ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಡಿಎಸ್‌ನಿಂದ ಗುಬ್ಬಿ ಕ್ಷೇತ್ರದ ಶಾಸಕ ಎಸ್.ಆರ್. ಶ್ರೀನಿವಾಸ್ ದೂರ

ಮತ್ತೊಮ್ಮೆ ಕಣ್ಣೀರಿಟ್ಟ ಕುಮಾರಸ್ವಾಮಿ
Last Updated 25 ಅಕ್ಟೋಬರ್ 2021, 20:23 IST
ಅಕ್ಷರ ಗಾತ್ರ

ತುಮಕೂರು: ಗುಬ್ಬಿ ಕ್ಷೇತ್ರದ ಜೆಡಿಎಸ್ ಶಾಸಕ ಎಸ್.ಆರ್. ಶ್ರೀನಿವಾಸ್ ಪಕ್ಷದಿಂದ ನಡೆದ ಕಾರ್ಯಕ್ರಮದಿಂದ ದೂರು ಉಳಿಯುವ ಮೂಲಕ ಬಂಡಾಯ ತೋರ್ಪಡಿಸಿದ್ದು, ತಮ್ಮ ನಾಯಕರ ವಿರುದ್ಧ ತೊಡೆ ತಟ್ಟಿದ್ದಾರೆ.

ಗುಬ್ಬಿಯಲ್ಲಿ ಸೋಮವಾರ ಬಿಜೆಪಿ ಮುಖಂಡ ಬಿ.ಎಸ್. ನಾಗರಾಜ್ ಅವರ ಪಕ್ಷ ಸೇರ್ಪಡೆ ಹಾಗೂ ಪಕ್ಷದ ಕಾರ್ಯಕರ್ತರ ಸಮಾವೇಶ ಆಯೋಜಿಸಲಾಗಿತ್ತು. ಈಗಾಗಲೇ, ಜೆಡಿಎಸ್ ಮುಖಂಡ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಸಿಟ್ಟು ಪ್ರದರ್ಶಿಸಿ, ಟೀಕಾಪ್ರಹಾರ ನಡೆಸುತ್ತಿರುವ ಶ್ರೀನಿವಾಸ್ ಸಭೆಗೆ ಬರಲಿಲ್ಲ. ಅವರ ಬೆಂಬಲಿಗರೂ ಸಭೆಯಿಂದ ದೂರ ಉಳಿದರು.

ಸಭೆಯಲ್ಲಿ ಮಾತನಾಡಿದ ಎಚ್.ಡಿ. ಕುಮಾರಸ್ವಾಮಿ ಅವರು, ಶ್ರೀನಿವಾಸ್ ವಿರುದ್ಧ ವಾಗ್ದಾಳಿ ನಡೆಸಿದರು. ‘ಕಳೆದ ಲೋಕಸಭೆ ಚುನಾವಣೆಯಲ್ಲಿ ಎಚ್.ಡಿ. ದೇವೇಗೌಡ ಅವರನ್ನು ಸೋಲಿಸಲು ಕಾಂಗ್ರೆಸ್ ನಾಯಕರ ಜತೆ ಸೇರಿಕೊಂಡು ಚಿತಾವಣೆ ಮಾಡಿದರು. ಕಾಂಗ್ರೆಸ್– ಜೆಡಿಎಸ್ ಹೊಂದಾಣಿಕೆಯಿಂದ ಗೌಡರು ಸ್ಪರ್ಧಿಸಿದ್ದರೆ, ಆ ಪಕ್ಷದ ಕೆಲವರು ಸೋಲಿಸಲು ಪಿತೂರಿ ನಡೆಸಿದ್ದರು. ಅಂತಹವರ ಜತೆ ಸೇರಿಕೊಂಡು ಸೋಲಿಸಿದರು. ಕಾಂಗ್ರೆಸ್ ಮುಖಂಡರ ಮನೆಯಲ್ಲಿ ಮಧ್ಯರಾತ್ರಿ ಕುಳಿತು ಏನೆಲ್ಲಮಸಲತ್ತು ಮಾಡಿದರು ಎಂಬುದು ಗೊತ್ತಿದೆ’ ಎಂದು ಆರೋಪಿಸಿದರು.

ತಮ್ಮ ಆರೋಗ್ಯ ಸ್ಥಿತಿ, ಶಾಸಕರ ನಡವಳಿಕೆ, ಪಕ್ಷ ಮುಗಿಸಲು ಕಾಂಗ್ರೆಸಿಗರು ನಡೆಸಿದ ಸಂಚಿನ ಬಗ್ಗೆ ಪ್ರಸ್ತಾಪಿಸುತ್ತಲೇ ಕಣ್ಣೀರಾದರು. ವಿಧಾನ ಪರಿಷತ್ ಸದಸ್ಯ ಬೆಮಲ್ ಕಾಂತರಾಜು ವಿರುದ್ಧವೂ ಗುಡುಗಿದರು.

ದೂರ ಉಳಿದ ಗೌಡರು: ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರು ತುಮಕೂರಿಗೆ ಬಂದರೂ ಗುಬ್ಬಿಯಲ್ಲಿ ನಡೆದ ಸಮಾವೇಶದಲ್ಲಿ ಭಾಗವಹಿಸಲಿಲ್ಲ. ಚುನಾವಣೆ ಪ್ರಚಾರಕ್ಕೆ ತೆರಳುವ ಸಲುವಾಗಿ ಹೆಲಿಕಾಪ್ಟರ್‌ನಲ್ಲಿ ನಗರಕ್ಕೆ ಆಗಮಿಸಿ, ಇಲ್ಲಿಂದ ಎಚ್.ಡಿ. ಕುಮಾರಸ್ವಾಮಿ ಅವರನ್ನು ಜತೆಯಲ್ಲಿ ಕರೆದುಕೊಂಡು ಹೋದರು.

ನಗರದ ವಿಶ್ವವಿದ್ಯಾನಿಲಯ ಅತಿಥಿ ಗೃಹದಲ್ಲಿ ಕೆಲ ಸಮಯ ವಿಶ್ರಾಂತಿ ಪಡೆದರು. ಗುಬ್ಬಿ ಸಮಾವೇಶ ಮುಗಿಸಿಕೊಂಡು ಕುಮಾರಸ್ವಾಮಿ ಬರುತ್ತಿದ್ದಂತೆ ಹೆಲಿಕಾಪ್ಟರ್‌ನಲ್ಲಿ ತೆರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT