ಚಿತ್ರ: ಮನ್‌ಮರ್ಜಿಯಾ (ಹಿಂದಿ)
ನಿರ್ಮಾಣ: ಆನಂದ್ ಎಲ್. ರೈ, ವಿಕಾಸ್ ಬೆಹ್ಲ್, ವಿಕ್ರಮಾದಿತ್ಯ ಮೋಟ್ವಾನೆ, ಅನುರಾಗ್ ಕಶ್ಯಪ್
ನಿರ್ದೇಶನ: ಅನುರಾಗ್ ಕಶ್ಯಪ್
ತಾರಾಗಣ: ತಾಪ್ಸಿ ಪನ್ನು, ವಿಕ್ಕಿ ಕೌಶಲ್, ಅಭಿಷೇಕ್ ಬಚ್ಚನ್

ಮದುವೆಯ ಹಿಂದಿನ ದಿನ ರಾತ್ರಿ ವಧು ಇನ್ನೂ ಒಣಗದ ಮೆಹೆಂದಿ ಮೆತ್ತಿದ ಕೈಯನ್ನು ಬುಲೆಟ್ ಆ್ಯಕ್ಸಲರೇಟರ್ ಹಿಡಿಯಲು ಬಳಸುತ್ತಾಳೆ. ವರನ ಮನೆ ಎದುರು ನಿಂತು, ಮೆಲ್ಲಗೆ ಅವನನ್ನು ಹೊರಗೆ ಕರೆಯುತ್ತಾಳೆ. ‘ನಾನು ನಾಳೆ ಮದುವೆಗೆ ಬರುವುದಿಲ್ಲ’ ಎಂದು ಹೇಳಿ, ಅದೇ ವರನಿಂದ ಬೈಕ್ ಕಿಕ್ ಮಾಡಿಸಿಕೊಂಡು ಹೊರಟುಬಿಡುತ್ತಾಳೆ; ಶಬ್ದ ಹೊಮ್ಮಿಸುತ್ತಾ. ಮರುದಿನ ಅವಳು ಮದುವೆಗೆ ಬರುತ್ತಾಳೆ. ವರನೂ ಅವನೇ.ಇಂಥ ಅವಳಿಗೆ ಒಬ್ಬ ಪ್ರೇಮಿ. ಅವನು ಡಿ.ಜೆ. ಸರಸಕ್ಕೆ ಸದಾ ಮುಂದು. ‘ಮದುವೆ ಪ್ರಸ್ತಾವ ತಾ’ ಎಂದರೆ ಮಾತ್ರ ಹಿಂದು. ಓಡಿಹೋಗಲು ಸಿದ್ಧ. ಪರ್ಸನ್ನೂ ಮರೆತುಬರುವಷ್ಟು ಬೇಜವಾಬ್ದಾರ.

ಒಂದು ಕಡೆ ಸಂಭಾವಿತ ಗಂಡನದ್ದೂ ಇನ್ನೊಂದು ಕಡೆ ‘ನಾ ನಿನ್ನ ಬಿಡಲಾರೆ’ ಎನ್ನುತ್ತ ನಿಂತ ಉಡಾಳ ಪ್ರೇಮಯದ್ದೂ ಕೈಗಳನ್ನು ಹಿಡಿದುಕೊಳ್ಳುವ ನಾಯಕಿ, ತನ್ನ ಮನಸೋಇಚ್ಛೆ ಬೇಕೆನಿಸಿದವರ ತೆಕ್ಕೆಗೆ ಜಾರುತ್ತಾಳೆ.
ಅವಳದ್ದು ನೇರ ವ್ಯಕ್ತಿತ್ವ. ದಿಟ್ಟೆ. ಹಾಕಿ ಆಟಗಾರ್ತಿ. ಕೋಪ ಬಂದಾಗ ಜೋರಾಗಿ ಓಡುತ್ತಾಳೆ. ಮಧುಚಂದ್ರಕ್ಕೆಂದು ಕಾಶ್ಮೀರಕ್ಕೆ ಹೋದಾಗ ಬಿಳಿಬೆಟ್ಟದ ತಪ್ಪಲುಗಳ ಬುಡದ ನೀರಿನಲೆಗಳ ಎದುರು ಬಿಕ್ಕುತ್ತಾಳೆ. ಗಂಡನೊಟ್ಟಿಗೆ ಸರಸಕ್ಕೆ ದೀಪ ಆರಿಸಲೇಬೇಕು. ಪ್ರಿಯಕರನೊಟ್ಟಿಗೆ ಬೆಳಕಲ್ಲೇ ಕತ್ತಲು–ಬೆತ್ತಲಿನಾಟ.

ಹೀಗೆ, ಸಂಪ್ರದಾಯಸ್ಥ ಕುಟುಂಬದವರಲ್ಲೂ ತಣ್ಣಗಿನ ಪ್ರತಿಕ್ರಿಯೆ ಮೂಡಿಸಬಲ್ಲ ಜ್ವಾಲಾಮುಖಿಯಂತೆ ಕಾಣುವ ನಾಯಕಿ ಇವಳು. ‘ನಾನು ಕನ್ಯೆಯಾಗಿ ಉಳಿದಿಲ್ಲ’ ಎಂದು ಮಧುಚಂದ್ರದಲ್ಲೇ ಪತಿಗೆ ಅರುಹುವ ನೇರವಂತೆ.
ಇಂಥ ತ್ರಿಕೋನ ಪ್ರೇಮದ ಒಂದು ಕೋನವೇ ಆದ ಪತಿದೇವ ‘ಪರಮಾತ್ಮ’ನಂತೆ. ಅವಳಿಗೆ ಆಯ್ಕೆಯ ಅವಕಾಶವನ್ನೂ ಮುಕ್ತವಾಗಿ ಕೊಡುವ ಉದಾರಿ. ಅವಳದ್ದು ದಿಕ್ಕೆಟ್ಟ ದಾರಿ. ಪ್ರಿಯಕರನೂ ಬೇಕು, ಪತಿಯೂ ಇರಲಿ ಎನ್ನುವ ವಿಶಾಲ ಮನಸ್ಸು. ಆದರೂ ಬಾಳಪಥದಲ್ಲಿ ಒಂದರ ಆಯ್ಕೆ ಮಾತ್ರ ಅನಿವಾರ್ಯವಲ್ಲ; ಕೊನೆಗೆ ಅವಳು ಓಡಿ ಬರುವುದು ಯಾರ ತೆಕ್ಕೆಗೆ? ಇದೊಂದು ಸಸ್ಪೆನ್ಸ್ ನೋಡುಗರಿಗೆ ಇರಲಿ.

‘ದೇವ್ ಡಿ’ ಮೂಲಕ ದೇವದಾಸನ ಪುನರುತ್ಥಾನ ಮಾಡಿದ್ದ ನಿರ್ದೇಶಕ ಅನುರಾಗ್ ಕಶ್ಯಪ್, ಈ ಸಲ ದೇವದಾಸನದ್ದೇ ಸ್ತ್ರೀ ಅಪರಾವತಾರವನ್ನು ನಾಯಕಿಗೆ ತುಂಬಿದ್ದಾರೆ. ಇಡೀ ಚಿತ್ರವನ್ನು ತಾಪ್ಸಿ ಪನ್ನು ತಮ್ಮ ಚೂಪು ಮೂಗಿನ ಮೇಲೆ ನಿಲ್ಲಿಸಿಕೊಂಡಿದ್ದಾರೆ. ಅವರ ದಾಡಸೀ ನಡೆ, ಕಡ್ಡಿ ತುಂಡು ಮಾಡಿದಂಥ ಮಾತು, ಮೌನವನ್ನೂ ಸೀಳಿಬಿಡುವ ನೋಟ, ಸರಸ ವೈಶಾಲ್ಯ... ಯಾವುದಕ್ಕೂ ಅಂಕ ಕೊಡುವುದರಲ್ಲಿ ಜುಗ್ಗರಾಗಲಾರೆವು. ವಿಕ್ಕಿ ಕೌಶಲ್ ಕೂಡ ಗಂಟಲು ಉಬ್ಬಿಬರುವುದನ್ನು ಎಷ್ಟು ಗಾಢವಾಗಿ ತೋರುತ್ತಾರೋ, ಮದುವೆಯ ರಾತ್ರಿ ವಧುವಿನ ಮನೆಯ ಎದುರು ಪ್ರತಿಭಟನಾರ್ಥದ ಟಿ–ಶರ್ಟ್ ತೊಟ್ಟು ನಿಂತು ಪ್ರೇಮಾತಿರೇಕವನ್ನೂ ತುಳುಕಿಸುತ್ತಾರೆ. ಇಬ್ಬರ ‘ಜಗಳ್‌ಬಂದಿ’ಯಲ್ಲಿ ಅಭಿಷೇಕ್ ಬಚ್ಚನ್ ಮೌನಪ್ರವಾಹ ಕಾಡುತ್ತದೆ. ಸರ್ದಾರ್‌ಜೀ ತರಹವೇ ಕಾಣುವ ಅವರ ನಯನಾಭಿನಯಕ್ಕೆ ಶಹಬ್ಬಾಸ್.

ಅಮಿತ್ ತ್ರಿವೇದಿ ಸಂಗೀತದ ಪಂಜಾಬಿ ಸ್ಥಾಯಿ, ಪಾತ್ರಗಳ ಚಲನೆಯ ಜೊತೆಗೇ ಸಾಗುವ ಸೆಲ್ವೆಸ್ಟರ್ ಫೋನ್ಸೆಕಾ ಕ್ಯಾಮೆರಾ ಸಿನಿಮಾಗೆ ವೇಗ ದಕ್ಕಿಸಿಕೊಟ್ಟಿವೆ. ದಿಟ್ಟೆಯಂತೆ ಕಂಡರೂ ಕಂಗೆಟ್ಟ ನಾಯಕಿಯ ತ್ರಿಕೋನ ಪ್ರೇಮದ ವಿವರಗಳೇ ಇಡುಕಿರಿದ ಈ ಸಿನಿಮಾದ ಉದ್ದೇಶವೇನು ಎನ್ನುವುದು ಮಾತ್ರ ಸ್ಪಷ್ಟವಾಗುವುದೇ ಇಲ್ಲ. ಅದೂ ಅನುರಾಗ್ ಕಶ್ಯಪ್ ಮಾದರಿಯೇ ಹೌದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.