆ ಸ್ವತಂತ್ರವಾಗಿ ಕಣಕ್ಕಿಳಿಯುತ್ತೀರಾ?

ರಾಜ್ಯದಲ್ಲಿ ಬಿಜೆಪಿ–ಜೆಡಿಎಸ್‌ ಮೈತ್ರಿಗೆ ಮುನ್ನುಡಿ ಬರೆದ ನಾನೇ ಬಂಡಾಯವೆದ್ದು ಸ್ವತಂತ್ರವಾಗಿ ಕಣಕ್ಕಿಳಿದರೆ ಮೈತ್ರಿಗೆ ಧಕ್ಕೆಯಾಗಿ ಒಡಕುಂಟಾಗಲಿದೆ. ಗೊಂದಲ ಸೃಷ್ಟಿಸಲು ಇಷ್ಟವಿಲ್ಲ. ಸದ್ಯದ ಸ್ಥಿತಿಯಲ್ಲಿ ನಿರ್ಲಿಪ್ತನಾಗಿದ್ದೇನೆ. ಪಕ್ಷದ ಆದೇಶಕ್ಕೆ ಅನುಗುಣವಾಗಿ ನಡೆದುಕೊಳ್ಳಲು ನಿರ್ಧರಿಸಿದ್ದೇನೆ.

ಪ್ರ

ನಿಮ್ಮ ವಿಷಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರು ತುಟಿ ಬಿಚ್ಚುತ್ತಿಲ್ಲ ಯಾಕೆ?

ಕ್ಷೇತ್ರವು ಕುಮಾರಸ್ವಾಮಿ ಅವರಿಂದ ತೆರವಾಗಿದೆ. ನಮ್ಮೊಂದಿಗೆ ಅವರು ಮೈತ್ರಿ ಮಾಡಿಕೊಂಡಿರುವುದರಿಂದ ಪಕ್ಷದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಬಹಿರಂಗವಾಗಿ ನನ್ನ ಪರವಾಗಿ ಮಾತನಾಡಲು ಸಾಧ್ಯವಿಲ್ಲ. ಹಾಗಂತ, ನಮ್ಮಿಬ್ಬರ ನಡುವೆ ಸಂಬಂಧ ಹದಗೆಟ್ಟಿದೆ ಎಂಬುದು ತಪ್ಪು. ನಾವು ಆಗಾಗ ಮಾತನಾಡುತ್ತಿರುತ್ತೇವೆ. ‘ಕ್ಷೇತ್ರದಲ್ಲಿ ಎನ್‌ಡಿಎ ಗೆಲ್ಲಬೇಕಾದರೆ ಯೋಗೇಶ್ವರ್ ಅವರಿಗೇ ಟಿಕೆಟ್ ಕೊಡಬೇಕೆಂದು ಪಕ್ಷದ ವರಿಷ್ಠರ ಗಮನಕ್ಕೆ ತಂದಿರುವೆ. ನಿಮಗೆ ನನ್ನ ಬೆಂಬಲಿದ್ದು ಪ್ರಯತ್ನ ಮುಂದುವರಿಸಿ’ ಎಂದು ವಿಜಯೇಂದ್ರ ಹೇಳಿದ್ದಾರೆ.

ಪ್ರ

ಡಿಕೆಶಿ ಈಗಾಗಲೇ ಚುನಾವಣೆ ಕೆಲಸಕ್ಕೆ ಚಾಲನೆ ಕೊಟ್ಟಿದ್ದಾರೆ. ಮೈತ್ರಿಕೂಟ ಇನ್ನೂ ಟಿಕೆಟ್ ಗೊಂದಲದಲ್ಲೇ ಇದೆಯಲ್ಲಾ?

ತಮ್ಮ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಡಿ.ಕೆ. ಶಿವಕುಮಾರ್ ಅವರಿಗೂ ಈ ಚುನಾವಣೆ ಮಹತ್ವದ್ದಾಗಿದೆ. ಹಾಗಾಗಿ, ಮುನ್ನುಗ್ಗಿ ಕೆಲಸ ಮಾಡುತ್ತಿದ್ದಾರೆ. ನಾವು ಟಿಕೆಟ್ ಗೊಂದಲ ನಿವಾರಿಸಿಕೊಂಡು ಕೆಲಸ ಶುರು ಮಾಡಬೇಕಾದ ತುರ್ತು ಇದೆ.

ಪ್ರ

ಮೈತ್ರಿ ಟಿಕೆಟ್ ಸಿಗದಿದ್ದರೆ ಕಾಂಗ್ರೆಸ್‌ನಿಂದ ಸ್ಪರ್ಧಿಸುತ್ತೀರಿ. ಅದೇ ಕಾರಣಕ್ಕೆ ಇತ್ತೀಚೆಗೆ ಡಿ.ಕೆ. ಸಹೋದರರ ವಿಷಯದಲ್ಲಿ ನೀವು ಮೃಧು ಧೋರಣೆ ತಳೆದಿದ್ದೀರಿ ಎಂಬ ಮಾತು ಕೇಳಿ ಬರುತ್ತಿವೆಯಲ್ಲ?

ನಮ್ಮ ತಾಲ್ಲೂಕಿನ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಶಿವಕುಮಾರ್ ಜೊತೆ ವೇದಿಕೆ ಹಂಚಿಕೊಂಡಿದ್ದು ಇದಕ್ಕೆಲ್ಲಾ ಕಾರಣ. ಕಳೆದ ವರ್ಷವು ನಾನು ಭಾಗವಹಿಸಿದ್ದೆ. ಈ ಸಲ ಶಿವಕುಮಾರ್ ಅನಿರೀಕ್ಷಿತ ಅತಿಥಿಯಾಗಿ ಪಾಲ್ಗೊಂಡಿದ್ದರಷ್ಟೆ. ಎದುರಾಳಿಗಳು ಒಟ್ಟಿಗೆ ಕಾಣಿಸಿಕೊಂಡಾಗ ಇಂತಹ ವ್ಯಾಖ್ಯಾನ ಮತ್ತು ಗುಸು ಗುಸು ಸಾಮಾನ್ಯ. ಸದ್ಯದ ಪರಿಸ್ಥಿತಿಯಲ್ಲಿ ಪಕ್ಷ ತೊರೆಯುವಂತಹ ಯಾವುದೇ ಆಲೋಚನೆ ನನ್ನಲ್ಲಿಲ್ಲ. ಡಿ.ಕೆ. ಸಹೋದರರು ಹಾಗೇನೂ ಇಲ್ಲ. ಸಾಂದರ್ಭಿಕವಾಗಿ ಒಬ್ಬರನ್ನೊಬ್ಬರು ವೈಯಕ್ತಿಕವಾಗಿ ಟೀಕೆ ಮಾಡುತ್ತೇವೆ. ಅದು ಬಿಟ್ಟು ವಿಷಯಾಧಾರಿತವಾಗಿ ಟೀಕಿಸುವುದನ್ನು ಕಲಿಯಬೇಕಿದೆ.

ಪ್ರ

ಕ್ಷೇತ್ರದಲ್ಲಿ ಡಿಕೆಶಿ ಅವರ ಅಭಿವೃದ್ಧಿ ರಾಜಕಾರಣದ ಪ್ರಯೋಗದ ಬಗ್ಗೆ ಏನಂತಿರಿ?

:ಅದೆಲ್ಲಾ ಚುನಾವಣಾ ಗಿಮಿಕ್. ಇದು ಅಭಿವೃದ್ಧಿ ರಾಜಕಾರಣವಲ್ಲ, ಲೂಟಿ ರಾಜಕೀಯ. ಮನೆ ಇಲ್ಲದವರಿಗೆ ನಿವೇಶನ ಹಂಚುವೆ ಎನ್ನುತ್ತಿರುವ ಡಿಕೆಶಿ ಹಲವು ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ರೈತರ ಜಮೀನನ್ನು ವಶಪಡಿಸಿಕೊಂಡು ಅವರನ್ನು ಒಕ್ಕಲೆಬ್ಬಿಸುತ್ತಿದ್ದಾರೆ. ನಿವೇಶನ ಹಂಚುವುದಾದರೆ ಯಾವ ಊರಿಗೆ ಎಷ್ಟು ಅಗತ್ಯವಿದೆ ಎಂದು ತಿಳಿದುಕೊಂಡು ಅಲ್ಲೇ ಜಮೀನು ಗುರುತಿಸಿ ಹಂಚಬೇಕು. ಹೊಸದಾಗಿ ಒಂದು ಊರು ಕಟ್ಟುವೆ ಎಂದು ಯಾವುದೊ ಅರಣ್ಯ ಭೂಮಿ ಅಥವಾ ಗೋಮಾಳದ ಜಾಗ ಅಭಿವೃದ್ಧಿ ಮಾಡುವುದು ಅವೈಜ್ಞಾನಿಕ. ತಾಲ್ಲೂಕಿನ ಮೂರ್ನಾಲ್ಕು ಕಡೆ ಜಾಗ ಗುರುತಿಸಿ ನಿವೇಶನ ಕೊಡುತ್ತೇವೆ ಎನ್ನಲು ಇದೇನು ರಿಯಲ್ ಎಸ್ಟೇಟ್ ಬಿಸಿನೆಸ್ ಅಲ್ಲ. ಜನರಿಗೆ ಅವರ ಹಳ್ಳಿ ಪಕ್ಕ ಮನೆ ಕಟ್ಟಲು ಸ್ವಾಭಾವಿಕವಾಗಿ ಅವಕಾಶ ಮಾಡಿಕೊಡಬೇಕು. ಅದು ಬಿಟ್ಟು ಸಾಗುವಳಿದಾರರ ಮೇಲೆ ದೌರ್ಜನ್ಯ ಎಸಗಿ ಅವರ ಭೂಮಿ ಕಿತ್ತುಕೊಂಡು ಕೊಡಲು ಮುಂದಾದರೆ ಮುಂದೆ ಅಂತಹದ್ದೊಂದು ಪರಂಪರೆಯೇ ಬೆಳೆಯುತ್ತದೆ. ಈಗ ಅವರು ಬಂದಿದ್ದಾರೆ. ಮುಂದೆ ಅವರ ಚೇಲಾಗಳ ದಬ್ಬಾಳಿಕೆ ಶುರುವಾಗುತ್ತದೆ. ಅಂತಹ ರಾಜಕಾರಣಕ್ಕೆ ಅವಕಾಶ ಕೊಡಬಾರದು.

ಪ್ರ

ಟಿಕೆಟ್ ಸಿಗದಿದ್ದರೆ ನಿಮ್ಮ ರಾಜಕೀಯ ಅಸ್ತಿತ್ವಕ್ಕೆ ಧಕ್ಕೆಯಾಗುತ್ತದೆಯೇ?

ನನ್ನ ಭವಿಷ್ಯ ಬರೆಯುವವನು ಭಗವಂತನೇ ಹೊರತು ಬೇರಾರೋ ಅಲ್ಲ. ರಾಜಕೀಯ ಹಿನ್ನೆಲೆ ಇಲ್ಲದೆ ಸ್ವಂತ ಬಲದ ಮೇಲೆ ಈ ಮಟ್ಟಕ್ಕೆ ಬೆಳೆದಿದ್ದೇನೆ. ಬರುವಾಗಲೂ ಏನೂ ತಂದಿಲ್ಲ. ಹೋಗುವಾಗಲೂ ಏನೂ ತೆಗೆದುಕೊಂಡು ಹೋಗುವುದಿಲ್ಲ. ಇದುವರೆಗೆ ಜನರಿಗೆ ಅನುಕೂಲವಾಗುವ ಒಂದಿಷ್ಟು ಕೆಲಸ ಮಾಡಿದ್ದೇನೆಂಬ ಸಮಾಧಾನವಿದೆ. ಅವಕಾಶ ಸಿಕ್ಕರೆ ಇನ್ನೂ ಹೆಚ್ಚು ಮಾಡುವೆ. ಹಾಗಂತ ವಿಚಲಿತನಾಗುವುದಿಲ್ಲ. ಮುಂದೆ ಇದಕ್ಕಿಂತಲೂ ಚಿನ್ನದಂತಹ ಅವಕಾಶ ಸಿಗುತ್ತವೆ ಎಂಬ ವಿಶ್ವಾಸವಿದೆ. ನನ್ನ ಭವಿಷ್ಯ ಮೊಟಕುಗೊಳಿಸಲು ಪ್ರಯತ್ನಪಟ್ಟರೆ ಅಥವಾ ಚನ್ನಪಟ್ಟಣದ ಬಾಗಿಲು ಬಂದ್ ಮಾಡಿದರೆ ಮುಂದೆ ರಾಮನಗರ ಕನಕಪುರ ಅಥವಾ ಮಾಗಡಿಯಲ್ಲಿ ಸ್ಪರ್ಧಿಸುವೆ. ನನ್ನ ಬಂಧು ಬಳಗದ ವ್ಯಾಪ್ತಿಯೂ ದೊಡ್ಡದಿದೆ. ಸಂದರ್ಭ ಬಂದರೆ ರಾಮನಗರದಲ್ಲೇ ಸ್ಪರ್ಧಿಸುವೆ. ಇನ್ನೂ ನಾಲ್ಕು ಚುನಾವಣೆ ಮಾಡುವಷ್ಟು ರಾಜಕೀಯ ಶಕ್ತಿ ನನಗಿದೆ. ಸೋತ ತಕ್ಷಣ ನನ್ನ ರಾಜಕಾರಣ ಮುಗಿಯಿತು ಎಂದು ವಾಪಸ್ ಹೋಗುವ ವ್ಯಕ್ತಿತ್ವ ನನ್ನದಲ್ಲ.

ಪ್ರ

ಕ್ಷೇತ್ರದಲ್ಲಿ ನಿಮ್ಮನ್ನು ತುಳಿಯುವ ಪ್ರಯತ್ನ ನಡೆಯುತ್ತಿದೆಯೇ?

ನಾನು ರಾಜಕೀಯವಾಗಿ ಸದಾ ಕ್ರಿಯಾಶೀಲ. ಯಾರಾದರೂ ಉದ್ದೇಶಪೂರ್ವಕವಾಗಿ ತೊಂದರೆ ಮಾಡಿದರೆ ಸವಾಲಾಗಿ ಸ್ವೀಕರಿಸಿ ತಿರುಗೇಟು ಕೊಡುವುದು ಗೊತ್ತಿದೆ. ನನಗೆ ಸರ್ಕಾರ ತೆಗೆಯುವುದು ರಚಿಸುವುದು ಸಹ ಗೊತ್ತಿದೆ. ಪಕ್ಷ ಕಟ್ಟುವುದು ಒಡೆಯುವುದು ಹಾಗೂ ಜೊಡಿಸುವುದು ಸಹ ಗೊತ್ತಿದೆ. ರಾಜಕಾರಣದ ಬೇರೆ ಬೇರೆ ಪಟ್ಟುಗಳೂ ಗೊತ್ತಿವೆ. ಯಾರೂ ಪ್ರಯೋಗಿಸದ ಪಟ್ಟುಗಳನ್ನು ಪ್ರಯೋಗಿಸುವೆ. ರಾಜಕಾರಣವನ್ನು ವಿಭಿನ್ನವಾಗಿ ನೋಡಿ ಸಮೀಕರಣ ಮಾಡುವ ಶಕ್ತಿ ಮತ್ತು ಸಾಮರ್ಥ್ಯ ನನಗಿದೆ. ಚುನಾವಣೆ ಗೆದ್ದೇ ರಾಜಕಾರಣ ಮಾಡಬೇಕಿಲ್ಲ. ಚುನಾವಣಾ ರಾಜಕಾರಣ ಮಾಡದೆಯೂ ಎಷ್ಟೋ ಜನ ರಾಜಕಾರಣ ಮಾಡುತ್ತಿಲ್ಲವೆ? ಸಚಿವರಾಗಿಲ್ಲವೆ? ಪರೋಕ್ಷ ರಾಜಕಾರಣಕ್ಕೆ ಬಹಳ ಅವಕಾಶಗಳಿವೆ. ರಾಜಕೀಯವಾಗಿ ಜನ್ಮ ಕೊಟ್ಟ ನನ್ನ ತಾಲ್ಲೂಕು ಎಂಬ ಅಭಿಮಾನ ನನಗೆ ಇದ್ದೇ ಇದೆ. ಆದರೆ ಇಲ್ಲಿ ನೀನು ರಾಜಕಾರಣ ಮಾಡಲೇಬಾರದು ನಾವೇ ಇರಬೇಕು ನಿನ್ನನ್ನು ಮುಗಿಸುತ್ತೇವೆ ಎಂದು ಇಲ್ಲಿನ ಬಿಲ ಮುಚ್ಚಿದರೆ ಮತ್ತೊಂದು ಕಡೆ ತೆರೆದುಕೊಳ್ಳುತ್ತದೆ. ಇಲ್ಲಿ ಆಗದಿದ್ದರೆ ಬೇರೆ ಕ್ಷೇತ್ರ ಹುಡುಕಿಕೊಂಡು ಅಲ್ಲಿ ಎರಡು ವರ್ಷ ಮುಂಚೆಯೇ ರಾಜಕಾರಣ ಶುರು ಮಾಡುತ್ತೇನೆ. ನಾನೇನು ಶಸ್ತ್ರತ್ಯಾಗ ಮಾಡಿಲ್ಲ. ಪಕ್ಷದ ಆದೇಶಕ್ಕೆ ಗೌರವ ಕೊಟ್ಟು ಸುಮ್ಮನಾಗಿದ್ದೇನೆ. ನನ್ನ ರಾಜಕೀಯ ಭವಿಷ್ಯ ಮಸುಕಾಗಿಲ್ಲ. ನನ್ನ ಕ್ಷೇತ್ರವನ್ನು ನನಗೆ ಕೊಟ್ಟು ನನ್ನ ಪಾಡಿಗೆ ಬಿಟ್ಟರೆ ಕ್ಷೇಮ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT