ವಿಜಯಪುರ: ಮಕ್ಕಳನ್ನು ಹೆಗಲಮೇಲೆ ಹೊತ್ತ ಅಪ್ಪಂದಿರು, ಒಡಲೊಳಗಿರುವ ಮಗುವ ನೇವರಿಸುತ್ತ ಬಂದ ತಾಯಂದಿರು, ನೆರೆತ ಕೂದಲ, ಭಾರದ ಹೆಜ್ಜೆ ಇಡುತ್ತಿದ್ದ ವಯೋವೃದ್ಧರು ಎಲ್ಲರೂ ಮೌನ ಹೊತ್ತು ಹೆಜ್ಜೆ ಹಾಕುತ್ತಿದ್ದರು.

‘ಅಪ್ಪೋರು... ಅಜ್ಜಾರು’ ಎನ್ನುತ್ತಲೇ ಕಣ್ಣೀರಾಗುತ್ತಿದ್ದವರು, ಗದ್ಗದ ಕಂಠದಲ್ಲಿಯೇ ಭಜನೆ ಹಾಡಲು ಆರಂಭಿಸುತ್ತಿದ್ದರು. ರಸ್ತೆಯ ಎರಡೂ ಬದಿಯಲ್ಲಿ ನೀರುಣಿಸುವವರು, ಪ್ರಸಾದ ಹಂಚುವವರು, ಹಣ್ಣು ಹಂಚುವವರು ಇದ್ದರು. ಬರ್ರಿ ಅಕ್ಕಾರ, ಅಣ್ಣಾರ.. ಒಂದೆರಡು ತುತ್ತು ಪ್ರಸಾದ ತೊಗೊಂಡು ಹೋಗ್ರಿ ಎಂದು ಉಪಚರಿಸುತ್ತಿದ್ದರು.

ಅಂತಿಮಯಾತ್ರೆ ಸಾಗುವ ಮಾರ್ಗದಲ್ಲಿಯೂ ಜಾತಿ ಭೇದವಿಲ್ಲದೆ ಎಲ್ಲ ಮತ ಧರ್ಮದವರೂ ಉಣಬಡಿಸುವಲ್ಲಿ, ನೀರುಣಿಸುವಲ್ಲಿ, ಪಾನಕ ಹಂಚುವುದರಲ್ಲಿ ನಿರತರಾಗಿದ್ದರು.

‘ಅಜ್ಜನ ಮುಖ ದರ್ಶನವಾಯಿತೆ?’ ಎಂದು ಕೇಳಿದಾಗ, ‘ನೋಡಾಕ ಬಂದೋರಿಗೆ ವ್ಯವಸ್ಥೆ ಮಾಡಿದ್ರ ಸಾಕ್ರಿ, ಅಜ್ಜಾರು ಈ ಸೇವೆಯೊಳಗದಾರ. ನಾವು ಇದರೊಳಗ ಅವರನ್ನ ಕಾಣ್ತೀವಿ. ಕೊಡೂದ್ರೊಳಗ, ಹಂಚೂದ್ರೊಳಗ ನಮ್ಮಜ್ಜಾರು ನಮಗ ಸಿಗ್ತಾರ. ನಾವು ಇದೇ ಊರೋರು. ರಾತ್ರಿ ದರ್ಶನ ತೊಗೊಂಡು ಬಂದೇವಿ. ಈಗ ನಮ್ಮೂರಿಗೆ ಬರೋರು ಹಸಕೊಂಡು, ನೀರಡಿಸಿ ಹೋಗಬಾರದಲ್ಲ... ಅದಕ್ಕ ಸೇವಾಕ ನಿಂತೇವಿ’ ಅಂದ್ರು.

‘ಹೆಸರೇನ್ರಿ?’ ಎಂದಾಗ...‘ಹೆಸರು ಬ್ಯಾಡ್ರಿ.. ಪ್ರಸಾದ ಬೇಕಾದ್ರ ಪ್ಲೇಟ್ ತೊಗೊರಿ, ಮುಂದಿನೋರಿಗೆ ದಾರಿ ಮಾಡ್ರಿ’ ಅನ್ನುತ್ತಲೇ ಪಲಾವ್ ಹಂಚುತ್ತಿದ್ದರು.

ತಮ್ಮ ತಮ್ಮ ಶಕ್ತ್ಯಾನುಸಾರ ಉಪ್ಪಿಟ್ಟು, ಚಿತ್ರಾನ್ನ, ಕಲ್ಲಂಗಡಿ ಹಣ್ಣು, ಬಾಳೆಹಣ್ಣು, ಬಿಸ್ಕತ್ತು– ಹೀಗೆ ಹಂಚುತ್ತಲೇ ಇದ್ದರು. ಕುಡಿಯಲು ಚಹಾ, ಪಾನಕ, ಮಜ್ಜಿಗೆ, ಜೂಸುಗಳೂ ಇದ್ದವು.

ಬೆಳಗಿನ ಜಾವವೇ ಊರಿಂದ ಬಂದವರು, ಸಾಲುಗಳಲ್ಲಿ ನಿಂತು ದರ್ಶನ ಪಡೆದು ಆಚೆ ಬಂದಿದ್ದರು. ಜಿಲ್ಲಾ ಆಸ್ಪತ್ರೆಯ ಆವರಣದ ಹೊರಗೆ, ಮರದ ನೆರಳಿನಲ್ಲಿ ಕುಂತು ಹಾಡುತ್ತಿದ್ದರು. ‘ಅಜ್ಜಾರ ಯಾತ್ರೆ ಹೋದ ಮ್ಯಾಲೆ ಊರಿಗೆ ಹೊರಡ್ತೀವಿ’ ಅಂದವರೆ ಬಿಡುವಿಲ್ಲದಂತೆ ಹಾಡುತ್ತಿದ್ದರು.

‘ಎಲ್ಲೆಲ್ಲಿ ಆಡಿ ಬಂದಿ ಕೋಗಿಲೆ...ಎಲ್ಲಾ ಕಡೆ ಹಾಡಿ ಬಂದಿ ಕೋಗಿಲೆ’ ಅಂತ ಸುಶ್ರಾವ್ಯವಾಗಿ ಹಾಡುತ್ತಿದ್ದ ಜಮಖಂಡಿಯ ಹದಿನಾಲ್ಕು ಜನ ಹೆಂಗಳೆಯರು ತಮ್ಮ ಸಿದ್ದಪ್ಪಜ್ಜನನ್ನು ನೆನೆಯುತ್ತಿದ್ದರು.

ಇಂಥ ಭಜನೆ ಮಂಡಳಿಗಳ ಧ್ವನಿಯಲ್ಲಿ ಸಿದ್ಧೇಶ್ವರ ಶ್ರೀಗಳು ಉಲಿಯುತ್ತಿದ್ದರು. ಸೇವೆ ಮಾಡುವವರ ಉಪಚಾರದಲ್ಲಿ
ನಲಿಯುತ್ತಿದ್ದರು.

ನೆರೆದವರೆಲ್ಲ ‘ಸಿದ್ಧೇಶ್ವರ ಮಹಾರಾಜ್ ಕಿ ಜೈ’ ಅಂದಾಗ.. ಹಾಡಿನಂತೆ ಜನರ ಪಾಡಿಗೆ ಸಾಂತ್ವನ ಹೇಳುತ್ತಿದ್ದ ಶ್ರೀಗಳು ಮೌನವಾಗಿದ್ದರು.

ಮೊದಲ ಬಾರಿಗೆ ಶ್ರೀಗಳು ಮೌನವಾಗಿದ್ದರು. ಜನರು ಮಾತಾಡುತ್ತಿದ್ದರು. ಈವರೆಗೂ ಸ್ವಾಮೀಜಿ ಮಾತಿಗೆ ಮೈಯೆಲ್ಲ ಕಿವಿಯಾಗಿಸಿಕೊಂಡು ಮೌನವಾಗಿದ್ದ ಭಕ್ತರು, ಮುಗಿಲು ಮುಟ್ಟುವಷ್ಟು ಜಯಕಾರ ಹಾಕುತ್ತಿದ್ದರೂ ಸ್ವಾಮೀಜಿ
ಮೌನವಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.