ರಾತ್ರಿಯ ಆಕಾಶದಲ್ಲಿ ಹಾರುತ್ತಿದ್ದ ವಿಮಾನ ಇನ್ನೇನು ಕೆಳಗಿಳಿಯಬೇಕು; ಕಿಟಕಿಯಿಂದ ಇಣುಕಿದರೆ ದೀಪಾಲಂಕಾರ ಮಾಡಿಸಿಕೊಂಡ ರೋಮ್ ನಗರಿ ಜಗಮಗಿಸುತಿತ್ತು. ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೆ ಉಳಿದಿರುವ ರೋಮನ್ ಸಾಮ್ರಾಜ್ಯದ ಪಳೆಯುಳಿಕೆಗಳನ್ನು ನೋಡುವ, ಆ ವೈಭವೋಪೇತ ನಾಡಿನಲ್ಲಿ ನಾಲ್ಕು ದಿನ ಅಲೆಯುವ ಹುಮ್ಮಸ್ಸಿನೊಂದಿಗೆ ರೋಮ್ ನಗರಿಯ ‘ಫ್ಯೂಮಿಚ್ಚಿನೋ ವಿಮಾನ ನಿಲ್ದಾಣ’ದಲ್ಲಿ ನಾನು ಮತ್ತು ಅನೂಪ್ ಬಂದಿಳಿದಿದ್ದೆವು.

ತಡವಾಗಿದ್ದರಿಂದ ಪಟ್ಟಣ ತಲುಪಲು ಇರುವ ಕೊನೆಯ ರೈಲು ಸಹ ಹೊರಟುಹೋಗಿತ್ತು. ಕೊನೆಗೆ ಟ್ಯಾಕ್ಸಿ ಹಿಡಿದು ರೋಮ್‌ನ ಬಸ್, ರೈಲು ಹಾಗೂ ಮೆಟ್ರೋ ಮುಖ್ಯನಿಲ್ದಾಣವಾದ ರೋಮಾ ಟರ್ಮಿನಿಗೆ ಸಮೀಪದಲ್ಲಿ ಕಾಯ್ದಿರಿಸಿದ್ದ ಹೋಟೆಲ್ ತಲುಪಿಕೊಂಡೆವು.

ರೋಮ್‌ನಲ್ಲಿ ಮೊದಲೆರಡು ದಿನಗಳು ಕೊಲೋಸಿಯಂ, ರೋಮನ್ ಫೋರಮ್, ಬೆಸಿಲಿಕಾಗಳನ್ನು ನೋಡುವುದರಲ್ಲಿ ಕಳೆಯಿತು. ಮೂರು ದಿನದ ಪಾಸ್ ಕೊಂಡುಕೊಂಡಿದ್ದರಿಂದ ಆದಷ್ಟು ಬಸ್‌ಗಳನ್ನು ಹತ್ತಿಳಿದು ಅಲ್ಲಿದ್ದ ಮಾರುಕಟ್ಟೆ, ಚರ್ಚ್, ವಸ್ತುಸಂಗ್ರಹಾಲಯ, ಪಿಯಾಜಗಳನ್ನೆಲ್ಲ ಪಟ್ಟಿಮಾಡಿಕೊಂಡು ನೋಡಿಬಂದೆವು.

ಊರಿನ ಮಧ್ಯದಲ್ಲಿ ಯಾವುದೇ ಅಬ್ಬರವಿಲ್ಲದೆ, ಸೆಳೆತವಿಲ್ಲದೆ, ಏರುತಗ್ಗುಗಳಿಲ್ಲದೆ ಪ್ರಶಾಂತವಾಗಿ ಹರಿಯುತ್ತಿದ್ದ ಟೈಬರ್ ನದಿಯನ್ನು ದಾಟಿ ವ್ಯಾಟಿಕನ್ ಸಿಟಿ ಎಂಬ ಪುಟ್ಟ ದೇಶಕ್ಕೂ ಹೋಗಿಬಂದೆವು. ಅಲ್ಲಿನ ಸಂತ ಪೀಟರ್ ಬೆಸಿಲಿಕಾ, ವ್ಯಾಟಿಕನ್ ಮ್ಯೂಸಿಯಂ ಎದುರಿದ್ದ ಉದ್ದುದ್ದದ ಸರತಿ ಸಾಲು ಕಂಡು ಬೆರಗಾಗಿದ್ದೆವು.

ನದಿ–ಸಾಗರ ಸಂಗಮದ ಸಾಮೀಪ್ಯ
ಮೂರನೆಯ ದಿನ ಹೊರಟಿದ್ದು ರೋಮ್ ನಗರಿಯಿಂದ ಸುಮಾರು 30 ಕಿ.ಮೀ ದೂರದಲ್ಲಿರುವ ಆಸ್ಟಿಯ ಆಂಟಿಕ ಎಂಬ ಸ್ಥಳಕ್ಕೆ. ಚಳಿಗಾಲದ ಮುಂಜಾನೆಯಲ್ಲಿ ಸೂರ್ಯ ಸಹ ಹೊದಿಕೆ ಹೊದ್ದು ಮಲಗಿರುತ್ತಾನೆ. ಹಾಗಾಗಿ ಹಗಲು ಹರಿಯುವುದು ತಡವಾಗಿಯೇ. ಬೆಳಕಿಗಾಗಿ ಕಾಯದೆ ಆದಷ್ಟು ಬೇಗ ಹೊರಟು ರೋಮಾ ಟರ್ಮಿನಿ ಸ್ಟೇಷನ್ ಸೇರಿಕೊಂಡೆವು.

‘ಬೋಂಜೋರ್ನೋ’ ಎಂದು ನಗುತ್ತಾ ಸ್ವಾಗತಿಸಿದ ಹುಡುಗಿಯೊಬ್ಬಳ ಅಂಗಡಿಯಲ್ಲಿ, ಕ್ರೊಸಾಂಟ್ ಜೊತೆಗೆ ಕಾಫಿ ಕುಡಿದು ಹೊಟ್ಟೆ ತುಂಬಿಸಿಕೊಂಡೆವು. ಅಲ್ಲಿಂದ ರೈಲು ಹಿಡಿದು ಆಸ್ಟಿಯ ಆಂಟಿಕ ತಲುಪಿದಾಗ ಹತ್ತು ಗಂಟೆ.

ಆಸ್ಟಿಯ ಆಂಟಿಕ ಉತ್ಖನನ ನಡೆದ ಸ್ಥಳ. ಇದು ಟೈಬರ್ ನದಿ, ಸಮುದ್ರ ಸೇರುವ ಜಾಗಕ್ಕೆ ತೀರಾ ಸಮೀಪದಲ್ಲಿದೆ. ರೋಮನ್ನರ ಕಾಲದ ಪ್ರಮುಖ ಬಂದರು ಪಟ್ಟಣ ಇದಾಗಿತ್ತು. ಆಮದು ರಪ್ತುಗಳ ವ್ಯಾಪಾರ ಕೇಂದ್ರವೂ ಆಗಿತ್ತು. ರೋಮನ್ ಸಾಮ್ರಾಜ್ಯದ ಪತನಾನಂತರ ಇದು ಸಹ ಮೂಲೆಗುಂಪಾಗಿ ಕಾಲದ ಒಡಲಲ್ಲಿ ಹೂತುಹೋಯಿತು.

ಸಾವಿರಾರು ವರ್ಷಗಳಿಂದ ನದಿ–ಸಮುದ್ರಗಳು ಹೊತ್ತು ತರುವ ಮರಳು, ಮಣ್ಣುಗಳು ಕಡಲದಡದಲ್ಲಿ ರೂಪುಗೊಂಡಿದ್ದ ಈ ಪಟ್ಟಣವನ್ನು ಇಂದು ಅಲ್ಲಿಂದ 3 ಕಿ.ಮೀ.ಗಳಷ್ಟು ದೂರಕ್ಕೆ ತಂದು ನಿಲ್ಲಿಸಿವೆ.

ರೋಮ್ ನಗರಕ್ಕೆ ಬರುವ ಪ್ರವಾಸಿಗರಲ್ಲಿ ಶೇಕಡಾ ಒಂದು ಭಾಗದ ಜನರೂ ಇಲ್ಲಿಗೆ ಬರುವುದಿಲ್ಲ. ಹಾಗಾಗಿ ಟಿಕೆಟ್‌ಗಾಗಿ ಸರತಿಯಲ್ಲಿ ನಿಲ್ಲುವ ಪ್ರಮೇಯವೇ ಒದಗಲಿಲ್ಲ. ಎರಡು ಟಿಕೆಟ್ ಖರೀದಿಸಿ, ಅಲ್ಲಿನ ನಕಾಶೆ ಹಿಡಿದು ಒಳಹೊಕ್ಕೆವು.

ಗೇಟು ದಾಟುತ್ತಿದ್ದಂತೆಯೇ ಕಾಲವೇ ಹಿಂದೆ ಸರಿದಿದೆಯೇನೋ ಎಂಬಂತೆ ಪುರಾತನ ಕಟ್ಟಡಗಳು ಉದ್ದಕ್ಕೂ ಎದುರಾದವು. ಮಧ್ಯದಲ್ಲಿ ಹಾದುಹೋಗಿದ್ದ ಮುಖ್ಯ ರಸ್ತೆಯಾದ ‘ಡೆಕ್ಯೂಮೆನುಸ್ ಮ್ಯಾಕ್ಸಿಮಸ್’ ಪೋರ್ಟ ರೊಮಾನ (ರೋಮನ್ ಗೇಟ್) ಮತ್ತು ಪೋರ್ಟ ಮರೀನಾ (ಸೀ ಗೇಟ್)ಗಳನ್ನು ಸೇರಿಸುವ ದಾರಿಯಾಗಿತ್ತು.

ಈ ಎರಡು ದ್ವಾರಗಳ ನಡುವೆ ಹೆದ್ದಾರಿಯ ಇಕ್ಕೆಲಗಳಲ್ಲಿ ಇಟ್ಟಿಗೆಗಳಿಂದ ನಿರ್ಮಿತವಾದ ಇಡಿಯ ಊರು ಹರಡಿತ್ತು. ಆದರೆ ಯಾರೋ ಕಟ್ಟುತ್ತಿದ್ದ ಕಟ್ಟಡಗಳನ್ನು ಅರ್ಧಕ್ಕೆ ನಿಲ್ಲಿಸಿ ಹೋಗಿದ್ದಾರೇನೋ ಎಂಬಂತೆ ಎಲ್ಲ ಅರೆಪೂರ್ಣವಾಗಿತ್ತು.

ಮೊದಲಿಗೆ ಕಂಡದ್ದು ಊರಿನ ಪ್ರವೇಶ ದ್ವಾರದ ಹೊರಗಿದ್ದ ಸ್ಮಶಾನ. ಮುಂದೆ ಎದುರಾದ ಸ್ನಾನಗೃಹಗಳು, ಮಾರುಕಟ್ಟೆಗಳು, ದೇವಾಲಯಗಳು, ಗೋದಾಮುಗಳು ಹರಪ್ಪ ಮೊಹೆಂಜೋದಾರೋ ಕಾಲದ ನಾಗರೀಕತೆಯನ್ನು ನೆನಪಿಸಿದ್ದವು.

ನೆಪ್ಚೂನನ ಸ್ನಾನಗೃಹ
ನೆಪ್ಚೂನನ ಸ್ನಾನಗೃಹದಲ್ಲಿ (ಬಾತ್ಸ್ ಆಫ್ ನೆಪ್ಟ್ಯೂನ್) ಮೊಸಾಯಿಕ್‌ನ ಮೇಲೆ ರಥಾರೂಢನಾಗಿರುವ ಸಮುದ್ರದೇವತೆಯ ಚಿತ್ರವಿರುವುದನ್ನು ಕಾಣಬಹುದಿತ್ತು. ಅಷ್ಟು ಶತಮಾನಗಳು ಕಳೆದರೂ ಆ ಚಿತ್ರ ಹಾಳಾಗದೆ ಉಳಿದಿರುವುದು ಆಶ್ಚರ್ಯವೇ ಸರಿ. ಅಲ್ಲಿನ ಇನ್ನೊಂದು ಮುಖ್ಯ ಆಕರ್ಷಣೆ ಎಂದರೆ ಅರ್ಧ ವರ್ತುಲಾಕಾರದ ಸಭಾಗೃಹ.

ಸುಮಾರು 3000 ಜನರು ಕುಳಿತುಕೊಳ್ಳಲು ಸ್ಥಳಾವಕಾಶವಿದೆ ಇಲ್ಲಿ. ಒಂದೇ ಚೌಕಟ್ಟಿನಲ್ಲಿ ಇದರ ಪೂರ್ತಿ ಚಿತ್ರವನ್ನು ಸೆರೆಹಿಡಿಯಲು, ಎಷ್ಟೇ ಪ್ರಯತ್ನಿಸಿದರೂ ನನಗೆ ಸಾಧ್ಯವಾಗಲಿಲ್ಲ. ನಕಾಶೆಯಲ್ಲಿನ ಚಿತ್ರಗಳಿಗೆ ತುಲನೆ ಮಾಡುತ್ತಾ ಒಂದೊಂದನ್ನೇ ನೋಡುತ್ತಾ ಮುಂದೆ ಸಾಗಿದೆವು.

ನಡೆದು ನಡೆದು ಹೊಟ್ಟೆ ತಾಳಹಾಕಲಾರಂಭಿಸಿದಾಗ ಗಡಿಯಾರ ನೋಡಿದರೆ ಗಂಟೆ ಮೂರಕ್ಕೆ ಹತ್ತಿರವಿತ್ತು. ಒಂದಾನೊಂದು ಕಾಲದಲ್ಲಿ ಜ್ಯೂಪಿಟರ್, ಜೂನೋ, ಮಿನರ್ವ ದೇವತೆಗಳಿಗಾಗಿ ಕಟ್ಟಲಾಗಿದ್ದ ಕ್ಯಾಪಿಟೋಲಿಯಂ ದೇವಾಲಯದ ಎದುರು ಕುಳಿತು, ಹಿಂದಿನ ದಿನ ಇಂಡಿಯನ್ ರೆಸ್ಟೋರೆಂಟ್‌ನಲ್ಲಿ ಕಟ್ಟಿಸಿಕೊಂಡು ತಂದಿದ್ದ ಫ್ರೈಡ್ ರೈಸ್ ತಿಂದು ಮುಗಿಸಿದೆವು.

ಅಲ್ಲಲ್ಲಿ ಕೆಲವೆಡೆ ಮುಖ್ಯ ರಸ್ತೆ ಕವಲೊಡೆದು ಚಿಕ್ಕ ರಸ್ತೆಗಳಾಗಿ ಬದಲಾಗಿದ್ದವು. ಸಣ್ಣದಾಗಿ ಹಿಮ ಸುರಿದು ಎಲ್ಲೆಡೆ ತೆಳುವಾದ ಬಿಳಿಯ ಮುತ್ತನ್ನು ಉದುರಿಸಿತ್ತು. ಇಷ್ಟಲ್ಲದೆ ಯೆಹೂದಿಗಳ ಸಿನಗಾಗ್, ಮದ್ಯದ ಅಂಗಡಿಗಳು, ಹೋಟೆಲ್‌ಗಳು, ಸಾರ್ವಜನಿಕ ಶೌಚಾಲಯಗಳು, ಗೋಡೆಯ ಮೇಲಿನ ಪೇಂಟಿಂಗ್‌ಗಳು, ಮೀನು, ಮಾಂಸ ಬಿಕರಿಯಾಗುವ ಸ್ಥಳಗಳು, ಗೋದಾಮುಗಳು, ಮುಂತಾದವುಗಳನ್ನು ಗುರುತಿಸಿ ಸಂರಕ್ಷಿಸಲಾಗಿದೆ.

ಉತ್ಖನನ ಸಮಯದಲ್ಲಿ ಸಿಕ್ಕ ಹಲವು ಅವಶೇಷಗಳನ್ನು ಅಲ್ಲಿನ ವಸ್ತುಸಂಗ್ರಹಾಲಯದಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಹಸಿರಾದ ಮರಗಿಡಗಳು, ಬಣ್ಣಬಣ್ಣದ ಹಕ್ಕಿಗಳು ತುಂಬಿದ್ದು, ಅಷ್ಟೇನೂ ಪ್ರವಾಸಿಗರಿಲ್ಲದೆ ಶಾಂತವಾಗಿದ್ದ ಆ ಜಾಗ ತುಂಬಾ ಆತ್ಮೀಯವೆನಿಸಿತ್ತು.

ಕತ್ತಲೆ ಕವಿಯಲು ಇನ್ನೇನು ಸ್ವಲ್ಪ ಹೊತ್ತಿತ್ತು. ಒಬ್ಬೊಬ್ಬರಾಗಿ ಪ್ರವಾಸಿಗರೆಲ್ಲ ಜಾಗ ಖಾಲಿ ಮಾಡಿದ್ದರು. ಕೊನೆಯಲ್ಲಿ ಉಳಿದವರು ನಾನು ಮತ್ತು ಅನೂಪ್ ಇಬ್ಬರೇ! ನಿಧಾನವಾಗಿ ನಡೆಯುತ್ತಿದ್ದವರು ಎಚ್ಚೆತ್ತುಕೊಂಡು ಬೇಗ ಬೇಗ ಹೆಜ್ಜೆ ಹಾಕಿದೆವು. ಅಲ್ಲಲ್ಲಿ ಬ್ಲಾಕ್ ಬರ್ಡ್‌ಗಳು, ಮಾಂಕ್ ಪ್ಯಾರಾಕೀಟ್‌ಗಳು, ಸ್ಟಾರ್ಲಿಂಗ್‌ಗಳು, ರಾಬಿನ್‌ಗಳು ಕಂಡುಬಂದವು. ಸಮೀಪದಲ್ಲೇ ವಿಮಾನ ನಿಲ್ದಾಣ ಸಹ ಇದ್ದುದರಿಂದ ಕೆಳಕ್ಕಿಳಿಯುವ, ಮೇಲೆ ಹಾರುವ ಸನ್ನಾಹದಲ್ಲಿದ್ದ ಲೋಹದ ಹಕ್ಕಿಗಳೂ ಕಾಣಸಿಕ್ಕವು.

ಅಲ್ಲಿಂದ ರೈಲು ಹತ್ತಿ ರೋಮಾ ಟರ್ಮಿನಿ ಸ್ಟೇಷನ್ ತಲುಪಿಕೊಂಡಾಗ ರಾತ್ರಿಯಾಗಿತ್ತು. ಎಂದಿನಂತೆ ಹತ್ತಿರದಲ್ಲಿದ್ದ ಇಂಡಿಯನ್ ರೆಸ್ಟೋರೆಂಟ್‌ನಲ್ಲಿ ಊಟ ಮುಗಿಸಿ ನಮ್ಮ ಅಂದಿನ ದಿನದ ಅದ್ಭುತ ಅನುಭವವನ್ನು ಮೆಲುಕು ಹಾಕುತ್ತಾ ಹೋಟೆಲ್ ಸೇರಿಕೊಂಡೆವು. ಅತಿಯಾದ ಪ್ರಸಿದ್ಧಿ ಪಡೆಯದಿದ್ದರೂ ರೋಮ್‌ಗೆ ಹೋದವರು ನೋಡಲೇಬೇಕಾದಂತಹ ಜಾಗಗಳಲ್ಲಿ ಇದೂ ಒಂದು.

ರೋಮ್‌ನ ಇತಿಹಾಸ
ರೋಮ್ ನಗರಿಗೆ ಬೇಕಾದ ದವಸ ಧಾನ್ಯಗಳು, ಸಕ್ಕರೆ ಮುಂತಾದವುಗಳೆಲ್ಲ ಆಸ್ಟಿಯ ಆಂಟಿಕದ ಮೂಲಕವೇ ಸರಬರಾಜಾಗುತ್ತಿತ್ತು. ಬೇರೆ ಬೇರೆ ದೇಶಗಳಿಂದ ಗುಲಾಮರನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು. ಕ್ರಿಸ್ತಶಕೆಯ ಪ್ರಾರಂಭದಲ್ಲಿ ಉನ್ನತ ಸ್ಥಿತಿಯಲ್ಲಿದ್ದ ಈ ಪಟ್ಟಣದಲ್ಲಿ ಸರಿಸುಮಾರು 50000 ಜನರು ವಾಸವಾಗಿದ್ದರಂತೆ. ಕಾಲಕ್ರಮೇಣ ಇದು ಪ್ರಕೃತಿ ವಿಕೋಪಗಳಿಗೆ ತುತ್ತಾಗಿ ತನ್ನ ಪ್ರಾಮುಖ್ಯತೆಯನ್ನು ಕಳೆದುಕೊಂಡಿತು.

ಉಸುಕನ್ನು ತಂದು ಇದರ ಮಡಿಲಿಗೆ ಸುರಿಯುತ್ತಿದ್ದ ಸಮುದ್ರ, ನಿಧಾನವಾಗಿ ದೂರ ಸರಿಯಲಾರಂಭಿಸಿತು. ಈ ರೇವುಪಟ್ಟಣದ ಪುನರುಜ್ಜೀವನಕ್ಕಿಂತ, ಹೊಸ ಬಂದರು ನಿರ್ಮಾಣವೇ ಸುಲಭವೆನಿಸಿ ರೋಮನ್ನರು ಹತ್ತಿರದಲ್ಲೇ ನೂತನ ಹಡಗು ನಿಲ್ದಾಣಗಳನ್ನು ಸ್ಥಾಪಿಸಿದರು. ಹಾಗಾಗಿ ಆಸ್ಟಿಯ ಆಂಟಿಕ ಅಳಿದು ಸಮಯ ಕಳೆದಂತೆಲ್ಲ ಭೂಗರ್ಭದಲ್ಲಿ ಅಡಗಿತು.

ಪ್ರವಾಸಿಗರಿಗೆ ಸಲಹೆಗಳು
* ಕನಿಷ್ಠ ಮೂರು ದಿನಗಳನ್ನಾದರೂ ರೋಮ್‌ನಲ್ಲಿ ಕಳೆಯಿರಿ. ರೋಮ್ ಮತ್ತು ವ್ಯಾಟಿಕನ್ ಸಿಟಿ ನೋಡಲು ಮೂರು ದಿನಗಳಾದರೂ ಬೇಕು.

* ಉಳಿದುಕೊಳ್ಳುವ ವ್ಯವಸ್ಥೆಗಾಗಿ ಹೋಟೆಲ್‌ಗಳನ್ನು ‘ರೋಮಾ ಟರ್ಮಿನಿ ಸ್ಟೇಷನ್’ಗೆ ಹತ್ತಿರದಲ್ಲೇ ಹುಡುಕಿಕೊಂಡರೆ ಒಳಿತು. ಓಡಾಡಲು ಬಸ್, ಮೆಟ್ರೋ, ಟ್ರೈನ್‌ಗಳು ಅಲ್ಲಿಂದಲೇ ಲಭ್ಯವಿವೆ.

* ರೋಮಾ ಟರ್ಮಿನಿಯ ಬಳಿ ಇರುವ ಹೋಟೆಲ್‌ಗಳಿಗೆ ಬೇಡಿಕೆ ಹೆಚ್ಚಿರುತ್ತದೆ. ಹಾಗಾಗಿ ಬೆಲೆಯೂ ವಿಪರೀತ. ಆದರೆ ಅಲ್ಲಲ್ಲಿ ಇರುವ ಹಾಸ್ಟೆಲ್‌ಗಳಲ್ಲಿ ಕಡಿಮೆ ಬೆಲೆಯ ಬಂಕರ್ಸ್ ಇರುವ ಆರು–ಎಂಟು ಜನರೊಂದಿಗೆ ಹಂಚಿಕೊಂಡಿರಬಹುದಾದ ಕೊಠಡಿಗಳು ಸಿಗುತ್ತವೆ.

* ಯಾವುದೇ ಪ್ರೇಕ್ಷಣೀಯ ಸ್ಥಳ ವೀಕ್ಷಿಸುವ ಮೊದಲು ಮಾಡಬೇಕಾದ ಕೆಲಸ ಎಂದರೆ ಮೂರು ದಿನದ ‘ರೋಮಾ ಪಾಸ್’ ಕೊಂಡುಕೊಳ್ಳುವುದು. ಈ ಪಾಸ್‌ನಿಂದ ಮೂರು ದಿನಗಳು ಉಚಿತವಾಗಿ ಬಸ್. ಮೆಟ್ರೋಗಳಲ್ಲಿ ಪ್ರಯಾಣಿಸಬಹುದು. ಇದಲ್ಲದೆ ಪಾಸ್ ಇದ್ದಲ್ಲಿ ಮೊದಲೆರಡು ಪ್ರೇಕ್ಷಣೀಯ ಸ್ಥಳಗಳಿಗೆ ಉಚಿತ ಪ್ರವೇಶ ಹಾಗು ನಂತರದ ಸ್ಥಳಗಳಿಗೆ ರಿಯಾಯಿತಿ ಸಿಗುತ್ತದೆ.

* ರೋಮ್‌ನಲ್ಲಿ ಪ್ರವಾಸಿಗರ ಸಂಖ್ಯೆ ವಿಪರೀತ. ಎಲ್ಲೆಡೆ ಸರತಿ ಸಾಲಿನಲ್ಲಿ ನಿಲ್ಲಬೇಕಾಗುತ್ತದೆ. ಜುಲೈ–ಆಗಸ್ಟ್ ತಿಂಗಳು ಯುರೋಪಿಯನ್ನರಿಗೆ ರಜೆಯ ದಿನಗಳು. ಹಾಗಾಗಿ ಮತ್ತಷ್ಟು ಹೆಚ್ಚಿನ ಜನರನ್ನು ಆ ಸಮಯದಲ್ಲಿ ಕಾಣಬಹುದು. ಕೋಲೋಸಿಯಂ, ವ್ಯಾಟಿಕನ್ ಮ್ಯೂಸಿಯಂ, ಸಂತ ಪೀಟರ್ ಬೆಸಿಲಿಕಾ – ಇಲ್ಲೆಲ್ಲಾ ಟಿಕೆಟ್‌ಗಾಗಿ ಗಂಟೆಗಟ್ಟಲೆ ಕಾಯುವುದನ್ನು ತಪ್ಪಿಸಿಕೊಳ್ಳಲು ಆದಷ್ಟು ಬೇಗ ದಿನವನ್ನು ಪ್ರಾರಂಭಿಸಿ.

ಬೆಳಿಗ್ಗೆ ಅವು ತೆರೆಯುವ ಮೊದಲೇ ಅಲ್ಲಿರಿ. ಕಾಯುವ ಸಮಯ ಉಳಿಯುವುದರ ಜೊತೆಗೆ, ಬೇರೆ ಸ್ಥಳಗಳನ್ನೂ ನೋಡಬಹುದು. ‘ರೋಮಾ ಪಾಸ್’ ಇದ್ದಲ್ಲಿ, ಕೋಲೋಸಿಯಂನ ಟಿಕೆಟ್ ಕೊಂಡುಕೊಳ್ಳುವ ಅವಶ್ಯಕತೆ ಇರದು (ಮೊದಲ ಎರಡು ಸ್ಥಳಗಳಿಗೆ ಮಾತ್ರ ಅನ್ವಯ). ವ್ಯಾಟಿಕನ್ ಮ್ಯೂಸಿಯಂನ ಟಿಕೆಟ್ ಅಂತರ್ಜಾಲದಲ್ಲಿ ಕಾಯ್ದಿರಿಸಿಕೊಂಡರೆ ಒಳ್ಳೆಯದು.

* ಏನೇನು ನೋಡಬೇಕೆಂಬ ಪಟ್ಟಿ ಮೊದಲೇ ತಯಾರಿಸಿಕೊಳ್ಳಿ. ಒಂದೆರಡು ವಸ್ತು ಸಂಗ್ರಹಾಲಯಗಳು, ಬೆಸಿಲಿಕಾಗಳು, ರೋಮನ್ ಫೋರಮ್, ಕೋಲೋಸಿಯಂ, ಪಿಯಾಜಗಳು, ಪ್ಯಾಂಥಿಯಾನ್, ಸಂತ ಏಂಜೆಲೋ ಕಾಸಲ್, ವ್ಯಾಟಿಕನ್ ಸಿಟಿ, ಟ್ರೆವಿ ಫೌಂಟೇನ್ – ಇವೆಲ್ಲವನ್ನು ಮರೆಯದೆ ನೋಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.