ಕನ್ನಡದ ಜನಪ್ರಿಯ ನಟರಲ್ಲಿ ಒಬ್ಬರಾದ ಸುದೀಪ್ ಅವರಿಗೆ ಬಾಲಿವುಡ್ ಹೊಸದಲ್ಲ. ರಾಮ್‌ಗೋಪಾಲ್ ವರ್ಮ ನಿರ್ದೇಶಿಸಿದ ‘ರಣ್’ ಸೇರಿದಂತೆ ಹಲವು ಚಿತ್ರಗಳಲ್ಲಿ ಅವರು ಬಾಲಿವುಡ್ ತೆರೆಯ ಮೇಲೆ ಮಿಂಚಿದವರೇ.

ಈಗ ಪ್ರಭುದೇವ ನಿರ್ದೇಶನದ ‘ದಬಾಂಗ್ 3’ ಚಿತ್ರದಲ್ಲಿ ಅವರು ಸಲ್ಮಾನ್ ಖಾನ್ ಅವರ ಜೊತೆ ನಟಿಸಿದ್ದಾರೆ. ಇದು ಶುಕ್ರವಾರ (ಡಿ. 20) ಬಿಡುಗಡೆ ಆಗುತ್ತಿದೆ. ಸುದೀಪ್ ಅವರು ಈ ಹಿಂದೆ ನಟಿಸಿದ ಹಿಂದಿ ಸಿನಿಮಾಗಳಿಗೂ ‘ದಬಾಂಗ್ 3’ ಸಿನಿಮಾಕ್ಕೂ ಒಂದು ವ್ಯತ್ಯಾಸ ಇದೆ. ಈ ಚಿತ್ರವು ಕನ್ನಡದಲ್ಲಿ ಕೂಡ ಡಬ್ ಆಗಿ ಬರುತ್ತಿದೆ. ‘ಈ ಸಿನಿಮಾ ಹಿಂದಿಯದ್ದು ಎಂದು ಭಾವಿಸಬೇಕಿಲ್ಲ. ಇದು ಕನ್ನಡ ಚಿತ್ರವೂ ಹೌದು’ ಎಂದು ಸುದೀಪ್ ಹೇಳುತ್ತಿದ್ದಾರೆ.

ದಬಾಂಗ್ 3 ಬಿಡುಗಡೆಗೂ ಮೊದಲು ಸುದೀಪ್ ಅವರು ‘ಸಿನಿಮಾ ಪುರವಣಿ’ಗೆ ನೀಡಿದ ಸಂದರ್ಶನದಲ್ಲಿ ಕೂಡ ಡಬ್ಬಿಂಗ್ ವಿಚಾರವಾಗಿ ಮಾತನಾಡಿದರು. ‘ಡಬ್ಬಿಂಗ್‌ನಿಂದ ಯಾವ ರೀತಿಯ ಪರಿಣಾಮಗಳು ಆಗಬಹುದು ಎಂದು ಪ್ರಶ್ನಿಸಿದಾಗ’ ಸುದೀಪ್ ಅವರು, ‘ಗಟ್ಟಿತನ ಇರುವ ಯಾವುದರ ಮೇಲೆಯೂ ಯಾವುದೂ ಪರಿಣಾಮ ಬೀರುವುದಿಲ್ಲ. ಕನ್ನಡ ಅಥವಾ ಯಾವುದೇ ಭಾಷೆಯ, ಗಟ್ಟಿತನ ಇರುವ ಸ್ಕ್ರಿಪ್ಟ್‌ಗಳು ಬೇರೆಯದರ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯ ಇಲ್ಲ’ ಎನ್ನುತ್ತ ಮಾತು ಆರಂಭಿಸಿದರು.

‘ಕೋಟೆಗಳು ಇರುವವರೆಗೆ ಆಕ್ರಮಣಗಳು ಇದ್ದೇ ಇರುತ್ತವೆ. ಸಾಮ್ರಾಜ್ಯಗಳು ಇರುವತನಕ ಸಾಮ್ರಾಟರು ಇದ್ದೇ ಇರುತ್ತಾರೆ. ಬೇರೆಯವರು ನಮ್ಮ ರಾಜ್ಯಕ್ಕೆ ಬಂದು ನಮ್ಮ ಭಾಷೆಯಲ್ಲಿ ಮಾತನಾಡಲು ಬಯಕೆ ವ್ಯಕ್ತಪಡಿಸಿದರೆ ಅವರನ್ನು ನಾವು ಸ್ವಾಗತಿಸಬೇಕು. ಕನ್ನಡದಲ್ಲಿ ಅವರು ಮಾತನಾಡುವುದನ್ನು ನಾವು ಸ್ವಾಗತಿಸಬೇಕು. ಅವರು ಕನ್ನಡದಲ್ಲಿ ಮಾತನಾಡುವುದಾಗಿ ಹೇಳಿದರೆ ನಾವು ಯಾಕೆ ಅವರನ್ನು ದೂರ ಇರಿಸಬೇಕು’ ಎಂದು ಪ್ರಶ್ನಿಸಿದರು ಸುದೀಪ್.

‘ಅವರು ನಮ್ಮ ಭಾಷೆಯಲ್ಲಿ ಮಾತನಾಡಲಿ. ಬೇರೆಯವರು ನಮ್ಮ ಭಾಷೆಯಲ್ಲಿ ಮಾತನಾಡಲು ಸಾಧ್ಯವಾದಾಗ ನಮ್ಮ ಭಾಷೆ ಕೂಡ ಬೆಳೆಯುತ್ತದೆ. ನಮ್ಮ ಭಾಷೆ ಬೇರೆಯವರಿಗೆ ಹತ್ತಿರವಾಗಲು ಆರಂಭವಾಗುತ್ತದೆ. ಈಚೆಗೆ ಒಂದು ಹಾಲಿವುಡ್ ಸಿನಿಮಾ (ಟರ್ಮಿನೇಟರ್: ಡಾರ್ಕ್ ಫೇಟ್) ಕೂಡ ಕನ್ನಡಕ್ಕೆ ಬಂದಿತ್ತು. ಅಂದರೆ ಬೇರೆಯವರಿಗೆ ನಮ್ಮ ಭಾಷೆ ಹತ್ತಿರವಾಗಲು ಆರಂಭವಾಗಿದೆ ಎಂದಾಯಿತು. ನಮ್ಮ ಸಿನಿಮಾಗಳು ಬೇರೆ ಭಾಷೆಗಳಿಗೆ ಡಬ್ ಆಗುವಂತೆಯೇ ಬೇರೆಯವರಿಗೂ ನಮ್ಮ ಭಾಷೆಗೆ ಡಬ್ ಮಾಡುವ ಸ್ವಾತಂತ್ರ್ಯ ಇದೆ’ ಎನ್ನುವ ವಿವರಣೆ ನೀಡಿದರು.

ಕಿಚ್ಚ ಕಂಡಂತೆ ಸಲ್ಮಾನ್

ಅಭಿಮಾನಿಗಳ ಪಾಲಿನ ‘ಕಿಚ್ಚ’, ದಬಾಂಗ್ 3 ಚಿತ್ರದಲ್ಲಿ ಖಳನ ಪಾತ್ರ ನಿಭಾಯಿಸಿದ್ದಾರೆ. ಸಲ್ಮಾನ್ ಖಾನ್ ಅವರಿಗೆ ಎದುರಾಗಿ ನಿಲ್ಲುವ ಪಾತ್ರ ಅದು. ಮಾತು ಸಲ್ಮಾನ್ ಅವರ ಕುರಿತು ತಿರುಗಿದಾಗ, ಕಿಚ್ಚ ಹೇಳಿದ್ದು ಹೀಗೆ:

‘ನಾನು ಕಾಲೇಜು ದಿನಗಳಿಂದಲೂ ಸಲ್ಮಾನ್ ಸಿನಿಮಾ ನೋಡುತ್ತಿದ್ದೇನೆ. ನಾವು ಅವರನ್ನು ಆದರಿಸಬಹುದು. ನಾವೆಲ್ಲರೂ ನಮ್ಮ ಹೀರೊಗಳ ಜೊತೆ ಒಂದಲ್ಲ ಒಂದು ರೀತಿಯಲ್ಲಿ ಗುರುತಿಸಿಕೊಳ್ಳಬಹುದು. ಸಲ್ಮಾನ್ ಅವರು ಸ್ನೇಹಿತರ ಸ್ನೇಹಿತ ಎಂದು ಬೇರೆಯವರು ಹೇಳುವುದನ್ನು ಕೇಳಿದ್ದೆ. ಅಂಥ ವ್ಯಕ್ತಿಯ ಜೊತೆ ಕೆಲಸ ಮಾಡುವ ಒಂದು ಅವಕಾಶ ಸಿಕ್ಕಿದ್ದು ಒಂದು ರೀತಿಯಲ್ಲಿ ಕನಸು ನನಸಾದಂತೆ. ಅವರನ್ನು ಇನ್ನಷ್ಟು ಚೆನ್ನಾಗಿ ಅರ್ಥ ಮಾಡಿಕೊಳ್ಳುವ ಅವಕಾಶ ನನಗೆ ಸಿಕ್ಕಿತು. ಅವರು ಅದ್ಭುತ ಮನುಷ್ಯ. ನಾನು ಈ ಚಿತ್ರದಲ್ಲಿ ನಟಿಸುವ ತೀರ್ಮಾನ ಕೈಗೊಂಡಿದ್ದಕ್ಕೆ ಬಹಳ ಖುಷಿಯಿದೆ. ತೆರೆಯ ಮೇಲೆ ಚೆನ್ನಾಗಿ ಕಾಣಿಸುವುದು ಅವರಿಗೆ ತೀರಾ ಸಹಜ. ಆದರೆ ನಾನು ಅದಕ್ಕಾಗಿ ಹೆಚ್ಚು ಕೆಲಸ ಮಾಡಬೇಕಾಗಿತ್ತು.’

ಸುದೀಪ್ ಅವರು ಸಲ್ಮಾನ್ ಅವರಲ್ಲಿ ಬಹಳ ಮೆಚ್ಚಿಕೊಂಡಿದ್ದು ಹಾಸ್ಯಪ್ರಜ್ಞೆಯನ್ನು. ಸಲ್ಮಾನ್ ಅವರು ಮಾಡುವ ಹಾಸ್ಯಗಳು ಇನ್ನೊಬ್ಬರನ್ನು ನೋಯಿಸುವ ಗುಣ ಹೊಂದಿರುವುದಿಲ್ಲ ಎನ್ನುವುದು ಕಿಚ್ಚ ಹೇಳುವ ಮಾತು. ‘ಸಲ್ಮಾನ್ ಅವರ ಬಳಿ ಸುಳ್ಳು ಹೇಳುವುದು ಸುಲಭವಲ್ಲ. ಅವರು ಬಹಳ ಬೇಗ ಸುಳ್ಳನ್ನು ಗುರುತಿಸಿಬಿಡುತ್ತಾರೆ. ಯಾವುದು ಶುದ್ಧ, ಯಾವುದು ಅಶುದ್ಧ ಎಂಬುದನ್ನು ಸಹ ಅವರು ಬಹಳ ಬೇಗ ಗುರುತಿಸುತ್ತಾರೆ. ಅವರು ಕೆಲವೇ ಕೆಲವು ಜನರನ್ನು ಆತ್ಮೀಯ ವಲಯಕ್ಕೆ ಸೇರಿಸಿಕೊಳ್ಳುತ್ತಾರೆ’ ಎಂದರು.

‘ದಬಾಂಗ್ 3 ಸಿನಿಮಾಕ್ಕಾಗಿ ಮಾಡಿದ ಕೆಲಸ ನಿಮ್ಮ ಮೇಲೆ ಒತ್ತಡ ಸೃಷ್ಟಿಸಿತಾ’ ಎಂದು ಪ್ರಶ್ನಿಸಿದಾಗ, ‘ನಾನು ಒತ್ತಡಗಳನ್ನು ಇಷ್ಟಪಡುವವ’ ಎಂಬ ಉತ್ತರ ನೀಡಿದರು. ‘ಜೀವನದಲ್ಲಿ ಒತ್ತಡ ಇಲ್ಲದಿದ್ದರೆ ಯಾರೂ ಮೇಲೆ ಬರಲಿಕ್ಕೆ ಆಗಲಿಕ್ಕಿಲ್ಲ. ಹಾಗಾಗಿ ನನಗೆ ಒತ್ತಡಗಳು ಇಷ್ಟವಾಗುತ್ತವೆ. ಆದರೆ ಈ ಸಿನಿಮಾ ಕೆಲಸ ಮಾಡುವಾಗ ನನ್ನ ಮೇಲೆ ಸ್ಟ್ರೆಸ್ ಇರಲಿಲ್ಲ’ ಎಂದರು.

ನಿರ್ದೇಶಕ ಪ್ರಭುದೇವ ಅವರನ್ನು ಚಿಕ್ಕ ಮಗುವಿಗೆ ಹೋಲಿಸಿದ ಸುದೀಪ್, ‘ಅವರು ಬಹಳ ಕಡಿಮೆ ಮಾತನಾಡುತ್ತಾರೆ. ಆದರೆ, ಬಹಳ ಚುರುಕಾಗಿ ಕೆಲಸ ಮಾಡುತ್ತಾರೆ. ಸಲ್ಮಾನ್ ಕೂಡ ಪ್ರಭುದೇವ ಅವರನ್ನು ಬಹಳ ಗೌರವಿಸುತ್ತಾರೆ. ಅಷ್ಟೇ ಅಲ್ಲ, ಪ್ರಭುದೇವ ಹೇಳಿದ್ದನ್ನು ಬಹಳ ಅಚ್ಚುಕಟ್ಟಾಗಿ ಮಾಡುತ್ತಿದ್ದರು’ ಎಂದು ನೆನಪಿಸಿಕೊಂಡರು.

ಸೋಲುಗಳನ್ನು ಹೇಗೆ ನಿಭಾಯಿಸುತ್ತಾರೆ ಸುದೀಪ್?

‘ಸೋಲುಗಳನ್ನು ನಿಭಾಯಿಸುವುದು ಸುಲಭ. ಒಂದು ಸಿನಿಮಾ ಯಾಕೆ ಗೆಲ್ಲಲಿಲ್ಲ ಎಂಬುದನ್ನು ಅರ್ಥ ಮಾಡಿಕೊಂಡರೆ ಸಾಕಾಗುತ್ತದೆ. ಆದರೆ, ಗೆಲುವನ್ನು ನಿಭಾಯಿಸುವುದು ಕಷ್ಟದ ಕೆಲಸ. ಸೋಲಿನಲ್ಲಿ ನಮಗೆ ನಮ್ಮ ತಪ್ಪು ಏನು ಎಂಬುದು ಗೊತ್ತಾಗುತ್ತದೆ. ಆ ತಪ್ಪು ಮತ್ತೆ ಆಗದಂತೆ ನೋಡಿಕೊಳ್ಳಬೇಕು. ಮೊದಲು ನನಗೆ ಸೋಲು ಕಾಡುತ್ತಿತ್ತು. ಆದರೆ ಈಗ ಹಾಗೆ ಆಗುತ್ತಿಲ್ಲ.’

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.