ಜಗತ್ತಿನ ಭೂಪಟ ಹರಡಿಕೊಂಡು ಭಾರತವನ್ನು, ಅದರಲ್ಲಿ ಕನ್ಯಾಕುಮಾರಿಯನ್ನೂ ಗುರುತಿಸಿ. ಕನ್ಯಾಕುಮಾರಿಯಿಂದ ನೇರವಾಗಿ ಒಂದು ಗೆರೆ ಕೆಳಗೆ ಎಳೆದರೆ ಅದು ಸೀದಾ ದಕ್ಷಿಣ ಧ್ರುವ (ಅಂಟಾರ್ಟಿಕ) ತಲುಪುತ್ತದೆ. ಪಶ್ಚಿಮದಲ್ಲಿ ಇದೇ ಸರ್ಕಸ್ ಮಾಡಿನೋಡಿ. ನೀವು ಎಳೆದ ಗೆರೆ ಸೋಮಾಲಿಯಾ ಮುಟ್ಟುತ್ತದೆ. ಪೂರ್ವಕ್ಕೆ ಎಳೆದ ಗೆರೆಗೆ ಥಾಯ್ಲೆಂಡ್– ಮಲೇಷಿಯಾ ನಿಲುಕೀತು.

‘ಹಿಂದೂ ಮಹಾಸಾಗರವನ್ನು ಯಾರು ನಿಯಂತ್ರಿಸುತ್ತಾರೋ ಅವರು ಇಡೀ ಏಷ್ಯಾ ಖಂಡವನ್ನು ನಿಯಂತ್ರಿಸುತ್ತಾರೆ. ಜಗತ್ತಿನ ಏಳು ಸಮುದ್ರಗಳಿಗೆ ಹಿಂದೂ ಮಹಾ ಸಾಗರವೇ ಸಂಪರ್ಕ ಕೊಂಡಿ’ ಎಂಬುದು ಅಮೆರಿಕದ ಖ್ಯಾತ ನಾವಿಕ ಆಲ್‌ಫ್ರೆಡ್ ಥ್ಯಾಚರ್ ಮಹಾನ್ ಅವರ ಮಾತು. ಹಿಂದೂ ಮಹಾ ಸಾಗರದ ಪ್ರಾಮುಖ್ಯವನ್ನು ಇದಕ್ಕಿಂತ ಸೊಗಸಾಗಿ ಅಕ್ಷರಗಳಲ್ಲಿ ಹಿಡಿದಿಡಲು ಸಾಧ್ಯವಿಲ್ಲ.

ಸೋಮಾಲಿಯಾ– ಅಂಟಾರ್ಟಿಕ– ಮಲೇಷಿಯಾ ಮೇಲೆ ಮೂರು ಚುಕ್ಕೆ ಇಟ್ಟು ಅದನ್ನು ಸೇರಿಸಿ. ಈಗ ಸಿಗುವ ವಿಶಾಲ ಸಾಗರ ಎಷ್ಟು ದೊಡ್ಡದು. ಅಷ್ಟೂ ಜಲರಾಶಿಯನ್ನು ಭಾರತವೇ ನಿಯಂತ್ರಿಸುವಂತಾದರೆ...?

ನಮ್ಮ ದೇಶದ ಸೇನಾನಿಗಳು ಕಾಣುತ್ತಿರುವ ಈ ಕನಸು ಸಾಕಾರಗೊಂಡರೆ ವಿಶ್ವ ರಾಜಕಾರಣದಲ್ಲಿ ಭಾರತ ನಿರ್ಣಾಯಕ ಪಾತ್ರ ವಹಿಸುವ ಬಲ ಪಡೆಯಲಿದೆ. ವಿವಿಧ ದೇಶಗಳ ಭದ್ರತೆ ವಿಶ್ಲೇಷಿಸುವ (ಡಿಫೆನ್ಸ್ ರಿವ್ಯೂ ಜರ್ನಲ್ಸ್) ಪತ್ರಿಕೆಗಳಲ್ಲಿ ಈಗಾಗಲೇ ಇಂಥ ವರದಿಗಳು, ಎಚ್ಚರಿಕೆಗಳು ಪ್ರಕಟವಾಗುತ್ತಿವೆ.

ಮಧ್ಯಪ್ರಾಚ್ಯದಿಂದ ಪೂರ್ವದ ದೇಶಗಳಿಗೆ ಸಾಗರ ಮಾರ್ಗದಲ್ಲಿ ತೈಲ, ಸರಕು ಸಾಗಿಸುವ ಬಹುತೇಕ ಟ್ಯಾಂಕರ್ ಮತ್ತು ಸರಕು ಸಾಗಣೆ ಹಡಗುಗಳು ಇದೇ ಮಾರ್ಗದಲ್ಲಿ ಹಾದು ಹೋಗಬೇಕು. ವಿಶ್ವದಲ್ಲಿ ಹೆಚ್ಚು ದಟ್ಟಣೆ ಇರುವ ನೌಕಾ ಮಾರ್ಗ ಇದು.

ಈ ಪ್ರದೇಶದಲ್ಲಿ ಭಾರತದ ನೌಕಾಪಡೆದ ಪಾರಮ್ಯ ಸಾಧಿಸಿದರೆ ವಿಶ್ವದ ಯಾವುದೇ ದೇಶದ ವಾಣಿಜ್ಯವನ್ನು ನಿಯಂತ್ರಿಸುವ ಶಕ್ತಿ ಪಡೆದಂತೆ ಆಗುತ್ತದೆ. ಆ ಸ್ಥಿತಿ ಮುಟ್ಟಿದ ನಂತರ ಮಗ್ಗುಲು ಮುಳ್ಳು ಪಾಕಿಸ್ತಾನ, ಹಿಮಾಲಯದಾಚೆಗಿನ ತಲೆಬೇನೆ ಚೀನಾಗಳನ್ನು ಎದುರಿಸುವುದು ದೊಡ್ಡ ಪ್ರಶ್ನೆಯೇ ಆಗಿರುವುದಿಲ್ಲ.

ಯಾವುದೇ ನೌಕಾಪಡೆಯ ಶಕ್ತಿಯನ್ನು ಅದು ಎಷ್ಟು ಪ್ರದೇಶದಲ್ಲಿ ನೌಕೆಗಳ ಸಂಚಾರ ನಿರ್ಬಂಧಿಸುವ ಮತ್ತು ಮಾರ್ಗ ನಿರಾಕರಿಸುವ (ಆ್ಯಂಟಿ ಆಕ್ಸೆಸ್/ಏರಿಯಾ ಡಿನಿಯಲ್) ಸಾಮರ್ಥ್ಯ ಹೊಂದಿದೆ ಎನ್ನುವ ಅಂಶ ನಿರ್ಧರಿಸುತ್ತದೆ. ತೀರದಿಂದ ಸಾವಿರಾರು ಕಿಲೋಮೀಟರ್ ದೂರದ ಜಲಾವಾರದಲ್ಲಿ ಇದನ್ನು ಸಾಧಿಸುವ ಸಾಮರ್ಥ್ಯ ಪಡೆದ ನೌಕಾದಳಕ್ಕೆ ‘ನೀಲಿ ನೌಕಾದಳ’ (ಬ್ಲೂ ವಾಟರ್ ನೇವಿ) ಎಂಬ ಶ್ರೇಯ ಸಿಗುತ್ತದೆ. ಜಗತ್ತಿನ ಎಲ್ಲ ನೌಕಾದಳಗಳ ಮಹತ್ವಾಕಾಂಕ್ಷೆ ಇದು.

‘ಎರಡು ಕೊಬ್ಬಿದ ಗೂಳಿಗಳು ಯಾವ ಹೊಲದಲ್ಲಿ ಕಿತ್ತಾಡುತ್ತವೆಯೋ, ಆ ನೆಲದ ಬೆಳೆ ಹಾಳಾಗುತ್ತದೆ’ ಎಂಬ ತರ್ಕ ರಾಘವಾಂಕನ ಹರಿಶ್ಚಂದ್ರ ಕಾವ್ಯದಲ್ಲಿಯೇ ಇದೆ. ಇದನ್ನು ಇಂದಿನ ಜಾಗತಿಕ ರಾಜಕಾರಣಕ್ಕೆ ಅನ್ವಯಿಸಿ ನೋಡಿ. ಯಾವ ದೇಶಗಳು ಯುದ್ಧದಲ್ಲಿ ಪಾಲ್ಗೊಳ್ಳುತ್ತವೆ ಎನ್ನುವುದರ ಜೊತೆಗೆ ಎಲ್ಲಿ ಯುದ್ಧ ನಡೆಯುತ್ತದೆ ಎನ್ನುವುದೂ ಮುಖ್ಯ. ಯುದ್ಧ ನಡೆದ ನೆಲದ ನಾಗರಿಕರ ಸಾವು– ಸಂಕಷ್ಟ ಸಹಜವಾಗಿಯೇ ಹೆಚ್ಚು.

‘ನೀಲಿ ನೌಕಾದಳ’ದ ಸಾಮರ್ಥ್ಯ ಇರುವ ನೌಕಾಪಡೆ ಯುದ್ಧವನ್ನು ತನ್ನ ನೆಲದಿಂದ ಸಾವಿರಾರು ಕಿ.ಮೀ. ದೂರದಲ್ಲಿ ನಿರ್ಣಾಯಕ ಸ್ಥಿತಿಯಲ್ಲಿ ಎದುರಿಸಬಲ್ಲದು. ಮಹಾಯುದ್ಧದ ಸಂದರ್ಭ ಪರ್ಲ್ ಹಾರ್ಬರ್ ಮೇಲೆ ದಾಳಿ ನಡೆದಿದ್ದು ಹೊರತುಪಡಿಸಿದರೆ ಅಮೆರಿಕ ನೆಲದಲ್ಲಿ ಯುದ್ಧದ ಬಾಂಬು ಬೀಳಲೇ ಇಲ್ಲ. ಇದಕ್ಕೆ ಕಾರಣ ಅಮೆರಿಕ ನೌಕಾಪಡೆಯ ಸಾಮರ್ಥ್ಯ.

ಈ ತತ್ವ ಭಾರತಕ್ಕೆ ಸ್ಪಷ್ಟವಾಗಿ ಅರಿವಾಗಿದ್ದು 1965ರ ಭಾರತ– ಪಾಕ್ ಯುದ್ಧದಲ್ಲಿ. ಪಾಕಿಸ್ತಾನ ನೌಕಾಪಡೆಯ ಕಮೋಡರ್ ಎಸ್.ಎಂ.ಅನ್ವರ್ ನಾಯಕತ್ವದಲ್ಲಿ ಭಾರತದತ್ತ ಬಂದ ಪಾಕ್ ಸಮರ ನೌಕೆಗಳು ದ್ವಾರಕೆಯ ಮೇಲೆ ಬಾಂಬು ಸುರಿಸಿದವು. ಆಗ ನಮ್ಮ ನೌಕಾಪಡೆಗೆ ಇದನ್ನು ಎದುರಿಸಲು ಆಗಲಿಲ್ಲ.

ಈ ಹೊಡೆತವನ್ನು ಗಂಭೀರವಾಗಿ ಪರಿಗಣಿಸಿದ ಭಾರತ ಸರ್ಕಾರ, ನೌಕಾದಳದ ವಿಮಾನಗಳು ಮತ್ತು ಸಬ್‌ಮರೀನ್‌ಗಳನ್ನು ತ್ವರಿತಗತಿಯಲ್ಲಿ ಮೇಲ್ದರ್ಜೆಗೆ ಏರಿಸಿತು.

1971ರ ಬಾಂಗ್ಲಾ ವಿಮೋಚನ ಹೋರಾಟದಲ್ಲಿ ನೌಕಾಪಡೆಯ ಸಾಮರ್ಥ್ಯ ಪರೀಕ್ಷೆಗೆ ಅವಕಾಶ ದೊರೆಯಿತು. ಡಿಸೆಂಬರ್ 4, 1971ರಲ್ಲಿ ‘ಆಪರೇಷನ್ ಟ್ರಿಡೆಂಟ್’ ಹೆಸರಿನಲ್ಲಿ ನಮ್ಮ ಸಮರ ನೌಕೆಗಳು ಪಾಕಿಸ್ತಾನದ ವಾಣಿಜ್ಯ ರಾಜಧಾನಿ ಕರಾಚಿಯ ಮೇಲೆ ದಾಳಿ ನಡೆಸಿದವು. ಕರಾಚಿ ಬಂದರಿನ ದಿಗ್ಬಂಧನ ಆದೇಶ ಯಶಸ್ವಿಯಾಗಿ ಪಾಲನೆಯಾಯಿತು.

ಯಾವುದೇ ನೌಕೆಗೆ (ಯುದ್ಧ ನೌಕೆ ಅಥವಾ ವಾಣಿಜ್ಯ ನೌಕೆ) ಕರಾಚಿ ಪ್ರವೇಶಿಸಲು, ಕರಾಚಿಯಿಂದ ಹೊರಗೆ ಹೋಗಲು ಅವಕಾಶ ಸಿಗಲಿಲ್ಲ. ಅಮೆರಿಕದಿಂದ ಶಸ್ತ್ರಾಸ್ತ್ರ, ಉಪಕರಣಗಳನ್ನು ತರುತ್ತಿದ್ದ ನೌಕೆಗಳನ್ನೂ ಮುಳುಗಿಸಲಾಯಿತು.

ಇನ್ನೊಂದೆಡೆ, ಪಶ್ಚಿಮ ಬಂಗಾಳದ 47 ಸಾವಿರ ಕಿ.ಮೀ. ವಿಸ್ತೀರ್ಣದ ಬಂಗಾಳಕೊಲ್ಲಿ ಸಹ ನೌಕಾಪಡೆಯ ನೇರ ನಿಗಾವಣೆಯಲ್ಲಿತ್ತು. ಬಂಗಾಳಕೊಲ್ಲಿ ಪ್ರವೇಶಿಸಿದ ಎಲ್ಲ ನೌಕೆಗಳನ್ನು ತಪಾಸಣೆಗೆ ಒಳಪಡಿಸಲಾಗುತ್ತಿತ್ತು.

ಅನುಮಾನ ಬಂದ ನೌಕೆಗಳಿಗೆ ಸಂಚಾರ ನಿರ್ಬಂಧ ವಿಧಿಸಲಾಗುತ್ತಿತ್ತು. ಪೂರ್ವ ಪಾಕಿಸ್ತಾನದ (ಇಂದಿನ ಬಾಂಗ್ಲಾ) ಮುಖ್ಯ ಬಂದರು ಚಿತ್ತಗಾಂಗ್ ಮೇಲೆ ವಿಮಾನ ವಾಹಕ ಯುದ್ಧ ನೌಕೆ ‘ಐಎನ್‌ಎಸ್ ವಿರಾಟ್’ ನಿರಂತರ ದಾಳಿ ನಡೆಸಿತು.

ಬಾಂಗ್ಲಾ ವಿಮೋಚನಾ ಯುದ್ಧದಲ್ಲಿ ಭಾರತದ ಗೆಲುವನ್ನು ಸುಲಭಗೊಳಿಸಿದ ಮೂರು ಮುಖ್ಯ ವಿದ್ಯಮಾನಗಳು ಇವು. ಈ ಸಾಧನೆಗಳು ಭಾರತಕ್ಕೆ ಸಬಲ ನೌಕಾಪಡೆಯ ಅಗತ್ಯವನ್ನೂ ಸಾರಿ ಹೇಳಿದ್ದವು. ಇದರ ಜೊತೆಗೆ ಸಾಂಪ್ರದಾಯಿಕ ಯುದ್ಧದಲ್ಲಿ ಪಾಕಿಸ್ತಾನ ಎಂದಿಗೂ ಭಾರತಕ್ಕೆ ಸರಿಸಾಟಿಯಾಗಲಾರದು ಎಂಬ ಮಹತ್ವದ ಸಂಗತಿಯೂ ಜಗತ್ತಿಗೆ ಮನವರಿಕೆಯಾಯಿತು. ಗೆಲ್ಲುವ ಸಾಮರ್ಥ್ಯ ಇರುವವರಿಗೇ ತಾನೆ ಜಗತ್ತಿನಲ್ಲಿ ಮನ್ನಣೆ ಸಿಗುವುದು?

ಇಂದಿಗೂ ನಮ್ಮ ದೇಶದ ರಕ್ಷಣಾ ವಿಶ್ಲೇಷಕರು ಪಾಕಿಸ್ತಾನವನ್ನು ಮಹತ್ವದ ಎದುರಾಳಿ ಎಂದು ಪರಿಗಣಿಸುವುದಿಲ್ಲ. ಬಹುತೇಕ ರಕ್ಷಣಾ ಸೆಮಿನಾರ್‌ಗಳಲ್ಲಿ ಚರ್ಚೆಯಾಗುವುದು ಚೀನಾದ ಸಾಮರ್ಥ್ಯ ಮಾತ್ರ!

ಭಾರತದ ಸುತ್ತಲಿನ ದೇಶಗಳಲ್ಲಿ ಸೈನಿಕ ನೆಲೆಗಳನ್ನು ಸ್ಥಾಪಿಸುವ ಮೂಲಕ ನಿರ್ಣಾಯಕ ಯುದ್ಧಗಳಲ್ಲಿ ಭಾರತಕ್ಕೆ ಉಸಿರುಕಟ್ಟುವಂತೆ ಮಾಡುವುದು ಚೀನಾ ತೆರೆಮರೆಯ ಕಾರ್ಯತಂತ್ರ. ಇದಕ್ಕೆ ಅಭಿವೃದ್ಧಿಯ ನೆಪ. ಈಗಾಗಲೇ ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್‌ಗಳಲ್ಲಿ ಬಹುದೊಡ್ಡ ವಾಣಿಜ್ಯ ಹಿತಾಸಕ್ತಿಗಳನ್ನು ಹೊಂದಿರುವ ಚೀನಾ ಅದರ ರಕ್ಷಣೆಗಾಗಿ ಸೈನಿಕ ನೆಲೆಗಳನ್ನೂ ನಿರ್ವಹಿಸುತ್ತಿದೆ. ಈ ತಂತ್ರಕ್ಕೆ ರಕ್ಷಣಾ ವಿಶ್ಲೇಷಕರು ‘ಸ್ಟ್ರಿಂಗ್ಸ್ ಆಫ್ ಪರ್ಲ್’ (ಮುತ್ತಿನಹಾರ) ಎಂದೇ ನಾಮಕರಣ ಮಾಡಿದ್ದಾರೆ.

ಇದರ ಜೊತೆಗೆ ಪಾಕಿಸ್ತಾನವನ್ನು ಛೂ ಬಿಟ್ಟು ಭಾರತದ ಆಂತರಿಕ ವಿಚಾರಗಳಲ್ಲಿ ಮೂಗು ತೂರಿಸುವ, ಜಾಗತಿಕವಾಗಿ ಭಾರತವನ್ನು ಏಕಾಂಗಿಯಾಗಿಸುವ ಜಾಣ ರಾಜಕಾರಣದಲ್ಲೂ ಚೀನಾ ಪಳಗಿದೆ.

(* ಮಾಹಿತಿ ಇಂಟರ್ನೆಟ್)

ಭಾರತದ ದಕ್ಷಿಣದಲ್ಲಿ ಶ್ರೀಲಂಕಾ, ಪಶ್ಚಿಮದಲ್ಲಿ ಪಾಕಿಸ್ತಾನ, ಪೂರ್ವದಲ್ಲಿ ಮ್ಯಾನ್ಮಾರ್ ಮತ್ತು ಬಾಂಗ್ಲಾಗಳ ಬಂದರುಗಳಲ್ಲಿ ಚೀನಾ ಸಮರ ನೌಕೆಗಳಿಗೆ ಪ್ರವೇಶ ಇದೆ.

ಚೀನಾ ತನ್ನ ಬಳಿ ಇದ್ದ ವಿಮಾನವಾಹಕ ಸಮರನೌಕೆಯನ್ನು 2012ರಲ್ಲಿ ನವೀಕರಿಸುವ ಮೂಲಕ ಸುದ್ದಿ ಮಾಡತ್ತು. ಈಚೆಗಷ್ಟೇ (ಏಪ್ರಿಲ್ 26, 2017) ಮತ್ತೊಂದು ವಿಮಾನವಾಹಕ ನೌಕೆಯನ್ನು ಸಮುದ್ರಕ್ಕೆ ಇಳಿಸಿದೆ. ಇನ್ನೆರೆಡು ವಿಮಾನವಾಹಕ ನೌಕೆಗಳ ನಿರ್ಮಾಣ ಕಾರ್ಯ ಚಾಲ್ತಿಯಲ್ಲಿದೆ. ಶೀಘ್ರದಲ್ಲಿ ಒಟ್ಟು 6 ವಿಮಾನ ವಾಹಕ ನೌಕೆಗಳೊಡನೆ, 10 ನೌಕಾನೆಲೆಗಳನ್ನು ಸ್ಥಾಪಿಸುವ ಮಹತ್ವಾಕಾಂಕ್ಷೆ ಚೀನೀಯರದ್ದು.

ಚೀನಾದ ‘ಮುತ್ತಿನಹಾರ’ದ ನಡೆಗೆ ಭಾರತದ್ದೂ ಜಾಣತನದ ಪ್ರತಿಕ್ರಿಯೆ. ಚೀನಾದ ಸಾಂಪ್ರದಾಯಿಕ ಎದುರಾಳಿ ಜಪಾನ್‌ಗೆ ಭಾರತದ ಈಗ ಆಪ್ತ. ದಕ್ಷಿಣ ಚೀನಾ ಸಮುದ್ರ ವಿವಾದದಲ್ಲಿ ಜಪಾನ್‌ಗೆ ಭಾರತದ್ದೇ ಒತ್ತಾಸೆ.

2ನೇ ಮಹಾಯುದ್ಧದ ನಂತರ ಜಪಾನ್ ತನ್ನ ಸೇನೆಯಲ್ಲಿ ದಾಳಿ ನಡೆಸುವ ವಿಭಾಗವನ್ನೇ ಹೊಂದಿರಲಿಲ್ಲ. ಆದರೆ ದಕ್ಷಿಣ ಚೀನಾ ವಿವಾದ ಅದರ ನಿಲುವು ಬದಲಿಸಲು ಕಾರಣವಾಗಿದೆ. ಅದರ ರಕ್ಷಣಾ ಬಜೆಟ್ ಅಗಾಧ ಎನಿಸುವಷ್ಟು ಹೆಚ್ಚಾಗಿದೆ. ಜಪಾನ್ ಸೇನೆಯ ಆಧುನೀಕರಣ ಪ್ರಕ್ರಿಯೆಯಲ್ಲಿ ಭಾರತದ ಪಾತ್ರ ಮಹತ್ವದ್ದು. ಇನ್ನು ನೇಪಾಳ, ವಿಯೆಟ್ನಾಂ, ಮಂಗೋಲಿಯಾ, ತೈವಾನ್ ಮತ್ತು ಭೂತಾನ್‌ಗಳಲ್ಲಿ ಭಾರತದ ಹಿಡಿತ ಕಡಿಮೆಯಾಗಿಲ್ಲ.

ಹಿಂದೂ ಮಹಾಸಾಗರದ ಅಗಾಧ ನೀಲಿ ಕಡಲು ಆಳುವ ಕನಸು ಹೊಂದಿರುವ ಭಾರತಕ್ಕೆ ಸಮರ ನೌಕೆಗಳ ಕೊರತೆಯೇ ದೊಡ್ಡ ಹಿನ್ನಡೆ. ಮೂರು ಕಡೆ ಸಾಗರ ಆವರಿಸಿರುವ ಭಾರತದ ರಕ್ಷಣೆಗೆ ಕನಿಷ್ಠ ಮೂರು ವಿಮಾನವಾಹಕ ನೌಕೆಗಳು ಬೇಕು. ಆದರೆ ಭಾರತ ಈಗ ‘ವಿಕ್ರಮಾದಿತ್ಯ’ ಒಂದನ್ನೇ ನೆಚ್ಚಿದೆ. ಈ ನೌಕೆಗೂ ಅಗತ್ಯ ಸಂಖ್ಯೆಯಲ್ಲಿ ಬೆಂಗಾವಲು ಸಬ್‌ಮರೀನ್‌ಗಳು ಮತ್ತು ಆಗಸದಿಂದಲೇ ಸಬ್‌ಮರೀನ್‌ಗಳನ್ನು ಗುರುತಿಸಿ ನಾಶಪಡಿಸಬಲ್ಲ ಹೆಲಿಕಾಪ್ಟರ್‌ಗಳ ಬೆಂಬಲ ಇಲ್ಲ.

ಭಾರತದ ಸ್ವದೇಶಿ ನಿರ್ಮಿತ ವಿಮಾನವಾಹಕ ನೌಕೆ ‘ಐಎನ್‌ಎಸ್ ವಿಕ್ರಾಂತ್’ 2013ರಲ್ಲಿ ಸಾಗರಕ್ಕಿಳಿದಿದೆ. ಆದರೆ ಇನ್ನೂ ಅದರ ಪರೀಕ್ಷೆಗಳು ಮುಗಿದಿಲ್ಲ. ಇದು 2020ರ ವೇಳೆಗೆ ಸೇವೆಗೆ ಲಭ್ಯವಾಗಬಹುದು. ಕೊಚಿನ್‌ನಲ್ಲಿ ನಿರ್ಮಾಣವಾಗುತ್ತಿರುವ ಭಾರತದ ಮತ್ತೊಂದು ವಿಮಾನ ವಾಹಕ ನೌಕೆ 2023ರ ವೇಳೆಗೆ ನೌಕಾಪಡೆ ಸೇವೆಗೆ ಲಭ್ಯವಾಗುವ ನಿರೀಕ್ಷೆ ಇದೆ.

ರಕ್ಷಣಾ ಸಮತೋಲನದಲ್ಲಿ ಚೀನಾಗೆ ಸಮಾನ ನೆಲೆಯಲ್ಲಿ ನಿಲ್ಲಲು ಮತ್ತು ಹಿಂದೂ ಮಹಾಸಾಗರದಲ್ಲಿ ಪಾರಮ್ಯ ಮೆರೆಯುವ ಕನಸು ನನಸು ಮಾಡಿಕೊಳ್ಳಲು ನಮ್ಮ ನೌಕಾದಳದ ತ್ವರಿತ ಸುಧಾರಣೆ ಅತ್ಯಗತ್ಯ.

ಸಾಗರ ಕನಸು 2025
ನಮ್ಮ ದೇಶವು ಪ್ರಸ್ತುತ ಎದುರಿಸುತ್ತಿರುವ ಸವಾಲುಗಳು ಮತ್ತು ಭವಿಷ್ಯದ ಬೆಳವಣಿಗೆಗಳನ್ನು ಅಂದಾಜಿಸಿ ನಮ್ಮ ದೇಶದ ನೌಕಾದಳದ ಸಾಮರ್ಥ್ಯ ಹೀಗಿರಬೇಕು ಎಂದು ಕೆಲ ವಿಶ್ಲೇಷಕರು ಲೆಕ್ಕಾಚಾರ ಹಾಕಿದ್ದಾರೆ.

ಈ ಲೆಕ್ಕಾಚಾರದಂತೆ ಒಟ್ಟು 3 ವಿಮಾನವಾಹಕ ನೌಕೆಗಳು, 4 ನ್ಯೂಕ್ಲಿಯರ್ ಸಬ್‌ಮರೀನ್‌ಗಳು, 16 ಸಾಂಪ್ರದಾಯಿಕ ಸಬ್‌ಮರೀನ್‌ಗಳು, 32 (ದಾಳಿ) ಸಮರನೌಕೆಗಳು, ಸೈನಿಕರನ್ನು ದೂರ ದೇಶಗಳ ತೀರಕ್ಕೆ ಕ್ಷಿಪ್ರಗತಿಯಲ್ಲಿ ಸಾಗಿಸಬಲ್ಲ 4 ಸಾಗಣೆ (ಆಂಫೀಬಿಯಸ್) ನೌಕೆಗಳು, 4 ತೈಲ ಸಾಗಣೆ ಟ್ಯಾಂಕರ್‌ಗಳು, 12 ಕ್ಷಿಪಣಿ ಉಡಾವಣಾ ನೌಕೆಗಳು, 12 ಮೈನ್ (ಸಾಗರದಾಳದ ಬಾಂಬ್) ನಾಶಕ ನೌಕೆಗಳು, 12 ಗಸ್ತು ನೌಕೆಗಳು, 20 ವೇಗವಾಗಿ ಸಂಚರಿಸಬಲ್ಲ ದಾಳಿ ನೌಕೆಗಳು, 12 ಗಸ್ತು ವಿಮಾನಗಳು, ತಲಾ 12ರಿಂದ 24 ಯುದ್ಧ ವಿಮಾನಗಳಿರುವ ನಾಲ್ಕು ವೈಮಾನಿಕ ಯುದ್ಧ ತಂಡಗಳು, 24 ಮಲ್ಟಿರೋಲ್ ಮತ್ತು 36 ಲಘು ಹೆಲಿಕಾಪ್ಟರ್‌ಗಳು ನೌಕಾದಳದಲ್ಲಿ ಇರಬೇಕಂತೆ.

ಸ್ವತಂತ್ರ ನಿರ್ಮಾಣದ ಸಾಧನೆ
ಇದೇ ಮೊದಲ ಬಾರಿಗೆ ಭಾರತೀಯ ನೌಕಾಪಡೆ ಗ್ರಾಹಕನಿಂದ ಉತ್ಪಾದಕ ಸ್ಥಾನಕ್ಕೆ ಭಡ್ತಿ ಪಡೆದಿದೆ. ಹಲವು ಸ್ವದೇಶಿ ನಿರ್ಮಿತ ಯುದ್ಧನೌಕೆ ಮತ್ತು ಸಬ್‌ಮರೀನ್‌ಗಳನ್ನು ಈಗಾಗಲೇ ಸೇವೆಗೆ ನಿಯೋಜಿಸಲಾಗಿದೆ. ಕೊಚ್ಚಿ, ವಿಶಾಖಪಟ್ಟಣ, ಮುಂಬೈ ಸೇರಿದಂತೆ ವಿವಿಧೆಡೆ ಯುದ್ಧನೌಕೆಗಳನ್ನು ಕಟ್ಟುವ ಕೆಲಸ ಭರದಿಂದ ಸಾಗಿದೆ.

ಕಳೆದ ಕೆಲ ವರ್ಷಗಳಲ್ಲಿ ಸೇವೆಗೆ ನಿಯೋಜನೆಗೊಂಡ ಯುದ್ಧನೌಕೆಗಳ ಪೈಕಿ ‘ಗೈಡೆಡ್ ಮಿಸೈಲ್ ಡೆಸ್ಟ್ರಾಯರ್’ (ಕ್ಷಿಪಣಿ ನಾಶಕ ನೌಕೆ) ಐಎನ್‌ಎಸ್ ಮರ್ಮಗೋವಾ, ವಿಮಾನ ವಾಹಕ ನೌಕೆ ಐಎನ್‌ಎಸ್ ವಿಕ್ರಮಾದಿತ್ಯ ಮತ್ತು ಸಬ್‌ಮರೀನ್ ನಾಶಕ ನೌಕೆ ಐಎನ್‌ಎಸ್ ಕರ್ಮೊತ್ರಾ ಉಲ್ಲೇಖನೀಯ.

ಯುದ್ಧ ವಿಮಾನಗಳನ್ನು ಸಾಗಿಸುವ ವಿಕ್ರಮಾದಿತ್ಯದಿಂದ ಭಾರತಕ್ಕೆ ವೈರಿ ನೆಲದಲ್ಲಿಯೇ ಯುದ್ಧ ಮಾಡುವ ಮತ್ತು ಆಗಸದಲ್ಲಿಯೇ ಯುದ್ಧ ವಿಮಾನಗಳಿಗೆ ಇಂಧನ ತುಂಬಿಸಿ ಅವುಗಳ ರೀಚ್ (ತಲುಪುವಿಕೆ) ಹೆಚ್ಚಿಸುವ ಸಾಮರ್ಥ್ಯ ಬಂದಿದೆ. ಟಾರ್ಪೆಡೊ (ನೀರಿನಾಳದ ಕ್ಷಿಪಣಿಗಳು) ಮತ್ತು ಸಬ್‌ಮರೀನ್‌ಗಳ ದಾಳಿಯನ್ನು ಕರ್ಮೋತ್ರಾ ನಿರ್ವಹಿಸಬಲ್ಲದು.

ವಿಶಾಖಪಟ್ಟಣ ನೌಕಾನೆಲೆಯಲ್ಲಿ ನಿರ್ಮಾಣವಾದ ಭಾರತದ ಮೊದಲ (ಸ್ವದೇಶಿ ನಿರ್ಮಿತ) ಅಣ್ವಸ್ತ್ರ ಚಾಲಿತ ಸಬ್‌ಮರೀನ್ ಐಎನ್ಎಸ್ ಅರಿಹಂತ್ ಸದ್ದಿಲ್ಲದೆ ಸೇವೆಗೆ ನಿಯೋಜನೆಗೊಂಡಿದೆ. ರಕ್ಷಣಾ ಇಲಾಖೆ ಈ ವಿಚಾರವನ್ನು ಅಧಿಕೃತವಾಗಿ ಒಪ್ಪಿಕೊಳ್ಳುತ್ತಲೂ ಇಲ್ಲ– ನಿರಾಕರಿಸುತ್ತಲೂ ಇಲ್ಲ.

ಐಎನ್‌ಎಸ್ ಅರಿಹಂತ್‌ನ ಸಾಮರ್ಥ್ಯ, ಸಾಗರ ಪರೀಕ್ಷೆಗಳ ಮಾಹಿತಿ ಹೊರ ಜಗತ್ತಿಗೆ ಅಪರಿಚಿತ. ಆದರೆ ಇದು ಭಾರತೀಯ ನೌಕಾಪಡೆಯ ಮಹತ್ವಾಕಾಂಕ್ಷಿ ಕನಸೊಂದು ನನಸಾದ ಸಾಧನೆ ಎನ್ನುವುದು ಮಾತ್ರ ನಿರ್ವಿವಾದ.

‘ಐಎನ್‌ಎಸ್ ಅರಿಹಂತ್’ ಸೇವೆಗೆ ನಿಯೋಜನೆಗೊಳ್ಳುವ ಮೂಲಕ ನಮ್ಮ ದೇಶಕ್ಕೆ ನೀರಿನಾಳದಿಂದಲೂ ಖಂಡಾಂತರ ಕ್ಷಿಪಣಿ ಉಡಾವಣೆ ಮಾಡುವ ಸಾಮರ್ಥ್ಯ ಬಂದಿದೆ. ಈ ಸಾಧನೆಯೊಂದಿಗೆ ಅಣ್ವಸ್ತ್ರ ಚಾಲಿತ ಸಬ್‌ಮರೀನ್ ವಿನ್ಯಾಸಗೊಳಿಸಬಲ್ಲ ಸಾಮರ್ಥ್ಯ ಹೊಂದಿರುವ ವಿಶ್ವದ 6 ಪ್ರಮುಖ ರಾಷ್ಟ್ರಗಳ ಸಾಲಿಗೆ ಭಾರತವೂ ಸೇರ್ಪಡೆಯಾಗಿದೆ.

ನಮ್ಮ ದೇಶ ‘ಮೊದಲು ಅಣ್ವಸ್ತ್ರ ಬಳಸುವುದಿಲ್ಲ’ ಎಂಬ ವ್ರತ ಪಾಲಿಸುತ್ತಿದೆ. ಇಂಥ ದೇಶಗಳಿಗೆ ಸಮುದ್ರದಾಳದಿಂದ ಅಣ್ವಸ್ತ್ರ ಸಿಡಿತಲೆ ಹೊತ್ತ ಕ್ಷಿಪಣಿಗಳನ್ನು ಉಡಾಯಿಸುವ ಸಾಮರ್ಥ್ಯ ಇರುವ ಸಬ್‌ಮರೀನ್‌ಗಳನ್ನು ಹೊಂದುವುದು ಸೇನಾ ಕಾರ್ಯಪದ್ಧತಿ (ಮಿಲಿಟರಿ ಸ್ಟ್ರಾಟಜಿ) ದೃಷ್ಟಿಯಿಂದ ಅತ್ಯಗತ್ಯ.

ಅರಿಹಂತ್‌ನಿಂದಾಗಿ ನೆಲದಿಂದ, ಬಾನಿನಿಂದ, ಸಮುದ್ರದ ಮೇಲಿನಿಂದ ಮತ್ತು ಸಾಗರದಾಳದಿಂದಲೂ ಅಣ್ವಸ್ತ್ರ ಪ್ರಯೋಗಿಸುವ ಸಾಮರ್ಥ್ಯ ಸಿಕ್ಕಂತೆ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.