ಶಕ್ತಿವಂತರು, ಬಲಾಢ್ಯರು, ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕವಾಗಿ ಮುಂದುವರಿದವರು ಮೀಸಲಾತಿಯನ್ನು ಬಳಸಿಕೊಂಡು ರಾಜಕೀಯ ಪ್ರಾತಿನಿಧ್ಯ ಪಡೆದುಕೊಳ್ಳುತ್ತಿದ್ದಾರೆ. ಈಗ ಇರುವ ಸ್ಥಿತಿಯಲ್ಲಿ ಮೀಸಲಾತಿಯು ‘ಆಕಾಶದಲ್ಲಿ ಕಾಣುವ ಒಂದು ಚಿಕ್ಕಾಸು’ ಎಂದಷ್ಟೇ ವ್ಯಾಖ್ಯಾನಿಸಬಹುದು.

ಸಾಮಾಜಿಕ ನ್ಯಾಯ, ಆರ್ಥಿಕ ನ್ಯಾಯ ಮತ್ತು ರಾಜಕೀಯ ನ್ಯಾಯ ಎಂಬ ಅಂಶಗಳು ನಮ್ಮ ಸಂವಿಧಾನದ ಪೀಠಿಕೆಯಲ್ಲೇ ಇವೆ. ಸಾಮಾಜಿಕ ಮತ್ತು ಆರ್ಥಿಕ ಅಂಶಗಳನ್ನು ಆಧರಿಸಿ ಸಂವಿಧಾನದ 15(4), 15(5) ಮತ್ತು 16(4) ವಿಧಿಗಳ ಅಡಿಯಲ್ಲಿ ಮೀಸಲಾತಿ ಒದಗಿಸಲಾಗಿದೆ. ಶಿಕ್ಷಣ ಮತ್ತು ಉದ್ಯೋಗದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳು ಮತ್ತು ಹಿಂದುಳಿದ ವರ್ಗಗಳಿಗೆ ಮೀಸಲಾತಿ ಇದೆ. ಅದೂ ಸಂಪೂರ್ಣ ಪ್ರಮಾಣದಲ್ಲಿ ಇಲ್ಲ. ರಾಜಕೀಯ ಮೀಸಲಾತಿಗೆ ಬಂದಾಗ ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರಿಗೆ ಮಾತ್ರ ಮೀಸಲಾತಿ ಇದೆ. ಸಂಸತ್ತು ಮತ್ತು ವಿಧಾನಮಂಡಲಗಳಲ್ಲಿ ಸಣ್ಣಪುಟ್ಟ ಜಾತಿಗಳು ಚಿತ್ರದಲ್ಲೇ ಇಲ್ಲ. 1951ರಿಂದಲೂ ರಾಜಕೀಯ ಮೀಸಲಾತಿ ಕುರಿತು ಮಾತನಾಡುತ್ತಲೇ ಬಂದಿದ್ದೇವೆ.

ಕೆಳ ಹಂತದ ಆಡಳಿತ ವ್ಯವಸ್ಥೆಯಲ್ಲೂ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಇರಲಿಲ್ಲ.ಹಿಂದುಳಿದ ವರ್ಗಗಳ ಜನರಿಗೂ ಸ್ಥಳೀಯ ಆಡಳಿತದಲ್ಲಿ ಪ್ರಾತಿನಿಧ್ಯ ಕಲ್ಪಿಸುವ ಸದುದ್ದೇಶದಿಂದ ಸಂವಿಧಾನದ 243ನೇ ವಿಧಿಗೆ ತಿದ್ದುಪಡಿ ತರಲಾಯಿತು. ಆಗ ತಿದ್ದುಪಡಿಯಷ್ಟೇ ಬಂದಿತು. ಈ ತಿದ್ದುಪಡಿಯನ್ನು ಜಾರಿಗೆ ತರುವ ನಿಷ್ಠೆಯನ್ನು ಯಾರೂ ಪ್ರದರ್ಶಿಸಿರಲಿಲ್ಲ. ಹಿಂದುಳಿದ ವರ್ಗಗಳಿಗೆ ರಾಜಕೀಯ ಮೀಸಲಾತಿ ನೀಡುವ ವಿಚಾರದಲ್ಲಿ ಕರ್ನಾಟಕ ಒಂದು ಹೆಜ್ಜೆ ಮುಂದೆಯೇ ಇತ್ತು. ಕರ್ನಾಟಕದಲ್ಲಿ ರಾಮಕೃಷ್ಣ ಹೆಗಡೆ, ಅಬ್ದುಲ್ ನಜೀರ್ ಸಾಬ್ ಅವರು ಈ ನಿಷ್ಠೆಯನ್ನು ಪ್ರದರ್ಶಿಸಿದರು. ಅದಕ್ಕೆ ಪೂರಕವಾಗಿ ಕಾಯ್ದೆಗಳನ್ನು ತಂದು, ಮೂರು ಹಂತದ ಸ್ಥಳೀಯ ಸಂಸ್ಥೆಗಳನ್ನು ಸ್ಥಾಪಿಸಿದರು. ಅಲ್ಲಿ ಹಿಂದುಳಿದ ವರ್ಗಗಳಿಗೆ ರಾಜಕೀಯ ಮೀಸಲಾತಿ ಕಲ್ಪಿಸಿದರು.

ಆಗ ಚುನಾವಣೆಗಾಗಿ ತುರ್ತಾಗಿ ಮೀಸಲಾತಿ ಪಟ್ಟಿಯನ್ನು ಸಿದ್ಧಪಡಿಸಲಾಯಿತು. ನಾನು ಆಗ ಸರ್ಕಾರಿ ನೌಕರನಾಗಿದ್ದೆ. ಆ ಬೆಳವಣಿಗೆಗಳು ಇನ್ನೂ ನನ್ನ ನೆನಪಿನಲ್ಲಿವೆ. ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಮೀಸಲಾತಿಗೆ ಅರ್ಹವಾದ ಜಾತಿಗಳ ಪಟ್ಟಿಯನ್ನು ತರಾತುರಿಯಲ್ಲಿ ಕಳಿಸಬೇಕಾದ ಅನಿವಾರ್ಯ ಇತ್ತು. ಶಿಕ್ಷಣ ಮತ್ತು ಉದ್ಯೋಗದಲ್ಲಿನ ಮೀಸಲಾತಿಗೆ ಬಳಕೆಯಾಗುತ್ತಿದ್ದ ಜಾತಿಗಳ ಪಟ್ಟಿಯನ್ನೇ ಉಪ ಕಾರ್ಯದರ್ಶಿಯೊಬ್ಬರು ಸಣ್ಣಪುಟ್ಟ ಬದಲಾವಣೆಗಳೊಂದಿಗೆ ಕಳುಹಿಸಿದರು. ಅದೇ ಪಟ್ಟಿ ರಾಜಕೀಯ ಮೀಸಲಾತಿಗೂ ಅನ್ವಯವಾಗುವಂತೆ ಅನುಮೋದನೆ ನೀಡಲಾಯಿತು. ರಾಜಕೀಯ ಮೀಸಲಾತಿಯ ಘನತೆ, ಮಹತ್ವ, ಪ್ರಾಮುಖ್ಯ ಈ ಯಾವುದರ ಅರಿವೂ ಇಲ್ಲದೆ ಪಟ್ಟಿ ಅಂತಿಮಗೊಳಿಸಲಾಯಿತು.

ಈಗ ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ಕಲ್ಪಿಸಲು ಬಳಕೆಯಾಗುತ್ತಿರುವ ಜಾತಿಗಳ ಪಟ್ಟಿಯು ರಾಜಕೀಯ ಮೀಸಲಾತಿಗಾಗಿ ನಿಖರವಾಗಿ ಸಮುದಾಯಗಳನ್ನು ಗುರುತಿಸಿ, ಸಿದ್ಧಪಡಿಸಿದ ಪಟ್ಟಿ ಅಲ್ಲ. ಈ ಕಾರಣಕ್ಕಾಗಿಯೇ ನ್ಯಾಯಾಲಯಗಳಿಂದ ಆಕ್ಷೇಪ ವ್ಯಕ್ತವಾಗುತ್ತಿದೆ. ಈಗ ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ನೀಡುತ್ತಿರುವ ರಾಜಕೀಯ ಮೀಸಲಾತಿಯು ಸರಿಯಾದುದಲ್ಲ. ಈಗ ಇರುವ ಸ್ವರೂಪದಲ್ಲೇ ರಾಜಕೀಯ ಮೀಸಲಾತಿ ಮುಂದುವರಿದರೆ ಸಾಮಾಜಿಕ ನ್ಯಾಯ ಒದಗಿಸಲು ಮತ್ತು ಸಮಾಜದಲ್ಲಿನ ಶ್ರೇಣೀಕೃತ ವ್ಯವಸ್ಥೆಯನ್ನು ಅಳಿಸಿಹಾಕಲು ಸಾಧ್ಯವಿಲ್ಲ. ರಾಜಕೀಯ ಮೀಸಲಾತಿಗೆ ಬೇರೆಯದ್ದೇ ಆದ ಪಟ್ಟಿಯನ್ನು ಸಿದ್ಧಪಡಿಸಬೇಕಿದೆ. ಇದನ್ನೇ ನ್ಯಾಯಾಲಯ ಸ್ಪಷ್ಟವಾಗಿ ಹೇಳಿದೆ. ಹಿಂದುಳಿದ ವರ್ಗಗಳಿಗೆ ರಾಜಕೀಯ ಮೀಸಲಾತಿ ನೀಡುವ ವಿಚಾರದಲ್ಲಿ ನಿಖರವಾದ ದತ್ತಾಂಶಗಳೊಂದಿಗೆ ಅರ್ಹ ಸಮುದಾಯಗಳ ಪಟ್ಟಿಯನ್ನು ಸಿದ್ಧಪಡಿಸಲು ಸರ್ಕಾರಗಳು ಹಿಂದೇಟು ಹಾಕುತ್ತಿರುವುದಕ್ಕೆ ನ್ಯಾಯಾಲಯಕ್ಕೆ ಅಸಮಾಧಾನವಿದೆ. ಅದಕ್ಕಾಗಿಯೇ, ನಿಖರವಾಗಿ ಮೀಸಲಾತಿ ಪಟ್ಟಿ ಸಿದ್ಧಪಡಿಸಲು ಸಾಧ್ಯವಾಗದೇ ಇದ್ದರೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಾದ ಸ್ಥಾನಗಳನ್ನು ಹೊರತುಪಡಿಸಿ ಉಳಿದ ಎಲ್ಲ ಸ್ಥಾನಗಳೂ ಸಾಮಾನ್ಯ ಎಂದು ಘೋಷಿಸುವಂತೆ ತಾಕೀತು ಮಾಡಿದೆ.

ಸಂವಿಧಾನದ 243ನೇ ವಿಧಿಗೆ ಮಾಡಿದ ತಿದ್ದುಪಡಿಯು ಅದ್ಭುತವಾದುದು. ಅದರ ಆಶಯಗಳು ಸಂಪೂರ್ಣವಾಗಿ ಜಾರಿಗೆ ಬಂದಿಲ್ಲ. ಅದು ಈಗ ಕಾರ್ಯರೂಪಕ್ಕೆ ಬರಬೇಕಿದೆ. ಈಗ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿರುವ ಸಮುದಾಯಗಳ ರಾಜಕೀಯ ಹಿಂದುಳಿದಿರುವಿಕೆಯನ್ನು ನಿಖರ ದತ್ತಾಂಶಗಳ ಆಧಾರದಲ್ಲಿ ಗುರುತಿಸದೇ ಬೇರೆ ಮಾರ್ಗವಿಲ್ಲ. ಆಯೋಗವೊಂದನ್ನು ನೇಮಿಸಿ, ಈ ಪ್ರಕ್ರಿಯೆ ಪೂರ್ಣಗೊಳಿಸುವುದಕ್ಕೆ ಹೆಚ್ಚು ಸಮಯ ಬೇಕಾಗಬಹುದು. ಆದರೆ, ಅನ್ಯ ಮಾರ್ಗಗಳಂತೂ ಇಲ್ಲ. ಆಗ ತುರ್ತು ಎಂಬ ಕಾರಣಕ್ಕೆ ತಪ್ಪು ಮಾಡಲಾಗಿತ್ತು. ಈಗ ವಿಳಂಬ ಆಗುತ್ತದೆ ಎನ್ನುವ ಕಾರಣಕ್ಕೆ ಅದೇ ತಪ್ಪನ್ನು ಮುಂದುವರಿಸುವುದು ಅರ್ಥಹೀನ.

ಸರ್ಕಾರ ತಕ್ಷಣವೇ ಒಂದು ಆಯೋಗ ಮತ್ತು ಕಾನೂನುಬದ್ಧವಾದ ಸಮಿತಿಯನ್ನು ಈ ಕೆಲಸಕ್ಕಾಗಿ ನೇಮಿಸಬೇಕು. ಈ ಪ್ರಕ್ರಿಯೆಗಾಗಿಯೇ ಪ್ರತ್ಯೇಕವಾಗಿ ಮಾಹಿತಿ, ಅಂಕಿಅಂಶಗಳನ್ನು ಕಲೆಹಾಕಬೇಕಾದ ಅಗತ್ಯವೇನೂ ಕಾಣಿಸುವುದಿಲ್ಲ. ರಾಜ್ಯ ಚುನಾವಣಾ ಆಯೋಗದ ಬಳಿ ಅಗತ್ಯ ಅಂಕಿಅಂಶಗಳಿವೆ. ಹಿಂದುಳಿದ ವರ್ಗಗಳ ಆಯೋಗದಲ್ಲೂ ಮಾಹಿತಿ ಇದೆ. ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲೂ ಸಾಕಷ್ಟು ಮಾಹಿತಿಯ ಸಂಗ್ರಹವಿದೆ. ಅವುಗಳನ್ನು ಬಳಸಿಕೊಂಡು ತ್ವರಿತವಾಗಿ ಪ್ರಕ್ರಿಯೆ ನಡೆಸಿದರೆ ನಿಜವಾಗಿಯೂ ಯಾರು ರಾಜಕೀಯವಾಗಿ ಹಿಂದುಳಿದಿದ್ದಾರೋ ಅವರಿಗೆ ರಾಜಕೀಯ ಮೀಸಲಾತಿ ಕಲ್ಪಿಸುವ ಕೆಲಸ ಸುಲಭವಾಗಿ ಆಗುತ್ತದೆ. ಈಗ ಪುನಃ ಸಮೀಕ್ಷೆಯೊಂದನ್ನು ನಡೆಸುವುದು ಆರ್ಥಿಕ ಹೊರೆ ಮತ್ತು ವಿಳಂಬಕ್ಕೆ ಕಾರಣವಾಗುತ್ತದೆ. ಆರ್ಥಿಕ ಹೊರೆ ಇಲ್ಲದೆ, ಸರ್ಕಾರದ ಬಳಿ ಇರುವ ನಿಖರ ಅಂಕಿಅಂಶಗಳ ಆಧಾರದಲ್ಲೇ ರಾಜಕೀಯವಾಗಿ ಯಾವ ಸಮುದಾಯಗಳಿಗೆ ಪ್ರಾತಿನಿಧ್ಯ ದೊರಕಿದೆ ಮತ್ತು ಯಾವ ಸಮುದಾಯಗಳಿಗೆ ಸಿಕ್ಕಿಲ್ಲ ಎಂಬುದನ್ನು ವರ್ಗೀಕರಿಸುವ ಕೆಲಸ ಆಗಬೇಕು. ಮೀಸಲಾತಿ ಪಟ್ಟಿಯ ಪುನರ್ವಿಂಗಡಣೆ ಈಗ ಆಗಬೇಕಿರುವ ಪ್ರಕ್ರಿಯೆ.

ಶಕ್ತಿವಂತರು, ಬಲಾಢ್ಯರು, ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕವಾಗಿ ಮುಂದುವರಿದವರು ಮೀಸಲಾತಿಯನ್ನು ಬಳಸಿಕೊಂಡು ರಾಜಕೀಯ ಪ್ರಾತಿನಿಧ್ಯ ಪಡೆದುಕೊಳ್ಳುತ್ತಿದ್ದಾರೆ. ಈಗ ಇರುವ ಸ್ಥಿತಿಯಲ್ಲಿ ಮೀಸಲಾತಿಯು ‘ಆಕಾಶದಲ್ಲಿ ಕಾಣುವ ಒಂದು ಚಿಕ್ಕಾಸು’ ಎಂದಷ್ಟೇ ವ್ಯಾಖ್ಯಾನಿಸಬಹುದು. ಸಣ್ಣಪುಟ್ಟ ಸಮುದಾಯಗಳು ಈವರೆಗೆ ಕನಿಷ್ಠ ಪ್ರಾತಿನಿಧ್ಯವನ್ನೂ ಪಡೆಯಲು ಸಾಧ್ಯವಾಗಿಲ್ಲ. ಈಗ ಇರುವ ಮೀಸಲಾತಿ ಪಟ್ಟಿ ಪರಿಪಕ್ವವಾದುದಲ್ಲ. 1994ರಲ್ಲಿ ಚಿನ್ನಪ್ಪರೆಡ್ಡಿ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗದ ವರದಿಯಲ್ಲಿ, ‘ಜನಸಂಖ್ಯೆ ತಿಳಿಯದ ಸಮುದಾಯಗಳ ಸಂಖ್ಯೆ 100ಕ್ಕೂ ಹೆಚ್ಚಿದೆ’ ಎಂಬ ಉಲ್ಲೇಖವಿದೆ. ಅಲೆಮಾರಿಗಳು, ಅರೆ ಅಲೆಮಾರಿಗಳು, ಜಾತಿ ಪಟ್ಟಿಯನ್ನೇ ಸೇರದ ಸಮುದಾಯಗಳೂ ಇವೆ. ಹಿಂದುಳಿದ ವರ್ಗಗಳ ಪಟ್ಟಿಯನ್ನೇ ಸೇರದ, ಚುನಾವಣೆಯ ಬಗ್ಗೆ ಅರಿವೇ ಇರದ, ಪಂಚಾಯತ್ ಕಚೇರಿಯನ್ನೂ ತಿಳಿಯದ ಸಮುದಾಯಗಳೂ ಇವೆ. ‘ಹುಟ್ಟಿದ್ದೇವೆ, ಬದುಕಬೇಕು’ ಎಂಬ ಸ್ಥಿತಿಯಲ್ಲಿರುವ ನೂರಾರು ಸಣ್ಣ ಸಮುದಾಯಗಳು ನಮ್ಮ ನಡುವೆಯೇ ಇವೆ.

ಹಿಂದುಳಿದ ವರ್ಗಗಳಿಗೆ ಇರುವ ಶೇಕಡ 27ರಷ್ಟು ಮೀಸಲಾತಿಯನ್ನು ಕೆಲವೇ ಸಮುದಾಯಗಳು ಬಳಸಿಕೊಂಡಿವೆ ಎಂಬುದು ಸತ್ಯ. 15ರಿಂದ 20 ಜಾತಿಗಳು ಹೆಚ್ಚು ಪಾಲು ಪಡೆದಿವೆ. ಒಟ್ಟಾರೆ ಸ್ಥಳೀಯ ಸಂಸ್ಥೆಗಳಲ್ಲಿ ಪ್ರಾತಿನಿಧ್ಯ ಪಡೆದಿರುವ ಜಾತಿಗಳ ಸಂಖ್ಯೆ 50 ದಾಟುವುದಿಲ್ಲ. ಎಲ್ಲ ಸಮುದಾಯಗಳಿಗೂ ಪ್ರಾತಿನಿಧ್ಯ ಒದಗಿಸುವುದು ಕಷ್ಟ ಎಂಬುದು ಸತ್ಯ. ಪಟ್ಟಿಯಲ್ಲೇ ಇಲ್ಲದ ಸಮುದಾಯಗಳನ್ನು ಏನು ಮಾಡುವುದು ಎಂಬ ಪ್ರಶ್ನೆಯೂ ಈ ಸಂದರ್ಭದಲ್ಲಿ ಎದುರಾಗುತ್ತದೆ. ಸಂಶೋಧನಾ ವಿದ್ಯಾರ್ಥಿಗಳು ಮತ್ತು ಸಂಶೋಧಕರನ್ನು ಬಳಸಿಕೊಂಡು ಜಿಲ್ಲೆಗೊಂದು ಘಟಕ ರಚಿಸಬೇಕು. ಪಟ್ಟಿಯಲ್ಲೇ ಇಲ್ಲದ ಜಾತಿಗಳನ್ನು ಗುರುತಿಸಬೇಕು. ಆ ಮಾಹಿತಿ, ಅಂಕಿಅಂಶಗಳನ್ನು ಸಂಗ್ರಹಿಸಬೇಕು. ಆದರೆ, ಸಣ್ಣ, ಅತಿಸಣ್ಣ ಸಮುದಾಯಗಳನ್ನು ಸೇರಿಸಿ ಪ್ರತ್ಯೇಕ ವರ್ಗವನ್ನಾಗಿ ವಿಂಗಡಿಸಬೇಕು. ಹಿಂದುಳಿದ ವರ್ಗಗಳಿಗೆ ಲಭ್ಯವಿರುವ ಮೀಸಲಾತಿಯಲ್ಲಿ ಒಂದು ಪಾಲನ್ನು ಈ ವರ್ಗಕ್ಕೆ ಮೀಸಲಿಡುವ ಕೆಲಸ ಆಗಬೇಕು.

ಮೀಸಲಾತಿ ಪಟ್ಟಿ ವೈಜ್ಞಾನಿಕವಾಗಿ ಪುನರ್ ಪರಿಶೀಲನೆ ಆಗಲೇಬೇಕು. ಒಮ್ಮೆ ಮಾಡಿದ ಪಟ್ಟಿ ಪರಿಪಕ್ವ ಎಂದು ಹೇಳಲಾಗದು. ಕಾಲಕಾಲಕ್ಕೆ ಈ ಪ್ರಕ್ರಿಯೆ ನಡೆಯುತ್ತಲೇ ಇರಬೇಕು. ಆಗದೇ ಇದ್ದರೆ ದೊಡ್ಡ ಅನ್ಯಾಯ ಮುಂದುವರಿಯುತ್ತದೆ. ದಾಖಲೆಯಲ್ಲಿರುವವರಿಗಾದರೂ ನ್ಯಾಯ ಒದಗಿಸುವ ಕೆಲಸವನ್ನು ಮಾಡಬೇಕು.

(ಲೇಖಕ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ)

ನಿರೂಪಣೆ: ವಿ.ಎಸ್. ಸುಬ್ರಹ್ಮಣ್ಯ

‘ಸಾಮಾನ್ಯ ಕ್ಷೇತ್ರಗಳಲ್ಲಿ ಗೆಲುವು ಅಸಾಧ್ಯ’
ಹಿಂದುಳಿದ ವರ್ಗದವರು ಸಾಮಾನ್ಯ ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಜಯಗಳಿಸಲು ಸಾಧ್ಯವೇ ಇಲ್ಲ. ಅಪರೂಪಕ್ಕೆ ಒಂದೆರಡು ಸ್ಥಾನಗಳಲ್ಲಿ ಗೆಲ್ಲಬಹುದು. ಹೀಗಾಗಿ, ಮೀಸಲಾತಿಗಾಗಿ ನಾವು ರಾಜ್ಯದಾದ್ಯಂತ ಹೋರಾಟ ರೂಪಿಸುತ್ತಿದ್ದೇವೆ. ಈ ನಿಟ್ಟಿನಲ್ಲಿ ಈಗಾಗಲೇ ಹತ್ತಾರು ಸಭೆಗಳನ್ನು ಹಿಂದುಳಿದ ವರ್ಗಗಳ ಮುಖಂಡರ ಜತೆ ನಡೆಸಲಾಗಿದೆ. ಸಂಘಟನೆ ಮೂಲಕ ಹೋರಾಟ ಮಾಡಿ ನಮ್ಮ ಹಕ್ಕು ಪಡೆದುಕೊಳ್ಳಲು ಪ್ರಯತ್ನಿಸುತ್ತೇವೆ. ರಾಜ್ಯ ಸರ್ಕಾರವು ಸಹ ತನ್ನ ಪ್ರಯತ್ನಗಳನ್ನು ಮುಂದುವರಿಸಬೇಕು. ಪರ್ಯಾಯ ಕ್ರಮಗಳನ್ನು ಕೈಗೊಳ್ಳಲಿ. ಅವಸರದಲ್ಲಿ ಚುನಾವಣೆ ನಡೆಸುವುದು ಬೇಡ. ‘2ಎ’ ನಲ್ಲಿ 102 ಜಾತಿಗಳಿವೆ. ಪ್ರವರ್ಗ–1ರಲ್ಲಿ 95 ಜಾತಿಗಳಿವೆ. ಈ 197 ಜಾತಿಗಳ ಮೇಲೆ ಮೀಸಲಾತಿ ಪರಿಣಾಮ ಬೀರಲಿದ್ದು, ತೀರಾ ಅನ್ಯಾಯವಾಗುತ್ತದೆ. ಎಚ್. ಕಾಂತರಾಜು ನೇತೃತ್ವದಲ್ಲಿ ಸಿದ್ಧಪಡಿಸಿರುವ ವರದಿಯನ್ನು ಸರ್ಕಾರ ಸ್ವೀಕರಿಸಿ, ಅದರಂತೆ ಕ್ರಮ ಕೈಗೊಳ್ಳುವ ಬಗ್ಗೆ ಪರಿಶೀಲಿಸಲಿ.

-ಎಂ.ಡಿ. ಲಕ್ಷ್ಮಿನಾರಾಯಣ, ನೇಕಾರರ ಸಂಘಟನೆಗಳ ಒಕ್ಕೂಟದ ರಾಜ್ಯ ಅಧ್ಯಕ್ಷ

‘ಹಿಂದುಳಿದ ವರ್ಗಗಳ ಹಿತಾಸಕ್ತಿ ಕಾಪಾಡಬೇಕು’
ಮೀಸಲಾತಿ ನೀಡಿದರೆ ಮಾತ್ರ ಹಿಂದುಳಿದ ವರ್ಗಗಳು ರಾಜಕೀಯ ಮತ್ತು ಸಾಮಾಜಿಕ ಸ್ಥಾನಮಾನ ಪಡೆಯಲು ಈಗಿನ ವ್ಯವಸ್ಥೆಯಲ್ಲಿ ಸಾಧ್ಯ. ಪ್ರತಿಯೊಂದು ಗ್ರಾಮದಲ್ಲೂ ಪ್ರಬಲ ಜಾತಿಗಳೇ ಪ್ರಾಬಲ್ಯ ಹೊಂದಿರುತ್ತವೆ. ಹೀಗಾಗಿ, ಚುನಾವಣೆಗಳಲ್ಲಿ ಬಲಾಢ್ಯರು ಮತ್ತು ಬಹುಸಂಖ್ಯಾತ ಸಮುದಾಯದ ಪ್ರತಿನಿಧಿಗಳು ಆಯ್ಕೆಯಾಗುವುದು ಸುಲಭ. ಹಿಂದುಳಿದ ವರ್ಗಕ್ಕೆ ಮೀಸಲಾತಿ ಕಲ್ಪಿಸಲು ಕಾನೂನಿನ ತೊಡಕುಗಳನ್ನು ಸರ್ಕಾರ ನಿವಾರಿಸಬೇಕು. ಈಗ ಹಿಂದುಳಿದ ವರ್ಗಕ್ಕೆ ಶೇಕಡ 27ರಷ್ಟು ಮೀಸಲಾತಿ ಇದೆ. ಇದರ ಒಳಗೂ ಕೊಡಬೇಕು ಎನ್ನುವ ಬೇಡಿಕೆ ಇದೆ. ಹಿಂದುಳಿದ ವರ್ಗಗಳಿಗೆ ನೀಡಿರುವ ಮೀಸಲಾತಿಯಲ್ಲಿ ಅಲ್ಪಸಂಖ್ಯಾತರು, ಆರ್ಥಿಕವಾಗಿ ಹಿಂದುಳಿದ ಲಿಂಗಾಯತ ಮತ್ತು ಒಕ್ಕಲಿಗರು ಸಹ ಬರುತ್ತಾರೆ. ಇದರಿಂದ, ಶೇಕಡ 15ರಷ್ಟು ಹಿಂದುಳಿದ ವರ್ಗಗಳಿಗೆ ಮಾತ್ರ ಸೌಲಭ್ಯಗಳು, ಸ್ಥಾನಮಾನಗಳು ದೊರೆಯುತ್ತಿವೆ. ಆದ್ದರಿಂದ, ಸರ್ಕಾರ ಸರಿಯಾದ ರೀತಿಯಲ್ಲಿ ನ್ಯಾಯಾಲಯಕ್ಕೆ ಮನವರಿಕೆ ಮಾಡಬೇಕು. ಹಿಂದುಳಿದ ವರ್ಗಗಳ ಹಿತಾಸಕ್ತಿ ಕಾಪಾಡಬೇಕು. ಹಿಂದುಳಿದ ವರ್ಗಗಳನ್ನು ನಿರ್ಲಕ್ಷ್ಯ ಮಾಡಲು ಸಾಧ್ಯವಿಲ್ಲ. ದೇಶದಲ್ಲಿ ಹಿಂದುಳಿದ ವರ್ಗದ ಜನಸಂಖ್ಯೆಯೇ ಹೆಚ್ಚು. ಇದೊಂದು ಪ್ರಮುಖ ವರ್ಗ. ಆದ್ದರಿಂದ, ಹಿಂದುಳಿದ ವರ್ಗಗಳನ್ನು ಕಡೆಗಣಿಸದೆ, ಕಾನೂನಾತ್ಮಕವಾಗಿಯೇ ಕ್ರಮಗಳನ್ನು ಕೈಗೊಳ್ಳಬೇಕು.

-ಎನ್. ಶಂಕರಪ್ಪ,ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ

‘ಅಸ್ತಿತ್ವಕ್ಕಾಗಿ ಮೀಸಲಾತಿ ಅಗತ್ಯ’
ಮೀಸಲಾತಿಯಿಂದಾಗಿ ಉಸಿರಾಡುತ್ತಿದ್ದೇವೆ. ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಅಭಿವೃದ್ಧಿಯಾಗಲು ಮೀಸಲಾತಿ ಅಗತ್ಯ. ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಬಲಾಢ್ಯರು ಮಾತ್ರ ಆಯ್ಕೆಯಾಗುತ್ತಿದ್ದಾರೆ. ಮೀಸಲಾತಿ ಇದ್ದಾಗಲೇ ರಾಜ್ಯದಲ್ಲಿ ದೇವಾಂಗ ಸಮಾಜದವರು ಒಬ್ಬರು ಸಹ ಜಿಲ್ಲಾ ಪಂಚಾಯಿತಿ ಸದಸ್ಯರು ಇರಲಿಲ್ಲ. ಇನ್ನು ಮೀಸಲಾತಿಯೇ ಇಲ್ಲದಿದ್ದರೆ ಯಾವ ರೀತಿ ಪರಿಸ್ಥಿತಿ ಸೃಷ್ಟಿಯಾಗಲಿದೆ ಊಹಿಸಿಕೊಳ್ಳಿ. ಸದ್ಯ ನಮ್ಮ ಸಮಾಜದವರು ಯಾರೂ ವಿಧಾನ ಪರಿಷತ್ ಅಥವಾ ವಿಧಾನಸಭೆ ಸದಸ್ಯರು ಇಲ್ಲ. ರಾಜಕೀಯವಾಗಿ ಪ್ರಾತಿನಿಧ್ಯ ದೊರೆತಿರುವುದು ಅತಿ ವಿರಳ. ಸಮಾಜಕ್ಕೆ ರಾಜಕೀಯ ಶಕ್ತಿ ನೀಡಿದರೆ ಮಾತ್ರ ಬದುಕು ಉತ್ತಮವಾಗಲು ಸಾಧ್ಯ. ಇದು ಅಸ್ತಿತ್ವದ ಪ್ರಶ್ನೆಯೂ ಹೌದು. ಸಾಮಾನ್ಯ ವರ್ಗದಲ್ಲಿ ಬಲಾಢ್ಯ ಜಾತಿಗಳನ್ನು ಎದುರಿಸುವುದು ಅಸಾಧ್ಯ. ಹಿಂದುಳಿದ ವರ್ಗಗಳ ಜನರು ಒಟ್ಟಾಗಿ ಸೇರಿಕೊಂಡು ಹೋರಾಟ ಮಾಡುತ್ತಿದ್ದೇವೆ. ನ್ಯಾಯಾಲಯಕ್ಕೂ ಮೊರೆ ಹೋಗಲು ಚಿಂತನೆ ನಡೆಸುತ್ತಿದ್ದೇವೆ.

-ರವೀಂದ್ರ ಕಲಬುರ್ಗಿ,ಕರ್ನಾಟಕ ರಾಜ್ಯ ದೇವಾಂಗ ಸಂಘದ ಪ್ರಧಾನ ಕಾರ್ಯದರ್ಶಿ

‘ಹೋರಾಟ ಅನಿವಾರ್ಯ’
ರಾಜ್ಯ ಸರ್ಕಾರ ಚುನಾವಣೆ ಮುಂದೂಡಲು ಎಲ್ಲ ರೀತಿಯ ಕಸರತ್ತುಗಳನ್ನೂ ಮಾಡುತ್ತಿದೆ. ಉಪ್ಪಾರ ಸಮಾಜದಂತಹ ಹಿಂದುಳಿದ ವರ್ಗಗಳಿಗೆ ರಾಜಕೀಯ ಮೀಸಲಾತಿ ಅನಿವಾರ್ಯ. ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿಗಳಲ್ಲಿ ಮೀಸಲಾತಿ ಅನಿವಾರ್ಯ ಮತ್ತು ಅಗತ್ಯ. ಮೀಸಲಾತಿ ದೊರೆಯದಿದ್ದರೆ ಹೋರಾಟ ಅನಿವಾರ್ಯ. ಆದರೆ, ಎಲ್ಲವನ್ನೂ ಹೋರಾಟ ಮಾಡಿಯೇ ಪಡೆಯಬೇಕಾದ ಪರಿಸ್ಥಿತಿ ಎದುರಾಗಿರುವುದು ದುರ್ದೈವ. ಬಿಜೆಪಿ ಸರ್ಕಾರ ಹಿಂದುಳಿದ ವರ್ಗಗಳನ್ನು ಕಡೆಗಣಿಸುತ್ತಿದೆ. ಹಿಂದುಳಿದ ವರ್ಗಗಳ ಒಕ್ಕೂಟದ ಮೂಲಕ ಮೀಸಲಾತಿ ಪಡೆಯಲು ಕಾನೂನಿನ ಹೋರಾಟ ಮಾಡಲಾಗುವುದು. ಹಿಂದುಳಿದ ವರ್ಗಗಳನ್ನು ತುಳಿಯುವ ವ್ಯವಸ್ಥಿತ ಕುತಂತ್ರ ನಡೆಯುತ್ತಿದೆ. ವಾಸ್ತವ ಅಂಶಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಪ್ರಜ್ಞಾವಂತರೆಲ್ಲರೂ ಬೆಂಬಲಿಸಬೇಕು.

-ಸಿ. ಪುಟ್ಟರಂಗಶೆಟ್ಟಿ,ಉಪ್ಪಾರ ಸಮಾಜದ ರಾಜ್ಯ ಘಟಕದ ಅಧ್ಯಕ್ಷ ಮತ್ತು ಶಾಸಕ

‘ಸಣ್ಣ ಜಾತಿಗೆ ಪ್ರಾತಿನಿಧ್ಯವೇ ಸಿಗಲ್ಲ’
ಸವಿತಾ ಸಮಾಜ ಸಣ್ಣ ಜಾತಿ. ಹೊಟ್ಟೆಗುಂಟು ಬಟ್ಟೆಗಿಲ್ಲ ಎನ್ನುವ ಪರಿಸ್ಥಿತಿಯಲ್ಲಿ ಬದುಕುತ್ತಿದ್ದೇವೆ. ಸರ್ಕಾರವೇ ನಮ್ಮನ್ನು ಗುರುತಿಸಿ ರಾಜಕೀಯ ಸ್ಥಾನಮಾನಗಳನ್ನು ಕಲ್ಪಿಸಬೇಕು. ನಮ್ಮ ಸಮಾಜದವರು ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿಗಳಲ್ಲಿ ಆಯ್ಕೆಯಾಗಿರುವುದು ಅತಿ ಕಡಿಮೆ. ಸಣ್ಣ ಜಾತಿಗೆ ಸೇರಿದವರು ಬಹುಸಂಖ್ಯಾತ ಸಮುದಾಯದ ವ್ಯಕ್ತಿಗಳನ್ನು ಚುನಾವಣೆಯಲ್ಲಿ ಎದುರಿಸಲು ಸಾಧ್ಯವೇ? ಹೀಗಾಗಿ, ಮೀಸಲಾತಿ ಕಲ್ಪಿಸದಿದ್ದರೆ ರಾಜಕೀಯ ಪ್ರಾತಿನಿಧ್ಯವೇ ದೊರೆಯುವುದಿಲ್ಲ. ಆದರೆ, ನಮ್ಮ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸುತ್ತಿಲ್ಲ. ಸರ್ಕಾರ ಕೇವಲ ಭರವಸೆ ನೀಡುತ್ತಿದೆ. ಆದರೆ, ಅನುಷ್ಠಾನಗೊಳಿಸುತ್ತಿಲ್ಲ. ಕರ್ನಾಟಕದಲ್ಲಿ 40ರಿಂದ 45 ಲಕ್ಷ ಜನಸಂಖ್ಯೆಯನ್ನು ಸವಿತಾ ಸಮಾಜ ಹೊಂದಿದೆ.

-ಸಂಪತ್ ಕುಮಾರ್,ಸವಿತಾ ಸಮಾಜ ರಾಜ್ಯ ಘಟಕದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.