ಹುಬ್ಬಳ್ಳಿ: ಕೊನೆಯ ಗಳಿಗೆಯಲ್ಲಿ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ ಜಗದೀಶ ಶೆಟ್ಟರ್ ಹೊತ್ತಿಸಿದ ‘ಲಿಂಗಾಯತ ಸ್ವಾಭಿಮಾನ’ದ ಕಿಡಿ, ಧಾರವಾಡ ಜಿಲ್ಲೆಯ ಚುನಾವಣಾ ಕಣದ ಚಿತ್ರಣವನ್ನೇ ಬದಲಾಯಿಸಿದೆ. ಈ ಕಿಡಿ ಯಾರ ಮನೆ ಬೆಳಗುತ್ತದೆ, ಯಾರ ಮನೆ ಸುಟ್ಟುಹಾಕುತ್ತದೆ ಎನ್ನುವುದೇ ಈ ಸಲದ ಕಠಿಣ ಲೆಕ್ಕಾಚಾರವಾಗಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮುನಿಸಿಕೊಂಡಿದ್ದ ಲಿಂಗಾಯತ ಸಮುದಾಯವನ್ನು ಶೆಟ್ಟರ್ ಮೂಲಕ ಮತ್ತೆ ತನ್ನ ತೆಕ್ಕೆಗೆ ಸೆಳೆದುಕೊಳ್ಳಲು ಕಾಂಗ್ರೆಸ್ ಹಾತೊರೆಯುತ್ತಿದೆ. ಮತ್ತೊಂದೆಡೆ, ಇಷ್ಟು ವರ್ಷಗಳ ಕಾಲ ತನಗೆ ಶಕ್ತಿ ತುಂಬಿದ್ದ ಸಮುದಾಯವನ್ನು ಉಳಿಸಿಕೊಳ್ಳಲು ಬಿಜೆಪಿ ಹರಸಾಹಸ ಪಡುತ್ತಿದೆ. ಶೆಟ್ಟರ್ ಹುಬ್ಬಳ್ಳಿ–ಧಾರವಾಡ ಸೆಂಟ್ರಲ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರೂ ಅವರು ಹೊತ್ತಿಸಿದ ‘ಸ್ವಾಭಿಮಾನದ ಕಿಡಿ’ ಜಿಲ್ಲೆಯ ಏಳೂ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಣಿಸಿಕೊಂಡಿದೆ. ಎಲ್ಲ ಕ್ಷೇತ್ರಗಳಲ್ಲೂ ಬಿಜೆಪಿ, ಕಾಂಗ್ರೆಸ್ ನಡುವೆ ನೇರ ಹಣಾಹಣಿ ಇದೆ. ಜೆಡಿಎಸ್ ಅಸ್ತಿತ್ವಕ್ಕಾಗಿ ಸ್ಪರ್ಧಿಸುತ್ತಿದೆ ಅಷ್ಟೆ.

ಬಿಜೆಪಿ ಕಟ್ಟಿ ಬೆಳೆಸಿದ ತಮಗೆ ಟಿಕೆಟ್ ನೀಡಲಿಲ್ಲ. ಇದು ತಮಗಲ್ಲ, ತಮ್ಮ ಸಮುದಾಯಕ್ಕೆ (ಲಿಂಗಾಯತ) ಮಾಡಿದ ಅವಮಾನವೆಂದು ಅನುಕಂಪ ಗಿಟ್ಟಿಸಲು ಶೆಟ್ಟರ್ ಹೊರಟಿದ್ದಾರೆ. ಲಿಂಗಾಯತ ಮತಗಳನ್ನು ಗಟ್ಟಿಗೊಳಿಸುತ್ತಿದ್ದಾರೆ. ಶೆಟ್ಟರ್ ಅವರಿಗಿರುವ ಸೌಮ್ಯ, ಮೃದು ಸ್ವಭಾವ, ಸರಳ ಸಜ್ಜನಿಕೆಯ ವರ್ಚಸ್ಸು ನೆರವಿಗೆ ಬರಲಿದೆ. ಕಾಂಗ್ರೆಸ್‌ನ ಸಂಪ್ರದಾಯ ಮತಗಳಾದ ದಲಿತರು, ಮುಸ್ಲಿಮರು, ಕ್ರೈಸ್ತರ ಜೊತೆ ತಮ್ಮ ಸಮುದಾಯದ ಮತಗಳನ್ನು ಒಟ್ಟುಗೂಡಿಸಲು ಬೆವರು ಸುರಿಸುತ್ತಿದ್ದಾರೆ.

ವಿರೋಧಿ ಪಾಳೆಯದಲ್ಲಿ ಶೆಟ್ಟರ್ ಸೇರಿರುವುದು ಬಿಜೆಪಿಗೆ ಮರ್ಮಾಘಾತ ನೀಡಿದೆ. ‘ಉಂಡೂ ಹೋದ, ಕೊಂಡೂ ಹೋದ...’ ಎಂದು ಶೆಟ್ಟರ್ ಅವರನ್ನು ಬಿಂಬಿಸಲು ಬಿಜೆಪಿ ಯತ್ನಿಸುತ್ತಿದೆ. ‘ಡ್ಯಾಮೇಜ್ ಕಂಟ್ರೋಲ್’ ಮಾಡಲು ಪಕ್ಷವು ಅದೇ ಸಮುದಾಯಕ್ಕೆ ಸೇರಿದ ಮಹೇಶ ಟೆಂಗಿನಕಾಯಿ ಅವರನ್ನು ಕಣಕ್ಕಿಳಿಸಿದೆ. ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದ ಟೆಂಗಿನಕಾಯಿ ಹೆಸರು ಪಕ್ಷದಾಚೆ ಕೇಳಿಬಂದಿದ್ದು ವಿರಳ. ಅವರು ಪಕ್ಷದ ಸಂಘಟನೆ ಹಾಗೂ ಕಟ್ಟಾ ಬೆಂಬಲಿಗರನ್ನು ಆಶ್ರಯಿಸಿದ್ದಾರೆ. ಮೋದಿ, ಅಮಿತ್ ಶಾ, ಯಡಿಯೂರಪ್ಪ, ಪ್ರಲ್ಹಾದ ಜೋಶಿ ಪ್ರಭಾವಳಿಯನ್ನು ನೆಚ್ಚಿಕೊಂಡಿದ್ದಾರೆ.

ಹುಬ್ಬಳ್ಳಿ– ಧಾರವಾಡ ಪೂರ್ವ (ಎಸ್.ಸಿ ಮೀಸಲು ಕ್ಷೇತ್ರ)

ಶಾಸಕ, ಬಲಗೈ ಸಮುದಾಯದ ಪ್ರಸಾದ ಅಬ್ಬಯ್ಯ ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದಾರೆ. ಪಕ್ಷದ ಸಾಂಪ್ರದಾಯಿಕ ಮತಗಳ ಜೊತೆ ಶೆಟ್ಟರ್ ಸೇರ್ಪಡೆಯಿಂದ ಲಿಂಗಾಯತ ಮತಗಳೂ ತಮ್ಮ ಕಡೆ ಬರಲಿವೆ. ಇದು ಹ್ಯಾಟ್ರಿಕ್ ಗೆಲುವಿಗೆ ಸಹಕಾರಿಯಾಗಲಿದೆ ಎನ್ನುವ ವಿಶ್ವಾಸದಲ್ಲಿದ್ದಾರೆ. ಬಿಜೆಪಿಯಿಂದ ಬಲಗೈ ಸಮುದಾಯದ ಡಾ. ಕ್ರಾಂತಿಕಿರಣ ಮೊದಲ ಬಾರಿಗೆ ಕಣಕ್ಕಿಳಿದಿದ್ದಾರೆ. ಪಕ್ಷದ ಸಂಘಟನೆ ಹಾಗೂ ಕಟ್ಟಾ ಬೆಂಬಲಿಗರನ್ನು ನಂಬಿಕೊಂಡಿದ್ದಾರೆ. ಬಿಜೆಪಿ ಟಿಕೆಟ್ ಸಿಗದಿದ್ದರಿಂದ ಎಡಗೈ ಸಮುದಾಯದ ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ ಜೆಡಿಎಸ್ ಸೇರಿದ್ದು, ಬಿಜೆಪಿ ಮತ ಕೀಳುವ ಸಾಧ್ಯತೆ ಇದೆ.

ಹುಬ್ಬಳ್ಳಿ–ಧಾರವಾಡ ಪಶ್ಚಿಮ

ಶಾಸಕ, ಪಂಚಮಸಾಲಿ ಲಿಂಗಾಯತ ಸಮಾಜದ ಅರವಿಂದ ಬೆಲ್ಲದ ಬಿಜೆಪಿಯಿಂದ ಪುನಃ ಕಣಕ್ಕಿಳಿದಿದ್ದಾರೆ. ಬಿಜೆಪಿಯಿಂದ ಟಿಕೆಟ್ ಬಯಸಿದ್ದ ಪಾಲಿಕೆ ಮೇಯರ್ ಈರೇಶ ಅಂಚಟಗೇರಿ, ಟಿಕೆಟ್ ಸಿಗದಿದ್ದರಿಂದ ಚುನಾವಣೆಯಿಂದ ದೂರ ಉಳಿದಿದ್ದಾರೆ. ಕಾಂಗ್ರೆಸ್‌ನಿಂದ ಬ್ರಾಹ್ಮಣ ಸಮಾಜದ ದೀಪಕ ಚಿಂಚೋರೆ ಕಣಕ್ಕಿಳಿದಿದ್ದಾರೆ. ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿದ್ದ ಬಸವರಾಜ ಮಲಕಾರಿ ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿ ಉಳಿದಿರುವುದು ಹಾಗೂ ಟಿಕೆಟ್ ವಂಚಿತ ಆಕಾಂಕ್ಷಿಗಳು ಪ್ರಚಾರದಲ್ಲಿ ಕಾಣಿಸಿಕೊಳ್ಳದಿರುವುದು ಚಿಂಚೋರೆಗೆ ಹಿನ್ನಡೆಯಾಗಲಿದೆ.

ಧಾರವಾಡ ಕ್ಷೇತ್ರ

ಶಾಸಕ, ಬಿಜೆಪಿಯ ಅಮೃತ ದೇಸಾಯಿ ಮತ್ತೆ ಕಣಕ್ಕಿಳಿದಿದ್ದಾರೆ. ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ತವನಪ್ಪ ಅಷ್ಟಗಿ ಕಾಂಗ್ರೆಸ್ ಸೇರಿರುವುದು ಇವರಿಗೆ ಮುಳುವಾಗುವ ಸಾಧ್ಯತೆ ಇದೆ. ಕಳೆದ ಚುನಾವಣೆಯಲ್ಲಿ ಇವರಿಗೆ ಎದುರಾಳಿಯಾಗಿದ್ದ ಕಾಂಗ್ರೆಸ್‌ನ ವಿನಯ ಕುಲಕರ್ಣಿ ಪುನಃ ಸ್ಪರ್ಧಿಸಿದ್ದಾರೆ. ಜಿಲ್ಲಾ ಪಂಚಾಯ್ತಿ ಸದಸ್ಯ ಯೋಗೀಶಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿನಯ ಕುಲಕರ್ಣಿ ಜಿಲ್ಲೆಯಿಂದ ಗಡಿಪಾರಾಗಿದ್ದು, ಅವರ ಪತ್ನಿ ಶಿವಲೀಲಾ ಕುಲಕರ್ಣಿ ಪ್ರಚಾರ ಮಾಡುತ್ತಿದ್ದಾರೆ. 2013–18ರ ಅವಧಿಯಲ್ಲಿ ಶಾಸಕರಾಗಿದ್ದಾಗ ಮಾಡಿದ ಅಭಿವೃದ್ಧಿಯ ಕೆಲಸಗಳು ತಮ್ಮ ಕೈಹಿಡಿಯುತ್ತವೆ ಎನ್ನುವ ವಿಶ್ವಾಸದಲ್ಲಿದ್ದಾರೆ ವಿನಯ.

ಕುಂದಗೋಳ

ಬಿಜೆಪಿಯಿಂದ ಬಂಡಾಯವೆದ್ದು ಪಕ್ಷೇತರರಾಗಿ ಸ್ಪರ್ಧಿಸಿರುವ, ಪಂಚಮಸಾಲಿ ಲಿಂಗಾಯತ ಸಮುದಾಯದ ಎಸ್.ಐ. ಚಿಕ್ಕನಗೌಡರ ಅವರಿಂದಾಗಿ ಕಣದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಇವರ ಸ್ಪರ್ಧೆಯಿಂದಾಗಿ ಬಿಜೆಪಿಯ ಎಂ.ಆರ್.ಪಾಟೀಲ ಅವರ ಮತಗಳು ಒಡೆದುಹೋಗುವ ಸಾಧ್ಯತೆ ಇದೆ. ಇವರಿಬ್ಬರ ನಡುವಿನ ತಿಕ್ಕಾಟವು ಕಾಂಗ್ರೆಸ್ ಅಭ್ಯರ್ಥಿ, ಶಾಸಕಿ, ಕುರುಬ ಸಮುದಾಯದ ಕುಸುಮಾವತಿ ಶಿವಳ್ಳಿ ಅವರಿಗೆ ಅನುಕೂಲವಾಗುವ ಸಾಧ್ಯತೆ ಇದೆ. ಕುಸುಮಾವತಿ ವಿರುದ್ಧ ಅವರ ಪಕ್ಷದ ಎಂಟು ಜನ ನಾಯಕರು ತಿರುಗಿ ಬಿದ್ದಿದ್ದು, ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರಬಹುದು.

ಕಲಘಟಗಿ

ಶೆಟ್ಟರ್ ಜೊತೆ ಬಿಜೆಪಿ ಟಿಕೆಟ್ ವಂಚಿತ ಶಾಸಕರಲ್ಲಿ ಸಿ.ಎಂ. ನಿಂಬಣ್ಣವರ ಕೂಡ ಸೇರಿದ್ದಾರೆ. ಕಾಂಗ್ರೆಸ್ ಟಿಕೆಟ್ ಸಿಗದಿದ್ದರಿಂದ ಕೊನೆಯ ಗಳಿಗೆಯಲ್ಲಿ ಸೇರ್ಪಡೆಯಾದ ನಾಗರಾಜ ಛಬ್ಬಿ ಅವರಿಗೆ ಬಿಜೆಪಿ ಟಿಕೆಟ್ ನೀಡಿ ಕಣಕ್ಕಿಳಿಸಿದೆ. ಕಳೆದ ಚುನಾವಣೆಯಲ್ಲಿ ಜೊತೆಗೂಡಿ ಕೆಲಸ ಮಾಡಿದ ಕಾಂಗ್ರೆಸ್‌ನ ಸಂತೋಷ ಲಾಡ್ ಅವರಿಗೆ ಸ್ಪರ್ಧೆಯೊಡ್ಡಿದ್ದಾರೆ. ನಿಂಬಣ್ಣವರ ಸೇರಿದಂತೆ ಬಿಜೆಪಿಯಲ್ಲಿ ಅನೇಕ ಜನ ಟಿಕೆಟ್ ಆಕಾಂಕ್ಷಿಗಳಿದ್ದರು. ಕೊನೆ ಕ್ಷಣದಲ್ಲಿ ಕಾಂಗ್ರೆಸ್‌ನಿಂದ ಬಂದ ಛಬ್ಬಿಗೆ ಟಿಕೆಟ್ ನೀಡಿದ್ದರಿಂದ ಒಳಗೊಳಗೆ ಅಸಮಾಧಾನ ಇದೆ. ಬಿಜೆಪಿಗೆ ಒಳ ಏಟು ಬೀಳುವ ಸಾಧ್ಯತೆ ಇದೆ.

ನವಲಗುಂದ

ಶಾಸಕ, ಪಂಚಮಸಾಲಿ ಲಿಂಗಾಯತ ಸಮುದಾಯದ ಶಂಕರ ಪಾಟೀಲ ಮುನೇನಕೊಪ್ಪ ಹಾಗೂ ಕಾಂಗ್ರೆಸ್‌ನ ರಡ್ಡಿಲಿಂಗಾಯತ ಸಮಾಜದ ಎನ್.ಎಚ್. ಕೋನರಡ್ಡಿ ನಡುವೆ ತೀವ್ರ ಪೈಪೋಟಿ ಇದೆ. ಕಾಂಗ್ರೆಸ್ ಟಿಕೆಟ್ ಸಿಗದಿದ್ದರಿಂದ ಮುನಿಸಿಕೊಂಡ ಕುರುಬ ಸಮಾಜದ ಕೆ.ಎನ್. ಗಡ್ಡಿ ಜೆಡಿಎಸ್ ಸೇರಿದ್ದಾರೆ. ಇವರು ತಮ್ಮೊಂದಿಗೆ ಸಮುದಾಯದ ಮತಗಳನ್ನು ಕೊಂಡೊಯ್ದರೆ ಕೋನರಡ್ಡಿಗೆ ಕಷ್ಟವಾಗಬಹುದು. ಈ ನಷ್ಟವನ್ನು ಸರಿದೂಗಿಸಲು, ಇದೇ ಸಮುದಾಯದ ವಿನೋದ ಅಸೂಟಿ ಅವರನ್ನು ತಮ್ಮೊಂದಿಗೆ ಕರೆದುಕೊಂಡು ಕೋನರಡ್ಡಿ ಪ್ರಚಾರ ಮಾಡುತ್ತಿದ್ದಾರೆ. ನಾಮಪತ್ರ ವಾಪಸ್ ಪಡೆದಿರುವ ಕುರುಬ ಸಮಾಜದ ಶಿವಾನಂದ ಕರಿಗಾರ, ಇನ್ನೂ ತಮ್ಮ ಬೆಂಬಲ ಯಾರಿಗೆ ಎನ್ನುವುದನ್ನು ಬಹಿರಂಗಪಡಿಸದಿರುವುದು ಕುತೂಹಲ ಮೂಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.